ಇರಾನಿನ ಇತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಕ್ತನ: ಕ್ಯಾಸ್ಪಿಯನ್ ಸಮುದ್ರದ ಬಳಿ ಇರುವ ಕೆಮೆನ್ ಶಾ ಎಂಬ ಗುಹೆಯಲ್ಲಿನ ಉತ್ಖನನಗಳಿಂದಲೂ ಈ ದೇಶದ ಹಲವು ಸ್ಥಳಗಳಲ್ಲಿ ದೊರಕಿರುವ ಶಿಲಾಯುಧಗಳಿಂದಲೂ ಇರಾನಿನಲ್ಲಿ ಪೂರ್ವಶಿಲಾಯುಗದ ಸಂಸ್ಕøತಿಗಳು ಹರಡಿದ್ದವು ಎಂಬ ವಿಷಯ ತಿಳಿದುಬಂದಿದೆ. ಭಕ್ತಿಯಾರಿ ಪರ್ವತ ಪ್ರದೇಶದಲ್ಲಿನ ತಂಗ್-ಇ-ಪಬ್ಬ ಎಂಬ ಗುಹೆಯಲ್ಲಿನ ಅಗೆತದಿಂದ, ಇರಾನಿನ ಜಾದೋ, ಹಸ್ಸುವಾ ಮುಂತಾದೆಡೆಗಳಲ್ಲಿ ಬೇಟೆಗಾರ ಜನ ಅಲ್ಲಲ್ಲಿ ನೆಲೆಗೊಂಡು ನವಶಿಲಾಯುಗದ ಜೀವನ ವಿಧಾನದತ್ತ ಪರಿವರ್ತನೆಯನ್ನು ಹೊಂದುತ್ತಿದ್ದ ಕಾಲದ ಸಂಸ್ಕøತಿಗಳು ಬೆಳಕಿಗೆ ಬಂದಿವೆ. ಈ ಜನ ಕಲ್ಲಿನ ಕೊಡಲಿ ಸುತ್ತಿಗೆ ಮುಂತಾದ ಆಯುಧಗಳನ್ನು ಉಪಯೋಗಿಸುತ್ತಿದ್ದರಲ್ಲದೆ, ಕೈಯಲ್ಲಿ ಮಾಡಿದ ಮಡಕೆಗಳನ್ನೂ ಬಳಸುತ್ತಿದ್ದರು.

ಪ್ರಾಚೀನ ಗ್ರಾಮದ ಅವಶೇಷಗಳು[ಬದಲಾಯಿಸಿ]

ಟೆಹರಾನಿನ ದಕ್ಷಿಣಕ್ಕಿರುವ ಸಿಯಾಲ್ಕಿನಲ್ಲಿ ಇರಾನ್ ನ ಅತ್ಯಂತ ಪ್ರಾಚೀನ ಗ್ರಾಮದ ಅವಶೇಷಗಳಿವೆ. ಇಲ್ಲಿ ಮೊದಲು ಕ್ರಿ. ಪೂ. ಸು. 5ನೆಯ ಶತಮಾನದಲ್ಲಿ ತಂಗಿದ ಜನ (ಸಿಯಾಲ್ಕ್ 1) ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಕ್ರಮೇಣ ಮಣ್ಣಿನ ಗೋಡೆಗಳನ್ನೂ (ಪುಟದ ಗೋಡೆ) ಕಟ್ಟಲಾರಂಭಿಸಿದರು. ವ್ಯವಸಾಯ ಮತ್ತು ಪಶುಪಾಲನೆ ರೂಢಿಯಲ್ಲಿದ್ದರೂ ಬೇಟೆ ಇನ್ನೂ ಜನರ ಒಂದು ಮುಖ್ಯ ಕಸುಬಾಗಿತ್ತು. ಈ ಕಾಲದಲ್ಲಿ ಹಳೆಯ ರೀತಿಯ ಕಪ್ಪುಬಣ್ಣದ ಮಡಕೆಗಳ ಜೊತೆಯಲ್ಲಿಯೇ ಒಂದು ಹೊಸ ರೀತಿಯ ಚಿತ್ರಿತ ಮಡಕೆಗಳೂ ಬಳಕೆಗೆ ಬಂದವು. ಚಿತ್ರಣದಲ್ಲಿ ಬುಟ್ಟಿಗಳ ಮೇಲ್ಮೈ ಮಾದರಿಯ ನಮೂನೆಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಈ ಕಾಲದ ಆಯುಧಗಳೆಲ್ಲವೂ ಕಲ್ಲಿನವು. ಕತ್ತರಿಸುವ ಮತ್ತು ಒರೆಯುವ ಸಾಧನಗಳು, ನಯ ಮಾಡಿದ ಕೊಡಲಿ ಇತ್ಯಾದಿಗಳು ಉಪಯೋಗದಲ್ಲಿದ್ದವು. ಬಟ್ಟೆಯ ನೇಯ್ಗೆ ಸಹ ಆಗಲೇ ರೂಢಿಗೆ ಬಂದಿತ್ತು. ಈ ಕಾಲದ ಕೊನೆಯ ಭಾಗದ ಹೊತ್ತಿಗೆ ತಾಮ್ರವೂ ಬೆಳಕಿಗೆ ಬಂತು. ಆದರೆ ಈ ಕಾಲದ ತಾಮ್ರದ ವಸ್ತುಗಳೆಲ್ಲವೂ ಅದುರನ್ನು ಜಜ್ಜಿ ರೂಪಿಸಿದವು ಮಾತ್ರ; ಅದುರನ್ನು ಕರಗಿಸಿ ಎರಕ ಹುಯ್ಯುವ ವಿಧಾನ ಇನ್ನೂ ಪ್ರಚಲಿತವಾಗಿರಲಿಲ್ಲ. ಬಣ್ಣಹಾಕಿದ ಕಲ್ಲಿನ ಮತ್ತು ಚಿಪ್ಪಿನ ಉಂಗುರಗಳು, ದಾರಗಳು ಮುಂತಾದ ಆಭರಣಗಳೂ ಉಪಯೋಗದಲ್ಲಿದ್ದವು. ಈ ಕಾಲದಲ್ಲಾಗಲೇ ಕಲಾಸೃಷ್ಟಿಯೂ ಪ್ರಾರಂಭವಾಯಿತೆಂಬುದಕ್ಕೆ ಎಲುಬಿನಲ್ಲಿ ಕೆತ್ತಿದ ಬೊಂಬೆಗಳು ಸಾಕ್ಷಿಗಳಾಗಿವೆ. ಈ ಕಾಲದಲ್ಲಿ ಮೃತರನ್ನು ಮನೆಯ ಒಳಗೆ ಹೂಳುವ ಪದ್ಧತಿಯಿತ್ತು.[೧]

ಇತಿಹಾಸ[ಬದಲಾಯಿಸಿ]

ಕ್ರಿ. ಪೂ 4ನೆಯ ಸಹಸ್ರಮಾನದಲ್ಲಿ ತಾಮ್ರಶಿಲಾಯುಗದ ಹಲವು ಸಂಸ್ಕøತಿಗಳು ಇರಾನಿನಲ್ಲಿ ಕೆಂಪುಬಣ್ಣದ ಮಡಕೆಗಳು ಪ್ರಚಲಿತವಾಗಿದ್ದ ಸಂಸ್ಕøತಿಗಳು, ಪಶ್ಚಿಮ ಮತ್ತು ನೈಋತ್ಯ ಇರಾನಿನಲ್ಲಿ ಕಂದುಬಣ್ಣದ ಮಡಕೆಗಳು ಪ್ರಚಲಿತವಾಗಿದ್ದ ಸಂಸ್ಕøತಿಗಳು ಎಂಬ ಎರಡು ಮುಖ್ಯ ವಿಧಗಳನ್ನು ಗುರುತಿಸಲಾಗಿದೆ. ನಾಗರೀಕತೆಯ ಬೆಳೆವಣಿಗೆಗೆ ಅವಶ್ಯಕವಾದ ಸಾಧನಗಳೆಲ್ಲ ಈ ಕಾಲದಲ್ಲಿಯೇ ರೂಢಿಗೆ ಬಂದವು. ಹಲವು ಉದ್ದೇಶಗಳಿಗಾಗಿ ಉಪಯೋಗಿಸಬಹುದಾದ ನಾನಾ ರೀತಿಯ ಎರಕ ಹುಯ್ದ ತಾಮ್ರದ ವಸ್ತುಗಳು, ಮಡಕೆಗಳನ್ನು ಮಾಡಲು ಚಕ್ರ. ಅವುಗಳನ್ನು ಸುಡಲು ಆವೆ, ಮನೆ ಕಟ್ಟಲು ಅಚ್ಚಿನಿಂದ ತಯಾರಿಸಿದ ಹಸಿಇಟ್ಟಿಗೆ, ಮುಂತಾದವು ಬಳಕೆಗೆ ಬಂದವು. ಈ ಸಂಸ್ಕøತಿಗಳಿಗೆ ಸಂಬಂಧಿಸಿದ ಮಣ್ಣಿನ ನಗ್ನ ಸ್ತ್ರೀ ಬೊಂಬೆಗಳು ಆ ಕಾಲದ ಧಾರ್ಮಿಕ ನಡೆವಳಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತವೆ. ಮೃತರನ್ನು ಮನೆಯ ಒಳಗೆ ಒಲೆಯ ಬಳಿಯಲ್ಲಿ ಹೂಳುವ ಪದ್ಧತಿ ರೂಢಿಯಲ್ಲಿತ್ತು. ಮಡಕೆಗಳ ಮೇಲೆ ಕಂಡುಬರುವ ಬಣ್ಣದ ಚಿತ್ರಗಳು ಆ ಕಾಲದ ಕಲಾಭಿರುಚಿಯನ್ನು ಪ್ರತಿಬಿಂಬಿಸುತ್ತವೆ. ಮೊದಮೊದಲು ಜ್ಯಾಮಿತಿಕ ನಮೂನೆಗಳು ಉಪಯೋಗದಲ್ಲಿದ್ದರೆ, ಕ್ರಮೇಣ ಪ್ರಾಣಿ ಮತ್ತು ಮನುಷ್ಯನ ಸ್ವಾಭಾವಿಕ ಚಿತ್ರಗಳೂ ಅನಂತರ ಅವುಗಳನ್ನೇ ಸೂಚ್ಯಚಿಹ್ನೆಗಳಿಂದ ವ್ಯಕ್ತಪಡಿಸುವ ವಿಧಾನವೂ ಪ್ರಚಲಿತವಾದವು. ಈ ಮಡಕೆಗಳ ಮೇಲಿನ ಚಿತ್ರಗಳಲ್ಲಿ ಕಂಡುಬರುವ ವಸ್ತುಗಳನ್ನು ಅವುಗಳ ಆಕಾರಕ್ಕೆ ಸಮೀಪದ ಸೂಕ್ತ ಚಿಹ್ನೆಗಳಿಂದ ವ್ಯಕ್ತಪಡಿಸುವ ವಿಧಾನದಿಂದ ಮುಂದೆ ಲಿಪಿಯ ಬೆಳೆವಣಿಗೆಗೆ ಹಾದಿಯಾಯಿತೆಂದು ಕೆಲವರು ಊಹಿಸುತ್ತಾರೆ. ಈ ಕಾಲಕ್ಕೆ ಸಂಬಂಧಿಸಿದ ಅವಶೇಷಗಳನ್ನು ಸಿಯಾಲ್ಕ್ ಸೂಸ, ಸವಾ, ಖೂಮ್, ಗಿಯಾನ್, ಬಕುನ್ ಮುಂತಾದೆಡೆಗಳಲ್ಲಿ ಗುರುತಿಸಲಾಗಿದೆ. ಇದೆಲ್ಲ ಗ್ರಾಮೀಣ ಸಂಸ್ಕøತಿಗಳು. ಆದರೆ 4ನೆಯ ಸಹಸ್ರಮಾನದ ಕೊನೆಯ ಭಾಗದಲ್ಲಿಯೇ ಪಕ್ಕದ ಇರಾಕ್ ಪ್ರದೇಶದಲ್ಲಿ ನಗರೀಕರಣದ ಪ್ರಾರಂಭದ ಸೂಚನೆಗಳು ಕಂಡುಬಂದವು. ಇರಾಕಿಗೆ ಸೇರಿದಂತೆಯೇ ಇರುವ ವಾಯುವ್ಯ, ಇರಾನ್ ಪ್ರಾಂತ್ಯದಲ್ಲೂ ಅದೇ ರೀತೀಯ ನಾಗರಿಕತೆ ಅನತಿಕಾಲದಲ್ಲೇ ಬೆಳೆಯಿತು. ಈ ಸಹಸ್ರಮಾನದ ಕೊನೆಯಭಾಗದಲ್ಲಿ ಇರಾನ್ ದೇಶಕ್ಕೆ ಹಲವು ಹೊಸ ಸಂಸ್ಕøತಿಗಳೂ ಕಾಲಿಟ್ಟವು. ಇವೆಲ್ಲವೂ ಕ್ರಿ.ಪೂ. 3ನೆಯ ಸಹಸ್ರಮಾನದಲ್ಲಿ ಸ್ಥಳೀಯ ಸಂಸ್ಕøತಿಗಳೊಡನೆ ಬೆರೆತು ಪ್ರವರ್ಧಮಾನ ಹೊಂದಿದವು. 3ನೆಯ ಸಹಸ್ರಮಾನದ ಇರಾನಿ ಸಂಸ್ಕøತಿಗಳು ಬಹುಮಟ್ಟಿಗೆ ಸುಮೇರಿಯ ಸಂಸ್ಕøತಿಗಳಿಂದ ಪ್ರಭಾವಿತವಾಗಿದ್ದಂತೆ ಕಂಡುಬರುತ್ತದೆ. ಈ ಕಾಲದಲ್ಲಿ ಬೆಳೆದ ಈ ಎರಡು ದೇಶಗಳ ವ್ಯಾಪಾರಸಂಬಂಧ ಇದಕ್ಕೆ ಕಾರಣವಿರಬಹುದು. ಇರಾನಿನ ಪಶ್ಚಿಮಭಾಗದ ಎಲಾಮ್ ವಿಭಾಗ ಕೆಲಕಾಲ ಸುಮೇರಿಯದ ರಾಜ್ಯಾಡಳಿತಕ್ಕೇ ಒಳಪಟ್ಟಿತು. ಈ ಕಾಲದ ಅವಶೇಷಗಳು ಗಿಯಾನ್, ಹಿಸ್ಸಾರ ಮುಂತಾದೆಡೆಗಳಲ್ಲಿ ಸಿಕ್ಕಿವೆ.

ಎಲಾಮ್ ಪ್ರಾಂತ್ಯ[ಬದಲಾಯಿಸಿ]

ಕ್ರಿ. ಪೂ 2ನೆಯ ಸಹಸ್ರಮಾನದ ವೇಳೆಗೆ ಇರಾನಿನಲ್ಲಿ, ಅದರಲ್ಲೂ ಎಲಾಮ್ ಪ್ರಾಂತ್ಯದಲ್ಲಿ, ನಾಗರೀಕತೆಯೊಂದು ಉಚ್ಛ್ರಾಯಸ್ಥಿತಿಯಲ್ಲಿತ್ತು. ಎಲಾಮ್ ಪ್ರಾಂತ್ಯದ ಅರಸರು ಸ್ವಲ್ಪ ಕಾಲ ಪಶ್ಚಿಮ ಏಷ್ಯದ ರಾಜಕೀಯ ಮತ್ತು ಸಾಂಸ್ಕøತಿಕ ಕೇಂದ್ರವಾಗಿದ್ದ ಬ್ಯಾಬಿಲಾನನ್ನೇ ವಶಪಡಿಸಿಕೊಂಡಿದ್ದರು, ಎಲಾಮಿನ ಈ ವೈಭವ ಕಾಲದ ವಾಸ್ತುಶಿಲ್ಪ ಮತ್ತು ಸಾಂಸ್ಕøತಿಕ ಅವಶೇಷಗಳು ಅಲ್ಲಿನ ರಾಜಧಾನಿಯಾದ ಸೂಸದ ಉತ್ಖನನಗಳಲ್ಲಿ ಬೆಳಕಿಗೆ ಬಂದಿವೆ. ಅಲ್ಲಿ ಸಿಕ್ಕಿರುವ ಎಲಾಮೈಟ್ ಮತ್ತು ಅಕ್ಕೇಡಿಯನ್ ಭಾಷೆ ಮತ್ತು ಲಿಪಿಯ ಶಾಸನಗಳೇ ಇರಾನಿನ ಅತ್ಯಂತ ಪ್ರಾಚೀನ ಲಿಖಿತ ದಾಖಲೆಗಳು. ಕ್ರಿ.ಪೂ. 2ನೆಯ ಸಹಸ್ರಮಾನ ಪಶ್ಚಿಮ ಏಷ್ಯದ ಚರಿತ್ರೆಯಲ್ಲಿ ಅಂದೋಲನದ ಕಾಲ. ಬಹು ಕಾಲದಿಂದ ಬಂದ ರಾಜಕೀಯ ವ್ಯವಸ್ಥೆಗಳ ಕುಸಿತ, ಅನಾಗರಿಕ ಗುಡ್ಡಗಾಡು ಜನಾಂಗಗಳಿಂದ ನಾಗರಿಕ ಪ್ರದೇಶಗಳತ್ತ ವಲಸೆ, ಆಕ್ರಮಣ, ನಾಗರಿಕತೆಗಳ ವಿನಾಶ ಮುಂತಾದುವನ್ನು ಈ ಕಾಲದಲ್ಲಿ ಕಾಣುತ್ತೇವೆ. ಬಹುಶಃ ಈ ಕಾರಣದಿಂದಲೇ ತಿಯಾನ್, ಸಿಯಾಲ್ಕ್ ಮುಂತಾದ ಇರಾನಿನ ಪುರಾತನ ನೆಲೆಗಳಲ್ಲೂ ಹಲವಾರು ವಿನೂತನ ಸಾಂಸ್ಕøತಿಕ ಅಂಶಗಳು ಇದ್ದಕ್ಕಿದ್ದಂತೆಯೇ ಕಾಣಿಸಿಕೊಳ್ಳುತ್ತದೆ. ಇಂಡೋ ಯೂರೋಪಿಯನ್ ಭಾಷೆಯನ್ನಾಡುತ್ತಿದ್ದ ಜನರ ಮೊದಲ ವಲಸೆ ಈ ಕಾಲದಲ್ಲೆ ಆಗಿರಬೇಕು. ಕ್ರಿ.ಪೂ. 2ನೆಯ ಕೊನೆಯಲ್ಲಿ ಅಥವಾ 1ನೆಯ ಸಹಸ್ರಮಾನದ ಮೊದಲಲ್ಲಿ ಇರಾನಿನ ಇತಿಹಾಸದಲ್ಲಿ ಎರಡು ಗಮನಾರ್ಹ ಘಟನೆಗಳು ಜರುಗಿದವು. ಇಂಡೋ-ಯೂರೋಪಿಯನ್ ಅದರಲ್ಲೂ ಇರಾನೀ ಭಾಷೆಯನ್ನಾಡುತ್ತಿದ್ದ ಜನರ ಪ್ರಭಾವ ಬೆಳೆದುದ್ದು ಒಂದು ಘಟನೆ. ಕಬ್ಬಿಣವನ್ನು ಬಳಸಲಾರಂಭಿಸಿದ್ದು ಇನ್ನೊಂದು ಘಟನೆ. ಕಬ್ಬಿಣದ ಉಪಯೋಗದಲ್ಲಿ ಇವರೇ ಮೊದಲಿಗರೆಂದು ನಿಷ್ಕರ್ಷೆಯಾಗಿ ಹೇಳಲು ಸಾಕಷ್ಟು ಆಧಾರಗಳು ದೊರಕಿಲ್ಲ. ಪೂರ್ವ ಇರಾನಿನ ಸಿಮಾಲ್ ಪ್ರದೇಶದಲ್ಲಿ ಕ್ರಿ.ಪೂ. 1ನೆಯ ಸಹಸ್ರಮಾನಕ್ಕೆ ಸೇರಿದ ಸ್ಮಶಾನವೊಂದನ್ನು ಅಗೆಯಲಾಗಿದೆ. ಪಶ್ಚಿಮ ಇರಾನಿನ ಗಿಯಾನ್ ನಲ್ಲೂ ಲೂರಿಸ್ಥಾನ್ ಪ್ರದೇಶದಲ್ಲೂ ಈ ಕಾಲದ ನೆಲೆಗಳು ಕಂಡುಬಂದಿವೆ. ಲೂರಿಸ್ಥಾನ್ ಪ್ರದೇಶದ ಹಲವು ಗೋರಿಗಳಲ್ಲಿ ಎರಕಹೊಯ್ದು ನಯ ಮಾಡಿದ ಅನೇಕ ಕಂಚಿನ ಉಪಕರಣಗಳೂ ಕಲಾಕೃತಿಗಳೂ ಸಿಕ್ಕಿವೆ. ಕುಶಿದಷ್ಟ್ ಎಂಬಲ್ಲಿ ಹಲವು ದೊಡ್ಡತಲೆಯ ಗುಂಡುಸೂಜಿಗಳೂ ಧಾರ್ಮಿಕ ಕ್ರಿಯೆಗಳಾಗಿ ಉಪಯೋಗಿಸಲಾಗುತ್ತಿದ್ದ ವಸ್ತುಗಳೂ ದೊರಕಿವೆ. ಆಜರ್ ಬೈಜಾನ್ ಪ್ರದೇಶದಲ್ಲಿ ಮಿಡಿಯ ಸಾಮ್ರಾಜ್ಯ ಕಾಲದ ಅವಶೇಷಗಳಿವೆ.

ಇರಾನ್ ಆಖಮೇನಿಯನ್ ಸಾಮ್ರ್ಯಾಜ[ಬದಲಾಯಿಸಿ]

ಇರಾನ್ ಆಖಮೇನಿಯನ್ ಸಾಮ್ರ್ಯಾಜದ ಹೃದಯಪ್ರದೇಶ. ಈ ಸಾಮ್ರಾಜ್ಯದ ಕಾಲ ಕ್ರಿ.ಪೂ. 559-331; ಇರಾನಿನ ಇತಿಹಾಸದಲ್ಲಿ ಇದು ವೈಭವದ ಕಾಲ. ಅಂದಿನ ಉಚ್ಛ್ರಾಯ ನಾಗರಿಕತೆಯ ಬಗ್ಗೆ ಬೆಳಕು ಬೀರುವ ಪ್ರಾಚೀನ ನೆಲೆಗಳು ಮತ್ತು ವಾಸ್ತುಶಿಲ್ಪ ಕೃತಿಗಳು ಪಸರ್ಗಡೆ, ಸೂಸ, ಪರ್ಸೆಪೊಲಿಸ್, ಎಕ್ಬಟಾನ, ಬೆಹಿಸ್ತನ್, ನಕ್ಷ್-ಇ-ರುಸ್ತಮ್ ಮುಂತಾದೆಡೆಗಳಲ್ಲಿ ಕಂಡುಬಂದಿವೆ.ಅಖಮೇನಿಯನ್ನರಲ್ಲಿ ಮೊದಲನೆಯ ಪ್ರಸಿದ್ಧ ರಾಜ ಸೈರಸ್ ಪಸರ್ಗಡೆಯನ್ನು ಕಟ್ಟಿದ. ಇಲ್ಲಿನ ಉತ್ಖನನದಲ್ಲಿ ದೊಡ್ಡಗೋಡೆಯಿಂದ ಸುತ್ತುವರಿದ ಉದ್ಯಾನದ ಮಧ್ಯದಲ್ಲಿ ಕಟ್ಟಲಾಗಿದ್ದ ಅರಮನೆ, ದೇವಾಲಯ, ಸೈರಸ್ಸನ ಗೋರಿ ಮುಂತಾದವುಗಳ ಉಳಿಕೆಗಳೂ ದೊರಕಿವೆ. ಪ್ರಾಚೀನ ವಾಸ್ತು ಕಲಾಭ್ಯಾಸಿಗಳ ಅಭಿಪ್ರಾಯದಲ್ಲಿ ಈಗಿರುವ ಸ್ಥಿತಿಯಲ್ಲೂ ಪಸರ್ಗಡೆಯ ಕಟ್ಟಡಗಳು ಅದ್ಭುತ ಕೃತಿಗಳು. ಇಲ್ಲಿನ ವಾಸ್ತು ರಚನೆಯಲ್ಲಿ ಹಸಿಇಟ್ಟಿಗೆ ಮತ್ತು ಕಲ್ಲಿನ ಉಪಯೋಗ ಬಹಳವಾಗಿದೆ. ಬಾಗಿಲುವಾಡ, ಕಂಬಗಳು ಮತ್ತು ಮಹಾದ್ವಾರಗಳು ಶಿಲ್ಪಗಳಿಂದ ಅಲಂಕೃತವಾಗಿವೆ. ಸೈರಸ್ಸಿನ ಸಮಾಧಿ ಮತ್ತು ದೇವಾಲಯ ಸಾಮಾನ್ಯ ದರ್ಜೆಯ ಕಟ್ಟಡಗಳಾದರೂ ವಿಶಿಷ್ಟಶೈಲಿಯಲ್ಲಿ ರಚಿತವಾಗಿವೆ. ಅರಮನೆಯಲ್ಲಿ ವಿಶಾಲವಾದ ಆಯಾಕಾರದ ಕೊಠಡಿಗಳೂ ಸಾಲುಕಂಬಗಳನ್ನೊಳಗೊಂಡ ಹಜಾರಗಳೂ ಹಲವಾರು ಇದ್ದು, ವಿವಿಧ ರೀತಿಯ ಶಿಲ್ಪ ಮತ್ತು ವರ್ಣಾಲಂಕರಣಗಳಿಗೆ ವಿಸ್ತಾರವಾದ ಸ್ಥಳಾವಕಾಶವನ್ನೊದಗಿಸಿದ್ದವು. ಪಸರ್ಗಡೆಯಿಂದ 40 ಕಿ.ಮೀ. ನೈಋತ್ಯದಲ್ಲಿ ಡೇರಿಯಸ್ ಕ್ರಿ.ಪೂ. 520-515ರಲ್ಲಿ ಕಟ್ಟಿಸಿದ ಪರ್ಸೆಪೊಲಿಸ್ ಪಟ್ಟಣ ಪ್ರಾಚೀನ ಇರಾನಿನ ಒಂದು ಮುಖ್ಯಸ್ಥಳ. ಇಲ್ಲಿನ ಕೋಟೆಯ ಒಳಭಾಗದಲ್ಲಿ ಮೂರು ಘಟ್ಟಗಳಲ್ಲಿ ಎತ್ತಿದ ಒಂದು ದೊಡ್ಡ ಜಗತಿಯಿದೆ. ಜಗತಿಯ ಮೇಲೆ ಅರಮನೆಗೆ ಸಂಬಂಧಪಟ್ಟ ಮುಖೀ ಕಟ್ಟಡಗಳಿದ್ದವು. ಇವುಗಳಲ್ಲಿ 'ಅಪದನ ಎಂದು ಕರೆಯುವ ದಿವಾನಖಾನೆ ಬಹು ಭವ್ಯವಾಗಿದ್ದಿರಬೇಕು. ಈಗ ಇದರ ಜಗಲಿ ಮತ್ತು ಕೆಲವು ಕಂಬಗಳು ಮಾತ್ರ ಉಳಿದಿವೆ. ದೇಶವಿದೇಶಗಳ ಆಶ್ರಿತಜನರು ಕಾಣಿಕೆಗಳನ್ನು ತಂದು ರಾಜನಿಗೆ ಒಪ್ಪಿಸುತ್ತಿರುವ ಶಿಲ್ಪವೊಂದು ಈ ಜಗತಿಯ ಪಾವಟಿಗಳ ಪಕ್ಕದಲ್ಲಿದೆ. ಇದು ಪ್ರಸಿದ್ಧವಾಗಿದೆ. ಪರ್ಸೆಪೊಲಿಸನ ವಾಸ್ತುರಚನೆಯಲ್ಲಿ ಪಸರ್ಗಡೆಯಲ್ಲಿಯಂತೆಯೇ ಹಸಿ ಇಟ್ಟಿಗೆಗಳ ಕಟ್ಟಡಗಳನ್ನು ಕಟ್ಟಿ. ಅವನ್ನು ಕಲ್ಲು ಚಪ್ಪಡಿಗಳಿಂದ ಮುಚ್ಚುತ್ತಿದ್ದ ಸಂಪ್ರದಾಯ ರೂಢಿಯಲ್ಲಿತ್ತು. ಬಾಗಿಲುವಾಡ, ಕಂಬಗಳು ಮತ್ತು ಗೋಡೆಗಳ ಮೇಲೆ ಉಬ್ಬುಶಿಲ್ಪಗಳಿರುತ್ತಿದ್ದವು. ಗೋಡೆಗಳಲ್ಲಿ ದೊಡ್ಡ ಕಿಟಕಿಗಳನ್ನಿಡುತ್ತಿದ್ದದ್ದು ಇಲ್ಲಿಯ ಒಂದು ವಿಶೇಷ. ಸೂಸದ ಅರಮನೆ ಮೊದಲು ಎರಡನೆಯ ಡೇರಿಯಸ್ಸನಿಂದ ನಿರ್ಮಿತವಾಗಿತ್ತು. ಅದು ಬೆಂದು ಹೋದದ್ದರಿಂದ ಪುನಃ ಅದನ್ನು ಕಟ್ಟಲಾಯಿತು. ಅದನ್ನು ಆಸ್ಸೀರಿಯದ ಅರಮನೆಗಳ ಮಾದರಿಯಲ್ಲಿ ಕಟ್ಟಲಾಗಿದೆ. ಇಲ್ಲಿಯೂ ಗೋಡೆಗಳಲ್ಲಿ ಹಲವಾರು ಉಬ್ಬುಶಿಲ್ಪಗಳಿವೆ. ಕೆಲವಡೆ ಗಾಜುಹೊಳಪಿನ ಮಟ್ಟ ಹೆಂಚುಗಳನ್ನು ಉಪಯೋಗಿಸಿದೆ. ಬೆಹಿಸ್ತನ್ನಿನಲ್ಲಿ ಬಂಡೆಯೊಂದರ ಮೇಲೆ ಕೆತ್ತಿರುವ (ಕ್ರಿ. ಪೂ. ಸು. 516) ಡೇರಿಯಸ್ಸನ ಶಾಸನ ಮತ್ತು ಶಿಲ್ಪ ಲೋಕಪ್ರಸಿದ್ಧವಾದದ್ದು. ಅಖಮೇನಿಯನ್ ಸಾಮ್ರಾಜ್ಯದ ವಿಸ್ಮರಣೀಯ ಸಾಹಸ ಮತ್ತು ಹೆಮ್ಮೆಯನ್ನು ಇಲ್ಲಿಯ ಶಿಲ್ಪಗಳು ಪ್ರತಿಬಿಂಬಿಸುತ್ತವೆ. ಇಲ್ಲಿ ಡೇರಿಯಸ್ ಇಬ್ಬರು ಅನುಯಾಯಿಗಳೊಡನೆ ನಿಂತಿರುವಂತೆಯೂ ಮಾಜಿಯನ್ನನೊಬ್ಬ ಆತನ ಕಾಲಿಗೆ ಬೀಳುತ್ತಿರುವಂತೆಯೂ ಹಲವು ಶತ್ರುಗಳು ಬಂಧಿತರಾಗಿರುವಂತೆಯೂ ತೋರಿಸಿದೆ. ಶತ್ರುಗಳ ತಲೆಯ ಮೇಲೆ ಅಖಮೇನಿಯನ್ನರ ದೇವತೆ ಅಹುರಮಜ್ಜನ ಚಿಹ್ನೆಯಿದೆ. ಇದನ್ನು ಆಸ್ಸೀರಿಯನ್ನರ ಅಸ್ಸೂರ್ ದೇವತೆಯಂತೆಯೇ ಕೆತ್ತಲಾಗಿದೆ. ಶಿಲ್ಪದಲ್ಲಿ ಆಸ್ಸೀರಿಯದ ಶೈಲಿಯ ಛಾಯೆಯಿದ್ದರೂ ಇದು ತನ್ನದೇ ಆದ ಹೆಚ್ಚು ಸಹಜವಾದ ಅವಿಷ್ಕಾರದಿಂದ ವಿನೂತನವಾಗಿದೆ. ನಕ್ಷ್-ಇ-ರುಸ್ತುಮನ ಶಿಲ್ಪಗಳೂ ಇದೇ ಸಂಪ್ರದಾಯಕ್ಕೆ ಸೇರಿದವು. ಅಖಮೇನಿಯನ್ನರ ಕಾಲದ ಚಿನ್ನ ಮತ್ತು ಬೆಳ್ಳಿಯ ಆಭರಣಗಳೂ ಸುಂದರ ಕಲ್ಲಿನ ಪಾತ್ರೆಗಳೂ ಕಲಾತ್ಮಕವಾಗಿ ಕೆತ್ತಿದ ವಜ್ರ ಕೆಂಪು ಮುಂತಾದ ಅಮೂಲ್ಯ ಕಲ್ಲುಗಳೂ ಎಕ್ಬಟಾನವೇ ಮುಂತಾದ ಸ್ಥಳಗಳಲ್ಲಿ ಸಿಕ್ಕಿವೆ. ಭಾರತದ ಮೌರ್ಯ ಕಲೆಯಲ್ಲಿ ಆಖಮೇನಿಯನ್ನರ ಶಿಲೆಯ ಪ್ರಭಾವ ಬಹಳವಾಗಿ ಕಂಡುಬಂದಿವೆ.

ಅಲೆಕ್ಸಾಂಡರನಿಂದ ಪರ್ಷಿಯ ಸಾಮ್ರಾಜ್ಯ[ಬದಲಾಯಿಸಿ]

ಅಲೆಕ್ಸಾಂಡರನಿಂದ ಪರ್ಷಿಯ ಸಾಮ್ರಾಜ್ಯ ಕೊನೆಗೊಂಡ ಅನಂತರ, ಈ ಪ್ರದೇಶ ಮ್ಯಾಸಿಡೋನಿಯನ್ನರ ಮತ್ತು ಪಾರ್ಥಿಯನ್ನರ ಆಳ್ವಿಕೆಗೆ ಒಳಪಟ್ಟಿತ್ತು. ರೆಯ್, ಸೂಸ ಮುಂತಾದ ಸ್ಥಳಗಳಲ್ಲಿನ ಉತ್ಖನನಗಳೂ ಶಮಿ ಎಂಬಲ್ಲಿನ ದೇವಾಲಯದ ಅವಶೇಷಗಳಲ್ಲಿ ಸಿಕ್ಕಿದ ಕಂಚಿನ ಮೂರ್ತಿಗಳೂ ಬೆಹಿಸ್ತನ್ನನ ಕೆಲವು ಶಿಲ್ಪಗಳೂ ಗ್ರೀಕ್ ವಾಸ್ತುಶಿಲ್ಪ ಕಲಾರೀತಿಗಳ ಪ್ರಭಾವವನ್ನು ತೋರಿಸುತ್ತವೆ. ಇವೆಲ್ಲ ಬಹುತೇಕ ಪಾರ್ಥಿಯನ್ನರ ಕಾಲದವು.ಕ್ರಿ.ಶ. 3 ರಿಂದ 7ನೆಯ ಶತಮಾನದವರೆಗೆ ಇರಾನ್ ಸಸ್ಸಾನಿಯನ್ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಈ ಕಾಲದಲ್ಲಿ ಅಖಮೇನಿಯನ್ನರ ಕಾಲದ ವೈಭವದ ಪುನರಾವರ್ತನೆ ಕಂಡುಬರುತ್ತದೆ. ಈ ಕಾಲದ ಬಗ್ಗೆ ಹೆಚ್ಚಿನ ಪುರಾತತ್ತ್ವ ಮಾಹಿತಿಗಳು ಫಿರೋಜಾಬಾದ್ ಗಿರ್ರಾ, ಶಾಪುರ್, ಸರ್ವಿಸ್ತಾನ್, ಇವಾನ್-ಇ-ಕರ್ಖ, ದಿಜ್ ಪುಲ್, ಶುಸ್ತರ್ ಮುಂತಾದೆಡೆಗಳಲ್ಲಿವೆ. ಶಿಲ್ಪಗಳಲ್ಲಿ ಹಳೆಯ ಅಖಮೇನಿಯನ್ ಶೈಲಿಯ ಅನುಕರಣೆ ಬಹಳವಾಗಿ ಕಂಡುಬರುತ್ತದೆ. ಆದರೆ ವಾಸ್ತುರೀತಿಯಲ್ಲಿ ಹಳೆಯ ಅನುಕರಣೆಗಳಿದ್ದರೂ ಸುಟ್ಟ ಇಟ್ಟಿಗೆಯನ್ನೂ ಗಾರೆಯನ್ನೂ ಬಳಕೆಗೆ ತಂದದ್ದು ಒಂದು ವಿಶೇಷ. ಕಟ್ಟಡಗಳ ಮೇಲೆ ಅರ್ಧಪೀಪಾಯಿಯಾಕೃತಿಯ ಚಾವಣಿಯ ನಿರ್ಮಾಣವೂ ಈ ಕಾಲದಲ್ಲೇ ಮೊಟ್ಟಮೊದಲಿಗೆ ಕಂಡು ಬಂದಿದೆ. ಸಸೇನಿಮನ್ನರ ಕಾಲದ ಬೆಳ್ಳಿಯ ಆಭರಣಗಳು ಅಂದಿನ ಚಿನಿವಾರ ಕಲೆಯ ಔನ್ನತ್ಯವನ್ನು ಸೂಚಿಸುತ್ತವೆ. ಈ ಕಾಲದ ರೇಷ್ಮೆಯ ಬಟ್ಟೆಗಳೂ ಕಂಬಳಿಗಳೂ ಪ್ರಖ್ಯಾತವಾಗಿದ್ದವು. ಅವುಗಳ ಮಾದರಿಯನ್ನು ತಖ್-ಇ-ಬುಸ್ತನ್ ಶಿಲ್ಪಗಳಲ್ಲಿ ಕಾಣಬಹುದಾಗಿದೆ.

ಇಸ್ಲಾಮೀ ವಾಸ್ತುರೀತಿಯ ಬೆಳೆವಣಿಗೆ[ಬದಲಾಯಿಸಿ]

ಇಸ್ಲಾಮೀ ವಾಸ್ತುರೀತಿಯ ಬೆಳೆವಣಿಗೆಗೆ ಸಸ್ಸಾನಿ ಶೈಲಿಯ ಕೊಡುಗೆ ಅಪಾರ. ಮುಂದೆ ವಿಶ್ವದ ಹಲವೆಡೆಗಳಲ್ಲಿ ಹರಡಿದ ಇಸ್ಲಾಮೀ ವಾಸ್ತು ಸಂಪ್ರದಾಯದ ನಿರ್ದಿಷ್ಟ ಪ್ರತೀಕಗಳಾದ ಮಸೀದಿ, ಗೋರಿ, ಮದರಸ ಮುಂತಾದ ಕಟ್ಟಡಗಳ ಮತ್ತು ಗುಮ್ಮಟ, ಮೀನಾರ್ ಮೊದಲಾದ ವೈಶಿಷ್ಟಗಳ ಆದಿರೂಪಗಳು ಸಸ್ಸಾನಿಯ ವಾಸ್ತು ಪದ್ಧತಿಯಲ್ಲಿ ಕಂಡುಬಂದಿವೆ. ಕ್ರಿ.ಶ. 7ನೆಯ ಶತಮಾನದಲ್ಲಿ ಇಸ್ಲಾಮ್ ಧರ್ಮ ಇರಾನಿನಲ್ಲಿ ಹರಡಿದ ಮೇಲೆ, ಆ ಧರ್ಮಕ್ಕೆ ಸಂಬಂಧಪಟ್ಟ ಹಲವಾರು ಕಟ್ಟಡಗಳು ನಿರ್ಮಾಣವಾದವು. ಇವೆಲ್ಲ ಒಂದು ಸಂಪ್ರದಾಯಬದ್ಧ ಶೈಲಿಯಲ್ಲೇ ಇದ್ದರೂ ಇವುಗಳಲ್ಲೂ ಕಾಲಕಾಲಕ್ಕೆ ವ್ಯತ್ಯಾಸಗಳು ಕಂಡುಬರುತ್ತವೆ. ಇಸ್ಲಾಮೀ ಸಂಸ್ಕøತಿಯ ಕೇಂದ್ರಗಳಾದ ಇಸಹಾನ್, ಟೆಹರಾನ್, ಮೆಕೆದ್, ದೀರ್ಮಾನ್, ಅರ್ದಬಿಲ್, ತಬ್ರಿಜ್, ಕಿರಾಜ್, ಕತನ್ ಮುಂತಾದೆಡೆಗಳಲ್ಲಿ ಈ ಶೈಲಿಯ ಭವ್ಯ ಕಟ್ಟಡಗಳು ಉಳಿದುಬಂದಿವೆ. (ನೋಡಿ- ಇಸ್ಲಾಮೀ-ವಾಸ್ತುಶಿಲ್ಪ,-ಕಲೆ)ಇರಾನಿನ ಪುರಾತನ ಇತಿಹಾಸದ ಅಧ್ಯಯನಕ್ಕೆ ಈ ದೇಶದ ಪ್ರಾಚೀನ ನೆಲೆಗಳು ಮತ್ತು ವಾಸ್ತುಶಿಲ್ಪ ಅವಶೇಷಗಳಷ್ಟೇ ಅಲ್ಲದೆ, ಕ್ರಿ.ಪೂ. ಸುಮಾರು 7ನೆಯ ಶತಮಾನದಿಂದಲೇ ಆರಂಭವಾಗುವ ಶಾಸನಸಂಪತ್ತೂ ಅಖಮೇನಿಯನ್ನರ ಕಾಲದಿಂದ ಆರಂಭವಾಗುವ ನಾಣ್ಯಗಳೂ ಮುಖ್ಯವಾದವು. ಇಲ್ಲಿನ ಶಾಸನಗಳು ಮೊದ ಮೊದಲು ಎಲಾಮೆಟ್ ಲಿಪಿಯಲ್ಲಿರುತ್ತಿದ್ದವು. ಅಖಮೇನಿಯನ್ನರ ಕಾಲದವನ್ನು ಪ್ರಾಚೀನ ಇರಾನೀ ಭಾಷೆಯಲ್ಲಿ ಅರಾಮೇಯಿಕ್ ಲಿಪಿಯಲ್ಲಿ ಬರೆಯಲಾಗಿದೆ. ಅಲ್ಲಲ್ಲಿ ಕ್ಯೂನಿಫಾರ್ಮ್ ಎಲಾಮೈಟ್ ಲಿಪಿಗಳನ್ನೂ ಬಳಸುತ್ತಿದ್ದರು. ಸಸ್ಸೇನಿಯನ್ನರ ಕಾಲದ ಶಾಸನಗಳ ಭಾಷೆ ಮತ್ತು ಲಿಪಿಪಹ್ಲವಿ. ಮುಸಲ್ಮಾನ ಅರಸರ ಕಾಲದ ಶಾಸನಗಳು ಕುಫಿಕ್, ನಸ್ಬ್ ಮುಂತಾದ ಲಿಪಿಗಳಲ್ಲಿ ಅರಾಬಿಕ್-ಪರ್ಷಿಯನ್ ಭಾಷೆಯಲ್ಲಿವೆ.

ಅಖಮೇನಿಯನ್ ಸಾಮ್ರಾಜ್ಯ[ಬದಲಾಯಿಸಿ]

ಅಖಮೇನಿಯನ್ ಸಾಮ್ರಾಜ್ಯ ಕಾಲದಲ್ಲಿ ಬಳಕೆಯಲ್ಲಿದ್ದ ನಾಣ್ಯಗಳು ಬಹು ಸಾಮಾನ್ಯ ತರದವು. ಅಲೆಕ್ಸಾಂಡರನ ದಂಡಯಾತ್ರೆಯ ಅನಂತರ ಇರಾನಿನಲ್ಲಿ ಗ್ರೀಕ್-ರೋಮನ್ ಮಾದರಿಯ ನಾಣ್ಯಗಳು ಕಲಾತ್ಮಕ ಕೃತಿಗಳೆನ್ನಬಹುದು. ಇವುಗಳಲ್ಲಿ ಸಾಮಾನ್ಯವಾಗಿ ರಾಜನ ಭಾವಚಿತ್ರವೂ, ಅವನ ಹೆಸರು ಮುಂತಾದ ವಿವರಗಳೂ ಇರುತ್ತವೆ. ಮುಸಲ್ಮಾನ ಅರಸರ ನಾಣ್ಯಗಳಲ್ಲಿ ಸಾಮಾನ್ಯವಾಗಿ ಕೇವಲ ಲಿಪಿ ಮಾತ್ರ ಇರುತ್ತದೆ.ಪ್ರಾಚೀನ, ಅರ್ವಾಚೀನ ಇತಿಹಾಸ: ಆರ್ಯರ ಭಾಷೆಯನ್ನಾಡುತ್ತಿದ್ದ ಶ್ವೇತವರ್ಣದ ಜನರ ಒಂದು ಪಂಗಡ ಕ್ರಿ.ಪೂ. 2500ರ ಸುಮಾರಿಗೆ ಮಧ್ಯ ಏಷ್ಯದಿಂದ ಹೊರಟು ಪರ್ಷಿಯನ್ ಕೊಲ್ಲಿಯ ಹತ್ತಿರ ನೆಲೆಸಿತು ಎಂದು ನಂಬಲಾಗಿದೆ. ಇರಾನ್ ಎಂಬುದು ಆರ್ಯ ಶಬ್ದದ ಪರ್ಯಾಯ ರೂಪ. ಆರ್ಯಭಾಷಿಗಳಾದ ಈ ಪರ್ಷಿಯನ್ನರು, ಆಸ್ಸೀರಿಯ ಸಾಮ್ರಾಜ್ಯ ನಾಶವಾದ ಮೇಲೆ ಕ್ರಿ.ಪೂ. ಆರನೆಯ ಶತಮಾನದಲ್ಲಿ ಕೈರಸನ ನಾಯಕತ್ವದಲ್ಲಿ ಅಕೆಮೆನಿಡ್ ಸಾಮ್ರಾಜ್ಯವನ್ನು ಕಟ್ಟಿದರು. ಇಲ್ಲಿಂದ ಮುಂದೆ ಒಂದಾದ ಮೇಲೊಂದರಂತೆ ಅನೇಕ ಸಾಮ್ರಾಜ್ಯಗಳು ಇಲ್ಲಿ ಬೆಳೆದು ಆಳಿದವು. (ನೋಡಿ- ಪರ್ಷಿಯ)

ಅರಬ್ ಮುಸ್ಲಿಮರ ಆಕ್ರಮಣ[ಬದಲಾಯಿಸಿ]

ಏಳನೆಯ ಶತಮಾನದಲ್ಲಾದ ಅರಬ್ ಮುಸ್ಲಿಮರ ಆಕ್ರಮಣ ಇರಾನಿನ ಸ್ವರೂಪವನ್ನೇ ಬದಲಾಯಿಸಿತು. ಅರಬ್ ಸಾಮ್ರಾಜ್ಯ ತನ್ನೊಂದಿಗೆ ಶಕ್ತಿ ಹಾಗು ಧಾರ್ಮಿಕ ಭಾವನೆ ತಂದಿತು. ಅರಬ್ಬೀ ರಾಜ್ಯಭಾಷೆಯಾಯಿತು. ಅನೇಕ ಪರ್ಷಿಯನ್ನರು ಅಬು ಮುಸ್ಲಿಮರಾದರು. ಇದೇ ಕಾಲಕ್ಕೆ ಎಷ್ಟೋ ಜನ ಇರಾನಿಯನ್ನರು ತಮ್ಮ ಜರತುಷ್ಟ್ರ ಧರ್ಮ ಉಳಿಸಿಕೊಳ್ಳಲು ದೇಶವನ್ನು ತ್ಯಜಿಸಬೇಕಾಯಿತು. ಅವರು ಬೇರೆಡೆ ಬಂದು ನೆಲೆಸಿದರು. ಅವರ ವಂಶದವರನ್ನು ನಾವು ಭಾರತದಲ್ಲಿ ಇಂದಿಗೂ ಕಾಣಬಹುದು. ಅವರೇ ಪಾರ್ಸಿಗಳು (ನೋಡಿ- ಪಾರ್ಸಿಗಳು). ಕೆಲವರು ಅಲ್ಲಿಯೇ ಇದ್ದುಕೊಂಡು ಗುಪ್ತರೂಪದಿಂದ ಜರತುಷ್ಟ್ರ ಧರ್ಮ ಅನುಸರಿಸುತ್ತಿದ್ದರು. ಅವರ ವಂಶಜರು ಇರಾನಿನ ಯಜ್ಞ ಹಾಗೂ ಕಿರಮಾನ ಪ್ರದೇಶದಲ್ಲಿ ಇಂದಿಗೂ ಇದ್ದಾರೆ. ಅರಬರು ಇರಾನನ್ನು ಗೆದ್ದು ಕಲೀಫನ ವಶಕ್ಕೆ ಕೊಟ್ಟರು.1614ರಿಂದ ಬ್ರಿಟಿಷರು ಇರಾನಿನೊಂದಿಗೆ ವ್ಯಾಪಾರ ಆರಂಭಿಸಿದರು. ಹಾಲೆಂಡ್ ಹಾಗೂ ರಷ್ಯದೊಂದಿಗೆ ವ್ಯಾಪಾರ ಸಂಬಂಧಗಳು ಸ್ಥಾಪಿಸಲ್ಪಟ್ಟವು. ಈ ವ್ಯಾಪಾರದಿಂದಾಗಿ ಇರಾನ್ ಅಭಿವೃದ್ಧಿ ಹೊಂದಿತು. ಆದರೆ ದೇಶ ಕೂಟನೀತಿಯ ಕೇಂದ್ರವಾಯಿತು. ಪದೇ ಪದೇ ಆಫ್ಟನರ ಹಾಗೂ ರಷ್ಯನರ ಆಕ್ರಮಣಕ್ಕೊಳಗಾಯಿತು. ಇರಾನ್ ಬ್ರಿಟಿಷರ ಹಾಗೂ ರಷ್ಯನರ ನೆಲೆಯಾಯಿತು. ನಿರಂಕುಶ ಶಾಸನದ ವಿರುದ್ಧ ಅಸಂತೋಷ ಹೆಚ್ಚಾಗಿ ವಿದ್ರೋಹ ಚಟುವಟಿಕೆಗಳು ಆರಂಭವಾದವು. ಶಫವಿದ್ ಮನೆತನದ ಕೊನೆಯ ಅರಸ ಕರೀಮಖಾನ್ ಝೆಂಡ್ 1750ರಿಂದ 1779ರವರೆಗೆ ಆಳಿದ. ಅನಂತರ ತುರ್ಕಿ ಜಾತಿಯ ಕ್ವಾಜರರ ಆಡಳಿತ 1834ರವರೆಗೆ ನಡೆಯಿತು. ಈ ಕಾಲದಲ್ಲಿ ರಷ್ಯನರು ಇರಾನಿನಲ್ಲಿ ತಮ್ಮ ಬಲವನ್ನು ಹೆಚ್ಚಿಸಿಕೊಂಡರು. ರಷ್ಯ ಪರ ಮೊಹಮ್ಮದ್ ಷಾ 1834ರಲ್ಲಿ ಪಟ್ಟಕ್ಕೆ ಬಂದ. ಅನಂತರ ಬ್ರಿಟಿಷರು ತಮ್ಮ ಶಕ್ತಿಯನ್ನು ಬೆಳೆಸಿಕೊಂಡರು. ಷಾನ್ ನಿರುಂಕುಶ ಪ್ರಭುತ್ವ 1896ರಲ್ಲಿ ಕೊನೆಗೊಂಡಿತು. 1905ರಲ್ಲಿ ಅಶಾಂತಿ ತಲೆದೋರಿ ಮಧ್ಯಮ ವರ್ಗದವರು ದಂಗೆಯೆದ್ದರು.

ಷಾ ಮಜಲಿಸ್ ಪಾರ್ಲಿಮೆಂಟ್[ಬದಲಾಯಿಸಿ]

1906gಲ್ಲಿ ಷಾ ಮಜಲಿಸ್ (ಪಾರ್ಲಿಮೆಂಟ್) ರಚಿಸಲು ಸಮ್ಮತಿಸಿ, ಅದರಿಂದ ರಚಿತವಾದ ಸಂವಿಧಾನಕ್ಕೆ ಅಂಕಿತ ಹಾಕಿದ. 1908ರಲ್ಲಿ ತೈಲ ಶೋಧವಾದಂದಿನಿಂದ, ಒಡೆತನಕ್ಕಾಗಿ ಆಂಗ್ಲೋ ರಷ್ಯನರ ಕಚ್ಚಾಟ ಹೆಚ್ಚಿತು. ಆರ್ಥಿಕ ಬಿಕ್ಕಟ್ಟೂ ತಲೆದೋರಿತು. ಪ್ರಥಮ ಜಾಗತಿಕ ಯುದ್ಧದ ಕಾಲಕ್ಕೆ ಪರ್ಷಿಯ ತಟಸ್ಥವಾಗಿ ಕಂಡರೂ ದೇಶದಲ್ಲಿ ಗುಪ್ತ ಚಟುವಟಿಕೆಗಳು ನಡೆದವು. ದೇಶದಲ್ಲಿ ಅಸ್ಥಿರ ಪರಿಸ್ಥಿತಿ ಏರ್ಪಟ್ಟಿತು. ಬ್ರಿಟನ್ ಸುಧಾರಣೆ ಕೈಕೊಳ್ಳಲು ಪ್ರಯತ್ನಿಸಿ ವಿಫಲಗೊಂಡಿತು. 1921ರಲ್ಲಿ ರೇಜ್ಹಾನನ ನೇತೃತ್ವದಲ್ಲಿ ನಡೆದ ದಂಗೆಯಿಂದ ಸೈನ್ಯ ಪ್ರಭುತ್ವ ಸ್ಥಾಪಿತವಾಯಿತು. 1923ರಲ್ಲಿ ಆತ ಪ್ರಧಾನ ಮಂತ್ರಿಯಾದ. 1925ರಲ್ಲಿ ಷಾನನ್ನು ಉರುಳಿಸಿ ತಾನೇ ರೇಜ್ಹಾಪಹ್ಲವಿ ಎಂಬ ಹೆಸರಿನಲ್ಲಿ ಅರಸನೆಂದು ಘೋಷಿಸಿಕೊಂಡ. ದೇಶದಲ್ಲಿ ಅನೇಕ ಸುಧಾರಣೆಗಳನ್ನು ಕೈಕೊಂಡು ಸುಭದ್ರ ಕೇಂದ್ರ ಸರ್ಕಾರವನ್ನು ಸ್ಥಾಪಿಸಿದ. ಆತ ದೇಶವನ್ನು ಆಧುನಿಕಗೊಳಿಸಲು ಪ್ರಯತ್ನಿಸಿದ. 1835ರಲ್ಲಿ ದೇಶದ ಹೆಸರನ್ನು ಪರ್ಷಿಭುದ ಬದಲಾಗಿ ಇರಾನ್ ಎಂದು ನಾಮಕರಣ ಮಾಡಿದ. ಅದೇ ವರ್ಷ ತೆಹರಾನ್ ವಿಶ್ವವಿದ್ಯಾನಿಲಯವನ್ನೂ ತೆರೆಯಲಾಯಿತು. 1937ರಲ್ಲಿ ಮಹಿಳೆಯರಿಗೆ ಪರದೆ ಇಲ್ಲದೆ ಓಡಾಡುವ ಅವಕಾಶ ಕಲ್ಪಿಸಲಾಯಿತು ಹಾಗೂ 1938ರಲ್ಲಿ ಪ್ರಥಮವಾಗಿ ರೈಲು ಮಾರ್ಗ ರಚಿಸಲಾಯಿತು.

ದ್ವಿತೀಯ ಮಹಾಯುದ್ಧ ಮತ್ತು ನಂತರದ ಸುಧಾರಣೆಗಳು[ಬದಲಾಯಿಸಿ]

ದ್ವಿತೀಯ ಮಹಾಯುದ್ಧದ ಕಾಲಕ್ಕೆ ಇರಾನ್ ಜರ್ಮನಿಯೊಂದಿಗೆ ಹೊಂದಿದ್ದ ಮಿತ್ರತ್ವದಿಂದಾಗಿ ಬ್ರಿಟಿಷರು ಹಾಗೂ ಸೋವಿಯತರು ಅದನ್ನು ಆಕ್ರಮಿಸಿದರು. ಅರಸ ರಾಜ್ಯವನ್ನು ಮಗ ಮೊಹಮದ್ ರೇಜ್ಹಾ ಷಾಗೆ ಬಿಟ್ಟು ಕೊಟ್ಟ; ಅದಕ್ಕೆ ಬ್ರಿಟಿಷರ ಹಾಗೂ ರಷ್ಯನ್ನರ ಒತ್ತಾಯವೇ ಕಾರಣ. ಯುದ್ಧ ಮುಗಿದ ಮೇಲೆ ರಷ್ಯ ಇರಾನಿನ ಉತ್ತರ ಭಾಗದ ಮೇಲೆ ತನ್ನ ಅಧಿಕಾರ ಬೆಳೆಸಿತು. ಅನಂತರ ವಿಶ್ವಸಂಸ್ಥೆಯ ಒತ್ತಾಯದಿಂದ ಸೋವಿಯತ್ ಒಕ್ಕೂಟ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿತು. ಈ ಮಧ್ಯೆ ದೇಶದಲ್ಲಿ ರಾಷ್ಟ್ರೀಯ ಭಾವನೆ ಬಲಗೊಂಡಿತು. ಜನ ಸರ್ಕಾರದಲ್ಲಿ ಅತೃಪ್ತಿ ವ್ಯಕ್ತಪಡಿಸಿದರು. ಇದರಿಂದಾಗಿ 1949ರಲ್ಲಿ ಇರಾನಿನ ಮಜಲಿಸ್ ಪುನಃ ಸ್ಥಾಪಿತವಾಗಿ ಚುನಾವಣೆಯ ಅನಂತರ ತನ್ನ ಕಾರ್ಯಾರಂಭಗೊಳಿಸಿತು. ಡಾ. ಮುಸಾದಿಕ್ ಪ್ರಧಾನ ಮಂತ್ರಿತ್ವ ವಹಿಸಿಕೊಂಡ. 1952ರಲ್ಲಿ ಆಂಗ್ಲೋ-ಇರಾನಿಯನ್ ಆಯಿಲ್ ಕಂಪನಿಯನ್ನು ರಾಷ್ಟ್ರೀಕರಣಗೊಳಿಸಿದ. ಅದೊಂದು ಅಂತರರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿತು. ಸಂಯುಕ್ತ ರಾಷ್ಟ್ರ ಸಂಘದಲ್ಲೂ ಈ ಸಮಸ್ಯೆ ಬಗೆಹರಿಯಲಿಲ್ಲ. ಇದರಿಂದ ಇರಾನಿನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತು. ಮುಸಾದಿಕ್‍ನ ಬದಲಾಗಿ ಫಜಲುಲ್ಲಾ ಜಾಹೆದಿಯನ್ನು ಪ್ರಧಾನ ಮಂತ್ರಿಯನ್ನಾಗಿ ಷಾ ನೇಮಿಸಿದರು. ಅದೇ ವರ್ಷ ಎಂಟು ಯೂರೋಪಿಯನ್ ಕಂಪನಿಗಳೊಂದಿಗೆ ಒಪ್ಪಂದವೊಂದರ ಮೂಲಕ ತೈಲ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಯಿತು. ಅನಂತರ ಷಾ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಲಾರಂಭಿಸಿದರು. ಷಾರ ಇಚ್ಛೆಯ ಮೇರೆಗೆ ದ್ವಿಪಕ್ಷ ಪ್ರಜಾಪ್ರಭುತ್ವ ಸರ್ಕಾರ ರಚಿಸಲು ನಿರ್ಧರಿಸಲಾಯಿತು. ಜನತಾ ಪಕ್ಷ ಹಾಗೂ ರಾಷ್ಟ್ರೀಯ ಪಕ್ಷಗಳು ರಚಿತವಾದವು. 1960ರಲ್ಲಿ ಚುನಾವಣೆ ನಡೆಯಿತು. ಆದರೆ ಈ ಸರ್ಕಾರ ಪದ್ಧತಿ ಅಷ್ಟೊಂದು ಯಶಸ್ಸು ಪಡೆಯಲಿಲ್ಲ.1961ರಲ್ಲಿ ಷಾ ದೇಶದಲ್ಲಿ ಕ್ರಾಂತಿಕಾರಿ ಸುಧಾರಣೆಗಳನ್ನು ಕೈಕೊಳ್ಳಲು ನಿರ್ಧರಿಸಿದರು. ಊಳಿಗಮಾನ್ಯ ಪದ್ಧತಿಯ ಅಂತ್ಯ, ಗುಲಾಮಗಿರಿ ಪದ್ಧತಿಯ ರದ್ದು, ಚುನಾವಣೆ ಹಾಗೂ ಆಡಳಿತ ಕ್ರಮದಲ್ಲಿ ಸುಧಾರಣೆ, ಕಾರ್ಮಿಕರಿಗೆ ಆದಾಯದಲ್ಲಿ ಪಾಲು - ಇವು ಆ ಯೋಜನೆಯ ಮುಖ್ಯ ಗುರಿಗಳು. 1963ರಲ್ಲಿ ಮಹಿಳೆಯರಿಗೆ ಮತನೀಡುವ ಹಕ್ಕು ಕೊಡಲಾಯಿತು. ಅಕ್ಟೋಬರ್ 26, 1967ರಂದು ನಡೆದ ಕಿರೀಟಧಾರಣಾ ಸಮಾರಂಭದಲ್ಲಿ ಮಹಮ್ಮದ್ ರೇಜಾó ಷಾ ಪಹ್ಲೆವಿ ಹಾಗೂ ಅವನ ರಾಣಿ ಫರಾಗೆ ಕಿರೀಟ ಧಾರಣೆಯಾಯಿತು.

೨೦೧೯- ೨೦೨೦ ರ ಇರಾನ್ ಯು.ಎಸ್.ಎ ಘರ್ಷಣೆ ಮತ್ತು ಕಾರಣಗಳು[ಬದಲಾಯಿಸಿ]

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಮಾಹಿತಿ ಬ್ಲಾಗ್[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "ಕಣಜ:ಇರಾನಿನ ಇತಿಹಾಸ". Archived from the original on 2013-01-01. Retrieved 2016-10-21.