ವಿಷಯಕ್ಕೆ ಹೋಗು

ಆತ್ಮಸಿದ್ಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಾಶ್ಚಾತ್ಯ ನೀತಿಶಾಸ್ತ್ರದಂತೆ ಒಳ್ಳೆಯ ನಡತೆಯ ಗುರಿಗಳಲ್ಲೊಂದು (ಸೆಲ್ಫ್‍ರಿಯಲೈಸೇಷನ್). ಸಂತೋಷ, ಸೌಖ್ಯ, ಪರಿಪೂರ್ಣತೆಗಳನ್ನು ಗುರಿಗಳೆನ್ನಲಾಗಿದೆ. ಆತ್ಮಸಿದ್ಧಿಯೇ ನೀತಿಯ ಅಂತಿಮಗುರಿ ಎಂಬ ವಾದ ಈಚಿನ ಕಾಲದಲ್ಲಿ ತುಂಬ ಪ್ರಾಮುಖ್ಯ ಪಡೆದಿದೆ.

ಹಿನ್ನೆಲೆ[ಬದಲಾಯಿಸಿ]

ಆತ್ಮಸಿದ್ಧಿವಾದವನ್ನು ಪ್ರತಿಪಾದಿಸಿದವ ಜರ್ಮನಿಯ ಪ್ರಸಿದ್ಧ ತಾತ್ವಿಕನಾದ ಹೆಗೆಲ್. ಇವನ ಆಂಗ್ಲೇಯ ಅನುಚರರಲ್ಲಿ ಮುಖ್ಯರಾದವರು ಎಸ್. ಎಚ್. ಬ್ರ್ಯಾಡ್ಲೆ, ಟಿ. ಎಚ್. ಗ್ರೀನ್, ಬಿ. ಬೊಸಾಂಕೆ. ಈ ವಾದ ಮೊಟ್ಟಮೊದಲು ಆಂಗ್ಲಭಾಷೆಯಲ್ಲಿ ನಿರೂಪಣೆಯಾದದ್ದು ಬ್ರ್ಯಾಡ್ಲೆಯ ಎಥಿಕಲ್ ಸ್ಟಡೀಸ್ ಎಂಬ ಗ್ರಂಥದಲ್ಲಿ. ಟಿ. ಎಚ್. ಗ್ರೀನ್‍ನ ಪ್ರಾಲಿಗಮೀನ ಟು ಎಥಿಕ್ಸ್ ಎಂಬ ಗ್ರಂಥ ಈ ಬಗ್ಗೆ ಒಂದು ಪ್ರಮಾಣಗ್ರಂಥವಾಗಿದೆ.[೧]

ಪಾಲನೆ[ಬದಲಾಯಿಸಿ]

ಆತ್ಮಸಿದ್ಧಿ ಎಂದರೆ ನಮ್ಮಲ್ಲಿರುವ ಉತ್ತಮೋತ್ತಮ ಆತ್ಮವನ್ನು ಸಾಧಿಸುವುದು. ಪ್ರತಿಯೊಬ್ಬರಲ್ಲೂ ಸ್ವಾರ್ಥ ಮತ್ತು ಪರಾರ್ಥ ಎಂಬ ಅರಿವಿದೆ. ಕೆಲವು ವೇಳೆ ನಾವು ಇತರರ ಹಿತವನ್ನು ಗಮನಿಸದೆ ಇತರರ ಹಿತಕ್ಕೆ ಬಾಧೆಯುಂಟಾಗುವಂತೆ ನಮ್ಮ ಹಿತಕ್ಕಾಗಿಯೇ ಆಶೆಪಟ್ಟು ವರ್ತಿಸುತ್ತೇವೆ. ಇನ್ನು ಕೆಲವು ವೇಳೆ ಹೀಗೆ ವರ್ತಿಸುವುದು ನೀಚವಾದದ್ದು, ಹಾಗೆ ವರ್ತಿಸಿದಾಗ ನಾವು ನೀಚರಾಗಿರುತ್ತೇವೆ, ಉಚ್ಚವಾದುದನ್ನು ಅಲಕ್ಷಿಸುತ್ತೇವೆ ಎಂದು ತಿಳಿದುಕೊಳ್ಳುತ್ತೇವೆ. ಹೀಗೆ ನಮ್ಮಲ್ಲಿ ಉಚ್ಚವಾದದ್ದಕ್ಕೂ ನೀಚವಾದದ್ದಕ್ಕೂ ಹೋರಾಟ ನಡೆಯುತ್ತಿರುತ್ತದೆ. ಇತರರನ್ನು ಬಿಟ್ಟು ನಾನಿಲ್ಲ, ನನ್ನನ್ನು ಬಿಟ್ಟು ಇತರರಿಲ್ಲ. ಇತರರಿಗೆ ಮಂಗಳವಾದುದನ್ನು ಬಿಟ್ಟು ನನಗೆ ಮಂಗಳವಿಲ್ಲ, ನನ್ನ ಮಂಗಳವನ್ನು ಬಿಟ್ಟು ಬೇರೆಯವರ ಮಂಗಳವಿಲ್ಲ. ಸರ್ವಮಂಗಳವೂ ಪ್ರತಿಯೊಬ್ಬರ ಮಂಗಳಕ್ಕೂ ಆಧಾರ. ಅದನ್ನು ಬಿಟ್ಟು ಅದರಿಂದ ಪ್ರತ್ಯೇಕವಾಗಿ ಅದಕ್ಕೆ ಹೊರತಾಗಿ, ಕೇವಲ ಸ್ವಾರ್ಥಪರ ಜೀವನ ಅಸಾಧ್ಯ. ಸ್ವಪರಗಳು ವಿರುದ್ಧವಾದುದಲ್ಲ, ಒಂದನ್ನೊಂದು ಒಳಗೊಂಡಿವೆ. ಅವೆರಡಕ್ಕೂ ಸಮಾನವಾಗಿ ಎರಡನ್ನೂ ಉದ್ಧರಿಸುವ ಆತ್ಮ ಉತ್ತಮ ಆತ್ಮ. ಆ ಆತ್ಮವನ್ನು ಸಾಧಿಸಿಕೊಳ್ಳುವುದೇ ನೀತಿಯ ಗುರಿ.[೨]

ಸಮಾಜ[ಬದಲಾಯಿಸಿ]

ಈ ಉತ್ತಮ ಆತ್ಮ ಯಾವುದು, ಎಂಥಾದ್ದು? ಅದು ಸಾಮಾಜಿಕ ಆತ್ಮ ಎಂಬುದು ಈ ಪ್ರಶ್ನೆಗೆ ಮೊದಲನೆಯ ಉತ್ತರ. ನಾವೂ ಇತರರೂ ಒಬ್ಬರು ಇನ್ನೊಬ್ಬರಿಗೆ ಬಾಧಕರಾಗದಂತೆ ನಮ್ಮನ್ನು ನಡೆಸುವುದು ನಮ್ಮೆಲ್ಲರಿಗೂ ಸಾಮಾನ್ಯವಾದ ಸಾಮಾಜಿಕ ಆತ್ಮ. ಸಾಮಾಜಿಕ ಆತ್ಮ ಎಂದರೆ ಪ್ರತಿಯೊಬ್ಬನೂ ಒಂದು ದೇಹ ಪಡೆದಿರುವಂತೆ ಒಂದು ದೊಡ್ಡ ದೇಹ ಪಡೆದಿರುವ ಆತ್ಮವಲ್ಲ ಅದು. ಪರಸ್ಪರ ವಿರೋಧಿಗಳಂತೆ ವರ್ತಿಸದೆ ಸ್ನೇಹಿತರಾಗಿ ವರ್ತಿಸುವಂತೆ ಪ್ರೇರಿಸುವ ಚೈತನ್ಯ ಸಾಮಾಜಿಕ ಚೈತನ್ಯ. ಪ್ರತಿಯೊಬ್ಬನೂ ತನ್ನದೇ ವಿಶಿಷ್ಟವಾದ ಗುಣವನ್ನು ಪಡೆದಿರುತ್ತಾನೆ. ಆ ಗುಣಕ್ಕೆ ವ್ಯತಿರಿಕ್ತವಾಗಿ ಅವನು ನಡೆದರೆ ಅವನ ಆತ್ಮಕ್ಕೆ ಹಾನಿ. ತನ್ನ ಗುಣಕ್ಕನುಸಾರವಾಗಿ ಒಬ್ಬೊಬ್ಬನೂ ಸಮಾಜದಲ್ಲಿ ಒಂದು ಸ್ಥಾನವನ್ನು ಪಡೆದಿರುತ್ತಾನೆ. ಅವನ ಕರ್ತವ್ಯಗಳು ಆ ಸ್ಥಾನಕ್ಕೆ ಅನುಗುಣವಾದುವು, ಸಾಪೇಕ್ಷವಾದುವು. [೩]

ಧರ್ಮ[ಬದಲಾಯಿಸಿ]

ಒಬ್ಬನಿಗೆ ದೇಹಶಕ್ತಿ, ದುಡಿಮೆಯ ಶಕ್ತಿ, ಬುದ್ಧಿಶಕ್ತಿ ಹೆಚ್ಚಾಗಿಯೂ ವ್ಯವಸ್ಥೆ ಮಾಡಿಕೊಳ್ಳಬಲ್ಲ ಶಕ್ತಿ ಕಡಿಮೆಯಾಗಿಯೂ ಇರುತ್ತದೆ. ಇನ್ನೊಬ್ಬನಿಗೆ ದೇಹಶಕ್ತಿ ಬುದ್ಧಿಶಕ್ತಿ ವ್ಯವಸ್ಥಾಶಕ್ತಿಗಳೆಲ್ಲ ಇರುತ್ತವೆ. ಮತ್ತೊಬ್ಬನಿಗೆ ಪ್ರತಿಭೆ, ಪ್ರಜ್ಞೆ ಹೆಚ್ಚಾಗಿದ್ದು ದುಡಿಮೆಯ ಶಕ್ತಿ ಕಡಿಮೆಯಾಗಿರುತ್ತದೆ. ಮಗುದೊಬ್ಬನಿಗೆ ಯಂತ್ರನಿರ್ಮಾಣ, ಕೈಗಾರಿಕೆ, ಕುಶಲ ವಿದ್ಯೆಯಲ್ಲಿ ನೈಪುಣ್ಯ ಹೆಚ್ಚಾಗಿರುತ್ತದೆ. ತನ್ನ ಶಕ್ತಿಯಲ್ಲಿ ಆಸಕ್ತನಾದವ ತನ್ನ ಮಂಗಳವನ್ನು ಸಾಧಿಸುತ್ತಾನೆ. ಅದರಲ್ಲಿ ಆಸಕ್ತನಾಗದೆ ತನ್ನಲ್ಲಿ ಇಲ್ಲದ ಮತ್ತು ಇತರ ವ್ಯಕ್ತಿಗಳಲ್ಲಿರುವ ಯೋಗ್ಯತೆಯನ್ನು ಗಳಿಸಲು ಆಸಕ್ತನಾದವ ತನಗೂ ಇತರರಿಗೂ ಹಾನಿಕಾರಿಯಾಗುತ್ತಾನೆ. ತನ್ನ ಸ್ವಭಾವಕ್ಕೆ ಹೊಂದಿಕೆಯಾಗುವುದು ಸ್ವಧರ್ಮ. ಹೀಗೆ ಸ್ವಧರ್ಮಕ್ಕನುಗುಣವಾಗಿ ನಡೆದುಕೊಂಡರೆ ಅವನಿಗೂ ಒಳ್ಳೆಯದಾಗುತ್ತದೆ, ಸಮಾಜಕ್ಕೂ ಒಳ್ಳೆಯದಾಗುತ್ತದೆ. ಇಂಥವು ನಿರ್ಮತ್ಸರವಾಗಿ ಶುದ್ಧಾಂತಃಕರಣರಾದ ಧರ್ಮಿಷ್ಟರು ಪೂರ್ವಾಪರಗಳನ್ನೆಲ್ಲ ವಿಮರ್ಶಿಸಿ ನಿರ್ಧರಿಸಿದ ಕರ್ತವ್ಯಗಳು. ಅವುಗಳನ್ನು ಬಿಟ್ಟವನಿಗೆ ಸ್ವಶ್ರೇಯಸ್ಸೂ ತಪ್ಪುತ್ತವೆ, ಪರರ ಶ್ರೇಯಸ್ಸಿಗೂ ತಡೆಯಾಗುತ್ತದೆ. ಸ್ವಧರ್ಮ ಸ್ವಾರ್ಥವಲ್ಲ, ಸಮಾಜಧರ್ಮಕ್ಕೆ ಹೊಂದಿಕೆಯಾದ ಧರ್ಮ. ಸಮಾಜ ನಿರ್ಮಿಸಿದ ನೀತಿನಿಯಮಗಳು (ಕ್ಯಾಂಟ್ ನಿರೂಪಿಸುವಂತೆ) ಕೇವಲ ಆಂತರಿಕ ನಿಯಮವೂ ಅಲ್ಲ. ಸಮಾಜದಲ್ಲಿ ನೀತಿನಿಷ್ಠರೆಂದೂ ತಿಳಿದವರೆಂದೂ ಪ್ರಸಿದ್ಧರಾದವರಿಂದ ನಿರ್ದೇಶಿಸಲ್ಪಟ್ಟು ಧರ್ಮದಲ್ಲಿ ಆಸಕ್ತರಾದ ಜನರಿಂದ ಆಚರಿಸಲ್ಪಟ್ಟು, ಒಟ್ಟಿನಲ್ಲಿ ಅದು ಶ್ರೇಯಸ್ಕರವೆಂಬುದು ಅನುಭವ ಸಿದ್ಧವಾಗಿ ಸಮಾಜದಿಂದ ಕ್ರಮಕ್ರಮವಾಗಿ ಅಂಗೀಕರಿಸಲ್ಪಟ್ಟು ರೂಪುಗೊಂಡ ನಿಯಮ ಅದು. ಇದು ಬ್ರ್ಯಾಡ್ಲೆಯ ತತ್ತ್ವಸಿದ್ಧಾಂತ.[೪]

ನೈತಿಕತೆ[ಬದಲಾಯಿಸಿ]

ಈ ಸಿದ್ಧಾಂತ ಪೂರ್ಣವಾಗಿ ಅಬಾಧಿತವಲ್ಲ. ಸಮಾಜ ಸದಾ ಪ್ರಗತಿಪರವಲ್ಲ. ಒಂದು ಸಮಾಜದ ನೈತಿಕ ಸ್ಥಿತಿ ಒಂದು ಕಾಲದಲ್ಲಿ ಉತ್ತಮವಾಗಿರುತ್ತದೆ. ಇನ್ನೊಂದು ಕಾಲದಲ್ಲಿ ಇಳಿಮುಖವಾಗಿರುತ್ತದೆ. ಗ್ರೀಸಿನ ಸಮಾಜ ಒಂದು ಕಾಲದಲ್ಲಿ ಶಿಖರಕ್ಕೇರಿದ್ದು ಇನ್ನೊಂದು ಕಾಲದಲ್ಲಿ ಅವನತಿಗೆ ಇಳಿಯಿತು. ಹಿಂದೆ ಒಂದು ಕಾಲದಲ್ಲಿ ಅದು ಮುಟ್ಟಿದ್ದ ಮೇಲಂತಸ್ತನ್ನು ಪುನಃ ಅದು ಮುಟ್ಟಲಾಗಲಿಲ್ಲ. ಬ್ಯಾಬಿಲೋನಿಯ, ಅಸ್ಸೀರಿಯ ಮತ್ತು ಈಜಿಪ್ಟ್ ಸಮಾಜಗಳಂತೂ ನಿರ್ನಾಮವಾದುವು. ಸಾಮಾಜಿಕ ನೀತಿನಿಯಮಗಳು ಎಲ್ಲ ಕಾಲದಲ್ಲೂ ಸರಿಯಾದುವು, ಅಭ್ಯುದಯಪರವಾದುವು ಎಂದು ಹೇಳಲು ಸಾಧ್ಯವಿಲ್ಲ. ಹಿಂದೆ ಒಂದು ಕಾಲದಲ್ಲಿ ಭಾರತ ಸಮಾಜ ಅತ್ಯಂತ ಶ್ರೇಯಸ್ಕರವೆಂದು ನಿರ್ಮಿಸಿದ, ಬೆಳೆಸಿದ. ಧರ್ಮ ಇಂದು ಸರಿಯಾದದ್ದೆಂದು ಅಭ್ಯುದಯಕಾರಿಯೆಂದು ಹೇಳಲಾದೀತೆ? ಹಾಗೆ ಇದ್ದಿದ್ದರೆ ಮಹಾತ್ಮಗಾಂಧಿಯವರ ಆತ್ಮಸಂಶೋಧನೆಗೂ ಭಾರತೀಯ ಸಮಾಜಧರ್ಮದ ವಿಮರ್ಶೆಗೂ ಅಗತ್ಯವೇನಿತ್ತು? ಸಮಾಜದ ಚೈತನ್ಯ ಕಾಲದಿಂದ ಕಾಲಕ್ಕೆ ಅದರಿಂದ ಮೀರಿದ ಪರಮಚೈತನ್ಯದಿಂದ, ಪರಮಾತ್ಮದಿಂದ, ಸ್ಫೂರ್ತಿ ಪಡೆದ ಸಂದೇಶ ಪಡೆದ ಮಹಾತ್ಮರ ವಿಮರ್ಶೆಗೆ ಒಳಪಡಬೇಕಾಗುವುದು. ಆದ್ದರಿಂದ ನೀತಿ ವಿಮರ್ಶಾ ಬುದ್ಧಿಯ ಓರೆಗೆ ಗುರಿಯಾಗಬೇಕಾಗುತ್ತದೆ. ಈ ವಿಮರ್ಶಾಚೈತನ್ಯ ನೀತಿಗೆ ಗುರಿ. ಇದು ಟಿ. ಎಚ್. ಗ್ರೀನ್ ಎಂಬ ಹೆಗೆಲ್‍ನ ಇನ್ನೊಬ್ಬ ಅನುಯಾಯಿಯ ಸಿದ್ಧಾಂತ.[೫]

ತೋರಿಕೆ ಮತ್ತು ಪ್ರಮಾಣ[ಬದಲಾಯಿಸಿ]

ಮೊದಲನೆಯದು ಸಾಮಾಜಿಕ ಚೈತನ್ಯನೀತಿವಾದ, ಎರಡನೆಯದು ಸ್ವತಂತ್ರನೀತಿ ಚೈತನ್ಯವಾದ. ಬ್ರ್ಯಾಡ್ಲೆ ಮತ್ತು ಗ್ರೀನ್ ಇವರಿಬ್ಬರ ವಾದಗಳು ಹಾಗೆ ತೋರಿದರೂ ಪರಸ್ಪರ ವಿರುದ್ಧವಲ್ಲ. ಒಂದೊಂದು ನೀತಿಗೆ ಅಗತ್ಯವಾದ ಒಂದೊಂದು ಅಂಶವನ್ನು ಒತ್ತಿ ಹೇಳುತ್ತದೆ. ವಿಮರ್ಶಾಬುದ್ಧಿ ಮತ್ತು ಬರ್ಗಸನ್ ಹೇಳುವಂತೆ ಆರ್ಷಜ್ಞಾನ ನೀತಿಯ ನೆಲೆಗೆ ಅಂತಿಮ ಆಧಾರಗಳು. ಆದರೆ ಅವು ಪೂರ್ಣವಾಗಿ ಅಬಾಧಿತವಲ್ಲ. ಸಮಾಜಕ್ಕೆ ಅತೀತವಾದ ನೀತಿ ಮೇಲಾದುದು ಎಂದು ಒಬ್ಬ ಘೋಷಿಸಿದಾಗ ಸಮಾಜದಲ್ಲಿ ಗೊಂದಲವೇಳುತ್ತದೆ. ತೂಕಡಿಸುವ ಸಮಾಜವನ್ನು ಎಚ್ಚರಗೊಳಿಸಬೇಕಾದಾಗ ಕ್ರಾಂತಿಸ್ಥಿತಿ ಅನಿವಾರ್ಯ. ಅದೇ ಒಂದು ಪ್ರಮಾಣವಲ್ಲ. ಆದರೆ ವಿಮರ್ಶಾತ್ಮಕ ಬುದ್ಧಿಜನ್ಯನೀತಿ ವೈಯಕ್ತಿಕ. ಅದು ಸರಿಯಾದುದಾಗಬಹುದು ಅಥವಾ ತಪ್ಪಾದುದಾದರೂ ಆಗಬಹುದು ಅಥವಾ ಅದು ಪೂರ್ಣವಾಗಿ ಸತ್ಯವಾಗದಿರಬಹುದು. ಸಾಮಾಜಿಕ ನೀತಿಯಲ್ಲಿ ಒಂದು ವಿಧದಲ್ಲಿ ಲೋಪ ಬರುವಂತೆ, ವಿಮರ್ಶಾತ್ಮಕ ನೀತಿಯಲ್ಲೂ ಇನ್ನೊಂದು ವಿಧವಾದ ಲೋಪವಿರಬಹುದು. ಅದನ್ನು ಸಮಾಜ ಆಚರಣೆಗೆ ತಂದ ಹೊರತು, ಅದರ ಲೋಪದೋಷಗಳು ವ್ಯಕ್ತವಾಗುವುದಿಲ್ಲ. ಆದ್ದರಿಂದ ವೈಯಕ್ತಿಕ ವಿಮರ್ಶಾನೀತಿ ನರುಪಾಧಿಕವೆಂದು ಹೇಳಲು ಸಾಧ್ಯವಿಲ್ಲ. ಆದರೆ ಈಗಿರುವ ಸಾಮಾಜಿಕ ನೀತಿಯೂ ನಿರುಪಾಧಿಕವೆಂದು ಯಾರೂ ಹೇಳಲಾರರು. ಆದ್ದರಿಂದ ಆ ದೋಷಗಳನ್ನು ಹೋಗಲಾಡಿಸುವುದಕ್ಕಾಗಿಯಾದರೂ ನಾವು ವಿಚಾರ ನೀತಿಯನ್ನು ಧೈರ್ಯವಾಗಿ ಅನುಸರಿಸಬೇಕಾಗುತ್ತದೆ. ಮುಂದಾಗುವ ಪರಿಣಾಮವನ್ನು ನೋಡಿಕೊಂಡು ಅಗತ್ಯವಾದರೆ ಅದನ್ನು ಉಚಿತವಾದ ರೀತಿಯಲ್ಲಿ ಮಾರ್ಪಡಿಸಬೇಕಾಗುತ್ತದೆ. ಸರಿಹೋದರೆ ಹೊಸ ವಿಚಾರ ನೀತಿ ಸಾಮಾಜಿಕ ನೀತಿಯಾಗುತ್ತದೆ. ಕಾಲಕ್ರಮದಲ್ಲಿ ಅದೂ ವೈಯಕ್ತಿಕ ವಿಮರ್ಶೆಗೆ ಒಳಪಡಬೇಕಾಗುತ್ತದೆ. ನೈತಿಕ ಜೀವನ ಬದಲಾವಣೆ ಇಲ್ಲದ ಜೀವನವಲ್ಲ. ಯಾವ ಒಂದು ಕಾಲದಲ್ಲಾಗಲಿ ಯಾವದೊಂದು ಸ್ಥಿತಿಯಲ್ಲಾಗಲಿ ನಮ್ಮ ನೀತಿ ಪರಿಪೂರ್ಣವಲ್ಲ. ಪರಮವೇ ಪರಿಪೂರ್ಣ ಧರ್ಮ. ಆ ಪರಿಪೂರ್ಣತೆಯನ್ನು ನಾವು ಸಮೀಪಿಸುತ್ತಿದ್ದರೂ ಅದನ್ನು ಸಾಧಿಸುವುದರಲ್ಲಿ ನಮ್ಮ ಪ್ರಯತ್ನ ಎಷ್ಟು ಎಷ್ಟು ಮುಂದೆ ಸಾಗಿಸಿದರೂ ಆ ಪರಮ ಧರ್ಮಕ್ಕೂ ನಾವು ವೈಯಕ್ತಿಕವಾಗಿ ಆಗಲಿ ಸಾಮಾಜಿಕವಾಗಿ ಆಗಲಿ ಧರ್ಮವೆಂದು ತಿಳಿದಿರುವುದಕ್ಕೂ ಅಂತರವಿದ್ದೇ ಇರುತ್ತದೆ. ಆದ್ದರಿಂದ ಯಾವ ಕಾಲದಲ್ಲೇ ಆಗಲಿ ಯಾವುದೊಂದು ನೀತಿಯೇ ಆಗಲಿ ಅದು ಸ್ವಲ್ಪಮಟ್ಟಿಗಾದರೂ ತೋರಿಕೆಯಾಗಿಯೇ ಇರಬೇಕಾಗುತ್ತದೆ. ಆದರೂ ನೀತಿಗಳೆಲ್ಲ ಒಂದೇ ದರ್ಜೆಯವಲ್ಲ. [೬]

ಸತ್ಯ ಮತ್ತು ಆತ್ಮಸಿದ್ಧಿ[ಬದಲಾಯಿಸಿ]

ಸತ್ಯದ ಬೇರೆ ಬೇರೆ ದರ್ಜೆಗಳಿರುವಂತೆಯೇ ನೀತಿಯ ದರ್ಜೆಗಳೂ ಬೇರೆ ಬೇರೆ. ಒಂದು ಇನ್ನೊಂದಕ್ಕಿಂತ ಹೆಚ್ಚು ಸಮರ್ಪಕವಾದದ್ದು; ಅದರ ಮೂಲಕ ನಮ್ಮ ಆತ್ಮ ಹೆಚ್ಚು ವೈಶಾಲ್ಯ ಪಡೆಯುತ್ತದೆ; ವಿಶಾಲವಾದ ಆತ್ಮ ಸಿದ್ಧಿಸುತ್ತದೆ. ಆತ್ಮಸಿದ್ಧಿಯ ನೀತಿಯನ್ನು ವಿಚಾರ ಮಾಡುವಾಗ ಸಾಮಾನ್ಯವಾಗಿ ಒಂದು ಪ್ರಶ್ನೆ ಹುಟ್ಟುತ್ತದೆ. ಆತ್ಮಸಿದ್ಧಿನಿ ಎಂದರೆ ಆತ್ಮಾರ್ಪಣೆಯೇ ಅಥವಾ ಆತ್ಮ ಪ್ರತಿಷ್ಠೆಯೇ? ತನ್ನನ್ನು ಸಮಾಜಕ್ಕೆ ಅಧೀನಗೊಳಿಸುವುದು ಅಥವಾ ತನ್ನನ್ನು ತನಗಿಂತ ಮೇಲಾದ ಆತ್ಮಕ್ಕೆ ಅರ್ಪಿಸುವುದು ಆತ್ಮಾರ್ಪಣೆ. ಮೊದಲನೆಯ ಅರ್ಥದಲ್ಲಾಗಲಿ ಎರಡನೆಯ ಅರ್ಥದಲ್ಲಾಗಲಿ ನೈತಿಕ ಜೀವನ ಅರ್ಪಣೆಯ ಜೀವನ. ಅಂಥ ಅರ್ಪಣೆ ಇಲ್ಲದೆ ನೈತಿಕ ಜೀವನ ಅಸಾಧ್ಯ. ಸಮಾಜದ ನೀತಿಗಿಂತ ಸ್ವತಂತ್ರವಾದ ನೀತಿಯೇ ಮೇಲು ಎಂದು ತಿಳಿಯುವುದಾಗಲಿ, ತನ್ನ ಆತ್ಮಕ್ಕಿಂತ ಮೇಲಾದ ಆತ್ಮಕ್ಕೆ ವಿಧೇಯವಾಗಿರುವುದರಿಂದ ತನ್ನ ಆತ್ಮಕ್ಕೆ ಚ್ಯುತಿಯುಂಟಾಗುತ್ತಿದೆ ಎಂದು ತಿಳಿಯುವುದಾಗಲಿ, ಸ್ವಪ್ರತಿಷ್ಠೆಯ ನೀತಿಯಾಗುತ್ತದೆ. ಎಷ್ಟೇ ನೀತಿವಂತನಾದರೂ ಸಮಾಜಕ್ಕಿಂತ ತಾನು ಮೇಲು ಎಂಬ ಪ್ರತಿಷ್ಠೆ ಅಸಾಧ್ಯ. ಸಾಮಾಜಿಕ ನೀತಿಯಿಂದ ಭಿನ್ನವಾದ ನೀತಿಯನ್ನು ಅನುಸರಿಸುವಾತ ಅಹಂಕಾರದಿಂದ ವರ್ತಿಸುವುದಿಲ್ಲ, ಸಾಮಾಜಿಕ ಚೈತನ್ಯಕ್ಕಿಂತ ಮೇಲಾದ ಚೈತನ್ಯವಿದೆ ಎಂದು ಭಾವಿಸಿ ಅದಕ್ಕೆ ವಿಧೇಯನಾಗಿ ನಡೆಯುತ್ತಾನೆ. ಆದ್ದರಿಂದ ಅವನ ನಡತೆ ಸಮಾಜಕ್ಕೆ ವಿಧೇಯವಾದುದಲ್ಲವಾದರೂ ಉತ್ತಮ ಆತ್ಮಕ್ಕೆ ವಿಧೇಯವಾದದ್ದು; ಅವನ ನಡತೆಯಲ್ಲಿ ಒಂದು ಬಗೆಯ ಅರ್ಪಣೆ ಇದೆ. ಸಮಾಜಕ್ಕೂ ವಿಧೇಯನಾಗದೆ, ಉತ್ತಮ ಆತ್ಮಕ್ಕೂ ವಿಧೇಯನಾಗದೆ ಸ್ವಪ್ರತಿಷ್ಠೆಯಿಂದ ವರ್ತಿಸುವವ ನೀತಿವಂತನಾಗುವುದು ಅಸಂಭವ. ಅಂಥವನು ನೀತಿಭ್ರಷ್ಟನಾಗುವ ಸಂಭವವೇ ಹೆಚ್ಚು. ಬ್ರ್ಯಾಡ್ಲೆ ಹೇಳುವಂತೆ ತಾನು ಸಮಾಜಕ್ಕಿಂತ ಹೆಚ್ಚು ನೀತಿವಂತನೆಂದು ಅಹಂಭಾವದಿಂದ ನಡೆಯುವಾತ ಅನೀತಿಯ ಪ್ರಪಾತಕ್ಕೆ ಬೀಳುವುದರಲ್ಲಿರುತ್ತಾನೆ. ಸ್ವಪ್ರತಿಷ್ಠೆ ನಿಜವಾದ ಆತ್ಮಸಾಧನೆಯಾಗಲಾರದು. ಆತ್ಮಸಾಧನೆ ಎಂದರೆ ಉತ್ತಮ ಆತ್ಮಕ್ಕೆ ಶರಣನಾಗಿ ನಡೆಯುವುದು. ಇಂಥ ನಡೆವಳಿಕೆ ಪರಿಣಾಮದಲ್ಲಿ ಆತ್ಮಾರ್ಪಣೆಯೇ. ಕೆಳದರ್ಜೆಯ ಆತ್ಮವನ್ನು ಮೇಲಿನ ದರ್ಜೆಯ ಆತ್ಮಕ್ಕೆ ಒಪ್ಪಿಸುವುದು ಆತ್ಮಾರ್ಪಣೆ. ಹಾಗೆ ಮಾಡಿದಾಗ ಅವನ ಕೆಳಗಿನ ದರ್ಜೆಯ ಆತ್ಮ ಅಳಿಯುತ್ತದೆ. ಮೇಲಿನ ದರ್ಜೆಯ ಆತ್ಮ ಏಳುತ್ತದೆ. ಉಳಿಯಲು ಅಳಿ ಎಂದು ಹೆಗೆಲ್ಲನ ಪ್ರಖ್ಯಾತವಾದ ಒಂದು ವಚನವಿದೆ. ಉತ್ತಮಾತ್ಮನಾಗಿ ಬಾಳಲು ಕನಿಷ್ಠಾತ್ಮವನ್ನು ಬಲಿಕೊಡು ಎಂದು ಅದರ ಅರ್ಥ. ಆತ್ಮಸಿದ್ಧಿಯಾದ ಹೊರತು ಆತ್ಮಾರ್ಪಣೆಗೆ ಅರ್ಥವಿಲ್ಲ. ಕೀಳಾದುದನ್ನು ಪಡೆಯಲು ಮೇಲಾದುದನ್ನು ಮೂಢ ಕೂಡ ಬಿಡುವುದಿಲ್ಲ. ಬುದ್ಧಿ ಇರುವಾತ ತೊಗರಿಬೇಳೆಯನ್ನು ಕೊಟ್ಟು ತುಂಬೆಯಸೊಪ್ಪನ್ನು ಕೊಳ್ಳುವುದಿಲ್ಲ; ತುಂಬೆಯಸೊಪ್ಪನ್ನು ಕೊಟ್ಟು ತೊಗರಿಬೇಳೆಯನ್ನು ಪಡೆಯಲು ಸದಾ ಸಿದ್ಧನಾಗಿರುತ್ತಾನೆ.[೭]

ಹೆಗೆಲ್‍ನ ಅನುಯಾಯಿಗಳಲ್ಲಿ ಬರ್ನಾಡ್ ಬೊಸಾಂಕೆ ಆತ್ಮಸಿದ್ಧಿಯೆಂದರೆ ಪುರುಷಾರ್ಥಸಿದ್ಧಿ, ರಿಯಲೈಸೇಷನ್ ಆಫ್ ವ್ಯಾಲ್ಯು ಎಂಬ ಹೊಸ ವಾದವನ್ನು ಮಂಡಿಸಿರುತ್ತಾನೆ. ಪುರುಷನಿಲ್ಲದೆ ಪುರುಷಾರ್ಥಸಿದ್ಧಿಯಾಗಲಿ, ಪುರುಷಾರ್ಥವಿಲ್ಲದ ಪುರುಷನಾಗಲಿ ಅಚಿಂತ್ಯ. ಆದರೆ ಇದರಲ್ಲಿ ಹೊಸ ಅಂಶವೇನೆಂದರೆ ಧರ್ಮ ಇತರ ಪುರುಷಾರ್ಥಗಳಿಂದ ಬೇರೆಯಲ್ಲ; ಅವುಗಳಿಗೆ ವಿರುದ್ಧವಲ್ಲ. ಎಲ್ಲ ಪುರುಷಾರ್ಥಗಳ ಸಮನ್ವಯ ಜೀವನದ ಅಂತಿಮ ಧ್ಯೇಯ. ಅದೇ ನೀತಿಯ ಅಂತಿಮ ಗುರಿ. ಬೊಸಾಂಕೆಯ ವಾದಕ್ಕೂ ಭಾರತೀಯ ಆಧ್ಯಾತ್ಮ ದೃಷ್ಟಿಗೂ ಸಾಮ್ಯ ಕಾಣುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://plato.stanford.edu/entries/hegel/
  2. "ಆರ್ಕೈವ್ ನಕಲು". Archived from the original on 2019-12-14. Retrieved 2020-01-11.
  3. https://www.amazon.com/Hegel-Short-Introduction-Peter-Singer/dp/019280197X
  4. https://plato.stanford.edu/entries/bradley/
  5. https://www.bradley.edu/academic/departments/phlrs/minor/phl/
  6. https://www.britannica.com/topic/truth-philosophy-and-logic
  7. https://plato.stanford.edu/entries/bradley-regress/