ಇಂಪಾಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಪಾಲ ಒಂದು ಸ್ತನಿ.ಪಾಲ ಅಥವಾ ಪಲ್ಲ ಎಂದೂ ಕರೆಯುತ್ತಾರೆ. ಇದು ಆರ್ಟಿಯೋಡ್ಯಾಕ್ಟೈಲ ವರ್ಗದ ಬೋವಿಡೆ ಕುಟುಂಬಕ್ಕೆ ಸೇರಿದೆ. ಪ್ರಾಣಿಶಾಸ್ತ್ರದಲ್ಲಿ ಇದನ್ನು ಈಪೈಸಿರೋಸ್ ಮೆಲಾಂಪಸ್ ಎಂದು ಕರೆಯುತ್ತಾರೆ. ಇದೊಂದು ಅತ್ಯಾಕರ್ಷಕ ಪ್ರಾಣಿ.

ವಾಸುಸ್ಥಳ[ಬದಲಾಯಿಸಿ]

ಕೆಲವು ವೇಳೆ ದಟ್ಟವಾದ ಅಡವಿ ಪ್ರದೇಶಗಳಲ್ಲಿ ಕಂಡುಬಂದರೂ ಇದರ ವಾಸ ಮಾತ್ರ ಉಪವನಗಳಂತಿರುವ ಪ್ರದೇಶಗಳಲ್ಲಿ, ನೀರಿರುವ ಸ್ಥಳಗಳ ಸಮೀಪದಲ್ಲಿ ವನ್ಯಪ್ರದೇಶಗಳ ಬಯಲುಗಳಲ್ಲಿ ಮೇಯಲು ಬರುವುದು. ಬಿಸಿಲ ಝಳ ಹೆಚ್ಚಾದಾಗ ಇದು ಮರದ ನೆರಳಿಗೆ ಬಂದು ಅಲ್ಲಿ ಮಲಗಿ ವಿಶ್ರಮಿಸಿಕೊಳ್ಳುತ್ತದೆ. ಇಂಪಾಲ ಒಳ್ಳೆ ಸಂಚಾರಿ. ಸಾಮಾನ್ಯವಾಗಿ ನದಿಗಳ ಜಾಡನ್ನೇ ಅನುಸರಿಸಿಕೊಂಡು ಅಲೆದಾಡುವ ಸ್ವಭಾವ. ಇದರ ಹಿಂಡು ಗಾಬರಿಗೊಂಡಾಗ ಈ ಪ್ರಾಣಿಗಳು ಪೊದೆಗಳು ಮತ್ತು ಬಂಡೆಗಳನ್ನು ಲೀಲಾಜಾಲವಾಗಿ ದೊಡ್ಡ ಜಿಗಿತಗಳಿಂದ ವೇಗವಾಗಿ ಕ್ರಮಿಸಿ ಯಾವ ತೊಂದರೆಯೂ ಇಲ್ಲದೆ ಕಾಡಿನ ನಿರ್ಜನ ಪ್ರದೇಶವನ್ನು ಸೇರಿಕೊಂಡು ಅಲ್ಲಿ ಸುಧಾರಿಸಿಕೊಳ್ಳುತ್ತವೆ.

ಗುಣಲಕ್ಷ್ಣಗಳು[ಬದಲಾಯಿಸಿ]

ಅತಿ ವೇಗವಾಗಿ ಓಡುತ್ತಿರುವಾಗ, ಆಕರ್ಷಕವಾಗಿ ಓಲಾಡುತ್ತ ಗಾಳಿಯಲ್ಲಿ ತೇಲಿ ಹೋಗುತ್ತಿರುವುದೋ ಎಂದು ಭಾಸವಾಗುವಂತೆ ಜಿಗಿಯುವುದು ಸ್ವಭಾವ. ಆದರೆ ಇದು ಸ್ವಲ್ಪ ದೂರವನ್ನು ಮಾತ್ರ ಅತಿ ವೇಗವಾಗಿ ಓಡಬಲ್ಲುದು. ಹಾಗೆ ಮಾಡುವಾಗ ಪೊದೆ ಮತ್ತು ಬಂಡೆಗಳನ್ನು ಗಮನಿಸದೆ ಅನೇಕ ವೇಳೆ ತನ್ನ ಜೊತೆಯವುಗಳ ಮೇಲೂ ಹಾರಿ ಓಡಿಹೋಗುತ್ತದೆ. ಇದು ಒಂದು ಜಿಗಿತಕ್ಕೆ ಸುಮಾರು ೧೧ ಮೀ. ದೂರ ಹಾರಿದ್ದನ್ನು ನೋಡಿದವರು ಇದ್ದಾರೆ. ೨ ಮೀ ಎತ್ತರದ ಕಂಬಿ ಬೇಲಿಯನ್ನು ಲಘುವಾಗಿ ನೆಗೆಯಬಲ್ಲುದೆಂಬುದು ತಿಳಿದಿದೆ. ಇಂಪಾಲಗಳು ಸಂಘ ಜೀವಿಗಳಾದರೂ ಸಾಮಾನ್ಯವಾಗಿ ಒಂದು ಹಿಂಡಿನಲ್ಲಿ ೫೦ ಪ್ರಾಣಿಗಳಿಗಿಂತ ಹೆಚ್ಚಾಗಿರುವುದಿಲ್ಲ. ಚಳಿಗಾಲದಲ್ಲಿ ಗಂಡು ಹೆಣ್ಣುಗಳೆರಡೂ ಜೊತೆಯಾಗಿ ಜೀವಿಸುತ್ತವೆ. ಈ ಕಾಲದಲ್ಲಿ ಹಿಂಡಿನ ಪ್ರಮಾಣ ದೊಡ್ಡದು. ಆದರೆ ಬೇಸಗೆ ಕಾಲದಲ್ಲಿ ಇವು ಹುಲ್ಲುಗಾವಲುಗಳಲ್ಲಿ ಮೇಯಲು ಹೊರಟಾಗ ಹಿಂಡುಗಳು ಸಣ್ಣವಾಗಿದ್ದು ಪ್ರತಿಯೊಂದು ಹಿಂಡಿನಲ್ಲೂ ವಯಸ್ಸಿಗೆ ಬಂದ ಒಂದು ಗಂಡು ೧೫ ಅಥವಾ ೨೦ ಹೆಣ್ಣುಗಳ ಜೊತೆಗೂಡಿ ಸಂಚರಿಸುವುದು ಕಂಡುಬರುತ್ತದೆ. ಆಗಾಗ್ಗೆ ಪ್ರಾಯಕ್ಕೆ ಬಂದ ಗಂಡು ಇಂಪಾಲ ತನ್ನ ಹೆಣ್ಣು ಸಂಗಾತಿಗಳಿಗೋಸ್ಕರ ಹೋರಾಡಬೇಕಾಗುತ್ತದೆ. ಹರೆಯದ ಗಂಡು ವಯಸ್ಸಾದ ಇಂಪಾಲಗಳೊಡನೆ ಸೆಣಸಿ ಗೆಲ್ಲಬಲ್ಲುದು.

ರೂಪ ಮತ್ತು ವಿವರಣೆ[ಬದಲಾಯಿಸಿ]

ಇಂಪಾಲದ ಮೈಬಣ್ಣ ಮೇಲ್ಭಾಗದಲ್ಲಿ ಕಂದು ಮಿಶ್ರಿತ ಕೆಂಪು; ಕೆಳಭಾಗದಲ್ಲಿ ಬೆಳ್ಳಗೆ. ವಯಸ್ಸಿಗೆ ಬಂದ ಇಂಪಾಲಗಳಿಗೆ ಮಾತ್ರ ಸುರುಳಿ ಸುತ್ತಿದ ಉಂಗುರಗಳಿಂದಾದ ಎರಡು ಕೊಂಬುಗಳಿರುತ್ತವೆ. ಕೊಂಬುಗಳ ಉದ್ದ ೧೪”-೨೦”. ಇಂಪಾಲದ ಎತ್ತರ ಭುಜಮಟ್ಟಕ್ಕೆ ಸುಮಾರು 3. ಭಾರ ಸುಮಾರು 72 ಕೆ.ಜಿ. ಇವುಗಳ ಮೂಲಸ್ಥಾನಗಳಾದ ಕೀನ್ಯ ಮತ್ತು ಟ್ಯಾಂಗನೀಕ ಪ್ರದೇಶಗಳಲ್ಲಿ ಇಂದಿಗೂ ಕಂಡುಬರುತ್ತವೆ. ಇಂಪಾಲ ಜಾತಿಯ ಮತ್ತೊಂದು ಪ್ರಭೇದ (ಈಪೈಸಿರೋಸ್ ಪೆಟರ್ಸಿ) ಆಫ್ರಿಕದ ನೈಋತ್ಯ ಪ್ರದೇಶದಲ್ಲಿ ಮತ್ತು ಅಂಗೋಲದ ವನ್ಯ ಬಯಲುಗಳಲ್ಲಿ ಇವೆ.

ಉಲ್ಲೇಖ[ಬದಲಾಯಿಸಿ]

[೧]

  1. http://telugu.bharatavani.in/dictionary-surf/?did=25&letter=%E0%B2%87&start=40&language=English[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಇಂಪಾಲ&oldid=1128831" ಇಂದ ಪಡೆಯಲ್ಪಟ್ಟಿದೆ