ಆರ್.ಕೆ.ಲಕ್ಷ್ಮಣ್
ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಅಯ್ಯರ್ ಅವರು, ಅವರ ಸ್ನೇಹಿತರಿಗೆ, ಆಪ್ತರಿಗೆ,ಹಾಗೂ ಅವರ ಕಾರ್ಟೂನ್ ಪ್ರಿಯರಿಗೆ, 'ಆರ್.ಕೆ.ಲಕ್ಷ್ಮಣ್' ಎನ್ನುವ ಹೆಸರಿನಲ್ಲಿ ಜನಪ್ರಿಯರಾಗಿದ್ದಾರೆ.[೧] ಭಾರತದ ಇಂಗ್ಲೀಷ್ ಭಾಷೆಯ ಖ್ಯಾತ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಒಳ್ಳೆಯ ಲೇಖಕರಾಗಿಯೂ ಹೆಸರು ಪಡೆದಿದ್ದರು. ವ್ಯಂಗ್ಯಚಿತ್ರಕಾರರಾಗಿ ಆಂಗ್ಲಭಾಷಾ ಪತ್ರಿಕೆಯಲ್ಲಿ ದಶಕಗಳ ಕಾಲ ಕೆಲಸ ನಿರ್ವಹಿಸಿ ಜನಪ್ರಿಯರಾಗಿದ್ದರು.
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]ಲಕ್ಷ್ಮಣ್ ರವರು,ಅವರು ಅಕ್ಟೋಬರ್ ೨೪, ೧೯೨೧ ರಂದು ಮೈಸೂರಿನ ಲಕ್ಷ್ಮೀಪುರಂನಲ್ಲಿ ಜನಿಸಿದರು. [೨] ತಂದೆ ಕೃಷ್ಣಸ್ವಾಮಿ. ಇವರ ತಾಯಿಯವರು ಮೈಸೂರು ಮಹಾರಾಣಿಯವರಿಗೆ ತುಂಬ ಆಪ್ತರು. ಇವರು ತಮ್ಮ ಪ್ರಾಥಮಿಕ ಶಿಕ್ಷಣ ಪಡೆದದ್ದು ಕನ್ನಡ ಮಾಧ್ಯಮದಲ್ಲಿ. ಬಾಲ್ಯದಲ್ಲಿ ಗೋಡೆ, ನೆಲ, ಹೀಗೆ ಎಲ್ಲೆಂದರಲ್ಲಿ ಚಿತ್ರ ಬಿಡಿಸುತ್ತಿದ್ದರು. "ಪುಣ್ಯಕೋಟಿ" ಪದ್ಯ ಅವರ ಮೇಲೆ ಗಾಢ ಪರಿಣಾಮ ಬೀರಿತ್ತು. ತಂದೆಯವರು ತಮಿಳುನಾಡಿನ ಸೇಲಂನಿಂದ ಬಂದು ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯರಾಗಿದ್ದರು. ಸುಪ್ರಸಿದ್ಧ ಕಾದಂಬರಿಕಾರ ಆರ್. ಕೆ. ನಾರಾಯಣ್ ಇವರ ಅಣ್ಣ, ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದರು.
ಕನ್ನಡದ ಕೊರವಂಜಿ ಪತ್ರಿಕೆಯಿಂದ ಆರಂಭ
[ಬದಲಾಯಿಸಿ]- ಕನ್ನಡದ "ಕೊರವಂಜಿ ಹಾಸ್ಯಪತ್ರಿಕೆ”ಯಿಂದ ಲಕ್ಷ್ಮಣರ ವ್ಯಂಗ್ಯಚಿತ್ರಜೀವನ ಶುರುವಾಯಿತು. ಕೊರವಂಜಿ ಪತ್ರಿಕೆಗೆ ೧೯೬೭ ರಲ್ಲಿ ಮುಖಪುಟ ಹಾಗೂ ಚಿತ್ರಗಳನ್ನು ಬರೆದು ಮುಂದೆ ನಿರಂತರ ದುಡಿಮೆಯಿಂದ ತಮ್ಮ ಕ್ಷೇತ್ರದಲ್ಲಿ ಪಸಿದ್ಧಿ ಪಡೆದರು.
- ಪತ್ರಿಕೆಯ ಪ್ರಥಮ ಪ್ರತಿ, ೧೯೪೨ ರ 'ಚಿತ್ರಭಾನು ಸಂವತ್ಸರ'ದ 'ಯುಗಾದಿ ಹಬ್ಬ'ದ ಶುಭದಿನದಂದು ವಾಚಕರ ಕೈಸೇರಿತು.
ವೃತ್ತಿಜೀವನ
[ಬದಲಾಯಿಸಿ]- ಭಾರತದಂತಹ ವೈವಿಧ್ಯಮಯ ದೇಶದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳೊದನೆ ಬೆಳೆಯುವ ನಿರ್ಧಾರ ಕೈಗೊಂಡರು. ಮೊದಲು ಅವರು ನೌಕರಿ ಹೂಡುಕಿಕೊಂಡು ದೆಹಲಿಗೆ ಹೋದರು. ಅಲ್ಲಿ ಹಿಂದುಸ್ಥಾನ್ ಟೈಮ್ಸ್ ಪತ್ರಿಕೆಗೆ ಅರ್ಜಿ ಸಲ್ಲಿಸಿದರು.
- ಅವರ ರೇಖಾಚಿತ್ರಗಳು ಊಹಿಸಿದಷ್ಟು ಒಳ್ಳೆಯ-ಪ್ರತಿಕ್ರಿಯೆ ಗಳಿಸಲಿಲ್ಲ. ಸ್ವಲ್ಪದಿನ ಸಣ್ಣಪತ್ರಿಕೆಗಳಲ್ಲಿ ಕೆಲಸಮಾಡಲು ಸಲಹೆಗಳು ಬಂದವು. ದಿಲ್ಲಿಯಿಂದ ಅವರು ಮುಂಬಯಿಗೆ ಬಂದರು. ಅಲ್ಲಿ 'ಫ್ರೀಪ್ರೆಸ್ ಜರ್ನಲ್'ನಲ್ಲಿ ೬ ತಿಂಗಳು ನೌಕರಿಮಾಡಿದರು. ಅಲ್ಲಿ ಅವರು 'ಬಾಳ್ ಠಾಕ್ರೆ'ಯವರ ಸಹೋದ್ಯೋಗಿಯಾಗಿದ್ದರು.
- ಒಂದು ದಿನ, 'ಹಾರ್ನ್ ಬಿ ರಸ್ತೆ'ಯ ಹತ್ತಿರಲ್ಲೇ ಇದ್ದ, 'ಟೈಮ್ಸ್ ಆಫ್ ಇಂಡಿಯ' ಕಛೇರಿಗೆ ನೇರವಾಗಿ ನಡೆದರು. ಸಂಪಾದಕ ವಾಲ್ಟರ್ ಲಂಘಾಮರ್‌ರವರ ಕಲೆಯ ನಿದೇಶಕರಾಗಿದ್ದರು. ಅವರಿಗೆ ಲಕ್ಷ್ಮಣ್ ರವರ ಚಿತ್ರಕಲೆಯ ಬಗ್ಗೆ ಸ್ವಲ್ಪ ತಿಳಿದಿತ್ತು. ತಕ್ಷಣ ಅವರಿಗೆ ನೌಕರಿ ಸಿಕ್ಕಿತು.
- ೬ ದಶಕಗಳಕಾಲ ಎಡೆಬಿಡದೆ ನಡೆದು ಅವರು ತಮ್ಮ ಛಾಪನ್ನು ಉಳಿಸಿಕೊಂಡು ಬಂದಿದ್ದಾರೆ. ಅವರ ಸಮಯದಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಚಿತ್ರಗಳಿಗೆ ಎಡೆಮಾಡಿ ಕೊಡಲಾಗುತ್ತಿತ್ತು. ಚಿತ್ರಗಳು ಮುಖ್ಯ ಪುಟಗಳಿಗೆ ಪೂರಕವಾಗಿ ಇರುತ್ತಿದ್ದವೇ ವಿನಃ, ಅವು ಬಹಳ ಸಮಯ, ಪ್ರಮುಖ ಮುಖಪುಟದ ವಸ್ತುವಾಗಿ ಮೆರೆಯಲು ಲಕ್ಷ್ಮಣ್ ಬಹಳ ಶ್ರಮಿಸಬೇಕಾಯಿತು.
- ಲಕ್ಷ್ಮಣ್ ನಿವೃತ್ತರಾಗಿ ಹಲವು ವರ್ಷಗಳೇ ಆದರೂ ಲಕ್ಷ್ಮಣ್ ಸಕ್ರಿಯವಾಗಿ ಪತ್ರಿಕೆಗೆ ಬೇಕಾದ ಪರಿಕರಗಳನ್ನೂ ಸಂಬಂಧಿಸಿದ ಕೆಲಸಗಳನ್ನೂ ಅವರ ಮನೆಯಿಂದಲೇ ಮಾಡಿ ಒದಗಿಸುತ್ತಿದ್ದರು. ನಿವೃತ್ತಿ ಅನಂತರ ಅವರು ಟೈಮ್ಸ್ ಆಫ್ ಇಂಡಿಯ ದೈನಿಕಕ್ಕೆ ಮೊದಲ ಪುಟದ ವ್ಯಂಗ್ಯ ಚಿತ್ರಾಂಕಣದಲ್ಲಿ ಬರೆಯುತ್ತಿರಲಿಲ್ಲವಾದರೂ ಅವರ ಮಾರ್ಗದರ್ಶನದಲ್ಲಿ ಬೇರೆಯವರು ಬರೆಯುತ್ತಿದ್ದರು. ಪತ್ರಿಕೆಯಲ್ಲಿ 'ಪಾಸಿಂಗ್ ಥಾಟ್', ಎಂಬ ಶೀರ್ಷಿಕೆಯಡಿಯಲ್ಲಿ ಹಿಂದೆ ಬರೆದ ಅವರ ಒಂದು ಅದ್ಭುತಚಿತ್ರವನ್ನು ಇಂದೂ ನಾವು ಕಾಣಬಹುದು.
ಕಾಮನ್ ಮ್ಯಾನ್
[ಬದಲಾಯಿಸಿ]- ೧೯೫೧ ರಲ್ಲಿ ಪ್ರಾರಂಭಿಸಿ 'ಟೈಮ್ಸ್ ಆಫ್ ಇಂಡಿಯ ದಿನ ಪತ್ರಿಕೆ'ಯಲ್ಲಿ ಬರೆಯುತ್ತಿದ್ದ 'ಕಾಮನ್ ಮ್ಯಾನ್' ಅವರಿಗೆ ಪ್ರಚಂಡ ಖ್ಯಾತಿ ತಂದು ಕೊಟ್ಟಿದೆ.
- ಕಾಮನ್ ಮ್ಯಾನ್‌ನ ಕಲ್ಪನೆ ಅವರ ಮನಸ್ಸಿನಲ್ಲಿ ಸುಪ್ತವಾಗಿತ್ತು. ನಮ್ಮ ಮುಂದೆ ನಡೆಯುವ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದ್ದೂ ಅವನ್ನೆಲ್ಲಾ ಮನೋ ಸ್ಥೈರ್ಯದಿಂದ ಎದುರಿಸಲು ಪ್ರಯತ್ನಿಸುತ್ತಿರುವ ಒಬ್ಬ ಭಾರತೀಯನ ಪಾತ್ರವೇ ಆ ಕಾಮನ್ ಮ್ಯಾನ್. ಶ್ರೀ ಅಪ್ಪಾಜಿರಾಯರ ಹಾವಭಾವಗಳನ್ನು ಕಣ್ಣಿಟ್ಟು ಲಕ್ಷ್ಮಣ್ ಅವರಲ್ಲಿ ಏನೋ ವಿಶೇಷತೆಯನ್ನು ಕಂಡರು. ಅಪ್ಪಾಜಿರಾಯರು ಅವರಿಗೆ ಸ್ಪೂರ್ಥಿಯಾದರು. ತಕ್ಷಣವೇ ಅವರು ಹೇಳಬಯಸುತ್ತಿದ್ದ ಮಾತುಗಳನ್ನೆಲ್ಲಾ ತಮ್ಮ ಪುಟ್ಟ 'ವ್ಯಂಗ್ಯ ಚಿತ್ರಾಂಕಣ' ದಲ್ಲಿ ಹೇಳುತ್ತಾ ಬಂದರು. (ಅವೆಲ್ಲಾ ವಿಶ್ವದ ಒಳಿತು ಕೆಡಕುಗಳ ಇಣುಕು ನೋಟಗಳು-ಕಾಮನ್ ಮ್ಯಾನ್ ದೃಷ್ಟಿಕೋನದಿಂದ). 'ಕಾಮನ್ ಮ್ಯಾನ್' ಉದ್ಭವಿಸಿದ್ದು ಹೀಗೆ. ಕಚ್ಚೆಪಂಚೆ, ಚೌಕಳಿ ಅಂಗಿ, ಪೊದೆ ಹುಬ್ಬು, ಚಪ್ಪಟೆ ಮೂಗು, ಪೊರಕೆ ಮೀಸೆ, ಹಳೆ ಕನ್ನಡಕ, ಚಪ್ಪಲಿ, ಆಗಾಗ ಕಾಲಮಾನಕ್ಕೆ ತಕ್ಕಂತೆ ಛತ್ರಿ ಇತ್ಯಾದಿಗಳ ಬಳಕೆ. ಇವು ಅವನ ವೇಷ ಭೂಷಣಗಳು. ಬೆರಗು ಕಣ್ಣುಗಳನ್ನು ಅರಳಿಸಿ, ಅಂದಿನ ವಿದ್ಯಮಾನಗಳನ್ನು ದಿಟ್ಟಿಸಿ ನೋಡಿ, ಎಲ್ಲಾ ಅರ್ಥವಾದರೂ ತುಟಿ-ಪಿಟಿಕ್ಕೆನ್ನದೆ ಮುಖದ ಪ್ರತಿಕ್ರಿಯೆಯಿಂದಲೇ ಸಾವಿರಾರು ಸಾಲುಗಳನ್ನು ಹೇಳಿ ನಗಿಸಲು ಅನುವು ಮಾಡಿಕೊಡುತ್ತಿರುವ ಅವನ ರೀತಿ ಅನನ್ಯ.'ಟೈಮ್ಸ್ ಆಫ್ ಇಂಡಿಯ ಪತ್ರಿಕೆ' ತನ್ನ ೧೫೦ ವರ್ಷಗಳ ಹಬ್ಬವನ್ನು ಆಚರಿಸಿದ ಸಂಧರ್ಭದಲ್ಲಿ ಲಕ್ಷ್ಮಣ್ ಅಭಿಮಾನಿ, ಪ್ರಶಂಸಕ, ಸಂಸ್ಥೆಯ ನಿರ್ದೇಶಕರಾದ ಡಾ.ಎಸ್.ಬಿ.ಮುಜುಮ್ದಾರ್ ೮ ಅಡಿ ಎತ್ತರದ ಕಂಚಿನ 'ಕಾಮನ್ ಮ್ಯಾನ್ ವಿಗ್ರಹ'ವನ್ನು ಮಾಡಿಸಿ ತಮ್ಮ ಕಾಲೇಜಿನ ಪ್ರವೇಶದಲ್ಲಿ ಸ್ಥಾಪಿಸಿದರು. ಅದನ್ನು ಆಗಿನ ರಾಷ್ಟ್ರಪತಿ ಡಾ.ನಾರಾಯಣನ್ ಉದ್ಘಾಟಿಸಿದ್ದರು.
ಲಕ್ಷಣ್ ವ್ಯಕ್ತಿತ್ವ
[ಬದಲಾಯಿಸಿ]- ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೇವಲ ವ್ಯಂಗ್ಯಚಿತ್ರಗಳಷ್ಟನ್ನೇ ಬರೆಯುತ್ತಾ, ಇಷ್ಟು ದೀರ್ಘ ಕಾಲ ಅನಭಿಶಕ್ತ ದೊರೆಯಂತೆ ಮೆರೆದ ವ್ಯಕ್ತಿ ಇನ್ನೊಬ್ಬನಿಲ್ಲ. ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಫ್ರೇಮಿನ ದೊಡ್ಡ ಕನ್ನಡಕದ 'ದೈತ್ಯ ಪ್ರತಿಭೆ'ಯ ಲಕ್ಷ್ಮಣ್ ಅಬಿಮಾನಿಗಳ ಸಂಖ್ಯೆ ಅಸಂಖ್ಯ.
- ಇದುವರೆವಿಗೂ ಕೈ ಗಡಿಯಾರ ಕಟ್ಟದ, ಎಂದೂ ದಿನಚರಿ ಬರೆಯುವ ಅಭ್ಯಾಸವಿಲ್ಲದ ಕ್ಯಾಲೆಂಡರ್ ನೋಡಿಯೇ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸದ, ಲಕ್ಷ್ಮಣ್ ಮೇಲ್ ನೋಟಕ್ಕೆ ಒಬ್ಬ ವಿಚಿತ್ರವ್ಯಕ್ತಿಯಂತೆ ಕಂಡರೂ ಈ ಚಿತ್ರಕಲಾವಿದನಲ್ಲಿ ಮೇಳೈಸಿರಿವ ಮೇಧಾವಿ, ಚಿಂತಕ, ಮತ್ತು ಒಬ್ಬ ಸಮರ್ಥ ಲೇಖಕನನ್ನು ನಾವು ಕಾಣುತ್ತೇವೆ. ಅವರ ಕ್ಷೇತ್ರದಲ್ಲಿ 'ದಿಗ್ಗಜ'ರಂತೆ ಮೆರೆದ ಹೆಗ್ಗಳಿಕೆ ಅವರದು.
- ಲಕ್ಷ್ಮಣರಿಗೆ 'ಕಾಗೆ' ಬಹಳ ಅಚ್ಚು ಮೆಚ್ಚಿನ ಪಕ್ಷಿ. ಯಾವಾಗಲೂ ಅದು ಅವರ ಪ್ರದರ್ಶನದ ಪ್ರುಮುಖ ಆಕರ್ಷಣೆಯ ಕೇಂದ್ರವಾಗಿರುತ್ತಿತ್ತು.
ಸಚಿತ್ರ-ಪುಸ್ತಕಗಳು
[ಬದಲಾಯಿಸಿ]- 'ದ ಟನಲ್ ಆಫ್ ಟೈಮ್'(ಆತ್ಮಕತೆ) - ಏಪ್ರಿಲ್ ೧೯೯೯.
- 'ಸರ್ವೆಂಟ್ಸ್ ಆಫ್ ಇಂಡಿಯ'- ಏಪ್ರಿಲ್ ೨೦೦೨.
- 'ದ ಮೆಸೆಂಜರ್'
- 'ಹೋಟೆಲ್ ರೆವ್ಯೇರಾ'
- 'ದ ಬೆಸ್ಟ್ ಆಫ್ ಲಕ್ಷ್ಮಣ್ ಸೀರಿಸ್'
- '೫೦ ಇಯರ್ಸ್ ಆಫ್ ಇಂಡಿಯ', (Through the eyes of R.K.Laxman)
- 'ಡಿಸ್ಟಾರ್ಟೆಡ್ ಮಿರರ್'-ಮಾರ್ಚ್ ೨೦೦೪
- 'ಬ್ರಷಿಂಗ್ ಆಫ್ ದ ಇಯರ್ಸ್': ಎ ಕಾರ್ಟೂನಿಸ್ಟ್ ಹಿಸ್ಟರಿ ಆಫ್ ಇಂಡಿಯಾ, ೧೯೪೭-೨೦೦೪, (ನವೆಂಬರ್, ೨೦೦೫)
- ದಿ ಇಲೋಕ್ವೆಂಟ್ ಬ್ರಶ್: ಎ ಸೆಲೆಕ್ಷನ್ ಆಫ್ ಕಾರ್ಟೂನ್ಸ್ ಫ್ರಮ್ ನೆಹರು ಟು ರಾಜೀವ್
- ದಿ ರೀಲ್ ವರ್ಲ್ಡ್
- ಲಕ್ಷಣ್ ರೇಖಾ (ಆತ್ಮಕತೆ - ಮರಾಠಿಯಲ್ಲಿ)
ಗೌರವ, ಪ್ರಶಸ್ತಿಗಳು
[ಬದಲಾಯಿಸಿ]- ಬಿ.ಡಿ.ಗೊಯೆಂಕ ಅವಾರ್ಡ್ -ಇಂಡಿಯನ್ ಎಕ್ಸ್ ಪ್ರೆಸ್.
- ದುರ್ಗಾರತನ್ ಗೋಲ್ಡ್ ಮೆಡಲ್, -ಹಿಂದೂಸ್ತಾನ್ ಟೈಮ್ಸ್.
- ಪದ್ಮ ಭೂಷಣ, ಪದ್ಮ ವಿಭೂಷಣ, ೨೦೦೫ - ಭಾರತ ಸರ್ಕಾರ.
- ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ-ಶ್ರೇಷ್ಟ ಪತ್ರಿಕೋದ್ಯಮ, ಸಾಹಿತ್ಯ, ಕಲೆ ಅಭಿವ್ಯಕ್ತಿಗಾಗಿ, ೧೯೮೪
- ಮಹಾರಾಷ್ಟ್ರದ ಮರಾಠವಾಡ ವಿಶ್ವವಿದ್ಯಾಲಯ, ಮತ್ತು ದೆಹಲಿ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್‌ಗಳು.[೩]
- ಜೀವಮಾನದುದ್ದಕ್ಕೂ ಪತ್ರಿಕೋದ್ಯಮಕ್ಕೆ ಮಾಡಿದ ಅವರ ಸೇವೆಯನ್ನು ಗುರುತಿಸಿ 'ಸಿ.ಎನ್.ಎನ್ ಐ.ಬಿ.ಎನ್. ವಾರ್ತಾಸಂಸ್ಥೆ' ಪ್ರಶಸ್ತಿ. ೨೦೦೮
- 'ಟೈಮ್' ಮ್ಯಾಗಜೈನ್,' ಅವರನ್ನು ದೇಶದ ಅತ್ಯಂತ 'ಪ್ರತಿಭಾನ್ವಿತ ವ್ಯಂಗ್ಯ ಚಿತ್ರಕಾರ', 'ಪ್ರಭಾವಿ ರಾಜಕೀಯ ವಿಡಂಬನಕಾರ'ನೆಂದು ಗುರುತಿಸಿದೆ.[೪]
- ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ೨೦೦೪
- ಅವರ ಚಿತ್ರಗಳು ಮುಂಬಯಿ ನ ಪ್ರತಿಷ್ಟಿತ 'ಜೆಹಾಂಗೀರ್ ಆರ್ಟ್ಸ್ ಗ್ಯಾಲರಿ'ಯಲ್ಲಿ ಹಲವು ಬಾರಿ ಪ್ರದರ್ಶಿಸಲ್ಪಟ್ಟಿವೆ.
ಪರಿವಾರ
[ಬದಲಾಯಿಸಿ]- ಮೈಸೂರಿನಲ್ಲಿ ಜನಿಸಿದ ಲಕ್ಷ್ಮಣ್ ಹೆಚ್ಚಾಗಿ ಜೀವಿಸಿದ್ದು ಕರ್ನಾಟಕದ ಹೊರಗೆ. ಬಾಲ್ಯ ಹಾಗೂ ಯೌವ್ವನಾವಸ್ಥೆಗಳನ್ನು ಕನ್ನಡನಾಡಿನಲ್ಲಿ ಕಳೆದ ಲಕ್ಷ್ಮಣ್, ತಮ್ಮ ವೃತ್ತಿಜೀವನದ ಬಹುಭಾಗವನ್ನು ಕಳೆದದ್ದು ಮುಂಬಯಿ, ಪುಣೆ ನಗರಗಳಲ್ಲಿ. ಮದ್ರಾಸ್, ಕೋಲ್ಕತಾ, ಹೊಸದೆಹಲಿ ಮತ್ತಿತರ ನಗರಗಳಲ್ಲಿಯೂ ಸ್ವಲ್ಪದಿನ ಇದ್ದರು. ಲಕ್ಷ್ಮಣರಿಗೆ ಒಬ್ಬ ಮಗ ಶ್ರೀನಿವಾಸ್. ಸೊಸೆ ಉಷಾ, ಮೊಮ್ಮಗಳು ರಿಮನಿಕಾ ಹಾಗೂ ಪತ್ನಿ ಕಮಲಾ ಜೊತೆಯ ಒಂದು ಚಿಕ್ಕ ಕುಟುಂಬ. ಮುಂಬಯಿ ಮತ್ತು ಪುಣೆಗಳಲ್ಲಿ ವಾಸ್ತವ್ಯ. ಪ್ರಸಿದ್ಧ ಬರಹಗಾರರಾದ ಆರ್.ಕೆ.ನಾರಾಯಣ್ ಇವರ ಸಹೋದರರು.
ನಿಧನ
[ಬದಲಾಯಿಸಿ]- ಡಾ. ಆರ್.ಕೆ.ಲಕ್ಷ್ಮಣ್,[೫] ೨೦೧೦ ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.[೬] ೨೦೧೫ರಲ್ಲಿ ಅವರು ಶ್ವಾಸಕೋಶ, ಹಾಗೂ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿತಿ ತೀರಾ ಹದೆಗೆಟ್ಟು ೧೭, ಶನಿವಾರ 'ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆ'ಗೆ ದಾಖಲಿಸಿ 'ಡಯಾಲಿಸಿಸ್' ಮಾಡಲಾಗುತ್ತಿತ್ತು.[೭]
- ಜನವರಿ ೧೮,೨೦೧೫ ಭಾನುವಾರದ ಹೊತ್ತಿಗೆ ಅನೇಕ ಅಂಗಾಂಗಳಲ್ಲಿ ವೈಫಲ್ಯ ಕಂಡು ಬಂದಿತು. ಅವರ ಆರೋಗ್ಯ ಗಂಭೀರವಾಗಿದ್ದು ತುರ್ತು ನಿಗಾ ಘಟಕದಲ್ಲಿ (ICU) 'ಡಾ.ಸಮೀರ್ ಜೋಗ್', ನಿಗರಾನಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷಣ್, ಸೋಮವಾರ, ೨೬ ಜನವರಿ ೨೦೧೫ರಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.[೮][೯] ಪುಣೆಯಲ್ಲಿ ಸಕಲ ಸರ್ಕಾರಿ ಮರ್ಯಾದೆಗಳೊಂದಿಗೆ ಅವರ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರ ೨೭,ಜನವರಿ,ಮಂಗಳವಾರ ೨೦೧೫ ರಂದು,ನಡೆಯಿತು.[೧೦]
ಉಲ್ಲೇಖಗಳು
[ಬದಲಾಯಿಸಿ]- ↑ http://www.britannica.com/EBchecked/topic/1910611/RK-Laxman
- ↑ The Common man is still at work, Updated on Oct, 25,2022,the hindu.com,Pune, Amruta Byatnalವಿಕಿಪೀಡಿಯವೂ ಸೇರಿದಂತೆ, ಇಂಟರ್ನೆಟ್ ಮಾಹಿತಿ ಜಾಲತಾಣಗಳು ಆರ್.ಕೆ.ಲಕ್ಷ್ಮಣ್ ರ ಜನ್ಮದಿನವನ್ನು ಅಕ್ಟೋಬರ್, ೨೩, ೧೯೨೪, ಎಂದು ತಪ್ಪಾಗಿ ದಾಖಲಿಸುತ್ತಾ ಬಂದಿವೆಯೆಂಬ ಮಾತನ್ನು ಹಿಂದೂ ಪತ್ರಿಕೆಯ ವರದಿಯಲ್ಲಿ ಖಚಿತಪಡಿಸುತ್ತಾ, ವಿಷಾದಿಸಿದ ಶ್ರೀಮತಿ ಕಮಲಾ ಲಕ್ಷ್ಮಣ್, ೧೯೨೧ ನೆಯ ಇಸವಿ ಸರಿಯಾದ ಜನ್ಮದಿನವೆಂದು ವಿಧ್ಯುಕ್ತವಾಗಿ ಘೋಷಿಸಿದರು. ಅದನ್ನು ಶ್ರೀಮತಿ ಉಷಾ ಲಕ್ಷಣ್ (ಲಕ್ಷ್ಮಣ್ ರ ಸೊಸೆ) ಸಹಿತ ಅನುಮೋದಿಸಿದರು]
- ↑ http://www.harmonyindia.org/hportal/VirtualPrintView.jsp?page_id=997
- ↑ 'Times of India - Interview'
- ↑ "ಟೈಮ್ಸ್ ಆಫ್ ಇಂಡಿಯ, 'No more Laxman rekhas,' page.3". Archived from the original on 2015-01-30. Retrieved 2015-01-28.
- ↑ "TOI, page.12, 'Nothing in my life has been intentional', 'it's all accident January', 28, 2015". Archived from the original on 2015-01-30. Retrieved 2015-01-28.
- ↑ "TOI, page.13, HONOURED BY INDIRA, BANNED BY MORARJI". Archived from the original on 2015-01-30. Retrieved 2015-01-28.
- ↑ News world news, January 27, 2015, Indian cartoonist RK Laxman dies
- ↑ BBC, 'R,K,Laxman: Chronicler of Indian life'-Soutik Biswas ೨೬,ಜನವರಿ,೨೦೧೫
- ↑ BBC, Times of India cartoonist RK Laxman cremated 27,jan,15-ವರದಿಗಾರ : ಸೌತಿಕ್ ಬಿಸ್ವಾಸ್.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಆರ್.ಕೆ.ಲಕ್ಷ್ಮಣ್ ನುಡಿನಮನ,ವಿಜಯವಾಣಿ,೨೭ಜನವರಿ೨೦೧೫
- ಅನಂತಮೂರ್ತಿ ಮಾತುಕತೆ – ಹತ್ತು ಸಮಸ್ತರ ಜೊತೆ : ಆರ್.ಕೆ.ಲಕ್ಷ್ಮಣ್ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ., ಕಣಜ - ಅಂತರಜಾಲ ಕನ್ನಡ ಜ್ಞಾನಕೋಶ
- ಆರ್ ಕೆ ಲಕ್ಷ್ಮಣ್ ಮತ್ತು ಕಾಗೆ Archived 2015-03-19 ವೇಬ್ಯಾಕ್ ಮೆಷಿನ್ ನಲ್ಲಿ., ಕನ್ನಡಪ್ರಭ,೨೭ಜನವರಿ೨೦೧೫
- 'ಟೈಮ್ಸ್ ಆಫ್ ಇಂಡಿಯ','Good times, mad times', page 14 Archived 2015-01-30 ವೇಬ್ಯಾಕ್ ಮೆಷಿನ್ ನಲ್ಲಿ.
- 'ಟೈಮ್ಸ್ ಆಫ್ ಇಂಡಿಯ','Rushdie and the common man' page.15 Archived 2015-01-30 ವೇಬ್ಯಾಕ್ ಮೆಷಿನ್ ನಲ್ಲಿ.
- 'ಆರ್.ಕೆ.ಲಕ್ಷ್ಮಣ್: ಭಾರತ ವ್ಯಂಗ್ಯಚಿತ್ರ ಕ್ಷೇತ್ರದ ಶೇಕ್ಸ್ಪಿಯರ್' Archived 2015-01-27 ವೇಬ್ಯಾಕ್ ಮೆಷಿನ್ ನಲ್ಲಿ., ಉದಯವಾಣಿ ಪತ್ರಿಕೆ, ಜನವರಿ,೨೭,೨೦೧೫
- Articulations: 'Voices from Contemporary Indian Visual Art',-By Aditi De
- oneindia.com (ಕನ್ನಡ) January 27, 2015, 'ಚಿತ್ರಗಳಲ್ಲಿ ಆರ್.ಕೆ. ಲಕ್ಷ್ಮಣ್ ಅಂತ್ಯಸಂಸ್ಕಾರ'
ಅಡಿ ಟಿಪ್ಪಣಿ
[ಬದಲಾಯಿಸಿ]- 'ಲಕ್ಷ್ಮಣ್' ರವರ ಹುಟ್ಟಿದ ತಾರೀಖಿನ ಬಗ್ಗೆ ವಿವಾದಗಳಿವೆ. ೧೯೨೪, ೨೩, ಅಕ್ಟೋಬರ್, ಎಂದು ಒಂದುಕಡೆ ದಾಖಲಿಸಿದರೆ, ಇನ್ನೊಂದುಕಡೆ, ೧೯೨೧,೨೪,ಅಕ್ಟೋಬರ್ [೧] ಎಂದು ದಾಖಲಿಸಿದ್ದಾರೆ. ಈ ದಾಖಲೆಗಳನ್ನು ಕ್ರಮವಾಗಿ ಕನ್ನಡ ಹಾಗೂ ಇಂಗ್ಲೀಷ್ 'ವಿಕಿಪೀಡಿಯ' ಲೇಖನಗಳಲ್ಲಿ ಓದಬಹುದಾಗಿದೆ.
ಚಿತ್ರಗಳು
[ಬದಲಾಯಿಸಿ]-
'ಚಂದ್ರ ಗ್ರಹದಲ್ಲಿ ವಾಸಿಸಲು 'ಕಾಮನ್ ಮ್ಯಾನ್' ನ ಆಯ್ಕೆ'
-
'ಕಾಮನ್ ಮ್ಯಾನ್ ಕಲ್ಪನೆ ಬರುವ ಮುನ್ನ, ಲಕ್ಷ್ಮಣ್ ರ ವ್ಯಂಗ್ಯಚಿತ್ರ'
-
ಆರ್.ಕೆ.ಲಕ್ಷ್ಮಣ್ ಮತ್ತು ಪತ್ನಿ ಹಾಗೂ ಎಸ್.ಎಂ.ಕೃಷ್ಣರವರ ಜೊತೆ
-
A tribute to the late R. K. Laxman by cartoonist Shekhar Gurera
-
"The Common Man" by R K Laxman at Symbiosis Institute, Pune
-
'ಚುನಾವಣೆಯ ಸಮಯದಲ್ಲಿ ಕಾಮನ್ ಮ್ಯಾನ್ ಗೆ ಹೆಚ್ಚಿನ ಆದ್ಯತೆ'
-
'ಕೊರವಂಜಿ ಪತ್ರಿಕೆ, ಆರ್.ಕೆ.ಲಕ್ಷಣ್ ರವರ ಮುಖಪುಟದ ಚಿತ್ರದೊಂದಿಗೆ'
-
"೧೯೪೭ ರ, ಕೊರವಂಜಿ ಹಾಸ್ಯಪತ್ರಿಕೆ”
-
'ಆರ್.ಕೆ.ಲಕ್ಷ್ಮಣ್,' ರಿಗೆ ಪ್ರಿಯವಾದ ಪಕ್ಷಿ,'ಕಾಗೆ'
-
'ಮಾಜಿ-ರಾಷ್ಟ್ರಾಧ್ಯಕ್ಷ ಕಲಾಂ, ಲಕ್ಷ್ಮಣರ ಕುಂಚದಲ್ಲಿ'
.
- ↑ The Common Man is still at work:thehindu.com, OCTOBER 25, 2011- AMRUTHA BYATNAL, ವಿಕಿಪೀಡಿಯವೂ ಸೇರಿದಂತೆ, ಇಂಟರ್ನೆಟ್ ಮಾಹಿತಿ ಜಾಲತಾಣಗಳು ಆರ್.ಕೆ.ಲಕ್ಷ್ಮಣ್ ರ ಜನ್ಮದಿನವನ್ನು ಅಕ್ಟೋಬರ್, ೨೩, ೧೯೨೪, ಎಂದು ತಪ್ಪಾಗಿ ದಾಖಲಿಸುತ್ತಾ ಬಂದಿವೆಯೆಂಬ ಮಾತನ್ನು ಖಚಿತಪಡಿಸುತ್ತಾ, ವಿಷಾದಿಸಿದ ಶ್ರೀಮತಿ ಕಮಲಾ ಲಕ್ಷ್ಮಣ್, ೧೯೨೧ ನೆಯ ಇಸವಿ ಸರಿಯಾದ ಜನ್ಮದಿನವೆಂದು ವಿಧ್ಯುಕ್ತವಾಗಿ ಘೋಷಿಸಿದರು. ಅದನ್ನು ಶ್ರೀಮತಿ ಉಷಾ ಲಕ್ಷಣ್ (ಲಕ್ಷ್ಮಣ್ ರ ಸೊಸೆ) ಸಹಿತ ಅನುಮೋದಿಸಿದರು.