ಆಸ್ಟ್ರಕೋಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಧಿಪದಿ ವಂಶದ ಕ್ರಸ್ಟೇಷಿಯ ವರ್ಗದ ಒಂದು ಉಪವರ್ಗ. ಕಪ್ಪೆಚಿಪ್ಪಿನ ಹುಳುಗಳಂತಿರುವ ಈ ಉಪವರ್ಗದ ಪ್ರಾಣಿಗಳು ಸಿಹಿನೀರಿನಲ್ಲೂ ಕಡಲಿನಲ್ಲೂ ವಾಸಿಸುವ ತೇಲುಜೀವಿಗಳು. ಈಸುಪ್ರಾಣಿಗಳಾಗಿ ಕಡಲ ತಡಿಯಲ್ಲಿ ವಾಸಿಸುತ್ತವೆ. ಕೆಲವು ಪರತಂತ್ರ ಜೀವಿಗಳು. ಇನ್ನು ಕೆಲವು ಅಪ್ಪುಸಸ್ಯಗಳ ಎಲೆಗಳಲ್ಲಿ ನಿಂತ ನೀರಿನಲ್ಲಿಯೇ ಇರುತ್ತವೆ. ಚಿಕ್ಕ ಕಠಿಣಚರ್ಮಿಗಳಾದ ಇವು ಸಾಮಾನ್ಯವಾಗಿ ಚಪ್ಪಟೆಯಾಗಿರು ತ್ತವೆ. ದೇಹದ ವಲಯಗಳು ನಿರ್ದಿಷ್ಟ ವಾಗಿ ಕಾಣುವುದಿಲ್ಲ. ಉದರಭಾಗ ಚಿಕ್ಕದು. ಇವುಗಳ ಆಹಾರದ ರೀತಿಯ ಬಗೆಗೆ ಹೆಚ್ಚು ತಿಳಿಯದು. ಇವು ಹೆಚ್ಚಾಗಿ ಸರ್ವಭಕ್ಷಕಗಳು. ಕೆಲವು ಮಾಂಸಾಹಾ ರಿಗಳು. ಇನ್ನು ಕೆಲವು ನೀರಿನ ಸಸ್ಯಗಳನ್ನು ತಿಂದು ಜೀವಿಸುತ್ತವೆ. ಈ ಉಪವರ್ಗದ ಪ್ರಾಣಿಗಳು ಆರ್ಥಿಕ ದೃಷ್ಟಿಯಿಂದ ಬಹಳ ಮುಖ್ಯ. ಇವುಗಳ ದೇಹ ಮತ್ತು ಉಪಾಂಗಗಳು ಕೀಲು ಇರುವ ಎರಡು ಚಿಪ್ಪುಗಳ ಒಳಗೆ ಅಡಕವಾಗಿವೆ. ಇವುಗಳಲ್ಲಿ ಕ್ರಸ್ಟೇಷಿಯದಲ್ಲಿಯೇ ಅತ್ಯಂತ ಕಡಿಮೆ ಸಂಖ್ಯೆಯ ಉಪಾಂಗಗಳಿವೆ. ಅಂದರೆ ನಾಲ್ಕು ಜೊತೆಗಿಂತ ಹೆಚ್ಚು ಇರಲಾರವು. ಕೆಲವಕ್ಕೆ ಮುಖ್ಯಾಂಗಗಳ ಹಿಂದೆ ಎರಡೇ ಜೊತೆ ಕಾಲುಗಳಿರಬಹುದು. ಎರಡು ಜೊತೆ ಕುಡಿಮೀಸೆಗಳನ್ನು (ಆಂಟಿನ್ಯೂಲ್ ಮತ್ತು ಆ್ಯಂಟೆನ) ಈಸಲು, ತೆವಳಲು ಉಪಯೋಗಿಸಬಹುದು. ದವಡೆಗಳು (ಮ್ಯಾಂಡಿಬಲ್) ಅನೇಕಸಾರಿ ಕವಲೊಡೆದಿರುತ್ತವೆ ಅಥವಾ ಕಾಲುಗಳಂತಿರಬಹುದು. ಇವುಗಳ ಸಂತಾನೋತ್ಪತ್ತಿಯಲ್ಲಿ ಅನೇಕ ಗಮನಾರ್ಹ ಅಂಶಗಳಿವೆ. ಇವುಗಳಲ್ಲಿ ಪಿತ್ತರಹಿತ ಸಂತಾನೋತ್ಪತ್ತಿ (ಪಾರ್ಥನೊಜೆನಿಸಿಸ್) ಬಹಳ ಸಾಮಾನ್ಯ (ಸಾಮಾನ್ಯವಾಗಿ ಸಿಹಿನೀರು ಪ್ರಭೇದಗಳಲ್ಲಿ); ಈ ಪ್ರಬೇಧಗಳಲ್ಲಿ ಗಂಡುಗಳು ವಿರಳ. ಇದುವರೆಗೆ ಕೆಲವು ಜಾತಿಗಳಲ್ಲಿ ಗಂಡುಗಳನ್ನು ಗುರುತಿಸಿಯೇ ಇಲ್ಲ. ಸಿಪ್ರಿಸ್ ಎಂಬ ಒಂದು ಪ್ರಬೇಧವನ್ನು 30 ವರ್ಷಗಳ ಪರ್ಯಂತ ಸಂಶೋಧನಾಲಯದಲ್ಲಿ ಇಟ್ಟು ಬೆಳೆಸಿದರೂ ಗಂಡುಗಳು ಕಾಣಿಸಿಕೊಳ್ಳಲೇ ಇಲ್ಲ! ಗಂಡುಗಳಿದ್ದರೂ ಅವು ಉತ್ಪತ್ತಿಮಾಡುವ ರೇತ್ರಾಣುಗಳು ಪ್ರಬುದ್ಧಾವಸ್ಥೆಯ ರೂಪದಲ್ಲಿರುವುದಿಲ್ಲ. ಇದರಲ್ಲಿ ಬದುಕಿರುವ ಜೀವಿಗಳನ್ನು ನಾಲ್ಕು ಗಣಗಳಾಗಿ ವಿಂಗಡಿಸಬಹುದು: ಮೈಯೊಡೊಕೋಪ, ಕ್ಲಾಡೊಕೋಪ, ಪ್ಲಾಟಿಕೋಪ ಮತ್ತು ಪೋಡಕೋಪ. ಮೊದಲನೆಯ ಮೂರು ಗಣದ ಪ್ರಾಣಿಗಳು ಪುರ್ಣ ಕಡಲ ಪ್ರಾಣಿಗಳು. ಕೊನೆಯ ಗಣಕ್ಕೆ ಸಿಹಿನೀರಿನ ಪ್ರಾಣಿಗಳು ಸೇರುತ್ತವೆ.