ವಿಷಯಕ್ಕೆ ಹೋಗು

ಉತ್ತರ ಗುಪ್ತ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉತ್ತರ ಗುಪ್ತರ ರಾಜ್ಯ ಅದರ ಉತ್ತುಂಗದಲ್ಲಿ, ಸು. ಕ್ರಿ.ಶ. ೫೯೦ರಲ್ಲಿ, ಮತ್ತು ಅದರ ನೆರೆ ರಾಜ್ಯಗಳು

ಉತ್ತರ ಗುಪ್ತ ರಾಜವಂಶ ೬ನೇ ಮತ್ತು ೭ನೇ ಶತಮಾನಗಳ ನಡುವೆ ಪೂರ್ವ ಭಾರತದಲ್ಲಿ ಮಗಧ ಪ್ರದೇಶವನ್ನು ಆಳಿತು. ಉತ್ತರ ಗುಪ್ತರು ಮಗಧದ ಅರಸರಾಗಿ ಸಾಮ್ರಾಜ್ಯಶಾಹಿ ಗುಪ್ತರ ನಂತರ ಬಂದರು, ಆದರೆ ಎರಡೂ ರಾಜವಂಶಗಳನ್ನು ಸಂಬಂಧಿಸುವ ಯಾವುದೇ ಸಾಕ್ಷ್ಯವಿಲ್ಲ; ಇವು ಎರಡು ವಿಭಿನ್ನ ಕುಟುಂಬಗಳೆಂದು ತೋರುತ್ತದೆ.[] ಉತ್ತರ ಗುಪ್ತರ ರಾಜರ ಹೆಸರುಗಳು "ಗುಪ್ತ" ಪ್ರತ್ಯಯದಿಂದ ಕೊನೆಗೊಳ್ಳುತ್ತಿದ್ದರಿಂದ ಅವರನ್ನು ಹಾಗೆ ಕರೆಯಲಾಗುತ್ತದೆ. ತಮ್ಮನ್ನು ತಾವು ಸಾಮ್ರಾಜ್ಯಶಾಹಿ ಗುಪ್ತರ ನ್ಯಾಯಯುತ ಉತ್ತರಾಧಿಕಾರಿಗಳೆಂದು ಬಿಂಬಿಸಿಕೊಳ್ಳಲು ಬಹುಶಃ ಈ ಹೆಸರನ್ನು ಅವರು ಅಳವಡಿಸಿಕೊಂಡಿರಬಹುದು.[]

ಗುಪ್ತ ಸಾಮ್ರಾಜ್ಯದ ಪತನದ ನಂತರ, ಉತ್ತರ ಗುಪ್ತರು ಮಗಧದ ಅರಸರಾಗಿ ಅವರ ನಂತರ ಬಂದರು. ಈ ರಾಜವಂಶದ ಸ್ಥಾಪಕ ಕೃಷ್ಣಗುಪ್ತನ ಮಗಳು ಮೌಖರಿ ರಾಜವಂಶದ ರಾಜಕುಮಾರ ಆದಿತ್ಯವರ್ಮನ್ ಅನ್ನು ವಿವಾಹವಾದಳು ಎಂದು ಹೇಳಲಾಗಿದೆ. ಆಪ್ಸಾಡ್ ಶಾಸನದ ಪ್ರಕಾರ, ಕೃಷ್ಣಗುಪ್ತನ ಮೊಮ್ಮಗ ಜೀವಿತಗುಪ್ತನು ಹಿಮಾಲಯ ಪ್ರದೇಶಗಳು ಮತ್ತು ನೈಋತ್ಯ ಬಂಗಾಳದಲ್ಲಿ ಸೇನಾ ದಂಡಯಾತ್ರೆಗಳನ್ನು ಕೈಗೊಂಡನು.

ಜೀವಿತಗುಪ್ತನ ಮಗ ಕುಮಾರಗುಪ್ತನ ಆಳ್ವಿಕೆಯ ಕಾಲದಲ್ಲಿ, ಈ ರಾಜವಂಶವು ಮೌಖರಿಯರೊಂದಿಗೆ ವಿರೋಧ ಬೆಳೆಸಿಕೊಂಡರು. ಕುಮಾರಗುಪ್ತನು ಕ್ರಿ.ಶ. ೫೫೪ ರಲ್ಲಿ ಮೌಖರಿ ರಾಜ ಈಶಾನವರ್ಮನ್ ಅನ್ನು ಸೋಲಿಸಿದನು, ಮತ್ತು ಪ್ರಯಾಗದಲ್ಲಿ ಮರಣ ಹೊಂದಿದನು. ಇವನ ಮಗ ದಾಮೋದರಗುಪ್ತನು ಮೌಖರಿಗಳ ವಿರುದ್ಧ ಸೋಲುಗಳನ್ನು ಅನುಭವಿಸಿದನು.

ದಾಮೋದರಗುಪ್ತನ ಮಗ ಮಹಾಸೇನಗುಪ್ತನು ಪುಶ್ಯಭೂತಿ ರಾಜವಂಶದೊಂದಿಗೆ ಮೈತ್ರಿ ಬೆಳೆಸಿದನು. ಅವನ ಸೋದರಿಯು ಪುಶ್ಯಭೂತಿ ಅರಸ ಆದಿತ್ಯವರ್ಧನನನ್ನು ವಿವಾಹವಾದಳು. ಇವನು ಕಾಮರೂಪವನ್ನು ಆಕ್ರಮಣ ಮಾಡಿ ಸುಸ್ಥಿತ ವರ್ಮನ್ ಅನ್ನು ಪರಾಜಿತಗೊಳಿಸಿದನು. ಆದರೆ ಇವನು ನಂತರ ಮೂರು ಆಕ್ರಮಣಕಾರರಿಗೆ ಎದುರಾದನು: ಮೌಖರಿ ರಾಜ ಶರ್ವ ವರ್ಮನ್, ಕಾಮರೂಪ ರಾಜ ಸುಪ್ರತಿಷ್ಠಿತ-ವರ್ಮನ್, ಮತ್ತು ಟಿಬೇಟಿನ ರಾಜ ಸ್ರೋಂಗ್ ತ್ಸಾನ್. ಅವನ ಸಾಮಂತ ಶಶಾಂಕನೂ ಅವನನ್ನು ತ್ಯಜಿಸಿದನು (ಮತ್ತು ನಂತರ ಸ್ವತಂತ್ರ ಗೌಡ ರಾಜ್ಯವನ್ನು ಸ್ಥಾಪಿಸಿದನು). ಈ ಪರಿಸ್ಥಿತಿಯಲ್ಲಿ, ಮಹಾಸೇನಗುಪ್ತನು ಮಗಧವನ್ನು ಬಿಟ್ಟು ಪಲಾಯನ ಮಾಡಬೇಕಾಯಿತು, ಮತ್ತು ಮಾಲ್ವಾದಲ್ಲಿ ಆಶ್ರಯ ಪಡೆದನು. ತರುವಾಯ, ಪುಶ್ಯಭೂತಿ ಸಾಮ್ರಾಟ ಹರ್ಷನು ಉತ್ತರ ಗುಪ್ತರ ಆಳ್ವಿಕೆಯನ್ನು ಮಗಧದಲ್ಲಿ ಪುನಃಸ್ಥಾಪಿಸಿದನು, ಮತ್ತು ಉತ್ತರ ಗುಪ್ತರು ಹರ್ಷನ ಸಾಮಂತರಾಗಿ ಆಳಿದರು.

ಹರ್ಷನ ಮರಣದ ನಂತರ, ಉತ್ತರ ಗುಪ್ತರ ಅರಸ ಆದಿತ್ಯಸೇನನು ಒಂದು ದೊಡ್ಡ ರಾಜ್ಯದ ಸಾರ್ವಭೌಮ ದೊರೆಯಾದನು. ಈ ರಾಜ್ಯ ಉತ್ತರದಲ್ಲಿ ಗಂಗಾದಿಂದ ದಕ್ಷಿಣದಲ್ಲಿ ಛೋಟಾ ನಾಗ್ಪುರ್ ವರೆಗೆ; ಮತ್ತು ಪೂರ್ವದಲ್ಲಿ ಗೋಮತಿ ನದಿಯಿಂದ ಪಶ್ಚಿಮದಲ್ಲಿ ಬಂಗಾಳ ಕೊಲ್ಲಿಯ ವರೆಗೆ ವಿಸ್ತರಿಸಿತ್ತು. ಆದರೆ, ಇವನು ಚಾಳುಕ್ಯರಿಂದ ಪರಾಜಿತಗೊಂಡನು. ಈ ರಾಜವಂಶದ ಕೊನೆಯ ಪರಿಚಿತ ದೊರೆ ಎರಡನೇ ಜೀವಿತಗುಪ್ತನು ಕನ್ನೌಜ್‍ನ ಯಶೋವರ್ಮನ್‍ನಿಂದ ಪರಾಜಿತಗೊಂಡನೆಂದು ತೋರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Karl J. Schmidt 2015, p. 26.
  2. Sailendra Nath Sen 1999, p. 246.