ಆಷಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಶ್ಚಿಮ ಆಫ್ರಿಕದಲ್ಲಿ ಬ್ರಿಟಿಷರಿಗೆ ಸೇರಿದ ಗೋಲ್ಡ್ ಕೋಸ್ಟ್ ವಸಾಹತು ಪ್ರದೇಶದ ಮಧ್ಯಭಾಗದಲ್ಲಿರುವ ಒಂದು ಅರಣ್ಯಮಯ ಪ್ರಾಂತ್ಯ. ವಿಸ್ತೀರ್ಣ 63,141 ಚ. ಕಿಮೀ. ಜನಸಂಖ್ಯೆ 3,812,950 (2010). ಮುಖ್ಯ ಪಟ್ಟಣ ಕುಮಾಸಿ. 150-450ಮೀ ಎತ್ತರವಿರುವ ಏರುತಗ್ಗುಗಳ ಪ್ರಸ್ಥಭೂಮಿ. ಉಷ್ಣವಲಯದ ವಾಯುಗುಣವಿರುವುದರಿಂದ 5000 ಗಿಂತ ಹೆಚ್ಚು ಮಳೆಯಾಗುವುದು. ಮಹಾಗನಿ, ತಾಳೆಜಾತಿಯ ಕೋಲಾಮರಗಳು, ರಬ್ಬರ್ ಮರಗಳು ಇಲ್ಲಿನ ಮುಖ್ಯ ಅರಣ್ಯೋತ್ಪನ್ನಗಳು. ವ್ಯವಸಾಯಕ್ಕಾಗಿ ಕಾಡುಗಳನ್ನು ಬಯಲುಮಾಡಿ ಬತ್ತ, ಮೆಕ್ಕೆಜೋಳ, ಕಕಾವೊ (ಕೋಕೊ), ಕೆಸ್ಸಾವ, ಬಾಳೆಹಣ್ಣು, ಹತ್ತಿ, ಎಣ್ಣೆ ತಾಳೆ ಮುಂತಾದುವನ್ನು ಬೆಳೆಯುತ್ತಾರೆ. ಭೂಮಿ ಫಲವತ್ತಾಗಿದೆ. ವ್ಯವಸಾಯ ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಕಾಫಿತೋಟಗಳು ಹೆಚ್ಚುತ್ತಿವೆ. ಕುಮಾಸಿಯ ಬಳಿ ಚಿನ್ನದ ನಿಕ್ಷೇಪವಿದೆ. ಚಿನ್ನದ ಆಭರಣ ತಯಾರಿಸುವುದರಲ್ಲಿ ಇಲ್ಲಿಯ ಜನ ಕುಶಲರು. ಸ್ವಾತಂತ್ರ್ಯಪ್ರಿಯರಾದ ಇಲ್ಲಿನ ಆಕಾನ್ ಪಂಗಡದ ದಿಟ್ಟ ನೀಗ್ರೊ ಜನರ ರಾಜಕೀಯ ಚಟುವಟಿಕೆಗಳು 18 ಮತ್ತು 19ನೆಯ ಶತಮಾನಗಳಲ್ಲಿ ಬಲಗೊಂಡವು. ಆಗ ಬ್ರಿಟಿಷರು ದಾಳಿಮಾಡಿ ಆ ಪ್ರದೇಶವನ್ನು ವಶಪಡಿಸಿಕೊಂಡು (1935) ತಮ್ಮ ಗೋಲ್ಡ್ ಕೋಸ್ಟ್ ವಸಾಹತು ಪ್ರದೇಶಕ್ಕೆ ಸೇರಿಸಿಕೊಂಡರು.

"https://kn.wikipedia.org/w/index.php?title=ಆಷಂತಿ&oldid=615159" ಇಂದ ಪಡೆಯಲ್ಪಟ್ಟಿದೆ