ಈದ್ ನಮಾಝ್

ವಿಕಿಪೀಡಿಯ ಇಂದ
Jump to navigation Jump to search

ಮುಸ್ಲಿಂ ಸಮೂಹಕ್ಕೆ ಅಲ್ಲಾಹನು ನೀಡಿದ ಎರಡು ಈದ್ ಹಬ್ಬಗಳ ದಿನಗಳಲ್ಲಿ ಹಲವು ಒಳಿತುಗಳನ್ನು ಮಾಡಬೇಕಿದೆ. ದಾನ ಧರ್ಮ ನೀಡುವುದು, ತಕ್ಬೀರ್ ಹೆಚ್ಚುಸುವುದು, ಪ್ರತ್ಯೇಕವಾಗಿ ಎರಡು ರಕ್‍ಅತ್ ಈದ್ ನಮಾಝ್ ನಿರ್ವಹಿಸುವುದು ಆ ದಿನದ ಪ್ರಮುಖ ಆರಾಧನೆಯಾಗಿದೆ. ಕೆಲವೊಂದು ವೈಶಿಷ್ಟ್ಯತೆಗಳನ್ನು ಹೊರತುಪಡಿಸಿದರೆ ಈ ನಮಾಝ್ ಇತರ ನಮಾಝ್‍ಗಳಂತೆ ನಿರ್ವಹಿಸಲ್ಪಡುತ್ತದೆ. ಈದ್ ನಮಾಝ್ ಪ್ರಬಲ ಸುನ್ನತ್ತಾಗಿದೆ. ಫರ್ಲ್ ಕಿಫಾಯ (ಸಾಮೂಹ್ಯ ಬಾಧ್ಯತೆ) ಎಂಬ ಅಭಿಪ್ರಾಯ ಕೂಡಾ ಇದೆ. ಹಿಜ್‍ರ 2ನೇ ವರ್ಷದ ಈದುಲ್ ಫಿತ್ರ್‍ನಂದು ಪ್ರಥಮವಾಗಿ ಈದ್ ನಮಾಝನ್ನು ನಿರ್ವಹಿಸಲಾಯಿತು. ಪೆರ್ನಾಲ್ ನಮಾಝನ್ನು ಜಮಾಅತ್ತಾಗಿ ನಿರ್ವಹಿಸಲು ಸುನ್ನತ್ತಿದೆ. ಹಾಜಿಗಳಿಗೆ ಬಲಿ ಪೆರ್ನಾಲ್ ನಮಾಝನ್ನು ಏಕಾಂಗಿಯಾಗಿ ನಿರ್ವಹಿಸುವುದೇ ಉತ್ತಮ. ಅಗತ್ಯವಿಲ್ಲದೆ ಒಂದಕ್ಕಿಂತ ಹೆಚ್ಚು ಈದ್ ಜಮಾಅತನ್ನು ನಡೆಸುವುದು ಕರಾಹತ್ತಾಗಿದೆ. ಯಾರಿಗೆ ಸುನ್ನತ್ : ಸ್ತ್ರೀಗಳು, ಪುರುಷರು, ದಾಸರು, ಯಾತ್ರಿಕರು ಇವರಿಗೆಲ್ಲಾ ಪೆರ್ನಾಲ್ ನಮಾಝ್ ನಡೆಸಲು ಸುನ್ನತ್ತಿದೆ. ಏಕಾಂಗಿಯಾಗಿ ನಮಾಝ್ ನಡೆಸುವವನು ಮತ್ತು ಸ್ತ್ರೀಗಳ ಜಮಾಅತ್ತಿಗೆ ‘ಖುತುಬ’ ನಿರ್ವಹಿಸಬೇಕೆಂದಿಲ್ಲ. ಸ್ತ್ರೀಗಳಿಗೆ ಪುರುಷನು ಇಮಾಮಾಗಿ ನಿರ್ವಹಿಸಿದ್ದರೆ ಅವನಿಗೆ ಖುತುಬ ಓದಬಹುದು. ಸಮಯ ಪೆರ್ನಾಳ್ ನಮಾಝಿನ ಸಮಯ ಸೂರ್ಯೋದಯದಿಂದ ಹಿಡಿದು ನಡು ಮಧ್ಯಾಹ್ನ (ಝವಾಲ್) ದ ತನಕ. ಸೂರ್ಯನು ಉದಯಿಸಿ ಏಳು ಗೇಣುದ್ದದಷ್ಟು ಮೇಲೆ ಬರುವ ತನಕ ನಮಾಝನ್ನು ಮುಂದೂಡುವುದು ಸುನ್ನತ್ತಾಗಿದೆ. ಇನ್ನು ಸೂರ್ಯೋದಯದ ತಕ್ಷಣ ಒಬ್ಬ ನಮಾಝ್ ನಿರ್ವಹಿಸಿದರೆ ಆತ ಕರಾಹತ್‍ನ ಸಮಯದಲ್ಲಿ ನಮಾಝ್ ನಿರ್ವಹಿಸಿದ ಎಂಬ ವಿಧಿ ಅನ್ವಯಿಸುವುದಿಲ್ಲ. ಏಕೆಂದರೆ ಕಾರಣ ಸಹಿತವಿರುವ ನಮಾಝ್ ಇದಾಗಿರುತ್ತದೆ. ನಮಾಝಿನ ರೂಪ ಪೆರ್ನಾಳ್ ನಮಾಝ್ ಎರಡು ರಕಅತಾಗಿದೆ. ಇತರ ನಮಾಝ್‍ಗಳಂತೆ ಕಡ್ಡಾಯ ಕರ್ಮಗಳನ್ನು, ಐಚ್ಚಿಕ ಕರ್ಮಗಳನ್ನು ಇಲ್ಲಿಯೂ ಪಾಲಿಸಲ್ಪಡುತ್ತದೆ. ‘ಈದುಲ್ ಫಿತ್ರ್, ಅಥವಾ ಈದುಲ್ ಅಳ್‍ಹಾದ ನಮಾಝನ್ನು ನಾನು ನಿರ್ವಹಿಸುತ್ತೇನೆ’ ಎಂದು ಸಂಕಲ್ಪಿಸಿ ನಮಾಝಿಗೆ ಪ್ರವೇಶಿಸಬೇಕು. ನಂತರ ಸಾಧಾರಣ ನಮಾಝಿನಂತೆ ‘ವಜ್ಜಹ್ತು’ ಓದಬೇಕು. ಬಳಿಕ ಏಳು ತಕ್ಬೀರ್‍ಗಳನ್ನು ಹೇಳಬೇಕು. ಪ್ರತಿಯೊಂದು ತಕ್ಬೀರ್‍ನೆಡೆಯಲ್ಲಿ ‘ಸುಬ್‍ಹಾನಲ್ಲಾಹ್, ವಲ್‍ಹಂದುಲಿಲ್ಲಾಹಿ ವಲಾಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್ಬರ್’ ಎಂಬ ದ್ಸಿಕ್ರನ್ನು ಹೇಳುವುದು ಸುನ್ನತ್ತಿದೆ. ಏಳು ತಕ್ಬೀರ್‍ಗಳು ಮುಗಿದ ಬಳಿಕ ಫಾತಿಹಾ ಓದಬೇಕು. ಎರಡನೇ ರಕ್‍ಅತ್‍ನಲ್ಲಿ ಫಾತಿಹಾಕ್ಕಿಂತ ಮೊದಲು ಐದು ತಕ್ಬೀರ್ ಉಚ್ಚರಿಸಬೇಕು. ಪ್ರತೀ ತಕ್ಬೀರ್‍ನೆಡೆಯಲ್ಲಿ ಮೇಲಿನ ದ್ಸಿಕ್ರನ್ನು ಪುನರಾವರ್ತಿಸಬೇಕು. ಇಮಾಂ ನಿಶ್ಚಿತ ತಕ್ಬೀರ್‍ಗಳಿಗಿಂತ ಕಡಿಮೆ ತಕ್ಬೀರ್ ಹೇಳಿದರೆ ಮಅಮೂಮಿಗೆ ಅವನನ್ನು ಅನುಸರಿಸಬೇಕೆಂದಿಲ್ಲ. ಪೂರ್ಣವಾಗಿ ಎಲ್ಲಾ ತಕ್ಬೀರ್‍ಗಳನ್ನು ಹೇಳಬಹುದು. ಇಮಾಂ ನಿಶ್ಚಿತ ತಕ್ಬೀರ್‍ಗಳಿಗಿಂತ ಹೆಚ್ಚು ಹೇಳಿದರೆ ಮಅಮೂಮ್ ಅಲ್ಲೂ ಅವನನ್ನು ಅನುಸರಿಸಬೇಕೆಂದಿಲ್ಲ. ಕಾರಣ ಏಳು ಮತ್ತು ಐದಕ್ಕಿಂತ ಅಧಿಕಗೊಳಿಸಲು ಯಾವುದೇ ಸೂಚನೆ ಇಲ್ಲ. ಇನ್ನು ಅಧಿಕ ತಕ್ಬೀರ್‍ಗಳಲ್ಲಿ ಅವನನ್ನು ಅನುಸರಿಸಿದರೆ ಮಅಮೂಮಿನ ನಮಾಝಿಗೆ ಧಕ್ಕೆಯೂ ಇಲ್ಲ. ಖಳಾ ಆದರೆ? ಪೆರ್ನಾಳ್ ನಮಾಝ್ ಖಳಾ ಆದರೆ ಅದನ್ನು ಖಳಾ ಪೂರೈಸುವ ಸಮಯದಲ್ಲಿ ಮೇಲೆ ವಿವರಿಸಿದ ರೂಪದಲ್ಲಿ ತಕ್ಬೀರ್ ಸಹಿತ ನಿರ್ವಹಿಸಬೇಕು. ಕಾರಣ ಪೆರ್ನಾಳ್ ನಮಾಝ್‍ನ ತಕ್ಬೀರ್ ಸಮಯದ ಚಿಹ್ನೆಯಲ್ಲ. ಅದು ನಮಾಝ್‍ನ ಪ್ರತ್ಯೇಕತೆಯಾಗಿದೆ. ಎಲ್ಲಾ ತಕ್ಬೀರ್‍ಗಳಲ್ಲೂ ಕೈ ಮೇಲಕ್ಕೆತ್ತಿ ಕಟ್ಟಬೇಕು. ಎರಡು ರಕಅತಿನಲ್ಲಿರುವ ಈ ತಕ್ಬೀರ್‍ಗಳು ಸುನ್ನತ್ತೇ ಹೊರತು ಕಡ್ಡಾಯವಲ್ಲ. ಮರೆತರೆ ಸುಜೂದ್‍ನಿಂದ ಪರಿಹರಿಸಲ್ಪಡುವ ‘ಅಬ್‍ಆಳ್’ ಸುನ್ನತ್ ಕೂಡಾ ಅಲ್ಲ. ತಕ್ಬೀರ್‍ಗಳನ್ನು ಉಪೇಕ್ಷಿಸುವುದು ಮತ್ತು ನಿಶ್ಚಿತ ತಕ್ಬೀರ್‍ಗಳಿಗಿಂತ ಹೆಚ್ಚು ಹೇಳುವುದು ಕರಾಹತ್ತಾಗಿದೆ. ಒಂದನೇ ರಕ್‍ಅತ್‍ನಲ್ಲಿ ಏಳು ತಕ್ಬೀರ್‍ಗಳನ್ನು ಉಪೇಕ್ಷಿಸಿದರೆ ಅದನ್ನು ಎರಡನೇ ರಕ್‍ಅತ್‍ನಲ್ಲಿ ಹೇಳುವಂತಿಲ್ಲ. ತಕ್ಬೀರ್ ಮರೆತರೆ? ತಕ್ಬೀರ್‍ಗಳನ್ನು ಹೇಳಲು ಮರೆತು ಫಾತಿಹಾದಲ್ಲಿ ಪ್ರವೇಶಿಸಿದರೆ ಬಳಿಕ ಮತ್ತೆ ತಕ್ಬೀರ್‍ಗೆ ಮರಳುವಂತಿಲ್ಲ. ಫಾತಿಹಾದಲ್ಲಿ ಪ್ರವೇಶಿಸುವುದರೊಂದಿಗೆ ತಕ್ಬೀರ್‍ನ ಪುಣ್ಯವು ನಷ್ಟ ಹೊಂದುತ್ತದೆ. ತಕ್ಬೀರ್ ಹೇಳದೆ ‘ಅಊದ್ಸ್’ ಮಾತ್ರ ಓದಿದ್ದಾದರೆ ಬಳಿಕ ತಕ್ಬೀರನ್ನು ಉಚ್ಚರಿಸಬಹುದು. ಇಮಾಂ ತಕ್ಬೀರ್ ಹೇಳದೆ ಫಾತಿಹಾದಲ್ಲಿ ಪ್ರವೇಶಿಸಿದರೂ ಮಅಮೂಮನಿಗೆ ತಕ್ಬೀರ್‍ನ ಪುಣ್ಯವು ನಷ್ಟವಾಗುತ್ತದೆ. ತಕ್ಬೀರ್‍ಗಳನ್ನು ಇಮಾಂ ಮತ್ತು ಮಅಮೂಮ್ ಜೋರಾಗಿ ಹೇಳಬೇಕು. ಸೂರತ್ ಪ್ರಥಮ ರಕ್‍ಅತ್‍ನಲ್ಲಿ ಸೂರತುಲ್ ಖಾಫ್ ಮತ್ತು ಎರಡನೇ ರಕ್‍ಅತ್‍ನಲ್ಲಿ ಸೂರತ್ ಇಖ್‍ತರಬ ಓದಲು ಸುನ್ನತ್ತಿದೆ. ಸೂರತು ಸಬ್ಬಿಹಿಸ್ಮ, ಸೂರತುಲ್ ಹಲ್ ಅತಾಕ ಅದೇ ರೀತಿ ಸೂರತುಲ್ ಕಾಫಿರೂನ ಮತ್ತು ಸೂರತುಲ್ ಇಖ್ಲಾಸನ್ನೂ ಓದಬಹುದು. ಈದ್ ಖುತ್ಬಾ ಪೆರ್ನಾಳ್ ನಮಾಝ್ ನಿರ್ವಹಣೆಯ ಬಳಿಕ ಎರಡು ಖುತ್ಬಾ ಓದಲು ಸುನ್ನತ್ತಿದೆ. ಜುಮುಅ ಖುತ್ಬಾದಂತೆ ಕಡ್ಡಾಯ ಮತ್ತು ಐಚ್ಚಿಕ ಕಾರ್ಯಗಳನ್ನು ಇಲ್ಲೂ ಪಾಲಿಸಬೇಕು. ಹಂದ್, ಸ್ವಲಾತ್, ತಕ್ವಾದ ವಸಿಯ್ಯತ್ ಎರಡೂ ಖುತ್ಬಾಗಳಲ್ಲಿರಬೇಕು. ಯಾವುದಾದರೊಂದರಲ್ಲಿ ಆಯತೊಂದನ್ನು ಓದಬೇಕು. ಎರಡನೇ ಖುತ್ಬಾದಲ್ಲಿ ವಿಶ್ವಾಸಿಗಳಿಗೆ ಪ್ರಾರ್ಥಿಸಬೇಕು. ನಿಲ್ಲುವಿಕೆ, ಖುತ್ಬಾಗಳೆಡೆಯಲ್ಲಿನ ಕುಳಿತ, ಶುದ್ದಿ, ಔರತ್ ಮುಚ್ಚುವಿಕೆ ಯಾವುದೂ ಪೆರ್ನಾಳ್ ಖುತ್ಬಾಕ್ಕೆ ಕಡ್ಡಾಯವಿಲ್ಲ. ಇದೆಲ್ಲವೂ ಸುನ್ನತ್ ಮಾತ್ರ. ಆಯತ್ ಓದುವ ವೇಳೆ ಅವನು ಹಿರಿಯ ಅಶುದ್ದಿಯುಳ್ಳವನಾಗಿದ್ದರೆ ಅವನ ಖುತ್ಬಾ ಅಸಿಂಧುವಾಗುತ್ತದೆ. ಖುತ್ಬಾ ಅರಬಿ ಭಾಷೆಯಲ್ಲಾಗಿರಬೇಕು, ಖುತ್ಬಾದ ಸ್ಥಳದಲ್ಲಿ ಹಾಜರಿರುವವರಿಗೆ ಕೇಳುವಂತಿರಬೇಕು. ಆದರೆ ಪೆರ್ನಾಳ್ ಖುತ್ಬಾ ಒಬ್ಬನಿಗೆ ಕೇಳಿಸಿದರೂ ಸಾಕಾಗುತ್ತದೆ. ಈದುಲ್ ಫಿತ್ರ್‍ನ ಖುತ್ಬಾದಲ್ಲಿ ಫಿತ್ರ್ ಝಕಾತ್ ಸಂಬಂಧಿತ ಕಾರ್ಯಗಳನ್ನು ಈದುಲ್ ಅಳ್‍ಹಾದ ಖುತ್ಬಾದಲ್ಲಿ ಉಳ್‍ಹಿಯ್ಯತ್ ಕುರಿತಾದ ವಿಷಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಒಂದನೇ ಖುತ್ಬಾವನ್ನು ಒಂಭತ್ತು ತಕ್ಬೀರ್‍ನಿಂದಲೂ, ಎರಡನೇ ಖುತ್ಬಾವನ್ನು ಏಳು ತಕ್ಬೀರ್‍ನಿಂದಲೂ ಆರಂಭಿಸಬೇಕು. ಇತರ ಸುನ್ನತ್‍ಗಳು ಸ್ನಾನ : ಸ್ನಾನದ ಸಮಯವು ಪೆರ್ನಾಳ್‍ನ ಅರ್ಧ ರಾತ್ರಿಯ ಬಳಿಕ ಪ್ರಾರಂಭವಾಗುತ್ತದೆ. ಸುಗಂಧ ಲೇಪನೆ : ತನ್ನ ಬಳಿ ಇರುವ ಅತ್ಯುತ್ತಮವಾದ ಸುಗಂಧ ದ್ರವ್ಯಗಳನ್ನು ಲೇಪಿಸಬೇಕು. ಸೌಂದರ್ಯತೆ : ಹೊಸ ಉಡುಪುಗಳನ್ನು ಧರಿಸಿ, ಉಗುರು, ಕೂದಲು ಮತ್ತು ಮಲಿನ ವಾಸನೆಗಳನ್ನೆಲ್ಲಾ ಶುದ್ದೀಕರಿಸಿ ಶರೀರ ಸೌಂದರ್ಯವನ್ನು ಹೆಚ್ಚಿಸುವುದು. ಪ್ರತಿಯೊಬ್ಬ ಮುಸ್ಲಿಮನಿಗೂ ಪೆರ್ನಾಳ್ ದಿನದಂದು ಈ ಎಲ್ಲಾ ಕರ್ಮಗಳು ಸುನ್ನತ್ತಾಗಿರುತ್ತದೆ. ನಮಾಝ್‍ಗೆ ನಡೆದು ಸಾಗುವುದು ಒಂದು ದಾರಿಯಲ್ಲಿ ಸಾಗಿ ಇನ್ನೊಂದು ದಾರಿಯಲ್ಲಿ ಮರಳಿ ಬರುವುದು. ನಡೆದು ಸಾಗಬಹುದಾದ ಎಲ್ಲಾ ಆರಾಧನೆಗಳಲ್ಲೂ (ಹಜ್ಜ್, ರೋಗಿಯ ಸಂದರ್ಶನ…) ಹೀಗೆ ದಾರಿ ಬದಲಾಯಿಸಿ ಸಂಚರಿಸುವುದು ಸುನ್ನತ್ತಾಗಿದೆ. ಈದ್ಗಾಗಿಂತ ಮಸೀದಿಯಲ್ಲೇ ನಮಾಝ್ ನಿರ್ವಹಿಸುವುದು ಉತ್ತಮ. ಮಸೀದಿ ಇಕ್ಕಟ್ಟಾಗಿ ಅಲ್ಲಿ ನಮಾಝ್ ನಿರ್ವಹಿಸಲು ಸ್ಥಳ ಸಾಕಾಗುವುದಿಲ್ಲವೆಂದಾದರೆ ವಿಶಾಲವಾದ ಈದ್ಗಾದತ್ತ ಸಾಗಬಹುದು. ತಕ್ಬೀರ್ ಈದುಲ್ ಫಿತ್ರ್‍ನಲ್ಲಿ ಮುನ್ನಾ ದಿನ ಸೂರ್ಯಾಸ್ತ ಸಮಯದಿಂದ ಹಿಡಿದು ಮರುದಿನ ಇಮಾಂ ಈದ್ ನಮಾಝ್‍ಗೆ ಕೈಕಟ್ಟುವ ತನಕ ನಿರಂತರವಾಗಿ ತಕ್ಬೀರ್ ಹೇಳಲು ಸುನ್ನತ್ತಿದೆ. ಇದಕ್ಕೆ ‘ಅತ್ತಕ್ಬೀರುಲ್ ಮುರ್ಸಲ್’ ಎನ್ನಲಾಗುತ್ತದೆ. ಈದುಲ್ ಫಿತ್ರ್‍ನಲ್ಲಿ ನಮಾಝ್‍ನ ಬಳಿಕ ತಕ್ಬೀರ್ ಹೇಳಲು ಸುನ್ನತ್ತಿಲ್ಲ. ಈದುಲ್ ಅಳ್‍ಹಾದಲ್ಲಿ ಇದು ಸುನ್ನತ್ತಿದೆ. ಈ ತಕ್ಬೀರ್‍ಗೆ ‘ಅತ್ತಕ್ಬೀರುಲ್ ಮುಖಯ್ಯದ್’ ಎನ್ನಲಾಗುವುದು.