ವಿಷಯಕ್ಕೆ ಹೋಗು

ಉದ್ಯಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದ್ಯಮಿ: ಉತ್ಪಾದನೆಗೆ ಅಗತ್ಯವಾದ ನಾಲ್ಕು ಅಂಗಗಳಲ್ಲಿ ಕೊನೆಯದಾದ ಸಂಘಟನೆಯ ಕಾರ್ಯವನ್ನು ನಿರ್ವಹಿಸುವ ವ್ಯಕ್ತಿ (ಆಂಟ್ರ್‌ಪ್ರ್‌ನರ್). ಒಂದು ಉದ್ಯಮ ಸಂಸ್ಥೆಯ ಸ್ಥಾಪನೆ ನಿರ್ವಹಣೆಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದು ಈತನ ಹೊಣೆ[೧]. ಬಂಡವಾಳಗಳನ್ನು ಯಾವ ಪ್ರಮಾಣದಲ್ಲಿ ಸಂಯೋಜಿಸಬೇಕು ಎಂಬುದನ್ನು ನಿರ್ಣಯಿಸುವವನೂ ಈ ಸಂಬಂಧವಾದ ಎಲ್ಲ ಬಗೆಯ ನಷ್ಟಸಂಭವಗಳ ಜವಾಬ್ದಾರಿ ಹೊರುವವನೂ ಈತನೇ. ಅನುಭೋಗಿಗಳ ಬಳಕೆಗಾಗಿ ನಾನಾ ಪದಾರ್ಥಗಳು ಒದಗಿಬರುವುದು ಒಂದು ದೇಶದ ಉದ್ಯಮಿಗಳೆಲ್ಲರೂ ಈ ಬಗ್ಗೆ ಕೈಗೊಳ್ಳುವ ತೀರ್ಮಾನದ ಒಟ್ಟು ಫಲ.

ಉದ್ಯಮಿಯ ಹೊಣೆಗಾರಿಕೆ

[ಬದಲಾಯಿಸಿ]

ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಉದ್ಯಮಿಯ ಕಾರ್ಯಭಾರ ನಾನಾ ತೆರನಾದದ್ದು. ಪ್ರಾರಂಭಿಸಬೇಕಾದ ಉದ್ಯಮದ ಯೋಜನೆ ನಿರ್ಮಿಸುವುದು ಈತನ ಮೊದಲ ಹೊಣೆ. ಏನನ್ನು, ಎಲ್ಲಿ ಹಾಗೂ ಎಷ್ಟು ಉತ್ಪಾದಿಸಬೇಕು ಎಂಬುದನ್ನು ಕೂಲಂಕಷವಾಗಿ ಈತ ವಿಚಾರಿಸಿ ನಿರ್ಧರಿಸಬೇಕು. ಯಾವ ಪದಾರ್ಥಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆಯಿದೆಯೋ ಅದನ್ನು, ಅದಕ್ಕೆ ಬೇಡಿಕೆ ಇರುವಷ್ಟು ಮಟ್ಟಿಗೆ, ಉತ್ಪಾದಿಸಲು ಈತ ತೀರ್ಮಾನಿಸುತ್ತಾನೆ. ಈತ ಉತ್ಪಾದಿಸುವ ಸ್ಥಳ ನಿರ್ಧರಿಸುವಾಗ ಉತ್ಪಾದನೆಗೆ ಬೇಕಾಗುವ ಎರಡು ಅಂಶಗಳನ್ನೂ ಗಮನಿಸಬೇಕು. ಕಚ್ಚಾಸಾಮಗ್ರಿಯ ಪೂರೈಕೆ ಸಾಕಷ್ಟು ಪರಿಮಾಣದಲ್ಲಿ ಸುಲಭವಾಗಿ ದೊರೆಯುವಂತಿರಬೇಕು. ಉತ್ಪಾದನೆಯ ಸ್ಥಳ ಮಾರುಕಟ್ಟೆಗೆ ಆದಷ್ಟು ಸಮೀಪವಾಗಿರಬೇಕು ಅಥವಾ ಸುಲಭವಾಗಿ ಶೀಘ್ರವಾಗಿ ಕಡಿಮೆ ವೆಚ್ಚದಲ್ಲಿ ಮಾರುಕಟ್ಟೆಗೆ ಸಾಮಗ್ರಿ ಸಾಗಿಸುವಂತಿರಬೇಕು. ಉದ್ಯಮದ ಮೇಲ್ವಿಚಾರಣೆ, ನಿರ್ದೇಶನ ಹಾಗೂ ನಿಯಂತ್ರಣಗಳು ಉದ್ಯಮಿಯ ಎರಡನೆಯ ಮುಖ್ಯ ಕಾರ್ಯಭಾರ. ಉತ್ಪಾದನೆಗೆ ಅಗತ್ಯವಾದ ಇತರ ಮೂರು ಅಂಗಗಳಾದ ಭೂಮಿ, ಶ್ರಮ ಹಾಗೂ ಬಂಡವಾಳಗಳು ತೃಪ್ತಿಕರವಾಗಿ ಕೆಲಸಮಾಡುವಂತೆ ನೋಡಿಕೊಳ್ಳು ವುದು ಈತನ ಹೊಣೆ. ಉತ್ಪಾದನಾ ಕಾರ್ಯದಲ್ಲಿ ಈತ ಅನೇಕರ ಸಹಾಯ ಪಡೆಯಬಹುದಾದರೂ ಇದರ ನಿರ್ದೇಶನ ನಿಯಂತ್ರಣಗಳು ಸಂಪೂರ್ಣವಾಗಿ ಇವನ ಕೈಯಲ್ಲೇ ಇರುತ್ತವೆ. ಕಾರ್ಯಸಂಯೋಜಕನೂ ಕಾರ್ಯ ಪ್ರಾರಂಭಿಸುವವನೂ ಇವನೇ ಆಗಿರುವುದರಿಂದ ಕೈಕೊಂಡ ಕಾರ್ಯದ ಜಯಾಪಜಯಗಳಿಗೆ ಈತನೇ ಹೊಣೆ. ಒಂದು ಉದ್ಯಮ ಸ್ಥಾಪಿಸುವ ತೀರ್ಮಾನ ಮಾಡಿದ ಮೇಲೆ ಈ ಬಗ್ಗೆ ಅಗತ್ಯವಾದ ಸಂಘಟನೆ ಮಾಡುವುದೂ ಉದ್ಯಮಿಯ ಹೊಣೆಗಾರಿಕೆ. ಇದಕ್ಕೆ ಬೇಕಾಗುವ ಹಣವನ್ನು ರೂಢಿಸಿಕೊಂಡು, ಯಂತ್ರೋಪಕರಣಗಳನ್ನೂ ಕಚ್ಚಾಸಾಮಗ್ರಿಗಳನ್ನೂ ಕೊಂಡು, ಕಾರ್ಮಿಕರನ್ನೂ ಇತರ ಸಿಬ್ಬಂದಿಯನ್ನೂ ನೇಮಿಸಿಕೊಂಡು ಆಯಾ ಕೆಲಸಗಳಿಗೆ ತಕ್ಕ ಪರಿಶ್ರಮ ಹೊಂದಿರುವವರಿಗೆ ಆಯಾ ಕೆಲಸಗಳನ್ನೇ ಕೊಟ್ಟು ಸೂಕ್ತ ಶ್ರಮವಿಂಗಡಣೆ ಮಾಡುವುದೂ ಉತ್ಪಾದಿಸಿದ ಪದಾರ್ಥವನ್ನು ಮಾರುಕಟ್ಟೆಗೆ ಸಾಗಿಸುವ ವ್ಯವಸ್ಥೆ ಮಾಡುವುದೂ ಈತನಿಗೆ ಸೇರಿದ ಕೆಲಸ. ನಿರುಪಾಧಿಕ ಅರ್ಥವ್ಯವಸ್ಥೆಯಲ್ಲಿ ಉತ್ಪಾದನ ಕಾರ್ಯದ ನಡುವೆ ಬರತಕ್ಕ ಗಂಡಾಂತರಗಳೂ ಅನಿಶ್ಚಿತತೆಗಳೂ ಅನೇಕ. ಉತ್ಪನ್ನದ ಬಗ್ಗೆ ಇರುವ ಬೇಡಿಕೆಯ ಬಗ್ಗೆ ತಪ್ಪು ಕಲ್ಪನೆಯಿಂದಲೂ ಉತ್ಪಾದನೆಯ ಅಂಗಗಳಲ್ಲಿ ಯಾವುದಕ್ಕಾದರೂ ಥಟ್ಟನೆ ಅಭಾವ ಪರಿಸ್ಥಿತಿ ಒದಗುವುದರಿಂದಲೂ ಬೇರೊಂದು ಪದಾರ್ಥದಿಂದ ಅನಿರೀಕ್ಷಿತವಾಗಿ ಸ್ಪರ್ಧೆ ಒದಗುವುದರಿಂದಲೂ ಉತ್ಪಾದನಾಂಗಗಳನ್ನು ಯಾವ ಪ್ರಮಾಣದಲ್ಲಿ ಸಂಯೋಜಿಸಬೇಕೆಂಬ ಬಗ್ಗೆ ತಪ್ಪು ತೀರ್ಮಾನ ಮಾಡುವುದರಿಂದಲೂ ಅನುಭೋಗಿಗಳ ರುಚಿಭೇದವೇ ಮುಂತಾದ ಕಾರಣಗಳಿಂದ ಉತ್ಪನ್ನಕ್ಕೆ ಇದ್ದಕ್ಕಿದ್ದಂತೆಯೇ ಬೇಡಿಕೆ ಕುಸಿದು ಹೋಗುವುದರಿಂದಲೂ ಉದ್ಯಮಿ ಅಗಾಧ ಕ್ರಿಯೆಗೂ ನಷ್ಟವನ್ನೆದುರಿಸ ಬೇಕಾಗಬಹುದು. ಇವುಗಳಲ್ಲಿ ಕೆಲವು ಬಗೆಯ ನಷ್ಟಗಳನ್ನು ವಿಮೆಯೇ ಮುಂತಾದ ವಿಧಾನಗಳ ಮೂಲಕ ತುಂಬಿಕೊಳ್ಳುವುದು ಸಾಧ್ಯ. ಆದರೆ ಇಂಥ ಯಾವ ಕ್ರಮಗಳಿಂದಲೂ ನಿವಾರಿಸಲಾಗದಂಥ ಕೆಲವು ಅನಿಶ್ಚಿತತೆಗಳೂ ನಷ್ಟಸಂಭವಗಳೂ ಉಳಿದೇ ಉಳಿಯುತ್ತವೆ. ಉತ್ಪಾದನೆಯ ಕರ್ಮಕ್ಕೂ ಬೇಡಿಕೆಯ ಉದ್ಯಮಕ್ಕೂ ನಡುವಣ ದಾರಿ ಅಂಕು ಡೊಂಕು; ಕಾಲ ಬಲು ಹೆಚ್ಚು. ಉತ್ಪಾದನೆಯ ಗಾತ್ರ ಹೆಚ್ಚು. ಆದ್ದರಿಂದ ಮುನ್ನರಿಯಲಾಗದ, ಊಹೆಗೂ ನಿಲುಕದ ನಾನಾ ಸಂಕಷ್ಟಗಳು ಎದುರಾಗುವುದು ಸಹಜ. ಇವುಗಳ ಅಂತಿಮ ಹೊಣೆ ಉದ್ಯಮಿಯದು. ಉತ್ಪಾದನೆಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸುವುದೂ ಆಗಿಂದಾಗ್ಗೆ ಸೂಕ್ತ ಮಾರ್ಪಾಟು ಮಾಡುವುದೂ ಉದ್ಯಮಿಯ ಇನ್ನೊಂದು ಕಾರ್ಯಭಾರ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಮೇಲೆ ಕಣ್ಣಿಟ್ಟು ಸ್ಪರ್ಧಿಗಳು ಜಾರಿಗೆ ತರುತ್ತಿರುವ ಸುಧಾರಣೆಗಳನ್ನು ಪರಿಶೀಲಿಸುತ್ತಿದ್ದು, ಅನುಭೋಗಿಗಳ ಆವಶ್ಯಕತೆಗಳನ್ನು ಗಮನಿಸುತ್ತಿದ್ದು ತನ್ನ ಉದ್ಯಮ ವಿಧಾನವನ್ನು ನವೋನವಗೊಳಿಸುವುದೂ ಸಾಧ್ಯವಾದರೆ ತನ್ನ ಪದಾರ್ಥಗಳ ಗುಣಮಟ್ಟ ಏರಿಸಿ ಬೆಲೆ ಇಳಿಸಲು ಸಾಧ್ಯವೇ ಎಂಬುದರ ಬಗ್ಗೆ ಸರ್ವದಾ ಪ್ರಯೋಗಶೀಲವಾಗಿರುವುದೂ ಉದ್ಯಮಿಯ ಮತ್ತೊಂದು ಕಾರ್ಯಭಾರ.

ಉದ್ಯಮಿಯಲ್ಲಿರಬೇಕಾದ ಗುಣಗಳು

[ಬದಲಾಯಿಸಿ]

ಈ ಕಾರ್ಯಭಾರಗಳ ದೃಷ್ಟಿಯಲ್ಲಿ ಇಂದಿನ ಉದ್ಯಮಿಗೆ ಅನೇಕ ಗುಣಗಳಿರುವುದು ಆವಶ್ಯಕ : ಮೊದಲನೆಯದಾಗಿ ಇವನಲ್ಲಿ ನಾಯಕತ್ವದ ಗುಣ ಇರಬೇಕು. ಕಾರ್ಯನಿರ್ವಹಣೆಯ ಸಮಯದಲ್ಲಿ ಈತನ ಸಂಪರ್ಕ ಪಡೆಯುವ ಸಿಬ್ಬಂದಿವರ್ಗದ ಅನುಕಂಪವನ್ನೂ ವಿಶ್ವಾಸವನ್ನೂ ಗಳಿಸಿಕೊಳ್ಳಬೇಕು. ಮನುಷ್ಯಸ್ವಭಾವವನ್ನರಿತು ಅದರಂತೆ ಎಲ್ಲರೊಂದಿಗೂ ವ್ಯವಹರಿಸುವುದು ಒಂದು ಮುಖ್ಯ ಗುಣ. ಎರಡನೆಯದಾಗಿ ಈತ ತನ್ನ ಕಾರ್ಯಭಾರದ ಸಂಪೂರ್ಣಜ್ಞಾನದ ಜೊತೆಗೆ ಜಗತ್ತಿನ ಮಾರುಕಟ್ಟೆಯ ಜ್ಞಾನವನ್ನೂ ಪಡೆದಿರಬೇಕು. ಕಾರ್ಯ ಪ್ರಾರಂಭಿಸಲು ಅಗತ್ಯವಾದ ಯಂತ್ರೋಪಕರಣಗಳನ್ನೂ ಕಚ್ಚಾಸಾಮಗ್ರಿಯನ್ನೂ ಖರೀದಿಸುವಾಗ ಅವುಗಳ ಗುಣದೋಷಗಳನ್ನು ಕಂಡುಹಿಡಿಯುವ ಪರಿಣತಿಯೇ ಅಲ್ಲದೆ ಉತ್ಪಾದಿಸಿದ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಹೇಗೆ ಯಾವ ಸಮಯದಲ್ಲಿ ವಿಕ್ರಯಿಸಬೇಕೆಂಬುದರ ಅರಿವೂ ಇರಬೇಕಾದ್ದು ಅವಶ್ಯ. ವಿಷಮಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಈತನ ಮತ್ತೊಂದು ಅವಶ್ಯ ಗುಣ. ಉದ್ಯಮ ನಿರ್ವಹಣೆ ಒಂದು ಮಹಾಸಾಹಸ. ಕೈಕೊಂಡ ಕಾರ್ಯದಲ್ಲಿ ಯಶಸ್ಸು ದೊರಕುವುದು ಯಾವಾಗಲೂ ನಿಶ್ಚಿತವಲ್ಲ. ತುಂಬಲಾಗದ ಹಾನಿಯೂ ಆಗಬಹುದು. ಇಂಥ ಅನಿವಾರ್ಯವಾದ ದುರ್ಭರ ಪ್ರಸಂಗಗಳಲ್ಲಿ ಇವನಿಗೆ ಇದೊಂದೇ ರಕ್ಷೆ. ನಾಲ್ಕನೆಯದಾಗಿ ಉದ್ಯಮಿ ಸದಾ ಜಾಗ್ರತೆವಹಿಸುವುದಲ್ಲದೆ ದಿಟ್ಟತನದ ನಿರ್ಣಯ ತೆಗೆದುಕೊಳ್ಳಬೇಕು. ಕಾರ್ಯನಿರ್ವಹಣೆಯ ಸಮಯದಲ್ಲಿ ಲಾಭದಾಯಕ ಅವಕಾಶ ದೊರೆತಾಗ ಅನುಮಾನಿಸದೆ ಜಾಗ್ರತೆಯಿಂದ ಜಾಣ ಹಾಗೂ ದಿಟ್ಟ ನಿರ್ಣಯ ತೆಗೆದುಕೊಂಡು ವ್ಯವಹಾರ ಲಾಭದಾಯಕವಾಗಿ ಪರಿಣಮಿಸುವಂತೆ ಅದನ್ನು ಪರಿವರ್ತಿಸಿಕೊಳ್ಳಬೇಕು. ಅತ್ಯಲ್ಪ ವ್ಯತ್ಯಾಸವಾದರೂ ಅದರಿಂದ ಅನರ್ಥವಾಗಬಹುದು.. ಐದನೆಯದಾಗಿ ಉದ್ಯಮ ಸಾಹಸಿ ಒಳ್ಳೆಯ ಪ್ರಯೋಗಶೀಲನಾಗಿರಬೇಕಲ್ಲದೆ ವ್ಯಾವಹಾರಿಕ ಬುದ್ಧಿಯನ್ನೂ ಪಡೆದಿರುವುದು ಅವಶ್ಯ. ಉದ್ಯಮಿಯನ್ನು ಇಂಗ್ಲಿಷಿನಲ್ಲಿ ಆಲಂಕಾರಿಕವಾಗಿ ಕ್ಯಾಪ್ಟನ್ ಆಫ್ ಇಂಡಸ್ಟ್ರಿ ಎಂದು ಕರೆಯುತ್ತಾರೆ. ಹಡಗಿನ ನಾಯಕನಾದವನು ಅದರ ಚಾಲಕ ಸಿಬ್ಬಂದಿಯನ್ನು ನಿರ್ವಹಿಸಿ, ನಿರ್ದೇಶಿಸಿ, ಚಾಲಕರನ್ನು ಸರಿಯಾಗಿ ಮುನ್ನಡೆಸಿ ಸಮುದ್ರದ ಏರುಪೇರುಗಳ ಬಗ್ಗೆ ಮುನ್ನೆಚ್ಚರಿಕೆ ಕೊಡಬೇಕಾಗುತ್ತದೆ. ಇದೇ ರೀತಿ ಒಬ್ಬ ಉದ್ಯಮಿ ಹಣ ಒದಗಿಸಿಕೊಂಡು ಉದ್ಯಮ ನಡೆಸ ಬೇಕಾಗುತ್ತದೆ. ತನ್ನ ನಿರ್ವಹಣ ಸಾಮರ್ಥ್ಯದಿಂದ ಸಂಬಂಧಪಟ್ಟ ಜನಗಳನ್ನು ನಿರ್ದೇಶಿಸಿ, ಮುನ್ನಡೆಸಿ, ತನ್ನ ವ್ಯಾಪಾರದ ಅಭಿವೃದ್ಧಿ ಮತ್ತು ವಿಸ್ತರಣೆಯ ಉದ್ದೇಶಗಳಿಗೋಸ್ಕರವಾಗಿ ಪರಿಣಾಮಕಾರಿಯಾದ ಮುನ್ನೆಚ್ಚರಿಕೆ ನೀಡಬೇಕಾಗುತ್ತದೆ. ಕೈಗಾರಿಕಾ ಬೆಳೆವಣಿಗೆ ಕಚ್ಚಾ ಸಾಮಗ್ರಿಯ ಸರಬರಾಜು ಮತ್ತು ಕಾರ್ಮಿಕರ ದುಡಿಮೆಗಳಷ್ಟೇ ಮುಖ್ಯವಲ್ಲ. ತಯಾರಿಕೆಯ ಇತರ ಎಲ್ಲ ಅಂಶಗಳನ್ನೂ ವೈಜ್ಞಾನಿಕವಾಗಿ ಸಂಘಟಿಸಿ, ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಪದಾರ್ಥಗಳನ್ನು ಉತ್ಪಾದಿಸುವಂಥ ಉದ್ಯಮಶೀಲತೆಯೇ ಕೈಗಾರಿಕಾಭಿವೃದ್ದಿಗೆ ಅತ್ಯಾವಶ್ಯಕ ಅಂಶ. ಆದ್ದರಿಂದಲೇ ಉದ್ಯಮಿಯನ್ನು ಇಂಗ್ಲಿಷಿನಲ್ಲಿ ಈ ರೀತಿ ಕರೆಯುವುದು ಸಮಂಜಸವಾಗಿದೆ.

ವಿವಿಧ ವ್ಯವಸ್ಥೆಗಳಲ್ಲಿ ಉದ್ಯಮಿಯ ಪಾತ್ರ

[ಬದಲಾಯಿಸಿ]

ಬಂಡವಾಳ ಅರ್ಥವ್ಯವಸ್ಥೆಯಲ್ಲಂತೂ ಉದ್ಯಮಿಯ ಪಾತ್ರ ಅತ್ಯವಶ್ಯ. ಆಧುನಿಕ ಕೈಗಾರಿಕೆಯಲ್ಲಿ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಉತ್ಪಾದನಾಂಗಗಳನ್ನು ಹೊಂದಿಸುವ ಈ ಪ್ರವರ್ತಕನಿಲ್ಲದಿದ್ದರೆ ಸಮಾಜಕ್ಕೆ ವಿಶೇಷ ಪ್ರಾವೀಣ್ಯದ ಅನುಕೂಲಗಳು ಲಭಿಸುತ್ತಿರಲಿಲ್ಲ. ಅಷ್ಟರಮಟ್ಟಿಗೆ ಸಮಾಜದ ಆರ್ಥಿಕ ಅಭಿವೃದ್ದಿ ಕುಂಠಿತವಾಗುತ್ತಿತ್ತೆಂಬುದು ನಿರ್ವಿವಾದ. ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ ಸರ್ಕಾರವೇ ಎಲ್ಲ ಆರ್ಥಿಕ ಚಟುವಟಿಕೆಗಳ ಮೇಲೆ ಒಡೆತನ ಹಾಗೂ ನಿಯಂತ್ರಣವಿಟ್ಟುಕೊಳ್ಳುವುದಷ್ಟೇ ಅಲ್ಲದೆ ತಾನೇ ಉದ್ಯಮಿಯ ಪಾತ್ರ ವಹಿಸುತ್ತದೆ. ಅಲ್ಲಿ ಖಾಸಗಿ ರಂಗಕ್ಕೆ ವಿಶೇಷ ಅವಕಾಶವಿಲ್ಲ. ಆದರೂ ಉದ್ಯಮ ನಡೆಸುವ ಹೊಣೆ ಹೊರಬಲ್ಲ ದಕ್ಷನಾಯಕತ್ವದ ಆವಶ್ಯಕತೆ ಅಲ್ಲೂ ಉಂಟು. ಮಿಶ್ರ ಅರ್ಥವ್ಯವಸ್ಥೆಯಲ್ಲಿ ಸರ್ಕಾರಿ ವಲಯ ಹಾಗೂ ಖಾಸಗಿ ವಲಯಗಳು ಒಂದಕ್ಕೊಂದು ಪುರಕವಾಗಿ ಕಾರ್ಯಮಾಡಬೇಕಾಗುತ್ತದೆ. ಖಾಸಗಿ ವಲಯದಲ್ಲಿ ಉದ್ಯಮಶೀಲತೆ ವೃದ್ಧಿಗೊಂಡು ದೇಶದಲ್ಲಿ ಬಂಡವಾಳ ವಿನಿಯೋಗ ತೃಪ್ತಿಕರವಾಗಿ ಸಾಗಬೇಕಾದರೆ ಸರ್ಕಾರಿ ವಲಯ ಅದಕ್ಕೆ ತಕ್ಕ ಪ್ರೋತ್ಸಾಹ, ಸಹಕಾರ ಹಾಗೂ ಸಹಾಯ ನೀಡುವುದು ಅವಶ್ಯ. ಸರ್ಕಾರೀ ಮತ್ತು ಖಾಸಗಿ ವಲಯಗಳಲ್ಲಿ ಉದ್ಯಮಶೀಲತೆ ಪರಸ್ಪರ ಹೊಂದಾಣಿಕೆಯ ಮಾರ್ಗವನ್ನನುಸರಿಸಿ ದೇಶದ ಅಭಿವೃದ್ದಿ ಸಾಧಿಸಬೇಕಾಗುತ್ತದೆ. ಉತ್ಪಾದನೆಯ ಇತರ ಮೂರು ಅಂಗಗಳಂತೆ ಉದ್ಯಮಿಯ ಕಾರ್ಯವಾದ ಸಂಘಟನೆಯೂ ಒಂದು ಅಂಗವೆಂಬುದನ್ನು ಅನೇಕ ಅರ್ಥಶಾಸ್ತ್ರಜ್ಞರು ಒಪ್ಪುವುದಿಲ್ಲ. ಆಧುನಿಕ ವ್ಯವಹಾರ ಸಂಸ್ಥೆಗಳಲ್ಲಿ ಉದ್ಯಮಿಯ ಕಾರ್ಯಾಂಗವನ್ನು ಗುರುತಿಸುವುದು ಕಷ್ಟ. ಏಕವ್ಯಕ್ತಿ ಸಂಸ್ಥೆಯಲ್ಲಿ ಅದರ ಮಾಲೀಕನೇ ಉದ್ಯಮಿ. ಬಂಡವಾಳ ತರುವವನೂ ಸಂಸ್ಥೆಯ ವ್ಯವಸ್ಥಾಪನ ಕಾರ್ಯ ನಡೆಸುವವನೂ ಉದ್ಯಮಕ್ಕೆ ಸಂಬಂಧಿಸಿದಂತೆ ಎಲ್ಲ ನಷ್ಟಕ್ಕೂ ಹೊಣೆಗಾರನಾಗುವವನೂ ಅವನೇ. ಪಾಲುದಾರಿಕೆ ಸಂಸ್ಥೆಯಲ್ಲಿ ಇವೆಲ್ಲವೂ ಪಾಲುದಾರರಲ್ಲಿ ಸಮನಾಗಿ ಹಂಚಿಕೆಯಾಗುತ್ತವೆ. ಆದರೆ ಮಿತಹೊಣೆಯ ಸಾರ್ವಜನಿಕ ಕಂಪನಿಗಳಲ್ಲಿ ಹೀಗಲ್ಲ. ನಷ್ಟದ ಹೊಣೆ ಷೇರುದಾರರದು. ನೀತಿ ನಿರ್ಧರಿಸುವವರೂ ತೀರ್ಮಾನ ಕೈಕೊಳ್ಳುವವರೂ ನಿರ್ದೇಶಕರು. ಪೌರಸಭೆಯ ಅಧೀನದಲ್ಲಿರುವ ಉದ್ಯಮದ ಅಂತಿಮ ಹೊಣೆ ಆ ಪ್ರದೇಶದ ಪೌರರದು. ಇದರ ನಿರ್ವಹಣೆ ಇದಕ್ಕಾಗಿಯೇ ನೇಮಕವಾದ ಮಂಡಲಿಯದು. ರಾಷ್ಟ್ರೀಕರಣಗೊಂಡ ಉದ್ಯಮಗಳ ಹೊಣೆ ಹೊರುವವರು ತೆರಿಗೆದಾರರು. ಇವುಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಹೊಣೆ ಸಂಸತ್ತು ಮತ್ತು ಇದರಿಂದ ಅಧಿಕಾರ ಪಡೆದ ಆಡಳಿತಗಾರರಿಗೆ ಸೇರಿದ್ದು. ಅಭಿವೃದ್ಧಿ ಹೊಂದದ ದೇಶಗಳಲ್ಲಿ ಅಜ್ಞಾನ ಹಾಗೂ ಅಂಧಶ್ರದ್ಧೆಗಳು ತುಂಬಿ ತುಳುಕಾಡುತ್ತಿರುವಾಗ ಅವುಗಳನ್ನು ತೊಡೆದುಹಾಕಿ ಆಧುನಿಕ ವಿಜ್ಞಾನ ಯುಗದ ಗತಿಶೀಲ ಸಮಾಜ ನಿರ್ಮಿಸಬೇಕಾದರೆ ಸರ್ಕಾರವೇ ಆರ್ಥಿಕಚಟುವಟಿಕೆಗಳಿಗೆ ಚಾಲನೆ ಕೊಡುವ ಆವಶ್ಯಕತೆ ಹೆಚ್ಚಾಗಿದೆ. ಅಂದರೆ ಜನತೆಗೆ ತಕ್ಕ ತರಬೇತಿ ದೊರೆತು ಅನುಕರಣೆಗೆ ಪ್ರೇರಣೆ ದೊರೆಯುತ್ತದೆ. ಇಂಥ ದೇಶಗಳಲ್ಲಿ ಜನತೆ ಉದ್ಯಮಿಗಳಾಗಲು ಉತ್ಸುಕರಿದ್ದರೂ ಕೆಳಮಟ್ಟದ ಆದಾಯದಿಂದಾಗಿ ಬಂಡವಾಳ ಶೇಖರಣೆ ಹಾಗೂ ನಿಯೋಜನೆಯ ಸಾಮರ್ಥ್ಯ ಇಲ್ಲದಿರುವುದರಿಂದ ಉದ್ಯಮಶೀಲತೆಗೆ ಹೆಚ್ಚಿನ ಅವಕಾಶ ಇರುವುದಿಲ್ಲ. ಈ ಕೊರತೆಯ ನಿವಾರಣೆ ಸರ್ಕಾರದಿಂದ ಮಾತ್ರ ಸಾಧ್ಯ. ಸರ್ಕಾರೀ ವಲಯವೇ ಉದ್ಯಮ ಸ್ಥಾಪಿಸಿ ಆರ್ಥಿಕ ವ್ಯವಸ್ಥೆಯಲ್ಲಿ ನಾಯಕತ್ವ ವಹಿಸಬೇಕಾಗುತ್ತದೆ. ದೇಶದಲ್ಲಿಯ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚು ಪದಾರ್ಥಗಳ ಉತ್ಪಾದನೆಗೆ ಸಹಾಯಕವಾಗಲು ಭಾರಿ ವೆಚ್ಚದಿಂದ ವಿದ್ಯುಚ್ಛಕ್ತಿ ಹಾಗೂ ಯಂತ್ರ ಸಾಮಗ್ರಿಗಳನ್ನು ಉತ್ಪಾದಿಸಲೂ ಉತ್ಪಾದಿಸಿದ ಪದಾರ್ಥದ ಸಾಗಾಣಿಕೆಗಾಗಿ ಭಾರಿ ವೆಚ್ಚದ ರೈಲ್ವೇ ಹಾಗೂ ರಸ್ತೆಗಳನ್ನು ನಿರ್ಮಿಸಲೂ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ಎಲ್ಲಕ್ಕೂ ಹೆಚ್ಚಾಗಿ ಇಂಥ ದೇಶಗಳಲ್ಲಿ ಇಂದು ಉದ್ಯಮಿಗೆ ಇಲ್ಲದಿರುವ ಗೌರವ ಹಾಗೂ ಸ್ಥಾನಮಾನಗಳು ದೊರೆಯುವಂತೆ ವಾತಾವರಣ ನಿರ್ಮಿಸುವುದೂ ಸರ್ಕಾರದ ಕರ್ತವ್ಯವೆನಿಸಿದೆ. ಹೀಗಾಗಿ ಎಲ್ಲ ದೃಷ್ಟಿಗಳಿಂದ ದೇಶದಲ್ಲಿ ಆರ್ಥಿಕ ಚೈತನ್ಯ ತುಂಬಲು ಸರ್ಕಾರವೇ ಉದ್ಯಮಿಯ ಪಾತ್ರ ನಿರ್ವಹಿಸಬೇಕೆಂಬ ವಾದವಿದೆ.

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2018-11-16. Retrieved 2016-04-26.
"https://kn.wikipedia.org/w/index.php?title=ಉದ್ಯಮಿ&oldid=1208433" ಇಂದ ಪಡೆಯಲ್ಪಟ್ಟಿದೆ