ಇಂಡೊನೇಷ್ಯದ ವಾಸ್ತುಶಿಲ್ಪ
ಇಂಡೊನೇಷ್ಯದಲ್ಲಿ ಕ್ರಿಸ್ತಶಕೆಯ ಪ್ರಾರಂಭಕಾಲದಿಂದ ಸುಮಾರು ಹದಿನೈದು ಶತಮಾನದವರೆಗೆ ಭಾರತೀಯ ಸಂಸ್ಕøತಿಯ ಪ್ರಭಾವ ಯಾವರೀತಿ ಹರಡಿದ್ದಿತೆಂಬುದನ್ನು ಇಂಡೊನೇಷ್ಯದ ಚರಿತ್ರೆ ಎಂಬ ಲೇಖನದಲ್ಲಿ ವಿವರಿಸಿದೆ. ಈ ಪ್ರಭಾವ ಅದರ ಚರಿತ್ರೆಯಲ್ಲೇ ಅಲ್ಲದೆ ಆಡಳಿತ ವ್ಯವಸ್ಥೆ, ಸಾಮಾಜಿಕ ಮತ್ತು ಧಾರ್ಮಿಕ ಜೀವನ, ಸಾಹಿತ್ಯ ಮತ್ತು ವಾಸ್ತುಶಿಲ್ಪಕಲೆಗಳಲ್ಲಿ ಪ್ರತಿಬಿಂಬಿತವಾಗಿದೆ. ಅದರಲ್ಲೂ ವಾಸ್ತುಶಿಲ್ಪದಲ್ಲಿ ಈ ಪ್ರಭಾವವನ್ನು ಬಹು ಹೆಚ್ಚಾಗಿ ಕಾಣಬಹುದು. ಭಾರತೀಯ ವಾಸ್ತುಶಿಲ್ಪ ಕಲಾಕಾರರು ಇಂಡೊನೇಷ್ಯದ ವಿವಿಧ ರಾಜ್ಯಗಳಲ್ಲಿ ಭಾರತೀಯ ವಾಸ್ತುಶಿಲ್ಪ ಕೃತಿಗಳನ್ನು ನಿರ್ಮಿಸತೊಡಗಿದರು. ಬಹಳ ಧಾರಾಳವಾಗಿ ಪಲ್ಲವ, ಪಾಲ, ಚಾಲುಕ್ಯ, ಅಮರಾವತಿ ಮುಂತಾದ ವಾಸ್ತುಶಿಲ್ಪ ಶೈಲಿಗಳು ಇಂಡೊನೇಷ್ಯದಲ್ಲಿ ಬಳಕೆಗೆ ಬಂದವು. ಕಾಲಕ್ರಮೇಣ ಸ್ಥಳೀಯ ವೈಶಿಷ್ಟ್ಯಗಳೊಂದಿಗೆ ಮಿಳಿತವಾದ ಭಾರತೀಯ ಕಲಾಕೃತಿಗಳ ಪಂಥ ತಲೆಯೆತ್ತಿತು. ಇದರಲ್ಲಿಯೂ ವಸ್ತು, ಶೈಲಿ, ಮುಂತಾದ ಮುಖ್ಯ ಗುಣಗಳು ಭಾರತೀಯವೇ ಆಗಿದ್ದು, ಸ್ಥಳೀಯ ವೈಶಿಷ್ಟ್ಯಗಳು ಮುಖ್ಯಲಕ್ಷಣಗಳಿಗೆ ಮಾತ್ರ ಮೀಸಲಾಗಿದ್ದವು. ಚಂಡಿ ಮೆಂದುಕ್ನ ಇಲ್ಲವೇ ಬೆಲ್ಹನ್ನ ವಿಷ್ಣು ವಿಗ್ರಹವನ್ನು ಪರೀಕ್ಷಿಸಿದರೆ, ಕಿರೀಟದಿಂದ ಕಾಲಿನವರೆಗೆ ಕಾಣುವ ಎಲ್ಲ ಲಕ್ಷಣಗಳೂ ಭಾರತೀಯವಾಗಿದ್ದು, ಮುಖ ಮಾತ್ರ ಸ್ಥಳೀಯ ಲಕ್ಷಣಗಳಿಗನುಸಾರವಾಗಿರುವುದು ಗಮನ ಸೆಳೆಯುತ್ತದೆ.
ಇತಿಹಾಸ
[ಬದಲಾಯಿಸಿ]ಇಂಡೊನೇಷ್ಯದ ಇತಿಹಾಸದಲ್ಲಿ ಜಾವದ ಪಾತ್ರ ಮುಖ್ಯವಾಗಿದ್ದಂತೆಯೇ ವಾಸ್ತುಶಿಲ್ಪದಲ್ಲಿ ಅದರ ಕೊಡುಗೆ ಮಹತ್ತರವಾದದ್ದು. ಇಲ್ಲಿನ ವಾಸ್ತುಕಲೆಯಲ್ಲಿ ದೇವಾಲಯಗಳೇ ಮುಖ್ಯವಾದವು. ಇವುಗಳಿಗೆ ಚಂಡಿ ಎಂದು ಹೆಸರು. ಜಾವದ ದೇವಾಲಯಗಳು ಸಾಮಾನ್ಯವಾಗಿ ಜಗಲಿ ಅದರ ಮೇಲಿನ ಚೌಕದೇವಾಲಯ ಮತ್ತು ಅದರ ಮೇಲಿರುವ ಶಿಖರವನ್ನೊಳಗೊಂಡಿರುತ್ತವೆ. ಇವುಗಳಲ್ಲಿ ಸ್ಥಂಭಗಳು ಇರುವುದಿಲ್ಲ. ಮಧ್ಯಜಾವದ ದೇವಾಲಯಗಳು ಕ್ರಿ. ಶ. ಎಂಟನೆಯ ಶತಮಾನದಿಂದ ಹನ್ನೆರಡು ಶತಮಾನದವರೆಗೆ ನಿರ್ಮಿತವಾದವು. ಡೀಂಗ್ ಪ್ರಸ್ಥಭೂಮಿಯ ಗುಡ್ಡಗಳಲ್ಲಿ ಅನೇಕ ದೇವಾಲಯಗಳಿವೆ. ಜಾವದಲ್ಲಿ ದೊರಕಿರುವ ದೇವಾಲಯಗಳಲ್ಲಿ ಇವೇ ಅತ್ಯಂತ ಪ್ರಾಚೀನ. ಚಂಡಿ ಭೀಮ, ಚಂಡಿ ಅರ್ಜುನ, ಚಂಡಿ ಪ್ರಂತದೇವ ಇವು ಮುಖ್ಯವಾದವು. ಇವುಗಳು ಸಣ್ಣ ದೇವಾಲಯಗಳಾದರೂ ನೋಡಲು ಸುಂದರವಾಗಿವೆ. ಇವುಗಳಲ್ಲಿ ಗುಪ್ತರ ಕಾಲದ ಶೈಲಿಯ ಪ್ರಭಾವ ಎದ್ದು ಕಾಣುತ್ತದೆ. ಇಲ್ಲಿ ದೊರಕಿರುವ ಶಿಲ್ಪಗಳಲ್ಲಿ ಮುಖ್ಯವಾದುವು ಶಿವ, ದುರ್ಗ, ಗಣೇಶ, ಬ್ರಹ್ಮ, ಮತ್ತು ವಿಷ್ಣು. ಪ್ರಂಬನಸ್ ಎಂಬಲ್ಲಿರುವ ದೇವಾಲಯಗಳು ಮಧ್ಯ ಜಾವದಲ್ಲಿ ಹೆಸರು ಪಡೆದಿವೆ. ಚಂಡಿ ಕಲಶನ್, ಚಂಡಿ ಸಾರಿ, ಚಂಡಿ ಸೇವ್ರ ಇಲ್ಲಿಯ ಮುಖ್ಯ ಕಟ್ಟಡಗಳು. ಬೊರಬೊದೂರನ್ನು ಬಿಟ್ಟರೆ ಚಂಡಿ ಸೇವು ದೇವಾಲಯವೇ ಅತ್ಯಂತ ದೊಡ್ಡದು. ಚಂಡಿ ಸೇವು ದೇವಾಲಯವನ್ನು ಒಂದು ದೇವಾಲಯ ಎನ್ನುವುದಕ್ಕಿಂತ, ದೇವಾಲಯ ಸಮೂಹ ಎನ್ನುವುದೇ ಉಚಿತ. ಏಕೆಂದರೆ ಮಧ್ಯ ದೇವಾಲಯದ ಸುತ್ತಲೂ ಸುಮಾರು ಇನ್ನೂರೈವತ್ತು ಸಣ್ಣ ಸಣ್ಣ ದೇವಾಲಯಗಳಿವೆ. ಮಧ್ಯ ದೇವಾಲಯ ಅತ್ಯಂತ ಎತ್ತರವಾದ ಜಗಲಿಯ ಮೇಲಿದ್ದು ಸುತ್ತಲಿನ ಸಣ್ಣ ದೇವಾಲಯಗಳು, ಇದಕ್ಕಿಂತ ಕಡಿಮೆ ಎತ್ತರದಲ್ಲಿವೆ. ಈ ದೇವಾಲಯಸಮೂಹ ಕ್ರಿ. ಶ. ಒಂಬತ್ತನೆಯ ಶತಮಾನದಲ್ಲಿ ನಿರ್ಮಾಣವಾಯಿತು. ಸುಮಾರು ಇದೇ ಕಾಲದಲ್ಲಿ ನಿರ್ಮಾಣವಾದ ದೇವಾಲಯಗಳನ್ನು ಕೆಡು ಎಂಬಲ್ಲಿ ನೋಡಬಹುದು. ಇವುಗಳಲ್ಲಿ ಮುಖ್ಯವಾದವು ಚಂಡಿ ಮೆಂದುಕ್ ಮತ್ತು ಚಂಡಿ ಪವನ್. ಚಂಡಿ ಮೆಂದುತ್ ಬೌದ್ದ ದೇವಾಲಯ. ಈ ದೇವಾಲಯದ ಗೋಡೆಗಳ ಹೊರಭಾಗ ಒಳಭಾಗಗಳಲ್ಲಿ ಬುದ್ಧನ ಜೀವನಕ್ಕೆ ಸಂಬಂಧಿಸಿದ ಅನೇಕ ಕಥೆಗಳಲ್ಲೂ ಮತ್ತು ಎತ್ತರದ ಬೋಧಿಸತ್ವನ ವಿಗ್ರಹಗಳು ನಿರ್ಮಿತವಾಗಿವೆ. ಕೇಂದ್ರದಲ್ಲಿರುವ ಬುದ್ಧನ ಮತ್ತು ಲೋಕೇಶ್ವರನ ವಿಗ್ರಹಗಳು ಅತ್ಯುತ್ತಮವಾದ ಶಿಲ್ಪಗಳು, ಪಶ್ಚಿಮ ಭಾರತದ ಬೌದ್ಧ ಗುಹಾಂತರ್ದೇವಾಲಯಗಳಲ್ಲಿ ಕಾಣಬರುವ ಶಿಲ್ಪಶೈಲಿಗೆ ಸೇರಿದ ಈ ವಿಗ್ರಹಗಳು ಜಾವದೇಶದ ಶಿಲ್ಪಚರಿತ್ರೆಯಲ್ಲಿ ಗಮನಾರ್ಹವಾದವು. ಚಂಡಿ ಪವನ್ ದೇವಾಲಯ ಕುಬೇರನಿಗೆ ಮೀಸಲಾದ ದೇವಾಲಯ. ಸಣ್ಣದಾದರೂ ಶಿಲ್ಪದ ದೃಷ್ಟಿಯಿಂದ ಮುಖ್ಯವಾದದ್ದು.[೧]
ಬೊರೊಬೊದೂರ್ ದೇವಾಲಯ
[ಬದಲಾಯಿಸಿ]ಬೊರೊಬೊದೂರ್ ದೇವಾಲಯ ಇಂಡೊನೇಷ್ಯದ ವಾಸ್ತುಶಿಲ್ಪದಲ್ಲಿ ಅತ್ಯಂತ ಪ್ರಸಿದ್ಧವಾದ ದೇವಾಲಯ. ಮಧ್ಯದಲ್ಲಿರುವ ಘಂಟಾಕೃತಿಯ ಸುತ್ತಲೂ ಒಂದಕ್ಕಿಂತ ಮತ್ತೊಂದು ಕೆಳಗಿರುವಂತೆ ಒಟ್ಟು ಒಂಬತ್ತು ಹಂತಗಳಿವೆ. ಇವುಗಳಲ್ಲಿ ಹೊರಗಿನ ಆರು ಚೌಕಾಕೃತಿಯವಾಗಿದ್ದರೆ, ಒಳಗಿನ ಮೂರು ವೃತ್ತಾಕಾರದವು. ವೃತ್ತಾಕಾರದ ಮೂರು ಹಂತಗಳಲ್ಲಿ ಸುತ್ತಲೂ ಸಣ್ಣ ಸ್ತೂಪಗಳಿವೆ. ಪ್ರತಿಯೊಂದು ಸ್ತೂಪದಲ್ಲಿಯೂ ಒಂದೊಂದು ಬುದ್ಧನ ವಿಗ್ರಹಗಳಿವೆ. ಒಂದು ಹಂತದಿಂದ ಮುಂದಿನ ಹಂತಕ್ಕೆ ಹೋಗಲು ಮೆಟ್ಟಿಲುಗಳಿವೆ. ಪ್ರತಿಯೊಂದು ಹಂತದಲ್ಲಿಯೂ ಶಿಲ್ಪಫಲಕಗಳಿವೆ. ಇಲ್ಲಿ ಒಟ್ಟು ಸುಮಾರು ಸಾವಿರದೈನೂರು ಶಿಲ್ಪಫಲಕಗಳಿವೆ. ಇವುಗಳಲ್ಲಿ ಜಾತಕದ ಕಥೆಗಳು, ಬುದ್ಧನ ಜೀವನಕ್ಕೆ ಸಂಬಂಧಿಸಿದ ಇತರ ಕಥೆಗಳು ಮುಖ್ಯವಾದವು. ಭಾರತದಲ್ಲೂ ನಿರ್ಮಾಣವಾಗದಂಥ ಶ್ರೇಷ್ಠ ವಾಸ್ತುಶಿಲ್ಪಕೃತಿ ಇದೆಂದು ಬೊರೊಬೊದೂರ್ ಪ್ರಸಿದ್ಧಿ ಪಡೆದಿದೆ.[೨]
ಲೊರೊ ಜೊಂಗ್ರೊಂಗ್
[ಬದಲಾಯಿಸಿ]ಲೊರೊ ಜೊಂಗ್ರೊಂಗ್ ಎಂಬಲ್ಲಿರುವ ಎಂಟು ದೇವಾಲಯಗಳು ಶೈವ ಮತ್ತು ವೈಷ್ಣವ ಧರ್ಮಕ್ಕೆ ಸೇರಿದವು. ಮಧ್ಯದಲ್ಲಿರುವ ಶಿವನ ದೇವಾಲಯ ಅತ್ಯಂತ ಭವ್ಯವಾದ ಕಟ್ಟಡ. ಇದರ ಗೋಡೆಯ ಮೇಲೆ ರಾಮಾಯಣ ಕಥೆ ಅತ್ಯಂತ ರಮಣೀಯವಾಗಿ ಶಿಲ್ಪಿತವಾಗಿದೆ. ಇದು ಇಲ್ಲಿಯ ವೈಶಿಷ್ಟ್ಯ. ಇಲ್ಲಿಯ ಶಿಲ್ಪಗಳು ಗಾತ್ರದಲ್ಲಿ ಬೊರೊಬೊದೂರಿನಷ್ಟು ದೊಡ್ಡವಲ್ಲದಿದ್ದರೂ ಅದಕ್ಕಿಂತ ಉತ್ತಮವಾದ ಭಾವನೆಗಳನ್ನು ವ್ಯಕ್ತಪಡಿಸುತ್ತವೆ.
ಚಂಡಿಕಿಡಲ್ ದೇವಾಲಯ
[ಬದಲಾಯಿಸಿ]ಪೂರ್ವಜಾವದ ದೇವಾಲಯಗಳಲ್ಲಿ ಚಂಡಿಕಿಡಲ್ ಮುಖ್ಯವಾದದ್ದು. ರಾಜನಾದ ಅನೂಷಪತಿಯ ಮರಣಾನಂತರ (1248) ನಿರ್ಮಿತವಾದ ಈ ದೇವಾಲಯ ಹೊಸ ಶೈಲಿಯಲ್ಲಿ ರಚನೆಗೊಂಡಿದೆ. ಸಿಂಘಸಾರಿ ಸಾಮ್ರಾಜ್ಯಕಾಲದಲ್ಲಿ ಚಂಡಿ ಸಿಂಘಸಾರಿ, ಚಂಡಿ ಜಾಗೊ ಮುಂತಾದವು ಗೋಪುರ ದೇವಾಲಯಗಳು. ಪನತರನ್ ಎಂಬಲ್ಲಿರುವ ದೇವಾಲಯ; ಸಮೂಹ ಪೂರ್ವಜಾವದಲ್ಲಿ ಹೆಚ್ಚು ಪ್ರಖ್ಯಾತವಾಗಿದೆ. ರಾಮಾಯಣ ಮತ್ತು ಕೃಷ್ಣಾಯಣ ಗ್ರಂಥಗಳ ಕಥೆಗಳು ಇಲ್ಲಿಯ ದೇವಾಲಯಗಳ ಗೋಡೆಗಳ ಮೇಲೆ ಶಿಲ್ಪಿತವಾಗಿವೆ. ಪನತರನ್ ದೇವಾಲಯಗಳಲ್ಲಿ ಭಾರತೀಯ ಶಿಲ್ಪಪ್ರಭಾವ ಸ್ವಲ್ಪ ಕಡಿಮೆಯಾಗಿ ಕಾಣಬರುತ್ತದೆ. ಸಿಂಘಸಾರಿಯ ಪ್ರe್ಞÁಪಾರಿಮಿತ ಶಿಲ್ಪ, ಬೆಲ್ಡನ್ನಿನ ವಿಷ್ಣುವಿನ ಶಿಲ್ಪ. ಅನೂಷಪತಿಯ ಕಾಲದ ಶಿವನ ಶಿಲ್ಪ ಮುಂತಾದವು ಈ ಶೈಲಿಯ ಮುಖ್ಯ ಉದಾಹರಣೆಗಳು.
ಬೋರ್ನಿಯೊ ದೇವಾಲಯ
[ಬದಲಾಯಿಸಿ]ಬೋರ್ನಿಯೊದಲ್ಲಿ ದೇವಾಲಯಗಳು ದೊರಕಿಲ್ಲವಾದರೂ ಅನೇಕ ಕಡೆಗಳಲ್ಲಿ ನಡೆದ ಉತ್ಖನನಗಳಿಂದ ಪ್ರಾಚೀನ ವಾಸ್ತುಶಿಲ್ಪಗಳ ವಿಚಾರ ತಿಳಿದು ಬರುತ್ತದೆ. ಕುಟ್ಟೆ ಜಿಲ್ಲೆಯ ಮೌರಕಮನ್ ಎಂಬಲ್ಲಿ ವಿಷ್ಣುವಿನ ಚಿನ್ನದ ಮೂರ್ತಿಯೂ ದೇವಾಲಯದ ಸ್ತಂಭಗಳೂ ದೊರಕಿವೆ. ಇಲ್ಲಿಗೆ ಸ್ವಲ್ಪದೂರದಲ್ಲಿರುವ ಕೊಂಬೆಂಗ್ ಎಂಬಲ್ಲಿ ಗುಹಾಲಯ ಪತ್ತೆಯಾಗಿದೆ. ಇಲ್ಲಿ ಶಿವ, ಗಣೇಶ, ನಂದಿ, ಅಗಸ್ತ್ಯ, ಬ್ರಹ್ಮ, ಸ್ಕಂದ ಮಹಾಕಾಲ ಮುಂತಾದ ದೇವತೆಗಳ ವಿಗ್ರಹಗಳು ದೊರಕಿವೆ. ಸೆಪಾಕ್ ಎಂಬಲ್ಲಿ ಮುಖಲಿಂಗ ದೇವಾಲಯವೂ ಒಟುಪಹಟ್ ಎಂಬಲ್ಲಿ ಸ್ತೂಪಗಳೂ ಅವಶೇಷಗಳೂ ದೊರಕಿವೆ. ಬಾಲಿ ದ್ವೀಪದಲ್ಲಿ ಬಂಡೆಕಲ್ಲಿನ ಮೇಲೆ ಕೆತ್ತಲಾದ ಶಿಲ್ಪಗಳು ದೊರಕಿವೆ. ಯಹ್ಪುಲು ಎಂಬಲ್ಲಿ ಈ ರೀತಿಯ ಶಿಲ್ಪಗಳು ಗುರುತಿಸಲ್ಪಟ್ಟಿವೆ. ಸುಮಾರು ಹನ್ನೊಂದನೆಯ ಶತಮಾನಕ್ಕೆ ಸೇರಬಹುದಾದ ಈ ಶಿಲ್ಪಗಳ ವಿಚಾರದಲ್ಲಿ ಖಚಿತವಾದ ಸಂಗತಿಗಳು ಇನ್ನೂ ತಿಳಿದಿಲ್ಲ. ಸುಮಾತ್ರ ದ್ವೀಪದಲ್ಲಿಯೂ ಉತ್ಖನನಗಳಿಂದ ಅನೇಕ ಶಿಲ್ಪಗಳು ಬೆಳಕಿಗೆ ಬಂದಿವೆ. ಸುಂಗ್ವೆ ಬಟು ಎಂಬಲ್ಲಿ ದೇವಾಲಯವೂ ಶಿವ, ದುರ್ಗ, ಗಣೇಶ, ನಂದಿ ಮುಂತಾದ ದೇವತೆಗಳ ವಿಗ್ರಹಗಳೂ ದೊರಕಿವೆ. ತಾಕುವಾಪ ಎಂಬಲ್ಲಿ ವಿಷ್ಣುವಿನ ಮತ್ತು ಇತರ ವೈಷ್ಣವ ದೇವತೆಗಳ ವಿಗ್ರಹಗಳೂ ಸಿಕ್ಕಿವೆ. ಒಟ್ಟಿನಲ್ಲಿ ಭಾರತೀಯ ವಾಸ್ತುಶಿಲ್ಪ ಇಂಡೊನೇಷ್ಯದ ವಾಸ್ತುಶಿಲ್ಪದ ಮೇಲೆ ವಿಶೇಷ ಪ್ರಭಾವ ಬೀರಿ, ವಿಶ್ವ ಪ್ರಸಿದ್ಧವಾದ ಕಲಾಕೃತಿಗಳು ನಿರ್ಮಾಣವಾಗಲು ಕಾರಣವಾಯಿತು.