ಆರ್ದ್ರಕಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆರ್ದ್ರಕಾರಿಗಳು ಚರ್ಮದ ಬಾಹ್ಯ ಪದರಗಳನ್ನು ಹೆಚ್ಚು ಮೃದು ಮತ್ತು ಹೆಚ್ಚು ನಮ್ಯ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ರಾಸಾಯನಿಕ ಕಾರಕಗಳ ಸಂಕೀರ್ಣ ಮಿಶ್ರಣಗಳು. ಅವು ಬಾಷ್ಪೀಕರಣವನ್ನು ಕಡಿಮೆಮಾಡಿ ಚರ್ಮದ ಜಲಸಂಚಯನವನ್ನು (ನೀರಿನ ಅಂಶ) ಹೆಚ್ಚಿಸುತ್ತವೆ. ನೈಸರ್ಗಿಕವಾಗಿ ದೊರೆಯುವ ಚರ್ಮ ಲಿಪಿಡ್‍ಗಳು ಮತ್ತು ಸ್ಟೆರಾಲ್‍ಗಳು, ಜೊತೆಗೆ ಕೃತಕ ಅಥವಾ ನೈಸರ್ಗಿಕ ಎಣ್ಣೆಗಳು, ಹ್ಯುಮೆಕ್ಟೆಂಟ್‍ಗಳು, ಮೃದುಕಾರಿಗಳು, ಎರೆಗಳು, ಇತ್ಯಾದಿಗಳು ವಾಣಿಜ್ಯಿಕ ಚರ್ಮ ಆರ್ದ್ರಕಾರಿಗಳ ರಚನಾಂಶಗಳ ಭಾಗವಾಗಿರಬಹುದು. ಅವು ಸಾಮಾನ್ಯವಾಗಿ ಪ್ರಸಾಧನ ಹಾಗೂ ಚಿಕಿತ್ಸಕ ಬಳಕೆಗಳಿಗಾಗಿ ವಾಣಿಜ್ಯಿಕ ಉತ್ಪನ್ನಗಳಾಗಿ ಲಭ್ಯವಿರುತ್ತವೆ, ಆದರೆ ಸಾಮಾನ್ಯ ಔಷಧಾಲಯ ವಸ್ತುಗಳನ್ನು ಬಳಸಿ ಮನೆಯಲ್ಲಿಯೂ ತಯಾರಿಸಬಹುದು.

ಆರ್ದ್ರಕಾರಿಗಳು ಒಣ ಚರ್ಮವನ್ನು ತಡೆಗಟ್ಟಿ ಶುಶ್ರೂಷೆ ಮಾಡುತ್ತವೆ, ಸೂಕ್ಷ್ಮ ಚರ್ಮವನ್ನು ಕಾಪಾಡುತ್ತವೆ, ಚರ್ಮದ ಬಣ್ಣ ಹಾಗೂ ರಚನೆಯನ್ನು ಸುಧಾರಿಸುತ್ತವೆ, ಮತ್ತು ಅಪೂರ್ಣತೆಗಳನ್ನು ಮರೆಮಾಡುತ್ತವೆ.[೧]

ಆರ್ದ್ರಕಾರಿಗಳನ್ನು ಚರ್ಮವು ಅತಿ ಶುಷ್ಕ ಅಥವಾ ಎಣ್ಣೆಯುಕ್ತವಾಗುವುದನ್ನು ತಡೆಯಲು ಬಳಸಬಹುದು, ಉದಾಹರಣೆಗೆ ಹಗುರ, ಜಿಡ್ಡುರಹಿತ ಜಲ ಆಧಾರಿತ ಆರ್ದ್ರಕಾರಿಗಳು. ಅಂತಹ ಆರ್ದ್ರಕಾರಿಗಳು ಹಲವುವೇಳೆ ಸೆಟಿಲ್ ಆಲ್ಕೊಹಾಲ್‍ನಂತಹ ಹಗುರಾದ ಎಣ್ಣೆಗಳನ್ನು ಹೊಂದಿರುತ್ತವೆ.

ಚರ್ಮದ ಶುಷ್ಕತೆಗೆ ಚಿಕಿತ್ಸೆ ನೀಡಲು, ಉತ್ಕರ್ಷಣ ನಿರೋಧಕಗಳು, ದ್ರಾಕ್ಷಿ ಬೀಜದ ಎಣ್ಣೆ ಅಥವಾ ಡೈಮೆಥಿಕೋನ್‍ನಂತಹ ಘಟಕಾಂಶಗಳನ್ನು ಹೊಂದಿರುವ ಹೆಚ್ಚು ಗಡುಸಾದ, ಎಣ್ಣೆ ಆಧಾರಿತ ಆರ್ದ್ರಕಾರಿಗಳು ಅತ್ಯಂತ ಸೂಕ್ತ. ತುಂಬಾ ಶುಷ್ಕ, ಒಡೆದ ಚರ್ಮಕ್ಕಾಗಿ, ಪೆಟ್ರೊಲೇಟಮ್ ಆಧಾರಿತ ಉತ್ಪನ್ನಗಳು ಯೋಗ್ಯ, ಏಕೆಂದರೆ ಅವು ಕ್ರೀಮ್‍ಗಳಿಗಿಂತ ದೀರ್ಘಕಾಲ ಇರುತ್ತವೆ ಮತ್ತು ನೀರಿನ ಬಾಷ್ಪೀಕರಣವನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ.

ಸೂಕ್ಷ್ಮ ಚರ್ಮದ ಮೇಲೆ (ಚರ್ಮದ ಕೆರಳಿಕೆ, ಕೆಂಪಾಗುವಿಕೆ, ತುರಿಕೆ ಅಥವಾ ದದ್ದುಗಳಿಗೆ ಒಳಗಾಗುವಂಥ ಚರ್ಮ), ಕ್ಯಾಮೊಮೈಲ್ ಅಥವಾ ಲೋಳೆ ಸರದಂತಹ ಹಿತಕರ ಪದಾರ್ಥಗಳನ್ನು ಹೊಂದಿರುವ ಮತ್ತು ಸುಗಂಧ ದ್ರವ್ಯಗಳು ಅಥವಾ ಬಣ್ಣಗಳಂತಹ ಸಂಭಾವ್ಯ ಅಲರ್ಜಿಕಗಳನ್ನು ಜೊತೆಗೆ ಆಮ್ಲಗಳಂತಹ ಉದ್ರೇಕಕಾರಿಗಳನ್ನು ಕಡಿಮೆಮಾಡುವ ಆರ್ದ್ರಕಾರಿಗಳನ್ನು ಬಳಸುವುದು ಸೂಕ್ತ.

ಇಸಬಿನಲ್ಲಿ ಸಾಮಾನ್ಯವಾಗಿ ಅತ್ಯಂತ ಶುಷ್ಕ, ಹಲ್ಲೆಯಾಗುವ ಚರ್ಮಕ್ಕೆ ಗಡುಸಾದ ಅನುಲೇಪನಗಳನ್ನು ಲೇಪಿಸುವುದು ಉತ್ತಮ. ಜಲ ಆಧಾರಿತ ಕ್ರೀಮ್‍ನಂತಹ ಹಗುರ ಮೃದುಕಾರಿಗಳು ಅತ್ಯಂತ ಶುಷ್ಕ ಚರ್ಮದ ಮೇಲೆ ಪರಿಣಾಮ ಬೀರದಿರಬಹುದು. ಸ್ನಾನದ ನಂತರ ತೇವಾಂಶವನ್ನು ಬಂಧಿಸಿಡಲು ಲೋಶನ್‍ಗಳು ಮತ್ತು ಕ್ರೀಮ್‍ಗಳನ್ನು ಚರ್ಮಕ್ಕೆ ನೇರವಾಗಿ ಲೇಪಿಸಬಹುದು.

ಉಲ್ಲೇಖಗಳು[ಬದಲಾಯಿಸಿ]