ಇಂಡೋ - ಬ್ರಹ್ಮ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಮಾರು ಎರಡು ಕೋಟಿ ವರ್ಷಗಳ ಹಿಂದೆ (ಮಯೋಸೀನ್ ಯುಗ) ಹಿಮಾಲಯ ತಪ್ಪಲಿನಲ್ಲಿ ಹುಟ್ಟಿ ಹರಿಯುತ್ತಿತ್ತೆಂದು ನಂಬಲಾದ ಒಂದು [ಮಹಾನದಿ]. ಭಾರತ ದೇಶದ ಭೂವೈಜ್ಞಾನಿಕ ಸರ್ವೇ ಸಂಸ್ಥೆಯಲ್ಲ್ಲಿ ಅಧಿಕಾರಿಯಾಗಿದ್ದ ಇ.ಎಚ್. ಪ್ಯಾಸ್ಕೊ ಇದರ ಗತಿ, ಪಥಗಳನ್ನು ಸಂಶೋಧಿಸಿ ಈ ಹೆಸರು ಕೊಟ್ಟ. ಈಗಿನ ಬ್ರಹ್ಮಪುತ್ರ ನದಿ ಭಾರತ ದೇಶವನ್ನು ಅಸ್ಸಾಮಿನಲ್ಲಿ ಪ್ರವೇಶಿಸುವ ಪ್ರಾಂತ್ಯದಲ್ಲಿ ಇಂಡೋ-ಬ್ರಹ್ಮ ನದಿ ಹುಟ್ಟಿತೆಂದು ಆತನ ಅಭಿಪ್ರಾಯ.[೧] ಅದರ ಸಮರ್ಥನೆ ಹೀಗಿದೆ: ಆ ಕಾಲದಲ್ಲಿ ಹಿಮಾಲಯ ಪರ್ವತ ಶ್ರೇಣಿಗಳ ದಕ್ಷಿಣ ಭಾಗದ ಅಂಚಿನಲ್ಲಿ 4,000 ಕಿ.ಮೀ. ಉದ್ದವಾದ ಒಂದು ಆಳವಾದ ಕಣಿವೆ ಇತ್ತು. ಇಂಡೋ-ಬ್ರಹ್ಮ ನದಿ ಈ ಕಣಿವೆಯಲ್ಲಿ ಪಶ್ಚಿಮಾಭಿಮುಖವಾಗಿ ಡೆಹರಾಡೂನ್‍ವರೆಗೆ ಒಂದು ಸಾವಿರ ಮೈಲು ಪ್ರವಹಿಸಿ ಅಲ್ಲಿಂದ ವಾಯವ್ಯಕ್ಕೆ ತಿರುಗಿ ಪಾಕಿಸ್ತಾನದಲ್ಲಿರುವ ಮರ್ರೀಯ ಮಾರ್ಗವಾಗಿ ಅಟಾಕನ್ನು ಸೇರಿ ಅಲ್ಲಿ ಸಿಂಧೂನದಿಯನ್ನು ಉಪನದಿಯಾಗಿ ಪಡೆದು ದಕ್ಷಿಣಕ್ಕೆ ತಿರುಗಿ ಸಿಂಧ್ ಪ್ರಾಂತದ ಹತ್ತಿರ ಅರಬ್ಬೀ ಸಮುದ್ರವನ್ನು ಸೇರುತ್ತಿತ್ತು. ಗಂಗಾ, ಯಮುನಾ, ಸರಸ್ವತೀ, ಪಂಜಾಬಿನ ಪಂಚನದಿಗಳು ಮತ್ತು ಸಿಂಧೂ ಇದರ ಇತರ ಉಪನದಿಗಳು. ಭಾರತದ ಉತ್ತರ ಪ್ರದೇಶದಲ್ಲಿ ಇಂಡೋ-ಬ್ರಹ್ಮ ನದಿ ಸುಮಾರು 15 ಲಕ್ಷ ವರ್ಷಗಳ ಕಾಲ ಬಹಳ ಪ್ರಬಲವಾದ ನದಿಯಾಗಿತ್ತು. ಆದರೆ ಪರಿಸ್ಥಿತಿ ಹೀಗೆಯೇ ಉಳಿಯಲಿಲ್ಲ. ಸುಮಾರು 5 ಲಕ್ಷ ವರ್ಷಗಳ ಹಿಂದೆ ಹಿಮಾಲಯ ಪ್ರದೇಶದಲ್ಲಿ ತಲೆದೋರಿದ ಭೂಕಂಪಗಳ ಪರಿಣಾಮವಾಗಿ ಇಂಡೋ-ಬ್ರಹ್ಮ ನದಿಯ ಕಣಿವೆಯ ಒಂದು ಭಾಗ ಉಬ್ಬಿ ಎತ್ತರವಾಯಿತು. ನದಿಯ ಗತಿ, ಚಲನೆ, ಉಪನದಿಗಳ ಅಸ್ತಿತ್ವ-ಇವು ಕುಂಠಿತಗೊಂಡುವು. ಗಂಗಾ ಮತ್ತು ಯಮುನಾ ನದಿಗಳು ಮೂಲ ನದಿಯನ್ನು ಸೇರದೆ ಅದನ್ನು ಭೇದಿಸಿಕೊಂಡು ಪೂರ್ವಾಭಿಮುಖವಾಗಿ ಇಳಿಜಾರಾಗಿರುವ ಪೂರ್ವ ಪ್ರದೇಶವನ್ನು ಹೊಕ್ಕು ಬಂಗಾಳ ಕೊಲ್ಲಿಯನ್ನು ಸೇರಿದವು. ಸರಸ್ವತೀ ನದಿ ರಾಜಾಸ್ತಾನದ ಮೂಲಕ ಪ್ರವಹಿಸಿ, ಕಚ್ ಪ್ರದೇಶದ ಹತ್ತಿರ ಅರಬ್ಬೀ ಸಮುದ್ರವನ್ನು ಸೇರಿತು. ಸಿಂಧೂ ನದಿ ಪ್ರಬಲವಾಗಿ ಇಂಡೋ-ಬ್ರಹ್ಮದ ಮಾರ್ಗವಾಗಿ ಹರಿಯುವ ಮೂಲನದಿಯಾಯಿತು. ಪಂಚನದಿಗಳು ಸಿಂಧೂವಿನ ಉಪನದಿಗಳಾದವು. ಇದರಿಂದ ಇಂಡೋ-ಬ್ರಹ್ಮನದಿಯ ಪಶ್ಚಿಮ ಭಾಗ ನೀರಿಲ್ಲದೆ ಸಿಂಧೂನದಿಗೆ ಉಪನದಿಯಾಗಬೇಕಾಯಿತು. ಈಗ ಆ ಇಂಡೋ-ಬ್ರಹ್ಮದ ಭಾಗ ಪಾಕಿಸ್ತಾನದಲ್ಲಿ ಸೋಹನ್ ಎಂಬ ಹೆಸರಿನಿಂದ ಸಿಂಧೂವಿನ ಉಪನದಿಯಾಗಿದೆ. ಕೆಲವು ಸಾವಿರ ವರ್ಷಗಳ ಹಿಂದೆ ಯಮುನಾ ನದಿ ಪಕ್ಕದಲ್ಲಿದ್ದ ಸರಸ್ವತೀ ನದಿಯ ಕೆಲವು ನೀವರಾರಿ ಭಾಗಗಳನ್ನು ಆಕ್ರಮಿಸಿಕೊಂಡಿತು. ಇದರಿಂದ ಚಲನಶಕ್ತಿ ಕಡಿಮೆಯಾದ ಸರಸ್ವತೀ ನದಿ ಸಮುದ್ರವನ್ನು ಸೇರದೆ ರಾಜಾಸ್ಥಾನದಲ್ಲಿರುವ ಪುಷ್ಕರವೆಂಬ ಸರೋವರದವರೆಗೂ ಪ್ರವಹಿಸಿ ಭೂಮಿಯಲ್ಲಿ ಇಂಗಿಹೋಯಿತು. ಇದರ ಮೂಲ ಭಾಗ ಈಗ ದೆಹಲಿಯ ಉತ್ತರ ಭಾಗದಲ್ಲಿ ಘಘರ್ ಎಂಬ ಹೆಸರಿನಿಂದ ಚಿಕ್ಕನದಿಯಾಗಿದೆ. ಯಮುನಾ ನದಿ ಸರಸ್ವತಿಯ ಒಂದು ಭಾಗವನ್ನು ಮೂಲದಲ್ಲಿ ಆಕ್ರಮಿಸಿದ್ದರಿಂದ ಜನ ಅಲಹಾಬಾದಿನ ತ್ರಿವೇಣೀ ಸಂಗಮದಲ್ಲಿ ಸರಸ್ವತೀ ನದಿಯೂ ಇದೆಯೆಂದು ನಂಬಿದ್ದಾರೆ. ಇಂಡೋ-ಬ್ರಹ್ಮ ನದಿಯ ಅಸ್ತಿತ್ವವನ್ನು ಕುರಿತು ವಿದ್ವಾಂಸರಲ್ಲಿ ಅಭಿಪ್ರಾಯಭೇದವಿದೆ.

ಉಲ್ಲೇಖನಗಳು[ಬದಲಾಯಿಸಿ]

  1. https://en.wikipedia.org/wiki/Brahmaputra_River