ವಿಷಯಕ್ಕೆ ಹೋಗು

ಆರ್. ಶಾಮಾ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆರ್. ಶಾಮಾಶಾಸ್ತ್ರಿ ಇಂದ ಪುನರ್ನಿರ್ದೇಶಿತ)
ಶಾಮಾ ಶಾಸ್ತ್ರಿ - (ಡಾ ರುದ್ರಪಟ್ಟಣದ ಶಾಮಾ ಶಾಸ್ತ್ರಿ)
ಜನನ೧೨ ಜನವರಿ, ೧೮೬೮
ರುದ್ರಪಟ್ಟಣ ಗ್ರಾಮ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ (ಆಗಿನ ಮೈಸೂರು ಜಿಲ್ಲೆ)
ಹೆಸರಾಂತ ಕೆಲಸಗಳುಕೌಟಿಲ್ಯ (ಚಾಣಕ್ಯ) ವಿರಚಿತ "ಅರ್ಥಶಾಸ್ತ್ರ"

ಆರ್. ಶಾಮಾಶಾಸ್ತ್ರಿ (೧೨.೦೧.೧೮೬೮, ೨೩.೦೧.೧೯೪೪) ಕನ್ನಡ, ಇಂಗ್ಲಿಷ್‌, ಸಂಸ್ಕೃತ ಭಾಷೆಗಳ ಜೊತೆಗೆ ಜ್ಯೋತಿಷ ಶಾಸ್ತ್ರದಲ್ಲೂ ಅಪಾರ ಪಾಂಡಿತ್ಯ ಹೊಂದಿದ್ದ ಶಾಮಶಾಸ್ತ್ರಿಗಳು ಹುಟ್ಟಿದ್ದು ರುದ್ರಪಟ್ಟಣದಲ್ಲಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡರೂ ಸ್ವ-ಪ್ರಯತ್ನದಿಂದ ಮುಂದೆ ಬಂದರು. ಮೈಸೂರು ಸಂಸ್ಕೃತ ಕಾಲೇಜಿನಲ್ಲಿ ವಿದ್ವತ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಂದಿನ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ರವರು ಇವರ ಪಾಂಡಿತ್ಯಕ್ಕೆ ಮೆಚ್ಚಿ ತಮ್ಮ ಮನೆಯಲ್ಲಿಯೇ ಊಟ-ವಸತಿಗೆ ವ್ಯವಸ್ಥೆ ಮಾಡಿ ಇಂಗ್ಲಿಷ್‌ ಕಲಿಯಲು ಪ್ರೋತ್ಸಾಹಿಸಿದರು. ಇಂಗ್ಲಿಷ್‌, ಸಂಸ್ಕೃತದ ಜೊತೆಗೆ ಭೌತ ಶಾಸ್ತ್ರವನ್ನೂ ಕಲಿತು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಓದಿ ಮದರಾಸು ವಿಶ್ವವಿದ್ಯಾಲಯದ ಮೂಲಕ ಬಿ..ಎ. ಪದವಿ ಗಳಿಸಿದರು. ೧೯೧೮ ರಲ್ಲಿ ಮೈಸೂರಿನ ಪ್ರಾಚ್ಯ ಪುಸ್ತಕ ಭಂಡಾರದಲ್ಲಿ ದೊರೆತ ಉದ್ಯೋಗ.

ರುದ್ರಪಟ್ಟಣದ ಶಾಮಾ ಶಾಸ್ತ್ರಿಗಳು ಸಂಸ್ಕೃತದ ಮಹಾ ಮೇಧಾವಿಗಳು, ಇವರು ೧೮೯೧ರಲ್ಲಿ ಮೈಸೂರಿನ ಮಹಾರಾಜರು ಸ್ಥಾಪಿಸಿದ್ದ "ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್ (ಓ ಆರ್ ಐ)" ಸಂಸ್ಥೆಯ ವಾಚನಾಲಯದ ಮೇಲ್ವಿಚಾರಕರಾಗಿದ್ದರು. ಈ ಸಂದರ್ಭದಲ್ಲಿ ಗ್ರಂಥಾಲಯದಲ್ಲಿ ’ಕೌಟಿಲ್ಯ’ನ ಅರ್ಥಶಾಸ್ತ್ರ ಕಣ್ಣಿಗೆ ಬಿತ್ತು. ಆಸಕ್ತಿಯಿಂದ ಆ ತಾಳೆಗ್ರಂಥವನ್ನು ಪರಿಶೀಲಿಸಿದರು. ಆಗ ಅದನ್ನು ಪ್ರಕಾಶನ ಮಾಡುವ ಮನಸ್ಸು ಮಾಡಿದರು. ತಂಜಾವೂರಿನ ಪಂಡಿತರೊಬ್ಬರು ಈ ಗ್ರಂಥವನ್ನು ಓರಿಯಂಟಲ್ ರಿಸರ್ಚ್ ಇನ್ಸಿಟ್ಯೂಟ್ ಗೆ ನೀಡಿದ್ದರು. ಈ ಗ್ರಂಥ ಸಂಸ್ಕೃತದಲ್ಲಿದ್ದರು ಲಿಪಿ ಮಾತ್ರ ’ದೇವಾನಗರಿ’ಯಾಗಿರಲಿಲ್ಲ. ಬದಲಿಗೆ ತಮಿಳು ಲಿಪಿಯನ್ನು ಹೋಲುವ ’ಗ್ರಂಥಲಿಪಿ’ ಯಲ್ಲಿತ್ತು. ೧೯೦೫ ರಿಂದ ಸತತ ನಾಲ್ಕು ವರ್ಷಗಳ ಅವಿರತ ಶ್ರಮದ ಬಳಿಕ ೧೯೦೯ರಲ್ಲಿ ಈ ಗ್ರಂಥವನ್ನು ಶಾಮಾಶಾಸ್ತ್ರಿಗಳು ಸಂಸ್ಕೃತದಲ್ಲಿ ಹೊರತಂದರು. ಈ ಗ್ರಂಥಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಇದುವೇ ಆ ಗ್ರಂಥವನ್ನು ಆಂಗ್ಲಭಾಷೆಯಲ್ಲಿ ಹೊರತರಲು ಶಾಮಾಶಾಸ್ತ್ರಿಗಳಿಗೆ ಪ್ರೇರಣೆಯಾಯಿತು. ೧೯೧೫ರಲ್ಲಿ ಇದರ ಇಂಗ್ಲೀಷ್ ರೂಪಾಂತರ ಅವರು ಹೊರತಂದರು.

ಕ್ಯೂರೇಟರ್ ಆಗಿದ್ದ ಸಂದರ್ಭದಲ್ಲಿ ಹಲವಾರು ಸಂಸ್ಕೃತ ಗ್ರಂಥಗಳನ್ನು ಸಂಶೋಧಿಸಿ ಪ್ರಕಟಿಸಿದರು. ಬ್ರಹ್ಮ ಸೂತ್ರ ಭಾಷ್ಯ, ಬೋಧಾಯನ ಗೃಹಸೂತ್ರ ಸ್ಮೃತಿಚಂದ್ರಿಕಾ, ತೈತ್ತರೀಯ ಬ್ರಾಹ್ಮಣ, ತೈತ್ತರೀಯ ಬ್ರಾಹ್ಮಣ (ಅಷ್ಟಕ) ಭಾಗ – ೨, ಭಟ್ಟ ಭಾಸ್ಕರ ಮತ್ತು ಸಾಯಣ ಭಾಷ್ಯಗಳೊಡನೆ ಅಲಂಕಾರ ಭಾಗ ಮಣಿಹಾರ ಭಾಗ – ೨, ಬ್ರಹ್ಮಸೂತ್ರಭಾಷ್ಯ (ಆನಂದತೀರ್ಥೀಯ) ತಾತ್ಪರ್ಯಚಂದ್ರಿಕೆಯೊಡನೆ ಭಾಗ – ೪, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಅರ್ಥಶಾಸ್ತ್ರದ ಪದಸೂಚಿ, ಸರಸ್ವತಿ ವಿಲಾಸ ಮುಂತಾದ ೨೫ ಕ್ಕೂ ಹೆಚ್ಚು ಕೃತಿಗಳು ಪ್ರಕಟಿತ. ಸಂಸ್ಕೃತ ಗ್ರಂಥಗಳಲ್ಲದೆ ಕನ್ನಡದಲ್ಲೂ ಹಲವಾರು ಗ್ರಂಥಗಳನ್ನು ಸಂಪಾದಿಸಿ ಪ್ರಕಟಿಸಿದರು. ಕುಮಾರವ್ಯಾಸನ ಮಹಾಭಾರತ (ವಿರಾಟಪರ್ವ) ಲಿಂಗಣ್ಣನ ಕೆಳದಿಯ ನೃಪವಿಜಯ, ಸೋಮರಾಜನ ಉದ್ಭಟ ಕಾವ್ಯ, ರುದ್ರಭಟ್ಟನ ಜಗನ್ನಾಥ ವಿಜಯ,ಕುಮಾರವ್ಯಾಸ ಮಹಾಭಾರತದ ಉದ್ಯೋಗಪರ್ವ, ಸೋಮನಾಥನ ಅಕ್ರೂರ ಚರಿತೆ, ನಯಸೇನನ ಧರ್ಮಾಮೃತ ಭಾಗ-೧, ಕಂಠೀರವ ನರಸರಾಜ ವಿಜಯ, ನಯಸೇನನ ಧರ್ಮಾಮೃತ ಭಾಗ-೨ ಮೊದಲಾದ ಹತ್ತಾರು ಕೃತಿಗಳನ್ನು ಬೆಳಕಿಗೆ ತಂದರು. ಹಲವಾರು ಸಮಿತಿಗಳೊಡನೆ ನಿಕಟ ಸಂಪರ್ಕ ಹೊಂದಿದ್ದು ಮೈಸೂರಿನ ಮಹಾರಾಜ ಸಂಸ್ಕೃತ ಮಹಾಪಾಠ ಶಾಲೆಯ ಕಾರ್ಯಕಾರಿ ಸಮಿತಿ, ಸಂಸ್ಕೃತ ವಿದ್ವತ್ವರೀಕ್ಷಾ ಮಹಾಸಭೆಯ ಸದಸ್ಯರಾಗಿ, ಸಂಸ್ಕೃತ ಭಾಷಾ ವ್ಯಾಸಂಗದ ಅಭಿವೃದ್ಧಿಗಾಗಿ ದುಡಿದರು. ಸಂಸ್ಕೃತ ಭಾಷೆಯ ಪ್ರಚಾರಕ್ಕಾಗಿ ‘ಆರ್ಯ ಧರ್ಮೋಜ್ಜೀವಿನಿ ಸಭಾ’ ಎಂಬ ಸಂಸ್ಥೆಯನ್ನು ಪ್ರಾರಂಭಿಸಿ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಇವರ ನಿಸ್ವಾರ್ಥ ಸೇವೆಗಾಗಿ ಅಮೆರಿಕದ ವಾಷಿಂಗ್‌ಟನ್‌ ವಿಶ್ವ ವಿದ್ಯಾಲಯಕ್ಕೆ ಸೇರಿದ ಓರಿಯಂಟಲ್‌ ಯೂನಿವರ್ಸಿಟಿಯ ಫಿಲಾಸಫಿಕಲ್‌ ಎಂಬ ಸಂಸ್ಥೆ ೧೯೧೯ ರಲ್ಲಿ ಇವರಿಗೆ ಪಿಎಚ್.ಡಿ ಪದವಿ ಕೊಟ್ಟು ಗೌರವಿಸಿತು. ೧೯೨೧ ರಲ್ಲಿ ರಾಯಲ್‌ ಏಷಿಯಾಟಿಕ್‌ ಸೊಸೈಟಿ (ಮುಂಬಯಿ ಶಾಖೆ) ಯುಕಾಂಪ್‌ಬೆಲ್‌ ಸ್ಮಾರಕ ಚಿನ್ನದ ಪದಕ ಕೊಟ್ಟು ಗೌರಿವಿಸಿತು. ಕಲ್ಕತ್ತ ವಿಶ್ವವಿದ್ಯಾಲಯವು ೧೯೨೧ ರಲ್ಲಿ ಡಾಕ್ಟರ್ ಆಫ್‌ ಫಿಲಾಸಫಿ ಪದವಿ ನೀಡಿತು. ಮೈಸೂರಿನ ಮಹಾರಾಜರಿಂದ ಅರ್ಥಶಾಸ್ತ್ರ ವಿಶಾರದ, ಆಗಿನ ಬ್ರಿಟಿಷ್‌ ಸರಕಾರ ಮಹಾಮಹೋಪಾಧ್ಯಾಯ ಪ್ರಶಸ್ತಿ, ಕಾಶಿಯ ಭಾರತ ಧರ್ಮ ಮಹಾಮಂಡಲದಿಂದ ವಿದ್ಯಾಲಂಕಾರ, ಪಂಡಿತರಾಜ ಬಿರುದು ಮತ್ತು ಪ್ರಶ್ತಿ ಮುಂತಾದವುಗಳನ್ನು ಪಡೆದ, ಬಹುಭಾಷಾ ಪ್ರಾಜ್ಞರಾಗಿದ್ದ ಶಾಮಾಶಾಸ್ತ್ರಿಗಳು ೨೩ ರ ಜನವರಿ ೧೯೪೪ ರಲ್ಲಿ ನಿಧನರಾದರು.

ತಾಳೆ ಗರಿ ಪ್ರತಿ

ಒಂದು ಸ್ವಾರಸ್ಯಕರ ಘಟನೆ : "ನಾಲ್ವಡಿ ಕೃಷ್ಣರಾಜ ಒಡೆಯರು" ಒಮ್ಮೆ ಜರ್ಮನಿ ಪ್ರವಾಸ ಕೈಗೊಂಡಿದ್ದರು, ಈ ಸಂದರ್ಭದಲ್ಲಿ ಜರ್ಮನ್ ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಭೇಟಿಯಾಗಿದ್ದರು ಆಗ ಉಪಕುಲಪತಿಗಳು "ನೀವು ಶಾಮಾಶಾಸ್ತ್ರಿಗಳ ಊರಿನವರೆ?’" ಎಂದು ಕೇಳಿದ್ದರಂತೆ. ಇದಾದ ಬಳಿಕ ಮೈಸೂರಿಗೆ ಮರಳಿದ ವಡೆಯರ್ ಶಾಮಾಶಾಸ್ತ್ರಿಗಳನ್ನು ಅರಮನೆಗೆ ಕರೆಯಿಸಿ ಪುರಸ್ಕಾರ ನೀಡಿ ಗೌರವಸಿದ್ದರಂತೆ. "ಮೈಸೂರಿಗೆ ನಾನೆ ರಾಜ ನೀವೊಬ್ಬ ಪ್ರಜೆ, ಆದರೆ ಮೈಸೂರಿನಿಂದಾಚೆಗೆ ನಿಮ್ಮಿಂದ ನಾನು ಗುರುತಿಸಲ್ಪಡುತಿದ್ದೆನೆ" ಎಂದು ಹೇಳಿದ್ದರಂತೆ. ಸಂದ ಪದವಿ, ಗೌರವಗಳು : ಶಾಮಾಶಾಸ್ತ್ರಿಗಳು ೧೯೧೯ರಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕಾರ ಪಡೆದಿದ್ದರು. ೧೯೨೧ರಲಿ ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಗೌರವಕ್ಕೊ ಪಾತ್ರರಾಗಿದ್ದರು.

ಮುದ್ರಿತ ಪ್ರತಿ