ವಿಷಯಕ್ಕೆ ಹೋಗು

ಕ್ರಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಾಂತಿ (ಆಂದೋಲನ, ವಿಪ್ಲವ) ಎಂದರೆ ಒಂದು ದೇಶದ ಸರ್ಕಾರದ ಪದ್ಧತಿ, ಆಡಳಿತ ವ್ಯವಸ್ಥೆ, ಸಂವಿಧಾನ ಅಥವಾ ಸಾಮಾಜಿಕ ವ್ಯವಸ್ಥೆಯಲ್ಲಿ ಉಂಟಾಗುವ ಅಸಾಧಾರಣ ಹಾಗೂ ಅನಿರೀಕ್ಷಿತ ಬದಲಾವಣೆ.

ಸಾಮಾನ್ಯವಾಗಿ ರಾಜಕೀಯ ಬದಲಾವಣೆಯನ್ನು ಮಾತ್ರ ಕ್ರಾಂತಿಯೆಂದು ಹೇಳುವುದುಂಟು. ಆದರೆ ಇತಿಹಾಸದ ಉದ್ದಕ್ಕೂ ಕ್ರಾಂತಿಕಾರಕ ಬದಲಾವಣೆಗಳು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲೂ ಉಂಟಾಗಿವೆ. ಆದ್ದರಿಂದ ಕ್ರಾಂತಿಯ ಅರ್ಥ ವ್ಯಾಪಕವಾದ್ದು. ಅದು ಮಾನವ ಜೀವನದ ಯಾವುದೇ ಕ್ಷೇತ್ರದಲ್ಲಿಯಾದರೂ ಆಗುವ ಅಸಾಧಾರಣ ಮತ್ತು ತೀವ್ರ ಬದಲಾವಣೆಯನ್ನು ಸೂಚಿಸುತ್ತದೆ.

ಮಧ್ಯಯುಗದ ಕೊನೆಯ ಭಾಗದಲ್ಲಿ ಇಟಲಿಯ ನಗರದ ರಾಜ್ಯಗಳಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಉಂಟಾದ ತೀವ್ರ ಸುಧಾರಣೆಗಳನ್ನು ಕ್ರಾಂತಿಯೆಂದು ಬಣ್ಣಿಸಲಾಗಿತ್ತು. ಇಂಗ್ಲೆಂಡಿನಲ್ಲಿ ಆಲಿವರ್ ಕ್ರಾಮ್ವೆಲನ ಕಾಲದಲ್ಲಿ ಹಳೆಯ ಆಡಳಿತ ಪದ್ಧತಿಯನ್ನು ಪುನರ್‍ಸ್ಥಾಪಿಸುವ ಪ್ರಯತ್ನದ ಸಂಬಂಧವಾಗಿ ಕ್ರಾಂತಿ ಎಂಬ ಪದವನ್ನು ಬಳಸಲಾಯಿತು. ಇದು ಈ ಶಬ್ದದ ವಿಪರ್ಯಾಸ.

ಈಚೆಗೆ ಕ್ರಾಂತಿ ನಿಜವಾಗಿಯೂ ಆಧುನಿಕ ಅರ್ಥದಲ್ಲಿ ಬಳಕೆಗೆ ಬಂತು. ದಬ್ಬಾಳಿಕೆ, ಅನೀತಿಯುತ ಆಡಳಿತ, ಲಂಚಗುಳಿತನ, ನಿರುಪಯುಕ್ತ ರಾಜಕೀಯ ವ್ಯವಸ್ಥೆ ಹಾಗೂ ಸಾಮಾಜಿಕ ಅನ್ಯಾಯದ ವಿರುದ್ಧ ಜನತೆಯ ಬಂಡಾಯ, ವಸಾಹತು ಆಡಳಿತದ ವಿರುದ್ಧ ಜನರ ದಂಗೆ, ಸ್ವಾತಂತ್ರ್ಯ ಘೋಷಣೆ ಮತ್ತು ಯುದ್ಧಗಳು ಕ್ರಾಂತಿಗಳೆನಿಸಿಕೊಳ್ಳುತ್ತವೆ. ಇಂಥ ಸ್ವಾತಂತ್ರ್ಯ ಸಮರ ಅಥವಾ ಕ್ರಾಂತಿಯನ್ನುಂಟುಮಾಡುವುದರಲ್ಲಿ ನಾಯಕನ ಪಾತ್ರ ಬಹು ಮುಖ್ಯ. ಕ್ರಾಂತಿಗಳು ಯಾವುದಾದರೂ ಒಂದು ಸಿದ್ಧಾಂತದ ವಿರುದ್ಧವಾಗಿ ಅಥವಾ ಪರವಾಗಿ ಉಂಟಾದ ಚಳವಳಿಯ ರೂಪವನ್ನು ತಳೆಯಬಹುದಾಗಿದೆ. ಜನತೆಯ ಮನಸ್ಸಿನಲ್ಲಿ ಹಾಗೂ ಭಾವನೆಗಳಲ್ಲಿ ಹಳೆಯ ವಿಚಾರಗಳ ಬದಲು ಹೊಸ ವಿಚಾರಗಳನ್ನು ಪ್ರಚೋದಿಸುವ ಪ್ರಯತ್ನ ಸಫಲವಾದಾಗ ಅದೂ ಕ್ರಾಂತಿ ಎನ್ನಿಸಿಕೊಳ್ಳುತ್ತದೆ. ರಾಜಕೀಯ ಸ್ವಾತಂತ್ರ್ಯಕ್ಕಾಗಿ ನಡೆಸಲಾದ ಹೋರಾಟ ಅಥವಾ ಬಂಡಾಯವೇ ಕ್ರಾಂತಿ-ಎಂಬುದಾಗಿ ಫ್ರೆಂಚ್ ವೈಚಾರಿಕ ಕಂಡಾರ್ಸೆ ನೀಡಿರುವುದಕ್ಕಿಂತ ಇಂದು ಇದರ ವಾಖ್ಯೆ ಬಹಳ ವಿಸ್ತøತವಾದ್ದಾಗಿದೆ.

ಇತಿಹಾಸದಲ್ಲಿ ಇದುವರೆಗೆ ಅನೇಕ ಬಗೆಯ ಹಲವಾರು ಕ್ರಾಂತಿಗಳು ಆಗಿಹೋಗಿವೆ. ಪ್ರತಿಯೊಂದು ದೇಶದಲ್ಲೂ ಇಂಥ ಕ್ರಾಂತಿಕಾರಕ ಬದಲಾವಣೆಗಳನ್ನು ಗುರುತಿಸಬಹುದು. ಪ್ರತಿಯೊಂದು ಕ್ರಾಂತಿಗೂ ತನ್ನದೇ ಆದ ಕಾರಣಗಳಿರಬಹುದಾದರೂ ಎಲ್ಲ ಕ್ರಾಂತಿಗಳಿಗೂ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ.

ಆಡಳಿತವರ್ಗದ ಅದಕ್ಷತೆ ಮತ್ತು ಅನೀತಿಯುತ ನಡೆವಳಿಕೆಯಿಂದ ಅಸ್ತಿತ್ವದಲ್ಲಿರುವ ರಾಜಕೀಯ ವ್ಯವಸ್ಥೆ ಕುಸಿದುಬಿದ್ದು ಆರ್ಥಿಕ ಬಿಕ್ಕಟ್ಟುಂಟಾದಾಗ ಕ್ರಾಂತಿ ಅನಿವಾರ್ಯವಾಗುತ್ತದೆ. 1788ರಲ್ಲಿ ಫ್ರಾನ್ಸಿನಲ್ಲಿ ಉಂಟಾದ ಕ್ಷಾಮ 1789ರ ಮಹಾಕ್ರಾಂತಿಗೆ ಕಾರಣವಾಯಿತು.

ಹೆಚ್ಚಿನ ಕ್ರಾಂತಿಗಳಿಗೆ ಯುದ್ಧಗಳೇ ಕಾರಣ. ಇಪ್ಪತ್ತನೆಯ ಶತಮಾನದ ಪ್ರತಿಯೊಂದು ಕ್ರಾಂತಿಯೂ ಸಾಮಾನ್ಯವಾಗಿ ಯಾವುದಾದರೊಂದು ಯುದ್ಧದ ತರುವಾಯವೇ ಸಂಭವಿಸಿದೆ. 1905ರ ರಷ್ಯನ್ ಕ್ರಾಂತಿಯೂ 1914-1918ರ ಹಾಗೂ 1939-45ರ ಎರಡು ಮಹಾಯುದ್ಧಗಳ ಅನಂತರ ಉಂಟಾದ ಕ್ರಾಂತಿಗಳೂ ಅದರಲ್ಲಿಯೂ ಚೀನದಲ್ಲಿ ಆದ ಕ್ರಾಂತಿಯೂ ಇದಕ್ಕೆ ನಿದರ್ಶನಗಳಾಗಿವೆ. ಯುದ್ಧಗಳಿಂದ ಉಂಟಾಗುವ ಅನಿಶ್ಚಿತತೆ, ಅಸ್ತವ್ಯಸ್ತತೆ, ಜೀವ ವಿತ್ತಗಳ ನಷ್ಟ ಮತ್ತು ಕಷ್ಟಗಳಿಂದ ಕ್ರಾಂತಿಕಾರಕ ಬದಲಾವಣೆಗೆ ಅನುಕೂಲಕರವಾದ ವಾತಾವರಣ ನಿರ್ಮಿತವಾಗುತ್ತದೆ. ಇದೂ ಅಲ್ಲದೆ ಯುದ್ಧದಲ್ಲಿ ಸೋತದೇಶದಲ್ಲಿ ಆಡಳಿತಾಧಿಕಾರ ಸಡಿಲವಾಗಿ ಸಾಮಾಜಿಕ ಅತೃಪ್ತಿಯುಂಟಾಗುತ್ತದೆ. ಇಂಥ ಅತೃಪ್ತಿಯೊಡನೆ ಸೋಲಿನಿಂದುಂಟಾದ ಅವಮಾನವೂ ಸೇರಿ ಆ ದೇಶದ ಜನತೆಯಲ್ಲಿ ಪ್ರತೀಕಾರದ ಭಾವನೆಯುಂಟಾಗಿ ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಎಂಥ ಕ್ರಾಂತಿಕಾರಕ ಬದಲಾವಣೆಗೂ ಅವರು ಸಿದ್ಧರಾಗುತ್ತಾರೆ. 1908ರಲ್ಲಿ ಕಿರಿಯ ತುರ್ಕಿಗಳು (ಯಂಗ್ ಟಕ್ರ್ಸ್) ಮತ್ತು 1952ರಲ್ಲಿ ಈಜಿಪ್ಟಿನ ನಗೀಬ್ ಮತ್ತು ನಾಸೆರರು ಇಂಥ ವಾತಾವರಣದಲ್ಲಿ ಕ್ರಾಂತಿಯ ನಾಯಕರಾಗಿ ತಂತಮ್ಮ ದೇಶಗಳ ಕ್ರಾಂತಿಗಳಿಗೆ ಕಾರಣರಾದರು.

ಕ್ರಾಂತಿಗಳು ಸಮಾಜದಲ್ಲಿ ಯಾವುದಾದರೂ ಒಂದು ಸಾಮಾಜಿಕ ಗುಂಪಿನ, ವರ್ಗದ ಅಥವಾ ಪಂಗಡದ ಜನರನ್ನು ಪಕ್ಷಪಾತದಿಂದ ಕಾಣುವುದರಿಂದಲೂ ಸಂಭವಿಸಬಹುದು. ಸಾಮಾಜಿಕ ಅರಾಜಕತೆ ಮತ್ತು ರಾಜಕೀಯ ಆಂದೋಲನದ ರೂಪದಲ್ಲಿ ಕ್ರಾಂತಿ ಉದ್ಭವಿಸುತ್ತದೆ. ಒಂದು ವರ್ಗದ ಜನರಿಗೆ ಇತರರಂತೆ ರಾಜಕೀಯ ಹಕ್ಕುಬಾಧ್ಯತೆಗಳು ಇಲ್ಲವೆಂಬ ಭಾವನೆಯುಂಟಾದಾಗ ಅಥವಾ ಸಾಮಾಜಿಕವಾಗಿ ತಾವು ಇತರರೊಡನೆ ಸಮಾನರಾಗಿಲ್ಲವೆಂದು ಅರಿತಾಗ ಮತ್ತು ತಮ್ಮ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಶಕ್ತರಾಗಿಲ್ಲವೆಂದು ಪರಿತಪಿಸಿದಾಗ ಕ್ರಾಂತಿಯ ಕಿಡಿ ಹೊತ್ತಿಕೊಳ್ಳುತ್ತದೆ. ಅದರಲ್ಲಿಯೂ ತಮ್ಮ ಅಶೋತ್ತರಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದು ಅಸಾಧ್ಯವೆಂದು ತೋರಿದಾಗ ಅಂಥ ವರ್ಗಗಳು ಕ್ರಾಂತಿಗೆ ಶರಣಾಗುತ್ತವೆ. ಅಧಿಕಾರದಲ್ಲಿರುವವರು ಜನತೆಯಲ್ಲಿ ಕಾಲ ಕಾಲಕ್ಕೆ ಉಂಟಾಗುವ ಆಶೋತ್ತರಗಳನ್ನು ಅರಿತುಕೊಳ್ಳದಿದ್ದರೆ, ಅರಿತುಕೊಂಡರೂ ಇತರರೊಡನೆ ತಮ್ಮ ಅಧಿಕಾರವನ್ನು ಹಂಚಿಕೊಳ್ಳಲು ಸಿದ್ಧರಿಲ್ಲದಿದ್ದರೆ, ಕ್ರಾಂತಿ ಅನಿವಾರ್ಯವಾಗುತ್ತದೆ. ಆಗ ಜನತೆ ಪರಂಪರಾನುಗತವಾಗಿ ಬಂದಿರುವ ಆಡಳಿತ ಪದ್ಧತಿ ಮತ್ತು ರಾಜಕೀಯ ವ್ಯವಸ್ಥೆಯ ವಿರುದ್ಧ ಬಂಡೆದ್ದು ಅದನ್ನು ನಿರ್ಮೂಲಗೊಳಿಸಿ ಅದರ ಸ್ಥಾನದಲ್ಲಿ ಒಂದು ಹೊಸ ವ್ಯವಸ್ಥೆಯನ್ನೇ ಸ್ಥಾಪಿಸಬಯಸುತ್ತದೆ. ಹೀಗೆ ಅತೃಪ್ತಿ ಮತ್ತು ಅಸಮಾನತೆಯ ನಿರ್ಮೂಲಕ್ಕಾಗಿ ಕ್ರಾಂತಿ ಸಂಭವಿಸುತ್ತದೆ. ಇದು ಕ್ಷಿಪ್ರವಲ್ಲದಿದ್ದರೂ ಇದರ ಪರಿಣಾಮಗಳು ಅಸಾಧಾರಣವಾದವುಗಳಾದ್ದರಿಂದ ಇದೂ ಕ್ರಾಂತಿಯೇ ಎನಿಸುವುದು. ಫ್ರೆಂಚ್ ಮತ್ತು ರಷ್ಯದ ಕ್ರಾಂತಿಗಳೂ ಆಯಾ ದೇಶಗಳ ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ಅನೇಕ ವರ್ಷಗಳಿಂದ ನಡೆದುಬಂದಿದ್ದ ಅನ್ಯಾಯದ ವಿರುದ್ಧವಾಗಿದ್ದುವೆ ಹೊರತು ಜನತೆಯಲ್ಲಿ ಅನಿರೀಕ್ಷಿತವಾಗಿ ಅಥವಾ ಹಠಾತ್ತನೆ ಉಂಟಾದ ಕ್ಷೋಭೆಯಿಂದಲ್ಲ.

ಒಂದು ವಸಾಹತಿನ ಜನತೆ ಸಾಕಷ್ಟು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗದೆ ಹೋಗಿ, ತನ್ನ ವಿದೇಶಿ ಆಡಳಿತಗಾರರಿಂದ ಮುಕ್ತವಾಗುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ ಆ ವಸಾಹತಿಗೂ ವಸಾಹತುಶಾಹಿ ರಾಷ್ಟ್ರಕ್ಕೂ ನಡುವೆ ಉಂಟಾಗುವ ಘರ್ಷಣೆಯೂ ಕ್ರಾಂತಿಯಾಗಿ ಪರಿಣಮಿಸುತ್ತದೆ. ವಸಾಹತುಶಾಹಿ ರಾಷ್ಟ್ರ ಸ್ವಸಂತೋಷದಿಂದ ತನ್ನ ವಸಾಹತನ್ನು ಸ್ವತಂತ್ರರಾಷ್ಟ್ರವೆಂದು ಘೋಷಿಸಿರುವುದು ವಿರಳ. ಹದಿನೆಂಟನೆಯ ಶತಮಾನದ ಅಮೆರಿಕನ್ ಕ್ರಾಂತಿ ಸ್ವಾತಂತ್ರ್ಯಸಮರವಾಗಿ ರೂಪಿತವಾಗಿತ್ತು. ಅಂತೆಯೇ ಇಪ್ಪತ್ತನೆಯ ಶತಮಾನದಲ್ಲಿ ಏಷ್ಯ ಮತ್ತು ಆಫ್ರಿಕ ಖಂಡಗಳ ಅನೇಕ ವಸಾಹತುಗಳು ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದುವು. ಭಾರತ ಸ್ವಾತಂತ್ರ್ಯ ಸಮರವೂ ವಿಶಿಷ್ಟವಾದ ಕ್ರಾಂತಿಯೇ ಆಗಿದೆ. ಈ ರೀತಿಯ ಕ್ರಾಂತಿಯಲ್ಲಿ ನಾಯಕರ ಪಾತ್ರ ಮಹತ್ತ್ವದ್ದು. ಪ್ರತಿಯೊಂದು ಕ್ರಾಂತಿಗೂ ಹೆಸರಾದ ನಾಯಕರಿದ್ದು ಅವರೇ ಸ್ವತಂತ್ರ ರಾಷ್ಟ್ರದ ಮುಖಂಡರಾಗುತ್ತಾರೆ.

ಕ್ರಾಂತಿಗಳು ಸಾಮಾನ್ಯವಾಗಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಮತ್ತು ಒಂದು ಜನತೆಯಿಂದ ಇನ್ನೊಂದು ಜನತೆಗೆ ಹಬ್ಬುತ್ತವೆ. ಒಂದು ಕಡೆ ಉಂಟಾದ ಕ್ರಾಂತಿಯಿಂದ ಇನ್ನೊಂದು ಜನಾಂಗ ಸ್ಫೂರ್ತಿ ಪಡೆಯಬಹುದು. 1820ರಲ್ಲಿ ಸ್ಪೇನಿನಲ್ಲಿ ಜರುಗಿದ ಕ್ರಾಂತಿಯಿಂದಾಗಿ ಪೋರ್ಚುಗಲ್ ಮತ್ತು ನೇಪಲ್ಸ್‍ಗಳಲ್ಲಿ ಬಂಡಾಯಗಳಾದುವು. 1830ರಲ್ಲಿ ಫ್ರಾನ್ಸಿನಲ್ಲಿ ಜರುಗಿದ ಘಟನೆಗಳು ಬೆಲ್ಜಿಯಂ ಮತ್ತು ಪೋಲೆಂಡ್ ದೇಶಗಳ ಮೇಲೆ ತಮ್ಮ ಪ್ರಭಾವ ಬೀರಿದುವು. ಇದೇ ರೀತಿ ಅಮೆರಿಕನ್ ಸ್ವಾತಂತ್ರ್ಯ ಯುದ್ಧ ಮತ್ತು ಫ್ರಾನ್ಸಿನ ಮಹಾಕ್ರಾಂತಿಗಳು ಒಂದಕ್ಕೊಂದು ಪೂರಕವಾದುವು. 1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಭಾರತ ಏಷ್ಯ ಮತ್ತು ಆಫ್ರಿಕ ಖಂಡಗಳಲ್ಲಿ ಅನೇಕ ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿತು.

ಕ್ರಾಂತಿಯ ವಿವಿಧ ಹಂತಗಳು: ಪ್ರತಿಯೊಂದು ಕ್ರಾಂತಿಯೂ ಕಾಲ ಮತ್ತು ಉದ್ದೇಶಗಳಿಗನುಗುಣವಾಗಿ ಪ್ರಾರಂಭವಾಗಿ ಕೊನೆಯವರೆಗೂ ತನ್ನದೇ ಆದ ವಿವಿಧ ಹಂತಗಳಲ್ಲಿ ಮುಂದುವರಿಯುತ್ತದೆ. ಆದರೂ ಸಾಮಾನ್ಯವಾಗಿ ಕ್ರಾಂತಿಗಳಲ್ಲಿ ಕೆಲವು ಪ್ರಮುಖ ಘಟ್ಟಗಳನ್ನು ಕಾಣಬಹುದು. ರಷ್ಯನ್ ಕ್ರಾಂತಿಯ ಒಂದು ಸಂದರ್ಭ (ನವೆಂಬರ್ 7, 1917): ಅಖಿಲ ರಷ್ಯನ್ ಸೋವಿಯೆತ್ ಕಾಂಗ್ರೆಸ್ಸಿನ ಸದಸ್ಯರನ್ನು ಉದ್ದೇಶಿಸಿ ಲೆನಿನ್ ಭಾಷಣ ಮಾಡುತ್ತಿದ್ದಾನೆ.

ಕ್ರಾಂತಿ ತೀವ್ರಗತಿಯ ಚಟುವಟಿಕೆ ಎನಿಸಿಕೊಂಡರೂ ಅದರ ಪೂರ್ವಘಟ್ಟವನ್ನು ಗುರುತಿಸಲು ಸಾಧ್ಯ. ಪ್ರದರ್ಶನಗಳು, ಮುಷ್ಕರಗಳು, ಸಭೆಗಳು, ಹಿಂಸಾಚಾರ, ಕಾಯಿದೆಯ ಮತ್ತು ಶಿಸ್ತಿನ ಭಂಗ ಮುಂತಾದ ಅಸಾಮಾನ್ಯ ಘಟನೆಗಳು ಮುಂಬರುವ ಕ್ರಾಂತಿಯ ಪೂರ್ವಭಾವಿ ಘಟ್ಟಗಳು. ಇವುಗಳಿಂದುಂಟಾಗುವ ಅರಾಜಕತೆಯಿಂದ ಇಂಥ ಚಟುವಟಿಕೆಗಳ ನಾಯಕರ ಗುಂಪೊಂದು ಅಧಿüಕಾರಕ್ಕೆ ಬರಬಹುದು. ಇದು ತಾತ್ಕಾಲಿಕ ಸ್ವರೂಪದ್ದಾಗಿರಬಹುದು. ಕ್ರಾಂತಿಯ ಪೂರ್ವ ಇಂಥ ಅನೇಕ ಶಕ್ತಿ ಮತ್ತು ವ್ಯಕ್ತಿಗಳು ಅಧಿಕಾರದ ಮೇಲೆ ತಮ್ಮ ಕಣ್ಣನ್ನಿರಿಸಿಕೊಂಡಿರುವುದು ಸಹಜ. ಬಹು ದಿನಗಳ ಆಂತರಿಕ ಯುದ್ಧದ ತರುವಾಯ ಕ್ರಾಂತಿಕಾರಿಗಳು ಸಂಪೂರ್ಣ ಅಧಿಕಾರವನ್ನು ಗಳಿಸುವುದು ವಿರಳ. ಚೀನದಲ್ಲಿ 1949ರ ಕ್ರಾಂತಿಯ ತರುವಾಯ ಕಮ್ಯೂನಿಸ್ಟ್ ಪಕ್ಷ ಅಧಿಕಾರಕ್ಕೆ ಬಂದ ನಿದರ್ಶನವುಂಟು. ಹೀಗೆ ಅಧಿಕಾರಕ್ಕೆ ಬಂದ ವ್ಯಕ್ತಿ ಶಕ್ತಿಗಳ ವಿರುದ್ಧ ಪ್ರತಿಕ್ರಾಂತಿಯ ಘಟ್ಟವನ್ನು ಕಾಣಬಹುದು. ಇಲ್ಲವೇ ವಿದೇಶಗಳು ಹಸ್ತಕ್ಷೇಪ ಮಾಡುವ ಸಾಧ್ಯತೆಯೂ ಇದೆ. ಅಧಿಕಾರದಲ್ಲಿರುವ ಶ್ರೀಮಂತರ ಅಥವಾ ಕುಲೀನರ ಗುಂಪನ್ನು ಕಿತ್ತೊಗೆದು ಅವರ ಸ್ಥಾನದಲ್ಲಿ ಸಮಾಜದ ಮಧ್ಯಮ ವರ್ಗದವರ ಮತ್ತು ಕೆಳವರ್ಗದವರ ಅಧಿüಕಾರ ಸ್ಥಾಪಿಸುವುದು ಕ್ರಾಂತಿಯು ಮೂಲ ಉದ್ದೇಶವಾಗಿರುವುದರಿಂದ ಪ್ರತಿಯೊಂದು ಕ್ರಾಂತಿಯಲ್ಲೂ ಈ ಮೂರು ಹಂತಗಳಿರುವುದು ಸ್ವಾಭಾವಿಕ. ರಷ್ಯದಲ್ಲಿ 1917ರ ಫೆಬ್ರುವರಿ ಕ್ರಾಂತಿಯ ತರುವಾಯ ಅಕ್ಟೋಬರ್ ಕ್ರಾಂತಿಯಾಗಿ ಬಾಲ್ಷೆವಿಕರು ಅಧಿಕಾರಕ್ಕೆ ಬಂದರು. ಕ್ರಾಂತಿಯ ಕಾರ್ಯಕ್ರಮ ಪೂರ್ಣವಾದ ಕೂಡಲೆ ಶಾಂತಸ್ಥಿತಿಯುಂಟಾಗಿ ತದನಂತರ ಅಧಿಕಾರಕ್ಕಾಗಿ ಪೈಪೋಟಿ ನಡೆದು ಕ್ರಾಂತಿಯ ನಾಯಕರ ಸ್ಥಾನದಲ್ಲಿ ಸೈನ್ಯದ ಸಹಾಯ ಮತ್ತು ಸಹಾನುಭೂತಿಯನ್ನು ಪಡೆದಂಥ ಚತುರ ವ್ಯಕ್ತಿ ಅಧಿಕಾರಕ್ಕೆ ಬರುವುದು ಒಂದು ವಿಶಿಷ್ಟ ಲಕ್ಷಣ. ರಷ್ಯದ ಕ್ರಾಂತಿಯ ನಾಯಕ ಲೆನಿನನ ಮರಣಾನಂತರ ಜೋಸೆಫ್ ಸ್ಟಾಲಿನ್ ಅಧಿಕಾರಕ್ಕೆ ಬಂದ. ಈಜಿಪ್ಟಿನಲ್ಲಿ ನಗೀಬನ ಅಲ್ಪಕಾಲದ ಅಧಿಕಾರದ ಅನಂತರ ನಾಸೆರ್ ಅವನ ಸ್ಥಾನಕ್ಕೆ ಬಂದು ತನ್ನ ಜೀವನದ ಕೊನೆಯ ವರೆಗೂ ಆ ದೇಶದ ನಾಯಕ ಹಾಗೂ ಅಧ್ಯಕ್ಷನಾಗಿದ್ದ.

ನಾಯಕತ್ವ: ಪ್ರತಿ ವ್ಯಕ್ತಿಯಲ್ಲೂ ಕ್ರಾಂತಿಕಾರಿ ವಿಚಾರಗಳು ಇರುವುದು ಸಾಧ್ಯವಿಲ್ಲ. ಇದ್ದಾಗ್ಯೂ ಅವು ವ್ಯಕ್ತವಾಗಬೇಕಾದರೆ ಅದಕ್ಕೆ ಅನುಕೂಲಕರವಾದ ಪರಿಸರದ ಅವಶ್ಯಕತೆ ಇರುತ್ತದೆ. ಇದೇ ರೀತಿ ಒಂದು ಸಮಾಜದ ವರ್ಗರಚನೆಯೂ ಮುಖ್ಯವಾದ ಅಂಶವಾಗಿರುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಮಾಜದ ವಿವಿಧ ವರ್ಗಗಳ ಸ್ಥಾನಮಾನಗಳು ಬೇರೆಯಾಗಿರುತ್ತವೆ. ಸಾಮಾನ್ಯವಾಗಿ ಶ್ರೀಮಂತ ವರ್ಗದವರು ಅಧಿಕಾರದಲ್ಲಿರುತ್ತಾರೆ. ಶ್ರೀಮಂತ ವರ್ಗಕ್ಕೂ ಕಾರ್ಮಿಕವರ್ಗಕ್ಕೂ ನಡುವಣ ಮಧ್ಯಮ ವರ್ಗದವರು ಸಾಮಾನ್ಯವಾಗಿ ಕ್ರಾಂತಿಕಾರಿ ವಿಚಾರಗಳನ್ನು ತಳೆದವರಾಗಿದ್ದು ಅವರೇ ಕ್ರಾಂತಿಗಳ ಜನಕರಾಗಿರುವುದುಂಟು. ಅವರು ವಿದ್ಯಾವಂತರೂ ಹೆಚ್ಚು ಅನುಕೂಲಗಳನ್ನು ಹೊಂದದ ವರ್ಗಕ್ಕೆ ಸೇರಿದವರೂ ಆಗಿರುವುದರಿಂದ ಸಮಾಜದ ನ್ಯೂನತೆಗಳನ್ನು ಅರಿತುಕೊಂಡು ಅವುಗಳ ನಿವಾರಣೆಗಾಗಿ ಪ್ರಯತ್ನಿಸುವ ಜ್ಞಾನ ಮತ್ತು ಪರಿಸರದ ಒತ್ತಡ ಅವರಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಹೆಚ್ಚು ವಯಸ್ಸಾದವರು ಮತ್ತು ಶ್ರೀಮಂತರು ಕ್ರಾಂತಿಯ ಪರವಾಗಿ ಇರುವುದು ಸಾಧ್ಯವಿಲ್ಲ. ಆದ್ದರಿಂದ ಉನ್ನತ ವ್ಯಾಸಂಗದಲ್ಲಿ ತೊಡಗಿರುವ ಹಿರಿಯ ವಿದ್ಯಾರ್ಥಿಗಳು, ಕಿರಿಯ ವಕೀಲರು ಅಥವಾ ಸೈನ್ಯದ ಕಿರಿಯ ಅಧಿಕಾರಿಗಳೇ ಸಾಮಾನ್ಯವಾಗಿ ಕ್ರಾಂತಿಯ ನಾಯಕತ್ವವನ್ನು ವಹಿಸುತ್ತಾರೆ. ಉನ್ನತ ಶಿಕ್ಷಣ ಜನತೆಯಲ್ಲಿ ಉನ್ನತ ಆಕಾಂಕ್ಷೆಗಳನ್ನು ಹುಟ್ಟಿಸುತ್ತದೆ. ಇಂಥ ಆಕಾಂಕ್ಷೆಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ಕ್ರಾಂತಿಗಳುಂಟಾಗಿರುವುದನ್ನು ಎಲ್ಲೆಲ್ಲೂ ಕಾಣಬಹುದು. ರಷ್ಯ, ಚೀನ, ಲ್ಯಾಟಿನ್ ಅಮೆರಿಕ, ಆಫ್ರಿಕ, ಏಷ್ಯ ಮತ್ತು ಪಶ್ಚಿಮ ಏಷ್ಯ ದೇಶಗಳ ಕ್ರಾಂತಿಗಳಲ್ಲಿ ಹಿರಿಯ ವಿದ್ಯಾರ್ಥಿಗಳು, ಕಿರಿಯ ವಕೀಲರು ಮತ್ತು ಕಿರಿಯ ಸೈನ್ಯಾಧಿಕಾರಿಗಳು ವಹಿಸಿದ ಪಾತ್ರವನ್ನು ಇಲ್ಲಿ ಉಲ್ಲೇಖಿಸಬಹುದು. ಐರೋಪ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಕ್ರಾಂತಿಗಳು ಸಾಮಾನ್ಯವಾಗಿ ಬುದ್ಧಿಜೀವಿಗಳ ವರ್ಗಕ್ಕೆ ಸೇರಿದ ಸೈದ್ಧಾಂತಿಕರು, ಬರೆಹಗಾರರು ಮತ್ತು ಕವಿಗಳಿಂದ ಸ್ಪೂರ್ತಿ ಪಡೆದವುಗಳಾಗಿವೆ. ಇದುವರೆಗೆ ಆಗಿಹೋಗಿರುವ ಕ್ರಾಂತಿಗಳಲ್ಲಿ ಕೆಲವು ಒಂದೇ ಒಂದು ನಿರ್ದಿಷ್ಟ ವರ್ಗದ ಜನರಿಂದ-ಕಾರ್ಮಿಕರು ಅಥವಾ ರೈತರು-ಉಂಟಾದವುಗಳಾಗಿವೆಯಾದರೂ ಕೆಲವು ಪ್ರಮುಖ ಕ್ರಾಂತಿಗಳ ಪರವಾಗಿ ಇಡೀ ಜನತೆಯ ಸಹಕಾರವಿದ್ದು ಅವು ವ್ಯಾಪಕವಾಗಿರುತ್ತವೆ. ಈ ಕ್ರಾಂತಿಗಳು ವಿಶಾಲ ತಳಹದಿ ಹೊಂದಿರುವ ಚಳವಳಿಗಳು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕ್ರಾಂತಿಗಳು ಇಂಥ ವಿಶಾಲ ತಳಹದಿಯನ್ನು ಹೊಂದಿರುತ್ತವೆಯಾದರೂ ಅಭಿವೃದ್ಧಿ ಹೊಂದುತ್ತಿರುವ ಅಥವಾ ಅಭಿವೃದ್ಧಿ ಹೊಂದದ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಸೈನಿಕ ಅಧಿಕಾರಿಗಳು ಕ್ರಾಂತಿಗಳಿಗೆ ಕಾರಣರಾಗಿರುತ್ತಾರೆ. ಸೈನ್ಯವನ್ನು ಮೊದಲನೆಯ ಘಟ್ಟದಲ್ಲಿ ಉಪಯೋಗಿಸಬಹುದು. ಅಥವಾ ಕೊನೆಯವರೆಗೂ ಅವರೇ ಕ್ರಾಂತಿಯ ಮುಂಚೂಣಿಯಲ್ಲಿ ಇರಬಹುದು. ಇದನ್ನು ಕ್ರಾಂತಿಯೆನ್ನುವುದಕ್ಕಿಂತ ಕ್ಷಿಪ್ರಾಕ್ರಮಣವೆನ್ನಬಹುದು. ಹೀಗೆ ದೇಶ ಕಾಲ ಸ್ಥಿತಿಗಳಿಗನುಗುಣವಾಗಿ ಸಮಾಜದ ಒಂದು ವಿಶಿಷ್ಟ ವರ್ಗದ ಹಲವು ವರ್ಗಗಳ ಗುಂಪುಗಳು ಕ್ರಾಂತಿಗಳ ಮುಂಚೂಣಿಯಲ್ಲಿರುತ್ತವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕ್ರಾಂತಿ&oldid=1206517" ಇಂದ ಪಡೆಯಲ್ಪಟ್ಟಿದೆ