ಆಶ್ರಯದಾತ ಸಸ್ಯ
ಪರಾವಲಂಬಿ ಅಥವಾ ಪರತಂತ್ರ ಜೀವಿಗಳಿಗೆ ಆಶ್ರಯವೀಯುವ ಸಸ್ಯ (ಹೋಸ್ಟ್). ಆತಿಥೇಯ ಸಸ್ಯ ಎಂದು ಕೂಡ ಕರೆಯಬಹುದು. ಸಸ್ಯದಂತೆ ಪ್ರಾಣಿಯೂ ಪ್ರಾಣಿಗೆ ಆಶ್ರಯದಾತವಾಗಿರಬಹುದು. ಆಶ್ರಯವೀಯುವ ಯಾವ ಜೀವಿಯೂ ಇತರ ಜೀವಿಗಳನ್ನು ಅವಲಂಬಿಸದೆ ಜೀವಿಸದು. ಸಸ್ಯವರ್ಗದ ಎಲ್ಲ ವಿಭಾಗಗಳಲ್ಲಿಯೂ ಈ ತರದ ಪರಾವಲಂಬಿಗಳಿವೆ. ಕೆಲವಂತೂ ಸಂಪುರ್ಣವಾಗಿ ಆಶ್ರಯದಾತರನ್ನೇ ಅವಲಂಬಿಸಿ ಕೊನೆಗೆ ಅದನ್ನು ಕ್ರಮೇಣ ನಾಶಪಡಿಸುತ್ತವೆ. ಇನ್ನೂ ಕೆಲವು ಸ್ವಲ್ಪಮಟ್ಟಿಗೆ ಸ್ವತಂತ್ರವಾಗಿ ತಮ್ಮ ಕಾಲಮೇಲೆ ನಿಂತು, ಇನ್ನು ಕೆಲವು ಕೊಂಚಮಟ್ಟಿಗೆ ಆಶ್ರಯದಾತದ ನೆರವು ಪಡೆದು ಜೀವನವನ್ನು ಸಾಗಿಸುತ್ತವೆ.
ಸಸ್ಯವರ್ಗದ ಕಸ್ಕ್ಯೂಟಾ ಮತ್ತು ಕ್ಯಾಸಿತ ಎಂಬ ಪರಿಪುರ್ಣ ಪರಾವಲಂಬಿಗಳು ತಮ್ಮ ಆಶ್ರಯದಾತದ ಸರ್ವಸ್ವವನ್ನೂ ಅಪಹರಿಸಿ ಕ್ರಮೇಣ ಅವನ್ನು ಸಂಪುರ್ಣವಾಗಿ ನಾಶಮಾಡುತ್ತವೆ. ಬದನಿಕೆ (ಲೊರಾಂಥಸ್) ಜಾತಿಯ ಗಿಡಗಳೂ ಗಂಧದ ಗಿಡದ ಜಾತಿಯ ಗಿಡಗಳೂ ಸಂಪುರ್ಣ ಪರಾವಲಂಬಿಗಳಲ್ಲ. ಆಶ್ರಯದಾತರನ್ನು ಸಂಪುರ್ಣವಾಗಿ ಅವಲಂಬಿಸದೆ, ಅವುಗಳಿಂದ ನೀರು ಮತ್ತು ಲವಣಗಳನ್ನು ಮಾತ್ರ ಪಡೆದು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಂಡು ಜೀವನ ನಡೆಸುವುವು. ಈ ಸಂದರ್ಭದಲ್ಲಿ ಆಶ್ರಯದಾತ ಸಸ್ಯಗಳ ಪಾತ್ರ ಬಹಳ ಮಹತ್ತರವಾದದ್ದೂ ಅವುಗಳ ತ್ಯಾಗ ಬಹಳ ಬೆಲೆಯುಳ್ಳದ್ದೂ ಆಗಿ ತೋರುವುದು. ತಾವು ಕಷ್ಟಪಟ್ಟು ತಯಾರಿಸಿದ ಮತ್ತು ಮುಂದಿನ ಉಪಯೋಗಕ್ಕೆಂದು ಶೇಖರಿಸಿದ ಬೆಲೆಯುಳ್ಳ ಆಹಾರ ಪದಾರ್ಥಗಳನ್ನು ಪರಾವಲಂಬಿಗಳಿಗೆ ಕೊಟ್ಟು ತಾವು ಕ್ರಮೇಣ ಬಡವಾಗುವುವು. ಶ್ರೀಗಂಧದ ಗಿಡದ ಉದಾಹರಣೆ ಪರಿಶೀಲಿಸಬಹುದು. ಈ ಮರ ಹುಲ್ಲಿನ ಬೇರುಗಳನ್ನು ಆಶ್ರಯಿಸಿ ಬೆಳೆಯುತ್ತದೆ. ತನ್ನ ಬೇರುಗಳಿಗೆ ಸ್ವತಃ ಭೂಮಿಯಿಂದ ಲವಣ, ಜಲ ಹೀರುವ ಶಕ್ತಿಯಿಲ್ಲ. ಆಶ್ರಯದಾತ ಇಲ್ಲದಿದ್ದರೆ ಗಂಧದ ಗಿಡ ಮರವಾಗಿ ಬೆಳೆಯಲಾರದು. ಆರ್ಥಿಕದೃಷ್ಟಿಯಿಂದ ನೋಡಿದರೆ ಆಶ್ರಯದಾತ ಸಸ್ಯಗಳ ಪಾತ್ರ ಈ ಸಂಬಂಧದಲ್ಲಿ ಬಹಳ ಮಹತ್ತರವಾದುದು.