ಈಯಲು
ಗರ್ಭಕ್ಕೆ ಅವಧಿ ತುಂಬಿದೊಡನೆ, ಮರಿಯನ್ನೂ ಅದರೊಂದಿಗೆ ಇರುವ ಸೆತ್ತೆ (ಪ್ಲಸೆಂಟ) ಮತ್ತು ಭ್ರೂಣಚೀಲವನ್ನೂ (ಫೀಟಲ್ ಎನ್ವಲಪ್) ಜೀವಂತವಾಗಿ ಮತ್ತು ಕ್ರಮಾಗತವಾಗಿ ಹೊರಗೆಡಹುವ ಕ್ರಿಯೆ; ಮರಿ ಹಾಕುವುದೆಂದೂ ಹೇಳುವುದಿದೆ (ಪಾಟ್ರ್ಯುರಿಷನ್). ಈಲು ಎನ್ನುವುದು ರೂಢಿಯಲ್ಲಿರುವ ಪದ. ಗರ್ಭಕ್ಕೆ ಅವಧಿ ತುಂಬುವ ಮುನ್ನ ನಡೆವ ಸಜೀವ ಈಯುವಿಕೆಯ ಹೆಸರು ಅವಧಿಪೂರ್ವ (ಅಕಾಲ) ಈಯಲು (ಪ್ರಿಮೆಚೂರ್ ಪಾಟ್ರ್ಯುರಿಷನ್); ಅವಧಿ ಮೀರಿ ನಡೆವ ಈ ಕ್ರಿಯೆಯ ಹೆಸರು ಅವಧಿ ದಾಟಿದ ಈಯಲು. ಇವು ಪಶುವೈದ್ಯಶಾಸ್ತ್ರದ ಪದಗಳು. ಅವಧಿಪೂರ್ವ ಜನನ ಪಡೆದ ದನದ ಕರುಗಳಲ್ಲಿ ಕಡಿಯುವ (ಬಾಚಿ) ಹಲ್ಲುಗಳಿರುವುದಿಲ್ಲ; ಮೈಮೇಲೆ ಕೂದಲಿರುವುದಿಲ್ಲ; ಗರ್ಭಕೋಶದ ಶಿಥಿಲತೆ ಇರುವ ನಿತ್ರಾಣಿ ಪ್ರಾಣಿ ಗರ್ಭಾವಧಿ ದಾಟಿದ ಮೇಲೆ ಮರಿಹಾಕುತ್ತದೆ.
ಸಾಮಾನ್ಯವಾಗಿ ಸ್ವಾಭಾವಿಕ ಈಯಲು ಕೆಲವು ದೈಹಿಕ ಬದಲಾವಣೆಗಳ ಸರಣಿಗಳನ್ನೊಳಗೊಂಡಿದೆ;
- ೧. ತಾಯಿಯ ಗರ್ಭಾಂಗಗಳಲ್ಲಿ ಕೆಲವು ಮಾರ್ಪಾಟುಗಳು ತಲೆದೋರುತ್ತವೆ. ಮುಖ್ಯವಾಗಿ ಪ್ರಸವದ್ವಾರ ವಿಕಾಸಗೊಳ್ಳುತ್ತದೆ.
- ೨. ಗರ್ಭದಲ್ಲಿರುವ ಭ್ರೂಣ ಪ್ರಸವಕ್ಕೆ ಅನುಕೂಲಾಸನವನ್ನು ಕ್ರಮಾಗತವಾಗಿ ಧರಿಸಿ ಗರ್ಭ ದ್ವಾರವನ್ನು ಸೇರುತ್ತದೆ. ಆಗ ಗರ್ಭಕೋಶ ಭ್ರೂಣವನ್ನು ಚಲನವಿಹಿತಗೊಳಿಸಲು ಅದನ್ನು ಬಿಗಿಹಿಡಿದು ಪ್ರಸವ ಕಾಲವನ್ನು ಕಾಯುತ್ತದೆ.
- ೩. ಈ ಕಾರ್ಯ ಸರಣಿಯ ಕೊನೆಯ ಹಂತವಾಗಿ ಜೀವಂತ ಮರಿ ಅದರ ಪ್ಲಸೆಂಟ ಮತ್ತು ಭ್ರೂಣಚೀಲಗಳ ವಿಸರ್ಜನೆಯಾಗುವುದು.
ಈಯುವುದರ ಪೂರ್ವಭಾವಿ ಸೂಚನೆಗಳು
[ಬದಲಾಯಿಸಿ]ಈಯುವುದರ ಪೂರ್ವಭಾವಿಯಾಗಿ ತಾಯಿಯ ಅಂಗಗಳಲ್ಲಿ ಹಲವು ಸೂಚನೆಗಳು ಕಂಡುಬರುತ್ತವೆ. ಗರ್ಭಧರಿಸಿರುವ ಪ್ರಾಣಿಯ ಕೆಚ್ಚಲು ತನ್ನ ಮೃದುಸ್ಥಿತಿಯನ್ನು ಕಳೆದುಕೂಂಡು ಗಟ್ಟಿಯಾಗುತ್ತ ವಿಕಾಸಗೊಳ್ಳುತ್ತ ಬರುವುದು. ಕೆಚ್ಚಲಿನ ಸ್ಪರ್ಶಜ್ಞಾನ ಅಧಿಕಗೊಳ್ಳುವುದು. ಅದರ ಸುತ್ತಮುತ್ತಲಿನ ವಲಯ ಕೊನೆಯ ದಿವಸಗಳಲ್ಲಿ ಬಾತುಕೊಂಡಂತೆ ಕಾಣುವುದು. ಕೆಚ್ಚಲಿನಲ್ಲಿ ಸೊನೆ ಹಾಲು ಕೊಡುವುದು. ಯೋನಿದ್ವಾರ ಅಥವಾ ಭಗೋಷ್ಠಗಳು ಊದಿಕೊಂಡು ಮುಂದೆ ಕ್ರಮಾಗತವಾಗಿ ವಿಕಾಸಗೊಳ್ಳುವುವು. ಭಗೋಷ್ಠಗಳು ಕಪ್ಪು ವರ್ಣ ತಾಳುವುವು. ಯೋನಿದ್ವಾರ ಅರೆ ತೆರೆದಂತೆ ಕಾಣುತ್ತದೆ. ಕರು ಹೊತ್ತ ದನ, ಆಡು, ಕುರಿಗಳ ಯೋನಿದ್ವಾರದಿಂದ ಬಿಳಿಹಳದಿ ವರ್ಣದ ಶ್ಲೇಷ್ಮ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಹೊರಸೂಸುತ್ತದೆ. ನಾಯಿಗಳಲ್ಲಿ ಯೋನಿವಿಸರ್ಜಿತ ಶ್ಲೇಷ್ಮ ಹೆಚ್ಚಾಗಿರುವುದು. ಕುದುರೆಗಳಲ್ಲಿ ಇದು ಬಲು ಶುಷ್ಕವಾಗಿದ್ದು ಯೋನಿಯೊಳಗೇ ಇರುತ್ತದೆ. ಕರು ಹೊತ್ತ ದನಗಳಲ್ಲಿ ಬಾಲ ಯೋನಿದ್ವಾರದ ಒಂದು ಪಕ್ಕಕ್ಕಿರುತ್ತದೆ.
ಪ್ರಾಣಿಗಳಲ್ಲಿ ಪ್ರಸವಕಾಲ
[ಬದಲಾಯಿಸಿ]ಪ್ರಸವಕಾಲ ಸನ್ನಿಹಿತವಾದಂತೆ ದನಗಳ ಬಾಲಮೂಲದ ಇಕ್ಕೆಡೆಗಳಲ್ಲೂ ಕ್ರಮವಾಗಿ ಗುಳಿ ಬೀಳುತ್ತದೆ. ಪ್ರಸವಕಾಲ ಸಮೀಪಿಸಿದಂತೆ ಪ್ರಾಣಿ ಬಾಲವನ್ನು ಎತ್ತಿ ಹಿಡಿಯುವುದು. ಈ ಚಿಹ್ನೆಗಳು ದನಗಳಲ್ಲಿ ಗಮನಾರ್ಹವಾಗಿಯೂ ಕುದುರೆಗಳಲ್ಲಿ ಅಸ್ಪಷ್ಟವಾಗಿಯೂ ಕಂಡುಬರುತ್ತವೆ. ಕೊನೆಯ ಹಂತದಲ್ಲಿ ಪ್ರಾಣಿಗಳು ಮಂಕಾಗುತ್ತವೆ. ಮರಿ ಹಾಕುವಾಗ ಭಯಪೂರಿತವಾಗಿಯೂ ಇರುವುದುಂಟು. ಈ ದಿವಸಗಳಲ್ಲಿ ಪ್ರಾಣಿಗಳು ಪ್ರಶಾಂತ ಮತ್ತು ಏಕಾಂತ ಸ್ಥಳಗಳನ್ನರಸುತ್ತ ಆಗಾಗ ಸ್ಥಳ ಬದಲಾವಣೆ ಮಾಡುತ್ತಿರುತ್ತವೆ. ಪ್ರಥಮ ಪ್ರಸವದಲ್ಲಿ ಹೊಟ್ಟೆನೋವು ಹೆಚ್ಚಾಗಿರುವುದು. ಆದ್ದರಿಂದ ಉದ್ದೇಶರಹಿತವಾಗಿ ಆಗಾಗ ಮಲಗಿ ಏಳುತ್ತದೆ. ಬೆನ್ನು ಮುರಿಯುತ್ತವೆ. ಹೊಟ್ಟೆಯ ಕಡೆಗೆ ಭಯಪೂರಿತವಾಗಿ ನೋಡುತ್ತ ಬಾಲವನ್ನು ಎತ್ತಿ ಹಿಡಿದಿರುತ್ತವೆ. ಪ್ರಸವಕ್ಕೆ ಸಾಧಾರಣ ೩ ಅಥವಾ ೪ ಗಂಟೆಗಳ ಮುಂಚಿತವಾಗಿ ಕುದುರೆಗಳಲ್ಲಿ ಹೆಗಲಸುತ್ತಲೂ ಧಾರಾಳವಾಗಿ ಬೆವರು ಸುರಿಯುವುದನ್ನು ನೋಡಬಹುದು. ನಾಯಿ, ಬೆಕ್ಕು, ಹಂದಿ ಮತ್ತು ಮೊಲ ಇತ್ಯಾದಿ ಪ್ರಣಿಗಳಲ್ಲಿ ಮರಿಹಾಕುವ ಸಮಯಬಂದಾಗ ಏಕಾಂತ ಸ್ಥಳಗಳಲ್ಲಿ ಗೂಡುಕಟ್ಟುವ ಕಾತರ ಕಂಡುಬರುತ್ತದೆ. ಅಂದರೆ ಬೈಹುಲ್ಲು ಮತ್ತು ಇತರ ಮೃದುವಾದ ವಸ್ತುಗಳನ್ನೆಲ್ಲ ಕೂಡಿಸಿ ಗೂಡುಮಾಡುತ್ತವೆ. ತುಂಬುಗರ್ಭದ ನಾಯಿಗಳಲ್ಲೂ ಕುದುರೆಗಳಲ್ಲೂ ದೇಹದ ಉಷ್ಣತೆಯ ಇಳಿಮುಖ (ಯಷ್ಟು) ಶೀಘ್ರ ಪ್ರಸವದ ಸೂಚನೆಯೆನಿಸುತ್ತದೆ.ಈಯಲನ್ನು ನೈಸರ್ಗಿಕವಾಗಿರಿಸಲು ಭ್ರೂಣ ಪ್ರಸವಕಾಲಕ್ಕೆ ಮುಂಚಿತವಾಗಿ ಗರ್ಭವಿಸರ್ಜನೆಗೆ ಅನುಕೂಲವಾದ ಆಸನ ಪಡೆಯುತ್ತದಷ್ಟೆ. ಈ ರೀತಿಯ ಪರಿವರ್ತನೆಗೆ ಗರ್ಭಕೋಶದ ಮತ್ತು ಭ್ರೂಣದ ಚಲನವಲನಗಳು ಸಹಾಯಕವಾಗಿದೆ. ಆದ್ದರಿಂದ ಮರಿಹೊತ್ತ ಪ್ರಾಣಿಗಳ ಅಸ್ವಾಭಾವಿಕ ಮತ್ತು ಕಟು ತೀಕ್ಷ್ಣ ಚಲನವಲನಗಳನ್ನೂ ಮಿತಿಮೀರಿದ ಆಹಾರ ಸೇವನೆಯನ್ನೂ ತಡೆಗಟ್ಟಿ ಗರ್ಭಕೋಶದಲ್ಲಿನ ಭ್ರೂಣದ ಸ್ವಾಭಾವಿಕ ಚಲನವಲನಗಳಿಗೆ ಅನುಕೂಲ ಮಾಡಿಕೊಡಬೇಕು. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಭ್ರೂಣ ಅನೈಸರ್ಗಿಕ ಆಸನವನ್ನು ತಳೆದು ಸ್ವಾಭಾವಿಕ ಪ್ರಸವಕ್ಕೆ ಅಡ್ಡಿಯಾಗುವುದು.ಪ್ರಾಣಿಗಳು ಸ್ವಾಭಾವಿಕವಾಗಿ ಮರಿಹಾಕುವಾಗ ಪಡೆಯುವ ಕ್ರಿಯಾಸರಣಿಗಳು ಹೀಗಿವೆ: ಪ್ರಸವ ವೇದನೆಯ ಪ್ರಾರಂಭ. ಎಂದರೆ ಗರ್ಭಕೋಶದ ಸಂಕೋಚನ ಸರಣಿಯ ಆರಂಭ ಮತ್ತು ಗರ್ಭಕೋಶ ದ್ವಾರದ ತೆರೆಯುವಿಕೆ; ಚೆನ್ನಾಗಿ ವೃದ್ಧಿಯಾದ ಸಜೀವ ಮರಿಯ ನೈಸರ್ಗಿಕ ವಿಸರ್ಜನೆ; ಗರ್ಭಕೋಶದಲ್ಲಿರುವ ಸೆತ್ತೆ ಮತ್ತು ಭ್ರೂಣ ಕವಚಗಳ ಸಹಜ ವಿಸರ್ಜನೆ; ಪ್ರಸವಾನಂತರದ ಬಾಣಂತಿಯ ದೇಹದಲ್ಲಿನ ನೈಸರ್ಗಿಕ ದೈಹಿಕ ಪರಿವರ್ತನೆಗಳು. ಪ್ರಸವ ವೇದನೆಯೊಂದಿಗೆ ಮರಿ ತೆರೆದ ಗರ್ಭಕೋಶ ದ್ವಾರದ ಮೂಲಕ ಹೊರಗೆ ಬರುವುದು. ಇದಕ್ಕೆ ಬಲವಾದ ಗರ್ಭಕೋಶದ ಸ್ನಾಯುಗಳ ಸಂಕೋಚನ ಅಗತ್ಯ. ಆದ್ದರಿಂದ ಈ ಕಾರ್ಯಸರಣಿ ವೇದನೆಗೆ ಎಡೆಗೊಡುತ್ತದೆ. ಗರ್ಭಕೋಶದ ದ್ವಾರದಿಂದ ಮರಿ ಹೊರಬಂದ ಆನಂತರದ ಪ್ರಸವ ಸುಲಭವಾಗುತ್ತದೆ. ಅಂದರೆ ಯೋನಿ ಮುಂಚಿತವಾಗಿಯೇ ವಿಕಾಸಗೊಂಡಿರುತ್ತದೆ. ಅಲ್ಲದೆ ಗರ್ಭಕೋಶದಿಂದ ಮರಿಯ ವಿಸರ್ಜನೆಯ ಮೊದಲೇ ಭ್ರೂಣ ಕವಚದಲ್ಲಿದ್ದ ಅಮ್ನಿಯೋಟಿಕ್ ಮತ್ತು ಅಲಂಟೋಯಿಕ್ ದ್ರವಪಾತದಿಂದ ಯೋನಿದ್ವಾರ ನುಣುಪಾಗಿ ಸರಾಗವಾಗಿ ಮರಿ ಹೊರಬರಲು ನೆರವಾಗುತ್ತದೆ.
ಪ್ರಾಣಿಗಳ ಈಯುವಿಕೆಯ ಕಾಲ
[ಬದಲಾಯಿಸಿ]ಈಯುವಿಕೆಗೆ ಬೇಕಾದ ಕಾಲ ವಿವಿಧ ಪ್ರಾಣಿಗಳಲ್ಲಿ ವಿವಿಧ. ಕುದುರೆಗಳಲ್ಲಿ ಪ್ರಸವಕ್ಕೆ ೧೫-೨೦ ಮಿನಿಟುಗಳು ಬೇಕು. ದನಗಳಲ್ಲಿ ಅದರಲ್ಲೂ ಪ್ರಥಮ ಪ್ರಸವಕ್ಕೆ, ದೀರ್ಘಕಾಲ (1/2-3ಗಂಟೆ) ಹಿಡಿಯುತ್ತದೆ. ಕುರಿಗಳಲ್ಲಿ ಪ್ರಸವಕಾಲ ಸ್ವಲ್ಪ ಕಡಿಮೆ. ಮರಿಗಳು 10-15 ಮಿನಿಟುಗಳ ಅಂತರದಲ್ಲಿ ಹೊರ ಬರುತ್ತವೆ. ಹಂದಿಗಳಲ್ಲೂ, ನಾಯಿ, ಬೆಕ್ಕುಗಳಲ್ಲೂ ಪ್ರಸವಕಾಲ ಬಲು ದೀರ್ಘ (2-8 ಗಂಟೆ) ಅಲ್ಲದೆ ಒಂದು ಮರಿಯನ್ನು ಹೆತ್ತು ಸಾಧಾರಣ 10 ಮಿನಿಟಿನಿಂದ 30 ಮಿನಿಟುಗಳ ಅಂತರದಲ್ಲಿ ಇನ್ನೊಂದು ಮರಿಯನ್ನು ಹೆರುತ್ತದೆ. ಪ್ರಸವ ಕಾಲ ಮೇಲೆ ಸೂಚಿಸಿದ ಕಾಲಕ್ಕಿಂತ ಹೆಚ್ಚಾದರೆ ಒಡನೆಯೇ ಪಶುವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.ಸಣ್ಣ ಪ್ರಾಣಿಗಳು ಮಲಗಿಕೊಂಡೇ ಮರಿಯನ್ನು ಈದರೆ ದೊಡ್ಡವು ಅಂದರೆ ದನ ಮತ್ತು ಕುದುರೆಗಳು ಮಲಗಿಕೊಂಡು ಅಥವಾ ನಿಂತುಕೊಂಡು ಮರಿ ಹಾಕುತ್ತವೆ. ಕುದುರೆಗಳು ಈಯುವ ಕಾಲ ಸಾಮಾನ್ಯವಾಗಿ ರಾತ್ರಿ. ಹೊಕ್ಕಳು ಬಳ್ಳಿ (ಅಂಬಿಲಿಕಲ್ ಕಾರ್ಡ) : ದನದ ಕರುವಿನ ಹೊಕ್ಕಳು ಬಳ್ಳಿ ಗಿಡ್ಡವಾಗಿದ್ದು ಕರುವಿನ ವಿಸರ್ಜನೆಯೊಂದಿಗೆ ಕಡಿದು ಹೋಗುತ್ತದೆ. ಕುದುರೆಗಳಲ್ಲಿ ಇದು ಉದ್ದವಾಗಿದ್ದು ತಾನಾಗಿ ಕಡಿದು ಹೋಗುವುದಿಲ್ಲ. ಆನಂತರ ಕಡಿದುಹಾಕಬೇಕಾಗುತ್ತದೆ. ಹಂದಿ, ನಾಯಿ, ಬೆಕ್ಕುಗಳು ಪ್ರಸವಾನಂತರ ತಾವೇ ಕಡಿದುಹಾಕುತ್ತವೆ.ಸತ್ತೆಯ ವಿಸರ್ಜನೆಗೆ ಬೇಕಾದ ಕಾಲದ ಪ್ರಮಾಣದಲ್ಲೂ ವ್ಯತ್ಯಾಸವುಂಟು. ಕುದುರೆಗಳಲ್ಲಿ ಪ್ರಸವಾನಂತರ ಸಾಧಾರಣ ಅರ್ಧ ಗಂಟೆಯಲ್ಲಿ ಸೆತ್ತೆ ನೈಸರ್ಗಿಕವಾಗಿ ಹೊರಬರುತ್ತದೆ. ದನಗಳಲ್ಲಿ ಇದರ ವಿಸರ್ಜನೆಯ ಸಾಕಷ್ಟು ಕಾಲ ಬೇಕು-ಇದು ೨-೮ ಗಂಟೆಗಳಷ್ಟೇ ಇರಬಹುದು. ವಿಸರ್ಜನೆಯ ಕಾಲ ಮೀರಿದಲ್ಲಿ ವೈದ್ಯ ಸಹಾಯ ಅಗತ್ಯ. ಒಂದೇ ಗರ್ಭದಲ್ಲಿ ಅನೇಕ ಮರಿಗಳನ್ನು ಈಯುವ ಪ್ರಾಣಿಗಳಲ್ಲಿ ಎರಡನೆಯ ಮರಿಯ ಪ್ರಸವದ ಮೊದಲು ಒಂದನೆಯ ಮರಿಯ ಸೆತ್ತೆಯು ವಿಸರ್ಜನೆಯಾಗುತ್ತದೆ. ಗರ್ಭಕೋಶದಲ್ಲಿ ಸೆತ್ತೆ ಉಳಿದಲ್ಲಿ ಅದು ಕೊನೆಯ ಮರಿಗೆ ಸಂಬಂಧಪಟ್ಟದ್ದು. ಕುದುರೆ ಜಾತಿ ವಿನಾ ಎಲ್ಲ ಜಾತಿಯ ಪ್ರಾಣಿಗಳಲ್ಲೂ ಪ್ರಸವಾನಂತರ ಸೆತ್ತೆಯನ್ನು ತಿನ್ನುವ ಹಂಬಲವಿದೆ. ಅದನ್ನು ತಿಂದರೆ ಪ್ರಾಣಿಗಳಲ್ಲಿ ಅಜೀರ್ಣ ಇತ್ಯಾದಿ ತೊಡಕುಗಳು ಬಂದು ಹಾಲು ಕಡಿಮೆಯಾಗುತ್ತದೆ. ಆದ್ದರಿಂದ ಆ ಪ್ರಾಣಿಗೆ ಭೇದಿಗೋ ಜೀರ್ಣಕ್ಕೋ ಔಷಧಿಯನ್ನು ಕೊಡಬೇಕಾಗುವುದು.
ಪ್ರಸವಾನಂತರ
[ಬದಲಾಯಿಸಿ]ಪ್ರಸವಾನಂತರ ಸಾಧಾರಣ ಎರಡು ವಾರಗಳ ಕಾಲದಲ್ಲಿ ಗರ್ಭಕೋಶ ತನ್ನ ಮೊದಲಿನ ಗಾತ್ರಕ್ಕೆ ಮುದುಡಿಕೊಳ್ಳುವುದು. ಅಂದರೆ ಪ್ರಸವಾನಂತರ 4ನೆಯ ದಿವಸ ಮರಿ ತುಂಬಿದ ಗರ್ಭಕೋಶದ ಸಮ ಅರ್ಧಕ್ಕಿಳಿಯುವುದು. 8ನೆಯ ದಿವಸ ಅದರ ೩/೪ ಗಾತ್ರಕ್ಕಿಳಿಯುವುದು ಮತ್ತು 15ನೆಯ ದಿವಸ ಗರ್ಭಧಾರಣಾ ಕಾಲದ ಮೊದಲಿನ ಗಾತ್ರಕ್ಕೆ ಇಳಿಯುವುದು. ಆದ್ದರಿಂದ 4ನೆಯ ದಿವಸದವರೆಗೆ ಪ್ರಾಣಿಗಳ ಗರ್ಭಕೋಶ ಹೊರಗೆ ಜಾರಿ ಬರುವ ಸನ್ನಿವೇಶಗಳಿವೆ. ಅದಕ್ಕಾಗಿ ಪ್ರಾಣಿಗಳ ಹಿಂಭಾಗವನ್ನು ಏರಿಕೆಯಲ್ಲಿರುವಂತೆ ಮಾಡುವುದು ಉತ್ತಮ. ಸಾಧಾರಣ 3 ರಿಂದ 4 ವಾರಗಳ ಕಾಲದಲ್ಲಿ ಗರ್ಭಕೋಶ ಸಂಪೂರ್ಣವಾಗಿ ಸ್ವಾಭಾವಿಕಸ್ಥಿತಿಗೆ ಪರಿವರ್ತನೆ ಹೊಂದುವುದು. ಗರ್ಭಕೋಶದ ದ್ವಾರ ಪ್ರಸವಾನಂತರ ೨೪ ಗಂಟೆಗಳಲ್ಲಿ ಮುಚ್ಚಿಕೊಳ್ಳುವುದು. ಆದರೆ ಗರ್ಭಕೋಶದಿಂದ ಶ್ಲೇಷ್ಮ ವಿಸರ್ಜನೆ ಇರುವಷ್ಟು ಸಮಯ ಅದರ ದ್ವಾರ ಒಂದರಿಂದ ಎರಡು ಸೆಂ.ಮೀ.ಗಳಷ್ಟು ತೆರೆದಿರುತ್ತದೆ. ಗರ್ಭಕೋಶದಿಂದ ವಿಸರ್ಜನೆಯಾಗುವ ಶ್ಲೇಷ್ಮ ಗುಲಾಬಿ ಬಣ್ಣದ್ದು. ಆದರೆ ಅದರೊಡನೆ ಗರ್ಭಕೋಶದಲ್ಲಿ ಉಳಿದ ಸೆತ್ತೆಯ ಕಸಗಳಿರಬಹುದು. ನಾಯಿಗಳಲ್ಲಿ ಈ ಶ್ಲೇಷ್ಮ ಬಹಳ ಹೆಚ್ಚಾಗಿಯೂ ರಕ್ತಮಿಶ್ರಿತವಾಗಿಯೂ ಇದೆ. ಇದರ ವಿಸರ್ಜನೆ 15 ದಿವಸಗಳವರೆಗೂ ಇರಬಹುದು. ಆದರೆ ಪ್ರಸವಾನಂತರ ವಿಸರ್ಜನೆಯಾಗುವ ಶ್ಲೇಷ್ಮ ರಕ್ತಪೂರಿತವಾಗಿಯೂ ಕಪ್ಪಾಗಿಯೂ ಬಹಳ ದುರ್ವಾಸನೆಯಿಂದ ಕೂಡಿದ್ದಾಗಿಯೂ ಇದ್ದರೆ ಅದು ಗರ್ಭಕೋಶದ ರೋಗವನ್ನು ಸೂಚಿಸುತ್ತದೆ. ಪ್ರಸವಾನಂತರ ಬಾಣಂತಿ ಮತ್ತು ಮರಿಯ ಆರೈಕೆಯ ಕಡೆ ಎಚ್ಚರ ಅಗತ್ಯ. ಬಾಣಂತಿಯನ್ನು ಬೆಚ್ಚನೆಯ ಒಣಹುಲ್ಲು ಹರಡಿದ ಸ್ಥಳದಲ್ಲಿ ಚಳಿಗಾಳಿ ಬೀಸದಂತೆ ಅಡ್ಡಿಮಾಡಿ ಇರಿಸಬೇಕು. ಮರಿಯ ನಾಸಿಕ ದ್ವಾರದಿಂದ ಶ್ಲೇಷ್ಮಗಳನ್ನು ತೆಗೆದು ಮರಿಯ ಮೈಯನ್ನು ನೆಕ್ಕಲು ತಾಯಿಯ ಹತ್ತಿರ ಬಿಡಬೇಕು. ಹೊಕ್ಕಳುಬಳ್ಳಿಯನ್ನು ಸ್ವಚ್ಛ ಹಗ್ಗದಿಂದ ಬಿಗಿದು ಟಿಂಕ್ಚರ್ ಅಯೊಡೇನ್ ಹಚ್ಚಬೇಕು. ದನದ ಮೈಯನ್ನು ಹುಲ್ಲಿನ ಉಂಡೆಯಿಂದ ಸವರಿ ಬೆಚ್ಚಗಿರಿಸಬೇಕು. ಪುಷ್ಟಿದಾಯಕವೂ ಬಿಸಿಯಾಗಿಯೂ ವಿರೇಚನಕಾರಿಯಾಗಿಯೂ ಇರುವ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಕೊಡಬೇಕು. ಗಂಜಿ ಅಥವಾ ಬಿಸಿಹಾಲು ಉತ್ತಮ. ಬಾಣಂತಿಯ ಯೋನಿದ್ವಾರವನ್ನು ಉಗುರು ಬೆಚ್ಚನೆಯ ಉಪ್ಪುನೀರಿನಿಂದ ತೊಳೆದು ಶುಚಿ ಮಾಡಬೇಕು. ಅಲ್ಲಿ ಸಣ್ಣ ಗಾಯಗಳಿದ್ದರೆ ಹೊಂಗೆ ಎಣ್ಣೆ ಅಥವಾ ಕಹಿ ಬೇವಿನ ಎಣ್ಣೆ ಹಚ್ಚಿ ನೊಣಗಳ ಬಾದೆಯಿಂದ ದೂರವಿಡಬೇಕು. ಮರಿಗೆ ಪ್ರಥಮವಾಗಿ ಮೊಲೆಯುಣಿಸಲು ಸಹಾಯ ಮಾಡಬೇಕು.