ವಿಷಯಕ್ಕೆ ಹೋಗು

ಆತ್ಮಸಾಕ್ಷಿ ಪ್ರಮಾಣ್ಯವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆತ್ಮಸಾಕ್ಷಿ ಪ್ರಮಾಣ್ಯವಾದ ಇದು ನೀತಿಗೆ ಸಂಬಂಧಪಟ್ಟ ಒಂದು ವಾದ. ಇದನ್ನು ಮೊದಲು ಮಂಡಿಸಿದವರು ಆಂಗ್ಲೇಯ ನೀತಿಶಾಸ್ತ್ರಜ್ಞ ಬಿಷಪ್ ಬಟ್ಲರ್ (1692-1752).

ಹಿನ್ನೆಲೆ

[ಬದಲಾಯಿಸಿ]

ತನ್ನ ಸರ್ಮನ್ಸ್ ಎಂಬ ಗ್ರಂಥದಲ್ಲಿ ಓ ಪದಕ್ಕೆ ಸಮಾನಾಂತರವಾಗಿ ಈತ ಬಳಸಿದ ಪದ ಕಾನ್‍ಷನ್ಸ್. ಇವನಿಗೆ ಮುಂಚೆ ವಿಲಿಯಂ_ಷೇಕ್ಸ್‌ಪಿಯರ್ ಮುಂತಾದವರು ಈ ಪದವನ್ನು ಕಾನ್‍ಷಸ್‍ನೆಸ್ ಅಂದರೆ ಪ್ರಜ್ಞೆ ಎಂಬ ಅರ್ಥದಲ್ಲಿ ಬಳಸುತ್ತಿದ್ದರು. ನೀತಿ ನಿಯಮವನ್ನು ಆಜ್ಞಾಪಿಸುವ ಚಿತ್ ಎಂಬ ಅರ್ಥದಲ್ಲಿ ಮೊಟ್ಟಮೊದಲಿಗೆ ಬಳಸಿದವ ಬಟ್ಲರ್. ಆತ್ಮಸಾಕ್ಷಿಯ ವ್ಯಾಪಾರ ಕೇವಲ ಬೌದ್ಧಿಕವಲ್ಲ, ಭಾವನಿಷ್ಟ ಎಂದು ಬಟ್ಲರನ ಅಭಿಮತ. ಕಾನ್‍ಷನ್ಸ್‍ಗೆ ಸಂಬಂಧಪಟ್ಟ ಅವನ ವಿವರಣೆ ಈ ರೀತಿ ಇದೆ : ಹೃದಯದ ಪ್ರೇರಣೆಗಳನ್ನು ವೀಕ್ಷಿಸಿ ಅವುಗಳನ್ನು ಅಂಗೀಕರಿಸುವ, ಅಂಗೀಕರಿಸದಿರುವ ವಿವೇಚನಾಶಕ್ತಿ ಮಾನವರಲ್ಲಿದೆ. ನಮ್ಮೊಳಗೆ ನಡೆಯುವ ಎಲ್ಲ ವರ್ತನೆಗಳನ್ನೂ ಇಷ್ಟಾನಿಷ್ಟಗಳನ್ನೂ ಕಾಮ ಪ್ರೇಮಗಳನ್ನೂ ಅವುಗಳ ತೀವ್ರತೆಯ ಪ್ರಮಾಣವನ್ನೂ ವಿವೇಚಿಸಿ ಮನಸ್ಸು ಒಂದನ್ನು ಸಾಧುವೆಂದು ಒಪ್ಪುತ್ತದೆ; ಇನ್ನೊಂದನ್ನು ಅಸಾಧುವೆಂದು ಅಸಮ್ಮತಿಯನ್ನು ತೋರಿಸುತ್ತದೆ; ಮತ್ತೊಂದರ ಬಗ್ಗೆ ಔದಾಸೀನ್ಯ ತೋರಿಸುತ್ತದೆ. ಹೀಗೆ ತನ್ನ ಹೃದಯದ ಪ್ರೇರಣೆಗಳ, ಮನಃಪಾಕಗಳ, ನಡೆವಳಿಕೆಗಳ ವಿಚಾರದಲ್ಲಿ ಸಮ್ಮತಿಸುವ ಅಸಮ್ಮತಿಸುವ ಆಂತರಿಕ ತತ್ತ್ವವೇ ಆತ್ಮಸಾಕ್ಷಿ, ನಡತೆಯನ್ನು ಪ್ರೇರಿಸುವ ರಾಗಗಳು, ಭಾವಗಳು ಅನೇಕವಿವೆ. ಆದರೆ ಆತ್ಮಸಾಕ್ಷಿಯ ಪ್ರೇರಣೆ ಇವೆಲ್ಲಕ್ಕಿಂತ ಮೇಲಾದುದು; ಸ್ವಭಾವತಃ ಅದು ಮೇಲ್ವಿಚಾರಣೆ ನಡೆಸುವ ನಿಯೋಗಿಸುವ ಅಧಿಕಾರವುಳ್ಳದ್ದು. ವಿಧಾಯಕತ್ವದ ಹಕ್ಕಿರುವಂತೆ ಅದಕ್ಕೆ ವೀರ್ಯವೂ ಇದ್ದಿದ್ದರೆ, ನಿಯಂತ್ರಿಸುವ ಅಧಿಕಾರಕ್ಕೆ ತಕ್ಕಂತೆ ನಿರ್ವಹಣಾ ಸಾಮಥ್ರ್ಯವಿದ್ದಿದ್ದರೆ ಅದು ಲೋಕದ ಮೇಲೆ ಪ್ರಭುತ್ವ ನಡೆಸಬಹುದಾಗಿತ್ತು.[]

ಸ್ವರೂಪ

[ಬದಲಾಯಿಸಿ]

ನಡೆವಳಿಕೆಗಳನ್ನು ಪ್ರಚೋದಿಸುವ ಕೆಲವು ಸ್ವಾಭಾವಿಕ ಶಕ್ತಿಗಳು ಮಾನವನಲ್ಲಿವೆ. ಬಟ್ಲರ್‍ನ ಪ್ರಕಾರ ನಡತೆಯನ್ನು ಪ್ರೇರಿಸುವ ಶಕ್ತಿಗಳಲ್ಲಿ ಸ್ವಾಭಿಮಾನ (ಸೆಲ್ಫ್‍ಲೌವ್) ಒಂದು, ದಯಾಪರತೆ (ಬೆನೆವೊಲೆನ್ಸ್) ಎರಡನೆಯದು. ಆದರೆ ಆತ್ಮಸಾಕ್ಷಿ ಸ್ವಾಭಿಮಾನ ಮತ್ತು ದಯಾಪರತೆಗಳಿಗಿಂತ ಶ್ರೇಷ್ಠವಾದದ್ದು. ಇದು ಸ್ವಾಭಿಮಾನಕ್ಕಿಂತ ಶ್ರೇಷ್ಠವಾದರೂ ಸ್ವಾಭಿಮಾನದ ಶಕ್ತಿ ಪ್ರಬಲವಾಗಿರಬಹುದು. ಅದು ಆತ್ಮಸಾಕ್ಷಿಯ ಪ್ರೇರಣೆಯನ್ನು ದುರ್ಬಲಗೊಳಿಸಬಹುದು. ಅಂಥ ಸಂದರ್ಭಗಳಲ್ಲಿ ಸ್ವಾಭಿಮಾನ, ಕಾಮ, ಕೋಪ, ಮಾತ್ಸರ್ಯಗಳು ಪ್ರಬಲಿಸಿ ಒಬ್ಬ ತಪ್ಪಿ, ಆತ್ಮಸಾಕ್ಷಿಯ ವಾಣಿಯನ್ನು ಉಲ್ಲಂಘಿಸಿ ನಡೆಯಬಹುದು. ಆದ್ದರಿಂದ ಆತ್ಮಸಾಕ್ಷಿ ನ್ಯಾಯವಿಧಾಯಕವೇ ಹೊರತು ಸರ್ವಾಧಿಕಾರಿಯಲ್ಲ. ಒಬ್ಬ ಆತ್ಮಸಾಕ್ಷಿಗೆ ವಿರುದ್ಧವಾಗಿ ನಡೆದಾಗ ಆತ್ಮಸಾಕ್ಷಿ ವಿರಮಿಸುವುದಿಲ್ಲ; ಅದು ಒಳಗೇ ಇದ್ದು ಕೆಟ್ಟದ್ದನ್ನು ಮಾಡಿದವನನ್ನು ಕೊರೆಯುತ್ತದೆ. ಹೀಗೆ ಒಳಗಿನ ಕೊರಗುಗಳನ್ನು ಆತ್ಮಸಾಕ್ಷಿಯ ಯಾತನೆಗಳು (ಪ್ಯಾಂಗ್ಸ್ ಆಫ್ ಕಾನ್‍ಷನ್ಸ್) ಎಂದು ಕರೆಯುವುದುಂಟು. ಆತ್ಮಸಾಕ್ಷಿಯ ತಿಳಿವು ಎಂದೆಂದಿಗೂ ತಪ್ಪಲ್ಲ ಎಂಬುದು ಬಟ್ಲರ್ ನ ಅಭಿಮತ.[] ಆತ್ಮಸಿದ್ಧಿ ಇದರಿಂದ ಸಾಧ್ಯ ಎಂದು ಅವರ ಅಭಿಮತ.

ಚೇತನರೂಪ

[ಬದಲಾಯಿಸಿ]

ಆತ್ಮಸಾಕ್ಷಿಯ ತಿಳಿವಿನ ಸ್ವರೂಪವೇನು ಎಂಬುದು ಮುಂದಿನ ಪ್ರಶ್ನೆ. ಈ ಪ್ರಶ್ನೆಗೆ ಎರಡು ಉತ್ತರಗಳನ್ನು ಕೊಡಬಹುದು. ಅದು ನೀತಿಯ ನಿಯಮಗಳನ್ನು ನಿಯಂತ್ರಿಸುವ ಪ್ರತಿಭಾನ ಸ್ವಭಾವವುಳ್ಳದ್ದು; ಅದು ಅನಿರ್ವಚನೀಯ ಎಂಬುದು ಒಂದು ಉತ್ತರ. ಅದು ನಿಯಂತ್ರಿಸುವ ನಿಯಮ ಕಾರಣಸಹಿತವಾದ ತಿಳಿವು; ಅದರ ಅಧಿಕಾರ ಕಾರಣ ಚೇತನರೂಪವಾದದ್ದು ಎಂಬುದು ಎರಡನೆಯ ಉತ್ತರ. ಮೊದಲನೆಯದನ್ನು ನೈತಿಕ ಸ್ವಯಂಪ್ರಕಾಶವಾದವೆಂದೂ ಎರಡನೆಯದನ್ನು ನೈತಿಕ ಕಾರಣಚೇತನವಾದ ಎಂದೂ ಕರೆಯುವುದು ವಾಡಿಕೆ. ಈ ಎರಡು ಬಗೆಯ ಅರಿವುಗಳಲ್ಲಿ ಆತ್ಮಸಾಕ್ಷಿಯ ಅರಿವು ಯಾವ ಬಗೆಯದು ಎಂಬುದನ್ನು ಬಟ್ಲರ್ ಸ್ಪಷ್ಟಪಡಿಸಿಲ್ಲ. ಆದರೆ ಅವನ ಅನಂತರ ಬಂದ ಅವನ ಅನುಯಾಯಿಗಳು ಈ ಎರಡು ವಿಧವಾದ ವಾದಗಳನ್ನೂ ಸ್ಪಷ್ಟವಾಗಿ ಪ್ರತ್ಯೇಕಿಸಿರುತ್ತಾರೆ. ಮೊದಲನೆಯ ಸ್ವಯಂಪ್ರಕಾಶವಾದ ಅರ್ಥ ಸಂಕುಚಿತವಾದದ್ದು; ಎರಡನೆಯ ವಾದದ ಅರ್ಥ ವಿಶಾಲವಾದದ್ದು. ಮೊದಲನೆಯ ವಾದದ ಪ್ರಕಾರ ಪ್ರತಿಭಾನದ ತಿಳಿವು ಸ್ವಸಂವೇದ್ಯದರ್ಶನ. ಅದರ ಸಮರ್ಥನೆಗೆ ಕಾರಣ ಕೊಡಬೇಕಾದದ್ದಿಲ್ಲ, ತರ್ಕ ಅನಾವಶ್ಯಕ. ಎರಡನೆಯ ವಾದದ ಪ್ರಕಾರ - ಇದು ಕ್ಯಾಂಟ್, ಕ್ಲಾಕ್, ವೊಲಾಟ್ಸನ್ನರ ವಾದ ನೀತಿಯ ವಿಚಾರವಾಗಿ ಪ್ರತಿಜ್ಞೆ ಮಾಡುವ ಅರಿವು ಕ್ರಿಯಾ ನಿರ್ದೇಶಕ ಕಾರಣಚೇತನ. ಇದು ಕೇವಲ ದರ್ಶನವಲ್ಲ, ಮನನದಿಂದ ಸ್ಥಿರಪಟ್ಟ ತಿಳಿವು. ಆದರೆ ಈ ಮನನದಿಂದ ಸ್ಥಿರಪಡುವ ತತ್ತ್ವಗಳು ಸ್ವಭಾವಸಿದ್ಧವಾದ ತತ್ತ್ವಗಳಾದ್ದರಿಂದ ಅಂತಿಮದಲ್ಲಿ ಅವರ ವಾದವನ್ನೂ ಒಂದು ವಿಶಾಲ ರೀತಿಯ ಸ್ವಸಂವೇದ್ಯವಾದವೇ ಎಂದು ಹೇಳಬಹುದು. ದರ್ಶನವನ್ನು ಸಮರ್ಥಿಸಲು ಉಪಯೋಗಿಸುವ ತತ್ತ್ವಗಳು ಕಾರಣಚೇತನದ ತತ್ತ್ವಗಳಾದರೂ ತಾರ್ಕಿಕ ತತ್ತ್ವಗಳಾದರೂ ಆ ಕಾರಣಚೇತನವಾದ ತತ್ತ್ವಗಳೂ ಕೊನೆಯಲ್ಲಿ ಸ್ವಸಂವೇದ್ಯ ತತ್ತ್ವಗಳೇ ಎಂದು ಭಾವಿಸಬಹುದು.https://plato.stanford.edu/entries/butler-moral/

ಭಾರತದಲ್ಲಿ ಆತ್ಮಸಾಕ್ಷಿ ಪ್ರಮಾಣ್ಯವಾದ

[ಬದಲಾಯಿಸಿ]

ಈ ಎರಡು ಬಗೆಯ ವಾದಗಳೂ ಒಂದು ಅಂಶದಲ್ಲಿ ಒಮ್ಮತ ಹೊಂದಿವೆ. ಯಾವುದೊಂದು ಕಾರ್ಯವನ್ನು ಸಾಧು ಅಥವಾ ಅಸಾಧು, ಕರ್ತವ್ಯ ಅಥವಾ ಕರ್ತವ್ಯವಲ್ಲ ಎಂದು ಹೇಳುವಾಗ ಅದರ ಸಾಧುತ್ವ ಅಥವಾ ಅಸಾಧುತ್ವಗಳನ್ನು ಅದರ ಒಳ ಸ್ವಭಾವದಿಂದ ನಿರ್ಧರಿಸಬೇಕೇ ಹೊರತು ಅದರ ಪರಿಣಾಮದಿಂದ ಅಥವಾ ಫಲದಿಂದ ಅಲ್ಲ. ಸತ್ಯವನ್ನು ಹೇಳುವುದು ನಮ್ಮ ಕರ್ತವ್ಯ ಎಂಬುದನ್ನು ಅದು ಸ್ವಭಾವತಃ ಸರಿಯೆಂದು ನಿರ್ಧರಿಸಬೇಕು; ಅದರಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆಯೇ ಅಥವಾ ಅದರಿಂದ ನೆಮ್ಮದಿಯುಂಟಾಗುತ್ತದೆಯೇ, ಸುಖಪ್ರಾಪ್ತಿಯಾಗುತ್ತದೆಯೇ ಎಂಬುದನ್ನು ವಿಚಾರ ಮಾಡುವುದರಿಂದಲ್ಲ. ಕರ್ತವ್ಯಕ್ಕಾಗಿ ಕರ್ತವ್ಯ ಮಾಡುತ್ತೇವೆಯೇ ಹೊರತು ಅದಕ್ಕೆ ಹೊರತಾದ ಫಲ ನಿರೀಕ್ಷಣೆಯಿಂದ ಅಲ್ಲ. ಫಲಿತಾಂಶದಿಂದಲ್ಲ ಎಂಬಂಶದಲ್ಲಿ ಈ ಎರಡು ವಾದದವರದೂ ಏಕಾಭಿಪ್ರಾಯ. ಇವರಿಬ್ಬರೂ ನೈತಿಕಸುಖವಾದಿಗಳನ್ನೂ ಪ್ರಯೋಜನವಾದಿಗಳನ್ನೂ ಪ್ರತಿಭಟಿಸುತ್ತಾರೆ. ಇವರದು ಅನಾಸಕ್ತಿಕರ್ಮವಾದವನ್ನು ಹೋಲುತ್ತದೆ.

ಈ ಸ್ವತಸ್ಸಿದ್ಧ ನೀತಿವಾದವನ್ನು ಆಧುನಿಕ ಪಾಶ್ಚಾತ್ಯ ಶಾಸ್ತ್ರಜ್ಞರು ಅನೇಕ ಬಗೆಯಾಗಿ ವಿಮರ್ಶೆ ಮಾಡಿರುತ್ತಾರೆ.

ಪ್ರತಿಭಾನದಿಂದ ಕರ್ತವ್ಯವನ್ನು ನಿರ್ಧರಿಸುವಾಗ ಅದು ಒಂದು ವಿಶಿಷ್ಟವಾದ ಕಾರ್ಯಕ್ಕೆ ಸಂಬಂಧಿಸಬಹುದು ಅಥವಾ ಒಂದು ಜಾತಿಯ ಕಾರ್ಯಗಳಿಗೆ ಅಥವಾ ಒಂದು ಸಾಮಾನ್ಯ ನಿಯಮಕ್ಕೆ ಸಂಬಂಧಪಡಬಹುದು. ಪ್ರತಿಯೊಂದು ಕರ್ತವ್ಯವೂ ಒಂದು ವಿಶಿಷ್ಟ ಸಂದರ್ಭಕ್ಕೆ ಸಂಬಂಧಪಟ್ಟದ್ದು.

ಕರ್ತವ್ಯ ನಿರ್ವಹಣೆ ಮತ್ತು ಆತ್ಮಸಾಕ್ಷಿ ಪ್ರಮಾಣ್ಯವಾದ

[ಬದಲಾಯಿಸಿ]

ಸಾಮಾನ್ಯವಾಗಿ ಹಠಾತ್ತಾಗಿ ಒದಗಿದ ಒಂದು ವಿಶಿಷ್ಟವಾದ ಸನ್ನಿವೇಶದಲ್ಲಿ ಕರ್ತವ್ಯವೇನೆಂಬುದನ್ನು ನಿರ್ಧರಿಸುವಾಗ ಪೂರ್ವಾಪರಗಳನ್ನು ಯೋಚಿಸುವುದಕ್ಕೆ ಸಮಯವಿರುವುದಿಲ್ಲ. ಆ ಕೂಡಲೆ ಕರ್ತವ್ಯವನ್ನು ನಿರ್ಧರಿಸಬೇಕಾದಾಗ ಪ್ರತಿಭಾನವನ್ನೇ ಆಶ್ರಯಿಸಬೇಕಾಗುತ್ತದೆ. ಆ ಕಾಲದಲ್ಲಿ ಮಾಡಿದ ಕೆಲಸವನ್ನು ಸರಿಯೆಂದೇ ತಿಳಿದು ಮಾಡುತ್ತೇವೆ ಎಂಬುದನ್ನು ಒಪ್ಪಬಹುದು. ಆದರೆ ಪ್ರತಿಭಾನವನ್ನು ಆಶ್ರಯಿಸಿ ಮಾಡಿದ ಕಾರ್ಯವಾದ ಮಾತ್ರದಿಂದಲೇ ಅದು ಸರಿಯಾದ ಕಾರ್ಯವೆಂದು ಹೇಳಲಾಗುವುದಿಲ್ಲ. ಅನೇಕ ವೇಳೆ ಅವಸರದಲ್ಲಿ ಸರಿಯೆಂದು ಮಾಡಿದ ಕಾರ್ಯ ಅನಂತರದಲ್ಲಿ ಸರಿಯಲ್ಲವೆಂದು ತೋರಿ ಮಾಡಿದ್ದಕ್ಕೆ ಪಶ್ಚಾತ್ತಾಪಪಡುತ್ತೇವೆ. ಹೀಗೆ ಅನಂತರದಲ್ಲಿ ತೋರಿದ್ದೂ ಸ್ವತಸ್ಸಿದ್ಧವಾದ ಪ್ರತಿಭಾನದಿಂದಲೇ. ಆದರೆ ಆ ಎರಡು ಪ್ರತಿಭಾನಗಳು ಒಂದಕ್ಕೊಂದು ವಿರುದ್ಧವಾಗುತ್ತವೆ. ಪರಸ್ಪರ ವಿರುದ್ಧವಾದವುಗಳಲ್ಲಿ ಎರಡೂ ಸರಿಯಾಗಲಾರವು. ಇವುಗಳಲ್ಲಿ ಯಾವುದು ಸರಿ ಎಂಬುದನ್ನು ಸ್ವತಸ್ಸಿದ್ಧವಾದ ಪ್ರತಿಭಾನದಿಂದ ನಿರ್ಧರಿಸುವುದಕ್ಕಾಗುವುದಿಲ್ಲ. ಆಗ ಬೇರೆ ಪ್ರಮಾಣವಾದ ಕಾರಣಚೇತನವನ್ನು ಆಶ್ರಯಿಸಬೇಕಾಗುತ್ತದೆ. ಆದ್ದರಿಂದ ಪ್ರತಿಭಾನ ಪ್ರಮಾಣವನ್ನು ಏಕೈಕ ಪ್ರಮಾಣವಾಗಿ ಆಗಲಿ, ಅಂತಿಮ ಪ್ರಮಾಣವಾಗಿ ಆಗಲಿ ನೆಚ್ಚಲಾಗುವುದಿಲ್ಲ.[]

ದೈನಂದಿನ ಜೀವನದಲ್ಲಿ ಆತ್ಮಸಾಕ್ಷಿ ಪ್ರಮಾಣ್ಯವಾದ

[ಬದಲಾಯಿಸಿ]

ಸರಿತಪ್ಪುಗಳನ್ನು ಪ್ರತಿಭಾನದಿಂದ ನಿರ್ಧರಿಸುವುದು ಒಂದು ಜಾತಿಯ ಕಾರ್ಯಗಳಿಗೆ ಸಂಬಂಧಪಟ್ಟದ್ದು, ನೀತಿಯ ಒಂದು ಸಾಮಾನ್ಯ ನಿಯಮಕ್ಕೆ ಒಳಪಟ್ಟದ್ದು ಎಂದು ಹೇಳುವುದು ಇನ್ನೊಂದು ಬಗೆಯ ಪ್ರತಿಭಾನವಾದ. ಯಾವಾಗಲೂ ನಿಜ ಹೇಳಬೇಕು, ಎಂದಿಗೂ ಸುಳ್ಳು ಹೇಳಬಾರದು ಎಂಬ ಸಾಮಾನ್ಯ ನಿಯಮಗಳನ್ನು ಪ್ರತಿಭಾನದಿಂದ ತಿಳಿದು ಅದರ ಪ್ರಕಾರ ಒಂದೊಂದು ಸಂದರ್ಭದಲ್ಲೂ ಕರ್ತವ್ಯವನ್ನು ಮಾಡುತ್ತೇವೆ. ಈ ವಿಧವಾದ ನೈತಿಕ ಪ್ರತಿಭಾನವಾದದಲ್ಲೂ ಲೋಪದೋಷಗಳಿವೆ. ಪ್ರತಿಭಾನದಿಂದ ಬಂದ ಸಾಮಾನ್ಯ ನಿಯಮಗಳ ತಿಳಿವಿನಿಂದ ಹೆಚ್ಚು ಸಂದರ್ಭಗಳಲ್ಲಿ ನಮ್ಮ ನಡತೆ ಸರಿಹೋಗಬಹುದು. ಆದರೆ ಎಲ್ಲ ಸಂದರ್ಭಗಳಲ್ಲೂ ಸರಿ ಹೋಗುತ್ತದೆಯೆಂದು ಹೇಳಲಾಗುವುದಿಲ್ಲ. ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಈ ಸಾಮಾನ್ಯ ನಿಯಮಗಳು ಸಂದೇಹಕ್ಕೆ ಎಡೆಗೊಡುತ್ತವೆ. ಒಬ್ಬ ದರೋಡೆಕೋರ ತಾನು ಕೊಲ್ಲಬೇಕೆಂದಿರುವ ವ್ಯಕ್ತಿ ಅಡಗಿಕೊಂಡಿರುವ ಸ್ಥಳವನ್ನು ತೋರಿಸೆಂದು ನಿರ್ಬಂಧಪಡಿಸಿದಾಗ ಅವನ ನಿರ್ಬಂಧಕ್ಕೆ ಒಳಗಾಗಿ ಅವನಿಗೆ ನಿಜವನ್ನು ಹೇಳಬಹುದೋ? ನಿರಪರಾಧಿಯನ್ನು ಉಳಿಸಲು, ಒಬ್ಬ ಯುವತಿಯನ್ನು ಮಾನಹಾನಿಯಿಂದ ಕಾಪಾಡಲು ಸುಳ್ಳು ಹೇಳುವುದು ಅನೀತಿಯೋ? ಇಂಥ ಸಂದರ್ಭಗಳಲ್ಲಿ ಪ್ರತಿಭಾನ ತೋರಿಸಿದ ಸಾಮಾನ್ಯ ನಿಯಮವನ್ನು ಅನುಸರಿಸುವುದು ತಪ್ಪಾಗುತ್ತದೆ.

ಅದೂ ಅಲ್ಲದೆ ಈ ಸಾಮಾನ್ಯ ನಿಯಮಗಳು ಸ್ವತಃ ಸಿದ್ಧವಾದ ನಿಯಮಗಳಲ್ಲ. ಸಿಡ್ಜ್‍ವಿಕ್ ಹೇಳುವಂತೆ ಅವು ಲೋಕಾನುಭವದ ಆಧಾರದ ಮೇಲೆ ಅನುಮಾನದಿಂದ ಏರ್ಪಟ್ಟವು. ಪ್ರಾಣ ತೆಗೆಯುವುದು ಸಾಮಾನ್ಯವಾಗಿ ಸಮಾಜದ ಹಿತಕ್ಕೆ ಪ್ರತಿಬಂಧಕ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಕೊಲೆಗಾರನನ್ನು ಗಲ್ಲಿಗೇರಿಸುವುದು ನ್ಯಾಯವೋ ಎಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶವಿದೆ. ಕೊಲೆಗಾರನನ್ನು ಗಲ್ಲಿಗೇರಿಸುವುದು ನ್ಯಾಯವಲ್ಲವೆಂದೂ ಆ ಕಾನೂನನ್ನು ರದ್ದುಪಡಿಸಬೇಕೆಂದೂ ಅನೇಕರು ವಾದಿಸಿರುತ್ತಾರೆ. ಕೆಲವು ಪ್ರದೇಶಗಳಲ್ಲಿ ಗಲ್ಲಿಗೇರಿಸುವ ಕಾನೂನನ್ನು ರದ್ದುಪಡಿಸಿಯೂ ಇರುತ್ತಾರೆ.

ವಿವೇಕ ಮತ್ತು ಆತ್ಮಸಾಕ್ಷಿ ಪ್ರಮಾಣ್ಯವಾದ

[ಬದಲಾಯಿಸಿ]

ಒಬ್ಬ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಿಷ್ಠೆಯಿಂದ ನಡೆದುಕೊಳ್ಳುವುದು ಮೆಚ್ಚತಕ್ಕದ್ದೇ. ಆದರೆ ನಿಷ್ಠೆಯ ನಡವಳಿಕೆ ಅನೇಕವೇಳೆ ತಪ್ಪುನಡವಳಿಕೆಯಾಗಿರುತ್ತದೆ. ನಿಷ್ಠಾವಂತನ ಆತ್ಮಸಾಕ್ಷಿ ಕತ್ತೆಯ ಆತ್ಮಸಾಕ್ಷಿಯಾಗಿರಬಹುದು; ಮತಾಂಧನ ಆತ್ಮಸಾಕ್ಷಿಯಾಗಿರಬಹುದು; ಅಥವಾ ಪರಮ ವಿವೇಕಿಯಾದ ಸಾಕ್ರಟೀಸನದಾಗಿರಬಹುದು. ಒಬ್ಬೊಬ್ಬನ ಕರ್ತವ್ಯವೂ ತನ್ನ ಬುದ್ಧಿ, ವಿದ್ಯೆ, ವಿವೇಕ ಒಟ್ಟಿನಲ್ಲಿ ಅವನು ಬೆಳೆಸಿಕೊಂಡಿರುವ ಧ್ಯೇಯರೂಪವಾದ ವ್ಯಕ್ತಿತ್ವಕ್ಕೆ ಸಾಪೇಕ್ಷವಾದದ್ದು. ಆ ಧ್ಯೇಯರೂಪವಾದ ವ್ಯಕ್ತಿತ್ವ ವಿವೇಕಯುತವಾದ ಪಕ್ಷದಲ್ಲಿ ಆತನ ಆತ್ಮಸಾಕ್ಷಿಯ ನಿಯೋಗವೂ ವಿವೇಕಯುತವಾಗಿರುತ್ತದೆ. ಆದ್ದರಿಂದ ಆತ್ಮಸಾಕ್ಷಿಯೇ ಪರಮ ಪ್ರಮಾಣವಾಗಲಾರದು. ಕಾರಣಚೇತನದ ಧ್ಯೇಯವೇ ಅಂತಿಮದ ಒರೆಗಲ್ಲು. ವಿವೇಕಯುತವಾದ ಆತ್ಮಸಿದ್ಧಿಯೇ ನಡತೆಯ ಗುರಿ. ಈ ಆತ್ಮಸಿದ್ಧವಾದ ಆತ್ಮಸಾಕ್ಷಿವಾದಕ್ಕೆ ವಿರುದ್ಧವಾದ ಒಂದು ಪ್ರಬಲವಾದ ನೀತಿಪಂಥ.[]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2020-02-12. Retrieved 2020-01-11.
  2. https://quod.lib.umich.edu/cgi/p/pod/dod-idx/bishop-butler-on-forgiveness-and-resentment.pdf?c=phimp;idno=3521354.0011.010;format=pdf
  3. "ಆರ್ಕೈವ್ ನಕಲು". Archived from the original on 2020-04-07. Retrieved 2020-01-11.
  4. "ಆರ್ಕೈವ್ ನಕಲು". Archived from the original on 2020-04-07. Retrieved 2020-01-11.