ವಿಷಯಕ್ಕೆ ಹೋಗು

ಆಲೆಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ಕಬ್ಬಿನಿಂದ ಬೆಲ್ಲವನ್ನು ತಯಾರಿಸುವ ಜಾಗದ ಬಗ್ಗೆ ಇದೆ. ಇದೇ ಹೆಸರಿನ ಚಲನಚಿತ್ರಕ್ಕಾಗಿ ಆಲೆಮನೆ (ಚಲನಚಿತ್ರ) ನೋಡಿ

ಆಲೆಮನೆ, ಕಬ್ಬಿನ ರಸದಿಂದ ಬೆಲ್ಲವನ್ನು ತಯಾರಿಸುವ ಜಾಗ. ಆಲೆ ಎಂದರೆ ಕಬ್ಬಿನ ಗಾಣ. ಆಲೆಮನೆ ಎಂದರೆ ಕಬ್ಬನ್ನು ಹಿಂಡಿ ಬೆಲ್ಲ ಮಾಡುವ ಜಾಗ.

ಸಣ್ಣ ಕೈಗಾರಿಕೆ

[ಬದಲಾಯಿಸಿ]

ಜನಪದ ಜೀವನದಲ್ಲಿ ಕಬ್ಬು ಬೆಳೆಯುವುದು, ಅದನ್ನು ಮುರಿದು ಆಲೆಯಾಡುವುದು, ಬಂದ ಬೆಲ್ಲದಲ್ಲಿ ಮನೆ ಬಳಕೆಗೆ ಬೇಕಾಗುವಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಮಾರುವುದು-ಒಂದು ಲಾಭದಾಯಕ ಉದ್ಯೋಗ ಎನ್ನಬಹುದು: ಸಣ್ಣ ಪ್ರಮಾಣದ ಕೈಗಾರಿಕೆ ಎನ್ನಬಹುದು. ಇಡೀ ವರ್ಷ ಬೆವರನ್ನು ಸುರಿಸಿ ಎದೆಯ ರಕ್ತವನ್ನು ಭೂಮಿತಾಯಿಗೆ ಬಸಿದು ಬೆಳೆದ ಕಬ್ಬನ್ನು ಆಲೆಯಾಡಿ, ಬೆಲ್ಲದಡಿಗೆಯನ್ನು ಕಂಡಾಗ ರೈತರಿಗಾಗುವ ಸಂತೋಷ ಹೇಳತೀರದು. ಏಕೆಂದರೆ ಕಬ್ಬಿನ ಬೆಳೆಗೆ ಹೆಚ್ಚು ದುಡಿಮೆ ಬೇಕು. ಲವಾಜಮೆ ಬೇಕು. ನಿರಂತರ ನಿಗವಿಲ್ಲದೆ ಕಾಟಾಚಾರಕ್ಕೆ ಕೈ ಸೇರುವ ಫಸಲಲ್ಲ ಅದು, ಬಡಪಟ್ಟಿಗೆ ಬರುವ ಬೆಳೆಯಲ್ಲ.

ಸಹಕಾರದ ಅಗತ್ಯ

[ಬದಲಾಯಿಸಿ]

ಆಲೆಯಾಡುವುದರಲ್ಲಿ ಎಲ್ಲ ಕುಳಗಳೂ ಕಡ್ಡಾಯವಾಗಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಆಲೆ ಇಟ್ಟಿರುವ ಮಾಲೀಕರ ಬಳಿಯಿಂದ ಒಟ್ಟು ಆಲೆಯ ಉಪಕರಣಸಮುದಾಯ (ಆಲೆ, ಕೊಪ್ಪರಿಗೆ, ಅಚ್ಚಿನ ಮಣೆ, ಗ್ವಾರೆ, ಚೂಪುಗತ್ತಿ) ತರುವುದು; ಮರದ ನೆರಳಿರುವ ನಿವೇಶನವನ್ನು ಆರಿಸಿ ಸಿದ್ಧಗೊಳಿಸಿ ಒಲೆ, ದರಗ (ಹೊಗೆ ಹೋಗುವ ಚಿಮಣಿ) ಇತ್ಯಾದಿಗಳನ್ನು ಕಟ್ಟುವುದು; ಕಬ್ಬು ಮುರಿದುಕೊಂಡು ಬರುವುದು; ಆಲೆಗಿಟ್ಟು ಕಬ್ಬು ಹಿಂಡುವುದು; ಕೊಪ್ಪರಿಗೆಗೆ ಹಾಲನ್ನು ಸುರಿದು ಕಾಸಿ ಬೆಲ್ಲ ಮಾಡುವುದು; ಮೂಡೆ ಕಟ್ಟುವುದು-ಮೊದಲಾದ ಕಾರ್ಯಗಳಲ್ಲಿ ಎಲ್ಲರ ಸಹಕಾರ ಇರುತ್ತದೆ. ಒಬ್ಬನ ಹಸುಗೆಯ ಕಬ್ಬು ಮುರಿದು ಆಲೆಯಾಡುವಾಗ ಎಲ್ಲರೂ ಹೇಗೆ ಭಾಗವಹಿಸುತ್ತಾರೋ ಹಾಗೆಯೇ ಒಬ್ಬನು ಅವರೆಲ್ಲರ ಭಾಗದ ಕಬ್ಬು ಮುರಿದು ಆಲೆಯಾಡುವಾಗ ಭಾಗವಹಿಸುತ್ತಾನೆ. ಇದು ತಮ್ಮ ಪಾಲಿನ ಕರ್ತವ್ಯ ಎಂಬ ಭಾವನೆ ಇರುತ್ತದೆ. ಸಹಕಾರ ಪದ್ಧತಿಯ ಉತ್ತಮ ಮಾದರಿಯನ್ನಿಲ್ಲಿ ಕಾಣಬಹುದು.

ಆಲೆಮನೆಯಲ್ಲಿ ಬದಲಾವಣೆಗಳು

[ಬದಲಾಯಿಸಿ]

ಮೊದಲು ಮರದಾಲೆ ಬಳಕೆಯಲ್ಲಿತ್ತು. ಕಬ್ಬನ್ನು ಹಿಂಡುವ ಮಂತಿಗೆ ಹಲ್ಲು ಇರಲಿಲ್ಲ. ಆದ್ದರಿಂದ ಕಬ್ಬನ್ನು ಅದು ಚೆನ್ನಾಗಿ ಒಳಕ್ಕೆ ಎಳೆದುಕೊಳ್ಳುತ್ತಿರಲಿಲ್ಲ. ಕಾಲಕ್ರಮೇಣ ಮರದ ಯಾವ ಮುಟ್ಟೂ ಇಲ್ಲದ ಬರಿಯ ಲೋಹ ಆಲೆ ಬಳಕೆಗೆ ಬಂತು. ಅದರ ಮಂತಿಗೆ ಹಲ್ಲು ಇರುವುದರಿಂದ ಕಬ್ಬು ಕೊಡುವುದೇ ತಡ ಹಿಡಿದುಕೊಂಡು ಬಿಡುತ್ತದೆ. ಈಗ ವಿದ್ಯುತ್ ಚಾಲಿತ ಆಲೆಗಳು ಬಂದಿರುವುದರಿಂದ ಗಾಣಕ್ಕೆ ಎತ್ತು ಕಟ್ಟಬೇಕಾದ ಪ್ರಮೇಯವಿಲ್ಲ. ಜನಗಳ ಮತ್ತು ದನಗಳ ಶ್ರಮ ಕಡಿಮೆಯಾದಂತಾಗಿದೆ. ಅಷ್ಟೇ ಅಲ್ಲದೆ ಮೊದಮೊದಲು ಒಂದೇ ಒಲೆ. ಅದರ ಮೇಲೆ ಹಾಲು ಕಾಯಬೇಕು. ಪಾಕವನ್ನು ಅಚ್ಚಿನಮಣೆಗೆ ಹುಯ್ಯುವವರೆಗೂ ಉಳಿದ ಕಾರ್ಯ ಸ್ಥಗಿತ. ಅದೂ ಅಲ್ಲದೆ ಆಗ ಹಾಲು ಕಾಯಿಸುತ್ತಿದ್ದುದು ಸೌದೆಯಿಂದ. ಆಲೆಮನೆ ಬೀಳುವ ಅವಧಿಗೆ ಮುಂಚಿನಿಂದ ಸೌದೆ ಒದಗಿಸಿಕೊಳ್ಳುವುದರಲ್ಲಿ ನಿರತರಾಗಬೇಕಾಗಿತ್ತು. ಅದು ತುಂಬ ಕಷ್ಟದ ಕೆಲಸವಾಗಿತ್ತು. ಇತ್ತೀಚೆಗೆ ಕೇವಲ ಕಬ್ಬಿನ ತರಗು ಮತ್ತು ಸಿಪ್ಪೆಯಿಂದಲೇ ಹಾಲನ್ನು ಕಾಯಿಸುತ್ತಾರೆ. ಅದಕ್ಕೆ ಮಾರ್ಪಟ್ಟ ಒಲೆಯ ಮಾದರಿಯೇ ಕಾರಣ. ಸೌದೆ ಒಲೆಯ ಒಂದೇ ಒಂದು ಕಡೆಯ ಕಂಡಿಯಿಂದ ಸೌದೆ ಹಾಕುತ್ತಿದ್ದರು : ಮತ್ತೊಂದು ಕಡೆಯ ಕಂಡಿಯಿಂದ ಬೂದಿ ಎಳೆಯುತ್ತಿದ್ದರು. ಆದರೆ ಈಗ ದರಗದ (ಚಿಮಣಿ) ಒಲೆಯನ್ನು ಹಾಕುತ್ತಾರೆ. ಸಾಮಾನ್ಯವಾಗಿ ಅಂಥ ಎರಡು ಒಲೆಗಳಿರುತ್ತವೆ. ಹೊಗೆ ಹೋಗಲು ದರಗ ಇರುತ್ತದೆ. ಒಲೆಗೆ ತರಗು, ಸಿಪ್ಪೆ ಇಡುವ ಕಡೆ ಕೆಳಗೆ ಕಂದಕವನ್ನು ಮಾಡಿರುವುದರಿಂದ ಬೂದಿ ತಾನಾಗಿಯೇ ಕೆಳಕ್ಕೆ ಬೀಳುತ್ತದೆ. ಆದ್ದರಿಂದ ಸೌದೆ ಕಡಿದು ಜಮಾಯಿಸಿಕೊಳ್ಳುವ ತಾಪತ್ರಯ ಹೋಗಿ ಕೇವಲ ಕಬ್ಬಿನ ತರಗುಸಿಪ್ಪೆಯಿಂದಲೇ ಬೆಲ್ಲ ಬೇಯಿಸುವ ಸೌಲಭ್ಯ ಒದಗಿದೆ.

ಪ್ರಕ್ರಿಯೆ

[ಬದಲಾಯಿಸಿ]

ಕಬ್ಬಿನ ತೋಟದಿಂದ ಪ್ರತಿಯೊಂದು ಕುಳವೂ ಕಬ್ಬನ್ನು ಮುರಿದು ತಂದು ಆಲೆಮನೆಯಲ್ಲಿ ರಾಶಿ ಹಾಕುತ್ತಾರೆ. ಸರದಿಯ ಪ್ರಕಾರ ಪ್ರತಿಯೊಂದು ಕುಳವೂ ಗಾಣಕ್ಕೆ ಅವರವರ ಎತ್ತುಗಳನ್ನು ಕಟ್ಟಿ, ನಿಗದಿಯಾದಷ್ಟು ಡಬ್ಬ ಹಾಲು ಬರುವವರೆಗೂ ಕಬ್ಬು ಹಿಂಡಿ ಕೊಪ್ಪರಿಗೆಗೆ ಹುಯ್ಯುತ್ತಾರೆ. ಎರಡು ಕೊಪ್ಪರಿಗೆಗಳಲ್ಲೂ ಹಾಲು ಕಾಯುತ್ತಿರುತ್ತದೆ. ಮೇಲಿನ ಒಲೆಗೆ ಅಷ್ಟು ಹೆಚ್ಚು ಉರಿ ತಾಕದಿರುವುದರಿಂದ ಆ ಕೊಪ್ಪರಿಗೆಯ ಹಾಲು ಅಷ್ಟು ಬೇಗ ಕಾಯುವುದಿಲ್ಲ. ಆದರೆ ಮೊದಲನೆಯ ಒಲೆಯ ಮೇಲೆ ಹಾಲು ಬೇಗ ಕಾಯುತ್ತದೆ. ಹಾಲು ಕಾದಾಗ ಮೇಲುಗಡೆ ಮಡ್ಡಿ ಬರುತ್ತದೆ. ಅದನ್ನು ಚಿಬ್ಬಲಿನಿಂದ ಗೋರಿ ಹಾಕುತ್ತಾರೆ. ಕಾದ ಹಾಲಿಗೆ ಹೆಬ್ಬೆರಳು ಗಾತ್ರದ ಹೆಪ್ಪನ್ನು (ಸುಣ್ಣವನ್ನು) ಹಾಕುತ್ತಾರೆ. ಸೊನೆ ನೆಲದ ತ್ರಾಣವನ್ನು ಅವಲಂಬಿಸಿರುತ್ತವೆ. ಮೊದಲು ದೊಡ್ಡ ಉಕ್ಕಲು ಕೊಪ್ಪರಿಗೆಯ ಕಂಠದವರೆಗೂ ಬರುತ್ತದೆ. ಆಮೇಲೆ ತಳಕ್ಕೆ ಇಳಿದುಹೋಗುತ್ತದೆ. ಹಾಗೇ ಇನ್ನೂ ಉರಿಯನ್ನು ಹಾಕುತ್ತಿದ್ದರೆ ಕಾದು ಕಾದು ಸ್ವಲ್ಪ ಕೆಂಪು ಬಣ್ಣಕ್ಕೆ ತಿರುಗಿದ ಪಾಕ ಮತ್ತೆ ಕಂಠದವರೆಗೂ ಉಕ್ಕುಬರದೆ ತಳದಲ್ಲೇ ಸಣ್ಣುಕ್ಕಲು ಬರುತ್ತದೆ. ಅದಕ್ಕೆ ಗೆಜ್ಜೆಯುಕ್ಕಲು ಎಂದೂ ಕರೆಯುತ್ತಾರೆ. ಬೆಲ್ಲ ಬೇಯಿಸುವುದರಲ್ಲಿ ನಿಷ್ಣಾತವಾದ ರೈತ ಕೈಯನ್ನು ನೀರಲ್ಲಿ ಅದ್ದಿ ಕುದಿಯುವ ಪಾಕವನ್ನು ಸರಕ್ಕನೆ ಬೆರಳಲ್ಲಿ ತೆಗೆದುಕೊಂಡು ನೀರಿನಲ್ಲಿ ಹಾಕಿ ಹಿಸುಕಿ ನೋಡುತ್ತಾನೆ. ಎಳಾದ (ಎಳೆಯ+ಹದ) ಆಗಿದ್ದರೆ ಅದು ಹರಿದುಕೊಂಡು ಹೋಗುತ್ತದೆ. ಸರಿಯಾದ ಹದವಿದ್ದರೆ ನೀರಿಗೆ ಹಾಕಿ ಹಿಸುಕಿದ ಕ್ಷಣ ಗಟ್ಟಿಗಾಗಿ ಬಿಡುತ್ತದೆ. ಕೂಡಲೇ ತರದೂದಿನಿಂದ ತಲಾತಟ್ಟಿಗೆ ಓಡಿಬಂದು ಕೊಪ್ಪರಿಗೆಯ ಬಳೆಗಳಿಗೆ ದೆವಗೆ (ಬೊಂಬು) ತೂರಿಸಿ ಕೆಳಕ್ಕಿಳಿಸಿ ಮತ್ತೊಂದು ಕೊಪ್ಪರಿಗೆಗೆ ಬಗ್ಗಿಸುತ್ತಾರೆ. ಆ ಕೊಪ್ಪರಿಗೆಯನ್ನು ಯಥಾಪ್ರಕಾರ ಒಲೆಯ ಮೇಲಿಟ್ಟು ಮೇಲಿನ ಒಲೆಯ ಮೇಲೆ ಕಾದಿರುವ ಹಾಲನ್ನು ಅದಕ್ಕೆ ಹುಯ್ಯುತ್ತಾರೆ. ಈ ಕಡೆ ಗ್ವಾರೆಯನ್ನು (ಗೋರೆ) ಆಡಿಸುತ್ತಾ ಪಾಕ ಆರಿಸುತ್ತಾರೆ. ಆಮೇಲೆ ಅಚ್ಚಿನ ಮಣೆಗೆ ಅದನ್ನು ಬಗ್ಗಿಸುತ್ತಾರೆ. ಚೂಪುಗತ್ತಿಯಿಂದ ಕೊಪ್ಪರಿಗೆಗೆ ಅಂಟಿರುವ ಪಾಕವನ್ನು ಹೆರೆದು ಹಾಕುತ್ತಾರೆ. ಇನ್ನೊಂದು ಒಲೆ (ಅಡಿಗೆ) ಬರುವಷ್ಟರಲ್ಲಿ ಅಚ್ಚಿನ ಮಣೆಯನ್ನು ದಬ್ಬಾಕುತ್ತಾರೆ. ಮೇಲಿನಿಂದ ಹಾರೆಕೋಲಿನಿಂದ ತೆಗೆದುಕೊಂಡು ಕುಟ್ಟುತ್ತಾರೆ. ಅಚ್ಚುಗಳೆಲ್ಲ ಕೆಳಗೆ ಬೀಳುತ್ತವೆ. ಬಿಡುವಿದ್ದ ವೇಳೆಯಲ್ಲಿ ಕೆಳಗೆ ಎರಡು ಕಟ್ಟು ಹಾಕಿ ಅದರ ಮೇಲೆ ಕಬ್ಬಿನ ಗರಿಯನ್ನು ಹಾಸಿ, ಅಚ್ಚುಗಳನ್ನು ಇಟ್ಟು ಮೂಡೆ ಕಟ್ಟುತ್ತಾರೆ. ಇದಕ್ಕೆ ಪೆಂಡಿ ಎಂದೂ ಕರೆಯುತ್ತಾರೆ. ಒಂದೊಂದು ಮೂಡೆಯಲ್ಲಿ ಐವತ್ತು ಅಥವಾ ಐವತ್ತನಾಲ್ಕು ಅಚ್ಚುಗಳಿರುತ್ತವೆ. ಇಂಥ ಎರಡು ಮೂಡೆಗಳಿಗೆ ಒಂದು ಅಡುಗೆ ಬೆಲ್ಲ ಎನ್ನುತ್ತಾರೆ. ತಮ್ಮ ತಮ್ಮ ಹಸುಗೆಯಲ್ಲಿ ಎಷ್ಟು ಅಡುಗೆ ಬೆಲ್ಲವಾಯಿತು ಎಂಬುದರ ಮೇಲೆ ಅವರ ದುಡಿಮೆಯ ಸಾರ್ಥಕತೆ ಅಥವಾ ಅಸಾರ್ಥಕತೆ ನಿಗದಿಯಾಗುತ್ತದೆ. ಸಣ್ಣ ಮತ್ತು ದೊಡ್ಡ ಪ್ರಮಾಣದಲ್ಲಿ ಬೆಲ್ಲವನ್ನು ಅಚ್ಚು ಹುಯ್ಯುವಂತೆ ಉಂಡೆಗಟ್ಟುವ ಪದ್ಧತಿಯೂ ಉಂಟು. ಇನ್ನು ಕೆಲವು ಬಾರಿ ಜೋನಿ ಬೆಲ್ಲಮಾಡಿ ಡಬ್ಬ ಅಥವಾ ಮಡಿಕೆಯಲ್ಲಿ ತುಂಬುತ್ತಾರೆ. ಬೆಲ್ಲದ ಇನ್ನು ಕೆಲವು ಮಾದರಿಗಳು ಹೀಗಿವೆ: ತಟ್ಟೆ ಬೆಲ್ಲ, ಆರತಿ ತಟ್ಟೆಗೆ ಪಾಕವನ್ನು ಬಿಟ್ಟು ಅದಕ್ಕೆ ಕೊಬ್ಬರಿತುರಿ, ಕಡಲೆ, ಗಸೆಗಸೆ, ಏಲಕ್ಕಿಪುಡಿ ಮುಂತಾದುವುಗಳನ್ನು ಉದುರಿಸುತ್ತಾರೆ. ಆರಿದ ಮೇಲೆ ತಟ್ಟೆಯಿಂದ ಅದನ್ನು ಎಬ್ಬುತ್ತಾರೆ. ಅದು ತಿನ್ನಲು ತುಂಬ ರುಚಿಯಾಗಿರುತ್ತದೆ. ಚಿಟ್ಟಚ್ಚು : ದೊಡ್ಡಚ್ಚಿನ ಮಣೆಗೆ ಬದಲಾಗಿ ಚಿಟ್ಟಚ್ಚಿನ ಮಣೆ ಇರುತ್ತದೆ. ಮದುವೆ ಮುಂಜಿ ಇವುಗಳಲ್ಲಿ ಹೆಂಗಸರಿಗೆ ಮಡಿಲುದುಂಬುವಾಗ ಬೆಲ್ಲದ ಅಚ್ಚನ್ನು ಇಡಬೇಕಾಗುತ್ತದೆ. ಅದಕ್ಕೋಸ್ಕರವಾಗಿ ಚಿಟ್ಟಚ್ಚಿನ ಮಣೆಗೆ ಪಾಕ ಹೊಯ್ದು ಚಿಟ್ಟಚ್ಚುಗಳನ್ನು ಮಾಡಿಕೊಳ್ಳುತ್ತಾರೆ. ಇನ್ನು ಕೆಲವು ಕಡೆ ಕಾಕಂಬಿ ಬೆಲ್ಲವನ್ನು ತಯಾರಿಸುತ್ತಾರೆ. ಇದನ್ನು ತಯಾರಿಸುವ ವಿಧಾನ ಈ ರೀತಿ ಇದೆ: ಬೆಲ್ಲದ ಹದಕ್ಕೆ ಬರುವ ಮುನ್ನ ಪಾಕವನ್ನು ಹೊಸ ಮಡಕೆಗಳಿಗೆ ಹಾಕಿ ಕೆಲವು ದಿನಗಳು ಬಿಡುತ್ತಾರೆ. ಅನಂತರ ಅದರ ಮೇಲೆ ಗಸಗಸೆಯನ್ನು ಉದುರಿಸುತ್ತಾರೆ. ಗಸಗಸೆಯ ಕಾಳುಗಳು ಮೇಲೆದ್ದು ಕಾಣುವ ಆ ಬೆಲ್ಲ ತಿನ್ನಲು ಬಲು ರುಚಿ. ಹಳ್ಳಿಯ ಕಡೆ ಶಾಲೆಗೆ ಹೋಗುವ ಮಕ್ಕಳ ಜೇಬುಗಳಲ್ಲಿ ಬೆಳಗಿನ ತಿಂಡಿಯಾಗಿ ಇದು ಅಡಗಿರುತ್ತದೆ. ಸಕ್ಕರೆ: ಹೊಸ ಗಡಿಗೆಗೆ ಪಾಕ ಬಗ್ಗಿಸಿ ಅದರ ಬಾಯಿ ಮುಚ್ಚಿ ಮಣ್ಣಿನಿಂದ ಮೆತ್ತೆ ಹಾಕುತ್ತಾರೆ. ಮೂರು ತಿಂಗಳವರೆಗೂ ಅದನ್ನು ತೆಗೆಯುವುದಿಲ್ಲ. ಆಮೇಲೆ ತೆಗೆದಾಗ, ಗಡಿಗೆಗೆ ಬಿಟ್ಟಿದ್ದ ಪಾಕ ಮರಳು ಮರಳಿನಂತೆ ಸಕ್ಕರೆ ಆಗಿರುತ್ತದೆ. ಆದರೆ ಸಕ್ಕರೆಯ ಬಣ್ಣ ಅದಕ್ಕಿರುವುದಿಲ್ಲ. ಕೆಂಪಾಗಿಯೇ ಇರುತ್ತದೆ. ಸಕ್ಕರೆ ಮಾಡುವ ಜನಪದ ವಿಧಾನ ಇದು.

ಆಲೆಮನೆ ನಗೆಹೊಗೆಯ ಕಲಸು ಮೇಲೋಗರ ಎನ್ನಬಹುದು. ಇರುಳು ಹೊತ್ತು ಅಡಿಗೆ ಬಂದಾಗ ಕೆಲವರು ಮಲಗಿರುತ್ತಾರೆ. ಎಬ್ಬಿಸಿದ ಕೂಡಲೇ ಏಳಬೇಕು. ತಡವಾದರೆ ಅಂದು ಯಾರ ಕಬ್ಬಾಡುತ್ತಿರುವುದೋ ಅವರ ಬೈಗುಳಕ್ಕೆ ಗುರಿಯಾಗಬೇಕಾಗುತ್ತದೆ. ಕಾರಣ ಒಲೆಯ ಮೇಲಿನಿಂದ ಕೊಪ್ಪರಿಗೆಯನ್ನು ಇಳಿಸುವುದು ತಡವಾದರೆ ಪಾಕ ಕಂಟು ಹಿಡಿದು ಬೆಲ್ಲ ಕೆಟ್ಟುಹೋಗುತ್ತದೆ. ಆಗ ಆ ಕುಳಕ್ಕೆ ನಷ್ಟವಾಗುತ್ತದೆ. ಆದ್ದರಿಂದ ಆ ಸಮಯದಲ್ಲಿ ಕಂಟಿನ ಮಾತುಗಳೂ ಹೊರಬರುತ್ತವೆ. ಹಾಗೆಯೇ ತಮಾಷೆಯ ಪ್ರಸಂಗಗಳೂ ಇರುತ್ತವೆ. ನಿದ್ರೆಗೆಟ್ಟು ಎಚ್ಚರವಿಲ್ಲದೆ ಮಲಗಿದವನ ಮುಖಕ್ಕೆ ಮಸಿಯಿಂದ ಮೀಸೆ ಇಟ್ಟು ವಿರೂಪ ಗೊಳಿಸುವುದು ; ಎದ್ದ ಮೇಲೆ ಅವನ ಮುಖ ನೋಡಿ ಎಲ್ಲರೂ ನಗುವುದು-ಸರ್ವೇಸಾಮಾನ್ಯ. ಅವನೂ ಸಮಯ ಸಾಧಿಸಿ ಮತ್ತೊಬ್ಬರಿಗೆ ಅದೇ ಕೆಲಸವನ್ನು ಮಾಡುತ್ತಾನೆ, ಅಥವಾ ಹಿಂದೆಯೇ ಮಾಡಿರುತ್ತಾನೆ.

ಗಾದೆಮಾತುಗಳಲ್ಲಿ

[ಬದಲಾಯಿಸಿ]

ಆಲೆಮನೆಗೆ ಹೋದರೆ ಅಣ್ಣ ಇರಬೇಕು : ಅಡಿಗೆಮನೆಗೆ ಹೋದರೆ ಅಕ್ಕ ಇರಬೇಕು

ಆಲೆ ಇಲ್ಲದ ಊರಿಗೆ ಇಪ್ಪೆ ಹೂವೇ ಸಕ್ಕರೆ

ಕೊಟ್ಟರೆ ಬಿಟ್ಟರೆ ಹೋದಾತ ಆಲೆಮನೆ ದೆವ್ವ

"https://kn.wikipedia.org/w/index.php?title=ಆಲೆಮನೆ&oldid=805279" ಇಂದ ಪಡೆಯಲ್ಪಟ್ಟಿದೆ