ಆಹಾರ ಸರಪಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಹಾರ ಸರಪಳಿಗಳನ್ನು ಮೊದಲು ೯ ನೇ ಶತಮಾನದ ಆಫ್ರಿಕನ್ ಅರಬ್ ವಿಜ್ಞಾನಿ ಮತ್ತು ತತ್ವಜ್ಞಾನಿ ಅಲ್ ಜಹಿಜ್ ಪರಿಚಯಿಸಿದರು. ನಂತರ ೧೯೨೭ ರಲ್ಲಿ ಪ್ರಕಟವಾದ ಚಾರ್ಲ್ಸ್ ಎಲ್ಟನ್‍ರ ಪುಸ್ತಕದಲ್ಲಿ ಜನಪ್ರಿಯಗೊಳಿಸಲಾಯಿತು. ಇದರಲ್ಲಿ ಆಹಾರ ಜಾಲದ ಪರಿಕಲ್ಪನೆಯನ್ನು ಪರಿಚಯಿಸಲಾಯಿತು.[೧]ಒಂದು ಸರಪಣಿಯ ಉದ್ದವು ಪೌಷ್ಟಿಕಾಂಶಗಳ ಗ್ರಾಹಕ ಮತ್ತು ಜಾಲ ತಳದ ನಡುವಿನ ಕೊಂಡಿಗಳ ಸಂಖ್ಯೆಯಾಗಿರುತ್ತದೆ ಮತ್ತು ಒಂದು ಸಂಪೂರ್ಣ ಜಾಲದ ಸರಾಸರಿ ಸರಪಣಿ ಉದ್ದವು ಆಹಾರ ಜಾಲದಲ್ಲಿನ ಎಲ್ಲಾ ಸರಪಣಿಗಳ ಉದ್ದಗಳ ಅಂಕಗಣಿತ ಸರಾಸರಿಯಾಗಿರುತ್ತದೆ.

ಆಹಾರ ಸರಪಳಿ
ಆಹಾರ ಸರಪಳಿ

ಇತಿವೃತ್ತ[ಬದಲಾಯಿಸಿ]

  • ಯಾವುದೇ ಜೀವಿಯೂ ಅದರ ಉಳಿವಿಗಾಗಿ ಮತ್ತೊಂದು ಸಸ್ಯ ಅಥವಾ ಪ್ರಾಣಿ ಜಾತಿಗಳ ಮೇಲೆ ಸ್ವಲ್ಪ ಮಟ್ಟಿಗೆ ಅವಲಂಬಿಸಿರುತ್ತದೆ. ಎಷ್ಟೇ ದೊಡ್ಡ ಅಥವಾ ಸಣ್ಣ ಸಸ್ಯ ಮತ್ತು ಪ್ರಾಣಿ ವರ್ಗಗಳಾಗಿರಲಿ. ಅದು ಜಿಂಕೆ ತಿನ್ನುವ ಪೊದೆಸಸ್ಯ ಎಲೆಗಳು ಅಥವಾ ನರಭಕ್ಷಕ ಸಿಂಹಗಳು, ಹೂವಿನ ಪರಾಗ ತೆಗೆದುಕೊಳ್ಳುವ ಜೇನುನೊಣಗಳು, ಸಸ್ಯಗಳ ದ್ಯುತಿಸಂಶ್ಲೇಷಣೆ, ಇನ್ನು ಹಲವು ಆಗಿರಬಹುದು.
  • ಒಂದು ಆಹಾರ ಸರಪಳಿಯು ಆಹಾರದ ಮೂಲಕ ಶಕ್ತಿಯು ಮತ್ತೊಂದು ಜೀವಿಗೆ ಹೇಗೆ ವರ್ಗಾವಣೆಯಾಗುತ್ತದೆ ಎಂದು ತೋರಿಸುತ್ತದೆ.
  • ಆಹಾರ ಸರಪಳಿಯು ಒಂದು ಆಹಾರ ಜಾಲದಲ್ಲಿನ ಕೊಂಡಿಗಳ ಜಾಲಬಂಧವಾಗಿದೆ ಮತ್ತು ಉತ್ಪಾದಕ ಜೀವಿಗಳಿಂದ (ಉದಾಹರಣೆಗೆ ತಮ್ಮ ಆಹಾರವನ್ನು ತಯಾರಿಸಿಕೊಳ್ಳಲು ಸೂರ್ಯನ ವಿಕಿರಣ ಬಳಸುವ ಹುಲ್ಲು ಅಥವಾ ಮರಗಳು) ಆರಂಭಗೊಂಡು ಅಗ್ರ ಪರಭಕ್ಷಗಳು (ಕಂದು ಕರಡಿಗಳು ಅಥವಾ ತಿಮಿಂಗಿಲಗಳು), ಎರೆಹುಳುಗಳು, ಅಥವಾ ವಿಭಜಕ ಪ್ರಭೇದಗಳಲ್ಲಿ (ಉದಾಹರಣೆಗೆ ಶಿಲೀಂಧ್ರಗಳು ಅಥವಾ ಬ್ಯಾಕ್ಟೀರಿಯಾ) ಕೊನೆಗೊಳ್ಳುತ್ತದೆ.
  • ಆಹಾರ ಸರಪಳಿಯು ಜೀವಿಗಳು ತಿನ್ನುವ ಆಹಾರವನ್ನು ಆಧರಿಸಿ ಅವು ಪರಸ್ಪರ ಹೇಗೆ ಸಂಬಂಧಿತವಾಗಿವೆ ಎಂದು ತೋರಿಸುತ್ತದೆ. ಆಹಾರ ಸರಪಳಿಯ ಪ್ರತಿ ಮಟ್ಟವು ವಿಭಿನ್ನ ಪೌಷ್ಟಿಕ ಮಟ್ಟವನ್ನು ಪ್ರತಿನಿಧಿಸುತ್ತದೆ. ಆಹಾರ ಸರಪಳಿಯು ಆಹಾರ ಜಾಲದಿಂದ ಭಿನ್ನವಾಗಿದೆ, ಏಕೆಂದರೆ ವಿವಿಧ ಪ್ರಾಣಿಗಳ ತಿನ್ನುವ ಸಂಬಂಧಗಳ ಸಂಕೀರ್ಣ ಜಾಲಬಂಧವನ್ನು ಒಟ್ಟಾಗಿಸಲಾಗುತ್ತದೆ. ಆಹಾರ ಸರಪಳಿಯು ಒಂದು ಸಮಯದಲ್ಲಿ ಒಂದು ಪ್ರಾಣಿಯಂತೆ, ಕೇವಲ ನೇರ, ರೇಖೀಯ ಮಾರ್ಗವನ್ನು ಅನುಸರಿಸುತ್ತದೆ. ಆಹಾರ ಸರಪಣಿಯ ಉದ್ದವು ಆಹಾರ ಜಾಲದ ಪೌಷ್ಟಿಕ ರಚನೆಯನ್ನು ಪ್ರಮಾಣೀಕರಿಸಲು ಬಳಸುವ ಸಾಮಾನ್ಯ ಅಳತೆ ವ್ಯವಸ್ಥೆಯಾಗಿದೆ.

ಆಹಾರ ಸರಪಣಿಯ ಉದ್ದ[ಬದಲಾಯಿಸಿ]

  • ಆಹಾರ ಸರಪಣಿಯ ಉದ್ದ ನಿರಂತರ ಚರವಾಗಿದೆ ಮತ್ತು ಶಕ್ತಿಯ ಸಾಗಣೆ ಹಾಗೂ ಪಾರಿಸರಿಕ ರಚನೆಯ ಸೂಚ್ಯಂಕದ ಅಳತೆ ಒದಗಿಸುತ್ತದೆ. ಈ ಸೂಚ್ಯಂಕವು ಅತ್ಯಂತ ಕೆಳಗಿನ ಪೌಷ್ಟಿಕ ಮಟ್ಟದಿಂದ ಅತ್ಯಂತ ಎತ್ತರದ ಪೌಷ್ಟಿಕ ಮಟ್ಟಕ್ಕೆ ರೇಖಾತ್ಮಕ ಶೈಲಿಯಲ್ಲಿ ಕೊಂಡಿಗಳ ಮೂಲಕ ಹಂತಹಂತವಾಗಿ ಎಣಿಸಿದಾಗ ಮೌಲ್ಯದಲ್ಲಿ ಹೆಚ್ಚಾಗುತ್ತದೆ. ಆಹಾರ ಸರಪಳಿಗಳನ್ನು ಹಲವುವೇಳೆ ಪಾರಿಸರಿಕ ಮಾದರಿ ರಚನೆಯಲ್ಲಿ ಬಳಸಲಾಗುತ್ತದೆ. (ಉದಾಹರಣೆಗೆ ಮೂರು ಪ್ರಜಾತಿಗಳ ಆಹಾರ ಸರಪಳಿ).
  • ಅವು ನೈಜ ಆಹಾರ ಜಾಲಗಳ ಸರಳೀಕೃತ ಅಮೂರ್ತತೆಗಳಾಗಿರುತ್ತವೆ, ಆದರೆ ತಮ್ಮ ಕ್ರಿಯಾಶೀಲತೆ ಮತ್ತು ಗಣಿತೀಯ ಪರಿಣಾಮಗಳಲ್ಲಿ ಸಂಕೀರ್ಣವಾಗಿವೆ. ಪರಿಸರ ವ್ಯವಸ್ಥೆಯ ಗಾತ್ರದೊಂದಿಗೆ ಹೆಚ್ಚುತ್ತಿರುವ ಉದ್ದ, ಪ್ರತಿಯೊಂದು ಅನುಕ್ರಮದ ಮಟ್ಟದಲ್ಲಿ ಶಕ್ತಿಯ ಕಡಿತ, ಅಥವಾ ದೀರ್ಘ ಆಹಾರ ಸರಪಳಿ ಉದ್ದಗಳು ಅಸ್ಥಿರ ಎಂಬ ಪ್ರತಿಪಾದನೆಯಂತಹ ಆಹಾರ ಸರಪಣಿಯ ಉದ್ದಕ್ಕೆ ಸಂಬಂಧಿಸಿದ ಪಾರಿಸರಿಕ ಮಾದರಿಗಳ ಸ್ವರೂಪದ ವಿಷಯದಲ್ಲಿ ಪರಿಸರ ವಿಜ್ಞಾನಿಗಳು ಕಲ್ಪಿತ ಸಿದ್ಧಾಂತಗಳನ್ನು ಸೂತ್ರೀಕರಿಸಿ ಪರೀಕ್ಷಿಸಿದ್ದಾರೆ.
  • ಆಹಾರ ಸರಪಳಿಯ ಅಧ್ಯಾಯನಗಳು ಪಾರಿಸರಿಕ ಮಾಲಿನ್ಯಕಾರಕಗಳ ಮಾರ್ಗಗಳು ಮತ್ತು ಜೈವಿಕ ಗಾತ್ರವೃದ್ಧಿಯ ಜಾಡು ಹಿಡಿದು ಹೋಗುವ ಪರಿಸರ ವಿಷವಿಜ್ಞಾನ ಅಧ್ಯಯನಗಳಲ್ಲಿ ಪ್ರಮುಖ ಪಾತ್ರ ಹೊಂದಿವೆ.
  • ಒಂದು ಹೂವನ್ನು ಒಳಗೊಂಡಿರುವ ಆಹಾರ ಸರಪಳಿಯು, ಒಂದು ಕಪ್ಪೆ, ಹಾವು ಮತ್ತು ಗೂಬೆ ಸೇರಿದ ನಾಲ್ಕು ಹಂತಗಳನ್ನು ಒಳಗೊಂಡಿದೆ. ಒಂದು ಆಹಾರದ ಸರಪಳಿಯು ಹುಲ್ಲು, ನಂತರ ಮಿಡತೆ, ಇಲಿ, ಹಾವು ಮತ್ತು ಅಂತಿಮವಾಗಿ ಗಿಡುಗ ಹೀಗೆ ಐದು ಮಟ್ಟ ಒಳಗೊಂಡಿದೆ. ಸಸ್ಯಗಳಂತಹ ಉತ್ಪಾದಕಗಳು ಷಿಷ್ಟ ಸಂಶ್ಲೇಷಿಸಲು ಸೌರ ಅಥಾವ ರಾಸಾಯನಿಕ ಶಕ್ತಿಯನ್ನು ಬಳಸುವ ಜೀವಿಗಳಾಗಿವೆ. ಎಲ್ಲಾ ಆಹಾರ ಸರಪಣಿಗಳು ಉತ್ಪಾದಕರಿಂದ ಆರಂಭವಾಗಬೇಕು.
  • ಆಳದ ಸಮುದ್ರದಲ್ಲಿ ಸೂರ್ಯನ ಅನುಪಸ್ಥಿತಿಯಲ್ಲಿ ಜಲೋಷ್ಣಿಯ ದ್ವಾರಗಳು ಮತ್ತು ತಂಪಾದ ಒಸರುಗಳ ಮೇಲೆ ಕೇಂದ್ರೀಕೃತವಾದ ಆಹಾರ ಸರಪಣಿಗಳು ಅಸ್ತಿತ್ವದಲ್ಲಿವೆ. ರಾಸಾಯನಿಕ ಸಂಶ್ಲೇಷಕ ಬ್ಯಾಕ್ಟೀರಿಯಾ ಮತ್ತು ಆರ್ಕಿಯಾ ಶಕ್ತಿಯ ಮೂಲವಾಗಿ ಜಲೋಷ್ಣಿಯ ದ್ವಾರಗಳು ಹಾಗೂ ತಂಪಾದ ಒಸರುಗಳಿಂದ ಹೈಡ್ರೋಜನ್ ಸಲ್ಫೈಡ್ ಮತ್ತು ಮಿಥೇನ್ ಅನ್ನು ಕಾರ್ಬೋಹೈಡ್ರೆಟುಗಳನ್ನು ಉತ್ಪಾದಿಸಲು ಬಳಸುತ್ತವೆ (ಸಸ್ಯಗಳು ಸೂರ್ಯನ ಬೆಳಕನ್ನು ಬಳಸಿದಂತೆ); ಅವು ಆಹಾರ ಸರಪಳಿಯ ಮೂಲವನ್ನು ರಚಿಸುತ್ತವೆ. ಭಕ್ಷಕಗಳು ಇತರ ಜೀವಿಗಳನ್ನು ತಿನ್ನುವ ಜೀವಿಗಳಾಗಿವೆ. ಆಹಾರ ಸರಪಳಿಯಲ್ಲಿ ಮೊದಲ ಜೀವಿಯನ್ನು ಹೊರತುಪಡಿಸಿ ಎಲ್ಲಾ ಜೀವಿಗಳು ಭಕ್ಷಕಗಳು.
  • ಒಂದು ಆಹಾರ ಸರಪಳಿಯು ಪ್ರತಿ ಜೀವಿಯು ಅದರ ಆಹಾರವನ್ನು ಹೇಗೆ ಪಡೆಯುತ್ತದೆ ಎಂದು ತೋರಿಸುತ್ತದೆ. ಕೆಲವು ಪ್ರಾಣಿಗಳು ಸಸ್ಯಗಳನ್ನು ತಿಂದರೆ ಕೆಲವು ಪ್ರಾಣಿಗಳು ಇತರ ಪ್ರಾಣಿಗಳನ್ನು ತಿನ್ನುತ್ತವೆ. ಉದಾಹರಣೆಗೆ, ಒಂದು ಸರಳ ಆಹಾರ ಸರಪಳಿಯು ಮರಗಳು ಮತ್ತು ಪೊದೆಗಳು, (ಮರಗಳು ಮತ್ತು ಪೊದೆಗಳನ್ನು ತಿನ್ನುವ) ಜಿರಾಫೆಗಳು, ಮತ್ತು (ಜಿರಾಫೆಗಳನ್ನು ತಿನ್ನುವ) ಸಿಂಹಗಳನ್ನು ಸಂಬಂಧಿಸುತ್ತದೆ.
  • ಈ ಸರಪಳಿಯಲ್ಲಿ ಪ್ರತಿ ಕೊಂಡಿಯು ಮುಂದಿನ ಕೊಂಡಿಗೆ ಆಹಾರವಾಗಿದೆ. ಒಂದು ಆಹಾರ ಸರಪಳಿಯು ಯಾವಾಗಲೂ ಸಸ್ಯ ಜೀವನದಿಂದ ಆರಂಭವಾಗುತ್ತದೆ ಮತ್ತು ಪ್ರಾಣಿಗಳಿಂದ ಕೊನೆಗೊಳ್ಳುತ್ತದೆ. ಸಸ್ಯಗಳು ಸೂರ್ಯನ ಬೆಳಕಿನ ಶಕ್ತಿಯನ್ನು ಬಳಸಿ ಇಂಗಾಲದ ಡೈಆಕ್ಸೈಡ್ ಮತ್ತು ನೀರಿನಿಂದ ಆಹಾರವನ್ನು (ಸಕ್ಕರೆ) ಉತ್ಪಾದಿಸುತ್ತವೆ, ಹಾಗಾಗಿ ಸಸ್ಯಗಳಿಗೆ ಉತ್ಪಾದಕರು ಎಂದು ಕರೆಯಲಾಗುತ್ತದೆ. ಸಸ್ಯಗಳು ಆಹಾರವನ್ನು ತಯಾರಿಸುವ ಪ್ರಕ್ರಿಯೆಗೆ ದ್ಯುತಿಸಂಶ್ಲೇಷಣೆ ಎಂದು ಕರೆಯಲಾಗುತ್ತದೆ.

ಭಕ್ಷಕಗಳಲ್ಲಿ ಮೂರು ಗುಂಪುಗಳಿವೆ[ಬದಲಾಯಿಸಿ]

  • ಭಕ್ಷಕರು ತಮ್ಮ ಆಹಾರವನ್ನು ಉತ್ಪಾದಿಸಲು ಸಾಧ್ಯವಿಲ್ಲ ಹಾಗಾಗಿ ಅವು ಸಸ್ಯಗಳು ಮತ್ತು/ಅಥವಾ ಇತರ ಪ್ರಾಣಿಗಳನ್ನು ತಿನ್ನಬೇಕು. ಭಕ್ಷಕಗಳಲ್ಲಿ ಮೂರು ಗುಂಪುಗಳಿವೆ. ಕೇವಲ ಸಸ್ಯಗಳನ್ನು ಸೇವಿಸುವ ಪ್ರಾಣಿಗಳಿಗೆ ಸಸ್ಯಾಹಾರಿ (ಅಥವಾ ಪ್ರಾಥಮಿಕ ಭಕ್ಷಕರು) ಎಂದು ಕರೆಯಲಾಗುತ್ತದೆ.
  1. ಇತರ ಪ್ರಾಣಿಗಳನ್ನು ಸೇವಿಸುವ ಪ್ರಾಣಿಗಳಿಗೆ ಮಾಂಸಾಹಾರಿಗಳು ಎಂದು ಕರೆಯಲಾಗುತ್ತದೆ.
  2. ಸಸ್ಯಹಾರಿಗಳನ್ನು ತಿನ್ನುವ ಮಾಂಸಾಹಾರಿಗಳಿಗೆ ಮಾಧ್ಯಮಿಕ ಭಕ್ಷಕರು ಎಂದು ಕರೆಯಲಾಗುತ್ತದೆ.
  3. ಇತರ ಮಾಂಸಾಹಾರಿಗಳನ್ನು ತಿನ್ನುವ ಮಾಂಸಾಹಾರಿಗಳಿಗೆ ತೃತೀಯ ಭಕ್ಷಕರು ಎಂದು ಕರೆಯಲಾಗುತ್ತದೆ.

ಉದಾಹರಣೆಗೆ, ಸಾಗರ ಆಹಾರ ಜಾಲದಲ್ಲಿ ತಿಮಿಂಗಲಗಳು ... ಸಸ್ಯಪ್ಲವಕಗಳು → ಸಣ್ಣ ಮೀನುಗಳು → ಸೀಲ್‍ಗಳು → ತಿಮಿಂಗಲಗಳು. ಪ್ರಾಣಿಗಳು ಮತ್ತು ಸಸ್ಯಗಳು ಎರಡನ್ನೂ ಸೇವಿಸುವ ಪ್ರಾಣಿ ಮತ್ತು ಮನುಷ್ಯರಿಗೆ ಸರ್ವಾಹಾರಿಗಳೆಂದು ಕರೆಯಲಾಗುತ್ತದೆ. ಇವುಗಳ ನಂತರ ಕೊಳೆಯುವ ವಸ್ತುಗಳನ್ನು ತಿನ್ನುವ ವಿಭಜಕಗಳಿವೆ (ಬ್ಯಾಕ್ಟೀರಿಯ ಹಾಗು ಶಿಲೀಂಧ್ರ). ಈ ವಿಭಜಕಗಳು ಕೊಳೆಯುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ ಮತ್ತು ಇದು ಪೌಷ್ಟಿಕಾಂಶಗಳಾಗಿ ಸಸ್ಯಗಳಿಂದ ಹೀರಲ್ಪಡಲು ಖನಿಜ ಲವಣಗಳನ್ನು ಮತ್ತೆ ಆಹಾರ ಸರಪಳಿಯೊಳಗೆ ಬಿಡುಗಡೆ ಮಾಡುತ್ತದೆ.

ಆಹಾರ ಸರಪಳಿಯಲ್ಲಿ ಶಕ್ತಿ ಮತ್ತೊಂದು ಕೊಂಡಿ[ಬದಲಾಯಿಸಿ]

  • ಆಹಾರ ಸರಪಳಿಯಲ್ಲಿ, ಶಕ್ತಿಯು ಒಂದು ಕೊಂಡಿಯಿಂದ ಮತ್ತೊಂದಕ್ಕೆ ರವಾನೆಯಾಗುತ್ತದೆ. ಒಂದು ಶಾಖಾಹಾರಿ ತಿಂದಾಗ, ಶಕ್ತಿಯ ಕೇವಲ ಒಂದು ಅಲ್ಪಭಾಗ ಹೊಸ ದೇಹ ರಾಶಿಯಾಗುತ್ತದೆ; ಉಳಿದ ಶಕ್ತಿ ತ್ಯಾಜ್ಯವಾಗಿ ಕಳೆದುಹೋಗುತ್ತದೆ ಅಥವಾ ಅದರ ದೇಹದ ಪ್ರಕ್ರಿಯೆಗಳನ್ನು (ಉದಾ, ಚಲನೆ, ಜೀರ್ಣಕ್ರಿಯೆ, ಸಂತಾನೋತ್ಪತ್ತಿ) ನಡೆಸಲು ಶಾಖಾಹಾರಿಯಿಂದ ಬಳಸಲ್ಪಡುತ್ತದೆ.
  • ಹಾಗಾಗಿ, ಮಾಂಸಾಹಾರಿಯು ಶಾಕಾಹಾರಿಯನ್ನು ತಿಂದಾಗ, ಒಟ್ಟು ಶಕ್ತಿಯ ಕೇವಲ ಒಂದು ಸಣ್ಣ ಪ್ರಮಾಣ ಮಾಂಸಾಹಾರಿಗೆ ಸಾಗಣೆಯಾಗುತ್ತದೆ. ಶಾಕಾಹಾರಿಯಿಂದ ಮಾಂಸಾಹಾರಿಗೆ ವರ್ಗಾಯಿಸಲ್ಪಟ್ಟ ಶಕ್ತಿಯ ಸ್ವಲ್ಪ ಭಾಗ "ವ್ಯರ್ಥ"ವಾಗುತ್ತದೆ ಅಥವಾ ಮಾಂಸಾಹಾರಿಯಿಂದ "ಬಳಸಲ್ಪಡುತ್ತದೆ". ಹಾಗಾಗಿ ಮಾಂಸಾಹಾರಿಯು ಬೆಳೆಯಲು ಸಾಕಷ್ಟು ಶಕ್ತಿ ಪಡೆಯಲು ಅನೇಕ ಸಸ್ಯಹಾರಿಗಳನ್ನು ತಿನ್ನಬೇಕಾಗುತ್ತದೆ.
  • ಪ್ರತಿ ಕೊಂಡಿಯಲ್ಲಿ ದೊಡ್ಡ ಪ್ರಮಾಣದ ಶಕ್ತಿ ಕಳೆದುಹೋಗುವುದರಿಂದ, ವರ್ಗಾವಣೆಯಾಗುವ ಶಕ್ತಿಯ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಯಾವುದೇ ಜೀವಿಯು ಸತ್ತಾಗ, ಅಂತಿಮವಾಗಿ ಅದು (ರಣಹದ್ದುಗಳು, ಹುಳುಗಳು ಮತ್ತು ಏಡಿಗಳಂತಹ) ವಿಶೀರ್ಣಾಹಾರಿಗಳಿಂದ ತಿನ್ನಲ್ಪಡುತ್ತದೆ ಮತ್ತು (ಹೆಚ್ಚಾಗಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಂತಹ) ವಿಭಜಕಗಳಿಂದ ವಿಭಜಿಸಲ್ಪಡುತ್ತದೆ, ಮತ್ತು ಶಕ್ತಿಯ ವಿನಿಮಯ ಮುಂದುವರಿಯುತ್ತದೆ.
  • ಅವುಗಳ ಆಹಾರ ಭಿನ್ನವಾಗುವುದರಿಂದ ಆಹಾರ ಸರಪಳಿಯಲ್ಲಿ ಕೆಲವು ಜೀವಿಗಳ ಸ್ಥಾನ ಬದಲಾಗಬಹುದು. ಉದಾಹರಣೆಗೆ, ಕರಡಿ ಹಣ್ಣುಗಳನ್ನು ತಿನ್ನುವಾಗ ಅದು ಪ್ರಾಥಮಿಕ ಭಕ್ಷಕನಂತೆ ಕೆಲಸ ಮಾಡುತ್ತದೆ. ಒಂದು ಕರಡಿ ಸಸ್ಯ ತಿನ್ನುವ ದಂಶಕಗಳನ್ನು ತಿಂದಾಗ, ಅದು ದ್ವಿತೀಯ ಭಕ್ಷಕನಂತೆ ಕೆಲಸ ಮಾಡುತ್ತದೆ. ಕರಡಿಯು ಸಾಲ್ಮನ್ ತಿಂದಾಗ, ಅದು ತೃತೀಯ ಭಕ್ಷಕನಂತೆ ಕೆಲಸ ಮಾಡುತ್ತದೆ (ಏಕೆಂದರೆ ಸಾಲ್ಮನ್ ದ್ವಿತೀಯ ಭಕ್ಷಕ, ಸಾಲ್ಮನ್ ಹೆರ್ರಿಂಗ್ ತಿನ್ನುತ್ತದೆ, ಹೆರ್ರಿಂಗ್ ಜ಼ೂಪ್ಲಾಂಕ್ಟಾನ್ ತಿನ್ನುತ್ತದೆ, ಜ಼ೂಪ್ಲಾಂಕ್ಟಾನ್ ಸಸ್ಯಪ್ಲವಕಗಳನ್ನು ತಿನ್ನುತ್ತದೆ, ಸಸ್ಯಪ್ಲವಕ ತನ್ನ ಆಹಾರವನ್ನು ಸೂರ್ಯನ ಬೆಳಕಿನಿಂದ ತಯಾರಿಸುತ್ತದೆ).[೨]

ಆಹಾರ ಜಾಲ ಜೀವಿಗಳ ಸಂಖ್ಯೆಗಳು[ಬದಲಾಯಿಸಿ]

  • ಯಾವುದೇ ಆಹಾರ ಜಾಲದಲ್ಲಿ, ಒಂದು ಜೀವಿಯು ಮತ್ತೊಂದನ್ನು ತಿಂದಾಗ ಪ್ರತಿ ಬಾರಿಯೂ ಶಕ್ತಿಯು ಕಳೆದುಹೋಗುತ್ತದೆ. ಈ ಕಾರಣದಿಂದಾಗಿ, ಸಸ್ಯಾಹಾರಿಗಳಿಗಿಂತ ಹೆಚ್ಚು ಸಸ್ಯಗಳು ಇವೆ. ಪರಪೋಷಿಗಳಿಗಿಂತ ಹೆಚ್ಚು ಸ್ವಪೋಷಿಗಳಿವೆ, ಮತ್ತು ಮಾಂಸಾಹಾರಿಗಳಿಗಿಂತ ಹೆಚ್ಚು ಸಸ್ಯಾಹಾರಿಗಳಿವೆ.
  • ಪ್ರಾಣಿಗಳ ಮಧ್ಯೆ ತೀವ್ರ ಸ್ಪರ್ಧೆಯಿದ್ದರೂ, ಪರಸ್ಪರಾವಲಂಬನೆಯೂ ಇದೆ. ಒಂದು ಪ್ರಜಾತಿಯು ಅಳಿದು ಹೋದಾಗ, ಬೇರೆ ಪ್ರಜಾತಿಗಳ ಸಂಪೂರ್ಣ ಸರಪಣಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಅನಿರೀಕ್ಷಿತ ಪರಿಣಾಮಗಳನ್ನು ಹೊಂದಿರಬಹುದು.

ಸಂತುಲನ[ಬದಲಾಯಿಸಿ]

  • ಒಂದು ಸಮುದಾಯದಲ್ಲಿ ಮಾಂಸಾಹಾರಿಗಳ ಸಂಖ್ಯೆ ಹೆಚ್ಚಾದಂತೆ, ಅವು ಹೆಚ್ಚೆಚ್ಚು ಶಾಕಾಹಾರಿಗಳನ್ನು ತಿನ್ನುತ್ತವೆ ಮತ್ತು ಇದರಿಂದ ಶಾಕಾಹಾರಿಗಳ ಸಂಖ್ಯೆ ಕಡಿಮೆಯಾಗುತ್ತದೆ. ನಂತರ ತಿನ್ನಲು ಸಸ್ಯಹಾರಿಗಳನ್ನು ಹುಡುಕುವುದು ಮಾಂಸಾಹಾರಿಗಳಿಗೆ ಹೆಚ್ಚು ಕಷ್ಟವಾಗುತ್ತದೆ, ಮತ್ತು ಮಾಂಸಾಹಾರಿಗಳ ಸಂಖ್ಯೆ ಕಡಿಮೆಯಾಗುತ್ತದೆ.
  • ಈ ರೀತಿಯಲ್ಲಿ, ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು ಒಂದು ಸ್ಥಿರ ಸಮತೋಲನದಲ್ಲಿ ಇರುತ್ತವೆ, ಮತ್ತು ಪ್ರತಿಯೊಂದು ಕೂಡ ಇತರರ ಸಂಖ್ಯೆಯನ್ನು ಸೀಮಿತಗೊಳಿಸುತ್ತವೆ. ಇದೇ ರೀತಿಯ ಸಮತೋಲನ ಸಸ್ಯ ಮತ್ತು ಸಸ್ಯಾಹಾರಿಗಳ ನಡುವೆ ಇರುತ್ತದೆ.

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಆಹಾರ ಸರಪಳಿಯಲ್ಲಿ ವನ್ಯಜೀವಿಗಳ ಪಾತ್ರ in kannada

ಉಲ್ಲೇಖಗಳು[ಬದಲಾಯಿಸಿ]

  1. "ಆಹಾರ ಸರಪಳಿ".
  2. "ಆಹಾರ ಸರಪಳಿ". Archived from the original on 2016-01-15. Retrieved 2016-01-11.