ಆರ್. ಶಾಮಾ ಶಾಸ್ತ್ರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಾಮಾ ಶಾಸ್ತ್ರಿ
    ಹೆಸರು : ಶಾಮಾ ಶಾಸ್ತ್ರಿ - (ಡಾ|| ರುದ್ರಪಟ್ಟಣದ ಶಾಮಾ ಶಾಸ್ತ್ರಿ) 
    ಜನನ : ೧೨ ಜನವರಿ, ೧೮೬೮ 
     ಸ್ಥಳ : ರುದ್ರಪಟ್ಟಣ ಗ್ರಾಮ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ (ಆಗಿನ ಮೈಸೂರು ಜಿಲ್ಲೆ)
  ಸಂಪಾದಿತ ಕೃತಿ : ಕೌಟಿಲ್ಯ (ಚಾಣಕ್ಯ) ವಿರಚಿತ "ಅರ್ಥಶಾಸ್ತ್ರ" 

ರುದ್ರಪಟ್ಟಣದ ಶಾಮಾ ಶಾಸ್ತ್ರಿಗಳು ಸಂಸ್ಕೃತದ ಮಹಾ ಮೇಧಾವಿಗಳು, ಇವರು ೧೮೯೧ರಲ್ಲಿ ಮೈಸೂರಿನ ಮಹಾರಾಜರು ಸ್ಥಾಪಿಸಿದ್ದ "ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್ (ಓ ಆರ್ ಐ)" ಸಂಸ್ಥೆಯ ವಾಚನಾಲಯದ ಮೇಲ್ವಿಚಾರಕರಾಗಿದ್ದರು. ಈ ಸಂದರ್ಭದಲ್ಲಿ ಗ್ರಂಥಾಲಯದಲ್ಲಿ ’ಕೌಟಿಲ್ಯ’ನ ಅರ್ಥಶಾಸ್ತ್ರ ಕಣ್ಣಿಗೆ ಬಿತ್ತು. ಆಸಕ್ತಿಯಿಂದ ಆ ತಾಳೆಗ್ರಂಥವನ್ನು ಪರಿಶೀಲಿಸಿದರು. ಆಗ ಅದನ್ನು ಪ್ರಕಾಶನ ಮಾಡುವ ಮನಸ್ಸು ಮಾಡಿದರು. ತಂಜಾವೂರಿನ ಪಂಡಿತರೊಬ್ಬರು ಈ ಗ್ರಂಥವನ್ನು ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್ ಗೆ ನೀಡಿದ್ದರು. ಈ ಗ್ರಂಥ ಸಂಸ್ಕೃತದಲ್ಲಿದ್ದರು ಲಿಪಿ ಮಾತ್ರ ’ದೇವಾನಗರಿ’ಯಾಗಿರಲಿಲ್ಲ. ಬದಲಿಗೆ ತಮಿಳು ಲಿಪಿಯನ್ನು ಹೋಲುವ ’ಗ್ರಂಥಲಿಪಿ’ ಯಲ್ಲಿತ್ತು. ೧೯೦೫ ರಿಂದ ಸತತ ನಾಲ್ಕು ವರ್ಷಗಳ ಅವಿರತ ಶ್ರಮದ ಬಳಿಕ ೧೯೦೯ರಲ್ಲಿ ಈ ಗ್ರಂಥವನ್ನು ಶಾಮಾಶಾಸ್ತ್ರಿಗಳು ಸಂಸ್ಕೃತದಲ್ಲಿ ಹೊರತಂದರು. ಈ ಗ್ರಂಥಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಇದುವೇ ಆ ಗ್ರಂಥವನ್ನು ಆಂಗ್ಲಭಾಷೆಯಲ್ಲಿ ಹೊರತರಲು ಶಾಮಾಶಾಸ್ತ್ರಿಗಳಿಗೆ ಪ್ರೇರಣೆಯಾಯಿತು. ೧೯೧೫ರಲ್ಲಿ ಇದರ ಇಂಗ್ಲೀಷ್ ರೂಪಾಂತರ ಅವರು ಹೊರತಂದರು.

ತಾಳೆ ಗರಿ ಪ್ರತಿ
ಮುದ್ರಿತ ಪ್ರತಿ

ಒಂದು ಸ್ವಾರಸ್ಯಕರ ಘಟನೆ : "ನಾಲ್ವಡಿ ಕೃಷ್ಣರಾಜ ಒಡೆಯರು" ಒಮ್ಮೆ ಜರ್ಮನಿ ಪ್ರವಾಸ ಕೈಗೊಂಡಿದ್ದರು, ಈ ಸಂದರ್ಭದಲ್ಲಿ ಜರ್ಮನ್ ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಭೇಟಿಯಾಗಿದ್ದರು ಆಗ ಉಪಕುಲಪತಿಗಳು "ನೀವು ಶಾಮಾಶಾಸ್ತ್ರಿಗಳ ಊರಿನವರೆ?’" ಎಂದು ಕೇಳಿದ್ದರಂತೆ. ಇದಾದ ಬಳಿಕ ಮೈಸೂರಿಗೆ ಮರಳಿದ ವಡೆಯರ್ ಶಾಮಾಶಾಸ್ತ್ರಿಗಳನ್ನು ಅರಮನೆಗೆ ಕರೆಯಿಸಿ ಪುರಸ್ಕಾರ ನೀಡಿ ಗೌರವಸಿದ್ದರಂತೆ. "ಮೈಸೂರಿಗೆ ನಾನೆ ರಾಜ ನೀವೊಬ್ಬ ಪ್ರಜೆ, ಆದರೆ ಮೈಸೂರಿನಿಂದಾಚೆಗೆ ನಿಮ್ಮಿಂದ ನಾನು ಗುರುತಿಸಲ್ಪಡುತಿದ್ದೆನೆ" ಎಂದು ಹೇಳಿದ್ದರಂತೆ. ಸಂದ ಪದವಿ, ಗೌರವಗಳು : ಶಾಮಾಶಾಸ್ತ್ರಿಗಳು ೧೯೧೯ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದಿದ್ದರು. ೧೯೨೧ರಲಿ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಗೌರವಕ್ಕೊ ಪಾತ್ರರಾಗಿದ್ದರು.