ವಿಷಯಕ್ಕೆ ಹೋಗು

ಇಂಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಂಕಾ - ಪ್ರಾಚೀನ ಕಾಲದಲ್ಲಿ ದಕ್ಷಿಣ ಅಮೆರಿಕದ ಪೆರು ಪ್ರಾಂತ್ಯವನ್ನೊಳಗೊಂಡು ಬೆಳೆದು ಬಾಳಿದ ಸಾಮ್ರಾಜ್ಯ. ಇಂಕಾ ಎಂಬುದು ಸಮ್ರಾಟನ ಹೆಸರಾದರೂ ಈಗ ಆ ಜನರನ್ನೂ ನಿರ್ದೇಶಿಸುತ್ತದೆ. ಇವರು ಕೆಚ್ವಾಭಾಷೆಯನ್ನಾಡುತ್ತಿದ್ದ ಒಂದು ಬುಡಕಟ್ಟಿಗೆ ಸೇರಿದವರು.

ಮಾಚು ಪಿಚುದ ನೋಟ

ಕೊಲಂಬಸ್ ಅಮೆರಿಕವನ್ನು ಕಂಡುಹಿಡಿಯುವುದಕ್ಕೆ ಬಹಳ ಹಿಂದೆಯೇ ಅಲ್ಲಿ ಅನೇಕ ಸಾಮ್ರಾಜ್ಯಗಳು ಹುಟ್ಟಿ ಬೆಳೆದು ಲಯಹೊಂದಿದುವು. ಇಂದಿನವರೆಗೆ ತಿಳಿದು ಬಂದಿರುವಂತೆ ಈ ಸಂಸ್ಕೃತಿಗಳಲ್ಲಿ ಸಂಪತ್ತು, ಕಲಾಪ್ರೌಢಿಮೆ ಮತ್ತು ನಾಗರಿಕತೆಯ ದೃಷ್ಟಿಯಿಂದ, ಅತ್ಯಂತ ಭವ್ಯವಾದುವು-ಮಾಯಾ, ಆಜ್ಟೆಕ್ ಮತ್ತು ಇಂಕಾ ಸಂಸ್ಕೃತಿಗಳು. ಮಾಯಾ ನಾಗರಿಕತೆ ಬೆಳೆದದ್ದು ಮಧ್ಯ ಅಮೆರಿಕದ ಅರಣ್ಯಗಳಲ್ಲಿ; ಆಜ್ಟೆಕ್, ಮೆಕ್ಸಿಕೋದಲ್ಲಿ; ಇಂಕಾ ನಾಗರಿಕತೆ, ಪೆರು ರಾಜ್ಯದಲ್ಲಿ. ಅಂತ್ಯದ ವೈಭವದ ಕಾಲದಲ್ಲಿ ಇಂಕಾ ನಾಗರಿಕತೆ ಉತ್ತರದ ಎಕ್ವಡಾರ್‍ನಿಂದ ದಕ್ಷಿಣದ ಚಿಲಿವರೆಗೂ ಉತ್ತರ ದಕ್ಷಿಣವಾಗಿ ಮೂರು ಸಾವಿರ ಮೈಲಿ ದೂರ ವ್ಯಾಪಿಸಿತ್ತು; ಮೂರೂವರೆ ಲಕ್ಷ ಚದರಮೈಲಿ ಪ್ರದೇಶವನ್ನೊಳಗೊಂಡಿತ್ತು. ಈ ಜನಾಂಗದಲ್ಲಿ ಬರವಣಿಗೆ ಇರಲಿಲ್ಲವಾದ್ದರಿಂದ ಇವರ ಬಗ್ಗೆ ಆ ಕಾಲದವೇ ಆದ ಯಾವ ಲಿಖಿತ ಆಧಾರಗಳೂ ಸಿಗಲಾರವು. 16ನೆಯ ಶತಮಾನದಲ್ಲಿ ಇವರ ಮೇಲೆ ದಾಳಿ ನಡೆಸಿದ ಸ್ಪೇನಿನ ಯೋಧರ ಬರಹಗಳು, ಇಂದಿಗೂ ಉಳಿದಿರುವ ಈ ಬುಡಕಟ್ಟಿನ ಜನರ ವ್ಯವಹಾರ ಸಂಪ್ರದಾಯಗಳ ಪರಿಶೀಲನೆ, ಸಂಬಂಧಪಟ್ಟ ಸ್ಥಳಗಳಲ್ಲಿ ನಡೆಸಿರುವ ಉತ್ಖನನಾದಿ ಪುರಾತತ್ತ್ವ ಶೋಧನೆಗಳು-ಈ ಆಧಾರಗಳಿಂದ ಇಂಕಾ ಸಂಸ್ಕೃತಿಯ ಬಗ್ಗೆ ಅನೇಕ ಮಾಹಿತಿಗಳು ದೊರೆಯುತ್ತವೆ.

ಚರಿತ್ರೆ

[ಬದಲಾಯಿಸಿ]

ಸ್ಪೇನ್ ದೇಶದವರು ಪೆರು ರಾಜ್ಯವನ್ನು ಗೆದ್ದು ಸ್ವಾಧೀನಪಡಿಸಿಕೊಂಡು ಅಲ್ಲಿನ ಚರಿತ್ರೆಯನ್ನು ಬರೆದಿಡುವವರೆಗೂ ಆ ದೇಶದ ಇತಿಹಾಸ ಪರಂಪರಾಗತವಾಗಿ ಬಂದ ಕಥೆಗಳ ರೂಪದಲ್ಲಿತ್ತು. ಹೀಗಾಗಿ ವಾಸ್ತವಾಂಶಗಳನ್ನು ತಿಳಿಯಲು ಬಹಳ ಕಷ್ಟವಾಗಿತ್ತು. ಇತ್ತೀಚೆಗೆ ಚಾರಿತ್ರಿಕ ಘಟನೆಗಳನ್ನು ಇನ್ನಷ್ಟು ಖಚಿತವಾಗಿ ತಿಳಿಯಲು ಸಾಧ್ಯವಾಗಿದೆ. ಇವೆರಡರ ಮಧ್ಯಕಾಲದ ಚರಿತ್ರೆ ಸ್ವಲ್ಪ ಅನಿರ್ದಿಷ್ಟ. ಯೂರೋಪಿನ ದೇಶಗಳಲ್ಲಿದ್ದಂತೆಯೇ ಇತಿಹಾಸವನ್ನು ರಾಜರ ಆಳ್ವಿಕೆಯ ಕ್ರಮದಲ್ಲಿ ನಿರೂಪಿಸುವ ವಿಧಾನ ಅಮೆರಿಕದ ಪೆರು ದೇಶದಲ್ಲಿ ಮಾತ್ರ ಕಂಡುಬರುತ್ತದೆ; ಈ ದೊರೆಗಳು ಪೆರು ದೇಶವನ್ನಾಳುತ್ತಿದ್ದರೆಂದು ಖಚಿತವಾಗಿ ತಿಳಿದುಬಂದಿದೆ; 1. ಮ್ಯಾಂಕೊ ಕೃಪಾಕ್ (ಕ್ರಿ.ಶ. 1200); 2. ಸಿಂಕಿ ರೋಕ; 3. ಲಾಳ ಉಪಾಂಕಿ; 4. ಮೆಯ್ಟ ಕೃಪಾಕ್; 5. ಕೃಪಾಕ್ ಯುಪ್ಯಾಂಕಿ; 6. ಇಂಕಾ ರೋಕ; 7. ಯಹ್ವಾರ್ ಹುವಾಕ್ಯಾಕ್; 8. ವಿಶಾಕೋ ಜಾ ಇಂಕಾ; 9. ಪಚಕೂಟಿ ಇಂಕಾಾ ಯುಆನ್‍ಕಿ (1438-71) : 10. ಟೋಪ್ ಇಂಕಾ ಯುಪ್ಯಾಂಕಿ (1471-93); 11. ಹುಆಯ್ನ ಕೃಪಾಕ್ (1493-1525) : 12. ಹುಆಸ್ಕರ್ (1525-32); 13. ಅಟಾಹುಅಲ್ಪ (1532-33). ಮ್ಯಾಂಕೊ ಕೃಪಾಕ್‍ನ ವಿಷಯದಲ್ಲಿ ತಿಳಿದುಬಂದಿರುವುದರಲ್ಲಿ ಅರ್ಧ ಕಾಲ್ಪನಿಕ. ಅರ್ಧದೇವನೆಂದು ಪರಿಗಣಿತನಾಗಿದ್ದ ಇವನ ವಿಷಯದಲ್ಲಿ ಸ್ಪೇನಿನ ಚರಿತ್ರಕಾರರು ಬರೆದಿರುವುದು ಅನೇಕ ಕಡೆ ಅಸಂಬದ್ಧವಾಗಿದೆ; ಅವನಿಗೆ ದೈವತ್ವವನ್ನು ಆರೋಪಿಸಲಾಗಿದೆ. ಸಿಂಕಿ ರೋಕ ದೊರೆಯಾದಮೇಲೆ ಅವನ ರಾಜವಂಶಕ್ಕೆ ದೈವಿಕಮೂಲ, ಪಾವಿತ್ರ್ಯ ಮತ್ತು ಘನತೆಗಳನ್ನು ಕಲ್ಪಿಸಲಾಯಿತೆಂದು ಕೆಲವರ ಅಭಿಪ್ರಾಯ. ಪೆರು ದೇಶದ ವಾಸ್ತವಿಕ ಇತಿಹಾಸ ಪ್ರಾರಂಭವಾಗುವುದು ಪಚಕೂಟಿಇಂಕಾನ ಆಳ್ವಿಕೆಯಿಂದ ಎಂದು ಹೇಳಬಹುದು. ಅವನ ಕಾಲದಲ್ಲೇ ಪೆರುರಾಜ್ಯದ ವಿಸ್ತರಣಾ ಕಾರ್ಯ ಪ್ರಾರಂಭವಾದದ್ದು; ಈ ಕಾರ್ಯ ವಿಸ್ಮಯಕರವಾದ ರೀತಿಯಲ್ಲಿ ನಡೆಯಿತು. ಸಾಮ್ರಾಜ್ಯ ಅತ್ಯಂತ ಉಚ್ಛ್ರಾಯಸ್ಥಿತಿಯನ್ನೇರಿದ್ದು ಅವನ ಮಗನ ಕಾಲದಲ್ಲಿ, ಮುಂದೆ ಅವನತಿ ಪ್ರಾರಂಭವಾಗಿ 1532ರಲ್ಲಿ ಸ್ಪೇನ್ ದೇಶದವರು ದೇಶವನ್ನೇ ವಶಪಡಿಸಿಕೊಂಡಾಗ ಅದರ ಅಸ್ತಿತ್ವ ಅಳಿಯಿತು. ಸುಮಾರು ಒಂದು ಶತಮಾನಕಾಲ ಮಾತ್ರ ಪೆರುಸಾಮ್ರಾಜ್ಯ ಸ್ವತಂತ್ರವಾಗಿ ಬಾಳಿದ್ದು, ಪಚಕೊಟಿ, ಟೋಪ್ ಇಂಕಾ ಇವರಿಬ್ಬರನ್ನೂ ಸಾಮ್ರಾಜ್ಯ ನಿರ್ಮಾಪಕರಲ್ಲಿ ಅಲೆಕ್ಸಾಂಡರ್, ಚಂಗಿಸ್‍ಖಾನ್, ನೆಪೋಲಿಯನ್ನರೊಂದಿಗೆ ಹೋಲಿಸಬಹುದು. ಇಂಕಾ ಜನರೇ ಅಲ್ಪಸಂಖ್ಯಾತರು; ಆದ್ದರಿಂದ ಗೆದ್ದರಾಜ್ಯಗಳ ಸೈನಿಕರನ್ನು ತಮ್ಮ ಸೈನ್ಯಕ್ಕೆ ಸೇರಿಸಿಕೊಂಡು ಹೊಸರಾಜ್ಯಗಳನ್ನು ಗೆಲ್ಲುತ್ತಿದ್ದರು. ಸಾಮ್ರಾಜ್ಯದಾಹವೇ ಈ ವಿಸ್ತರಣ ಕಾರ್ಯಕ್ಕೆ ಮುಖ್ಯಕಾರಣ.

ಇಂಕಾ ಸಾಮ್ರಾಜ್ಯ ವಿಸ್ತರಣೆ (1438–1533)

ಪಚಕೂಟಿ ಪ್ರಸಿದ್ಧಿಪಡೆದಿರುವುದು ರಾಜ್ಯವಿಸ್ತರಣ ಕಾರ್ಯದಲ್ಲಿ ಮಾತ್ರ ಅಲ್ಲ; ನಗರನಿರ್ಮಾಣದಲ್ಲೂ ಅವರು ಪ್ರಖ್ಯಾತನಾಗಿದ್ದಾರೆ. ಸಾಮ್ರಾಜ್ಯದ ರಾಜಧಾನಿಯಾದ ಕುಜ್ಕೋನಗರ ವಿಶಾಲವಾಗಿ ಬೆಳೆದು ರಮ್ಯಸೌಧಗಳನ್ನು ಹೊಂದಿದ್ದು ಅವನ ಶ್ರಮದ ಫಲವಾಗಿ, ಸೂರ್ಯನಿಗೆ ಮೀಸಲಾದ ಪ್ರಸಿದ್ಧ ದೇವಮಂದಿರದ ನಿರ್ಮಾಣ ಅವನ ಕಾಲದಲ್ಲಾಯಿತು. ಹಿಂದಿನ ಚಕ್ರವರ್ತಿಗಳ ಮೃತದೇಹಗಳನ್ನು ಸುವಾಸನಾದ್ರವ್ಯಗಳಿಂದ ಪರಿಷ್ಕರಿಸಿ ಆತ ಈ ದೇವಾಲಯದಲ್ಲಿಡಿಸಿದ; ಮೂಲಪುರಷನಾದ ಮ್ಯಾಂಕೊ ಕ್ಯಪಾಕ್‍ನ ದೇಹ ಮಾತ್ರ ಕಲ್ಲಾಗಿ ಪರಿವರ್ತಿತವಾಯಿತಂತೆ. ನಗರವನ್ನು ವಿಸ್ತರಿಸಿ ಅದರ ಪ್ರಜೆಗಳಿಗೆ ಹೆಚ್ಚು ಜಾಗವನ್ನು ಕೊಡುವುದಕ್ಕೆಂದು ಅದರ ಸುತ್ತ ಆರುಮೈಲಿ ಫಾಸಲೆಯ ಗ್ರಾಮವನ್ನೆಲ್ಲ ಖಾಲಿಮಾಡಿಸಿ ಆ ಜನರಿಗೆ ದೂರ ಪ್ರದೇಶದಲ್ಲಿ ವಸತಿಗಳನ್ನು ಕಲ್ಪಿಸಿದ. ಚರಿತ್ರಕಾರನಾದ ಪ್ರೆಸ್ಕಾಟ್ ಆ ನಗರವನ್ನು ಹೀಗೆ ವರ್ಣಿಸಿದ್ದಾನೆ : ಈ ನಗರವಿರುವುದು, ಸಮುದ್ರಮಟ್ಟಕ್ಕಿಂತ 11,200 ಎತ್ತರದ ಪ್ರಸ್ಥಭೂಮಿಯ ಮೇಲೆ, ಒಂದು ರಮ್ಯವಾದ ಕಣಿವೆಯಲ್ಲಿ. ಆಲ್ಪ್ಸ್ ಪರ್ವತಪ್ರದೇಶವಾಗಿದ್ದಿದ್ದರೆ ಈ ನಗರ ಹಿಮಾಚ್ಛಾದಿತವಾಗಿರುತ್ತಿತ್ತು : ಆದರೆ ಇದು ಉಷ್ಣವಲಯವಾದ್ದರಿಂದ ಇಲ್ಲಿಯ ವಾಯುಗುಣ ಹಿತಕರ, ಆರೋಗ್ಯಕರ. ಈ ನಗರ ದೊರೆಗಳ ನಿವಾಸಸ್ಥಾನ. ಇಲ್ಲಿ ಹಿಂದಿನ ಶ್ರೀಮಂತರ ವಿಶಾಲ ಭವ್ಯಸೌಧಗಳು ಅನೇಕವಿದ್ದವು. ಅವುಗಳ ಅವಶೇಷಗಳಲ್ಲಿ ದೊರೆತ ಚೂರುಗಳನ್ನೇ ಇಂದಿನ ದೊಡ್ಡ ಕಟ್ಟಡಗಳಿಗೆ ಉಪಯೋಗಿಸಿರುವುದನ್ನು ನೋಡಿದರೆ ಅವು ಎಷ್ಟು ಉತ್ತಮವಾದ ದೃಢವಾದ ಕಟ್ಟಡಗಳಾಗಿರಬೇಕು ಎಂಬುದನ್ನು ತಿಳಿಯಬಹುದು. ಕುಜ್ಕೊ ದೇವನಗರವೂ ಆಗಿತ್ತು; ಅದರ ಸೂರ್ಯಮಂದಿರಕ್ಕೆ ಸಾಮ್ರಾಜ್ಯದ ನಾನಾ ಭಾಗಗಳಿಂದ ಯಾತ್ರಿಕರು ಬರುತ್ತಿದ್ದರು. ಅದು ಅಮೆರಿಕದಲ್ಲೇ ಅತ್ಯಂತ ಘನವಾದ ಕಟ್ಟಡವಾಗಿತ್ತು. ಅಲಂಕರಣಕ್ಕಾಗಿ ಅದಕ್ಕೆ ಆಗಿದ್ದಷ್ಟು ವೆಚ್ಚ ಪ್ರಪಂಚದಲ್ಲಿ ಬೇರಾವ ದೇವಾಲಯಕ್ಕೂ ಆಗಿರಲಿಲ್ಲ. ಟೋಪ್ ಇಂಕಾನ ಮಗ ಹುಆಯ್ನ ಕೃಪಾಕನ ಕಾಲದಲ್ಲೇ ಸಾಮ್ರಾಜ್ಯದಲ್ಲಿ ಅಶಾಂತಿ ತಲೆದೋರಿತು. ಅರ್ಧದೇವನೆಂದು ಪರಿಗಣಿತನಾಗಿದ್ದ ಸಾಮ್ರಾಟನೊಬ್ಬ ಒಂದು ಕೇಂದ್ರದಿಂದ ಆಳಲು ಸಾಧ್ಯವಾಗದಷ್ಟು ಆ ಸಾಮ್ರಾಜ್ಯ ವಿಶಾಲವಾಗಿತ್ತು, ಅವನ ಅನುಮತಿಯಿಲ್ಲದೆ ಏನೂ ನಡೆಯುವಂತಿರಲಿಲ್ಲ. ಸಿಂಹಾಸನಕ್ಕೆ ಉತ್ತರಾಧಿಕಾರದ ವಿಷಯದಲ್ಲೂ ಸ್ಪರ್ಧೆ, ಜಗಳಗಳು ಪ್ರಾರಂಭವಾದುವು. ಅವನ ಮಗನ ಕಾಲದಲ್ಲಿ ಇದು ಉಗ್ರರೂಪ ತಾಳಿತು. ಹುಆಯ್ನ ಕೃಪಾಕ್ ತನ್ನ ಆಳ್ವಿಕೆಯ ಕೊನೆಗಾಲವನ್ನು ಎಕ್ವಡಾರ್‍ನ ಕ್ವಿಟೊ ಪ್ರಾಂತ್ಯದಲ್ಲೇ ಕಳೆದ, ಅವನಿಗೆ ರಾಜಧಾನಿಯಾದ ಕುಜ್ಕೊ ನಗರಕ್ಕಿಂತ ಕ್ವಿಟೋನೇ ಹೆಚ್ಚು ಹಿತಕರವಾಗಿ ಕಂಡಿತು. ಅವನ ಮಕ್ಕಳಲ್ಲಿ ರಾಜಕೀಯ ಪ್ರಾಮುಖ್ಯ ಪಡೆದಿದ್ದವರು ಇಬ್ಬರು : ಒಬ್ಬ ಹುಆಸ್ಕರ್, ರಾಣಿಯಾಗಿದ್ದ ರಾಜನ ತಂಗಿಗೆ ಜನಿಸಿದವನು (ಈ ಪದ್ಧತಿ ಕೆಲವುಕಾಲ ರೂಢಿಯಲ್ಲಿತ್ತು); ಇನ್ನೊಬ್ಬ ಅಟಾಹುಅಲ್ಪ, ಕಿರಿಯ ರಾಣಿಯೊಬ್ಬಳ ಮಗ. ನ್ಯಾಯವಾಗಿ ಸಿಂಹಾಸನಕ್ಕೆ ಉತ್ತರಾಧಿಕಾರಿ ಹುಆಸ್ಕರ್; ಅದರೆ ಅಟಾಹುಅಲ್ಪನ ಮೇಲೆ ಅವನಿಗೆ ಹೆಚ್ಚು ಪ್ರೀತಿ. ಅಟಾಹುಅಲ್ಪ ತಂದೆಯೊಂದಿಗೆ ಕ್ವಿಟೊದಲ್ಲಿದ್ದ; ಹುಆಸ್ಕರ್ ಕುಜ್ಕೊದಲ್ಲಿದ್ದ. ಕ್ವಿಟೊ ರಾಜ್ಯವನ್ನೇ ಪ್ರತ್ಯೇಕಿಸಿ ಅದನ್ನು ಅಟಾಹುಅಲ್ಪನಿಗೂ ಉಳಿದ ಭಾಗವನ್ನು ಹುಆಸ್ಕರನಿಗೂ ಹಂಚಬೇಕೆಂದು ಹುಅಯ್ನನ ಯೋಚನೆಯಾಗಿತ್ತೆಂದು ಒಂದು ಕಡೆ ಹೇಳಿದೆ; ಆದರೆ ಇದು ನೆರವೇರಲಿಲ್ಲ. ಇದೇ ಕಾಲದಲ್ಲಿ ಸ್ಪೇನಿನವರು ಯೂರೋಪಿನಿಂದ ತಂದ ಅಂಟುಜಾಡ್ಯವೊಂದು ಸಾಮ್ರಾಜ್ಯದ ಎಲ್ಲ ಕಡೆ ಹರಡಿ ಅಸಂಖ್ಯಾತ ಜನರನ್ನು ಆಹುತಿ ತೆಗೆದುಕೊಂಡಿತು : ಹುಆಯ್ನನೂ ಈ ಉಪದ್ರವಕ್ಕೆ ತುತ್ತಾದ, ಕುಜ್ಕೊದ ಪುರೋಹಿತ ಹುಅಸ್ಕರ್‍ನನ್ನು ಸಿಂಹಾಸನಕ್ಕೇರಿಸಿದ. ಆದರೆ ಎಕ್ವಡಾರ್‍ನ ಪ್ರಜೆಗಳು ಮತ್ತು ಸೈನಿಕರು ಅಟಾಹುಅಲ್ಪನೇ ತಮಗೆ ದೊರೆಯೆಂದು ಘೋಷಿಸಿದರು. ಯಾದವೀಕಲಹ ಪ್ರಾರಂಭವಾಯಿತು. ಸ್ವಲ್ಪಕಾಲ ಯುದ್ಧ ನಡೆದು ಕೊನೆಗೆ ಅಟಾಹುಅಲ್ಪನೇ ಸಾಮ್ರಾಟನಾದ. ತಾವು ಈ ಸಾಮ್ರಾಜ್ಯವನ್ನು ಗೆದ್ದು ವಶಪಡಿಸಿಕೊಳ್ಳಬೇಕೆಂದಿದ್ದ ಕಾಲದಲ್ಲೇ ಅಲ್ಲಿ ಭಯಂಕರ ಯಾದವೀಕಲಹವೆದ್ದು ತಮಗೆ ಅನುಕೂಲವಾದದ್ದು ದೈವೇಚ್ಛೆಯೆಂದೇ ಸ್ಪೇನಿನವರು ನಂಬಿದರು. ಜೆ.ಎ.ಮೇಸನ್ ಎಂಬ ಪ್ರಾಕ್ತನ ಸಂಶೋಧಕ ಹೀಗೆ ಹೇಳಿದ್ದಾನೆ : ಈ ಸ್ಪೇನಿನವರು ಹತ್ತುವರ್ಷ ಮುಂಚೆ ಅಥವಾ ಹತ್ತು ವರ್ಷ ತರುವಾಯ ಬಂದಿದ್ದರೆ, ಪಿಝಾರೊ ದಳಪತಿಯ ಜೊತೆ ಬಂದ ಕೆಲವೇ ಸ್ಪೇನರಿಗೆ ಅವರು ಸೋಲುತ್ತಿರಲಿಲ್ಲ.

ಸಾಮ್ರಾಜ್ಯದ ಅಳಿವು

[ಬದಲಾಯಿಸಿ]

ಕೇವಲ 180 ಜನ ಸ್ಪೇನಿನ ಸಾಹಸಿಗ ಯೋಧರು ಪ್ರಬಲವಾಗಿದ್ದ ಇಂಕಾ ಸಾಮ್ರಾಜ್ಯವನ್ನೇ ಗೆದ್ದರು. ನಂಬಲೂ ಕಷ್ಟವಾದ ಈ ಕಥೆ ವಿವಿಧ ಚರಿತ್ರಕಾರರಿಂದ ನಾನಾರೀತಿಯಲ್ಲಿ ವರ್ಣಿತವಾಗಿದೆ. ಪ್ರೆಸ್ಕಾಟ್ ಎಂಬ ಚರಿತ್ರಕಾರ ಬರೆದ ಕಾನ್‍ಕ್ವೆಸ್ಟ್ ಆಫ್ ಪೆರು ಎಂಬ ಪುಸ್ತಕದ ಕೆಲವು ಅಂಶಗಳನ್ನು ಇಲ್ಲಿ ಕೊಟ್ಟಿದೆ : ಹುಆಸ್ಕರನನ್ನು ಯುದ್ಧದಲ್ಲಿ ಸೋಲಿಸಿದ ಮೇಲೆ, ಸಿಂಹಾಸನವನ್ನು ವಶಪಡಿಸಿಕೊಳ್ಳುವುದಕ್ಕಾಗಿ ಅಟಾಹುಅಲ್ಪ ತನ್ನ ಪಾಳೆಯವಿದ್ದ ಕಜಾಮಾರ್ಕದಿಂದ ರಾಜಧಾನಿಯಾದ ಕುಜ್ಕೋಗೆ ಹೊರಡುವುದರಲ್ಲಿದ್ದ. ಆಗತಾನೆ ಸ್ಪೇನಿನವರು ಬಂದಿಳಿದ ವರ್ತಮಾನ ಅವನಿಗೆ ತಿಳಿಯಿತು (1532). ಈ ಹೊರದೇಶದವರು ಬಂದ ಉದ್ದೇಶವನ್ನು ಖಚಿತಪಡಿಸಿಕೊಂಡೇ ಪ್ರಯಾಣ ಮಾಡೋಣವೆಂದು ನಿಶ್ಚಯಿಸಿ ಇದ್ದಲ್ಲಿಯೇ ನಿಂತ. ಅವರು ಕಜಾಮಾರ್ಕಕ್ಕೆ ಬಂದರು. ಅವನೂ ಸೌಜನ್ಯದಿಂದ ಕೊಂಚದೂರಹೋಗಿ ಅವರಿಗೆ ಸ್ವಾಗತ ನೀಡಿದ. ಅವನು ತೋರಿಸಿದ ಸೌಜನ್ಯಕ್ಕೆ ಪ್ರತಿಫಲವಾಗಿ ಸ್ಪೇನರು ಅವನನ್ನು ಕೈಸೆರೆ ಹಿಡಿದು ಅವನ ಪರಿವಾರದವರನ್ನೆಲ್ಲ ಕೊಂದುಹಾಕಿದರು. ತನ್ನನ್ನು ಬಿಡುಗಡೆ ಮಾಡುವಂತಿದ್ದರೆ, ಒಬ್ಬ ಮನುಷ್ಯನಿಗೂ ಎಟುಕದಿದ್ದಷ್ಟು ಎತ್ತರದ ರಾಶಿ ಪ್ರಶಸ್ತಲೋಹಗಳನ್ನು ಕೊಡುವೆನೆಂದು ಇಂಕಾರಾಜ ಅವರಿಗೆ ಹೇಳಿದ. ಅವರು ಒಪ್ಪಿಕೊಂಡರು. ಕೂಡಲೆ ದೂತರಮೂಲಕ ರಾಜ್ಯದ ಧನವನ್ನು ಸಂಗ್ರಹಿಸಿ ತರಬೇಕೆಂದು ಎಲ್ಲ ಭಾಗಗಳಿಗೂ ಹೇಳಿಕಳುಹಿಸಿದ. ನಾಡಿನ ಎಲ್ಲ ಭಾಗಗಳಿಂದಲೂ ಚಿನ್ನದ ರಾಶಿ ಬಂದು ಬಿತ್ತು. ಕುಜ್ಕೊ ನಗರದ ಸೂರ್ಯ ದೇವಾಲಯದಿಂದಲೇ ಇದರ ಬಹುಭಾಗವೆಲ್ಲ ಬಂದಿತ್ತು. ಸುಮಾರು ಇಪ್ಪತ್ತೆರಡು ಅಡಿ ಉದ್ದ ಹದಿನೈದು ಅಡಿ ಅಗಲದ ಕೋಣೆಯಲ್ಲಿ ದ್ರವ್ಯ ಅವನು ಹೇಳಿದ ಎತ್ತರಕ್ಕೂ ನಿಂತಿತು. ಈ ರಾಶಿ ಪಿಜಾರೊಗೆ ತೃಪ್ತಿತಂದಿತು. ಬಿಡುಗಡೆ ದ್ರವ್ಯವೆಷ್ಟು ಬಂದಿದೆಯೆಂದು ಪಾವತಿ ರಸೀತಿಯನ್ನು ಬರೆಸಿಕೊಟ್ಟ. ಅವನ ಜೀವಮಾನದಲ್ಲೇ ಆತ ಸೆರೆಸಿಕ್ಕಿದವರ ವಿಷಯದಲ್ಲಿ ಇಷ್ಟು ಕೃಪೆ ತೋರಿಸಿದವನಲ್ಲ. ಚಕ್ರವರ್ತಿ ಸ್ವತಂತ್ರನೆಂದು ಘೋಷಣೆ ಮಾಡಿದರೂ ಆತ ಹಿಂತಿರುಗಿದರೆ ದೇಶದಲ್ಲಿ ಕ್ಷೋಭೆಯುಂಟಾಗುವುದೆಂಬ ನೆಪದಿಂದ ಅವನನ್ನು ಸ್ಪೇನ್ ಅಂಗರಕ್ಷಕರ ಕಾವಲಿನಲ್ಲಿಡಲಾಯಿತು. ದೊರೆ ಅಲ್ಲಿದ್ದರೆ ತಮ್ಮ ಚಲನವಲನಗಳಿಗೆ ಅಡ್ಡಿಯಾಗಬಹುದೆಂಬ ಕಾರಣದಿಂದ ಸ್ಪೇನ್ ಯೋಧರೆಲ್ಲ ಅವನನ್ನು ಕೊಂದುಬಿಡಬೇಕೆಂದು ಸಲಹೆಕೊಟ್ಟರು. ಪಿeóÁರೊ ಒಪ್ಪಿದ. ಅನೇಕ ಕಲ್ಪಿತ ಆಪಾದನೆಗಳನ್ನು ಅವನ ಮೇಲೆ ಹೊರಿಸಲಾಯಿತು. ಹುಆಸ್ಕರನನ್ನು ಕೊಂದದ್ದು, ಅನ್ಯಾಯವಾಗಿ ಸಿಂಹಾಸನವನ್ನು ಆಕ್ರಮಿಸಲೆತ್ನಿಸಿದ್ದು, ವಿಗ್ರಹಾರಾಧನೆ, ವ್ಯಭಿಚಾರ, ಸ್ವಗೋತ್ರ ಸಂಭೋಗ ಮುಂತಾದವು ಅವುಗಳಲ್ಲಿ ಕೆಲವು. ತಪ್ಪಿತಸ್ಥನೆಂದು ತೀರ್ಮಾನವಾಗಲಾಗಿ ಅವನಿಗೆ ಮರಣದಂಡನೆಯನ್ನು ವಿಧಿಸಿದರು. ಕಜಾಮಾರ್ಕ ನಗರದ ದೊಡ್ಡ ಚೌಕದಲ್ಲಿ ಅವನನ್ನು ಬಹಿರಂಗವಾಗಿ ಸುಡತಕ್ಕದೆಂದು ತೀರ್ಮಾನಿಸಲಾಯಿತು. ಸುಡಲು ಎಲ್ಲವೂ ಸಿದ್ಧವಾದಮೇಲೆ ಆತ ಕ್ರೈಸ್ತಧರ್ಮವನ್ನು ಸ್ವೀಕರಿಸಿದರೆ ಸುಡುವುದಿಲ್ಲವೆಂದೂ ಗಲ್ಲಿಗೇರಿಸುತ್ತೇವೆಂದೂ ಪಿಝಾರೊ ತಿಳಿಸಿದ. ಅಟಾಹುಅಲ್ಪ ಅದಕ್ಕೊಪ್ಪಿದ. ಅನಂತರ ಅವನನ್ನು ಕತ್ತುಹಿಚುಕಿ ಕೊಂದರು. ಒಬ್ಬ ದೊಡ್ಡ ಸಾಮ್ರಾಟನನ್ನು ಈ ರೀತಿ ಸುಲಿಗೆಮಾಡಿ ಅನಂತರ ಹೀಗೆ ಕೊಂದ ಈ ರಾಕ್ಷಸೀಕೃತ್ಯ ಸ್ಪೇನ್ ಜನಾಂಗಕ್ಕೆ ಎಂದಿಗೂ ಅಳಿಸಲಾಗದ ಕಳಂಕವಾಯಿತು ಎಂದು ಪ್ರೆಸ್ಕಾಟ್ ಹೇಳಿದ್ದಾನೆ. ಪೆರು ದೇಶವನ್ನು ಲೂಟಿಹೊಡೆದು ಸ್ಪೇನಿನವರು ತಮ್ಮ ದೇಶಕ್ಕೆ ಸಾಗಿಸಿದ ಸಂಪತ್ತಿನ ಬೆಲೆ ಎಷ್ಟಿರಬಹುದೆಂಬುದನ್ನು ಲೆಕ್ಕಮಾಡಲು ಅನೇಕರು ಯತ್ನಿಸಿದ್ದಾರೆ. ಅತ್ಯಂತ ಜಾಗರೊಕತೆಯಿಂದ ಎಣಿಕೆಮಾಡಿದ ಲಾತ್ರಾಪ್ ಎಂಬಾತ ಒಂದು ಔನ್ಸಿಗೆ 35-02 ಡಾಲರುಗಳಂತೆ ಅಟಾಹುಅಲ್ಪನ ಬಿಡುಗಡೆಗಾಗಿ ಕೊಟ್ಟ ಚಿನ್ನದ ಬೆಲೆಯೇ 83,44,307 ಡಾಲರುಗಳಾಗುತ್ತವೆಂದು ಹೇಳಿದ್ದಾನೆ. ಚಿನ್ನದ ಈಗಿನ ಬೆಲೆಯ ಪ್ರಕಾರ ಅದು ಇನ್ನೂ ಹೆಚ್ಚಾಗುತ್ತದೆ. ಇದೊಂದೇ ಸಂದರ್ಭದಲ್ಲಲ್ಲ, ಸ್ಪೇನಿನವರು ಈ ರೀತಿ ಲೊಟಿ ಹೊಡೆದದ್ದು, ಸ್ಪೇನಿನಿಂದ ಇನ್ನೂ ಹೆಚ್ಚು ಜನರು ವಲಸೆ ಬಂದ ಮೇಲಂತೂ ಇಂಥ ಸುಲಿಗೆ ಅನೇಕವೇಳೆ ನಡೆಯಿತು. ಹೀಗೆ ನಾನಾಕಡೆಗಳಿಂದ ಸುಲಿಗೆ ಮಾಡಿ ಸ್ಪೇನಿಗೆ ಸಾಗಿಸಿದ ಚಿನ್ನದ ಬೆಲೆ 2 ಕೋಟಿ ಡಾಲರುಗಳಿಗಿಂತ ಹೆಚ್ಚಾಗುತ್ತದೆ ಎಂದು ಲಾತ್ರಾಪ್‍ನ ಅಭಿಪ್ರಾಯ. ಇವುಗಳಲ್ಲಿ ಆಭರಣಗಳೇ ಹೆಚ್ಚಾಗಿದ್ದುವು. ಎಲ್ಲವೂ ಚತುರ ಕಲಾಶಿಲ್ಪಿಗಳು ತಯಾರಿಸಿದ ಅತ್ಯಂತ ಸುಂದರ ಆಭರಣಗಳು. ಅವುಗಳ ಕಲಾವೈಶಿಷ್ಟ್ಯದ ಕಡೆ ಗಮನವೇ ಇಲ್ಲದೆ ಎಲ್ಲವನ್ನೂ ಕರಗಿಸಿ ಗಟ್ಟಿ ಮಾಡಲಾಯಿತು. ಹಿಂದಿನ ಆಭರಣಗಳಲ್ಲೊಂದೂ ಈಗ ಉಳಿದಿಲ್ಲ.

ನಾಗರಿಕತೆ

[ಬದಲಾಯಿಸಿ]

ಇಂಕಾ ಜನರು ಹರಡಿದ್ದ ದೇಶ ಭೂವ್ಯವಸಾಯಕ್ಕೆ ಅನುಕೂಲವಾದ ಪ್ರದೇಶವಾಗಿರಲಿಲ್ಲ. ಆದರೂ ಚತುರರಾದ ಅವರು ಪ್ರಕೃತಿಯೊಡ್ಡಿದ್ದ ಅಡಚಣೆಗಳನ್ನು ನಿವಾರಿಸಿ ಭೂಮಿಯನ್ನು ಕೃಷಿಯೋಗ್ಯವನ್ನಾಗಿ ಮಾಡಿಕೊಂಡರು. ಎರುತಗ್ಗುಗಳಿದ್ದ ಭೂಮಿಯನ್ನು ಕಡಿದು ಪೈರು ಬೆಳೆಯಲು ಯೋಗ್ಯವಾಗುವಂತೆ ಮಾಡಿದರು : ಅಣೆಕಟ್ಟುಗಳನ್ನು ನಿರ್ಮಿಸಿ ಮೇಲು ಕಾಲುವೆಗಳನ್ನು ತೋಡಿ ಅವುಗಳಿಂದ ನೀರುಹಾಯಿಸುವ ಏರ್ಪಾಡು ಮಾಡಿಕೊಂಡರು. ಈ ಪರ್ವತಶ್ರೇಣಿ ಕೆಲವುಕಡೆ ಹದಿನಾಲ್ಕುಸಾವಿರ ಅಡಿ ಎತ್ತರವಾಗಿದೆ. ಈ ಎತ್ತರಕ್ಕನುಸಾರವಾಗಿ ಉಷ್ಣ ಮತ್ತು ಸಮಶೀತೋಷ್ಣವಲಯದ ಬೆಳೆಗಳನ್ನು ತೆಗೆಯಲು ಇದರಿಂದ ಅನುಕೂಲವಾಯಿತು. ಬಹಳ ಹಿಂದಿನ ಕಾಲದಲ್ಲೇ ಇಂಕಾ ಜನ ಕಾಡು ಸಸ್ಯಗಳನ್ನು ಆಹಾರ ಯೋಗ್ಯವನ್ನಾಗಿ ಮಾಡುವ ವಿಧಾನವನ್ನರಿತಿದ್ದರು. ಅನೇಕ ಆಹಾರಸಸ್ಯಗಳನ್ನು ಇತರ ದೇಶಗಳ ಜನರು ಇವರಿಂದ ತಿಳಿದರು. ವಿದ್ಯಾಭ್ಯಾಸ ಕೇವಲ ಶ್ರೀಮಂತ ಕುಲೀನ ಮಕ್ಕಳಿಗೆ ಮಾತ್ರ ಮೀಸಲಾಗಿತ್ತು. ಬಹುಪತ್ನೀತ್ವ ಶ್ರೀಮಂತ ಕುಲೀನರ ಸ್ವತ್ತಾಗಿತ್ತು. ಆದರೆ ಮೊದಲ ಹೆಂಡತಿಮಾತ್ರ ಗಂಡನ ಸಮಾನ ಸ್ಥಾನದಲ್ಲಿರುತ್ತಿದ್ದಳು. ಉಳಿದವರು ಕೇವಲ ಉಪಪತ್ನಿಯರು. ಅವರ ಮಕ್ಕಳಿಗೂ ತಂದೆಯ ಸ್ಥಾನ ಲಭಿಸುತ್ತಿರಲಿಲ್ಲ. ರಾಜ ತನ್ನ ದೇವಾಂಶವನ್ನು ಶುದ್ಧವಾಗಿ ಉಳಿಸಲೋ ಏನೋ, ಸಾಮಾನ್ಯವಾಗಿ ತನ್ನ ಸಹೋದರಿಯನ್ನೇ ಮದುವೆಯಾಗುತ್ತಿದ್ದ.

ಒಡೆತನದ ಕಾನೂನುಗಳು

[ಬದಲಾಯಿಸಿ]

ಪೆರು ರಾಜ್ಯದ ಸಮಾಜವ್ಯವಸ್ಥೆಯಲ್ಲಿ ಗಮನಾರ್ಹವಾದ ಎರಡು ಅಂಶಗಳೆಂದರೆ ಅದರ ಹಣಕಾಸಿನ ಕಟ್ಟುಪಾಡು ಮತ್ತು ಆಸ್ತಿಗೆ ಸಂಬಂಧಿಸಿದ ನಿಯಮಗಳು. ಸಾಮ್ರಾಜ್ಯದ ಭೂಮಿಯನ್ನೆಲ್ಲ ಮೂರು ಭಾಗಗಳಾಗಿ ವಿಂಗಡಿಸಿದ್ದರು. ಒಂದು ಭಾಗ ಸೂರ್ಯದೇವನಿಗೆ ಇನ್ನೊಂದು ಭಾಗ ರಾಜನಿಗೆ, ಮೂರನೆಯ ಭಾಗ ಸಾಮಾನ್ಯ ಜನತೆಗೆ. ಈ ವಿಭಜನೆ ಎಲ್ಲ ಪ್ರಾಂತ್ಯಗಳಲ್ಲೂ ಒಂದೇ ಸಮನಾಗಿರಲಿಲ್ಲ. ಸೂರ್ಯನಿಗಾಗಿ ಮೀಸಲಾಗಿದ್ದ ಭಾಗದ ಉತ್ಪನ್ನವೆಲ್ಲ ದೇವಸ್ಥಾನಗಳನ್ನು ನಡೆಸಿಕೊಂಡು ಹೋಗುವುದಕ್ಕೆ, ಹೆಚ್ಚು ಖರ್ಚು ತಗಲುತ್ತಿದ್ದ ಅಲ್ಲಿನ ಶಾಸ್ತ್ರೋಕ್ತ ಕರ್ಮಾಚರಣೆಗಳಿಗೆ ಮತ್ತು ಅಲ್ಲಿನ ಅಸಂಖ್ಯಾತ ಪುರೋಹಿತವರ್ಗಕ್ಕೆ ವಿನಿಯೋಗವಾಗುತ್ತಿತ್ತು. ರಾಜನಿಗೆಂದು ಕಾಯ್ದಿಟ್ಟ ಭಾಗ ಅವನ ಮತ್ತು ಅವನ ಪರಿವಾರ, ಸಿಬ್ಬಂದಿಗಾಗಿ, ಅವಶ್ಯಕವಾದಾಗ ಅನಿರೀಕ್ಷಿತ ಆಡಳಿತ ವೆಚ್ಚಕ್ಕಾಗಿ ಮೀಸಲಾಗಿತ್ತು. ಮೂರನೆಯ ಭಾಗವನ್ನು ಜನರಲ್ಲಿ ಕೆಲವು ನಿಯಮಗಳಿಗನುಸಾರವಾಗಿ ಹಂಚಲಾಗುತ್ತಿತ್ತು. ಪ್ರತಿಯೊಬ್ಬನೂ ಪ್ರಾಪ್ತ ವಯಸ್ಕನಾದಾಗ ಮದುವೆಯಾಗಲೇಬೇಕೆಂಬ ನಿಯಮವಿತ್ತು. ಮದುವೆಯ ಕಾಲಕ್ಕೆ ಅವನ ವಾಸಕ್ಕೆ ಮನೆಯನ್ನೊದಗಿಸುವುದು ಸ್ಥಳೀಯ ಸಮಾಜದ ಜವಾಬ್ದಾರಿ. ಅವನ ಮತ್ತು ಅವನ ಪತ್ನಿಯ ಜೀವನ ನಿರ್ವಹಣಕ್ಕೆ ಸಾಕಾಗುವಷ್ಟು ಜಮೀನು ಕೊಡುತ್ತಿದ್ದರು. ಒಂದೊಂದು ಮಗು ಹುಟ್ಟಿದಾಗಲೂ ಕೊಂಚ ಹೆಚ್ಚು ಭೂಮಿಯನ್ನು ಕೊಡುತ್ತಿದ್ದರು. ಗಂಡುಮಗುವಾದಾಗ ಕೊಡುತ್ತಿದ್ದ ಜಮೀನಿನ ಅರ್ಧದಷ್ಟನ್ನು ಹೆಣ್ಣು ಹುಟ್ಟಿದಾಗ ಕೊಡಲಾಗುತ್ತಿತ್ತು. ಇದಕ್ಕಿಂತ ಹೆಚ್ಚು ಪರಿಷ್ಕಾರವಾದ ಫಲಕಾರಿಯಾದ ಭೂಸ್ವತ್ತಿನ ವ್ಯವಸ್ಥೆ ಕಲ್ಪನೆಗೂ ಮೀರಿದ್ದು. ಆಯಾ ಸ್ಥಳೀಯರೇ ಅಲ್ಲಿನ ಭೂಮಿಯ ಕೃಷಿ ನಡೆಸುತ್ತಿದ್ದರು. ಅವರ ಪ್ರಥಮ ಕರ್ತವ್ಯ ಸೂರ್ಯದೇವನ ಜಮೀನು ಸಾಗುವಳಿ; ಅನಂತರ ವೈದ್ಯರು, ರೋಗಿಗಳು, ವಿಧವೆಯರು, ಯುದ್ಧರಂಗಕ್ಕೆ ಹೋಗಿದ್ದವರು ಮತ್ತು ದಿಕ್ಕಿಲ್ಲದವರ ಭೂಮಿಯ ಕೃಷಿ; ಇದು ಮುಗಿದಮೇಲೆ ಸ್ವಂತ ಜಮೀನಿನ ವ್ಯವಸಾಯಕ್ಕೆ ಅವಕಾಶ. ಅವಶ್ಯಕತೆಯಿದ್ದಾಗ ಪರಸ್ಪರ ಸಹಾಯಕ್ಕೆ ಹೋಗಲೇಬೇಕೆಂಬ ನಿಯಮವಿತ್ತು. ರಾಜನ ಜಮೀನುಗಳ ಬೇಸಾಯಮಾಡುತ್ತಿದ್ದವರೂ ಅವರೇ. ಇದೊಂದು ಶಿಷ್ಚಾಚಾರದ, ಸಂಭ್ರಮದ ಸಂದರ್ಭವಾಗಿತ್ತು. ಮೊದಲ ದಿನ ಎಲ್ಲರೂ ಒಂದೆಡೆ ಕಲೆತು, ಸಂತೋಷದಿಂದ ಲಾವಣಿಗಳನ್ನು ಹಾಡುತ್ತ ಕೆಲಸವನ್ನು ಪ್ರಾರಂಭಿಸುತ್ತಿದ್ದರು; ಉಡುಗದ ಉತ್ಸಾಹದಿಂದ ಅವರ ಕೆಲಸ ಮುಂದುವರಿಯುತ್ತಿತ್ತು. ಯಾವುದಾದರೂ ಕೈಗಾರಿಕೋದ್ಯಮವನ್ನು ಪ್ರಾರಂಭಿಸುವಾಗಲೂ ಹೀಗೆಯೇ. ಅಧಿಕಾರಿಗಳು ಕಾಲಕಾಲಕ್ಕೆ ಜನರನ್ನು ಸಂದರ್ಶಿಸಿ, ಸುಂದರ ಯುವಕ ಯುವತಿಯರನ್ನು ಆರಿಸಿ, ಯುವಕರನ್ನು ರಾಜನ ಅಥವಾ ದೇವಾಲಯಗಳ ಸೇವೆಗಾಗಿ, ಯುವತಿಯರನ್ನು ದೇವಾಲಯ ಮತ್ತು ಅರಮನೆಯ ದಾಸಿಯರನ್ನಾಗಿ ಮತ್ತು ನೇಯ್ಗೆ ಮೊದಲಾದ ಕುಶಲಕರ್ಮಗಳಿಗಾಗಿ ನಿಯೋಜಿಸುತ್ತಿದ್ದರು. ಯಾವುದೇ ಕಾರಣದಿಂದ ಈ ವ್ಯವಸ್ಥೆಯನ್ನು ಒಪ್ಪದ ಜನರನ್ನು ದೂರದೇಶಗಳಿಗೆ ಸಾಗಿಸುವುದು ಪದ್ದತಿಯಾಗಿತ್ತು. ಒಟ್ಟಿನಲ್ಲಿ ಇಂಕಾ ಸಾಮ್ರಾಜ್ಯದ ಸಾಮಾನ್ಯ ಜನರ ಜೀವನರೀತಿಯೆಲ್ಲ ರಾಜ್ಯದಿಂದಲೇ ನಿರ್ದೇಶಿಸಲ್ಪಡುತ್ತಿದ್ದುದರಿಂದ ವ್ಯಕ್ತಿಸ್ವಾತಂತ್ರ್ಯ ಮೊಟಕುಗೊಂಡಿತ್ತು. ಹಾಗೆಯೇ ಎಲ್ಲ ಜನರಿಗೂ ಜೀವನೋಪಾಯವನ್ನು ಒದಗಿಸುವುದಕ್ಕೂ ರಾಜ್ಯ ಬದ್ದವಾಗಿತ್ತು. ಇಂಥ ವ್ಯವಸ್ಥೆಯ ಸುಲಭನಿರ್ವಹಣೆಗಾಗಿ ಆಗಿಂದಾಗ್ಗೆ ಜನಗಣತಿ ನಡೆಯುತ್ತಿತ್ತು. ರಾಜ್ಯದ ಎಲ್ಲ ಭಾಗಗಳಲ್ಲೂ ಉತ್ತಮ ರಸ್ತೆಗಳಿದ್ದುವು. ಶಿಸ್ತಿನ ಸೈನ್ಯ, ಉತ್ತಮ ವಸ್ತುಸಾಗಾಣಿಕೆ ವ್ಯವಸ್ಥೆ, ವೇಗದಿಂದ ಸಮಾಚಾರಗಳನ್ನು ಒಯ್ಯುತ್ತಿದ್ದ ಹರಿಕಾರಗಣ-ಇವು ರಾಜ್ಯದ ದಕ್ಷತೆಯನ್ನು ಹೆಚ್ಚಿಸಿದ್ದುವು. ಆದರೆ ಚಕ್ರದ ಈ ಗಾಡಿಗಳು ಜನರಿಗೆ ಗೊತ್ತಿರಲಿಲ್ಲ. ಭಾರವನ್ನು ಒಯ್ಯಲು ಸಾಮಾನ್ಯವಾಗಿ ಲಾಮಾ ಎಂಬ ಪ್ರಾಣಿಗಳನ್ನು ಉಪಯೋಗಿಸಲಾಗುತ್ತಿತ್ತು.

ವೈಜ್ಞಾನಿಕ ಕ್ರಮದ ಕೃಷಿ

[ಬದಲಾಯಿಸಿ]

ಭೂವ್ಯವಸಾಯದಲ್ಲಿ ಅವರು ಅನುಸರಿಸುತ್ತಿದ್ದ ಕ್ರಮ ವೈಜ್ಞಾನಿಕವಾಗಿತ್ತೆಂದೇ ಹೇಳಬೇಕು. ಅವರು ಗುಳಗಳನ್ನು ಪ್ರಯೋಗಿಸುತ್ತಿರಲಿಲ್ಲ. ಭಾರವನ್ನೆಳೆಯುವ ಪ್ರಾಣಿಗಳನ್ನೂ ಕಾಣರು. ಆದರೂ ಬೆಳೆ ತೆಗೆಯುವುದರಲ್ಲಿ ಸಮರ್ಥರಾಗಿದ್ದರು. ತುದಿಯಲ್ಲಿ ಚೂಪಾಗಿರುವ ಗಟ್ಟಿಮರದ ಒಂದು ಗೂಟದ ತುದಿಗೆ ಒಂದಡಿ ಮೇಲೆ ಅಡ್ಡವಾದ ಒಂದು ತುಂಡನ್ನು ಭದ್ರವಾಗಿ ಬಿಗಿಯುತ್ತಿದ್ದರು. ಇದೇ ಅವರ ನೇಗಿಲು. ಉಳುವಾತ ಆ ಅಡ್ಡತುಂಡಿನ ಮೇಲೆ ಕಾಲನ್ನೂರಿ ಚೂಪುತುದಿ ನೆಲದೊಳಕ್ಕೆ ಹೋಗುವಂತೆ ಮಾಡುತ್ತಿದ್ದ. ದೊಡ್ಡ ಗೂಟಕ್ಕೆ ಹಗ್ಗಕಟ್ಟಿ ಅದನ್ನು ಆರು ಅಥವಾ ಎಂಟು ಜನ ಎಳೆಯುತ್ತಿದ್ದರು. ಆಯಾಸದ ಪರಿವೆಯೇ ಇಲ್ಲದವರಂತೆ ರಾಷ್ಟ್ರೀಯ ಗೀತೆಗಳನ್ನು ಹಾಡುತ್ತ ದಿನವಿಡೀ ಕೆಲಸಮಾಡುತ್ತಿದ್ದರು. ಹೆಂಗಸರೂ ಅವರೊಂದಿಗಿದ್ದು ಹೆಂಟೆ ಒಡೆಯುವುದು, ಕಳೆ ತೆಗೆಯುವುದು ಮುಂತಾದ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ನೆಲ ಮೃದುವಾಗಿದ್ದುದರಿಂದ ಈ ಉಳುವ ಕೆಲಸ ಸುಲಭವಾಗಿತ್ತು. ಅಭ್ಯಾಸಬಲದಿಂದ, ಎಷ್ಟು ಮಣ್ಣನ್ನು ಬುಡಮೇಲು ಮಾಡಬೇಕೋ ಅಷ್ಟನ್ನೇ ಮಾಡಿಕೊಂಡು ಸರಾಗವಾಗಿ ಕೆಲಸ ನಡೆಸುತ್ತಿದ್ದರು.

ಯಾಂತ್ರಿಕ ಕೌಶಲ

[ಬದಲಾಯಿಸಿ]

ಬಟ್ಟೆ ತಯಾರಿಕೆಯಲ್ಲಿ ಮತ್ತು ಇತರ ಉಪಯುಕ್ತ ಕಲೆಗಳಲ್ಲಿ ಅವರು ತುಂಬ ಜಾಣ್ಮೆಯನ್ನು ಹೊಂದಿದ್ದರು. ಅರಮನೆಯ ಉಗ್ರಾಣ ಮತ್ತು ಕೋಠಿಗಳಲ್ಲಿ, ದೊರೆಗಳ ಗೋರಿಗಳಲ್ಲಿ, ತುಂಬ ನಯಗೆಲಸದ ವಸ್ತುಗಳು ದೊರೆತಿವೆ. ಚಿನ್ನದ ಕಲಶಗಳು, ಬೆಳ್ಳಿಯ ಕಡಗಗಳು, ಕಂಠಾಭರಣಗಳು ಮತ್ತು ಇತರ ಒಡವೆಗಳು, ಗೃಹೋಪಕರಣಗಳು (ಕೆಲವು ನಯವಾದ ಮಣ್ಣಿನಿಂದ ಮಾಡಿದವು, ಕೆಲವು ತಾಮ್ರದವು). ಗಟ್ಟಿಯಾದ ಪಟ್ಟಿಯಲ್ಲಿ ಸಹ ಈ ಜನ ಉತ್ಕೃಷ್ಟವಾದ ನಯಗೆಲಸ ಮಾಡುತ್ತಿದ್ದರು. ಒಂದು ಜನತೆಯ ಸಂಸ್ಕೃತಿಯ ಮಟ್ಟ ಗೋಚರವಾಗುವುದು ಅವರ ವಾಸ್ತುಶಿಲ್ಪದಲ್ಲಿ, ಸರಳತೆ, ಭಾಗಗಳ ಸಮಸೂತ್ರತೆ, ಭದ್ರತೆ-ಇವು ಅವರು ನಿರ್ಮಿಸಿದ ಕಟ್ಟಡಗಳ ವಿಶಿಷ್ಟ ಗುಣಗಳೂ-ಎಂದು ಹಂಬೋಲ್ಟ್ ಎಂಬ ಪ್ರಸಿದ್ಧ ಪ್ರವಾಸಿ ಬರೆದಿದ್ದಾನೆ. ಅಲ್ಲಿನ ಅಪಾರ ಸಂಪತ್ತನ್ನು ದೋಚುವುದಕ್ಕೋಸ್ಕರ ಸ್ಪೇನರು ಇವರ ಅನೇಕ ಕಲಾಕೃತಿಗಳನ್ನು ನಾಶಗೊಳಿಸಿದರು; ಭೂಕಂಪ ಮುಂತಾದುವುಗಳಿಂದಲೂ ಇಂಥ ವಿಧ್ವಂಸಕ ಕೃತ್ಯ ನಡೆದಿಲ್ಲವೆನ್ನಬಹುದು. ಆದರೂ ಅಳಿದುಳಿದಿರುವ ಕೆಲವು ಸ್ಮಾರಕಗಳೇ ಪ್ರಾಚೀನಾನ್ವೇಷಕರ ಆಸಕ್ತಿಯನ್ನು ಕೆರಳಿಸುತ್ತಿವೆ-ಎಂದು ಪ್ರೆಸ್ಕಾಟ್ ಹೇಳಿದ್ದಾನೆ.

ರಹಸ್ಯಗರ್ಭಿತ ಕೀಪೂ

[ಬದಲಾಯಿಸಿ]
ಕೀಪೂ Brooklyn Museum

ಇಂಕಾ ಜನರು ಬರವಣಿಗೆಯನ್ನರಿತಿರಲಿಲ್ಲ. ದೊರೆತ ಧಾನ್ಯಗಳ ಪ್ರಮಾಣ, ಕೆಲಸಗಾರರಿಗೆ ಹಂಚಿದ ಕಚ್ಚಾ ಪದಾರ್ಥಗಳ ವಿವರ ಮತ್ತು ಅಳತೆ, ತಯಾರಾದ ಬಟ್ಟೆ ಮತ್ತು ಇತರ ಪದಾರ್ಥಗಳ ಲೆಕ್ಕ, ದೊರೆಯ ಉಗ್ರಾಣಗಳಿಗೊದಗಿಸಿದ ವಸ್ತುಗಳ ವಿವರ-ಇವುಗಳನ್ನೆಲ್ಲ ವಿಶಿಷ್ಟರೀತಿಯಲ್ಲಿ ಗುರುತಿಟ್ಟುಕೊಳ್ಳುತ್ತಿದ್ದರು. ನಾನಾ ಬಣ್ಣಗಳ ದಾರಗಳನ್ನು ಸೇರಿಸಿ ಭದ್ರವಾಗಿ ಹೊಸೆದಿದ್ದ ಒಂದು ಹುರಿಯ ಸಹಾಯದಿಂದ ಅವರಿಗೆ ಇಂಥ ಲೆಕ್ಕಾಚಾರ ಸಾಧ್ಯವಾಗಿತ್ತೆಂದರೆ ಆಶ್ಚರ್ಯವಾಗದಿರದು. ಇದರ ಹೆಸರು ಕೀಪೂ ಎಂದು ಈ ಹುರಿಯಲ್ಲಿ ಗಂಟುಗಳಿದ್ದುವು. ಅಂಚುಕಟ್ಟಿನಂತೆ ಈ ಹುರಿಯಿಂದ ಅನೇಕ ಸಣ್ಣ ದಾರಗಳು ನೇತಾಡುತ್ತಿದ್ದವು. ಕೀಪೂ ಪದದ ಅರ್ಥ ಗಂಟು ಎಂದು. ಬಣ್ಣಗಳು ಇಂದ್ರಿಯಗೋಚರವಾದ ವಸ್ತುಗಳನ್ನು ಸೂಚಿಸುತ್ತಿದ್ದುವು. ಬಿಳುಪು ಬೆಳ್ಳಿಯನ್ನು, ಹಳದಿ ಚಿನ್ನವನ್ನು, ಹೀಗೆ ಕೆಲವು ಸಂದರ್ಭಗಳಲ್ಲಿ ಅವು ಭಾವಗಳನ್ನೂ ಸೂಚಿಸುತ್ತಿದ್ದುವು. ಬಿಳುಪು ಶಾಂತಿ, ಕೆಂಪು ಯುದ್ಧ-ಹೀಗೆ. ಕೀಪೂಗಳನ್ನು ಹೆಚ್ಚಾಗಿ ಬಳಸುತ್ತಿದ್ದದ್ದು ಲೆಕ್ಕಾಚಾರಕ್ಕೆ. ಗಂಟು ಸೊನ್ನೆಯ ಚಿಹ್ನೆ. ಗಂಟುಗಳ ಗುಂಪುಗಳು ಅಂಕಿಗಳನ್ನು ಸೂಚಿಸುತ್ತಿದ್ದುವು. ಕೀಪೂ ಲೆಕ್ಕಚಾರದಲ್ಲಿ ಪರಿಣತಿ ಪಡೆದಿದ್ದವರು ಎಲ್ಲ ಎಣಿಕೆಗಳೂ ತಪ್ಪಿಲ್ಲದಂತೆ ಬಲು ಬೇಗ ಮಾಡುತ್ತಿದ್ದರು. ಇವರಿಗೆ ಕೀಪೋಕಾಮಾಯೂ ಎಂದು ಹೆಸರು. ಪ್ರತಿ ಜಿಲ್ಲೆಯಲ್ಲೂ ಇಂಥ ಅಧಿಕಾರಿಗಳಿದ್ದರು. ಆಡಳಿತಕ್ಕೆ ಅವಶ್ಯಕವಾದ ನಾನಾ ವಿಷಯಗಳು ಮತ್ತು ಅಂಕಿಅಂಶಗಳನ್ನು ಸರ್ಕಾರಕ್ಕೊದಗಿಸುವುದು ಅವರ ಕರ್ತವ್ಯ. ಈ ಕೀಪೂಗಳನ್ನು ಬಹು ಎಚ್ಚರದಿಂದ ಜೋಡಿಸಿ ಶೇಖರಿಸುತ್ತಿದ್ದರು. ಇದು ಆಗಿನ ರಾಷ್ಟ್ರೀಯ ಪತ್ರಾಗಾರವಾಗಿತ್ತು (ನ್ಯಾಷನಲ್ ಆರ್ಕೀವ್ಸ್). ಪೆರುಸಂಸ್ಕೃತಿಯ ಇನ್ನೊಂದು ವಿಚಿತ್ರ ವೈಲಕ್ಷಣ್ಯವೆಂದರೆ ಆ ಜನರಿಗೆ ಹಣದ ಜ್ಞಾನವೇ ಇಲ್ಲದಿದ್ದದ್ದು. ಹಣವೇ ಮಾನವಲ್ಲ ಎಲ್ಲ ಅನಿಷ್ಟಗಳ ಮೂಲ ಎಂಬ ಭಾವನೆ ಅವರಿಗಿದ್ದಿರಬಹುದು. ಅವರದು ಅತ್ಯಂತ ದರ್ಪ ವೈಭವಗಳಿಂದ ಮೆರೆದ ವಿಶಾಲಸಾಮ್ರಾಜ್ಯ : ಅಲ್ಲಿದ್ದ ಚಿನ್ನ ಬೆಳ್ಳಿಗಳಿಂದಲೇ ಮುಂದೆ ಯೂರೋಪ್ ದೇಶಗಳ ನಾಣ್ಯವ್ಯವಸ್ಥೆ ಸಾಧ್ಯವಾದದ್ದು. ಆದರೂ ಅಲ್ಲಿ ನಾಣ್ಯಗಳೇ ಇರಲಿಲ್ಲ. ಈ ಪ್ರಶಸ್ತ ಲೋಹಗಳಿಗಾಗಿಯೇ ಸ್ಪೇನಿನ ಮತ್ತು ಇತರ ದೇಶಗಳ ಸಾಹಸಿಗರು ಇಲ್ಲಿಗೆ ಬರುವಂತಾದದ್ದು. ಈ ಲೋಹ ಪೆರುದೇಶದಲ್ಲಿ ಈಗಿಲ್ಲ; ಹಿಂದಿನ ವೈಭವವೂ ಈಗ ಮಾಯವಾಗಿದೆ. ಆದರೆ ಆ ಕಾಲದ ಪೆರುದೇಶದ ನೆನಪು ತರುವ ಚಾರಿತ್ರಿಕ ಅವಶೇಷಗಳು ಇಂದಿಗೂ ಪ್ರವಾಸಿಗರ, ಪ್ರಾಚೀನ ಶೋಧಕರ ಹೃದಯವನ್ನು ಸೆಳೆಯುತ್ತಿವೆ.

ಇಂಕಾ ವಾಸ್ತುಕಲೆ

[ಬದಲಾಯಿಸಿ]

ಅಚ್ಚರಿಗೊಳಿಸುವಂಥದು. ಕಲ್ಲಿನ ಬೃಹತ್‍ಕಟ್ಟಡಗಳು ರಾಜ್ಯದ ಹಲವೆಡೆಗಳಲ್ಲಿ ಕಂಡುಬಂದಿವೆ. ಈ ಜನ ಕಲ್ಲನ್ನು ಮಟ್ಟಸವಾಗಿ ಕೆತ್ತಿ, ಗಾರೆಯನ್ನು ಉಪಯೋಗಿಸದೆ ಸ್ವಲ್ಪವೂ ಸಂದುಕಾಣದಂತೆ ಒಂದಕ್ಕೊಂದು ಜೋಡಿಸುತ್ತಿದ್ದರು. ಈ ಮಾದರಿಯಲ್ಲಿ ಕಟ್ಟಿದ್ದ ಕುಜ್ಕೋ ಕೋಟೆಯ ಕಲ್ಲುಗಳಲ್ಲಿ ಹಲವು 100 ಟನ್‍ಗಿಂತಲೂ ಭಾರವಾಗಿವೆ. ಮಳೆ ಬಹಳ ಕಡಿಮೆ. ಇರುವ ಕರಾವಳಿಯ ಪ್ರದೇಶಗಳಲ್ಲಿ ಬಿಸಿಲಿನಲ್ಲಿ ಒಣಗಿಸಿದ ಇಟ್ಟಿಗೆಗಳಿಂದ ಕಟ್ಟಡಗಳನ್ನು ಕಟ್ಟುತ್ತಿದ್ದರು. ಆದರೆ ರಚನಾವಿನ್ಯಾಸ ಮತ್ತು ಬೃಹತ್ ಪ್ರಮಾಣದಲ್ಲಿ ಇವು ಪರ್ವತ ಪ್ರದೇಶದ ಕಲ್ಲು ಕಟ್ಟಡಗಳನ್ನೇ ಹೋಲುತ್ತಿದ್ದುವು. ಕೆಲವು ಗೋಡೆಗಳ ಮೇಲೆ ವರ್ಣಚಿತ್ರಗಳ ಅಲಂಕರಣ ಸಹ ಇರುತ್ತಿತ್ತು. ಈ ಜನರಲ್ಲಿ ಬಳಕೆಯಲ್ಲಿದ್ದ ಶಿಲ್ಪಕಲೆ ಸಾಧಾರಣಮಟ್ಟದ್ದು. ಹೆಚ್ಚಿನವೆಲ್ಲ ಅಲಂಕರಣಕ್ಕಾಗಿ ಮಾಡಿದ ಗೀಚು ಚಿತ್ರಗಳು ಅಥವಾ ಅಲ್ಪ ಉಬ್ಬಿನ ಶಿಲ್ಪಗಳು ಅಷ್ಟೆ. ಈ ಜನಗಳಿಗೆ ಕಬ್ಬಿಣದ ಉಪಯೋಗ ತಿಳಿದಿರಲಿಲ್ಲ. ಚಿನ್ನ, ಬೆಳ್ಳಿ, ಮತ್ತು ತವರವನ್ನು ಗಣಿಗಳಿಂದ ತೆಗೆಯುತ್ತಿದ್ದರಲ್ಲದೆ ಅವುಗಳಿಂದ ಉತ್ತಮವಾದ ಬಳಕೆಯ ವಸ್ತುಗಳನ್ನು, ಕಲಾತ್ಮಕವಾದ ಆಭರಣಗಳನ್ನು ಮಾಡುತ್ತಿದ್ದರು. ಬೆರಕೆ ಲೋಹಗಳ ಬಳಕೆ ರೂಢಿಯಲ್ಲಿತ್ತು. ಇಂಕಾ ಜನ ಲೋಹ ವಿದ್ಯೆಯಲ್ಲಿ ಕುಶಲತೆಯನ್ನು ಸಾಧಿಸಿದ್ದರು. ಕಾಲಕಾಲಕ್ಕೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಅವು ವ್ಯತ್ಯಾಸಗೊಳ್ಳುತ್ತಿದ್ದವು. ಕೆಲವೆಡೆ ಸಾಮಾನ್ಯವಾದ ಕೆಂಪು ಮಡಕೆಗಳೂ ಬಿಳಿಯ ಬಣ್ಣದ ಮೇಲೆ ಕೆಂಪು ಚಿತ್ರಗಳುಳ್ಳ ಮಡಕೆಗಳೂ ಇನ್ನೂ ಕೆಲವು ಭಾಗಗಳಲ್ಲಿ ನಾನಾ ಪ್ರಾಣಿಯಾಕೃತಿಯಲ್ಲಿ ಮಾಡಿದ ಅಥವಾ ಪ್ರಾಣಿಯ ಅಥವಾ ಮನುಷ್ಯರ ಚಿತ್ರಗಳನ್ನೊಳಗೊಂಡ ಮಡಕೆಗಳೂ ಬಳಕೆಯಲ್ಲಿದ್ದುವು. ಕೆಲವಂತೂ ಅಂದಿನ ಕುಂಬಾರನ ಉನ್ನತಕಲೆಯ ದ್ಯೋತಕಗಳಾಗಿವೆ. ಇಂಕಾ ಜನರ ಬಟ್ಟೆಗಳಲ್ಲಿ ಕಂಡುಬರುವ ದಾರದ ನಯ, ನೇಯ್ಗೆಯ ತಂತ್ರ ಮತ್ತು ಆಕರ್ಷಕ ರಂಗಿನ ಮಾಟಗಳು ಉಚ್ಚಮಟ್ಟದ್ದಾಗಿದ್ದು, ನೇಯ್ಗೆಯ ಕೆಲಸಕ್ಕೆ ಕಲೆಯ ಸ್ಥಾನವನ್ನು ದೊರಕಿಸಿಕೊಟ್ಟಿವೆ.

ಇಂಕಾ ಜನರ ಬಟ್ಟೆ

ಪಿತೃಪೂಜೆ ಇಂಕಾ ಜನರ ಧಾರ್ಮಿಕ ನಡವಳಿಕೆಗಳಲ್ಲಿ ಮುಖ್ಯವಾದುದು. ಸತ್ತವರ ದೇಹಗಳನ್ನು ಒಣಗಿಸಿ ಜೋಪಾನವಾಗಿ ಬಟ್ಟೆ ಮುಂತಾದುವುಗಳಲ್ಲಿ ಸಂರಕ್ಷಿಸಿ ಕಾಲಕಾಲಕ್ಕೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಿದ್ದರು. ಹಲವು ಇಂಕಾ ದೊರೆಗಳ ಒಣಗಿಸಿದ ದೇಹಗಳು ಕುಜ್ಕೊದ ಸೂರ್ಯ ದೇವಾಲಯದಲ್ಲಿದ್ದುವಂತೆ. ಧಾರ್ಮಿಕ ವಿಧಿಗಳಲ್ಲಿ ಪುರೋಹಿತರು ಮುಖ್ಯಪಾತ್ರವಹಿಸುತ್ತಿದ್ದರು. ಜೋತಿಷ್ಯ, ಶಕುನ, ಯಜ್ಞ, ಪಂಚಾಂಗದ ಪ್ರಕಾರ ಹಬ್ಬಗಳ ನಿಷ್ಕರ್ಷೆ ಮತ್ತು ರೋಗಗಳನ್ನು ಗುಣಪಡಿಸುವುದು-ಪುರೋಹಿತರ ಮುಖ್ಯ ಕೆಲಸವಾಗಿತ್ತು. ದೇಶದ ಮುಖ್ಯ ದೇವತೆ ಸೂರ್ಯ. ವೀರಕೋಚ ಮುಂತಾದ ಹಲವು ದೇವರುಗಳನ್ನು ಪೂಜಿಸುತ್ತಿದ್ದರು. ಪ್ರಮುಖ ನಗರಗಳಲ್ಲಿ ಸೂರ್ಯ ದೇವಾಲಯಗಳು ಇದ್ದುವು. ಹುಯಕ ಎಂದು ಕರೆಯಲ್ಪಡುತ್ತಿದ್ದ ಪುಣ್ಯಸ್ಥಾನಗಳಲ್ಲೂ ಜನ ಪೂಜೆ ಸಲ್ಲಿಸುತ್ತಿದ್ದರು.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಇಂಕಾ&oldid=715260" ಇಂದ ಪಡೆಯಲ್ಪಟ್ಟಿದೆ