ವಿಷಯಕ್ಕೆ ಹೋಗು

ವಾಸ್ತುಕಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೀಜ಼ಾದಲ್ಲಿನ ಪಿರಮಿಡ್‍ಗಳು ಪುರಾತನ ವಾಸ್ತುಕಲೆಯ ಉದಾಹರಣೆಗಳಾಗಿವೆ

ವಾಸ್ತುಕಲೆಯು ಕಟ್ಟಡಗಳನ್ನು ನಿರ್ಮಿಸುವ, ಕುಸುರಿಗೊಳಿಸುವ ಒಂದು ಕಲೆ (ಆರ್ಕಿಟೆಕ್ಚರ್). ಯಾವುದೇ ರೀತಿಯ ಮನೆ, ಕಟ್ಟಡ, ಶಾಲೆ, ಕಾರ್ಖಾನೆ, ದೇವಾಲಯ ಅಥವಾ ಧಾರ್ಮಿಕ ಕಟ್ಟಡಗಳು ವಾಸ್ತುಕಲೆಯ ಅಧ್ಯಯನಕ್ಕೊಳಪಡಬಹುದು.

ಮೊದಮೊದಲು ಮಾನವನು ಹೆಬ್ಬಂಡೆಗಳ ಅಡಿಯಲ್ಲಿ ಜಾಗವನ್ನಾರಿಸಿ ವಾಸಕ್ಕೆ ಯೋಗ್ಯವೆನಿಸುವ ಹಂತಗಳನ್ನು ನಿರ್ಮಿಸಿಕೊಂಡಿದ್ದು, ಅನಂತರ ಕಲೆಯಾಗಿ ಬೆಳೆವಣಿಗೆ ಹೊಂದಿ ವಾಸ್ತುಶಾಸ್ತ್ರದ ಹುಟ್ಟಿಗೆ ಕಾರಣವಾದದ್ದು ಐತಿಹಾಸಿಕ ಸಂಗತಿ. ಅದನ್ನೇ ಅಮರಕೋಶ ನಿವಾಸಾತ್ ಸರ್ವಭೂತಾನಾಂ ವಾಸ್ತುರಿತಿ ಶಬ್ದಿತಃ ಎಂದು ವ್ಯಾಖ್ಯಾನಿಸುತ್ತದೆ. ಮತ್ರ್ಯರು, ಅಮತ್ರ್ಯರು ವಾಸಿಸುವ ಸ್ಥಳವೇ ವಸ್ತು. ವಸ್ತುವನ್ನಾಶ್ರಯಿಸಿದ್ದು ವಾಸ್ತು. ಪ್ರಾಸಾದ, ಹಮ್ರ್ಯ, ಸೌಧ ಇತ್ಯಾದಿಗಳು ವಸ್ತುವನ್ನಾಶ್ರಯಿಸುವುದರಿಂದ ವಾಸ್ತು ಎನಿಸುತ್ತವೆ.

ಮೂಲತಃ ವಾಸ್ತುಶಿಲ್ಪಿ ಒಬ್ಬ ಚಿತ್ರಕಾರ ಅಥವಾ ಸಂಗೀತಗಾರನ ಹಾಗೆಯೇ ಕಲೆಗಾರ. ಚಿತ್ರಕಾರ ನಕ್ಷೆಯನ್ನು, ಸಂಗೀತಗಾರ ಸ್ವರಗಳನ್ನು ಮೂಲಾಧಾರವಾಗಿಟ್ಟುಕೊಂಡು ತನಗೆ ಬೇಕಾದ ಕಲ್ಪನೆಯನ್ನು ಅದರ ಮೇಲೆ ಬೆಳೆಸುವಂತೆ ವಾಸ್ತುಶಿಲ್ಪಿಯೂ ನಿರ್ದಿಷ್ಟ ಆಕಾರ, ಪ್ರಮಾಣ, ವಸ್ತು, ಪರಿಕರಗಳ ಸಹಾಯದಿಂದ ತನಗೆ ಬೇಕಾದಂತೆ ಸೌಧವನ್ನು ನಿರ್ಮಿಸುತ್ತಾನೆ. ಅದನ್ನು ಅಂದಗೊಳಿಸಲು ಹಾಗೂ ಕುಸುರಿಗೊಳಿಸಲು ಕಲ್ಪನೆಯ ಮೊರೆಹೋಗುತ್ತಾನೆ. ಆದರೆ ಅದನ್ನು ಪ್ರಪಂಚದ ಮುಂದೆ ನಿಲ್ಲಿಸಲು ಅವನೊಬ್ಬ ವ್ಯಾಪಾರೀ ಮನೋಭಾವ ಹಾಗೂ ಎಂಜಿನಿಯರಿಂಗ್ ನೈಪುಣ್ಯವಿರುವ ಚಾಕಚಕ್ಯತೆ ಹೊಂದಿರಬೇಕಾಗುತ್ತದೆ.

ಅನೇಕಾನೇಕ ವರ್ಷ ಉಳಿಯಬಲ್ಲ ಶಕ್ತಿ ಹಾಗೂ ನೈಪುಣ್ಯವುಳ್ಳ ಕಟ್ಟಡ ಮಾದರಿಗಳನ್ನು ರಚಿಸಲು ಅನುಸರಿಸಬೇಕಾದ ತತ್ತ್ವಗಳನ್ನು ಶಾಸ್ತ್ರೀಯವಾಗಿ ವಿವೇಚಿಸುವ ಮೊದಲ ವಾಸ್ತುವಿವರಣೆ ಭಾರತದಲ್ಲಿ ದೊರಕುವುದು ಭರತನ ನಾಟ್ಯಶಾಸ್ತ್ರದಲ್ಲಿ. ಅನಂತರ ಶುಕ್ರಗೀತಿ ಗ್ರಂಥ ಇದನ್ನೇ ಶಿಲ್ಪಶಾಸ್ತ್ರದಡಿ ವಿವೇಚಿಸುತ್ತದೆ. ಇದೇ ರೀತಿ ವಾಸ್ತುಕಲೆಯ ಅಧ್ಯಯನಕ್ಕೆ ವಿಟ್ರೂವಿಯಸ್ ರಚಿಸಿದ ವಾಸ್ತುಗ್ರಂಥ ಪಾಶ್ಚಾತ್ಯ ವಾಸ್ತುಶಿಲ್ಪಗಳಿಗೆ ಮಾರ್ಗದರ್ಶಿಯಾಗಿದೆ. ಸ್ಥಪತಿಃ ಸ್ಥಪಯೇತ್ ಸ್ಥಿರಂ ಎಂಬುದು ಮಯಮತದ ಸಿದ್ಧಾಂತ. ಇದನ್ನೇ ವಿಟ್ರೂವಿಯಸ್ ಸಾರ್ವಕಾಲಿಕ ಮೌಲ್ಯವುಳ್ಳ ವಾಸ್ತು ರಚನೆಗಳ ಸಿದ್ಧಾಂತಗಳನ್ನಾಗಿ ಪ್ರತಿಪಾದಿಸಿದ್ದಾನೆ. ಅವನ ಪ್ರಕಾರ ಒಂದು ವಾಸ್ತುರಚನೆ ಉಪಯುಕ್ತವೂ ತಾಳಿಕೆಯುಳ್ಳದ್ದೂ ಸೌಂದರ್ಯಾಂಶಗಳಿಂದ ಕೂಡಿದ್ದೂ ಆಗಬೇಕಾದರೆ ನಾಲ್ಕು ಪ್ರಧಾನ ಅಂಶಗಳನ್ನು ಹೊಂದಿರಬೇಕು.

  1. ವಾಸ್ತುರಚನೆ ಪರಸ್ಪರ ಪೂರಕ ಸಂಬಂಧಗಳುಳ್ಳ ಅಂಗಗಳನ್ನು ಹೊಂದಿರಬೇಕು.
  2. ಅದರ ರಚನಾತ್ಮಕ ಸಂಯೋಜನೆ ಲಯಬದ್ಧವಾಗಿರಬೇಕು.
  3. ಎಲ್ಲ ಅಂಗಗಳಿಗೂ ಅಳತೆಯಲ್ಲಿ ನಿರ್ದಿಷ್ಟ ಪ್ರಮಾಣ ಸಾಮ್ಯವಿರಬೇಕು.
  4. ಅಳತೆಯು ರಚನೆಯ ಕ್ರಮಕ್ಕನುಗುಣವಾಗಿರಬೇಕು.

ಪಾಶ್ಚಿಮಾತ್ಯರ ಪ್ರಾಚೀನ ಹಾಗೂ ಶ್ರೇಷ್ಠ ವಾಸ್ತುಕಲಾ ಮಾದರಿಗಳನ್ನು ಅಭ್ಯಸಿಸಿದರೆ ವಿಟ್ರೂವಿಯಸ್ ಪ್ರತಿಪಾದಿಸಿದ ತತ್ತ್ವಗಳು ಗಮನಕ್ಕೆ ಬರುತ್ತದೆ. ಉದಾಹರಣೆಗೆ ಪ್ರಾಚೀನ ಗ್ರೀಸ್‍ನಲ್ಲಿ ಕ್ರೀಟ್‍ನ ಪ್ಯಾಲೇಸ್ ಆಫ್ ನೋಸಾಸ್, ಅಥೆನ್ಸಿನ ಪಾರ್ಥೆನಾನ್ ವಾಸ್ತುಶೈಲಿ, ಮೈಸೆನೀಯದ ಲಯನ್‍ಗೇಟ್, ರೋಮ್‍ನ ಬ್ಯಾಸಿಲಿಕ ಚರ್ಚ್, ಇಟಲಿಯ ಪ್ರಾಚೀನ ಕತೀಡ್ರಲ್‍ನ ಒಳಾಂಗಣ, ಮಾಸ್ಕೋದ ಸೇಂಟ್ ಬ್ಯಾಸಿಲ್ಸ್ ಚರ್ಚ್, ಈಜಿಪ್ಟಿನ ಕರ್ನಾಕ್‍ನ ಟೆಂಪಲ್ ಆಫ್ ಏಮನ್‍ರೇ ಮುಂತಾದುವು ಪ್ರಪಂಚದ ಉತ್ಕøಷ್ಟ ವಾಸ್ತುರಚನಾ ಮಾದರಿಗಳಾಗಿ ರೂಪುಗೊಳ್ಳಲು ಅವು ಒಳಗೊಂಡ ವಿಶಿಷ್ಟ ಕಲ್ಪನೆಗಳಷ್ಟೇ ಕಾರಣವಾಗಿರದೆ ಪ್ರಮಾಣಬದ್ಧತೆಯೂ ನಿಯಮಬದ್ಧತೆಯೂ ಕಾರಣವಾಗಿವೆ.

ಭಾರತೀಯ ವಾಸ್ತು ಪರಂಪರೆಯಲ್ಲಿ ವಿಶ್ವಕರ್ಮನನ್ನು ಶಿಲ್ಪ ಮತ್ತು ವಾಸ್ತುಶಿಲ್ಪಗಳ ಪರಮಗುರುವೆಂದು ಪರಿಗಣಿಸಲಾಗುತ್ತದೆ. ಎಲ್ಲ ರೀತಿಯ ವಾಸ್ತುರಚನೆಗಳಿಗೆ ನಿರ್ದಿಷ್ಟ ನಿಯಮ ಹಾಗೂ ತತ್ತ್ವಗಳ ಹಿನ್ನೆಲೆಯಿದೆ. ಪ್ರಾಚೀನ ನಿರ್ಮಿತಿಗಳು, ಗುಹಾಲಯಗಳು, ಚೈತ್ಯಗೃಹಗಳು, ಬೌದ್ಧ ವಿಹಾರಗಳು, ಏಕಶಿಲಾ ದೇವಾಲಯಗಳು, ಬೃಹತ್‍ಕಟ್ಟಡಗಳು, ವಾಸ್ತುಮಂಡಲಗಳು, ಭೂಪರೀಕ್ಷೆ, ದಿಕ್‍ನಿರ್ಣಯ ಮುಂತಾದುವೆಲ್ಲವೂ ತಾತ್ತ್ವಿಕ ಹಿನ್ನೆಲೆಯುಳ್ಳವೇ.

ಪಾಶ್ಚಾತ್ಯರಲ್ಲಿಯೂ ವಾಸ್ತುರಚನೆಯ ಮುಂಭಾಗದ ಹಾಗೂ ಒಳರಚನೆಯ ಕಮಾನು, ಲ್ಯಾಂಟರ್ನ್ ನಮೂನೆ, ಸ್ಪ್ಯಾನಿಷ್ ಹಾಗೂ ಲ್ಯಾಟಿನ್ ಅಮೆರಿಕದ ವಿಶೇಷಗಳಾದ ಪ್ಯಾಷಯೇ ಪಾರಂಪರಿಕ ಮೇಲ್ಛಾವಣಿ, ಪೆಡೆಸ್ಟಲ್ ರಚನೆ ಅರ್ಥವೃತ್ತಾಕಾರದ ಮೇಲ್ಛಾವಣಿ, ಗಾತಿಕ್ ಶೈಲಿಯ ಅಡ್ಡಮರ ಮತ್ತು ಕೊಡೆಕಡ್ಡಿಗಳಂಥ ರಚನೆಯ ಮೇಲ್ಛಾವಣಿ, ಚೂಪು ಮೇಲ್ತುದಿಯ ಅರ್ಧವೃತ್ತಾಕಾರದ ಕಿಟಕಿ- ಇವು ಪಾರಂಪರಿಕ ಕಟ್ಟಡಗಳ ಮಾದರಿಗಳಾಗಿವೆ. ಅವಕ್ಕೆ ವಿಟ್ರೂವಿಯಸ್ ನಿರೂಪಿಸಿದ ತತ್ತ್ವಗಳೇ ಮೂಲಾಧಾರ.

ಒಂದು ಕಾಲದ ವಾಸ್ತುರಚನೆಯ ಮಾದರಿ ಮತ್ತೊಂದು ಕಾಲಕ್ಕೆ ಮಹತ್ತ್ವದ್ದೆನಿಸದೆ ಹೋಗಬಹುದು ಅಥವಾ ಸುಂದರ ಎಂದೆನಿಸದಿರಬಹುದು. ಆದರೆ ಮೇಲೆ ನಿರೂಪಿಸಿದ ಎಲ್ಲ ಪೌರಾತ್ಯ ಹಾಗೂ ಪಾಶ್ಚಾತ್ಯ ಮಾದರಿಗಳು ಕಲ್ಪನೆಯ ಸೌಂದರ್ಯಾಂಶ, ರಚನೆಯಲ್ಲಿನ ಲಯಗಾರಿಕೆ ಹಾಗೂ ತಾಳಿಕೆಯ ವಸ್ತುಗಳನ್ನು ಹದಗೊಳಿಸಿ ಕೊಂಡ ಶೈಲಿಗಳಿಂದ ಸಾರ್ವಕಾಲಿಕ ಮೌಲ್ಯವುಳ್ಳ ವಾಸ್ತುಕಲೆಗಳಾಗಿವೆ ಯಲ್ಲದೆ, ಆಯಾ ಕಾಲದ ಧರ್ಮಶ್ರದ್ಧೆಯ, ಜೀವನಶೈಲಿಯ ಸಂಕೇತಗಳಾಗಿವೆ. ಭಾರತೀಯ ಶೈಲಿಯ ಕಟ್ಟಡ ಹಾಗೂ ದೇವಾಲಯಗಳ ವಿಮಾನ, ದುಂಡುಗೋಪುರ, ಮೇಲ್ಮುಖವಾಗಿ ನಿಂತ ಧ್ವಜಸಂಕೇತ; ಪಾಶ್ಚಿಮಾತ್ಯ ಶೈಲಿಯ ಎತ್ತರವಾದ ಚೂಪು ಗೋಪುರ ಹಾಗೂ ಕಟ್ಟಡದ ಹೊರಾವರಣದ ಶಿಲ್ಪಗಳು ಪರಂಪರೆಯ ಸಂಕೇತಗಳಷ್ಟೇ ಆಗಿರದೆ ಸ್ವರ್ಗ ಪರಿಕಲ್ಪನೆಯ ತುಯ್ತದ ಸಂಕೇತಗಳೂ ಆಗಿವೆ; ಆಯಾ ಕಾಲ ದೇಶಗಳ ಪವಿತ್ರ ಗ್ರಂಥಗಳಲ್ಲಿನ ದೈವಿಕ ಪಾತ್ರಗಳ ನಿರೂಪಣೆಗಳೂ ಆಗಿವೆ.

ಆರಂಭಕಾಲ[ಬದಲಾಯಿಸಿ]

ಆರಂಭಿಕ ವಾಸ್ತುರಚನೆ ವಾಸಯೋಗ್ಯ ಹಾಗೂ ಸರಳರೂಪದ ಕುಟೀರ ಮಾತ್ರವಾಗಿತ್ತು. ಮಾನವನ ಸೌಂದರ್ಯಪ್ರಜ್ಞೆ ಸೂಕ್ಷ್ಮಗೊಂಡಂತೆಲ್ಲ ರಕ್ಷಣಾ ಸಾಧ್ಯತೆಗಳು ಹೆಚ್ಚಾಗಿ ಹೆಚ್ಚು ತಾಳಿಕೆಯುಳ್ಳ ಕಟ್ಟಡಗಳನ್ನು, ನೈಪುಣ್ಯವುಳ್ಳ ಸೌಧಗಳನ್ನು, ಗುಡಿಗೋಪುರಗಳನ್ನು, ಧಾರ್ಮಿಕ ಆವರಣಗಳನ್ನು, ಸ್ತಂಭಸ್ಮಾರಕಗಳನ್ನು ಯೋಜಿಸಲಾಯಿತು. ಸು.6000 ವರ್ಷಗಳಷ್ಟು ಹಿಂದೆ, ಅಂದರೆ ನವಶಿಲಾಯುಗದ ಕಾಲಕ್ಕೆ ಮೆಡಿಟೆರೇನಿಯನ್ ತೀರಗಳ ಮಾಲ್ಟ ದ್ವೀಪಗಳಲ್ಲಿ ಅತ್ಯಂತ ಕೌಶಲಪೂರ್ಣವಾದ ಗುಡಿಗೋಪುರ ಸೌಧಗಳನ್ನು ಮಾನವ ನಿರ್ಮಿಸಿದ್ದು ಕಂಡುಬರುತ್ತದೆ. ಅದೇ ವೇಳೆಗೆ ಸಾರ್ಡೀನಿಯ ದ್ವೀಪಗಳಲ್ಲೂ ಕೊಳವೆಯಾಕಾರದ ಎತ್ತರದ ಸ್ತಂಭಗಳನ್ನೂ ನಿರ್ಮಿಸಲಾಗಿದೆ. ಇವೆಲ್ಲ ಆ ಕಾಲದ ಧಾರ್ಮಿಕ ಶ್ರದ್ಧೆ ಹಾಗೂ ಜೀವನವಿಧಾನಗಳ ಸಂಕೇತ. ಆದರೆ ಶ್ರದ್ಧಾಪೂರ್ವಕ ವಾಸ್ತುಕಲೆಯನ್ನು ಅಭ್ಯಸಿಸಬೇಕಾದರೆ ಪ್ರಧಾನವಾಗಿ ಎರಡು ಪ್ರದೇಶಗಳನ್ನು ಗುರುತಿಸಿಕೊಳ್ಳಬೇಕು. 1. ಪ್ರಾಚೀನ ಈಜಿಪ್ಟಿನ ನೈಲ್ ನದಿ ಕಣಿವೆಗಳು 2. ಬ್ಯಾಬಿಲೋನಿಯ ಮತ್ತು ಅಸ್ಸೀರಿಯದ ಟೈಗ್ರಿಸ್ ಹಾಗೂ ಯುಫ್ರೆಟಸ್ ನದಿ ಕಣಿವೆಗಳು.

ಈಜಿಪ್ಟಿನ ವಾಸ್ತುರಚನೆಗಳು ಕಬ್ಬಿಣ, ಮರ ಮತ್ತು ಬಿಸಿಲಿನಲ್ಲಿ ಸುಟ್ಟು ತಯಾರಿಸಿದ ಇಟ್ಟಿಗೆಗಳಿಂದ ಕೂಡಿವೆ. ಕ್ರಿ.ಪೂ. ಸು. 2700-2200ರ ಕಾಲಘಟ್ಟದಲ್ಲಿ ವಾಸ್ತುಕಲೆಗಾರರು ಕಲ್ಲಿನ ಪಿರಮಿಡ್ಡುಗಳನ್ನು, ರಾಜವೈಭವದ ಗುಮ್ಮಟಗಳನ್ನು ನಿರ್ಮಿಸಲು ಬಳಸಿದರು. ಕ್ರಿ.ಪೂ. 2700ರಲ್ಲಿ ಜೋಸóರ್ ಚಕ್ರವರ್ತಿಗಾಗಿ ಸ್ಟೆಪ್ಡ್‍ಪಿರಮಿಡ್ಡು ಗಳನ್ನು ರಚಿಸಲಾಯಿತು. ಕ್ರಿ.ಪೂ. 1800-1200ರವರೆಗೆ ಈಜಿಪ್ಶಿಯನ್ನರು ಪಿರಮಿಡ್ಡುಗಳನ್ನು ಕತ್ತರಿಸಿ ನೈಲ್ ನದಿ ಕಣಿವೆಯುದ್ದಕ್ಕೂ ಬೃಹತ್ತಾದ ಹಾಗೂ ಕಡಿದಾದ ದಂಡೆ ನಿರ್ಮಿಸಿದರು. ಈ ಕಡಿಬಂಡೆಗಳನ್ನು ಯೋಜಿಸಿರುವ ರೀತಿಯೇ ಅತ್ಯುತ್ಕøಷ್ಟ ಎನ್ನಲಾಗಿದೆ. ಅನಂತರದಲ್ಲಿ ತಮ್ಮ ಆರಾಧ್ಯ ದೈವಗಳಿಗೆಂದು ಕಾರ್ನಕ್‍ದ ಏಮನ್-ರೇ ದೇವಾಲಯ ದಂಥ ಅಮೋಘ ವಾಸ್ತುಕಲಾಕೃತಿಯನ್ನು ನಿರ್ಮಿಸಿದರು.

ಬ್ಯಾಬಿಲೋನಿಯ ಮತ್ತು ಅಸ್ಸೀರಿಯಗಳಲ್ಲಿ ಮೊದಲಿಗೆ ಅಂಡಾಕೃತಿಯ ಮತ್ತು ದೀರ್ಘವೃತ್ತಾಕಾರದ ಕುಟೀರಗಳನ್ನು ರಚಿಸಿದರು. ಕ್ರಿ.ಪೂ.3000 ವರ್ಷಗಳಿಗಿಂತ ಮುಂಚೆಯೇ ಇಟ್ಟಿಗೆಯ ಕಮಾನುಗಳನ್ನೂ ಗುಮ್ಮಟಗಳನ್ನೂ ರಚಿಸಿದ್ದರು. ಅವರ ಅದ್ಭುತ ಕಲಾಪ್ರೌಢಿಮೆಗೆ ಎತ್ತರದ ಜಿಗ್ಗುರಾತ್ ದೇವಾಲಯಗಳು ಸಾಕ್ಷಿಯಾಗಿವೆ. ಕಟ್ಟಡದ ನೆಲಹಂತದಿಂದ ಮೇಲಕ್ಕೆ ಹಂತಹಂತವಾಗಿ ಕಡಿಮೆ ವ್ಯಾಸವುಳ್ಳ ಹಾಗೂ ತುದಿಯಲ್ಲಿ ಅವರ ಆರಾಧ್ಯ ದೈವದ ಸ್ಥಾನ ಕಲ್ಪಿಸಲಾಗಿರುವ ವಾಸ್ತುಕಲ್ಪನೆಯು ಅತ್ಯಪೂರ್ವ ಐತಿಹಾಸಿಕ ಮಾದರಿಗಳಾಗಿವೆ.

ಪೌರಾತ್ಯ ದೇಶಗಳಲ್ಲಿ[ಬದಲಾಯಿಸಿ]

ಭಾರತ, ಚೀನ, ಜಪಾನ್ ಮೊದಲಾದ ದೇಶಗಳು ಪಾಶ್ಚಿಮಾತ್ಯ ಮಾದರಿಗಿಂತ ಭಿನ್ನರೀತಿಯ ವಾಸ್ತುಕಲಾ ನೈಪುಣ್ಯವುಳ್ಳವು. ಭಾರತೀಯ ವಾಸ್ತು ರಚನೆಗಳು ಕ್ರಿ.ಪೂ. 200ರಲ್ಲಿ ಒಂದು ನಿರ್ದಿಷ್ಟ ರೂಪ ಪಡೆದವು. ಅಂದರೆ ಬೌದ್ಧಧರ್ಮ ಪ್ರಚುರಗೊಂಡ ಕಾಲಕ್ಕಾಗಲೇ ದೇವಾಲಯ, ಸೌಧ ಮತ್ತು ಸ್ತಂಭಗಳಲ್ಲಿ ಬುದ್ಧನ ಪವಿತ್ರ ರೂಪವನ್ನು ಶಾಶ್ವತೀಕರಿಸುವ ಪ್ರಯತ್ನದ ಫಲವಾಗಿ ಮೂರು ಮುಖ್ಯ ವಾಸ್ತುಕಲಾ ಪ್ರಭೇದ ರೂಪುಗೊಂಡಿದ್ದುವು. ಇವಲ್ಲದೆ ಕಡಿದಾದ ಕಲ್ಲಿನ ಬೆಟ್ಟಗಳನ್ನು ಕಡೆದು ರೂಪಿಸಿದ ಅಜಂತದಂಥ ಗುಹಾಂತರ್ದೇವಾ ಲಯಗಳೂ ರೂಪುಗೊಂಡಿದ್ದುವು. ಇಸ್ಲಾಮಿಕ್ ಹಾಗೂ ಹಿಂದು ಮಾದರಿಯ ವಾಸ್ತುಪ್ರಕಾರಗಳು ಭಾರತದ ವಾಸ್ತುಕಲೆಗೆ ವೈವಿಧ್ಯಪೂರ್ಣ ಆಲೋಚನಾ ವಿಧಾನಗಳನ್ನೂ ಬೆರಗುಗೊಳಿಸುವ ನಾವೀನ್ಯವನ್ನೂ ತಂದುಕೊಟ್ಟಿವೆ. ಕ್ರಿ.ಪೂ. 600-1800ರ ಅವಧಿಯಲ್ಲಿನ ದೇವಾಲಯಗಳ ರೂಪುರಚನೆಗಳು ದೇವಾಲಯದ ಹೊರ ಆವರಣದಲ್ಲಿ ವಿವಿಧ ಹಂತಗಳ ಭಿನ್ನಮಾದರಿಯ ಕೆತ್ತನೆಗಳನ್ನು ಕಡೆದುನಿಲ್ಲಿಸಿ ಪ್ರತಿಸಾಲೂ ಹಿಂದು ಪೌರಾಣಿಕ ಪ್ರಭಾವವನ್ನು ಸಾರುವಂತೆ ವಿಶಿಷ್ಟ ಚಿಂತನೆಯ ಸಾಕ್ಷಿಗಳನ್ನಾಗಿಸಲಾಗಿದೆ. ಕ್ರಿ.ಶ.ದ ಅನಂತರ ಮುಸ್ಲಿಮರ ಆಗಮನ ಪರ್ಷಿಯನ್ ಕಲಾ ಪ್ರಭಾವವನ್ನು ಹೊತ್ತುತಂದು ಭಾರತೀಯ ವಾಸ್ತುಕಲೆಗೆ ಮತ್ತೊಂದು ಮನೋಹರ ಮಗ್ಗುಲನ್ನು ಸೃಷ್ಟಿಸಿದೆ. ಪ್ರಪಂಚದ ಅತ್ಯುತ್ಕøಷ್ಟ ಕಲಾ ಮಾದರಿಯಾಗಿ ತಾಜ್‍ಮಹಲ್ ರೂಪುಗೊಂಡಿರುವುದು ಹೀಗೆಯೆ.

ಉತ್ತರ ಹಾಗೂ ಪೂರ್ವ ಏಷ್ಯಖಂಡದ ಅನೇಕ ರಾಷ್ಟ್ರಗಳು ಭಾರತೀಯ ಮಾದರಿಯ ವಾಸ್ತುಕಲೆಯನ್ನು ಅನುಸರಿಸಿವೆ. ಕಾಂಬೋಡಿಯದ ಆಂಗ್ಕೋರ್‍ವಾಟ್ ದೇವಾಲಯ ಚೀನದ ಚೌ ಆಡಳಿತ ಕಾಲದಲ್ಲಿ ನಿರ್ಮಿಸಿದ ಸೌಧ, ಅರಮನೆ, ಮಹಲು ಹಾಗೂ ಎತ್ತರದ ಮೇಲ್ಛಾವಣಿಯ ಪಗೋಡಗಳು, 1600ರಲ್ಲಿ ನಿರ್ಮಾಣಗೊಂಡ ಜಪಾನಿನ ಕಸ್ತೂರಾ ಅರಮನೆ ಇಂಥವನ್ನು ಹೆಸರಿಸಬಹುದು.

ಯೂರೋಪ್‍ನಲ್ಲಿ[ಬದಲಾಯಿಸಿ]

ಗ್ರೀಕ್, ರೋಮನ್, ಇಟಾಲಿಯನ್ ಮಾದರಿ ವಾಸ್ತುಕಲೆಗಳಲ್ಲೆಲ್ಲ ಬಹುತೇಕ ಎತ್ತರದ ಕಿಟಕಿಗಳು, ತಗ್ಗಾದ ಮೇಲ್ಛಾವಣಿಗಳು, ಕಲ್ಲಿನ ಗೋಡೆ, ಹಲವು ಅಂತಸ್ತಿನ ಕೊಠಡಿಗಳು ಸಮಾನ ಅಂಶಗಳಾಗಿವೆ. ನಾಗರಿಕತೆ ಎಂಬುದು ಮೊದಲು ಗ್ರೀಸ್‍ನಲ್ಲಿ ಹುಟ್ಟಿ ಅನಂತರ ಮೆಡಿಟರೇನಿಯನ್ ದ್ವೀಪಕಣಿವೆಗಳ ಕ್ರೀಟ್‍ನಲ್ಲಿ ಬೆಳೆಯಿತೆಂದು ವಾಸ್ತುಕಲೆಯ ಇತಿಹಾಸ ದಾಖಲಿಸುತ್ತದೆ. ಕ್ರಿ.ಪೂ. 1800-1100ರ ಅವಧಿಯಲ್ಲಿನ ಕ್ರೀಟರ ಸುಂದರ ಭವನ, ನಗರ ನಿರ್ಮಾಣ, ಅರಮನೆ, ವೈಭವೋಪೇತ ಕುಸುರಿಗೆಲಸ ಹಾಗೂ ಕಲ್ಲುಹಾಸಿನ ಮೇಲ್ಛಾವಣಿಗಳು ಅಧ್ಯಯನಯೋಗ್ಯವಾಗಿವೆ. ಗ್ರೀಕರ ಹೊಸ ವಾಸ್ತುಕಲೆ ಕ್ರಿ.ಪೂ. 600 ರಿಂದ ಆರಂಭಗೊಂಡಿತೆನ್ನಲಾಗಿದೆ. ಸು. 450-500ರ ಅವಧಿ ಇವರ ವಾಸ್ತುಕಲೆ ಅತ್ಯುನ್ನತ ಮಟ್ಟ ತಲುಪಿದ ಕಾಲ. ರೋಮ್ ಚಕ್ರಾಧಿಪತ್ಯ 313ರಲ್ಲಿ ನಿರ್ಮಿಸಿದ ಚರ್ಚುಗಳು ಬ್ಯಾಸಿಲಿಕ ಗಳೆಂದು ಖ್ಯಾತವಾಗಿವೆ. ಕುಸುರಿಗೆಲಸದ ಚೂಪುತುದಿಯ ಅರೆವೃತ್ತಾಕಾರದ ವಿಶಾಲ ಹಾಗೂ ಎತ್ತರದ ಕಿಟಕಿ, ಒಂದು ಮೆರವಣಿಗೆ ಸುಲಭವಾಗಿ ಚಲಿಸಬಲ್ಲಂಥ ಒಳಾವರಣ ಹಾಗೂ ನಡುಹಜಾರ, ಹೊರಾವರಣದಲ್ಲಿನ ಎತ್ತರದ ಅರೆವೃತ್ತಾಕಾರದ ಚೂಪು ಪಾಶ್ರ್ವಗೋಪುರ ಇವು ಪೂರ್ವ ರೋಮ್‍ನ ಪ್ರಸಿದ್ಧ ಬಿಜ಼ನ್‍ಟೀಯನ್ ಮಾದರಿಗಳು. ಇಸ್ತಾಂಬುಲ್‍ನ ಗಾಢ ಹಾಗೂ ತಿಳಿವರ್ಣಗಳ ಚಿತ್ರ ಮಾದರಿಯ ಸೇಂಟ್ ಮಾಫಿಯ ಹಾಗೂ ಮಾಸ್ಕೋದ ಸೇಂಟ್ ಬ್ಯಾಸಿಲ್ಸ್ ಚರ್ಚುಗಳು ಬಿಜ಼ನ್‍ಟೀಯನ್ ವಾಸ್ತುಕಲೆಗೆ ಅತ್ಯುತ್ತಮ ಮಾದರಿಗಳಾಗಿವೆ.

ಯುರೋಪಿನಲ್ಲಿ ಸು.1400-1500ರ ಅವಧಿ ಪುನರುತ್ಥಾನದ ಕಾಲ. ಇಟಲಿ, ಇಂಗ್ಲೆಂಡ್, ಸ್ಪೇನ್, ರೋಮ್‍ಗಳಲ್ಲಿ ಪ್ರಪಂಚದ ಅತ್ಯದ್ಭುತ ಮಾದರಿಯ ಪ್ರಾಚೀನ ವಾಸ್ತುಕಲೆ ಇದಕ್ಕೆ ಸಾಕ್ಷಿ. ಇಟಲಿಯ ಗಾತಿಕ್ ಶೈಲಿಯ ಕತೀಡ್ರಲ್ ಆಫ್ ಫ್ಲಾರನ್ಸ್, ರೋಮ್‍ನ ಸೇಂಟ್ ಪೀಟರ್ಸ್ ಚರ್ಚ್, 1475-1564ರ ಮೈಕೆಲಂಜೆಲೋ ಮತ್ತು 1483-1520ರ ರಾಫೆಲ್‍ರಂಥ ಕಲೆಗಾರರ ಕಲ್ಪನೆಗಳನ್ನೊಳಗೊಂಡ ಚರ್ಚ್‍ಗಳನ್ನು ಉಲ್ಲೇಖಿಸಬಹುದು.

ಭಾರತದ ವಾಸ್ತುಕಲೆ[ಬದಲಾಯಿಸಿ]

ಭಾರತದಲ್ಲಿ ವಾಸ್ತುಕಲೆಯು ಕ್ರಿ.ಪೂ. 2500 ವರ್ಷಗಳಗೂ ಮೊದಲೇ ಆರಂಭವಾಯಿತೆಂದು ಹೇಳಲಾಗುತ್ತದೆ. ಉತ್ಖನನಗೊಂಡಿರುವ ಹಾಗೂ ಇಂದಿನ ವಾಸ್ತುಕಲಾ ಪ್ರಕಾರಗಳನ್ನು ಗಮನಿಸಿದರೆ ಅಗಾಧ ಪ್ರಮಾಣದ ಕಲಾವೈವಿಧ್ಯವನ್ನು ಗುರುತಿಸಬಹುದು. ಇಲ್ಲಿ ನಿರ್ಮಾಣಗೊಂಡ ರಾಜಗೃಹ, ಸ್ನಾನಗೃಹ, ಸಭಾಂಗಣ, ಸ್ತೂಪ, ಕುಮ್ರಹಾರದ ಸ್ತಂಭಮಂಟಪಗಳ ಬೋದಿಗೆ, ಸಾಂಚಿಯ ಉಬ್ಬುಕೆತ್ತನೆ-5 ಕಂಡಿಗಳುಳ್ಳ ಕೈಪಿಡಿಗೋಡೆ, ಬಳ್ಳಿ ತೋರಣ ಹೂಗಳಿಂದಲಂಕೃತಗೊಂಡ ಕಲ್ಲಿನ ವೇದಿಕೆ, ಅಮರಾವತಿ, ಹಂಪೆ, ಬೇಲೂರು, ಹಳೇಬೀಡುಗಳಲ್ಲಿನ ತಳವಿನ್ಯಾಸ, ನಾಗಾರ್ಜುನ ಕೊಂಡದಲ್ಲಿನ ಚಕ್ರಗಳ ಅರಗಳಂತೆ ರೂಪಿತಗೊಂಡ ಗೋಡೆ, ಪಾಂಡುಲೇಣ ಚೈತ್ಯಗೃಹದ ವಿಶಿಷ್ಟ ಮುಖಮಂಟಪ, ಎಲ್ಲೋರ ಗುಹೆಗಳ ತಳವಿನ್ಯಾಸ, ರಥಗಳಲ್ಲಿನ ಏಕತಲವಿಮಾನ ಉಬ್ಬುಕೆತ್ತನೆ, ಔತ್ತರೇಯ ಹಾಗೂ ದ್ರಾವಿಡ ಶೈಲಿಯ ವಿಶಿಷ್ಟ ಮಾದರಿಯ ವಿಮಾನ, ಗೋಪುರ, ಗರುಡ ಮಂಟಪ, ದೀರ್ಘಚತುರಸ್ರಾಕಾರದ ಗರ್ಭಗೃಹ, ಸಂಕೀರ್ಣಗಳು ಭಾರತೀಯ ಶೈಲಿಯ ವಿಶಿಷ್ಟ ವಾಸ್ತುಕಲಾ ಮಾದರಿಗಳಾಗಿವೆ. ಹಾಗೂ ವಿಶೇಷ ಅಧ್ಯಯನವನ್ನೇ ನಡೆಸಬೇಕಾದ ಅಗಾಧ ವಾಸ್ತುಕಲಾ ಪ್ರಕಾರಗಳು ಭಾರತದಲ್ಲಿದ್ದು ಪ್ರಪಂಚದ ವಾಸ್ತು ಪ್ರಕಾರಕ್ಕೆ ಸಮೃದ್ಧ ಅಧ್ಯಯನ ಸಾಮಗ್ರಿ ಒದಗಿಸಿವೆ.

ಕರ್ನಾಟಕದಲ್ಲಿ[ಬದಲಾಯಿಸಿ]

ಕರ್ನಾಟಕದ ವಾಸ್ತುಕಲೆ ಭಾರತೀಯ ವಾಸ್ತುಕಲೆಯ ಒಂದು ಭಾಗವೇ ಆಗಿದ್ದರೂ ಇದಕ್ಕೆ ವಿಶೇಷ ಮಹತ್ತ್ವವಿದೆ. ಭಾರತದ ಉಳಿದೆಡೆ ಕಾಣದಷ್ಟು ವೈವಿಧ್ಯಮಯ ವಾಸ್ತುಶೈಲಿಗಳು ಕರ್ನಾಟಕದಲ್ಲಿ ಗೋಚರಿಸುತ್ತವೆ. ಭಾರತದಲ್ಲಿ ಕರ್ನಾಟಕಕ್ಕಿರುವ ವಿಶಿಷ್ಟಸ್ಥಾನ ಇದಕ್ಕೊಂದು ಕಾರಣ. ತನ್ನ ಸುತ್ತುಮುತ್ತ ಬೆಳೆದ ಬೇರೆ ಬೇರೆ ಶೈಲಿಗಳನ್ನು ಮೈಗೂಡಿಸಿಕೊಂಡುದುದೇ ಅಲ್ಲದೆ, ಅವುಗಳ ಸಂಯೋಜನೆಯಿಂದ ತನ್ನದೇ ಆದ ಹೊಸಶೈಲಿಯನ್ನು ನಿರ್ಮಾಣ ಮಾಡಿ ಅದ್ಭುತವಾಗಿ ಬೆಳೆಸಿ, ಪ್ರಪಂಚದ ವಾಸ್ತುಕಲೆಯ ಸಾಲಿನಲ್ಲಿ ನಿಲ್ಲಬಲ್ಲ ಸಾಮಥ್ರ್ಯವನ್ನು ಕರ್ನಾಟಕದ ವಾಸ್ತುಕಲೆ ಪಡೆದುಕೊಂಡಿದೆ. ಈ ವೈವಿಧ್ಯಕ್ಕೆ ಇಲ್ಲಿನ ಬೇರೆ ಬೇರೆ ಭಾಗಗಳಲ್ಲಿ ದೊರೆಯುವ ಬೇರೆ ಬೇರೆ ರೀತಿಯ ಮೂಲಸಾಮಗ್ರಿಯೂ ಕಾರಣ. ಕರ್ನಾಟಕದ ಪಶ್ಚಿಮ ಭಾಗದಲ್ಲಿ ಮಿದುವಾದ ಧಾರವಾಡ ಶಿಲಾಪದರವೂ ಪೂರ್ವಭಾಗದಲ್ಲಿ ಗಟ್ಟಿಯಾದ ಗ್ರಾನೈಟ್ ಕಲ್ಲೂ ನಡುವೆ ಕೆಂಪು ಮರಳುಶಿಲೆ ಮತ್ತು ಹಸಿರು ಬೆರೆತ ಬಿಳಿಯ ಶಾಹಬಾದ ಕಲ್ಲಿನ ಪದರಗಳೂ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಜಂಬುಕಲ್ಲೂ ಹೇರಳವಾಗಿ ದೊರೆಯು ತ್ತಿದ್ದು, ವಾಸ್ತುರೀತಿಗಳು ಈ ಮೂಲ ಸಾಮಗ್ರಿಗಳಿಗೆ ಹೊಂದಿಕೊಂಡು ಬೆಳೆದುಬಂದಿವೆ. ಆಯಾ ಸ್ಥಳಗಳಲ್ಲಿ ದೊರೆಯದ ಮೂಲಸಾಮಗ್ರಿಯನ್ನು ದೂರದಿಂದ ತರಿಸಿ ವಾಸ್ತುನಿರ್ಮಾಪಕರು ತಮ್ಮ ಅಭಿರುಚಿಗನುಗುಣವಾಗಿ ಆ ಪ್ರಾಂತ್ಯದಲ್ಲಿಲ್ಲದ ನೂತನ ಶೈಲಿಯಲ್ಲಿ ಕಟ್ಟಡಗಳನ್ನು ಕಟ್ಟಲು ಪ್ರಯತ್ನಿಸಿದ್ದರೂ ಇಂಥ ಸಂದರ್ಭಗಳು ಅಪೂರ್ವ. ವಾಯುಗುಣದ ವ್ಯತ್ಯಾಸವೂ ವಾಸ್ತುಶೈಲಿಯನ್ನು ರೂಪಿಸುವಲ್ಲಿ ತನ್ನ ಪ್ರಭಾವ ಬೀರಿದೆ. ವಾಸ್ತು ನಿರ್ಮಾಣಕ್ಕೆ ಅದನ್ನೊಂದು ಕಲೆಯಾಗಿ ಬೆಳೆಸುವುದಕ್ಕೆ ಮೂಲ ತಳಹದಿ ಮತಧರ್ಮಗಳು. ಹಲವು ಮತಧರ್ಮಗಳಿಗೆ ತವರೂ ಆಶ್ರಯಸ್ಥಾನವೂ ಆಗಿದ್ದ ಕರ್ನಾಟಕದಲ್ಲಿ ಪ್ರತಿಯೊಂದು ಮತದವರೂ ತಮ್ಮದೇ ಆದ ಮಂದಿರಗಳನ್ನು ಹೊಂದುವುದರಲ್ಲಿ ತೋರಿಸಿದ ಹುರುಡು ಸಮೃದ್ಧವಾಗಿ ವಾಸ್ತುನಿರ್ಮಾಣವಾಗಲು ಸಾಧಕವಾಯಿತು. ಇದೆಲ್ಲವನ್ನೂ ಮೀರಿ ಕರ್ನಾಟಕದಲ್ಲಿ ಕದಂಬ, ಗಂಗ, ಚಾಳುಕ್ಯ, ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರಗಳಂತಹ ಪ್ರಸಿದ್ಧ ರಾಜಮನೆತನ ಗಳು ಸುಭದ್ರ, ಸಾಮ್ರಾಜ್ಯಗಳನ್ನು ಕಟ್ಟಿ ದೇವಾಲಯ, ಬಸದಿ, ಮಠ ಮತ್ತಿತರ ಕಟ್ಟಡಗಳನ್ನು ನಿರ್ಮಿಸಲು ಹೇರಳವಾಗಿ ಸಹಾಯ ಮಾಡುತ್ತಿದ್ದುದರಿಂದ, ಅವುಗಳನ್ನು ನಡೆಸಿಕೊಂಡು ಬರಲು ಉದಾರವಾಗಿ ದತ್ತಿಗಳನ್ನು ಬಿಟ್ಟುದರಿಂದ, ದೇವಾಲಯ ಮೊದಲಾದುವನ್ನು ಕಟ್ಟಿಸುವುದು ಒಂದು ಪುಣ್ಯ ಕಾರ್ಯವೆಂದು ಜನ ಸಾಮಾನ್ಯರೂ ಭಾವಿಸಿದ್ದರಿಂದ ವಾಸ್ತುಕಲೆ ಇಲ್ಲಿ ಬಹುವಾಗಿ ಬೆಳೆದುಬರಲು ಅನುವಾಯಿತು.

ಈಗ ಬೆಳೆದುಬಂದಿರುವ ವಾಸ್ತುಶೈಲಿ ಆರಂಭಕಾಲದಲ್ಲಿ ಹೇಗಿತ್ತು ಎನ್ನುವುದನ್ನು ತಿಳಿಯುವುದು ಸಾಧ್ಯವಿಲ್ಲವಾದರೂ ಬಹುಶಃ ಆಗ ಮರ, ಬೊಂಬು, ಮಣ್ಣು ಮುಂತಾದ ಬೇಗ ನಾಶವಾಗಬಹುದಾದಂಥ ವಸ್ತುಗಳಿಂದ ಕಟ್ಟಡಗಳ ನಿರ್ಮಾಣ ಆರಂಭವಾಗಿದ್ದಿರಬೇಕು. ಸತ್ತವರ ನೆನಪಿಗಾಗಿ ಸಮಾಧಿ ನಿರ್ಮಿಸುವುದು, ಭೂತ ಅಥವಾ ದೈವಗಳಿಗಾಗಿ ತಮ್ಮ ವಾಸದ ಮನೆಗಳನ್ನನುಕರಿಸಿ ಬೇರೆಯಾಗಿ ಕಟ್ಟಡಗಳನ್ನು ಕಟ್ಟುವುದು ಆರಂಭದೆಸೆಯಲ್ಲಿ ಇದ್ದಿರಬಹುದಾದ ವಾಸ್ತುರೀತಿಗಳು. ನಡುವೆ ಒಂದು ಎತ್ತರವಾದ ಮರದ ಕಂಬ, ಅದನ್ನು ಬಳಸಿಕೊಂಡು ಗುಂಡಾದ ಅಥವಾ ಚೌಕಾಕಾರದ ಮಣ್ಣಿನ ಗೋಡೆಗಳು, ಕಂಬದ ತುದಿಯಿಂದ ಸುತ್ತಲೂ ಇಳಿಜಾರಾಗಿರುವಂತೆ ಹುಲ್ಲಿನ ಛಾವಣಿ, ಕಂಬದ ತುದಿಗೆ ಮಳೆಯ ನೀರು ಒಳಗಿಳಿಯದಂತೆ ಬೋರಲು ಹಾಕಿರುವ ಒಂದು ಮಡಕೆ, ಬಾಗಿಲಿಗೆ ಎದುರಾಗಿ ಒಳಗೋಡೆಯ ಮೇಲೆ ಮೃಣ್ಮೂರ್ತಿಗಳನ್ನು ಅರೆಯುಬ್ಬಿನಲ್ಲಿ ಬಿಡಿಸಿ ಬಣ್ಣಹಾಕುವ ಪದ್ಧತಿ ಇದ್ದಿರಬೇಕು. ಅನೂಚಾನವಾಗಿ ನಡೆದುಕೊಂಡು ಬಂದಿರುವ ಗ್ರಾಮದೇವತೆಗಳು, ಇತರ ಶಕ್ತಿದೇವತೆಗಳ ಇಂಥ ಸಾಮಾನ್ಯ ಗುಡಿಗಳು ಹಳ್ಳಿಗಳಲ್ಲಿ ಕಂಡುಬರುತ್ತಿದ್ದು ಅವು ಅತಿ ಪ್ರಾಚೀನ ವಾಸ್ತುಪದ್ಧತಿಯ ಅವಶೇಷಗಳೆಂಬುದು ಸ್ಪಷ್ಟ.

ಚರಿತ್ರೆಯ ಆರಂಭಕಾಲಕ್ಕೆ ಕರ್ನಾಟಕದಲ್ಲಿ ಇಟ್ಟಿಗೆಯ ಕಟ್ಟಡಗಳನ್ನು ಕಾಣುತ್ತೇವೆ. ಪೂರ್ಣರೂಪದಲ್ಲಿ ಈ ಕಟ್ಟಡಗಳು ಈಗ ಉಳಿದುಬಂದಿಲ್ಲ ವಾದರೂ ಗುಡಿ ಬಹುಶಃ ಚೋಳರ ಈ ಭಾಗದ ಗುಡಿಗಳಲ್ಲೆಲ್ಲ ದೊಡ್ಡದು. ಹಿಂದೆ ಇದ್ದ ಇಟ್ಟಿಗೆಯ ಕಟ್ಟಡವನ್ನು ತೆಗೆದು ಇವರು ಈ ಶಿಲಾ ದೇವಾಲಯವನ್ನು ನಿರ್ಮಿಸಿದರು. ನಂದಿಯ ಭೋಗನಂದೀಶ್ವರ ದೇವಾಲಯದ ಮುಂದೆ ರಾಜೇಂದ್ರ ಚೋಳನ ಕಾಲದಲ್ಲಿ ಕಟ್ಟಿಸಿರಬಹು ದಾದ ಕಲ್ಯಾಣ ಮಂಟಪದ ಕಂಬಗಳು ಕುಸುರಿನ ಕೆಲಸದಿಂದ ತುಂಬಿವೆ. ಬೇಗೂರಿನಲ್ಲಿರುವ ಚೋಳೇಶ್ವರ ದೇವಾಲಯ ಅಲ್ಲಿನ ಗಂಗರ ಕಾಲದ ನಾಗೇಶ್ವರ ದೇವಾಲಯದ ಪ್ರತಿಕೃತಿ.

ಕರ್ನಾಟಕದಲ್ಲಿ ವಾಸ್ತುಶೈಲಿಯ ಹಲವು ಬಗೆಯ ಪ್ರಯೋಗಗಳು ನಡೆದುದು ಮುಖ್ಯವಾಗಿ ಬಾದಾಮಿ ಚಳುಕ್ಯರ ಆಳಿಕೆಯಲ್ಲಿ; ಅವರ ಮುಖ್ಯ ನಗರಗಳಾಗಿದ್ದ ಐಹೊಳೆ, ಬಾದಾಮಿ, ಮಹಾಕೂಟ, ಪಟ್ಟದಕಲ್ಲುಗಳಲ್ಲಿ ವಾಸ್ತವವಾಗಿ ಈ ಚಳುಕ್ಯರೇ ಕರ್ನಾಟಕದ ವಿಶಿಷ್ಟ ವಾಸ್ತುಶೈಲಿಯ ಆದ್ಯ ಪ್ರವರ್ತಕರು. ಇವರಿಗೆ ಮುಂಚೆ ಕರ್ನಾಟಕದಲ್ಲಿ ಶಿಲಾಕಟ್ಟಡಗಳ ರಚನೆ ಅಷ್ಟೇನು ಪ್ರಚಲಿತವಿರಲಿಲ್ಲ. ಗುಹಾ ಶಿಲ್ಪ ಮತ್ತು ಇಟ್ಟಿಗೆ ಕಟ್ಟಡಗಳೇ ರೂಢಿಯಲ್ಲಿದ್ದುದು. ಆದ್ದರಿಂದಲೇ ಆರಂಭಕಾಲದಲ್ಲಿ ಇವರು ಸ್ವತಂತ್ರವಾಗಿ ಪ್ರಯೋಗಗಳನ್ನು ನಡೆಸಿ ಅದಕ್ಕೊಂದು ರೂಪಕೊಟ್ಟರು. ಮುಂದಿನ ವಾಸ್ತುಶೈಲಿಗೆ ಮಾದರಿ ಹಾಕಿಕೊಟ್ಟರು. 5ನೆಯ ಶತಮಾನದಲ್ಲಿಯೇ ಇವರು ಕಟ್ಟಿದ ಗೌಡರಗುಡಿ, ಲಾಡಖಾನ್, ಕೊಂತಿಗುಡಿ ಮೊದಲಾದವು ಪ್ರಯೋಗಾತ್ಮಕ ದೇವಾಲಯಗಳು. ಬಹುಶಃ ಅವು ಆಗಲೇ ಅಲ್ಲಿದ್ದ ಸಾತವಾಹನರ ಇಟ್ಟಿಗೆ ಕಟ್ಟಡಗಳ ಮಾದರಿಗಳನ್ನು ಅನುಕರಿಸಿರಬೇಕು. ಈ ದೇವಾಲಯಗಳಲ್ಲಿ ಒಂದು ದೊಡ್ಡ ಮಂಟಪ ಮಾತ್ರ ಇರುತ್ತದೆ. ದೀರ್ಘ ಚತುರಸ್ರಾಕಾರದ ಮಂಟಪದ ನಡುವಣ ಅಂಕಣವನ್ನು ಗೋಡೆಗಳಿಂದ ಮುಚ್ಚಿ ದೇವಕೋಷ್ಠವಾಗಿ ಪರಿವರ್ತಿಸಿದ ಗೌಡರಗುಡಿಗೆ ಮುಖಮಂಟಪವಿಲ್ಲ; ಕೊಂತಿಗುಡಿಯು ಗುಜ್ಜ ಮತ್ತು ದಪ್ಪಚಾಕ ಕಂಬಗಳ ಮೇಲೆ ನಿರ್ಮಿತವಾದ ದೇವಾಲಯ; ಲಾಡಖಾನ್ ಸ್ಥೂಲವಾದ ರಚನೆಯನ್ನು ಹೊಂದಿರುವ ಎರಡು ಸಾಲು ದಪ್ಪ ಕಂಬಗಳಿರುವ ಸು.50 ಅಡಿ ಚದರದ ದೊಡ್ಡ ಹಜಾರ. ಇದರ ಹಿಂದಿನ ಮಧ್ಯದಂಕಣವನ್ನು ಗರ್ಭ ಗುಡಿಯಾಗಿ ಪರಿವರ್ತಿಸಿದೆ. ಮುಂದೆ ಮೂರು ಅಂಕಣದ ಮುಖಮಂಟಪ ವಿದೆ. ಹಜಾರದ ನಡುವಣಂಕಣದ ಮೇಲೆ ಮೇಲಂತಸ್ತಿನ ಗುಡಿಯೂ ಇದೆ. ಇವುಗಳಲ್ಲಿ ಒಂದು ನಿಶ್ಚಿತ ವಿನ್ಯಾಸವಿಲ್ಲ; ಇವು ಸ್ಥೂಲ ಮತ್ತು ಕುಬ್ಜ. ರಚನೆಯಲ್ಲಿ ಒರಟುತನ-ಇವನ್ನೆಲ್ಲ ನೋಡಿದರೆ ಕಲ್ಲಿನ ದೇವಾಲಯಗಳ ನಿರ್ಮಾಣದಲ್ಲಿ ಇವು ಮೊದಲ ಪ್ರಯತ್ನಗಳೆಂಬುದು ಸ್ಪಷ್ಟವಾಗುತ್ತದೆ.

ಮುಂದಿನ ಹೆಜ್ಜೆ ಐಹೊಳೆಯ ದುರ್ಗದಗುಡಿ. ಸು.6ನೆಯ ಶತಮಾನದ ಆರಂಭಕಾಲಕ್ಕೆ ಸೇರಿರಬಹುದಾದ ಈ ದೇವಾಲಯ ಹೊಸರೀತಿಯ ಪ್ರಯೋಗಕ್ಕೊಳಗಾಗಿದೆ. ಬೇರೆ ಬೇರೆ ಕಡೆ ಪ್ರಚಲಿತವಾಗಿದ್ದ ಶೈಲಿಗಳನ್ನು ಇದರಲ್ಲಿ ಅಳವಡಿಸುವ ಪ್ರಯತ್ನ ನಡೆದಿದೆ. ಬೌದ್ಧರ ಚೈತ್ಯಾಲಯಗಳಂತೆ ಅರ್ಧವರ್ತುಲಾಕಾರದ ಗರ್ಭಗುಡಿ, ಅದಕ್ಕೆ ಸೇರಿದಂತೆ ಆಯಾಕಾರದ ಮಂಟಪ, ಇವೆರಡಕ್ಕೂ ಹೊಂದಿಕೊಂಡಂತೆ ಪ್ರದಕ್ಷಿಣಾಪಥ ಮುಂಭಾಗ ದಲ್ಲಿ ಮುಖಭದ್ರ, ಎತ್ತರವಾದ ಜಗತಿಯ ಮೇಲೆ ನಿರ್ಮಿತವಾದ ಈ ಗುಡಿಯ ಕೈಸಾಲೆಗಳ ಛಾವಣಿ ಸ್ವಲ್ಪಮಟ್ಟಿಗೆ ಇಳಿಜಾರು ಆಗಿದ್ದು ಗರ್ಭಗುಡಿಯ ಮೇಲೆ ಔತ್ತರೇಯ ಪದ್ಧತಿಯ ಶಿಖರವನ್ನು ಹೊಂದಿದೆ. ಹೀಗೆ ಗುಹಾಶೈಲಿ, ಔತ್ತರೇಯ ನಾಗರಶೈಲಿ ಮತ್ತು ಬೌದ್ಧ ಚೈತ್ಯಶೈಲಿ ಗಳನ್ನು ಇಲ್ಲಿಯೇ ಹುಟ್ಟಿದ ಶಿಲಾಕಟ್ಟಡಗಳ ಶೈಲಿಯೊಂದಿಗೆ ಮೇಳವಿಸಿ ವಿನೂತನ ಮಾದರಿಯನ್ನು ಇಲ್ಲಿ ಸೃಷ್ಟಿಸಿದೆ.

ಸುಮಾರು ಇದೇ ಕಾಲದಲ್ಲಿ ಐಹೊಳೆಯಲ್ಲಿ ಎರಡು, ಬಾದಾಮಿಯಲ್ಲಿ ನಾಲ್ಕು ಗುಹಾ ದೇವಾಲಯಗಳನ್ನು ಕೊರೆದಿದ್ದಾರೆ. ಇವುಗಳ ವಿನ್ಯಾಸ ಒಂದೇ ಬಗೆಯದು. ಒಂದೊಂದರಲ್ಲಿಯೂ ಕಂಬದ ಸಾಲುಗಳಿಂದ ಕೂಡಿದ ಮೊಗಸಾಲೆ, ದೊಡ್ಡದಾದ ಹಜಾರ, ಹಿಂದೆ ಚಿಕ್ಕದೊಂದು ಗರ್ಭಗುಡಿ. ಇವು ಗೋಡೆಗಳ ಮೇಲೆ ಹೆಚ್ಚು ಉಬ್ಬಿನಿಂತಿರುವ ಬೃಹತ್ ಪ್ರಮಾಣದ ಮೂರ್ತಿ ಶಿಲ್ಪಗಳಿಗೆ ಪ್ರಸಿದ್ಧವಾಗಿವೆ. ಹಿಂದು ಮತ್ತು ಜೈನ ಗುಹಾವಾಸ್ತು ರೀತಿಗೆ ಈ ಗುಹಾದೇವಾಲಯಗಳು ಆದಿ ಎಂದು ಹೇಳಲಾಗಿದೆ. ಇವುಗಳಲ್ಲಿ ಒಂದಾದ ವೈಷ್ಣವ ಗುಹೆಯನ್ನು ಮಂಗಲೀಶ 578ರಲ್ಲಿ ಕೊರೆಸಿದ.

ಏಳನೆಯ ಶತಮಾನದಲ್ಲಿ ಇಲ್ಲಿ ದ್ರಾವಿಡ ವಾಸ್ತುಶೈಲಿಯನ್ನು ಅಳವಡಿಸಿ ಕಟ್ಟಿರುವ ಗುಡಿಗಳನ್ನು ಕಾಣುತ್ತೇವೆ. ಇಮ್ಮಡಿ ಪುಲಕೇಶಿಯ ಕಾಲದ ಮೇಗುಟಿ, ಮಹಾಕೂಟೇಶ್ವರ, ಮಾಲೆಗಿತ್ತಿ ಶಿವಾಲಯ ಈ ಶೈಲಿಗೆ ಸೇರಿದ್ದು. ಇವುಗಳಲ್ಲಿ ಮಾಲೆಗಿತ್ತಿ ಶಿವಾಲಯ ದ್ರಾವಿಡ ಸಂಪ್ರದಾಯದ ಎಲ್ಲ ಅಂಶಗಳನ್ನೂ ಒಳಗೊಂಡಿದೆ. ಆದರೂ ದಪ್ಪ ಏಕಶಿಲಾಸ್ತಂಭಗಳು ದಪ್ಪ ಬೋದಿಗೆಗಳು ಹಾಗೂ ಕಿರುಲೋವೆಗಳು ಮುಂತಾದವು ಇದರಲ್ಲಿ ಗುಹಾಶಿಲ್ಪದ ಕುರುಹು ಉಳಿದಿರುವುದನ್ನು ಸೂಚಿಸುತ್ತದೆ. ಮುಂದೆ ವಿಜಯಾದಿತ್ಯ, ಇಮ್ಮಡಿ ವಿಕ್ರಮಾದಿತ್ಯರ ಕಾಲದಲ್ಲಿ ಚಳುಕ್ಯರು ಕಂಚಿಯವರೆಗೆ ನುಗ್ಗಿದಾಗ ಕಂಚಿಯಲ್ಲಿ ರಾಜ ಸಿಂಹೇಶ್ವರ ದೇವಾಲಯದ ಸೌಂದರ್ಯಕ್ಕೆ ಮಾರುಹೋದರು. ಬಹುಶಃ ಆಗ ಅಲ್ಲಿಂದ ಹಲವು ರೂವಾರಿಗಳನ್ನು ತಮ್ಮ ರಾಜಧಾನಿಗೆ ಅವರು ಕರೆತಂದಿರಬೇಕು. ದ್ರಾವಿಡ ಶೈಲಿಯ ಹಲವಾರು ಕಟ್ಟಡಗಳು ಆಗ ನಿರ್ಮಾಣಗೊಂಡವು. ಇದೇ ಕಾಲದಲ್ಲಿಯೇ ಔತ್ತರೇಯ ನಾಗರಶೈಲಿಯ ಕಟ್ಟಡಗಳನ್ನೂ ಇಲ್ಲಿ ಕಟ್ಟಿರುವುದು ಕಂಡುಬರುತ್ತದೆ. ಪಟ್ಟದಕಲ್ಲಿನ ಈ ಎರಡು ಶೈಲಿಗಳ ದೇವಾಲಯಗಳನ್ನೂ ಜೊತೆಜೊತೆಯಾಗಿ ಕಟ್ಟಿರುವುದನ್ನು ನೋಡಬಹುದು. ಚಳುಕ್ಯ ಶಿಲ್ಪದ ಉಚ್ಛ್ರಾಯವನ್ನು ಕಾಣುವುದೂ ಅಲ್ಲಿಯೇ. ಹೆಚ್ಚು ಬೆಳೆವಣಿಗೆ ಹೊಂದದ ಪಾಪನಾಥ, ಜಂಬುಲಿಂಗ, ಕರಿಸಿದ್ದೇಶ್ವರ ಮತ್ತು ಕಾಶಿನಾಥ ದೇವಾಲಯಗಳು ಔತ್ತರೇಯ ರೀತಿಯಲ್ಲಿ ನೇರವಾಗಿ ಮೇಲೆದ್ದು ಕೊನೆಯಲ್ಲಿ ಒಳಕ್ಕೆ ಬಾಗುವ, ಮೇಲೆ ಆಮಲಕವನ್ನು ಹೊಂದಿದ ಶಿಖರಗಳನ್ನು ಹೊಂದಿದ್ದರೆ, ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ ಮತ್ತು ಗಳಗನಾಥ ದೇವಾಲಯಗಳು ಅಂತಸ್ತುಗಳಾಗಿ ಮೇಲೇಳುವ ದ್ರಾವಿಡ ಶಿಖರಗಳನ್ನು ಹೊಂದಿವೆ. ಇವು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದಿದ ದೇವಾಲಯಗಳ ಎಲ್ಲ ಭಾಗಗಳನ್ನೂ ಒಳಗೊಂಡ ದೇವಾಲಯಗಳು. ತಾವು ಆಳಿದ 200 ವರ್ಷಗಳ ಕಾಲದಲ್ಲಿ ಬಾದಾಮಿ ಚಳುಕ್ಯರು ಅವರ ಕಾಲದ ಅನಂತರ ವಿಸ್ತಾರವಾಗಿ ಬೆಳೆದು ಹಬ್ಬಿದ ವಾಸ್ತುಶೈ ಲಿಗಳಿಗೆ ಭದ್ರವಾದ ಬುನಾದಿಯನ್ನು ಹಾಕಿದರು. ಈ ಎಲ್ಲ ರೀತಿಯ ವಾಸ್ತುಶೈಲಿಗಳಿಗೂ ಅವರು ಉಪಯೋಗಿಸಿದುದು ಕೆಂಪು ಮರಳು ಶಿಲೆಯ ಕಲ್ಲು.

ಬಾದಾಮಿ ಚಳುಕ್ಯರ ಉತ್ತರಾಧಿಕಾರಿಗಳಾದ ರಾಷ್ಟ್ರಕೂಟರೂ ವಾಸ್ತುಶಿಲ್ಪ ಕಲೆಯನ್ನು ಉತ್ತಮವಾಗಿ ಬೆಳೆಸಿದರು. ಎಲ್ಲೋರ, ಎಲಿಫೆಂಟಾಗಳಲ್ಲಿನ ಇವರ ಸಾಧನೆ ಭಾರತದಲ್ಲಿಯೇ ಅತ್ಯುಚ್ಚ ಅಭಿವ್ಯಕ್ತಿ ಮತ್ತು ಸಿದ್ಧಿಗಳನ್ನು ಪಡೆದುವೆಂದು ಗೋಸ್ವಾಮಿಯವರು ಅಭಿಪ್ರಾಯ ಪಡುತ್ತಾರೆ. ಕರ್ನಾಟಕದಲ್ಲಿ ಇವರ ವಾಸ್ತು ರೀತಿಗಳು ಉಳಿದು ಬಂದಿರುವುದು ಸ್ವಲ್ಪ. ಅದರಲ್ಲಿ ಸಿರಿವಾಳದಲ್ಲಿರುವ ಒಂದು ಚಿಕ್ಕ ಗುಡಿಯ ಸುಕನಾಸಿಯಲ್ಲಿರುವ ಪಲ್ಲವ ರೀತಿಯ ಸಿಂಹಸ್ತಂಭಗಳು ಗಮನಾರ್ಹ.

ಕಲ್ಯಾಣದ ಚಾಳುಕ್ಯರು 10ನೆಯ ಶತಮಾನದ ಉತ್ತರಾರ್ಧದಲ್ಲಿ ಆಡಳಿತಕ್ಕೆ ಬಂದಾಗ ಕರ್ನಾಟಕದ ವಾಸ್ತುಕಲೆಯಲ್ಲಿ ಹೊಸ ಮಜಲು ಆರಂಭವಾಯಿತು. ಮೂಲತಃ ಬಾದಾಮಿ ಚಳುಕ್ಯರ ವಾಸ್ತುಸಂಪ್ರದಾಯವನ್ನೇ ಇವರು ಮುಂದುವರಿಸಿದರೂ ಅದರಲ್ಲಿ ಅನೇಕ ಬದಲಾವಣೆಗಳನ್ನು ತಂದು ನೂತನ ಶೈಲಿಯನ್ನು ಬೆಳೆಸಿದರು. ಅಲ್ಲಿಯವರೆಗೆ ಕಟ್ಟಡಗಳು ಹೆಚ್ಚು ಸರಳವಾಗಿ ಸ್ಥೂಲವಾಗಿ ಉನ್ನತವಾಗಿರುತ್ತಿದ್ದುವು; ಅಲಂಕರಣ ಹೆಚ್ಚು ಇರುತ್ತಿರಲಿಲ್ಲ. ಅವುಗಳ ಮೇಲಿನ ಮೂರ್ತಿಶಿಲ್ಪಗಳ ಪ್ರಮಾಣ ದೊಡ್ಡದು, ಹೆಚ್ಚು ಸರಳ. ಕಟ್ಟಡಗಳಿಗೆ ಉಪಯೋಗಿಸುತ್ತಿದ್ದುದು ನಸುಗೆಂಪಿನ ಮರಳುಶಿಲೆ. ಕಲ್ಯಾಣದ ಚಾಳುಕ್ಯರು ಗುಹಾವಾಸ್ತುವಿನ ಸ್ಥೂಲತೆಯನ್ನು ಪೂರ್ಣವಾಗಿ ಕೈಬಿಟ್ಟರು. ಮರಳು ಶಿಲೆಯ ಬದಲು ಕ್ಲೋರೈಟಿಕ್ ಶಿಸ್ಟ್ ಎಂಬ ಹಸುರು ಬೆರೆತ ಕಪ್ಪುಕಲ್ಲನ್ನು ಬಳಸಿದರು. ಇದು ಹೆಚ್ಚು ಮೃದುವಾದ್ದರಿಂದ ದೊಡ್ಡಗಾತ್ರದ ಕಂಬಗಳಾಗಲಿ, ಹೆಚ್ಚು ತೂಕ ತಡೆಯುವ ಸಾಮಥ್ರ್ಯವಾಗಲಿ ಇಲ್ಲದ್ದರಿಂದ ದೇವಾಲಯಗಳ ಪ್ರಮಾಣ ಕಡಿಮೆಯಾಯಿತು. ದ್ರಾವಿಡಶೈಲಿಯ ಅಡ್ಡಗೆರೆಗಳ ಮಾಟ ನಾಗರಶೈಲಿಯ ಲಂಬಮಾಟಗಳನ್ನು ಹಿತಮಿತವಾಗಿ ಸಂಯೋಜಿಸಿ ಸಂಕರ ರೂಪವನ್ನು ಕೊಡಲಾಯಿತು. ಕಲ್ಯಾಣ ಚಾಳುಕ್ಯರ ದೇವಾಲಯಗಳ ತಲವಿನ್ಯಾಸ ಚೌಕ ಅಥವಾ ದೀರ್ಘ ಚತುರಸ್ರಾಕಾರವಾಗಿಯೇ ಮುಂದುವರಿದರೂ ಗೋಡೆಗಳು ಸರಳವಾಗಿ ನೇರವಾಗಿಲ್ಲದೆ ಕೋಚು ಕೋಚಾಗಿ ಉಬ್ಬಿರುತ್ತವೆ. ಒಂದೊಂದು ಕೋಚಿನ ಮೂಲೆಗೂ ಅರೆಗಂಬಗಳ ನಡುವೆ ಕುಳ್ಳಾದ, ಆದರೆ ಹೆಚ್ಚು ಉಬ್ಬಿನಿಂತ ಹಲವು ಭಂಗಿಗಳ ಮೂರ್ತಿ ಶಿಲ್ಪಗಳೂ ಇರುತ್ತವೆ. ಇದರೊಂದಿಗೆ ಗೋಡೆಗಳ ಮೇಲೆ ಕಿರಿದಾಗಿ ಬಾಗಿದ್ದ ಲೋವೆಯ ಬದಲು ಇಳಿಜಾರಾಗಿ ದೊಡ್ಡದಾಗಿ ಚಾಚಿರುವ ಅಥವಾ ಎರಡು ಬಾಗುಗಳಲ್ಲಿ S ಆಕಾರದಲ್ಲಿ ಬಳುಕಿರುವ ಅಗಲವಾದ ಲೋವೆಗಳನ್ನು ಉಪಯೋಗಿಸಲಾರಂಭವಾಯಿತು. ಇದು ಕೇವಲ ಆಲಂಕಾರಿಕವಲ್ಲದೆ ಕೆಳಗಿನ ಶಿಲ್ಪಾಲಂಕರಣಕ್ಕೆ ರಕ್ಷಣೆಯೂ ಆಯಿತು. ಬಾಗಿಲುವಾಡಗಳನ್ನು ವಿಸ್ತಾರವಾಗಿ ನವುರಾಗಿ ಹಲವು ಪಟ್ಟಿಕೆಗಳಿಂದಲಂಕರಿಸಿ ಶಿಲ್ಪವೈವಿಧ್ಯದಿಂದ ತುಂಬಿಸಿರುತ್ತಾರೆ. ಕಂಬಗಳು ತೆಳುವಾಗಿ ಕೆಳಗೆ ಮೇಲೆ ಘನಾಕೃತಿಗಳನ್ನು ಹೊಂದಿ, ನಡುವೆ ಗುಂಡು ಅಥವಾ ಅಷ್ಟಮುಖಗಳ ಮೇಲೆ ಹಲವು ಆಲಂಕಾರಿಕ ರೂಪಗಳನ್ನು ಕೊಟ್ಟಿರುವುದುಂಟು. ಈ ದೇವಾಲಯಗಳಲ್ಲಿ ಗರ್ಭಗೃಹ, ಸುಕನಾಸಿ, ಹಲವು ಕಂಬಗಳುಳ್ಳ ತೆರೆದ ಮಂಟಪಗಳಿರುವುದೇ ಸಾಮಾನ್ಯ. ಶಿವದೇವಾಲಯಗಳಲ್ಲಿ ಮುಂದೆ ಬೇರೆಯಾಗಿ ಒಂದು ನಂದಿಮಂಟಪವಿರ ಬಹುದು. ಸುಕನಾಸಿ ಅಥವಾ ಅರ್ಧ ಮಂಟಪಕ್ಕೆ ಗೋಡೆ, ಬಾಗಿಲುಗಳಿಲ್ಲದೆ ಎರಡು ತೆಳುಗಂಬಗಳ ಮೇಲೆ ಸುಂದರವಾಗಿ ಕಂಡರಿಸಿದ ಮಕರ ತೋರಣಗಳಿರುತ್ತವೆ. ಇದನ್ನು ಮೀರಿದ ಕೆಲವು ವೈಲಕ್ಷಣ್ಯಗಳನ್ನು ಕೆಲವು ದೇವಾಲಯಗಳಲ್ಲಿ ಕಾಣಬಹುದು. ಸಿರವಾಳ, ಮುದೆನೂರು, ಕೆಂಬಾವಿ ಮೊದಲಾದ ಕಡೆ ಮಧ್ಯದಲ್ಲಿ ಚತುರಸ್ರವಾದ ಗರ್ಭಗುಡಿ, ಅದರ ನಾಲ್ಕು ಕಡೆಗೂ ಅರ್ಧ ಮಂಟಪ, ಮಹಾಮಂಟಪ, ಮತ್ತೆ ಅರ್ಧ ಮಂಟಪ ಮತ್ತು ಗರ್ಭಗೃಹಗಳಿದ್ದು ನಾಲ್ಕು ಬೇರೆ ಬೇರೆ ದೇವಾಲಯಗಳು ಮಧ್ಯದ ದೇವಾಲಯಕ್ಕೆ ಕೂಡಿಕೊಂಡಂತಿರುವ ವಿಶಿಷ್ಟ ವಿನ್ಯಾಸವುಳ್ಳ ದೇವಾಲಯಗಳುಂಟು. ಅಪೂರ್ವವಾಗಿ ಡಂಬಳದ ದೊಡ್ಡ ಬಸಪ್ಪ ದೇವಾಲಯ ನಕ್ಷತ್ರಾಕಾರದ ವಿನ್ಯಾಸದಲ್ಲಿದೆ. ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಬಿಟ್ಟರೆ ಕರ್ನಾಟಕದಲ್ಲಿಯೇ ಇದು ಅತ್ಯಂತ ಸುಂದರ ದೇವಾಲಯ ಎಂದು ಕಸಿನ್ಸ್ ಅಭಿಪ್ರಾಯಪಡುತ್ತಾನೆ. ಬಿದರೆ, ಗುಲ್ಬರ್ಗ, ಬಿಜಾಪುರ, ಧಾರವಾಡ, ಬೆಳಗಾಂವಿ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಇಂಥ ದೇವಾಲಯಗಳೋ ಅವುಗಳ ಅವಶೇಷ ಗಳೋ ವಿಪುಲವಾಗಿ ಕಂಡುಬರುತ್ತವೆ. ಚಾಳುಕ್ಯರ ಆಳ್ವಿಕೆ ಮುಗಿದ ಮೇಲೂ ಹೊಯ್ಸಳರು, ಸೇವುಣರು, ಕಾಕತೀಯರು ತಮ್ಮ ತಮ್ಮ ಪ್ರಾಂತಗಳಲ್ಲಿ ಇದೇ ಮಾದರಿಯಂಥ ವಾಸ್ತುಶೈಲಿಯನ್ನು ಮುಂದುವರಿಸಿ ಬೆಳೆಸಿದರು.

ಕಲ್ಯಾಣ ಚಾಳುಕ್ಯರು ಕರ್ನಾಟಕದಲ್ಲಿ ವಿಶಿಷ್ಟ ವಾಸ್ತುಶೈಲಿಯನ್ನು ವ್ಯಾಪಕವಾಗಿ ಪ್ರಚುರಪಡಿಸಿದರೆ, ಅವರ ಸಾಮಂತರಾಗಿದ್ದು ಅನಂತರ ಸ್ವತಂತ್ರವಾಗಿ ಚಕ್ರಾಧಿಪತ್ಯವನ್ನು ಸ್ಥಾಪಿಸಿ ಆಳಿದ ಹೊಯ್ಸಳರು ಅದನ್ನು ಶ್ರೀಮಂತಗೊಳಿಸಿದರು. ಚಾಳುಕ್ಯ ಶೈಲಿಯನ್ನು ವಾಸ್ತುವಿನಲ್ಲಿ ಅಳವಡಿಸಿ ಕೊಂಡ ಹೊಯ್ಸಳರು ಮುಂದೆ ಅದನ್ನು ವೈವಿಧ್ಯಮಯವಾಗಿ ಅಪೂರ್ವ ವಿನ್ಯಾಸಗಳೊಡನೆ ಬೆಳೆಸಿ ತಮ್ಮದೇ ಆದ ಶೈಲಿಯನ್ನಾಗಿ ಮಾರ್ಪಡಿ ಸಿದರು. ಇವರ ಕಾಲದಲ್ಲಿ ಶೈವ, ವೈಷ್ಣವ, ಜೈನ ಹಾಗೂ ಮತ್ತಿತರ ಮತಗಳ ದೇವಾಲಯಗಳು ನಿರ್ಮಾಣವಾಗಲು, ಬೆಳೆಯಲು ಸಮಾನವಾದ ಪ್ರೋತ್ಸಾಹ ದೊರೆಯಿತು. ಆದ್ದರಿಂದ ಒಂದೊಂದು ಧರ್ಮದವರೂ ಹುರುಡಿನಿಂದ ತಮ್ಮ ತಮ್ಮ ದೇವಾಲಯಗಳನ್ನು ಯಥೇಚ್ಛವಾಗಿ ನಿರ್ಮಿಸಿದರು. ಇವರು ಕಟ್ಟಿಸಿದ ದೇವಾಲಯಗಳಲ್ಲಿ ಸರಳವಾದ ಆಯತಾಕಾರದ ಅರೆಗಂಬಗಳಿಂದ ಕೂಡಿದ ಗೋಡೆಗಳನ್ನುಳ್ಳ ದೇವಾಲಯಗಳು ಅನೇಕವಿದ್ದರೂ ಇವರ ವಿಶಿಷ್ಟವೂ ಸಂಕೀರ್ಣವೂ ಆದ ವಿನ್ಯಾಸದ ಪ್ರೌಢಾವಸ್ಥೆಯನ್ನು ತೋರುವ ಪರಿಪೂರ್ಣ ದೇವಾಲಯಗಳು ಹೆಚ್ಚು ಗಮನಾರ್ಹವಾಗಿವೆ. ಈ ದೇವಾಲಯಗಳ ಮುಖ್ಯ ಲಕ್ಷಣವೆಂದರೆ ಅವುಗಳನ್ನು ಎತ್ತರವಾದ ಜಗತಿಯ ಮೇಲೆ ಕಟ್ಟಿರುವುದು.

ಸಾಮಾನ್ಯವಾಗಿ ಹೊಯ್ಸಳ ದೇವಾಲಯಗಳು ಹೆಚ್ಚು ಎತ್ತರವಿರುವುದಿಲ್ಲ. ಆದ್ದರಿಂದ ಈ ಜಗತಿಗಳು ಅವಕ್ಕೊಂದು ಎತ್ತರವನ್ನು ಒದಗಿಸುತ್ತವೆ. ಜಗತಿಗಳು ದೇವಾಲಯಗಳ ತಲ ವಿನ್ಯಾಸವನ್ನೇ ಅನುಸರಿಸಿದ್ದು ವಿಶಾಲ ವಾಗಿರುವುದರಿಂದ ಅವು ಪ್ರದಕ್ಷಿಣಪಥವಾಗಿಯೂ ಉಪಯುಕ್ತವಾಗಿವೆ. ವೈವಿಧ್ಯಮಯವಾದ ಹೊಯ್ಸಳ ದೇವಾಲಯಗಳ ತಲವಿನ್ಯಾಸ ಹೆಚ್ಚು ಸಂಕೀರ್ಣವಾದದ್ದು. ಅಚ್ಚುಕಟ್ಟಾಗಿ ಉಬ್ಬಿದ ಆಯಾಕಾರದ ಗೋಡೆಗಳಿಂದ ಕೂಡಿರಬಹುದು. ಅಷ್ಟಭದ್ರಾಕಾರದಲ್ಲಿರ ಬಹುದು ಅಥವಾ ಅಷ್ಟಭದ್ರಾ ಮತ್ತು ಅಷ್ಟಕೋನ ನಕ್ಷತ್ರಗಳ ಸಂಕೀರ್ಣವಾಗಿರಬಹುದು ಅಥವಾ 16 ಮೂಲೆಗಳ ನಕ್ಷತ್ರಾಕಾರವಾಗಿರ ಬಹುದು. ಹೀಗೆ ಗೋಡೆಗಳನ್ನು ಹಲವು ಮುಖವಾಗಿ ಒಡೆಯುವುದರಿಂದ ರೂವಾರಿಗಳಿಗೆ ಕೆತ್ತನೆಯ ಕೆಲಸಕ್ಕೆ ಹೆಚ್ಚು ಅವಕಾಶ ದೊರೆಯಿತಲ್ಲದೆ ಶಿಲ್ಪಗಳ ಮೇಲೆ ನೆಳಲು ಬೆಳಕುಗಳ ಪ್ರಭಾವ ಬೀರಲು ಅನುಕೂಲವಾಯಿತು. ಹೊಯ್ಸಳ ದೇವಾಲಯಗಳು ಅಡಿಯಿಂದ ಮುಡಿಯವರೆಗೂ ಕುಸುರಿ ಶಿಲ್ಪದಿಂದ ತುಂಬಿರುವುದು ಇನ್ನೊಂದು ವೈಶಿಷ್ಟ್ಯ. ಇಲ್ಲಿ ವಾಸ್ತುಶಿಲ್ಪ ಮೂರ್ತಿಶಿಲ್ಪಕ್ಕೆ ಒಂದು ಆಸರೆ ಮಾತ್ರ. ಜಗತಿಯ ಮೇಲಿನ ತಳಹದಿ ಹಲವಾರು ಅಡ್ಡಪಟ್ಟಿಕೆಗಳಾಗಿ ವಿಂಗಡಣೆಗೊಂಡು ಒಂದೊಂದು ಪಟ್ಟಿಕೆಯಲ್ಲೂ ಆನೆಸಾಲು, ಕುದುರೆಸಾಲು, ಸಿಂಹಸಾಲು, ಸಾಲುಹಂಸ, ಬಳ್ಳಿಸುರುಳಿ, ರಾಮಾಯಣ, ಭಾರತ, ಭಾಗವತಗಳ ಶಿಲ್ಪ ನವುರಾಗಿ ಕೆತ್ತನೆಗೊಂಡಿವೆ. ಮೇಲಿನ ಗೋಡೆಗಳ ಮೇಲೆ, ಅರೆಗೋಪುರಗಳ ಕೆಳಗೋ ಬಳ್ಳಿವಿತಾನಗಳ ಕೆಳಗೋ ದೇವಾನುದೇವತೆಗಳ, ಅವರ ಪರಿವಾರವರ್ಗದ ಮೂರ್ತಿಶಿಲ್ಪಗಳ ವಿವಿಧ ಭಂಗಿಗಳು ಸಾಲುಗೋಡೆ ಯನ್ನು ತುಂಬಿರುತ್ತದೆ. ಗಾಳಿಬೆಳಕಿನ ವ್ಯವಸ್ಥೆಗಾಗಿ ಇರುವ ಜಾಲಂಧ್ರಗಳೂ ಹಲವು ಬಗೆಯ ಶಿಲ್ಪಗಳಿಂದ ಕೂಡಿವೆ. ಸಾಮಾನ್ಯವಾಗಿ ಗರ್ಭಗೃಹದ ಮೂರು ಕಡೆಯೂ ಊರೆಯನ್ನೊದಗಿಸುವ ಸಲುವಾಗಿ ಆಲಂಕಾರಿಕವಾದ ದೊಡ್ಡ ಮಂಟಪಗಳಿಂದ ಕೂಡಿರುವ ಗೂಡುಗಳಿರುತ್ತವೆ. ಎರಡು ಬಳುಕಿನ ದೊಡ್ಡಲೋವೆಗಳ ಮೇಲೂ ಕೀರ್ತಿಮುಖ, ಮಣಿಹಾರಗಳ ಅಲಂಕರಣವಿರುತ್ತದೆ. ಒಮ್ಮೊಮ್ಮೆ ಲೋವೆಯ ಕೆಳಗೆ ಮದನಿಕೆಗಳಿರುವುದುಂಟು. ತಲವಿನ್ಯಾಸವನ್ನೇ ಅನುಸರಿಸಿ ಮೇಲೆದ್ದ ಶಿಖರಗಳು ಸರ್ವಾಲಂಕೃತವಾಗಿರುತ್ತವೆ.

ಸಾಮಾನ್ಯವಾಗಿ ಹೊಯ್ಸಳ ದೇವಾಲಯಗಳ ರಚನೆಯಲ್ಲಿ ಒಂದು ಗರ್ಭಗೃಹ, ಅದರ ಮುಂದೆ ಸುಕನಾಸಿ ಮತ್ತು ನವರಂಗಗಳು, ನವರಂಗದ ಮುಂದೆ ಒಂದಂಕಣದ ಮುಖಭದ್ರ ಇರುತ್ತದೆ. ಇದೇ ರೀತಿಯ ಜೋಡಿ ದೇವಾಲಯಗಳನ್ನು ಒಂದರ ಪಕ್ಕ ಒಂದು ಕಟ್ಟುವು ದೂಇಂಥ ಎರಡು ದೇವಾಲಯಗಳನ್ನು ಒಂದೇ ಹಜಾರದಿಂದ ಕೂಡಿಸು ವುದೂ ಉಂಟು. ನವರಂಗದ ಮೂರುಕಡೆ ಮೂರು ಗರ್ಭಗೃಹಗಳಿದ್ದು ನಾಲ್ಕನೆಯ ಕಡೆ ಮುಖಭದ್ರ ಪ್ರವೇಶದ್ವಾರಗಳಿರುವ ತ್ರಿಕೂಟಾಚಲಗಳು ಈ ಶೈಲಿಯಲ್ಲಿ ಕಂಡುಬರುವುದು ಸಾಮಾನ್ಯ. ಮೂರು ಗರ್ಭಗೃಹಗಳ ಮೇಲೂ ಒಂದೇ ಬಗೆಯ ಗೋಪುರಗಳಿರಬಹುದು ಅಥವಾ ಮಧ್ಯದ ಗರ್ಭಗೃಹದ ಮೇಲೆ ಮಾತ್ರ ಗೋಪುರವಿರಬಹುದು.

ಅಲಂಕಾರಪಟ್ಟಿಕೆಗಳಿಂದ ಕೂಡಿರುವ ಬಾಗಿಲುವಾಡಗಳ ಮೇಲೆ ಸುಂದರವಾದ ಮೂರ್ತಿಗಳನ್ನು ಕಂಡರಿಸುವುದು, ನವರಂಗದಲ್ಲಿ ವಿಶಿಷ್ಟವಾದ ತಿರುಗಣಿಯಲ್ಲಿ ಕಂಡರಿಸಿದ ಕಂಬಗಳಿರುವುದು, ಭುವನೇಶ್ವರಿಗಳು ಆಳವಾಗಿದ್ದು ಒಂದೊಂದೂ ಸೂಕ್ಷ್ಮವಾದ ಶಿಲ್ಪದಿಂದ ತುಂಬಿರುವುದು ಎಷ್ಟೋ ವೇಳೆ ಕಂಬಗಳ ಮೇಲೆ ಮದನಿಕೆಗಳಿರುವುದು, ತೊಲೆಗಳ ಮೇಲೂ ಶಿಲ್ಪಸಾಲುಗಳನ್ನು ತುಂಬಿರುವುದು ಈ ದೇವಾಲಯಗಳಲ್ಲಿ ಕಂಡುಬರುತ್ತವೆ.

ಒಂದೇ ಗರ್ಭಗುಡಿಯನ್ನುಳ್ಳ ಕೋರಮಂಗಲದ ಬೂಚೇಶ್ವರ ದೇವಾಲಯ, ಅಮೃತಾಪುರದ ಅಮೇತೇಶ್ವರ ದೇವಾಲಯ, ಅರಸೀಕೆರೆಯ ಈಶ್ವರ ದೇವಾಲಯ, ಹಾರನಹಳ್ಳಿಯ ಸೋಮೇಶ್ವರ ದೇವಾಲಯ, ಅರಳಗುಪ್ಪೆಯ ಕೇಶವ ದೇವಾಲಯ, ಬಸರಾಳಿನ ಮಲ್ಲಿಕಾರ್ಜುನ ದೇವಾಲಯ ಮೊದಲಾದವುಗಳಿಗೆ ನವರಂಗದಲ್ಲಿ ಬಗೆಬಗೆಯ ಕಂಬಗಳು, ಮದನಿಕೆಗಳು, ಆಳವಾದ ಭುವನೇಶ್ವರಿಗಳಿಂದ ಕೂಡಿ ಪ್ರಸಿದ್ಧವಾಗಿರುವ ಬೇಲೂರಿನ ಚೆನ್ನಕೇಶವ ದೇವಾಲಯ ಮಾದರಿ. ಮರಲೆ, ಮರಸೆಗಳಲ್ಲಿ ಒಂದೇ ಬಗೆಯ ಎರಡು ದೇವಾಲಯಗಳನ್ನು ಒಂದರ ಪಕ್ಕ ಒಂದು ಕಟ್ಟಿದ್ದರೆ ಹಳೇಬೀಡಿನ ಹೊಯಿಸಳೇಶ್ವರ ದೇವಾಲಯವೂ ಜೋಡಿ ದೇವಾಲಯವಾಗಿದ್ದು ಅವುಗಳನ್ನು ಮೂರಂಕಣದ ಒಂದು ಹಜಾರ ಸೇರಿಸಿದೆ. ಎರಡರ ಮುಂದೆಯೂ ನಂದಿ ಮಂಟಪಗಳಿದ್ದು ಹೊಯ್ಸಳರ ದೇವಾಲಯಗಳಲ್ಲಿಯೇ ದೊಡ್ಡದೂ ಅತಿ ಸುಂದರವಾದುದೂ ಆಗಿದೆ. ಸೋಮನಾಥಪುರದಲ್ಲಿರುವ ಕೇಶವ ದೇವಾಲಯ ಹೊಯ್ಸಳ ದೇವಾಲಯಗಳ ಎಲ್ಲ ಲಕ್ಷಣಗಳನ್ನೂ ಹೊಂದಿರುವ ತ್ರಿಕೂಟಾಚಲ.

ಹೊಯ್ಸಳ ದೇವಾಲಯಗಳಲ್ಲಿ ಭದ್ರತೆಯ ದೃಷ್ಟಿ ಕಡಿಮೆ. ಅತಿಯಾದ ಅಲಂಕರಣ, ಕುಸುರಿಯ ಕೆಲಸದ ಪರಾಕಾಷ್ಠೆಗಳನ್ನು ಇಲ್ಲಿ ಕಾಣಬಹುದು. ಹೊಯ್ಸಳರ ಅವನತಿಯ ಅನಂತರ ಅವರ ವಾಸ್ತುಶೈಲಿ ನಿಂತುಹೋಯಿತು.

14ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಕರ್ನಾಟಕದಲ್ಲಿ ಎರಡು ವಿಭಿನ್ನ ವಾಸ್ತುಶೈಲಿಗಳು ಬೆಳೆಯಲಾರಂಭಿಸಿದವು. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಮೇಲೆ ಅಲ್ಲಿ ವಿಜಯನಗರದ ಅರಸರು ದ್ರಾವಿಡಶೈಲಿಯನ್ನು ಪುನರುಜ್ಜೀವನಗೊಳಿಸಿದರು. ಜೊತೆಗೆ ಹಿಂದಿನ ದೇವಾಲಯಗಳನ್ನು ವಿಸ್ತರಿಸಿದರು. ತೀರ್ಥಮಂಟಪ, ಕಲ್ಯಾಣಮಂಟಪ, ಸಾವಿರಕಂಬದ ಮಂಟಪಗಳು, ಪ್ರವೇಶ ದ್ವಾರದ ಮಹಾಗೋಪುರಗಳು ಇವುಗಳಿಗೆ ಸೇರಿಕೊಂಡುವು. ಗ್ರಾನೈಟ್‍ಕಲ್ಲನ್ನು ಇವರು ದೇವಾಲಯಗಳಿಗೆ ಉಪಯೋಗಿಸಿದರೂ ಇವರ ದೇವಾಲಯಗಳು ಚಾಳುಕ್ಯ ಹೊಯ್ಸಳ ದೇವಾಲಯಗಳಂತೆ ಮೂರ್ತಿಶಿಲ್ಪಗಳಿಂದ ಅಲಂಕೃತಗೊಂಡುವು. ಈ ದೇವಾಲಯಗಳಲ್ಲಿನ ಕಂಬಗಳು ಸಂಕೀರ್ಣರೀತಿಯಲ್ಲಿ ವಿಕಾಸ ಗೊಂಡವು. ಸಾಲುಗಂಬಗಳಿಗೆ ಸೇರಿದಂತೆ ಕುದುರೆಯಾಳಿಗಳ ಬೃಹತ್ ಶಿಲ್ಪಗಳನ್ನು ಹಿಂಗಾಲಿನ ಮೇಲೆ ಚಿಮ್ಮಿ ನಿಂತಂತೆ ಬಿಡಿಸಿರುವುದು, ನಡುವಣ ಚಪ್ಪಕಂಬದ ಸುತ್ತಲೂ ತೆಳುವಾದ ಕಿರುಗಂಬಗಳನ್ನು ಜೋಡಿಸುವುದು, ದೊಡ್ಡದಾದ ಬಾಗು ಲೋವೆಗೆ ಕಲ್ಲಿನ ಬಳೆಗಳನ್ನು ತೂಗುಬಿಡುವುದು ಇವುಗಳ ವೈಶಿಷ್ಟ್ಯ. ಅನೇಕ ಕಂಬಗಳ ಮೇಲೆ ನಿಂತ ವಿಶಾಲ ಹಜಾರಗಳೂ ಮಂಟಪಗಳಂತೆ ತೆರೆದಿದ್ದು ಗಾಳಿಬೆಳಕು ಧಾರಾಳವಾಗಿ ಒಳಹೋಗುವಂತಿರುತ್ತದೆ. ಈ ಕಂಬಗಳ ಮುಖಗಳ ಮೇಲೆಲ್ಲ ಹಲವು ಬಗೆಯ ಮೂರ್ತಿಗಳನ್ನು ಹೆಚ್ಚು ಉಬ್ಬಿಸಿ ಬಿಡಿಸಿರುತ್ತದೆ. ಗಟ್ಟಿಕಲ್ಲಿನಲ್ಲಿ ಕಟ್ಟಿದ್ದುವಾದ್ದರಿಂದ ಈ ದೇವಾಲಯಗಳು ಬೃಹತ್ ಗಾತ್ರವನ್ನು ತಳೆದುವು. ಹೊಯ್ಸಳರ ಕಾಲದಲ್ಲಿ ಕೇವಲ ಮೂರ್ತಿಶಿಲ್ಪಗಳಿಗೆ ಪ್ರಾಧಾನ್ಯ ದೊರೆತಿದ್ದರೆ ವಿಜಯನಗರದ ಅರಸರ ಕಾಲದಲ್ಲಿ ವಾಸ್ತು ಮತ್ತು ಶಿಲ್ಪ ಎರಡಕ್ಕೂ ಸಮಾನ ಪ್ರಾಧಾನ್ಯ ದೊರೆಯಿತು. ಅವರು ಕಟ್ಟಡಗಳನ್ನು ಅತ್ಯಂತ ಭದ್ರವಾಗಿ ನಿರ್ಮಿಸಿದರು. ದೀರ್ಘಚತುರಸ್ರಾಕಾರದ ವಿನ್ಯಾಸದಲ್ಲಿ ಈ ದೇವಾಲಯಗಳು ನಿರ್ಮಿತವಾಗಿದ್ದು ಇವುಗಳ ಗೋಡೆಗಳ ಮೇಲೂ ಪೌರಾಣಿಕ ಕಥೆಗಳು, ರಾಮಾಯಣ, ಭಾರತ, ಶಿವಲೀಲೆಗಳು, ನೃತ್ಯ, ಬಳ್ಳಿಸುರುಳಿ, ಪ್ರಾಣಿ ಪಕ್ಷಿಗಳು ಮೊದಲಾದ ಶಿಲ್ಪಗಳು ತುಂಬಿದ್ದು ಮೂರ್ತಿಶಿಲ್ಪ ಮನವನ್ನಾಕ ರ್ಷಿಸುವಂತಿದ್ದರೆ ಕಟ್ಟಡಗಳ ರಚನೆ ಗಾತ್ರಗಳು ಬೆರಗುಗೊಳಿಸುತ್ತವೆ. ವಿಜಯನಗರದ ಕಾಲಕ್ಕೆ ದೇವಾಲಯಗಳು ಪ್ರತಿ ಊರಿನ ಧರ್ಮ, ಸಂಸ್ಕøತಿ, ಕಲೆ, ಸಾಮಾಜಿಕ ನಡವಳಿಕೆಗಳು ಊರೊಟ್ಟಿನ ಕರ್ತವ್ಯಗಳು, ವಿದ್ಯಾಭ್ಯಾಸ ಮುಂತಾದುವುಗಳ ಕೇಂದ್ರ ಬಿಂದುವಾಗಿ ಬೆಳೆದುದರಿಂದ ಇವುಗಳ ಪ್ರಾಶಸ್ತ್ಯ ಹೆಚ್ಚಾಯಿತು. ಆದ್ದರಿಂದಲೇ ಈ ದೇವಾಲಯಗಳ ವಿಸ್ತರಣೆ ಆವಶ್ಯಕವಾಯಿತು. ಹಂಪೆಯಲ್ಲಿ ವಿರೂಪಾಕ್ಷ ದೇವಾಲಯದ ವಿಸ್ತರಣೆ ಮತ್ತು ಬೃಹದ್ಗೋಪುರ, ವಿಜಯ ವಿಠಲಸ್ವಾಮಿ ದೇವಾಲಯ, ಕೃಷ್ಣರಾಯನ ಗುಡಿ, ಅಚ್ಯುತರಾಯನ ಗುಡಿ, ಹಜಾರರಾಮಸ್ವಾಮಿ ದೇವಾಲಯ ಮೊದಲಾದುವೂ ಲೇಪಾಕ್ಷಿಯ ವೀರಭದ್ರದೇವಾಲಯ, ತಾಡಪತ್ರಿಯಲ್ಲಿ ಚಿಂತಲರಾಯ ಕಟ್ಟಿಸಿದ ಶಿವಾಲಯ, ಕಂಚಿ, ಶ್ರೀರಂಗ, ಚಿದಂಬರ ಮೊದಲಾದೆಡೆ ಅಲ್ಲಿದ್ದ ದೇವಾಲಯಗಳಿಗೆ ಸೇರಿಸಿದ ತೀರ್ಥಮಂಟಪ ವಿಶಾಲವಾದ ಮಂಟಪಗಳು ಪ್ರವೇಶದ್ವಾರದ ಮಹಾಗೋಪರುಗಳು ಇವರ ಕಾಲದ ವಾಸ್ತುವೈವಿಧ್ಯಕ್ಕೆ ಸಾಕ್ಷಿಯಾಗಿ ನಿಂತಿವೆ. ಇವುಗಳೊಂದಿಗೆ ಶೃಂಗೇರಿಯಲ್ಲಿ ದ್ರಾವಿಡ ಹೊಯ್ಸಳ ಮತ್ತು ಇತರೆ ಶೈಲಿಗಳ ಸಮ್ಮಿಶ್ರಣದಿಂದ ಎತ್ತರವಾದ ಜಗತಿಯ ಮೇಲೆ ಕಗ್ಗಲಿನಲ್ಲಿ ಕಟ್ಟಿರುವ, ಮುಂಭಾಗ ಹಿಂಭಾಗಗಳು ಅರ್ಧವೃತ್ತಾಕಾರದ ಲ್ಲಿದ್ದು ಗೋಪುರ ವೃತ್ತಾಕಾರವಾಗಿ ಮೆಟ್ಟಿಲುಮೆಟ್ಟಲಾಗಿ ಮೇಲೆದ್ದಿರುವ ಅಪೂರ್ವಶೈಲಿಯ ವಿದ್ಯಾಶಂಕರ ದೇವಾಲಯ ಈ ಕಾಲದ ವಾಸ್ತು ವೈಶಿಷ್ಟ್ಯಗಳಲ್ಲೊಂದು. ವಿಜಯನಗರ ಕಾಲದ ಲೌಕಿಕ ಕಟ್ಟಡಗಳು ಕೆಲವು ಉಳಿದು ಬಂದಿದ್ದು ಇವುಗಳಲ್ಲಿ ಹಿಂದು-ಮುಸ್ಲಿಮ್ ಶೈಲಿಯ ಛಾಯೆ ಇದೆ. ಈ ಕಟ್ಟಡಗಳು ಇಟ್ಟಿಗೆ ಗಾರೆಗಳಿಂದ ನಿರ್ಮಿತವಾಗಿದ್ದು ಅರಗೋಲಾಕೃತಿಗಳನ್ನು ಹೊಂದಿದ ಕಮಾನು ಗುಮ್ಮಟಗಳಿಂದ ಕೂಡಿವೆ. ವಿಜಯನಗರದ ಕಮಲಮಂದಿರ, ಆನೆಲಾಯ ಚಂದ್ರಗಿರಿಯ ಅರಮನೆಗಳನ್ನು ನೋಡ ಬಹುದು. ಇವಲ್ಲದೆ ವಿದೇಶೀ ಯಾತ್ರಿಕರು ಭವ್ಯವಾಗಿ ವರ್ಣಿಸಿರುವ ಇವರ ಅರಮನೆಗಳು ಚಿತ್ರಗಳಿಂದ, ನೃತ್ಯಭಂಗಿಗಳ ಮೂರ್ತಿಗಳಿಂದ ತುಂಬಿದ್ದವೆಂದು ತಿಳಿದುಬರುತ್ತದೆ. ಮಹಾನವಮಿ ದಿಬ್ಬ ಒಂದು ವಿಶಿಷ್ಟವಾದ ರಚನೆ. ಎತ್ತರವಾದ ದಿಬ್ಬದ ಮುಖಗಳ ಮೇಲೆ ಸಾಲು ಸಾಲಾಗಿ ಉಬ್ಬುಚಿತ್ರಗಳಲ್ಲಿ ಕಂಡರಿಸಿರುವ ಬಗೆಬಗೆಯ ನೃತ್ಯಭಂಗಿಗಳು, ಬೇಟೆಯ ದೃಶ್ಯಗಳು, ಆನೆಕುದುರೆಗಳ ಮೆರವಣಿಗೆಗಳು, ಪ್ರಾಣಿಪಕ್ಷಿಗಳು ತುಂಬಿಕೊಂಡಿವೆ. ಇದರ ಮೇಲೆ ಒಂದು ಮಂಟಪವಿದ್ದಿತೆಂದು ಪ್ರವಾಸಿಗಳು ದಾಖಲೆ ಮಾಡಿದ್ದಾರೆ.

ಕರ್ನಾಟಕದ ಉತ್ತರ ಭಾಗದಲ್ಲಿ ಬಹಮನೀ ರಾಜ್ಯ ಸ್ಥಾಪನೆಯಾಗಿ ವಾಸ್ತು ರೀತಿಯಲ್ಲಿ ಸಂಪೂರ್ಣ ಬದಲಾವಣೆಯಾಯಿತು. ಆ ಪ್ರಾಂತ್ಯ ದಲ್ಲಿ ಹಿಂದು ಧಾರ್ಮಿಕ ಶೈಲಿ ನಿಂತು ಹೋಗಿ ಇಸ್ಲಾಮ್ ಧರ್ಮದಿಂದ ಪ್ರಚೋದಿತವಾದ ಹಿಂದು-ಮುಸ್ಲಿಮ್ ಶೈಲಿ ವ್ಯಾಪಕವಾಗಿ ಹರಡಿತು. ಈ ಪ್ರಾಂತ್ಯವನ್ನಾಕ್ರಮಿಸಿಕೊಂಡ ಹೊಸದರಲ್ಲಿ ಹಿಂದು ದೇವಾಲಯಗಳನ್ನೆ ಮಸೀದಿಗಳನ್ನಾಗಿ ಮಾರ್ಪಡಿಸಿರುವುದುಂಟು ಅಥವಾ ಆ ದೇವಾಲಯಗಳ ಕಂಬಗಳು ತೊಲೆಗಳನ್ನು ಉಪಯೋಗಿಸಿ ಅವರದೇ ಆದ ರೀತಿಯಲ್ಲಿ ಕಟ್ಟಡಗಳನ್ನು ಕಟ್ಟಿರುವುದುಂಟು. ಆದರೆ ಅವರು ಪೂರ್ಣವಾಗಿ ಹಿಂದು-ಮುಸ್ಲಿಮ್ ಶೈಲಿಯನ್ನಳವಡಿಸಿ ಕಟ್ಟಡಗಳನ್ನು ಕಟ್ಟಲಾರಂಭಿಸಿದಾಗ ಆರಂಭದಲ್ಲಿ ತುಗಲಕ್ ವಾಸ್ತುಶೈಲಿಯನ್ನು ಅಳವಡಿಸಿಕೊಂಡುದನ್ನು ನೋಡಬಹುದು. ಮೊದಲು ಕಟ್ಟಿದ ಇವರ ಗೋರಿ ಕಟ್ಟಡಗಳಲ್ಲಿ ಇದು ಸ್ಪಷ್ಟವಾಗಿದೆ. ಎತ್ತರವಾದ ಜಗತಿಯ ಮೇಲೆ ಚೌಕನಾದ ಕಟ್ಟಡವಿದ್ದು ದಪ್ಪ ಗೋಡೆಗಳು ಬುಡದಲ್ಲಿ ಅಗಲವಾಗಿದ್ದು ಓಟವಾಗಿ ಮೇಲೇರುತ್ತವೆ. ಗುಮ್ಮಟ ತಗ್ಗಾಗಿರುತ್ತದೆ. ಇದು ರೂಕ್ಷವಾಗಿದ್ದು ಹೆಚ್ಚು ಭದ್ರತೆಯ ದೃಷ್ಟಿಯಿಂದ ಕಟ್ಟಿದುವು. ಈ ಶೈಲಿ ಹೆಚ್ಚುಕಾಲ ಉಳಿದುಬರಲಿಲ್ಲ. ಬಹಮನೀ ಅರಸರು ಉತ್ತರ ಭಾರತದ ಶಿಲ್ಪಿಗಳಿಗಿಂತ ಪರ್ಷಿಯ ಮುಂತಾದ ದೇಶಗಳಿಂದ ಶಿಲ್ಪಿಗಳನ್ನು ಕರೆಸಿದುದರಿಂದ ಪರ್ಷಿಯನ್ ಶೈಲಿಯ ಪ್ರಭಾವ ಮುಂದೆ ಬೆಳೆದು ಅದರೊಂದಿಗೆ ಸ್ಥಳೀಯ ಹಿಂದು ಶೈಲಿಯೂ ಕ್ರಮೇಣ ಹೆಚ್ಚು ಹೆಚ್ಚು ವ್ಯಾಪಕವಾಗಿ ಮಿಲನವಾಗಿ ನೂತನ ಬಹಮನೀ ಶೈಲಿಯೊಂದು ಬೆಳೆದು ಬಂತು. ಗುಲ್ಬರ್ಗದ ಕೋಟೆಯೊಳಗಿನ ದೊಡ್ಡ ಮಸೀದಿಯನ್ನು ಇರಾನಿನಿಂದ ಬಂದ ರಫಿ ಎಂಬ ಶಿಲ್ಪಿ ನಿರ್ಮಿಸಿದ್ದಾನೆ. ವಿಶಾಲವಾದ ಈ ಕಟ್ಟಡ ಪೂರ್ಣವಾಗಿ ಗುಮ್ಮಟಗಳಿಂದ ಕೂಡಿದ ಛಾವಣಿಯಿಂದ ಆಚ್ಛಾದಿತವಾಗಿದ್ದು ಸ್ಪೇನಿನ ಕಾರ್ಡೋವದ ಪ್ರಸಿದ್ಧ ಮಸೀದಿಯ ಮಾದರಿಯಲ್ಲಿದೆ. ಬಹಮನೀ ಅರಸರ ಭವ್ಯವಾದ ಕಟ್ಟಡಗಳನ್ನು ಬಿದರೆಯಲ್ಲಿ ನೋಡಬಹುದು. ಇಲ್ಲಿನ ಇವರ ಕಟ್ಟಡಗಳಲ್ಲಿ ಸ್ಥೂಲವಾದ ರಚನೆ, ವಿವಿಧ ರೀತಿಯ ಎತ್ತರವಾದ ಕಮಾನುಗಳು, ಗೋಲದ ಮುಕ್ಕಾಲು ಭಾಗವನ್ನಿಟ್ಟಂತಿರುವ ಉನ್ನತವಾದ ಗುಮ್ಮಟಗಳು, ಗೋಡೆಗಳಿಗೆ ಬಗೆಬಗೆಯ ಬಣ್ಣದ ವಿವಿಧ ಆಕಾರದ ಮನೋಹರವಾದ ರೀತಿಯ ಸೂಡುಚಿತ್ರಬಿಲ್ಲೆಗಳ ಜೋಡಣೆ ಮತ್ತು ಹೂವು ಬಳ್ಳಿ, ಎಲೆಗಳನ್ನೊಳಗೊಂಡ ಹಿಂದು ರೀತಿಯ ಶಿಲ್ಪಾಲಂಕರಣ ಇರುತ್ತವೆ. ಅಹಮದ್ ಷಾವಲಿಯ ಅರಮನೆ, ಅಲಾ ಉದ್ದೀನ್ ಮತ್ತು ಹಜರತ್ ಖಲೀಉಲ್ಲಾರ ಗೋರಿಗಳು ಮಹ್ಮೂದ್ ಗಾವಾನನ ಮದರಸಾಗಳು ಬಹಮನೀ ಸುಲ್ತಾನರ ವಾಸ್ತುಕಲೆಯ ಸುಂದರ ಉದಾಹರಣೆಗಳು. ಇವುಗಳಲ್ಲಿ ಮಹ್ಮೂದ್ ಗಾವಾನನ ಮದರಸಾ ಪರ್ಷಿಯ ದೇಶದ ಅಂಥ ಕಟ್ಟಡಗಳನ್ನುನುಸರಿಸಿ ಕಟ್ಟಿದ ಅಪರೂಪದ ಕಟ್ಟಡ. ಬಹಮನೀ ಸುಲ್ತಾನರ ಅನಂತರ ಬಂದ ಬರೀದ್‍ಶಾಹೀ ಅರಸರು ಕಟ್ಟಿಸಿದ ಕಟ್ಟಡಗಳಲ್ಲಿ ಹಲವು ಬದಲಾವಣೆಗಳನ್ನು ಗಮನಿಸಬಹುದು. ಇವರ ಕಟ್ಟಡಗಳಲ್ಲಿ ದಡೂತಿತನದ ಭಾವನೆ ಬರುವುದಿಲ್ಲ. ಬಹಮನೀ ಸುಲ್ತಾನರ ಕಟ್ಟಡಗಳಲ್ಲಿರುವ ವಿಸ್ತಾರವಾಗಲಿ, ಭವ್ಯತೆಯಾಗಲಿ ಇಲ್ಲ. ಹಿಂದು ಶೈಲಿಯ ಅನುಕರಣೆ ಹೆಚ್ಚು. ಅಲಂಕರಣ ಹೆಚ್ಚಾಗಿದ್ದು ಭದ್ರತೆಯ ಅಭಾವವಿದೆ, ಸೂಕ್ಷ್ಮವಾಗಿ ಕೆತ್ತಿರುವ ಮರದ ಕಂಬಗಳು ಸುಂದರವಾಗಿವೆ. ಬಣ್ಣದ ಬಿಲ್ಲೆಗಳಿಂದ ಮಾಡಿದ ಅಲಂಕಾರ, ಮುತ್ತಿನ ಚಿಪ್ಪಿನ ಕೆಲಸ ತುಂಬ ನವುರಾಗಿದೆ. ಈ ಲಕ್ಷಣಗಳನ್ನು ರಂಗೀನ್ ಮಹಲ್ ಅರಮನೆ ಮತ್ತು ಅಲಿಬರೀದಿಯ ನಾಲ್ಕು ಕಡೆಯೂ ತೆರೆದ ಕಮಾನುಗಳಿಂದ ಕೂಡಿದ ಮಂಟಪದಂತಿರುವ ಗೋರಿಯಲ್ಲಿಯೂ ಕಾಣಬಹುದು. ಇದೇ ಕಾಲದಲ್ಲಿಯೇ ಬಿಜಾಪುರದಿಂದ ಆಳುತ್ತಿದ್ದು, ಮುಂದೆ ಕರ್ನಾಟಕದ ಉತ್ತರ ಭಾಗವನ್ನೆಲ್ಲ ಆಕ್ರಮಿಸಿಕೊಂಡ ಆದಿಲ್ ಶಾಹೀ ಅರಸರು ಅನೇಕ ಮಹತ್ತರವಾದ ಕಟ್ಟಡಗಳನ್ನು ಕಟ್ಟಿಸಿದರು. ಅವುಗಳಲ್ಲಿ ಅರಮನೆಗಳು, ಮಸೀದಿಗಳು, ಗೋರಿಗಳು, ಕೋಟೆಗಳು, ಬುರುಜುಗಳು ಸೇರಿವೆ. ಇವುಗಳಲ್ಲೆಲ್ಲ ನವುರಾದ ಅತ್ಯುತ್ತಮವಾದ ಅಲಂಕರಣಗಳಿಂದ ಕೂಡಿದ ಇಬ್ರಾಹಿಂ ರೋಜಾ ತನ್ನ ಸೌಂದರ್ಯಕ್ಕೆ ಹೆಸರಾಗಿದ್ದರೆ, ಅತಿದೊಡ್ಡ ಹಜಾರ, ಉನ್ನತವೂ ವಿಸ್ತಾರವೂ ಆದ ಗುಮ್ಮಟ, ಪಿಸುಗುಟ್ಟಿದರೆ ಹಲವು ಬಾರಿ ಪ್ರತಿಸ್ಪಂದಿಸುವ ಆಶ್ಚರ್ಯ ಕರವಾದ ಒಳಕೈಸಾಲೆಗಳಿಂದ ಕೂಡಿದ ಗೋಳಗುಮ್ಮಟ ಪ್ರಪಂಚ ದಲ್ಲಿಯೇ ಒಂದು ಅದ್ಭುತ ರಚನೆ ಎನಿಸಿದೆ. ವಿಜಯನಗರ ಸಾಮ್ರಾಜ್ಯದ ಪತನದ ಅನಂತರ ಹೇಳಿಕೊಳ್ಳಬಹುದಾದಂಥ ವಾಸ್ತುಶಿಲ್ಪದ ಬೆಳೆವಣಿಗೆ ಕಾಣಿಸುವುದಿಲ್ಲವಾದರೂ ಕೆಳದಿ ಅರಸರು, ಮೈಸೂರು ಒಡೆಯರು, ಚಿತ್ರದುರ್ಗದ, ಮಾಗಡಿಯ ಪಾಳೆಯಗಾರರು ತಮ್ಮ ತಮ್ಮ ಮಿತಿಯಲ್ಲಿ ವಾಸ್ತುಕಲೆಯನ್ನು ಬೆಳೆಸಿದ್ದಾರೆ. ಕೆಳದಿಯ ನಾಯಕರು ವಿಜಯನಗರದ ಶೈಲಿಯಿಂದ ಸ್ಫೂರ್ತಿಪಡೆದರೂ ತಮ್ಮ ವಿಶಿಷ್ಟಶೈಲಿಯನ್ನು ರೂಪಿಸಿಕೊಂಡರು. ಗಟ್ಟಿಕಲ್ಲಿನಲ್ಲಿ ನಿರ್ಮಿಸಿದ ಇವರ ದೇವಾಲಯಗಳಲ್ಲಿ ದ್ರಾವಿಡ, ಹೊಯ್ಸಳ ಶೈಲಿಗಳೆರಡೂ ಹೊಂದಿಕೊಂಡಿವೆ; ಮುಸ್ಲಿಮ್ ಶೈಲಿಯ ಪ್ರಭಾವವನ್ನೂ ನೋಡಬಹುದು. ಇಕ್ಕೇರಿಯ ಅಘೋರೇಶ್ವರ ದೇವಾಲಯ, ಕೆಳದಿಯ ವೀರಭದ್ರ ದೇವಾಲಯ ಈ ಮಾದರಿಗೆ ಉತ್ತಮ ಉದಾಹರಣೆಗಳು. ಇವರ ಕಾಲದಲ್ಲಿ ಹಲವೆಡೆಗಳಲ್ಲಿ ಕಟ್ಟಿರುವ ಸಣ್ಣ ಸಣ್ಣ ಗುಡಿಗಳು ಆ ಕಾಲದ ವಾಸ್ತುಕಲೆಯ ವೈಶಿಷ್ಟ್ಯವನ್ನು ಪ್ರತಿಬಿಂಬಿಸುತ್ತವೆ. ಇವುಗಳಲ್ಲಿ ಎತ್ತರವಾದ ಜಗತಿಯ ಮೇಲೆ ಸಣ್ಣ ಪ್ರಮಾಣದ ಗರ್ಭಗೃಹ. ಇದೇ ಪ್ರಮಾಣದ ಸುಕನಾಸಿ ಮಾತ್ರ ಇದ್ದು ಮುಂದೆ ಜಗತಿಯಿಲ್ಲದೆ ನೆಲದಿಂದ ಮೇಲೆದ್ದ ನೀಳ ಕಂಬಗಳ ಮೇಲೆ ನಿಂತಿರುವ ಮುಖಭದ್ರ. ದೀರ್ಘಚತುರಸ್ರಾಕಾರದ ಈ ಗುಡಿಗಳ ಹೊರಗೋಡೆಗಳ ಮೇಲೆ ಮೂರ್ತಿಶಿಲ್ಪಗಳಿರುತ್ತವೆ. ತೀರ್ಥಹಳ್ಳಿ, ನಗರ, ಸಾಲಿಗೆರೆ, ಶೃಂಗೇರಿ ಮುಂತಾದಡೆಗಳಲ್ಲಿ ಇರುವ ಇಂಥ ಕಿರುದೇವಾಲಯಗಳಲ್ಲಿ ಅತ್ಯುತ್ತಮವಾದುದು ಜಂಬಿಟ್ಟಿಗೆಯಲ್ಲಿರುವ ನೀಲಕಂಠೇಶ್ವರ ದೇವಾಲಯ. ಮೈಸೂರು ಅರಸರು ಹಲವಾರು ದ್ರಾವಿಡ ಶೈಲಿಯ ದೇವಾಲಯಗಳನ್ನು ನಿರ್ಮಿಸಿದ್ದರೂ ಅವುಗಳಲ್ಲಿ ಭವ್ಯತೆ, ನಯನಾಜೂಕು ಅಷ್ಟಾಗಿ ಕಂಡು ಬರುವುದಿಲ್ಲ. ಗುಂಡ್ಲುಪೇಟೆಯ ಪರವಾಸುದೇವ ದೇವಾಲಯ, ಹರದನಹಳ್ಳಿಯ ಗೋಪಾಲಕೃಷ್ಣ ದೇವಾಲಯ, ಶ್ರೀರಂಗಪಟ್ಟಣದ ನರಸಿಂಹಸ್ವಾಮಿ ದೇವಾಲಯ, ಮೈಸೂರಿನ ಪ್ರಸನ್ನ ಕೃಷ್ಣಸ್ವಾಮಿ ದೇವಾಲಯ ಮೊದಲಾದುವುಗಳನ್ನು ಇಲ್ಲಿ ಹೆಸರಿಸಬಹುದು. ಚಿತ್ರದುರ್ಗದ ಪಾಳೆಯಗಾರರೂ ಹೈದರ್ ಮತ್ತು ಟಿಪ್ಪು ಕಟ್ಟಿಸಿದ ಹಲವಾರು ಸುಭದ್ರವಾದ ಕೋಟೆಗಳೂ ಇಲ್ಲಿ ಉಲ್ಲೇಖನಾರ್ಹ. ಪಾಳೆಯಗಾರರು ಕಟ್ಟಿಸಿದ ವಾಸ್ತುಗಳಲ್ಲಿ ನೀರ್ತಡಿಯ ರಂಗನಾಥ ದೇವಾಲಯ, ಚಿತ್ರದುರ್ಗದ ಉಚ್ಚಂಗಮ್ಮನ ದೇವಾಲಯ ಇವೆಲ್ಲಕ್ಕಿಂತ ಹೆಚ್ಚಾಗಿ ರಾಮದುರ್ಗದಲ್ಲಿ ಗುಡ್ಡವೊಂದನ್ನು ಕೊರೆದು ಸುಂದರವಾಗಿ ರಚಿಸಿರುವ ಗುಹಾದೇವಾಲಯ ಅಪೂರ್ವವಾದುವು.

ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸ್ತುಕಲೆ ಬೇರೆ ರೀತಿಯಾಗಿಯೇ ಬೆಳೆದು ಬಂದಂತೆ ತೋರುತ್ತದೆ. ಇಲ್ಲಿನ ದೇವಾಲಯಗಳು ನೇಪಾಳದ ತುರಾಯಿಗಳಂತೆ ಇರುವುದಾಗಿ ಕೆಲವರ ಅಭಿಪ್ರಾಯ. ಇಲ್ಲಿನ ದೇವಾಲಯಗಳನ್ನು ಜಂಬುಕಲ್ಲಿನಲ್ಲಿ ಕಟ್ಟಿರುವುದೇ ಹೆಚ್ಚು. ಆದ್ದರಿಂದ ಹೊರಗೋಡೆಯ ಮೇಲಿನ ಅಲಂಕರಣ ಹೆಚ್ಚಿರುವುದಿಲ್ಲ. ಮಳೆಯಿಂದ ಕಟ್ಟಡಗಳನ್ನು ರಕ್ಷಿಸುವುದು ಅನಿವಾರ್ಯವಾದ್ದರಿಂದ ಚಾವಣಿಗಳು ಇಳಿಜಾರಾಗಿರುತ್ತವೆ. ದೇವಾಲಯಗಳ ತಳವಿನ್ಯಾಸ ವೃತ್ತಾಕಾರವಾಗಿರುವುದುಂಟು. ಇದಕ್ಕಿಂತ ಹೆಚ್ಚಾಗಿ ಬೌದ್ಧ ವಾಸ್ತುವನ್ನನು ಸರಿಸುವ ಚೈತ್ಯಾಕಾರದ ದೇವಾಲಯಗಳು ಹೆಚ್ಚು. ಮೇಲ್ಛಾವಣಿಗಳು ಎರಡು ಮೂರು ಅಂತಸ್ತುಗಳಿಲ್ಲದ್ದು ಇಳಿಜಾರಾಗಿರುತ್ತವೆ. ಸಾಮಾನ್ಯವಾಗಿ ಇವುಗಳಿಗೆ ತಾಮ್ರದ ತಗಡನ್ನು ಹೊದಿಸಿರುತ್ತದೆ.

ಕರ್ನಾಟಕದ ಭಾಗಗಳಲ್ಲಿ ಪಾಶ್ಚಾತ್ಯರ ಪ್ರಾಬಲ್ಯ ಬೆಳೆದಂತೆ ಐರೋಪ್ಯ ರೀತಿಯ ವಾಸ್ತುನಿರ್ಮಾಣ ಆರಂಭವಾಯಿತು. ಮೊದಲಿಗೆ ಕಟ್ಟಡಗಳು ಪಾಶ್ಚಾತ್ಯ ಎಂಜಿನಿಯರುಗಳಿಂದ ರೂಪಿಸಲ್ಪಟ್ಟು ಯುರೋಪಿನ ಬೇರೆ ಬೇರೆ ವಾಸ್ತುಶೈಲಿಗಳಲ್ಲಿವೆ. ಈ ಕಾಲದಲ್ಲಿ ಅನೇಕ ಚರ್ಚುಗಳು ಗಾತಿಕ್ ಶೈಲಿಯಲ್ಲಿ ನಿರ್ಮಾಣವಾದುವು. ಬೆಂಗಳೂರಿನ ಟ್ರಿನಿಟಿ ಚರ್ಚು, ಮಂಗಳೂರಿನ ಸೇಂಟ್ ಅಲೋಷಿಯಸ್ ಚರ್ಚು, ಮೈಸೂರಿನ ಸೇಂಟ್ ಫಿಲೋಮಿನ ಚರ್ಚುಗಳು ಈ ಶೈಲಿಯ ಅತ್ಯಂತ ಆಕರ್ಷಕ ಕಟ್ಟಡಗಳು. ಚರ್ಚುಗಳು ಮತ್ತು ಇತರ ಮತೀಯ ಕಟ್ಟಡಗಳಿಗಿಂತ ಈ ಕಾಲದಲ್ಲಿ ಹೆಚ್ಚಾಗಿ ಸಾರ್ವಜನಿಕ ಕಟ್ಟಡಗಳು ನಿರ್ಮಾಣವಾದವು. ಈ ಕಟ್ಟಡಗಳಲ್ಲಿ ಗಾತಿಕ್ ಶೈಲಿಯೇ ಅಲ್ಲದೆ ಗ್ರೀಸ್, ಇಟಲಿ, ಫ್ರಾನ್ಸ್‍ಗಳ ಪುನರುಜ್ಜೀವನ ಶೈಲಿಯ ಅನುಕರಣೆ ಕಂಡುಬರುತ್ತದೆ. ಗಾತಿಕ್ ಶೈಲಿಯ ಕಟ್ಟಡಗಳಿಗೆ ಬೆಂಗಳೂರು ಸೆಂಟ್ರಲ್ ಕಾಲೇಜಿನ ಕಟ್ಟಡ ಉತ್ತಮ ಉದಾಹರಣೆ. ಬೆಂಗಳೂರಿನ ಅಠಾರಾಕಚೇರಿ, ವಸ್ತುಸಂಗ್ರಹಾಲಯ, ಡ್ಯಾಲಿ ಮೆಮೋರಿಯಲ್ ಹಾಲ್, ಮೈಸೂರಿನ ಮಹಾರಾಜ ಕಾಲೇಜು, ಜೂಬಿಲಿ ಕಟ್ಟಡ, ಜಿಲ್ಲಾಧಿಕಾರಿಗಳ ಕಟ್ಟಡಗಳು ಪುನರುಜ್ಜೀವನ ಶೈಲಿಯಲ್ಲಿವೆ. ಬೆಂಗಳೂರಿನ ಅರಮನೆ ಇಂಗ್ಲೆಂಡ್ ಮತ್ತು ನಾರ್ಮಂಡ್‍ಗಳಲ್ಲಿ ನಿರ್ಮಿತವಾದ ಮಧ್ಯಯುಗದ ದುರ್ಗಗಳಂತೆ ಇದ್ದು ವಿಂಡ್ಸರ್ ಅರಮನೆಯ ಮಾದರಿಯಲ್ಲಿದೆ. ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯಂಥ ಹಲವು ಕಟ್ಟಡಗಳಲ್ಲಿ ಪುನರುಜ್ಜೀವನ ಗುರುತಿಸಬಹುದು. ಆಧುನಿಕ ಕಟ್ಟಡಗಳಲ್ಲಿ ಅತ್ಯಂತ ಸುಂದರವೂ ಭವ್ಯವೂ ಆದ ಮೈಸೂರಿನ ಅರಮನೆ ಹಿಂದು, ಮುಸ್ಲಿಮ್ ಮತ್ತು ಪಾಶ್ಚಾತ್ಯ ಶೈಲಿಗಳ ಆಕರ್ಷಣೀಯ ಸಂಗಮ. ಇತ್ತೀಚಿನ ಕಟ್ಟಡವಾದ ವಿಧಾನಸೌಧ ಬೃಹತ್ಪ್ರಮಾಣದಲ್ಲಿದ್ದು ಪ್ರಾಚೀನ ದ್ರಾವಿಡ ರೀತಿಯ ದೇವಾಲಯಗಳ ಗೋಪುರಗಳ ಮಾದರಿಗಳನ್ನಳವಡಿಸಿ ಗಾಂಭೀರ್ಯ ಮತ್ತು ಭವ್ಯತೆಗಳು ಎದ್ದುಕಾಣುವಂತೆ ಮಾಡಲಾಗಿದೆ. ಇತ್ತೀಚೆಗೆ ಕಟ್ಟಡಗಳ ನಿರ್ಮಾಣಕಾರ್ಯದಲ್ಲಿ ನವೀನ ಶೈಲಿ ರೂಪುಗೊಳ್ಳುತ್ತಿದೆ. ಗಗನ ಚುಂಬಿ ಕಟ್ಟಡಗಳು ಮೇಲೇಳುತ್ತಿವೆ. ಅಮೆರಿಕದಲ್ಲಿನ ಎಂಪೈರ್ ಸ್ಟೇಟ್ ಬಿಲ್ಡಿಂಗ್ ಮಾದರಿಯಲ್ಲಿ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಿರ್ಮಿಸಿರುವ ಯುಟಿಲಿಟಿ ಬಿಲ್ಡಿಂಗ್ ಇಲ್ಲಿ ಉಲ್ಲೇಖಾರ್ಹ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: