ವಿಷಯಕ್ಕೆ ಹೋಗು

ಉತ್ತರಾಧಿಕಾರ ತೆರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉತ್ತರಾಧಿಕಾರ ತೆರಿಗೆ ಎಂದರೆ ಸತ್ತವನ ಸ್ವತ್ತಿನ ಉತ್ತರಾಧಿಕಾರದ ಮೇಲೆ ವಿಧಿಸಲಾಗುವ ತೆರಿಗೆ (ಇನ್ಹೆರಿಟೆನ್ಸ್‌ ಟ್ಯಾಕ್ಸ್‌).

ಹಿನ್ನೆಲೆ

[ಬದಲಾಯಿಸಿ]

ನಿಖರವಾಗಿ ಹೇಳುವುದಾದರೆ ಈ ತೆರಿಗೆಯೂ ಸಂಪತ್ತಿ ಶುಲ್ಕವೂ (ಎಸ್ಟೇಟ್ ಡ್ಯೂಟಿ) ಮರಣ ಶುಲ್ಕದ (ಡೆತ್ ಡ್ಯೂಟಿ) ಎರಡು ಪ್ರಭೇದಗಳು. ಇವೆರಡೂ ಸ್ವತ್ತಿನ ಮಾಲೀಕ ಸತ್ತಾಗ ತೆರಬೇಕಾದ ತೆರಿಗೆಗಳೇ ಆದರೂ ಆತನ ಸ್ವತ್ತನ್ನು ಅದರ ನೂತನ ಮಾಲೀಕರಿಗೆ ವರ್ಗಾಯಿಸುವಾಗ ಅದರ ಒಟ್ಟು ಮೌಲ್ಯದ ಮೇಲೆ ವಿಧಿಸಿದ್ದೇ ಸಂಪತ್ತಿ ಶುಲ್ಕ; ಸ್ವತ್ತಿನ ಫಲಾನುಭವಿಗಳನ್ನು ಗಮನದಲ್ಲಿಟ್ಟು, ಸತ್ತವನಿಗೂ ಇವರಿಗೂ ಇರುವ ರಕ್ತಸಂಬಂಧಕ್ಕನುಗುಣವಾಗಿ, ಅವರವರಿಗೆ ಸಲ್ಲುವ ವೈಯಕ್ತಿಕ ಪಾಲುಗಳನ್ನು ಆಧಾರವಾಗಿಟ್ಟುಕೊಂಡು ನಿರ್ಧರಿಸಿ ವಿಧಿಸಿದ್ದೇ ಉತ್ತರಾಧಿಕಾರ ತೆರಿಗೆ. ಉತ್ತರಾಧಿಕಾರಿ ದೂರದ ಸಂಬಂಧಿಯಾಗಿದ್ದರೆ ಆತನಿಗೆ ದೊರೆಯುವ ಸ್ವತ್ತು ಬಹು ಆಕಸ್ಮಿಕವಾದ್ದರಿಂದ ಅವನ ಮೇಲೆ ಬೀಳುವ ತೆರಿಗೆಯ ದರ ಹೆಚ್ಚು. ಹಕ್ಕುದಾರ ಹತ್ತಿರದ ಸಂಬಂಧಿಯಾಗಿದ್ದರೆ, ಅವನ ಮೇಲೆ ತೆರಿಗೆಯ ದರ ಸಹಜವಾಗಿ ಕಡಿಮೆ. ಅಂತೂ ಈ ತೆರಿಗೆಗಳೆರಡೂ ಉದ್ಭವಿಸುವುದು ಸಾವಿನ ಅನಂತರ, ಆದರೆ ಸ್ವತ್ತು ಬೇರೆಯವರ ಹಸ್ತಗತವಾಗುವ ಮುನ್ನ. ಇವೆರಡರ ಮೂಲ ಒಂದೇ; ತೆರಿಗೆ ವಿಧಿಸುವ ದೃಷ್ಟಿ ಬೇರೆ ಬೇರೆ.[]

ಯೂರೋಪ್ ನಲ್ಲಿ

[ಬದಲಾಯಿಸಿ]

ಕ್ರಾಂತಿಕಾರಕ ಕರಗಳಲ್ಲಿ ಒಂದೆನಿಸಿರುವ ಈ ತೆರಿಗೆ ಪ್ರ.ಶ. 6ರಷ್ಟು ಹಿಂದೆಯೇ, ರೋಮನ್ ಚಕ್ರಾಧಿಪತ್ಯದ ವೈಭವದ ಕಾಲದಲ್ಲಿ ಬಳಕೆಯಲ್ಲಿತ್ತು. ಆದರೆ ಅಂದು ಈ ತೆರಿಗೆ ಈಗಿನಷ್ಟು ಪರಿಪೂರ್ಣ ಸ್ವರೂಪದ್ದಾಗಿರಲಿಲ್ಲ. 17ನೆಯ ಶತಮಾನದ ಕೊನೆಯ ವೇಳೆಗೆ ಇಂಗ್ಲೆಂಡ್, ಫ್ರಾನ್ಸ್‌, ಸ್ಪೇನ್, ಪೋರ್ಚುಗಲ್ಲುಗಳಲ್ಲಿ ಉತ್ತರಾಧಿಕಾರ ತೆರಿಗೆಗಳು ಜಾರಿಯಲ್ಲಿದ್ದುವು. ಉತ್ತರಾಧಿಕಾರಿಗಳ ರಕ್ತಸಂಬಂಧದ ದೂರಕ್ಕೆ ಅನುಗುಣವಾಗಿ ಏರು ದರದ ತೆರಿಗೆ ವಿಧಿಸುವ ಆಧುನಿಕ ಮಾದರಿ ಅವತಾರವಾದದ್ದು ಫ್ರಾನ್ಸಿನಲ್ಲಿ (1796). ಮುಂದೆ ಇಟಲಿಯೂ ಇದನ್ನನುಸರಿಸಿತು (1862). 1853ರಲ್ಲಿ ಇಂಗ್ಲೆಂಡಿನಲ್ಲಿ ಜಾರಿಗೆ ಬಂದ ಉತ್ತರಾಧಿಕಾರ ಶುಲ್ಕ ಕಾಯಿದೆ (ಸಕ್ಸೆಷನ್ ಡ್ಯೂಟಿ ಆ್ಯಕ್ಟ್‌) ಸಾರ್ವಜನಿಕ ಹಣಕಾಸಿನ ಇತಿಹಾಸದಲ್ಲಿ ಒಂದು ಚಿರಸ್ಮರಣೀಯ ಘಟನೆ. 1885ರಲ್ಲಿ ನ್ಯೂಯಾರ್ಕ್ ರಾಜ್ಯದಲ್ಲಿ ಈ ತೆರಿಗೆಗೆ ಒಂದು ನಿರ್ದಿóಷ್ಟ ರೂಪ ಕೊಟ್ಟು, ಅದರ ಸಲುವಾಗಿ ಬಹು ಜಾಗರೂಕತೆಯಿಂದ ಒಂದು ಶಾಸನ ರಚಿಸಿ ಜಾರಿಗೆ ತಂದಾಗ, ಈ ತೆರಿಗೆಯ ಪ್ರಾಮುಖ್ಯ ಖಚಿತವಾಯಿತು. 1790-1902ರ ಅವಧಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ 22 ರಾಜ್ಯಗಳಲ್ಲೂ ಅನೇಕ ಐರೋಪ್ಯ ರಾಷ್ಟ್ರಗಳಲ್ಲೂ ಇದು ಜಾರಿಗೆ ಬಂತು. 1894ರಲ್ಲಿ ಬ್ರಿಟನ್ ಈ ತೆರಿಗೆಯಲ್ಲಿ ಪ್ರಗತಿಪರ ಮಾರ್ಪಾಡುಗಳನ್ನು ಮಾಡಿದಾಗ, ಜಗತ್ತಿನ ಇತರ ರಾಷ್ಟ್ರಗಳಿಗೆಲ್ಲ ಇದು ಮಾದರಿಯಾಯಿತು. 1930ರಲ್ಲಿ ಸಂಯುಕ್ತ ಸಂಸ್ಥಾನದ ರಾಜ್ಯಗಳು ಎಲ್ಲ ತೆರಿಗೆಗಳಿಂದ ಗಳಿಸಿದ ಒಟ್ಟು ವರಮಾನದ ಶೇಕಡ 9ರಷ್ಟು ಈ ತೆರಿಗೆಯಿಂದಲೇ ಬಂತೆಂಬ ಅಂಶ ಈ ತೆರಿಗೆಯ ಸಫಲತೆಯ ದ್ಯೋತಕವಾಗಿದೆ. []

ಆಡಳಿತದ ತೊಂದರೆಗಳು

[ಬದಲಾಯಿಸಿ]

ತೆರಿಗೆ ವಿಧಿಸುವ ಮುನ್ನ ಒಟ್ಟು ಆಸ್ತಿಯ ಮೌಲ್ಯವನ್ನು ಆಗಿನ ಬೆಲೆಗಳ ಪ್ರಕಾರ ನಿರ್ಧರಿಸಿ ಅನಂತರ ತೆರಿಗೆಯನ್ನು ವಿಧಿಸಬೇಕಾಗುತ್ತದೆ. ಇದು ವಿವಾದಾಸ್ಪದವಾದರೂ ಸಾವು ಸಂಭವಿಸಿದ ಮುಂದಿನ ಒಂದೆರಡು ವಾರಗಳಲ್ಲೇ ಈ ಕಾರ್ಯವನ್ನು ಪುರ್ತಿಗೊಳಿಸ ಬೇಕಾದದ್ದು ಅನಿವಾರ್ಯ.

ಈ ಬಗೆಯ ತೆರಿಗೆಗಳು ಸಂಪತ್ತಿನ ಪುನರ್ವಿತರಣೆಯ ಸಾಧನಗಳು. ತೆರಿಗೆಯ ವಿಧಾನ, ದರಗಳ ಮಟ್ಟ, ವರಮಾನ ತೆರಿಗೆಯ ಸ್ವರೂಪ ಇವನ್ನು ನಿರ್ಧರಿಸಿ ಈ ಪುನರ್ವಿತರಣೆಯ ವ್ಯಾಪ್ತಿ ಹಾಗೂ ಗತಿಗಳನ್ನು ನಿರ್ಣಯಿಸುವುದು ಸಾಧ್ಯ. ದರಗಳ ಮಟ್ಟ ಉಗ್ರವಾಗಿಲ್ಲದಿದ್ದರೆ ಸ್ವತ್ತಿನ ಮಾಲೀಕ ತಾನು ಜೀವಂತವಾಗಿರುವಾಗಲೇ ಈ ತೆರಿಗೆಗಾಗಿ ಸಾಕಷ್ಟು ಹಣದ ಉಳಿತಾಯ ಮಾಡುವುದು ಸಾಧ್ಯ. ಆತ ಇದಕ್ಕಾಗಿ ಒಂದು ಜೀವವಿಮಾ ಪಾಲಿಸಿಯನ್ನು ತೆಗೆದು ವರ್ಷವರ್ಷವೂ ತನ್ನ ವರಮಾನದಲ್ಲಿ ಒಂದು ಭಾಗವನ್ನು ಇದಕ್ಕಾಗಿ ಕಟ್ಟಬಹುದು. ಆದರೆ ತೆರಿಗೆಯ ದರದ ಏರಿಕೆ ಬಲು ಕಡಿದಾಗಿದ್ದರೆ ಸಣ್ಣಪ್ರಮಾಣದ ಸ್ವತ್ತುಮಾಲೀಕರು ಮಾತ್ರ ಈ ವಿಧಾನ ಅನುಸರಿಸುವುದು ಸಾಧ್ಯ.[]

ಈ ತೆರಿಗೆಯ ಪರವಾಗಿಯೂ ವಿರೋಧವಾಗಿಯೂ ಅನೇಕ ವಾದಗಳುಂಟು. ಒಬ್ಬ ಪ್ರಜೆಗೆ ಉತ್ತರಾಧಿಕಾರದ ಹಕ್ಕು ದೊರಕುವುದು ಸರ್ಕಾರ ತನ್ನ ಸಾರ್ವಭೌಮಶಕ್ತಿಯನ್ನು ಚಲಾಯಿಸಿ ಮಾಡಿದ ನ್ಯಾಯವ್ಯವಸ್ಥೆಯಿಂದ. ಆದ್ದರಿಂದ ಉತ್ತರಾಧಿಕಾರಿ ಯಾರೇ ಆಗಿರಲಿ, ಆತನ ಒಂದು ಪಾಲು ಸರ್ಕಾರಕ್ಕೆ ಸಲ್ಲುವುದು ಯೋಗ್ಯವೆಂದು ಕೆಲವರು ವಾದಿಸುತ್ತಾರೆ. ತನ್ನ ಪ್ರಜೆಗಳೆಲ್ಲರ ಆರ್ಥಿಕ ಜೀವನದಲ್ಲಿ ಸರ್ಕಾರದ ಮೌನಪಾಲುಗಾರಿಕೆ ಯುಂಟು. ತನ್ನ ಪ್ರಜೆಗಳ ಗಳಿಕೆ-ನಷ್ಟಗಳಲ್ಲಿ ಸರ್ಕಾರವೂ ಪರೋಕ್ಷವಾಗಿ ಬಾಧ್ಯ. ಆದ್ದರಿಂದ ಅವರ ಸ್ವತ್ತಿನಲ್ಲಿ ಸರ್ಕಾರಕ್ಕೂ ಒಂದು ಭಾಗ ದೊರಕಬೇಕಾದದ್ದು ಅನಿವಾರ್ಯವೆಂಬುದು ಇನ್ನೂ ಕೆಲವರು ಮಂಡಿಸುವ ವಾದ. ಪ್ರತಿಯೊಬ್ಬ ಪ್ರಜೆಯೂ ತನ್ನ ಜೀವಿತಕಾಲದಲ್ಲಿ ತನ್ನ ಮೇಲೆ ಹೇರಿದ ಅನೇಕ ತೆರಿಗೆಗಳಿಂದ ನುಣುಚಿಕೊಂಡಿರುತ್ತಾನಾದ್ದರಿಂದ ಆತ ಸತ್ತಮೇಲೆ ಅವನ ಆಸ್ತಿಯಿಂದ ಸ್ವಲ್ಪವನ್ನು ಸರ್ಕಾರ ಕಸಿದುಕೊಳ್ಳಬೇಕೆಂದು ವಾದಿಸುವವರೂ ಇಲ್ಲದಿಲ್ಲ. ಆಧುನಿಕ ಅರ್ಥಶಾಸ್ತ್ರಜ್ಞರು ಇದರ ಪರವಾಗಿ ಮೂರು ಕಾರಣಗಳನ್ನು ಮುಂದಿಟ್ಟಿದ್ದಾರೆ: ನೈತಿಕ ದೃಷ್ಟಿಯಿಂದ ಈ ತೆರಿಗೆ ಅನಿವಾರ್ಯ. ಸಮಾಜವೊಂದರಲ್ಲಿ ಆರ್ಥಿಕ ಅಸಮಾನತೆ ತಾಂಡವವಾಡುವುದರಿಂದ ಜೀವನದಲ್ಲಿ ಅನೇಕ ಅನರ್ಥಗಳಿಗೆ ಎಡೆಯಾಗುತ್ತದೆ; ಈ ತೆರಿಗೆಯನ್ನು ವಿಧಿಸುವುದರಿಂದ ಕ್ರಮೇಣ ಆರ್ಥಿಕ ಸಮಾನತೆ ಸಾಧಿಸಬಹುದು ಎಂಬುದು ಒಂದು ಅಭಿಪ್ರಾಯ. ಉತ್ತರಾಧಿಕಾರಿಯ ಧಾರಣಸಾಮರ್ಥ್ಯ ಈ ಆಕಸ್ಮಿಕ ಧನಾಗಮನದಿಂದ ಹೆಚ್ಚುವುದರಿಂದ, ಆತ ಉಳಿದವರಿಗಿಂತ ಸ್ವಲ್ಪ ಹೆಚ್ಚಿನ ತೆರಿಗೆ ಕೊಡಬೇಕೆಂಬುದು ಪ್ರೊಫೆಸರ್ ಸೆಲಿಗ್ಮನ್ನನ ವಾದ. ಆರ್ಥಿಕ ಸಮಾನತೆಯಿಲ್ಲದ ಸಮಾಜದಲ್ಲಿ, ಬಡವರ ಆದಾಯ ಬಲು ಕಡಿಮೆ. ಆದ್ದರಿಂದ ಅನುಭೋಗವೂ ಕಡಿಮೆ. ರಾಷ್ಟ್ರೀಯ ಉತ್ಪಾದನೆ ಮತ್ತು ಉದ್ಯೋಗದ ಮಟ್ಟಗಳು ಏರುಪೇರುಗಳಿಗೆ ಒಳಗಾಗುವುದರಿಂದ ಮುಂದೆ ಇಡೀ ರಾಷ್ಟ್ರಾದಾಯವೇ ಇಳಿಯಬಹುದು. ನಿರುದ್ಯೋಗ ಪರಮಾವಧಿ ಮಟ್ಟ ಮುಟ್ಟಬಹುದು. ಆದ್ದರಿಂದ ಆರ್ಥಿಕ ಅಸಮತೆಯನ್ನು ನಿವಾರಿಸಲು ಇಂಥ ತೆರಿಗೆಗಳು ಅವಶ್ಯ. ಇದು ಕೇನ್ಸ್‌ ಪಂಥದ ಅಭಿಪ್ರಾಯ. ಮೂರು ತಲೆಮಾರುಗಳಲ್ಲಿ ಒಂದು ವಂಶದ ಇಡೀ ಸ್ವತ್ತು ಸರ್ಕಾರದ ವಶವಾಗುವ ರೀತಿಯಲ್ಲಿ ಈ ತೆರಿಗೆಯನ್ನು ವಿಧಿಸಬೇಕೆಂದು ಇಟ್ಯಾಲಿಯನ್ ಅರ್ಥಶಾಸ್ತ್ರಜ್ಞ ಡಾಕ್ಟರ್ ರಿಗ್ನಾನೋನ ಮತ. ಆರ್ಥಿಕ ಅಸಮಾನತೆಯ ಸಮಸ್ಯೆ ಈ ತೆರಿಗೆಯನ್ನು ಎಷ್ಟು ಪ್ರಭಾವಗೊಳಿಸಿದೆಯೆಂಬುದಕ್ಕೆ ಈ ಎಲ್ಲ ಅಭಿಪ್ರಾಯಗಳೂ ಸಾಕ್ಷಿ.

ಈ ತೆರಿಗೆ ಆಪಾತ (ಇನ್ಸಿಡೆನ್ಸ್‌) ಯಾರ ಮೇಲೆ ಸಂಭವಿಸುತ್ತದೆಂಬ ಪ್ರಶ್ನೆಗೆ ಸರ್ವಸಮ್ಮತ ವಾದ ಉತ್ತರ ಇನ್ನೂ ದೊರಕಿಲ್ಲ. ಇದೊಂದು ಪ್ರತ್ಯಕ್ಷ ತೆರಿಗೆಯಾದ್ದರಿಂದ ಇದರ ಆಘಾತ (ಇಂಪ್ಯಾಕ್ಟ್‌) ಆಪಾತಗಳೆರಡೂ ಉತ್ತರಾಧಿಕಾರಿಯ ಮೇಲೆ ಬೀಳುತ್ತವೆ. ಈ ತೆರಿಗೆಯ ಹೊರೆ ಸತ್ತವನ ಮೇಲೆ ಎಂಬ ವಾದಕ್ಕೆ ಸತ್ತವ ತೆರಿಗೆ ಕೊಡಲು ಸಾಧ್ಯವಿಲ್ಲವೆಂಬುದಾಗಿ ಉತ್ತರಕೊಡಬಹುದು. ಆದರೆ ಹಿಂದೆ ಹೇಳಿದ ಹಾಗೆ ಸ್ವತ್ತಿನ ಮಾಲೀಕ ತನ್ನ ಜೀವಿತಕಾಲದಲ್ಲೇ ಈ ತೆರಿಗೆಗಾಗಿ ಹಣ ಉಳಿತಾಯ ಮಾಡಿದ್ದರೆ, ತನ್ನ ಉತ್ತರಾಧಿಕಾರಿಗಳ ಮೇಲೆ ತೆರಿಗೆಯ ಭಾರಬೀಳದಿರಲೆಂಬ ಉದ್ದೇಶದಿಂದ ಹೆಚ್ಚಿನ ಸ್ವತ್ತು ಗಳಿಸಿ ಅದನ್ನು ಅವರಿಗಾಗಿ ಬಿಟ್ಟರೆ, ಆಗ ಈ ತೆರಿಗೆಯ ಇಡೀ ಭಾರವನ್ನು ಮೃತನೇ ಹೊತ್ತಂತೆ ಆಗುತ್ತದೆ. ಈ ಮುಂಜಾಗ್ರತೆ ಕ್ರಮಗಳು ಯಾವುವೂ ಇಲ್ಲದ ಪಕ್ಷದಲ್ಲಿ ತೆರಿಗೆಯ ಆಪಾತವಾಗುವುದು ಉತ್ತರಾಧಿಕಾರಿಯ ಮೇಲೆ. ತೆರಿಗೆಯ ಆಪಾತ ಉತ್ತರಾಧಿಕಾರಿಯ ಮೇಲೂ ಅಲ್ಲ, ತೀರಿಕೊಂಡವನ ಮೇಲೂ ಅಲ್ಲ; ಆಸ್ತಿಯ ಮೇಲೆ-ಎಂಬ ವಾದವೂ ಇಲ್ಲದಿಲ್ಲ.

ಈ ತೆರಿಗೆಯ ಆರ್ಥಿಕ ಪರಿಣಾಮಗಳ ಕೂಲಂಕಷ ವಿವೇಚನೆ ಧಾರಾಳವಾಗಿ ನಡೆದಿದೆ. ಒಂದು ದೃಷ್ಟಿಯಲ್ಲಿ ಇದು ಬಂಡವಾಳದ ಮೇಲಣ ತೆರಿಗೆಯಾದ್ದರಿಂದ ಆರ್ಥಿಕಾಭಿವೃದ್ಧಿಗೆ ಅತ್ಯಾವಶ್ಯಕವಾದ ಬಂಡವಾಳದ ಬೆಳವಣಿಗೆಗೆ ಇದರಿಂದ ಅಡ್ಡಿಯುಂಟಾಗು ವುದೆಂಬ ವಾದವುಂಟು. ತೆರಿಗೆಯ ದರ ಬಲು ಕಡಿದಾಗಿದ್ದು, ವಿನಾಯಿತಿಯ ಮಟ್ಟ ಬಹು ಕಡಿಮೆಯಿದ್ದಲ್ಲಿ ಈ ಮಾತು ಸತ್ಯ. ಆದರೆ ತೆರಿಗೆಯಿಂದ ಬಂದ ಆದಾಯವನ್ನು ಸರ್ಕಾರ ಸಾರ್ವಜನಿಕ ಕ್ಷೇತ್ರದಲ್ಲಿ ನಿಯೋಜಿಸಿದರೆ ಈ ಅಪಾಯದ ನಿವಾರಣೆಯಾಗಬಹುದು. ಈ ತೆರಿಗೆಯಿಂದ ಸ್ಥಿರಬಂಡವಾಳ ನಷ್ಟವಾಗುತ್ತದೆಂದು ಕೆಲವರ ಮತ. ಆದರೆ ತೆರಿಗೆ ಕೊಡಬೇಕಾದ ಉತ್ತರಾಧಿಕಾರಿ ತನ್ನ ಸ್ಥಿರಬಂಡವಾಳವನ್ನು ಮಾರಬೇಕಾದ ಪ್ರಸಂಗ ಬಂದರೂ ಕೊಂಡವನ ಕೈಯಲ್ಲಿ ಅದು ಹಾಗೇ ಉಳಿಯುವುದರಿಂದ, ಈ ನಷ್ಟ ಕೇವಲ ವೈಯಕ್ತಿಕವೇ ಹೊರತು ರಾಷ್ಟ್ರೀಯ ಮಟ್ಟದ್ದಲ್ಲವೆನ್ನಬಹುದು.


ಉಲ್ಲೇಖಗಳು

[ಬದಲಾಯಿಸಿ]