ಇಂಗ್ಲಿಷ್ ನ್ಯಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Royal Courts of Justice on the Strand in ಲಂಡನ್ is the seat of the High Court of Justice and the Court of Appeal.

ಇಂಗ್ಲಿಷ್ ನ್ಯಾಯ ಪ್ರಪಂಚದ ನ್ಯಾಯವ್ಯವಸ್ಥೆಗಳಲ್ಲೊಂದು. ಇದರ ಏಕೈಕ ಪ್ರಬಲ ಪ್ರತಿಸ್ಪರ್ಧಿಯೆಂದರೆ ರೋಮನ್ ನ್ಯಾಯ. ಯುರೋಪ್ ಖಂಡಪ್ರದೇಶ ಹಾಗೂ ರಷ್ಯದ ಪಶ್ಚಿಮ ಭಾಗದಲ್ಲಿ ರೋಮನ್ ನ್ಯಾಯದ ಪ್ರಭಾವ ವಿಶೇಷವಾಗಿರುವುದಾದರೂ ಜಗತ್ತಿನ ಅನೇಕ ರಾಷ್ಟ್ರ್ರಗಳ ಮೇಲೆ ಇಂಗ್ಲಿಷ್ ನ್ಯಾಯದ ಪ್ರಭಾವವನ್ನು ಕಾಣಬಹುದಾಗಿದೆ. ಇಂಗ್ಲಿಷರು ನೆಲೆಸಿದ ಸ್ಥಳಗಳಲ್ಲೆಲ್ಲ ಅವರು ತಮ್ಮ ನ್ಯಾಯವನ್ನೂ ಹರಡಿದರು. ಆಧುನಿಕ ಭಾರತದ ನ್ಯಾಯಪದ್ಧತಿಯ ಕೆಲವು ಶಾಖೆಗಳ ಮೇಲೆ ಇಂಗ್ಲಿಷ್ ನ್ಯಾಯದ ಆಯಾಶಾಖೆಗಳ ಪ್ರಭಾವ ಹೆಚ್ಚಾಗಿ ಬಿದ್ದಿದೆ. (ಉದಾ: ಕರಾರು ಕಾಯಿದೆ, ಕಂಪನಿ ಕಾಯಿದೆ, ಕ್ರಿಮಿನಲ್ ಕಾಯಿದೆ, ಇತ್ಯಾದಿ) ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮುಂತಾದ ದೇಶಗಳ ಹಾಗೂ ಬ್ರಿಟಿಷ್ ವಸಾಹತುಗಳ ನ್ಯಾಯ ಪದ್ಧತಿಗಳಿಗೆ ಇಂಗ್ಲಿಷ್ ನ್ಯಾಯವೇ ತಳಹದಿ.

ಯುರೋಪಿನ ನ್ಯಾಯವ್ಯವಸ್ಥೆ[ಬದಲಾಯಿಸಿ]

ಯುರೋಪ್ ಖಂಡದ ನ್ಯಾಯವ್ಯವಸ್ಥೆಯನ್ನು ಇಂಗ್ಲಿಷ್ ನ್ಯಾಯಪದ್ಧತಿ ಮತ್ತು ರೋಮನ್ ನ್ಯಾಯಪದ್ಧತಿ ಎಂದು ಎರಡು ವಿಭಾಗ ಮಾಡಲಾಗಿದೆ. ರೋಮನ್ ಪದ್ಧತಿ ರಾಜ್ಯದ ಅಭಿವೃದ್ದಿಗೆ ಪ್ರಮುಖ ಸ್ಥಾನ ನೀಡಿತು. ಇಂಗ್ಲಿಷ್ ನ್ಯಾಯದ ದೃಷ್ಟಿಯಲ್ಲಿ ಪ್ರಜೆಯ ಮೇಲ್ಮೆಯೇ ಪ್ರಧಾನ. ಯುರೋಪಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಅಲ್ಲಿನ ಅನೇಕ ರಾಷ್ಟ್ರ್ರಗಳಲ್ಲಿ ಪರಂಪರಾಗತ ಸಂಪ್ರದಾಯ ನಿಯಮಗಳನ್ನು ಬದಿಗಿರಿಸಿ ರೋಮನ್ ನ್ಯಾಯವನ್ನೇ ಅಳವಡಿಸಿಕೊಳ್ಳುವಂಥ ಕಾನೂನಿನ ಕ್ರಾಂತಿ ಸಂಭವಿಸಿತು. ಆದರೆ ಇಂಗ್ಲೆಂಡಿನಲ್ಲಿ ಅಂಥ ಕ್ರಾಂತಿಗೆ ಅವಕಾಶ ದೊರೆಯಲಿಲ್ಲ. ಅದು ಪ್ರಾಚೀನ ಪದ್ಧತಿಗಳನ್ನು ಅಡಿಗಲ್ಲಾಗಿಟ್ಟುಕೊಂಡು ಕ್ರಮಕ್ರಮವಾಗಿ ತನ್ನದೇ ಆದ ಕಾನೂನು ನಿರ್ಮಿಸಿಕೊಂಡಿತು.

ಇಂಗ್ಲಿಷ್ ನ್ಯಾಯ ವಿಭಾಗಗಳು[ಬದಲಾಯಿಸಿ]

ನ್ಯಾಯ ಪರಿಪಾಲನೆಯಲ್ಲಿ ರಾಜ್ಯ ಅಂಗೀಕರಿಸಿ ಪ್ರಯೋಗಿಸುವ ಮೂಲ ತತ್ತ್ವಗಳನ್ನು ಅಥವಾ ನ್ಯಾಯಾಲಯಗಳು ಒಪ್ಪಿ ಜಾರಿ ಮಾಡುವ ನಿಯಮ ನಿಬಂಧನೆಗಳನ್ನು ನ್ಯಾಯವೆಂದು ಕರೆಯಬಹುದೆಂದು ಸರ್ಜಾನ್ ಸ್ಯಾಲ್ಮಂಡ್ ಹೇಳುತ್ತಾನೆ. ಈ ಪದವನ್ನು ನಿತ್ಯ ಬಳಸಲಾಗುವ ಸಿವಿಲ್ ನ್ಯಾಯಕ್ಕೆ ಮಾತ್ರ ಇಲ್ಲಿ ಬಳಸಲಾಗಿದೆ. ಸ್ಯಾಲ್ಮಂಡ್ ಎಲ್ಲ ನ್ಯಾಯಗಳನ್ನೂ ಸಾಮಾನ್ಯ ಮತ್ತು ವಿಶಿಷ್ಟ ಎಂಬ ಎರಡು ವಿಭಾಗಗಳನ್ನಾಗಿ ಮಾಡುತ್ತಾನೆ. ಒಂದನೆಯದು ಸಾರ್ವತ್ರಿಕವಾಗಿ ಎಲ್ಲರಿಗೂ ಎಲ್ಲಕ್ಕೂ ಅನ್ವಯಿಸುವಂಥದು. ಗುಣ, ಮೂಲ, ಉಪಯೋಗಗಳಲ್ಲಿ ವಿಶಿಷ್ಟವೂ ಅಪವಾದಾತ್ಮಕವೂ (ಎಕ್ಸೆಪ್ಷನಲ್) ಆಗಿರುವಂಥದು. ಎರಡನೆಯದು ಸಾಮಾನ್ಯ ಕಾನೂನಿಗೆ ಪೂರಕ, ಅಥವಾ ಅದನ್ನು ತೊಡೆದು ಹಾಕುವಂಥದು. ಸಾಮಾನ್ಯ ನ್ಯಾಯವನ್ನು ಮೂರು ವಿಭಾಗಗಳನ್ನಾಗಿ ಮಾಡಬಹುದು - ಸಂಪ್ರದಾಯ ನ್ಯಾಯ (ಕಾಮನ್ ಲಾ), ಸಾಮ್ಯ ನ್ಯಾಯ (ಎಕ್ವಿಟಿ) ಮತ್ತು ಕಾಯಿದೆಗಳು (ಸ್ಟಾಚೂಟ್ಸ್). ಇಂಗ್ಲಿಷ್ ನ್ಯಾಯವೆಂದರೆ ಸಂಪ್ರದಾಯ ನ್ಯಾಯ, ಸಾಮ್ಯ ನ್ಯಾಯ ಮತ್ತು ಕಾಯಿದೆಗಳ ತ್ರಿವೇಣೀ ಸಂಗಮ. ಇಂದಿನ ಇಂಗ್ಲಿಷ್ ನ್ಯಾಯವನ್ನರಿಯಬೇಕಾದರೆ ಅದರ ಚಾರಿತ್ರಿಕ ಹಿನ್ನೆಲೆ ಬಹಳ ಮುಖ್ಯ.

ಹಿನ್ನಲೆ[ಬದಲಾಯಿಸಿ]

ಇಂಗ್ಲೆಂಡನ್ನಾಕ್ರಮಿಸಿಕೊಂಡಿದ್ದ ರೋಮನ್ನರು ಐದನೆಯ ಶತಮಾನದ ಆದಿ ಭಾಗದಲ್ಲಿ ಆ ದೇಶ ಬಿಟ್ಟರು. ಅವರೊಂದಿಗೆ ಅವರ ನ್ಯಾಯಪದ್ಧತಿಗಳೂ ಮಾಯವಾದವು. ಬಳಿಕ ಪ್ರ.ಶ. 600 ರ ತನಕ ಅನೇಕ ಜರ್ಮನ್ ತಂಡಗಳು ಇಂಗ್ಲೆಂಡಿನ ಮೇಲೆ ದಾಳಿ ನಡೆಸಿ ಅಲ್ಲಿಯ ಉತ್ತಮ ಭೂಮಿಗಳನ್ನು ವಶಪಡಿಸಿಕೊಂಡು ಅಲ್ಲೆ ನೆಲೆ ನಿಂತವು. ಆ ತಂಡಗಳವರ ಪದ್ಧತಿಗಳೂ ಕ್ರಮಗಳೂ ಅಲ್ಲಿ ಬೇರೂರಿದವು. ಈ ಜರ್ಮನ್ ತಂಡಗಳಿಗೆ ರಾಜನಿರಲಿಲ್ಲ. ಪ್ರತಿ ತಂಡವೂ ತನ್ನ ನಾಯಕನನ್ನು ಚುನಾಯಿಸುತ್ತಿತ್ತು. ಪ್ರತಿ ತಂಡಕ್ಕೂ ತನ್ನದೇ ಆದ ಸಭೆಯೂ ತನ್ನದೇ ಆದ ಪದ್ಧತಿಯೂ ಇದ್ದುವು. ತಪ್ಪೊಪ್ಪುಗಳ ನಿರ್ಣಯ ಸಭೆಯ ಅಧೀನ. ಪ್ರಾಚೀನ ಕಾಲದಿಂದಲೂ ಬಂದ ರೂಢಿಯೇ ಕಾನೂನುಗಳಾದವು.

ಇಂಗ್ಲಿಷ್ ನ್ಯಾಯ ಪದ್ಧತಿ[ಬದಲಾಯಿಸಿ]

ಆ್ಯಂಗ್ಲೋ-ಸ್ಯಾಕ್ಸನ್ ಜನರ ನ್ಯಾಯಪದ್ಧತಿಯ ಸ್ವರೂಪದ ವಿಚಾರವಾಗಿ ಹೆಚ್ಚೇನೂ ತಿಳಿದುಬರುವುದಿಲ್ಲ. ಎತೆಲ್ಬರ್ಟ್ (ಪ್ರ.ಶ. 616) ಈ ಕಾನೂನುಗಳನ್ನು ಕ್ರೋಡೀಕರಿಸಿದ. ಆದರೆ ಇವುಗಳಲ್ಲಿ ನಿತ್ಯ ಪ್ರಚಲಿತ ಕಾನೂನುಗಳ ವಿಚಾರವಿಲ್ಲ. ಆ ಕಾಲಕ್ಕೆ ನವೀನವೆನಿಸಿದ್ದ ಕಾನೂನುಗಳು ಮಾತ್ರ ವಿಶೇಷವಾಗಿ ಉಕ್ತವಾಗಿವೆ. ಇಂಗ್ಲಿಷರನ್ನು ಕ್ರೈಸ್ತರನ್ನಾಗಿ ಪರಿವರ್ತಿಸುವ ಕಾರ್ಯ ಸು. 597ರಲ್ಲಿ ಪ್ರಾರಂಭವಾಗಿ ಒಂದು ಶತಮಾನಕಾಲ ಸಾಗಿತು. ಕ್ರೈಸ್ತಧರ್ಮ ಪ್ರಚಾರದಿಂದ ಒಂದೇ ರೀತಿಯ ಕಾನೂನುಗಳು ಹಬ್ಬಲು ಸಹಾಯವಾಯಿತು. ಆಡಳಿತ ದೃಷ್ಟಿಯಿಂದ ಇಂಗ್ಲೆಂಡನ್ನು ಟೌನ್ಷಿಪ್, ಹಂಡ್ರೆಡ್ ಮತ್ತು ಷೈರ್ಗಳಾಗಿ ಕ್ರಮೇಣ ವಿಂಗಡಿಸಲಾಯಿತು. ಕೆಲವು ಗ್ರಾಮಗಳು ಸೇರಿದ ವಿಭಾಗವೇ ಟೌನ್ಷಿಪ್. ಹಲವಾರು ಟೌನ್ಷಿಪ್ಗಳು ಸೇರಿ ಹಂಡ್ರೆಡ್ ಆಗುತ್ತಿತ್ತು. ಇಂಥವು ಅನೇಕ ಸೇರಿ ಷೈರ್ ಆಗುತ್ತಿತ್ತು. ಟೌನ್ಷಿಪ್ ಸಭೆಗಳು ತಿಂಗಳಿಗೊಮ್ಮೆ ಸೇರುತ್ತಿದ್ದುವು. ತಮಗೆ ಬೇಕಾದ ನ್ಯಾಯ ನಿಬಂಧನೆಗಳ ರಚನೆ, ಪುಟ್ಟ ವಿವಾದಗಳ ತೀರ್ಮಾನ, ದಂಡಾಧಿಕಾರಿಯ ನೇಮಕ, ನೆಮ್ಮದಿ ಪಾಲನೆಗಾಗಿ ಕೆಳದರ್ಜೆಯ ಅಧಿಕಾರಿಗಳ ನೇಮಕ, ಹಂಡ್ರೆಡ್ ಮತ್ತು ಷೈರ್ಗಳಿಗೆ ಪ್ರತಿನಿಧಿಗಳ ಆಯ್ಕೆ - ಇವು ಆ ಸಭೆಗಳ ಮುಖ್ಯ ಕಾರ್ಯಭಾರ. ಆ್ಯಂಗ್ಲೋ-ಸ್ಯಾಕ್ಸನ್ ಕಾಲದಲ್ಲಿ ಹಂಡ್ರೆಡ್ಗಳಿಗೆ ಸ್ವಯಂ ಆಡಳಿತದ ಅಧಿಕಾರವಿತ್ತು. ಅದರ ಸಭೆ ತಿಂಗಳಿಗೊಮ್ಮೆ ಕೂಡುತ್ತಿತ್ತು. ಪ್ರಮುಖ ಭೂಮಾಲೀಕರು, ಟೌನ್ಷಿಪ್ಗಳ ಪಾದ್ರಿಗಳು, ದಂಡಾಧಿಕಾರಿ ಮತ್ತು ಆಯ್ದ ನಾಲ್ಕು ಮಂದಿ ಪ್ರತಿನಿಧಿಗಳು-ಇವರು ಅದರಲ್ಲಿ ಭಾಗವಹಿಸುತ್ತಿದ್ದರು. ಅದು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳಲ್ಲಿ ನ್ಯಾಯ ತೀರ್ಮಾನ ಮಾಡುತ್ತ್ತಿತ್ತು. ಭಾಗವಹಿಸಿದವರಿಗೆಲ್ಲ ನ್ಯಾಯಧೀಶರಾಗುವ ಹಕ್ಕಿದ್ದರೂ ನ್ಯಾಯಾಲಯವಾಗಿ ಕೆಲಸ ಮಾಡಲು ಹನ್ನೆರಡು ಜನರನ್ನು ನೇಮಕಮಾಡಲಾಗುತ್ತಿತ್ತು. ಹಂಡ್ರೆಡ್ನ ನಾಯಕನನ್ನೂ ಚುನಾಯಿಸಲಾಗುತ್ತಿತ್ತು. ಈತನನ್ನು ಹಂಡ್ರೆಡ್ ಎಲ್ಡರ್ ಅಥವಾ ಹಿರಿಯ ಎನ್ನುತ್ತಿದ್ದರು. ಷೈರ್ಗಳಲ್ಲೂ ವರ್ಷಕ್ಕೆ ಎರಡು ಬಾರಿ ಕೂಡುವ ಸಭೆಗಳಿದ್ದವು. ಅವುಗಳಲ್ಲಿ ಪ್ರಮುಖ ಭೂಮಾಲೀಕರೂ ಸರ್ಕಾರಿ ಅಧಿಕಾರಿಗಳೂ ಹಂಡ್ರೆಡ್ಗಳ ಪ್ರತಿನಿಧಿಗಳೂ ಸೇರುತ್ತದ್ದರು. ಅವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ತೀರಿಸುತ್ತಿದ್ದುವು. ಷೈರ್ನ ಮುಖ್ಯಸ್ಥ ಎಲ್ಡರ್ಮನ್. ಅವನನ್ನು ದೇಶದ ಸಭೆ ಚುನಾಯಿಸುತ್ತಿತ್ತು. ಎಲ್ಡರ್ಮನ್ ಮತ್ತು ಬಿಷಪ್ ಸಭೆಯಲ್ಲಿದ್ದು ಕ್ರಮವಾಗಿ ದೇಶದ ನ್ಯಾಯವನ್ನೂ ಧರ್ಮದ ನ್ಯಾಯವನ್ನೂ ಹೇಳುತ್ತಿದ್ದರು. ನ್ಯಾಯವನ್ನು ಜಾರಿ ಮಾಡುವ ಬಗ್ಗೆಯೂ ರಾಜನ ಭೂಮಿಗಳನ್ನು ನೋಡುವ ಬಗ್ಗೆಯೂ ರಾಜನಿಂದ ನೇಮಕವಾಗಿದ್ದ ಅಧಿಕಾರಿಯೇ ಷೆರಿಫ್. ಸೈನ್ಯದ ಮೇಲ್ವಿಚಾರಣೆ ಎಲ್ಡರ್ಮನ್ನನ ಹೊಣೆ. ರಾಜನಿಂದ ಮತ್ತು ಅವನಿಗೆ ಸಹಾಯಕರಾದ ಬುದ್ಧಿವಂತರಿಂದ ಇಡೀ ದೇಶದ ಸರ್ಕಾರ ನಡೆಯುತ್ತಿತ್ತು. ರಾಜ ಯುದ್ಧ ಸಮಯದಲ್ಲಿ ದೇಶದ ಮುಂದಾಳು, ಶಾಂತಿ ಸಮಯದಲ್ಲಿ ನ್ಯಾಯಾಧೀಶ. ಆದರೆ ಅವನು ತನ್ನ ಬುದ್ಧಿವಂತರ ಕೂಟದ ಬುದ್ಧಿವಾದವನ್ನು ಮೀರಲಾರದವನಾಗಿದ್ದ. ಆ ಕೂಟದಲ್ಲಿ ಮಿತ್ರರು, ಮಂತ್ರಿಗಳು, ಮುಖ್ಯ ಅಧಿಕಾರಿಗಳು, ಬಿಷಪ್ಗಳು, ಎಲ್ಡರ್ಮನ್ ಮುಂತಾದವರು ಇರುತ್ತಿದ್ದರು. ಆ್ಯಂಗ್ಲೋ-ಸಾಕ್ಸನ್ ಕಾನೂನು: ಷೈರ್ ಮತ್ತು ಹಂಡ್ರೆಡ್ಗಳ ನ್ಯಾಯಾಲಯಗಳಿಗೆ ಸಂಪ್ರದಾಯವೇ ಕಾನೂನು. ಆಂಗ್ಲೋ-ಸ್ಯಾಕ್ಸನರಲ್ಲಿ ಒಬ್ಬ ಇನ್ನೊಬ್ಬನಿಗೆ ತೊಂದರೆ ಕೊಟ್ಟಲ್ಲಿ ತೊಂದರೆಗೊಳಗಾದವನು ತಾನಾಗಿಯೇ ಅದನ್ನು ಇತ್ಯರ್ಥಿಸಲು ಸಾಧ್ಯವಿರಲಿಲ್ಲ. ಮೊದಲು ಆತ ತನಗೆ ಸಂಬಂಧಿಸಿದ ಕೋರ್ಟಿನಲ್ಲಿ ದೂರು ಕೊಡಬೇಕಿತ್ತು. ಯಾರು ಪುರಾವೆಯ ಹೊಣೆ ಹೊರಬೇಕೊ ಆತ ತಾನು ಹೇಳಿದ್ದು ಸತ್ಯವೆಂದು ಪ್ರಮಾಣಮಾಡಿ ಅದನ್ನು ದೃಢಪಡಿಸಬೇಕಿತ್ತು. ಬೇರೆಯವರಿಂದ ಪ್ರಮಾಣ ಮಾಡಿಸುವ ಕೆಲಸದಲ್ಲಿ ಯಶಸ್ಸು ಗಳಿಸಿದವನೇ ಗೆಲ್ಲುತ್ತಿದ್ದ. ಇದಕ್ಕೆ ಇಂಗ್ಲಿಷಿನಲ್ಲಿ ವೇಜರ್ ಆಫ್ ಲಾ ಎನ್ನುತ್ತಾರೆ. ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆಪಾದಿತನಾದವರು ಪ್ರಮಾಣ ಮಾಡುವುದಲ್ಲದೆ, ತಾನು ತಪ್ಪು ಮಾಡಿಲ್ಲವೆಂದು ಸ್ಥಿರಪಡಿಸಲು ಕುದಿಯುವ ಎಣ್ಣೆಯಲ್ಲಿ ಕೈಯಿಕ್ಕುವುದೇ ಮೊದಲಾದ ಉಗ್ರಪರೀಕ್ಷೆಗಳಿಗೂ ಒಳಗಾಗುತ್ತಿದ್ದ. ಅವುಗಳಿಂದಾಗಿ ತೊಂದರೆಯಾಗದಿದ್ದರೆ ಆಪಾದಿತ ತಪ್ಪಿತಸ್ಥನಲ್ಲವೆಂದು ತೀರ್ಪು ಮಾಡಲಾಗುತ್ತಿತ್ತು. ಆದರೆ ಆಂಗ್ಲೋ-ಸ್ಯಾಕ್ಸನ್ ನ್ಯಾಯಾಲಯಗಳಿಗೆ ತಮ್ಮ ತೀರ್ಪುಗಳನ್ನು ಜಾರಿ ಮಾಡುವುದಕ್ಕಾಗಲಿ ಆಪಾದಿತರನ್ನು ತನ್ನ ಮುಂದೆ ಬರಮಾಡಿಕೊಳ್ಳುವುದಕ್ಕಾಗಲಿ ಸರಿಯಾದ ಕ್ರಮವಿರಲಿಲ್ಲ. ಕಾನೂನು ಶೈಶವಾವಸ್ಥೆಯಲ್ಲಿತ್ತು. ಈ ನ್ಯಾಯಾಲಯಗಳ ನ್ಯಾಯಪದ್ಧತಿಗಳು ಇಂಗ್ಲೆಂಡನ್ನು ನಾರ್ಮನ್ನರು ಆಕ್ರಮಿಸುವ ತನಕ ಸಾಗಿದುವು. ಆದರೆ ಆ್ಯಂಗ್ಲೋ-ಸ್ಯಾಕ್ಸನರ ಕಾಲದಲ್ಲಿ ಸಮಗ್ರ ಇಂಗ್ಲೆಂಡಿಗೆ ಏಕರೀತಿಯ ಸಂಪ್ರದಾಯ ನ್ಯಾಯ ಇರಲಿಲ್ಲ.

ಇಂಗ್ಲಿಷ್ ನ್ಯಾಯದ ವೈಶಿಷ್ಟ್ಯ[ಬದಲಾಯಿಸಿ]

ನ್ಯಾಯವೂ ಒಂದು ಕಲೆ. ಈ ಭಾವನೆ ಇಂಗ್ಲಿಷ್ ನ್ಯಾಯದ ಅಪ್ರತಿಮ ಸೌಂದರ್ಯಕ್ಕೆ ಕಾರಣವಾಯಿತು. ಇದರಿಂದಾಗಿ ಇಂಗ್ಲಿಷ್ ನ್ಯಾಯ ವ್ಯವಹಾರ್ಯವೂ ವೈಶಿಷ್ಟ್ಯವುಳ್ಳದ್ದೂ ಆಯಿತು. ವ್ಯಕ್ತಿಯ ಸ್ವಾತಂತ್ರ್ಯ ಇಂಗ್ಲಿಷ್ ನ್ಯಾಯದ ಅಡಿಗಲ್ಲು. ಅಲ್ಲಿಯ ರಾಣಿ ಅಥವಾ ರಾಜ ನಿರಂಕುಶತೆಯಿಂದ ರಾಜ್ಯಪರಿಪಾಲನೆ ಮಾಡುವುದು ಅನೇಕಾನೇಕ ಕಾಯಿದೆಗಳಿಂದ ಅಸಾಧ್ಯ. ಇಂಗ್ಲೆಂಡಿನಲ್ಲಿ ನ್ಯಾಯಕಟ್ಟಳೆಗೇ (ರೂಲ್ ಆಫ್ ಲಾ) ಬೆಲೆ. ಯಾವನೂ ನ್ಯಾಯವಿಚಾರದಲ್ಲಿ ಮನಸ್ವಿಯಾಗಿ ವರ್ತಿಸುವಂತಿಲ್ಲ. ಇಂಗ್ಲೆಂಡಿನಲ್ಲಿ ರಾಣಿ ಅಥವಾ ರಾಜ ರಾಜ್ಯಭಾರ ಮಾಡುತ್ತಿದ್ದರೂ ಅಲ್ಲಿ ಪ್ರಜಾಪ್ರಭುತ್ವ ಬಲವಾಗಿ ಬೇರುಬಿಟ್ಟು ನಿಂತಿದೆ. ಅಲ್ಲಿಯ ನ್ಯಾಯವನ್ನು ಪ್ರಜಾಸತ್ತಾತ್ಮಕ ರಾಷ್ಟ್ರಗಳು ಆದರ್ಶವಾಗಿ ಇಟ್ಟುಕೊಂಡರೆ ಆಶ್ಚರ್ಯವಿಲ್ಲ. ಅಲ್ಲಿಯ ನ್ಯಾಯ ಚಿರಾಯು, ಶಾಂತಿಸಾಧಕ ಎಂದು ಆ ದೇಶದ ಜನರ ನಂಬುಗೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: