ವಿಷಯಕ್ಕೆ ಹೋಗು

ಆಯ್ಕಕ್ಕಿ ಮಾರಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಯ್ಕಕ್ಕಿ ಮಾರಯ್ಯ
ಜನನ೧೧೬0
ರಾಯಚೂರು


ಆಯ್ಕಕ್ಕಿ ಮಾರಯ್ಯ: - 12ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲೀನನಾಗಿ ಕಲ್ಯಾಣದಲ್ಲಿದ್ದ ಒಬ್ಬ ಶರಣ. ಅನುಭವ ಮಂಟಪದ ಅನುಭಾವಿಗಳಲ್ಲಿ ಒಬ್ಬ. ಬಸವಣ್ಣನವರ ಮಹಾಮನೆಯ ಮುಂದೆ ಚೆಲ್ಲಿದ ಅಕ್ಕಿಯನ್ನು ಆಯುವುದು ಆತನ ಕಾಯಕ. ಆದುದರಿಂದಲೇ ಆಯ್ದಕ್ಕಿ ಮಾರಯ್ಯನೆಂದು ಪ್ರಸಿದ್ಧನಾಗಿದ್ದಾನೆ. ೧೨ನೇ ಶತಮಾನದ ಶರಣರಲ್ಲಿ ಆಯ್ದಕ್ಕಿ ಮಾರಯ್ಯನು ಒಬ್ಬ ಶಿವಶರಣ. ಮಹಾರಾಷ್ಟ್ರದಲ್ಲಿದ್ದ ಈ ದಲಿತ ದಂಪತಿಗಳು ಬಸವಣ್ಣನವರ ಸಿದ್ಧಾಂತಗಳಿಂದ ಪ್ರಭಾವಿತರಾಗಿ, ಕಲ್ಯಾಣಕ್ಕೆ ಬಂದರೆಂದು ಹೇಳಲಾಗಿದೆ. ಇವರ ಪತ್ನೀ ಆಯ್ದಕ್ಕಿ ಲಕ್ಕಮ್ಮ. ಇವರ ವಚನಗಳ ಅಂಕಿತ ಅಮರೇಶ್ವರ ಲಿಂಗ. ಇವರು ಅಕ್ಕಿ ಆಯುವ ಕಾಯಕ ಕೈಗೊಂಡಿದ್ದರು. ಒಂದು ಸಲ ಇವರು ಬೇಕಾಗಿದ್ದಕ್ಕಿಂತ ಹೆಚ್ಚಿನ ಅಕ್ಕಿಯನ್ನು ತೆಗೆದುಕೊಂಡು abcd ಬಂದಾಗ ಇವರ ಧರ್ಮಪತ್ನಿ ಲಕ್ಕಮ್ಮ "ಈಸಕ್ಕಿಯಾಸೆ ನಿಮಗ್ಯಾಕೆ" ಎಂದು ಪ್ರಶ್ನಿಸಿ ಹೆಚ್ಚಿನ ಅಕ್ಕಿಯನ್ನು ಹಿಂದಕ್ಕೆ ತೆಗೆದುಕೊಳ್ಳಲು ತಿಳಿಸುತ್ತಾಳೆ. ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ
ಸೇವೆಯುಳ್ಳನ್ನಕ್ಕರ
ಎಂದು ಆಯ್ದಕ್ಕಿ ಲಕ್ಕಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾಳೆ.

ಒಮ್ಮೆ ಅನುಭವ ಮಂಟಪದಲ್ಲಿ ಕಾಯಕವನ್ನು ಕುರಿತು ಆತ ಎತ್ತಿದ ಸಂದೇಹವನ್ನೂ ಅದಕ್ಕೆ ಅಲ್ಲಮಪ್ರಭು ಕೊಟ್ಟ ಉತ್ತರವನ್ನೂ ಶೂನ್ಯ ಸಂಪಾದನೆ ಬಹಳ ಅರ್ಥವತ್ತಾಗಿ ಚಿತ್ರಿಸಿದೆ: ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕು; ಲಿಂಗಪುಜೆಯಾದರೂ ಮರೆಯಬೇಕು; ಜಂಗಮ ಮುಂದಿದ್ದರೂ ಹಂಗು ಹರಿಯಬೇಕು. ಕಾಯಕವೇ ಕೈಲಾಸವಾದ ಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗು. ಅವನ ಈ ಮಾತು ಕಾಯಕನಿಷ್ಠೆಯನ್ನು ತೋರಿಸುತ್ತದೆ. ನಿಜ ಆದರೆ ಅಲ್ಲಿ ಇನ್ನೊಂದು ಧ್ವನಿಯಿದೆ. ಕಾಯಕವೇ ಕೈಲಾಸವಾದುದರಿಂದ ಗುರು ಲಿಂಗ ಜಂಗಮ ಈ ತ್ರಿವಿಧದಾಸೋಹದ ಹಂಗಾದರೂ ಏತಕ್ಕೆ ಎಂಬ ಪ್ರಶ್ನೆಗೆ ಅಲ್ಲಮ ಸರಿಯಾದ ಉತ್ತರ ಕೊಡುತ್ತಾನೆ. ಹೊಟ್ಟೆಪಾಡಿನ ಉದ್ಯೋಗ ಕಾಯಕವಾಗಬೇಕಾದರೆ ತ್ರಿವಿಧದಾಸೋಹ ದಿಂದ ಮಾತ್ರ ಸಾಧ್ಯ. ಮಾಡುವ ಮಾಟದಿಂದವೆ ಬೇರೊಂದನರಿಯಬೇಕು; ಅರಿವಿಂಗೆ ನೆಮ್ಮುಗೆ ಒಡಗೂಡಬೇಕು. ಇದಕ್ಕೆ ತ್ರಿವಿಧದಾಸೋಹವೇ ಸಾಧನವೆಂದು ಅಲ್ಲಮಪ್ರಭು ಕಾಯಕದ ರಹಸ್ಯವನ್ನು ಬಿತ್ತರಿಸುವುದಕ್ಕೆ ಈತನೆತ್ತಿದ ಸಂದೇಹ ನೆಪಮಾತ್ರವಾಗುತ್ತದೆ. ವಾಸ್ತವವಾಗಿ ಕಾಯಕದ ಪುರ್ಣಸ್ವರೂಪವನ್ನು ನಿತ್ಯಜೀವನದ ಆಚರಣೆಯಲ್ಲಿ ಸಾಧಿಸಿ ತೋರಿಸುತ್ತಿದ್ದವ ಮಾರಯ್ಯ. ಆತನ ಪತ್ನಿ ಲಕ್ಕಮ್ಮನಂತೂ ಕಾಯಕನಿಷ್ಠೆಯೇ ಮೈವೆತ್ತ ಮೂರ್ತಿ. ಒಮ್ಮೆ ಮಾರಯ್ಯ ಅಗತ್ಯವಾದುದಕ್ಕಿಂತ ಹೆಚ್ಚಿನ ಅಕ್ಕಿಯನ್ನು ಆಯ್ದು ತಂದಾಗ ಈ ಅಕ್ಕಿಯ ಆಶೆ ನಿಮಗೇಕೆ, ಈಶ್ವರನೊಪ್ಪ ಎಂದು ಹೆಚ್ಚಾದ ಅಕ್ಕಿಯನ್ನು ಮತ್ತೆ ಹಿಂದಕ್ಕೆ ಸುರಿಸಿದ ದಿಟ್ಟತನ ಆಕೆಯದು. ಅಂದಂದಿನ ಕಾಯಕವನ್ನು ಅಂದಂದು ಮಾಡಿ ಶುದ್ಧರಾಗಬೇಕು ಎಂಬ ನಿಸ್ಪೃಹ ನಿಷ್ಠೆಯಿಂದ ತಮ್ಮ ಸಾಧನೆಯ ಫಲವನ್ನು ಲೋಕಕ್ಕೆ ವಿನಿಯೋಗಿಸಿದ ಈ ದಂಪತಿಗಳು ವಚನಕಾರರೂ ಹೌದು. ಅಮರೇಶ್ವರ ಲಿಂಗ ಎಂಬ ಅಂಕಿತದಿಂದ ಮಾರಯ್ಯ ವಚನಗಳನ್ನು ಬರೆದು ಶರಣರಲ್ಲಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: