ಆರ್ಯಶೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸು. ೪ನೆಯ ಶತಮಾನ. ಸುಪ್ರಸಿದ್ಧ ಜಾತಕಮಾಲೆಯನ್ನು ಬರೆದವ. ಅಶ್ವಘೋಷನೇ ಈತನೆಂದು ಟಿಬೆಟನ್ ಧಾರ್ಮಿಕಇತಿಹಾಸವನ್ನು ಬರೆದ ತಾರಾನಾಥ ಲಾಮಾ ವಾದಿಸುತ್ತಾನೆ. ಈ ಗ್ರಂಥದಲ್ಲಿ ಮೂವತ್ತ ನಾಲ್ಕು ಜಾತಕ ಕಥೆಗಳಿವೆ. ಇವು ಬೋಧಿಸತ್ತ್ವನ ಪಾರಮಿತಗಳನ್ನು ನಿರೂಪಿಸುವ[ಕಥೆಗಳು. ಬಹುಮಟ್ಟಿಗೆ ಚರಿಯಾಪಿಟಕದಲ್ಲಿ ಅಡಕವಾಗಿರುವ ಹಳೆಯ ಕಥೆಗಳನ್ನೇ ಆರ್ಯಶೂರ ಆಯ್ದುಕೊಂಡು ತನ್ನ ಸಾರಸ್ವತ ಪ್ರತಿಭೆಯಿಂದ ಹೊಸರೂಪ ಕೊಟ್ಟಿದ್ದಾನೆ. ಪ್ರವಚನಕಾರರಿಗೆ ಉಪಯೋಗವಾಗುವ ಕಥೆಗಳನ್ನು ಅದೇ ದೃಷ್ಟಿಯಿಂದ ಹೆಣೆದಿದ್ದಾನೆ. ಕಥೆ ಹಳತಾದರೂ ಶೈಲಿ ಸೊಗಸಾಗಿದೆ. ಗದ್ಯ ಪದ್ಯ ಸೇರಿದ ಈ ಸಂಸ್ಕೃತ ಉತ್ತಮವಾಗಿದೆ, ಕಾವ್ಯರಸಭೂಯಿಷ್ಠವಾಗಿದೆ. ಇಲ್ಲಿಗೆ ಯಾತ್ರಿಕನಾಗಿ ಬಂದಿದ್ದ ಇತ್ಸಿಂಗ್ ಅವನ ಕಾಲದಲ್ಲಿ ಆರ್ಯಶೂರನ ಗ್ರಂಥ ನಾಡಿನಾದ್ಯಂತವೂ ಬಳಕೆಯಲ್ಲಿತ್ತೆಂದು ಹೊಗಳಿ ಬರೆದಿದ್ದಾನೆ. ೬ನೆಯ ಶತಮಾನದಲ್ಲಿ ನಿರ್ಮಿತವಾದ ಅಜಂತ ಭಿತ್ತಿಚಿತ್ರಗಳು ಕೆಲವು ಆರ್ಯಶೂರನ ಗ್ರಂಥದ ಪ್ರಸಂಗಗಳನ್ನು ನಿರೂಪಿಸುತ್ತವೆ. ಆರ್ಯಶೂರನ ಮಾತುಗಳನ್ನೇ ಆ ಚಿತ್ರಗಳ ಅಡಿಯಲ್ಲಿ ಬರೆದಿದ್ದಾರೆ. ಟಿಬೆಟನ್ ಸಂಪ್ರದಾಯ ದಲ್ಲಿ ಆರ್ಯಶೂರ ಜಾತಕಮಾಲೆಯಲ್ಲದೆ ಇನ್ನೂ ಐದು ಗ್ರಂಥಗಳನ್ನು ಬರೆದಿದ್ದಾನೆಂದು ನಂಬುತ್ತಾರೆ.

"https://kn.wikipedia.org/w/index.php?title=ಆರ್ಯಶೂರ&oldid=715124" ಇಂದ ಪಡೆಯಲ್ಪಟ್ಟಿದೆ