ವಿಷಯಕ್ಕೆ ಹೋಗು

ಉದಯರಾಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಯರಾಗ: ಧಾರ್ಮಿಕ ಅಥವಾ ಆಧ್ಯಾತ್ಮಿಕ ಸಾಹಿತ್ಯಭಾವವನ್ನೊಳಗೊಂಡ ಜಾನಪದ ಗೇಯಪ್ರಕಾರ. ದ್ರಾವಿಡ ದೇಶಗಳಲ್ಲಿ ಹೆಚ್ಚು ಕಡಿಮೆ ಇದೇ ಹೆಸರಿನಿಂದ ಪ್ರಸಿದ್ಧವಾಗಿದೆ. ಔತ್ತರೇಯರ ಜಾನಪದ ಜೀವನದಲ್ಲೂ ತತ್ ಸದೃಶವಾದ ಹಾಡಿನ ರೀತಿಗಳನ್ನು ಕಾಣಬಹುದು. ಉದಯರಾಗ ಎಂಬ ಶಬ್ದ ಅರುಣೋದಯ ವೇಳೆಯನ್ನೂ ತತ್ಕಾಲ ಸಂಬಂಧದಲ್ಲಿ ವಿಧಿಸಲ್ಪಟ್ಟ ಆಚಾರಸಮಯದ ರಾಗಸಹಿತವಾದ, ಎಂದರೆ ಹಾಡಿಕೊಂಡ, ಸ್ಮರಣೆಯನ್ನೂ ಸೂಚಿಸುತ್ತದೆ. ಈ ಎರಡು ಅರ್ಥಗಳಲ್ಲೂ ಇಂದು ಪ್ರಯೋಗವಿಸ್ತಾರವನ್ನು ಪಡೆದಿದೆ. ಇಲ್ಲಿ ಈ ಪ್ರಬಂಧಪ್ರಕಾರ ಕನ್ನಡದಲ್ಲಿ ರೂಢವಾಗಿರುವ ರೀತಿಯನ್ನು ಮಾತ್ರ ಕುರಿತು ಸಂಕ್ಷೇಪವಾಗಿ ಹೇಳಲಾಗುವುದು.

ಜನಪದದಿಂದ ಶಾಸ್ತ್ರೀಯ ಕಲೆಗೆ

[ಬದಲಾಯಿಸಿ]

ಜನಪದಸಂಗೀತ ಸಾಹಿತ್ಯಗಳಲ್ಲಿ ಪ್ರಬಂಧ ರೀತಿಗಳು ಸಾಮಾನ್ಯ ವ್ಯಕ್ತಿಯ ದಿನಚರಿಯಲ್ಲಿ ವಿಶೇಷವಾಗಿ ಆಯಾ ಕಾಲ, ಕರ್ಮಗಳಿಗೆ ಸಂಬಂಧಿಸಿದಂತೆ ವಸ್ತುನಿಷ್ಠವಾಗಿರುವವೇ ಹೆಚ್ಚು. ಭಾರತದಂಥ, ಅದರಲ್ಲೂ ಕನ್ನಡ ನಾಡಿನಂಥ, ಅಧ್ಯಾತ್ಮ ಪ್ರವೃತ್ತಿ, ಧಾರ್ಮಿಕ ಆಚಾರ ಶೀಲಗಳಲ್ಲಿಯೇ ವಿಶೇಷವಾಗಿ ಒಲವಿರುವ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿಯೇ ಇದರ ಪ್ರಭಾವ ಜನಪದ ಹಾಡುಗಳಲ್ಲಿ ಹೆಚ್ಚಾಗಿರುತ್ತದೆ. ಎಂದೇ ಈ ಹಾಡುಗಳಲ್ಲಿ ಹಲವು ಸಾಮುದಾಯಿಕ ಸ್ಮರಣರೂಪವಾಗಿ ಆಚಾರ, ವಿಚಾರ, ಧರ್ಮಗಳ ದಾಖಲೆಗಳಾಗಿ ಉಳಿದಿವೆ. ಭಾರತದ ಧಾರ್ಮಿಕ ಇತಿಹಾಸದಲ್ಲಿ 15-16 ಶತಮಾನಗಳು ಮುಖ್ಯ. ಏಕೆಂದರೆ ಭಾರತದ ವಿವಿಧ ಭಾಗಗಳಲ್ಲಿ ಈ ಸುಮಾರಿಗೆ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಮತಸಂಬಂಧ ಚಿಂತನೆಗಳಲ್ಲಿ ಸಂಸ್ಕೃತ ಪ್ರಧಾನವಾಗಿದ್ದ ಮಾರ್ಗಪ್ರವೃತ್ತಿಯ ಬದಲು ಆಡುಮಾತಿನ ದೇಶ್ಯಪ್ರವೃತ್ತಿಯನ್ನು ಪ್ರತಿಭಾವಂತ ನಾಯಕರು ಪ್ರಚುರಪಡಿಸಿದರು. ಮೊದಲು ಇದಕ್ಕೆ ಬಂಡಾಯದ ಸ್ಥಾನಮಾನಗಳೇ ದೊರಕಿ ತೀವ್ರ ಪ್ರತಿಭಟನೆಯೇ ದೊರೆತರೂ ಒಂದೆರಡು ಶತಮಾನಗಳಲ್ಲೇ ಸಂಸ್ಕೃತಿ ಪ್ರವಾಹವನ್ನು ಶ್ರೀಸಾಮಾನ್ಯನ ಮನೆಬಾಗಿಲಿಗೆ ತಂದರೆ ಮಾತ್ರ ಸನಾತನ ಧರ್ಮದ ದಕ್ಷ ಪುನರುತ್ಥಾನವೂ ಅವಿಚ್ಛಿನ್ನ ಪರಂಪರೆಯ ಸಾಧನೆಯೂ ಆದೀತೆಂಬ ಸತ್ಯದರ್ಶನವಾದುದರ ಫಲವಾಗಿ, ಜನಸಾಮಾನ್ಯರಿಂದ ಅಭೂತಪೂರ್ವ ಉತ್ಸಾಹದ ಸ್ವಾಗತವೇ ದೊರೆತು ಸ್ಥಿರವಾಗಿ ನಿಂತಿತು. ಮಂತ್ರಗಳನ್ನೂ ತಂತ್ರಗಳನ್ನೂ ವೇದೋಪನಿಷದ್ರಹಸ್ಯಗಳನ್ನೂ ನಿಘಂಟುಗಳನ್ನೂ ಕನ್ನಡದ ತಿಳಿಯಾದ ಮಾತುಗಳಲ್ಲಿಯೇ ಹೇಳುವ ಪದ್ಧತಿ ಕನ್ನಡ ದೇಶದಲ್ಲಿ ಹರಿಶರಣರಿಂದಲೂ ಜಿನಶರಣರಿಂದಲೂ ಬಹು ಹಿಂದಿನಿಂದ ರೂಢಿಗೆ ಬಂದಿತು. ಈ ನಿಟ್ಟಿನಲ್ಲಿ ಕರ್ನಾಟಕದ ಹರಿದಾಸರ ಪ್ರತಿಭೆಯೂ ಸೇವೆಯೂ ವಿಶೇಷವಾಗಿ ಸ್ಮರಣೀಯವಾಗಿವೆ. ಅವರು ಪುರಂದರದಾಸರ ನಾಯಕತ್ವದಲ್ಲಿ ಸುವ್ವಾಲಿ, ಜೋಗುಳ, ಲಾವಣಿ, ಸಾಂಗತ್ಯ, ಬುಡುಬುಡಿಕೆ ಮೊದಲಾದ ಜನಪದ ಛಂದಸ್ಸುಗಳನ್ನೂ ಮಟ್ಟುಗಳನ್ನೂ ಬೋಧನ ಮತ್ತು ಪ್ರಸಾರಗಳ ಉಪಕರಣವಾಗಿ ಬಳಸಿಕೊಂಡರು. ಉದಯರಾಗ ಈ ಜಾತಿಗೆ ಸೇರಿದ ಹಾಡು. ಇವರ ಸಾಧನೆಯ ಫಲವಾಗಿ ಈ ಹಾಡಿನ ರೀತಿಗಳಲ್ಲಿ ಕೆಲವಕ್ಕೆ ಶಾಸ್ತ್ರೀಯ ಸಂಗೀತದ ವೇದಿಕೆಗಳಲ್ಲಿ ಪ್ರಯುಕ್ತಿಯ ಗೌರವ ದೊರಕಿತು. ಶಾಸ್ತ್ರೀಯವೂ ಸಾಂಪ್ರದಾಯಿಕವೂ ಆದ ಸಂಗೀತ ಮರ್ಯಾದೆಯ ಚೌಕಟ್ಟಿನಲ್ಲಿ ನೀತಿ, ಸಮಾಜಪ್ರಜ್ಞೆ, ಆತ್ಮಬೋಧೆ ಮೊದಲಾದ ಗಹನವೂ ಸಾರ್ವಕಾಲಿಕವೂ ಆದ ಮೌಲ್ಯಗಳನ್ನು ಪಾಮರರಂಜನೆಯೂ ಆಗುವಂತೆ ಹೃದ್ಯಶೈಲಿಯಲ್ಲಿ ಅತ್ಯಂತ ಸಹಜವೂ ಸ್ವಾಭಾವಿಕವೂ ಎನ್ನಿಸುವಂಥ ರೀತಿಯಲ್ಲಿ ಹಾಡು ಕಟ್ಟುವ ಚಿರಂತನ ಸ್ಫೂರ್ತಿ, ವ್ಯಾಪಕ ಸಾಮಗ್ರಿ-ಇವುಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅವರು ಮೈಗೂಡಿಸಿಕೊಂಡಿದ್ದರಿಂದ ಇದು ಸಾಧ್ಯವಾಯಿತು.

ಸ್ವರೂಪ

[ಬದಲಾಯಿಸಿ]

ಉದಯರಾಗದ ಸಾಹಿತ್ಯ ಸ್ತುತಿ, ಆಚಾರ, ಶೀಲ, ಸುಪ್ರಭಾತ ಮುಂತಾದವುಗಳ ಭಾವವನ್ನು ಒಳಗೊಂಡಿದೆ. ನಿರೂಪಣಾಕ್ರಮದ, ಬೋಧನರೂಪದ ಶೈಲಿಯೇ ಸಾಮಾನ್ಯವಾಗಿ ಇದರಲ್ಲಿ ಕಂಡುಬರುತ್ತದೆ. ಮಾತುಗಳು ತುಂಬ ತಿಳಿಯಾಗಿ, ಸರಳವಾಗಿ, ಆಡುಮಾತಿನ ನುಡಿಗಟ್ಟಿನಲ್ಲಿರುತ್ತವೆ. ಛಂದಸ್ಸು ಇಂಥದೇ ಎಂದು ಹೇಳಲು ಬರುವುದಿಲ್ಲವಾದರೂ ಪುರಂದರದಾಸ, ಕನಕದಾಸ, ಮೊದಲಾದವರ ಒಲವು ಷಟ್ಪದಿಗಳಲ್ಲಿಯೇ-ವಿಶೇಷವಾಗಿ ವಾರ್ಧಕದಲ್ಲಿ- ಇರುವುದನ್ನು ಕಾಣಬಹುದು. ಅಕ್ಷರಗಣ ಛಂದಸ್ಸು ಅಪರೂಪವಾಗಿಯೂ ಮಾತ್ರಾಗಣದಲ್ಲಿ ಪಂಚಮಾತ್ರೆಗಳ ಗಣದ ಖಂಡನಡೆ ಅಧಿಕವಾಗಿಯೂ ಉದಯರಾಗಗಳಲ್ಲಿ ದೊರೆಯುತ್ತದೆ. ದ್ವಿತೀಯಾಕ್ಷರ ಪ್ರಾಸವೇ ಹೆಚ್ಚು ರೂಢಿಯಲ್ಲಿದೆ. ಪುರಂದರದಾಸರ ಗಜೇಂದ್ರಮೋಕ್ಷ ಮತ್ತು ಕಾಶೀಯಾತ್ರೆಗಳ ಪ್ರಸಿದ್ಧ ಉದಯರಾಗಗಳನ್ನು ಇಲ್ಲಿ ನೆನೆಯಬಹುದು. ಇಂದಿಗೂ ಅವನ್ನು ಆಚಾರಶೀಲ ಬ್ರಾಹ್ಮಣ ಕುಟುಂಬಗಳಲ್ಲಿ ಹೆಂಗಸರು ಮುಂಜಾನೆಯಲ್ಲಿ ರಂಗವಲ್ಲಿ ಹಾಕುವಾಗಲೋ ಸ್ನಾನ-ಮಡಿಗಳ ವೇಳೆಯಲ್ಲೋ ಹಾಡಿಕೊಳ್ಳುವುದನ್ನು ಕೇಳಬಹುದು. ವಾಸವನೆ ಮಾಡಿಕೋ ಕಾಶಿಯಲ್ಲಿ-ಎಂದು ಪ್ರಾರಂಭವಾಗುವ ಕಾಶೀವಾಸ ಉದಯರಾಗದಲ್ಲಿ ಮಾಧ್ವ ಸಂಪ್ರದಾಯದವರಿಗೆ ಕಾಶಿಯಲ್ಲಿ ವಿಧಿಸಿರುವ ಪಂಚಕ್ರೋಶವೆಂಬ ಐದು ದಿನದ ಯಾತ್ರೆಯನ್ನು ಕ್ಷೇತ್ರ, ನದೀವರ್ಣನೆಗಳೊಡನೆ ವಿವರವಾಗಿ ಹೇಳಿದೆ. ಒಂಬತ್ತು ನುಡಿಗಳುಳ್ಳ ಇದನ್ನು ಪುರಂದರದಾಸರೇ ನವರತ್ನ ಮಾಲಿಕೆಯೆಂಬ ಹೆಸರಿನಿಂದ ಕರೆದಿದ್ದಾರೆ. ನಾರಾಯಣಾಯ ನಮೋ ಎಂದು ಪ್ರಾರಂಭವಾಗುವ ಗಜೇಂದ್ರಮೋಕ್ಷದಲ್ಲಿ ಹನ್ನೊಂದು ನುಡಿಗಳಿದ್ದು ಪಾಂಡ್ಯ ದೇಶದ ಇಂದ್ರದ್ಯುಮ್ನ ದೊರೆ ಅಗಸ್ತ್ಯ ಶಾಪದಿಂದ ಸಲಗನಾಗಿ ಹುಟ್ಟಿ, ದೇವಲ ಋಷಿಯ ಶಾಪದಿಂದ ಮೊಸಳೆಯಾಗಿ ಹುಟ್ಟಿದ್ದ ಹೂಹೂ ಎಂಬ ಗಂಧರ್ವನಿಂದ ಸರೋವರದಲ್ಲಿ ಹಿಡಿಯಲ್ಪಟ್ಟು ಗರ್ವಭಂಗಿತನಾಗಿ ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ಎಂಬ ಭಾವದಲ್ಲಿ ವಿಷ್ಣುವನ್ನು ಬೇಡಿಕೊಳ್ಳಲಾಗಿ ಮಕರಬಾಧೆಯಿಂದಲೂ ಶಾಪದಿಂದಲೂ ಮುಕ್ತನಾದ ಚಿರಪ್ರಸಿದ್ಧ ಕಥೆ ಇದೆ. ಜೊತೆಗೆ ವಾಸುದೇವಾಯ ನಮೋ ಎಂದು ಪ್ರಾರಂಭವಾಗುವ ಕನಕದಾಸರ ದ್ರೌಪದೀಮಾನ ಸಂರಕ್ಷಣೆಯ ಉದಯರಾಗವೂ ಇದೆ. ಪುರಂದರದಾಸರ ರಂಗನೊಲಿದ ಎಂಬ ಇಪ್ಪತ್ತೊಂದು ನುಡಿಗಳ ಹಾಡನ್ನು ಅಪೂರ್ವವಾಗಿ ಉದಯರಾಗವಾಗಿಯೇ ಹಾಡಿಕೊಳ್ಳುವುದೂ ಉಂಟು. ಇದು ಷಟ್ಟದಿಯಲ್ಲಿ, ಚೌಪದಿಯಲ್ಲಿ, ದ್ವಿತೀಯಾಕ್ಷರ ಪ್ರಾಸದಲ್ಲಿ ರಚಿತವಾಗಿದೆ. ಇದನ್ನು ಕೃತಿಯಾಗಿ ಬೇಕಾದರೂ ಹಾಡಿಕೊಳ್ಳಬಹುದು. ಆದರೆ ಕಥಾವಸ್ತುವನ್ನು ಒಳಗೊಂಡಿರುವುದರಿಂದ ಒಂದೆರಡು ನುಡಿಗಳನ್ನು ಮಾತ್ರ ಕೃತಿಗಳಲ್ಲಿರುವಂತೆ ಹಾಡಿಕೊಂಡರೆ ಹಾಡಿನ ಉದ್ದೇಶ ನಿರರ್ಥಕವಾಗುತ್ತದೆ. ಇವುಗಳೇ ಅಲ್ಲದೆ ಕೋಳಿ ಕೂಗಿತಲ್ಲಾ, ಉದಯಕಾಲದೊಳೆದ್ದು, ಈಗಲುಪ್ಪವಡಿಸಿದಳು, ರಂಗನಾಯಕಸ್ವಾಮಿ... ಬೆಳಗಾಯಿತೇಳೆನ್ನುತ, ಉಪ್ಪವಡಿಸಯ್ಯ ಹರಿಯೇ, ಏಳಯ್ಯ ಬೆಳಗಾಯಿತು, ಏಳಯ್ಯ ಶ್ರೀ ಹರಿ ಹಾಗೂ ಚಿರಪ್ರಸಿದ್ಧವಾದ ಏಳು ನಾರಾಯಣ, ಏಳು ಲಕ್ಷ್ಮೀರಮಣ ಇತ್ಯಾದಿ ಸುಪ್ರಭಾತವನ್ನು ಹೇಳುವ ಹಾಡುಗಳು ಉದಯರಾಗಗಳೇ, ಉದಯಗೀತಗಳೇ ಆಗಿವೆ. ಆದರೆ ಇವು ಕೃತಿಯ ಶೈಲಿಯಲ್ಲಿವೆ. ಸಂಗೀತ ಧಾತುವಿನ ದೃಷ್ಟಿಯಿಂದ ಉದಯರಾಗವೆಂದರೆ ಇಂದು ಸಾಧಾರಣವಾಗಿ ಭೂಪಾಳಿ, ರೇಗುಪ್ತಿಗಳ ಮಟ್ಟೇ ಆಗಿದೆ. ಉದಯಗೀತೆಗಳನ್ನು ಬಿಲಹರಿ, ದೇಶಾಕ್ಷಿ, ಆನಂದಭೈರವಿಗಳಲ್ಲಿ ಹಾಡುವ ರೂಢಿಯೂ ಉಂಟು. ರತ್ನಾಕರವರ್ಣಿಯೇ ಮೊದಲಾದ ಕವಿಗಳು ವೇಳಾವಳಿ, ಗುಂಡಕ್ರಿಯೆ ಮೊದಲಾದ ಇತರ ರಾಗಗಳನ್ನು ಉದಯಕಾಲದ ರಾಗಗಳೆಂದೇ ಹೇಳಿದ್ದಾರೆ. ಶಾಸ್ತ್ರದಲ್ಲೂ ಗುಂಡುಕ್ರಿಯೆ, ಮಲಹರಿ ಮೊದಲಾದ ಮಾಯಾಮಾಳವಗೌಳಜನ್ಯರಾಗಗಳನ್ನೂ ಇತರ ಕೆಲವನ್ನೂ ಪ್ರಾತರ್ಗೇಯ ರಾಗಗಳೆಂದು ವರ್ಣಿಸಿದೆ. ಉದಯರಾಗದ ಹಾಡುಗಳನ್ನು ಷಟ್ಪದಿಯವುಗಳನ್ನೂ ಒಳಗೊಂಡು ಪಲ್ಲವಿ, ಅನುಪಲ್ಲವಿ ಮತ್ತು ಅನೇಕ ನುಡಿಗಳಲ್ಲಿ ಹಾಡುತ್ತಾರೆ. ಪ್ರತಿನುಡಿಯ ಅನಂತರವೂ ಪಲ್ಲವಿಯ ಅಂತ್ಯಾಕ್ಷರ ದೀರ್ಘವಾಗುತ್ತದೆ. ಉಳಿದೆಲ್ಲ ಜನಪದ ಗೀತೆಗಳಂತೆ ಇದೂ ಮಾತು (ಸಾಹಿತ್ಯ)ಪ್ರಧಾನವಾದುದು, ಧಾತು ಪ್ರಧಾನವಲ್ಲ. ಕ್ರಮೇಣ ಕಣ್ಮರೆಯಾಗುತ್ತಿರುವ ಉದಯರಾಗದಂಥ ಸುಂದರ ಸಾಂಪ್ರದಾಯಿಕ ಹಾಡುಗಳನ್ನು ಉಳಿಸಿಕೊಂಡು ಶುದ್ಧರೂಪಿನಲ್ಲಿ ನಿಲ್ಲಿಸಿ ಹರಡುವುದರ ಕಡೆಗೆ ಸಂಗೀತ ಸಾಹಿತ್ಯ ಸಂಪ್ರದಾಯಪ್ರಿಯರ ಗಮನಹರಿಯಬೇಕಾಗಿದೆ. (ಆರ್.ಎಸ್.ಎನ್.)

"https://kn.wikipedia.org/w/index.php?title=ಉದಯರಾಗ&oldid=715529" ಇಂದ ಪಡೆಯಲ್ಪಟ್ಟಿದೆ