ವಿಷಯಕ್ಕೆ ಹೋಗು

ಆಸ್ಟ್ರಿಕ್ ಭಾಷಾ ಪರಿವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತ, ಆಗ್ನೇಯ ಏಷ್ಯ ಮತ್ತು ಶಾಂತ ಸಾಗರದ ಕೆಲವು ದ್ವೀಪಗಳಲ್ಲಿ ಅಲ್ಲಲ್ಲಿ ಚದುರಿ ಹೋದ ಕೆಲವು ಭಾಷೆಗಳು ಆಸ್ಟ್ರಿಕ್ ಎನ್ನುವ ಭಾಷಾ ಪರಿವಾರಕ್ಕೆ ಸೇರುತ್ತವೆ. ಈ ಪರಿವಾರದ ವ್ಯಾಪ್ತಿ ಪಂಜಾಬಿನಿಂದ ನ್ಯೂಜಿಲೆಂಡ್ ವರೆಗೆ ಇದೆ. ಜನಸಂಖ್ಯೆಯ ದೃಷ್ಟಿಯಿಂದ ದೊಡ್ಡದಾಗಿರದಿದ್ದರೂ ಈ ಜನಾಂಗದವರು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದಾರೆ. ಭಾರತದ ಆದಿವಾಸಿಗಳ ಆಡುಮಾತಾಗಿರುವ ಮುಂಡ ವರ್ಗದ ಹದಿನೈದಕ್ಕೂ ಹೆಚ್ಚಿನ ಭಾಷೆಗಳು ಭಾರತದ ಆದಿವಾಸಿ ಭಾಷೆಗಳಲ್ಲಿ ಅತಿ ಪ್ರಾಚೀನ ಭಾಷೆಗಳಾಗಿವೆ. ಹಿಂದೆ ಕೋಲ್ ಅಥವಾ ಕೊಲರಿಯನ್ ಎಂದು ಕರೆಯಲ್ಪಡುತ್ತಿದ್ದ ಈ ಭಾಷೆಗಳನ್ನು ಆಗ್ನೇಯ ಏಷ್ಯದ ಭಾಷೆಗಳೊಡನೆ ಹೋಲಿಸಿ ಅವು ಆಸ್ಟ್ರಿಕ್ ಎನ್ನುವ ಒಂದೇ ಕುಟುಂಬಕ್ಕೆ ಸೇರಿದವುಗಳೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಈ ಕುಟುಂಬದಲ್ಲಿ ಆಸ್ಟ್ರೋನೇಷ್ಯನ್ ಮತ್ತು ಆಸ್ಟ್ರೋ ಏಷ್ಯಾಟಿಕ್ ಎಂಬ ಎರಡು ಪ್ರಧಾನ ಶಾಖೆಗಳಿವೆ.

ಆಸ್ಟ್ರೋನೇಷ್ಯನ್ ಶಾಖೆ

[ಬದಲಾಯಿಸಿ]

ಬರ್ಮ, ಸಯಾಂ, ಇಂಡೋಚೀನ, ಮಡಗಾಸ್ಕರ್, ಫಾರ್ಮೋಸಾ, ಫಿಲಿಫೈನ್, ಮಲಯ, ಜಾವಾ ಮುಂತಾದೆಡೆಗಳಲ್ಲಿ ಪ್ರಚಾರದಲ್ಲಿರುವ ಮೋನ್-ಖ್ಮೇರ್, ವಿಯಟ್ನಾಮಿಸ್, ಮಡಗಾಸಿ, ತಗಲ, ಮಲಯನ್, ಜಾವಾನೀಸ್, ಪೋಲಿನೇಷ್ಯನ್ ಇತ್ಯಾದಿ ಭಾಷೆಗಳು ಈ ಶಾಖೆಗೆ ಸೇರಿವೆ. ಭೌಗೋಲಿಕವಾಗಿ ಇವುಗಳನ್ನು ಇಂಡೋನೇಷ್ಯನ್, ಮಲನೇಷ್ಯನ್ ಮತ್ತು ಪೋಲಿನೇಷ್ಯನ್ ಎಂದು ವಿಂಗಡಿಸಬಹುದು. ಒಂದು ಕಾಲದಲ್ಲಿ ಮೋನ್-ಖ್ಮೇರ್ ಭಾಷೆಗಳನ್ನಾಡುವವರು ಇಂಡೋ-ಚೀನವನ್ನು ಆಳುತ್ತಿದ್ದರು. ಹನ್ನೊಂದನೆಯ ಶತಮಾನದ ಮೋನ್ ಶಿಲಾ ಶಾಸನಗಳೂ ಏಳನೆಯ ಶತಮಾನದ ಖ್ಮೇರ್ ಶಾಸನಗಳೂ ದೊರೆತಿವೆ. ಈಗ ಈ ಭಾಷೆಗಳನ್ನಾಡುವವರೆಂದರೆ ಬರ್ಮ, ಸಯಾಂ ಮತ್ತು ಪೂರ್ವಭಾರತದ ಕೆಲವು ಆದಿವಾಸಿಗಳು ಮಾತ್ರ. ಮಲಯನ್ ಭಾಷೆಯೂ ಬಹಳ ಪ್ರಾಚೀನವಾಗಿದ್ದು ಅದರಲ್ಲಿ ಹದಿಮೂರನೆಯ ಶತಮಾನದಿಂದೀಚಿನ ಸಾಹಿತ್ಯ ದೊರೆಯುತ್ತದೆ. ಜಾವಾನೀಸ್ ಕೂಡ ಈ ಶಾಖೆಯ ಒಂದು ಪ್ರಸಿದ್ಧ ಭಾಷೆ. ಇಸ್ಲಾಂ ಮತ್ತು ಹಿಂದೂ ಧರ್ಮದ ಸಂಪರ್ಕದಿಂದಾಗಿ ಅರಬ್ಬೀ ಮತ್ತು ಸಂಸ್ಕೃತ ಭಾಷೆಯ ಪ್ರಭಾವ ಈ ಭಾಷೆಗಳಲ್ಲಿ ಕಂಡುಬರುತ್ತದೆ.

ಆಸ್ಟ್ರೋ ಏಷ್ಯಾಟಿಕ್ ಶಾಖೆ

[ಬದಲಾಯಿಸಿ]

ಭಾರತದಲ್ಲಿ ಆರ್ಯ, ದ್ರಾವಿಡ ಹಾಗೂ ಟಿಬೆಟೋ ಬರ್ಮನ್ ಭಾಷೆಗಳನ್ನಾಡುವವರಲ್ಲದೆ ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳನ್ನಾಡುವ ಜನರೂ ಸುಮಾರು ಅರುವತ್ತು ಲಕ್ಷಕ್ಕೆ ಮೇಲೆಯೇ ಇದ್ದಾರೆ. ಈ ಶಾಖೆಯನ್ನು ಮುಂಡ, ಖಾಸಿ ಮತ್ತು ನಿಕೋಬರೀಸ್ ಎಂಬ ಉಪ ಶಾಖೆಗಳಾಗಿ ವಿಂಗಡಿಸಬಹುದು. ಬಂಗಾಳ, ಬಿಹಾರದ ಪರ್ವತಶ್ರೇಣಿಗಳು, ಒರಿಸ್ಸದ ಕಾಡುಗಳು, ಮಧ್ಯಪ್ರದೇಶದ ಗಡಿ ಪ್ರದೇಶಗಳು, ಉತ್ತರ ಪ್ರದೇಶಗಳಲ್ಲಿ ಪರ್ವತ ತಪ್ಪಲುಗಳು ಮತ್ತು ಮದ್ರಾಸಿನ ಗಂಜಾಂ ಇತ್ಯಾದಿ ಪ್ರದೇಶಗಳಲ್ಲಿ ಮುಂಡ ವರ್ಗಕ್ಕೆ ಸೇರಿದ ಮುಂಡಾರಿ, ಸಂತಾಲಿ, ಹೋ, ಖಡಿಯ, ಭೊಮಿಜ್, ಕೊಕು, ಸವೋರ, ಗದಬ, ಕೊತ, ಜುವಂಗ್, ಕೊರವ, ಬಿರ್ಜಿಯಾ, ಅಸುರಿ ಮುಂತಾದ ಭಾಷೆಗಳು ಪ್ರಚಾರದಲ್ಲಿವೆ. ಅಸ್ಸಾಂ ಪ್ರದೇಶದ ಬೆಟ್ಟಗಳಲ್ಲಿ ಖಾಸಿ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ನಿಕೋಬರೀಸ್ ಪ್ರಚಾರದಲ್ಲಿವೆ. ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಈ ಭಾಷೆಗಳ ವೈಜ್ಞಾನಿಕ ಅಧ್ಯಯನ ನಡೆಸಿ ಇವುಗಳ ಪರಸ್ಪರ ಸಂಬಂಧವನ್ನು ತೋರಿಸಿಕೊಟ್ಟು ಇವು ಒಂದೇ ಬುಡಕಟ್ಟಿಗೆ ಸೇರಿದವೆಂದು ಸಾಧಿಸಿದವರಲ್ಲಿ ಫಾದರ್ ಷ್ಮಿಟ್ ಮತ್ತು ಸ್ಪೆನ್ ಕೊನೋ ಅವರ ಹೆಸರನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ವಿದ್ವಾಂಸರು ಮಾಡಿದ ವರ್ಗೀಕರಣವೇ ಸಾಧುವಾದುವೆಂಬುದರಲ್ಲಿ ವಿದ್ವಾಂಸರ ಮತಭೇದವಿದೆ. ಅನ್ನಮೀಸ್, ವಿಯಟ್ನಾಮೀಸ್ ಮುಂತಾದ ಕೆಲವು ಭಾಷೆಗಳು ಸಿನೋ-ಟಿಬೆಟನ್ ಪರಿವಾರಕ್ಕೆ ಸೇರಿದವುಗಳೆಂದು ಪರಿಗಣಿಸುವ ಪ್ರಯತ್ನವೂ ನಡೆದಿದೆ.

ಮಧ್ಯ ಮತ್ತು ಪೂರ್ವ ಭಾರತದಲ್ಲಿ ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳನ್ನಾಡುವ ಆದಿವಾಸಿಗಳ ಸಂಖ್ಯೆ ಮತ್ತು ಭಾಷೆಗಳ ಹೆಸರುಗಳು ಈ ಕೆಳಗಿನಂತಿವೆ : ಸಂತಾಲಿ 32,47,058; ಮುಂಡಾರಿ 7,37,037; ಹೋ 6,48,359; ಖಡಿಯ 1,77,159; ಭೂಮಿಜ್ 1,42,003; ಕೊರ್ಕು 2,20,242; ಸವೋರ 2,65,721; ಗದಬ 40,163; ಕೊತ 31,724, ಜುವಂಗ್ 15,795; ಕೊರವ 17,720; ಬಿರ್ಜಿಯಾ 2,395 ; ಅಸುರಿ 4,540; ತುರಿ 1,562; ಖಾಸೀ 3,64,063; ನಿಕೋಬರೀಸ್ 13,936. ಇತರ ಕೆಲವು ಉಪ ಭಾಷೆಗಳನ್ನು ಸೇರಿಸಿ ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳನ್ನಾಡುವವರ ಒಟ್ಟು ಸಂಖ್ಯೆ (ಭಾರತದಲ್ಲಿ) 61,92,495.

ಭಾಷಾಲಕ್ಷಣಗಳು, ವಿಶೇಷತೆಗಳು

[ಬದಲಾಯಿಸಿ]

ಆಶ್ಲಿಷ್ಟಯೋಗಾತ್ಮಕಗಳಾದ ಈ ಭಾಷೆಗಳಲ್ಲಿ ಸೂಕ್ಷ್ಮವಾದ ಅರ್ಥಘಟಕಗಳನ್ನು ದ್ಯೋತಿಸಬಲ್ಲ ಮತ್ತು ಒಂದರ ಮೇಲೊಂದರಂತೆ ಅಂಟಿಕೊಳ್ಳುವ ಪ್ರತ್ಯಯ ಸಂಪತ್ತನ್ನು ಕಾಣಬಹುದು. ಉಪಸರ್ಗ ಪ್ರತ್ಯಯಗಳು ಮಾತ್ರವಲ್ಲದೆ ಧಾತುವಿನ ಮಧ್ಯದಲ್ಲಿ ಸೇರಿಕೊಳ್ಳುವ ಅಂತಃಪ್ರತ್ಯಯಗಳೂ ಇವೆ. ಉದಾ: ತಗಲ ಭಾಷೆಯಲ್ಲಿ ಸುಲತ್=ಬರೆಯುವುದು, ಸಿನುಲತ್ರ=ಬರೆಯಲಿಕ್ಕೆ, ಸುಂಗ್ಮುಲತ್=ಬರೆದನು. ಸಿನುಲತನ್ = ಬರೆಯಲ್ಪಟ್ಟಿತು. ಧಾತುಗಳು ಸಾಮಾನ್ಯವಾಗಿ ದ್ವ್ಯಕ್ಷರಿಗಳಾಗಿದೆ. ಸಂದರ್ಭಾನುಸಾರವಾಗಿ ಈ ಧಾತುಗಳು ನಾಮಧಾತುಗಳಾಗಿಯೂ ಕ್ರಿಯಾಧಾತುಗಳಾಗಿಯೂ ಉಪಯೋಗಿಸಲ್ಪಡುತ್ತವೆ. ಕ್ರಿಯಾಪದಗಳ ರಚನೆ ಬಹಳ ಕ್ಷಿಷ್ಟವಾಗಿದ್ದು ಬಿಹಾರಿ ಭಾಷೆಯ ಕ್ಲಿಷ್ಟವಾದ ಕ್ರಿಯಾರಚನೆಗೆ ಈ ನೆರೆಹೊರೆಯ ಭಾಷೆಗಳ ಪ್ರಭಾವವೇ ಕಾರಣ ಎನ್ನಲಾಗಿದೆ. ಸಂಬಂಧಸೂಚಕ ಸರ್ವನಾಮಯುಕ್ತ ವಾಕ್ಯಾಂಶಗಳ ಬದಲಾಗಿ ಕೃದಂತ ವಿಶೇಷಣಗಳ ಬಳಕೆಯನ್ನು ಈ ಭಾಷೆಗಳಲ್ಲಿ ಕಾಣಬಹುದು. ಸಂಸ್ಕೃತದಲ್ಲಿರುವಂತೆ ಏಕವಚನ ದ್ವಿವಚನ ಬಹುವಚನಗಳೆಂಬ ಮೂರು ವಚನಗಳಿವೆ. ಉದಾ: ಸಂತಾಲಿ ಭಾಷೆಯಲ್ಲಿ ಹಾಡ್=ಮನುಷ್ಯ, ಹಾಡ್ಕೀನ್ = ಇಬ್ಬರು ಮನುಷ್ಯರು, ಹಾಡ್ ಕೋ = ಎರಡಕ್ಕಿಂತ ಹೆಚ್ಚು ಮನುಷ್ಯರು. ಎರಡು ಲಿಂಗಗಳಿವೆ. ನಾಮಪದಗಳು ಸಜೀವ ವಾಚಕ ಮತ್ತು ನಿರ್ಜೀವ ವಾಚಕಗಳೆಂದು ಎರಡು ಭಾಗವಾಗಿ ವಿಂಗಡಿಸಲ್ಪಡುತ್ತವೆ. ನಿರ್ಜೀವ ವಾಚಕಗಳು ಸಾಮಾನ್ಯವಾಗಿ ಸ್ತ್ರೀಲಿಂಗಗಳಾಗಿರುತ್ತವೆ. ಲಿಂಗ ವಿವಕ್ಷೆಗೆ ಸ್ತ್ರೀ ಮತ್ತು ಪುರುಷವಾಚಕ ಪ್ರತ್ಯಯಗಳನ್ನು ಸೇರಿಸುತ್ತಾರೆ. ಕ್ರಿಯಾಪದದಲ್ಲಿ ಮಾತ್ರ ಲಿಂಗಭೇದವಿರುವುದಿಲ್ಲ. ಉತ್ತಮ ಪುರುಷ ಸರ್ವನಾಮದ ದ್ವಿವಚನ ಮತ್ತು ಬಹುವಚನದಲ್ಲಿ ಮಧ್ಯಮ ಪುರುಷ ಸಮಾವಿಷ್ಟ ಮತ್ತು ಅಸಮಾವಿಷ್ಟ (ಇನ್ಕ್ಲೊಸಿವ್ ಮತ್ತು ಎಕ್ಸಕ್ಲೊಸಿವ್) ಎಂಬ ಎರಡೆರಡು ರೂಪಗಳನ್ನು ಕಾಣಬಹುದು. ಉದಾಃ ಆಲೆ=ನಾವು (ಕೇಳುವವನನ್ನು ಸೇರಿಸಿ), ಆಬೋನ್ = ನಾವು (ಕೇಳುತ್ತಿರುವವನನ್ನು ಬಿಟ್ಟು) ಸಂಖ್ಯಾವಾಚಕಗಳು ಒಂದರಿಂದ ಹತ್ತು ಮತ್ತು ಇಪ್ಪತ್ತು-ಇಷ್ಟೆ. ಇವುಗಳ ಜೋಡಣೆಯಿಂದ ಬೇರೆ ಸಂಖ್ಯೆಗಳನ್ನು ಮಾಡಿಕೊಳ್ಳಬೇಕು. ಉದಾ: ಪೋನೆ ಆ=ನಾಲ್ಕು, ಗೈಲ್=ಹತ್ತು, ಇಸಿ=ಇವತ್ತು. ಗೈಲ್ ಖನ್ ಪೋನೆ ಆ=10+4=14. ಪೋನೆ ಆ ಇಸಿ=4x20=80. ಶಬ್ದಗಳ ಪುನರುಕ್ತಿಯಿಂದ ಅರ್ಥ ಪುಷ್ಟಿ ಅಥವಾ ಬಹುವಚನ ರೂಪಗಳು ದೊರೆಯುತ್ತವೆ. ಉದಾ: ದಲ್=ಹೊಡೆಯುವುದು. ದಲ್ ದಲ್ ಚೆನ್ನಾಗಿ ಹೊಡೆ. ರಜ=ರಾಜ. ರಜ ರಜ=ರಾಜರು. ಧ್ವನಿಗಳಲ್ಲಿ ಘೋಷ ಅಘೋಷ ಅಲ್ಪಪ್ರಾಣ ಮಹಾಪ್ರಾಣ ವ್ಯಂಜನಗಳಿವೆ. ಮಹಾಪ್ರಾಣಗಳಲ್ಲಿ ಮಹಾಪ್ರಾಣತ್ವ ಅಧಿಕವಾಗಿರುತ್ತದೆ. ಉಚ್ಛಾರಕ್ಕಿಂತ ಮೊದಲೇ ಕ್ಲಿಕ್ ಧ್ವನಿಯಂತೆ ಅಂತಃಸ್ಫೋಟವನ್ನು ಹೊಂದಿರುವ ಅರ್ಧ ವ್ಯಂಜನದಂಥ ಕೆಲವು ವಿಶಿಷ್ಟವಾದ ವರ್ಣಗಳೂ ಇವೆ. ಸ್ವರಾಘಾತ ಸಾಮಾನ್ಯವಾಗಿ ಮೊದಲಕ್ಷರದ ಮೇಲೂ ಎರಡನೆಯ ಅಕ್ಷರ ದೀರ್ಘವಾಗಿದ್ದರೆ ಎರಡನೆಯ ಅಕ್ಷರದ ಮೇಲೂ ಇರುತ್ತದೆ. ಭೌಗೋಲಿಕವಾಗಿ ಈ ಭಾಷೆಗಳು ದೂರ ದೂರ ಹೋಗಿ ಬೆಳೆದುದರಿಂದ ಇವುಗಳ ಎಷ್ಟೋ ಮೂಲ ಸಾಮ್ಯಗಳು ವ್ಯತ್ಯಾಸಗೊಂಡು ತುಂಬ ಮಾರ್ಪಾಟುಗಳಾಗಿವೆ.

ಅಧ್ಯಯನ ಮತ್ತು ಸಂಶೋಧನೆ

[ಬದಲಾಯಿಸಿ]

ಭಾರತ ಮತ್ತು ಆಗ್ನೇಯ ಏಷ್ಯದ ಪ್ರಾಗೈತಿಹಾಸಿಕ ಸಾಂಸ್ಕೃತಿಕ ಮತ್ತು ಮಾನವವಂಶ ವಿಜ್ಞಾನದ ಅಧ್ಯಯನಕ್ಕೆ ಮತ್ತು ಭಾಷೆಗಳ ಪುರ್ವಚರಿತ್ರೆಯ ಸಂಶೋಧನೆಗೆ ಈ ಭಾಷೆಗಳ ಅಧ್ಯಯನ ತುಂಬ ಫಲಕಾರಿಯಾಗಿದೆ. ಆರ್ಯರು ಮತ್ತು ದ್ರಾವಿಡರು ಭಾರತಕ್ಕೆ ವಲಸೆ ಬರುವುದಕ್ಕಿಂತ ಮುಂಚೆಯೇ ಮುಂಡ ಮೊದಲಾದ ಆಸ್ಟ್ರೋ-ಏಷ್ಯಾಟಿಕ್ ಭಾಷೆಗಳನ್ನಾಡುವ ಜನರು ಭಾರತದಲ್ಲಿದ್ದರಂತೂ ಆರ್ಯರು ಮತ್ತು ದ್ರಾವಿಡರು ಅವರನ್ನು ಕಾಡುಪ್ರದೇಶಗಳಿಗೆ ಹೊಡೆದೋಡಿಸಿದರೆಂದೂ ಅವರೊಡನುಂಟಾದ ಸಂಪರ್ಕದ ಪರಿಣಾಮವಾಗಿ ಭಾಷೆಗಳಲ್ಲಿಯೂ ಲೇವಾದೇವಿಯುಂಟಾಗಿ ಆರ್ಯ ಹಾಗೂ ದ್ರಾವಿಡಭಾಷೆಗಳ ಪ್ರಭಾವ ಈ ಆದಿವಾಸಿ ಭಾಷೆಗಳ ಮೇಲೆ ಬಿದ್ದಹಾಗೆಯೇ ಈ ಆದಿವಾಸಿ ಭಾಷೆಗಳೂ ವಲಸೆ ಬಂದವರ ಭಾಷೆಗಳ ಮೇಲೆ ಸಾಕಷ್ಟು ಪ್ರಭಾವ ಬೀರಿವೆಯೆಂದೂ ಇತ್ತೀಚಿನ ಸಂಶೋಧನೆಗಳಿಂದ ಕಂಡುಬಂದಿದೆ. ಶಬ್ದ ಸಂಪತ್ತಿನ ಮೇಲೆ ಮಾತ್ರವಲ್ಲದೆ ಆರ್ಯ ಮತ್ತು ದ್ರಾವಿಡ ಭಾಷೆಗಳ ವ್ಯಾಕರಣಾಂಶಗಳ ಮೇಲೂ ಮುಂಡ ಭಾಷೆಗಳು ಪ್ರಭಾವ ಬೀರಿವೆ. ಇಪ್ಪತ್ತರ ಘಟಕಗಳ ಮೂಲಕ ಗಣನೆ, ದ್ವಿವಚನದ ಪ್ರಯೋಗ, ಉತ್ತಮ ಪುರುಷ ಬಹುವಚನದ ಎರಡು ರೂಪಗಳು, ಸಜೀವ ಮತ್ತು ನಿರ್ಜೀವ ಶಬ್ದಗಳೆಂಬ ವರ್ಗೀಕರಣ, ಕ್ರಿಯಾರೂಪಗಳಲ್ಲಿ ಲಿಂಗವಿವಕ್ಷೆಯ ಲೋಪ, ಕ್ರಿಯಾ ರೂಪಗಳ ಕ್ಲಿಷ್ಟತೆ, ಕೃದಂತ ವಿಶೇಷಣಗಳ ಬಳಕೆ-ಇವು ಮುಂಡ ಭಾಷೆಗಳಿಂದ ಪ್ರಭಾವಿತವಾದ ಕೆಲವು ಭಾರತೀಯ ಭಾಷೆಗಳು ಎರವಲು ಪಡೆದ ಅಂಶಗಳಾಗಿವೆ. ವಿಶ್ವಾಸನೀಯವಾದ ವ್ಯುತ್ಪತ್ತಿ ಸಿಕ್ಕದಂಥ ಮತ್ತು ಇತರ ಭಾರತೀಯ ಭಾಷೆಗಳ ಧಾತುಗಳಲ್ಲಿ ಸಾಮ್ಯ ಕಾಣದಂಥ ಕೆಲವು ಇಂಡೋ ಆರ್ಯನ್ ಪದಗಳಿಗೆ ಈ ಆಸ್ಟ್ರೋ-ಏಷ್ಯಾಟಿಕ್ ಧಾತುಗಳೇ ಮೂಲ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸಂಶೋಧನೆ ಮುಂದುವರಿದಂತೆ ಈ ಸಾಮಾಜಿಕ ಸಂಪರ್ಕದ ಕುರುಹುಗಳು ಬೆಳಕಿಗೆ ಬರುತ್ತಿವೆ.