ಆತ್ಮಚರಿತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಆತ್ಮಕಥೆ ಇಂದ ಪುನರ್ನಿರ್ದೇಶಿತ)
"ಬಾಬರ್‍ನಾಮಾ" ಬಾಬರನ ಜೀವನಚರಿತ್ರೆ

ತಮ್ಮ ಜೀವನದ ವೃತ್ತಾಂತವನ್ನು ತಾವಾಗಿಯೇ (ಅಥವಾ ಕೆಲವೊಮ್ಮೆ ಮತ್ತೊಬ್ಬರ ಸಹಾಯದೊಂದಿಗೆ) ಬರೆದ ಪುಸ್ತಕವನ್ನು ಆತ್ಮಚರಿತ್ರೆ ಅಥವಾ "ಆತ್ಮಕತೆ" ಎಂದು ಕರೆಯುತ್ತಾರೆ.[೧] ಆತ್ಮಕಥೆ ವ್ಯಕ್ತಿ ತನ್ನ ಜೀವನಚರಿತ್ರೆಯನ್ನು ತಾನೇ ಬರೆದರೆ ಅದನ್ನು ಆತ್ಮಕಥೆ, ಆತ್ಮವೃತ್ತ ಎನ್ನುತ್ತೇವೆ. ಅದೇ ವ್ಯಕ್ತಿಯ ಚರಿತ್ರೆಯನ್ನು ಬೇರೊಬ್ಬ ಬರೆದಾಗ ಅದನ್ನು ಜೀವನಚರಿತ್ರೆ ಎನ್ನುತ್ತೇವೆ. ಆತ್ಮಕಥೆ ಸಾಹಿತ್ಯದ ಒಂದು ಪ್ರಮುಖ ಪ್ರಕಾರ. ಪತ್ರಗಳು (ದಿನಚರಿ, ಜರ್ನಲ್‍ಗಳು, ಬಖೈರುಗಳು), ವೈಯಕ್ತಿಕ ಪ್ರಬಂಧಗಳು ಮುಂತಾದುವು ಈ ವರ್ಗಕ್ಕೆ ಸೇರುತ್ತವೆ. ಮಾನವನ ವ್ಯಕ್ತಿತ್ವ ತನ್ನನ್ನು ತಾನು ಚಿರಸ್ಮರಣೀಯ ಮಾಡಿಕೊಳ್ಳುವ ಪ್ರಯತ್ನವನ್ನು ಈ ಬಗೆಯ ಸಾಹಿತ್ಯದಲ್ಲಿ ನಾವು ಕಾಣುತ್ತೇವೆ.

ಅಗಸ್ಟೀನ್ ಆಫ್ ಹಿಪ್ಪೋ ಅವರು ಕನ್ಫೆಷನ್ಸ್ (ಅಗಸ್ಟೀನ್)ಬರೆದಿದ್ದಾರೆ ,ಸುಮಾರು ೪೦೦ ರ ಸುಮಾರಿಗೆ ಬರೆದ ಮೊದಲ ಪಾಶ್ಚಾತ್ಯ ಆತ್ಮಚರಿತ್ರೆ. ಫಿಲಿಪ್ ಡಿ ಚಾಂಪೇನ್ ಭಾವಚಿತ್ರ, ೧೭ ನೇ ಶತಮಾನ.

ಇತಿಹಾಸ[ಬದಲಾಯಿಸಿ]

ಭಾರತೀಯರಲ್ಲಿ ಆತ್ಮಕಥೆಗಳಾಗಲಿ ಜೀವನಚರಿತ್ರೆಗಳಾಗಲಿ ಬೆಳೆಯದಿದ್ದುದಕ್ಕೆ ಅವರ ಅಲೌಕಿಕ ಜೀವನೋದ್ದೇಶವೇ ಕಾರಣವೆನ್ನಬಹುದು. ವ್ಯಕ್ತಿಚರಿತ್ರೆ, ರಾಜಮಹಾರಾಜರುಗಳ ಚರಿತ್ರೆ ಅವರಿಗೆ ಗೌಣವೆನಿಸಿತು. ದೇವರ ಮತ್ತು ದೇವತೆಗಳ ಕಡೆಗೆ ಅವರ ಒಲವು ಹೆಚ್ಚಾಗಿದ್ದುದರಿಂದ ಮತಧರ್ಮ ಸಂಬಂಧದ ಸಾಹಿತ್ಯವೇ ಹೇರಳವಾಗಿ ಬೆಳೆಯಿತು. ಅನಂತರ ರಾಮಾಯಣ ಮಹಾಭಾರತಗಳಲ್ಲಿ ಚರಿತ್ರೆಯ ನವುರಾದ ಎಳೆಗಳನ್ನು ಕಾಣುತ್ತೇವೆ. ಪುರಾಣಗಳಲ್ಲಿ ಚರಿತ್ರೆ ಕಲಸಿಹೋಗಿದೆ. ಮುಂದಿನ ಕವಿಗಳು ರಾಜಮಹಾರಾಜರ ಚರಿತ್ರೆಯನ್ನು ಹೇಳುವಾಗಲೂ ತಮ್ಮ ಧಾರ್ಮಿಕ ಕಾವ್ಯಗಳಲ್ಲಿ ಅವನ್ನು ಹಾಸುಹೊಕ್ಕಾಗಿ ಹೆಣೆದುಬಿಟ್ಟಿದ್ದಾರೆ. ಕಾಳಿದಾಸನ ರಘುವಂಶ ಚರಿತ್ರೆಯಾದರೂ ಕಾವ್ಯವೆಂದೇ ಅದರ ಪ್ರಾಶಸ್ತ್ಯ ಉಳಿದಿದೆ. ಭಾರತೀಯ ಸಾಹಿತ್ಯದಲ್ಲಿ ಚರಿತ್ರೆಯ ರಚನೆ ಪ್ರಾರಂಭವಾದದ್ದು ೧೮, ೧೯ನೆಯ ಶತಮಾನಗಳಲ್ಲಿ; ಜೀವನ ಚರಿತ್ರೆಯಾದರೋ ಇನ್ನೂ ಒಂದು ಶತಮಾನದ ಅನಂತರ ಬೆಳೆಯಿತು.[೨][೩][೪]

ಆತ್ಮ ಕಥೆಯ ಹುಟ್ಟು[ಬದಲಾಯಿಸಿ]

ಬಹುಮಟ್ಟಿಗೆ ಯೂರೋಪ್ ಖಂಡದಲ್ಲಿ ಆತ್ಮಕಥೆಯ ಹುಟ್ಟು ಮತ್ತು ಬೆಳವಣಿಗೆ ಆಗುವುದಕ್ಕೆ ಒಂದು ಕಾರಣ ಕ್ರೈಸ್ತಮತದ ಮುಖ್ಯ ಅಂಶಗಳಲ್ಲೊಂದಾದ ಪಾಪನಿವೇದನೆ. ಇದರಿಂದ ಆತ್ಮಪರಿಶೋಧನೆಯ ಸ್ವಭಾವ ಬೆಳೆದು, ಯೂರೋಪಿನಲ್ಲಿ ಬಹಳ ಹಿಂದೆಯೆ ಆತ್ಮಚರಿತ್ರಾಂಶವುಳ್ಳ ಅನೇಕ ಕೃತಿಗಳು ಬರೆಯಲ್ಪಟ್ಟವು. ದೊರಕಿರುವ ಗ್ರಂಥಗಳ ಆಧಾರದ ಮೇಲೆ ಕ್ರಿ.ಪೂ. ೧೨೧-೮೦ರಲ್ಲಿ ಜೀವಿಸಿದ್ದ ಮಾರ್ಕಸ್ ಆರೀಲಿಯಸ್ ಎಂಬ ರಾಜನ ಮೆಡಿಟೇಷನ್ಸ್ ಎಂಬ ಕೃತಿಯೇ ಆತ್ಮಕಥೆಯ ಗುಂಪಿಗೆ ಸೇರಿದ ಬರವಣಿಗೆಗಳಲ್ಲಿ ಅತ್ಯಂತ ಹಳೆಯದು. ಮುಂದೆ ಸೆಂಟ್ ಆಗಸ್‍ಟೀನ್ (ಕ್ರಿ.ಶ. ೩೪೩-೪೩೦) ಬರೆದ ಕನ್‍ಫೆಷನ್ಸ್ ಎಂಬ ಕೃತಿ ಈ ಮಾರ್ಗದಲ್ಲಿ ಒಂದು ಮುಖ್ಯ ಮೈಲಿಗಲ್ಲು. ಕ್ರಿ.ಶ. ಎಂಟನೆಯ ಶತಮಾನದಲ್ಲಿ ಇಂಗ್ಲೆಂಡಿನ ವೆನರಬಲ್ ಬೀಡ್‍ನ ಕೃತಿಯೊಂದರಲ್ಲಿ ಆತ್ಮಕಥೆಯಿರುವುದನ್ನು ನೋಡುತ್ತೇವೆ. ಇದಾದ ಮೇಲೆ ಕ್ರಿ.ಶ. ೧೫೭೩ರಲ್ಲಿ ಬರೆಯಲ್ಪಟ್ಟ ಪೊಯಟಿಕಲ್ ನೆರೆಟಿವ್ ಆಫ್ ಥಾಮಸ್ ಟಸರ್ ಎಂಬ ಗ್ರಂಥ ಬರುವವರೆಗೆ ಆತ್ಮಕಥೆ ಎಂದು ಹೇಳಿಸಿಕೊಳ್ಳಲು ಅರ್ಹವಾದ ಕೃತಿ ಯಾವುದೂ ಬರಲಿಲ್ಲ. ಈ ಸಾಹಿತ್ಯ ಪ್ರಕಾರ ೧೮, ೧೯ಮತ್ತು ೨೦ನೆಯ ಶತಮಾನಗಳಲ್ಲಿ ಅಧಿಕವಾಗಿ ಬೆಳೆದು ಬಹು ಜನಪ್ರಿಯವಾಗಿದೆ. ಈ ಅವಧಿಯಲ್ಲಿ ಬಂದ ನೂರಾರು ಕೃತಿಗಳಲ್ಲಿ ಫ್ರಾಂಕ್ಲಿನ್, ರೂಸೊ, ಎಡ್ಮಂಡ್ ಗಾಸ್, ಮಿಲ್, ಟ್ರೊಲೋಪ್, ಟಾಲ್‍ಸ್ಟಾಯ್, ಡಬ್ಲ್ಯೂ.ಎಚ್. ಡೇವಿಸ್ ಆಸ್ಬರ್ಟ್ ಸಿಟ್‍ವೆಲ್, ಜವಹರಲಾಲ್ ನೆಹರು ಮತ್ತು ಗಾಂಧೀಜಿ[೫] ಇವರ ಆತ್ಮಕಥೆಗಳು ಪ್ರಸಿದ್ಧವಾಗಿವೆ.https://www.prajavani.net/article/%E2%80%98%E0%B2%86%E0%B2%A4%E0%B3%8D%E0%B2%AE-%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E2%80%99

ಆತ್ಮಕಥೆಯ ಅಸ್ತಿತ್ವ[ಬದಲಾಯಿಸಿ]

ಸುಮಾರು ಹದಿನೆಂಟನೆಯ ಶತಮಾನದ ಕೊನೆಯವರೆಗೂ ಆತ್ಮಕಥೆಗೆ ಒಂದು ಪ್ರತ್ಯೇಕ ಅಸ್ತಿತ್ವವಿರಲಿಲ್ಲ. ಜೀವನ ಚರಿತ್ರೆಯಲ್ಲಿಯೇ ಅದೂ ಸೇರಿಹೋಗಿತ್ತು. ೧೯ನೆಯ ಶತಮಾನದ ಆದಿಭಾಗದಲ್ಲಿ ಅದಕ್ಕೆ ಪ್ರತ್ಯೇಕ ಅಸ್ತಿತ್ವ ಬಂದಿತು.[೬]

ಆತ್ಮಕಥೆ ಮತ್ತು ಬಖೈರಿಯ ವ್ಯತ್ಯಾಸ[ಬದಲಾಯಿಸಿ]

ಆತ್ಮಕಥೆಗೂ ಬಖೈರಿಗೂ ಹೆಚ್ಚಿನ ಹೋಲಿಕೆ ಇದ್ದರೂ ಮುಖ್ಯವಾದ ಒಂದು ವ್ಯತ್ಯಾಸವಿದೆ. ಆತ್ಮಕಥೆಯಲ್ಲಿ ಬಹುಮಟ್ಟಿನ ಭಾಗ ಅದರ ನಾಯಕನನ್ನು ಕುರಿತದ್ದಾಗಿರುತ್ತದೆ. ಆದರೆ ಬಖೈರಿನಲ್ಲಿ ಬಹುಭಾಗ ನಾಯಕನ ದೃಷ್ಟಿಗೆ ಬಿದ್ದ ವಿಷಯಗಳನ್ನು ಮತ್ತು ಅವನ ಜೀವನಪಥದಲ್ಲಿ ಬರುವ ಹಲವು ವ್ಯಕ್ತಿಗಳನ್ನು ಕುರಿತದ್ದಾಗಿರುತ್ತದೆ. ಒಬ್ಬ ವ್ಯಕ್ತಿಯ ಆತ್ಮಕಥೆ ಮತ್ತು ಅವನನ್ನು ಕುರಿತು ಇತರರು ಬರೆದ ಜೀವನಚರಿತ್ರೆಗಳ ವಿಷಯ ಒಂದೇ ಆದರೂ ಅದನ್ನು ಚಿತ್ರಿಸುವ ಕ್ರಮದಲ್ಲಿ ವ್ಯತ್ಯಾಸವಿರುತ್ತದೆ. ಆತ್ಮಕಥೆಯಿಂದ ಜೀವನಚರಿತ್ರೆಯನ್ನು ಬರೆಯುವವನಿಗೆ ವಿಷಯ ಸಿಕ್ಕುತ್ತದೆ. ಆದರೆ ಯಾರೂ ಜೀವನಚರಿತ್ರೆಯಿಂದ ಆತ್ಮಕಥೆಯನ್ನು ಬರೆಯಲು ವಿಷಯವನ್ನು ತೆಗೆದುಕೊಳ್ಳುವುದಿಲ್ಲ.[೭]

ಆತ್ಮಕಥೆಯ ಉದ್ದೇಶ[ಬದಲಾಯಿಸಿ]

ಆತ್ಮಕಥೆಗಳನ್ನು ಬರೆಯಲು ಹಲವಾರು ಉದ್ದೇಶಗಳಿರುತ್ತವೆ. ತನ್ನ ಜೀವನದ ಸ್ವಾರಸ್ಯವನ್ನು ಇತರರೊಡನೆ ಹೇಳಿಕೊಂಡರೆ ಅದು ಅವರಿಗೆ ರುಚಿಸಬಹುದು, ಪ್ರಯೋಜನಕಾರಿಯಾಗಬಹುದು ಎಂಬ ಭಾವನೆ. ತಾನು ಮಾಡಿದ ಕೆಲಸಕಾರ್ಯಗಳನ್ನು, ಜೀವನದಲ್ಲಿ ತಾಳಿದ ನಿಲುವನ್ನು ಸಮರ್ಥಿಸಿಕೊಳ್ಳುವುದು. ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದು. ತನ್ನ ತೃಪ್ತಿ ಮತ್ತು ಉಪಯೋಗಕ್ಕಾಗಿ ತನ್ನ ಜೀವನವನ್ನು ಒಂದು ದೃಷ್ಟಿಯಿಂದ ನೋಡುವುದು ಮತ್ತು ಅದಕ್ಕೆ ಒಂದು ಕ್ರಮವನ್ನು ಕೊಡುವುದು. ತನ್ನ ವೈಯಕ್ತಿಕ ಜೀವನವನ್ನು ಓದುಗರ ಮುಂದಿಟ್ಟು ಆ ಮೂಲಕ ಪ್ರಚಾರ ಮತ್ತು ಹಣವನ್ನು ಗಳಿಸುವುದು. ಓದುಗರ ಅನುಕಂಪವನ್ನು ಪಡೆಯುವುದು. ಮೆಚ್ಚಿಕೆ ಮತ್ತು ಹೊಗಳಿಕೆಯನ್ನು ಗಳಿಸುವುದು. ತನ್ನ ಜೀವನದ ಸಿಹಿಯಾದ ನೆನಪುಗಳನ್ನು ಮೆಲುಕುಹಾಕುವ ಸಲುವಾಗಿ ಕಹಿ ನೆನಪುಗಳ ಹೊರೆಯನ್ನು ಕಳೆದುಕೊಳ್ಳುವುದಕ್ಕಾಗಿ, ಕಲಾಮಯವಾದ ಜೀವನಚಿತ್ರವನ್ನು ಕೊಡುವುದಕ್ಕಾಗಿ ಬರೆದಿಡುವುದು-ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಹಲವು ಅಂಶಗಳು ಆತ್ಮಕಥೆಯನ್ನು ಬರೆಯಲು ಒಬ್ಬ ವ್ಯಕ್ತಿಯನ್ನು ಪ್ರಚೋದಿಸುತ್ತವೆ.[೮]

ಆತ್ಮ ಕಥೆಗಾರನ ಚಿತ್ರಣ[ಬದಲಾಯಿಸಿ]

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆತ್ಮಕಥೆಯಿದ್ದರೂ ಅದನ್ನು ಕಲಾತ್ಮಕವಾಗಿ ಬರೆಯುವ ಶಕ್ತಿಯಿರುವುದಿಲ್ಲ. ಅಲ್ಲದೆ ಎಲ್ಲರ ಜೀವನವೂ ಸ್ವಾರಸ್ಯದಿಂದ ಕೂಡಿರುವುದಿಲ್ಲ. ಅಂದರೆ ಆತ್ಮಕಥೆಗಾರನ ಜೀವನ ಸ್ವಾರಸ್ಯವುಳ್ಳದ್ದಾಗಿರಬೇಕು, ಅದನ್ನು ಅಚ್ಚುಕಟ್ಟಾಗಿ ಚಿತ್ರಿಸುವ ಭಾಷಾಶೈಲಿಗಳನ್ನು ಅವನು ಹೊಂದಿರಬೇಕು. ಅವನಲ್ಲಿ ವಿಷಯಗಳನ್ನು ವಿಶ್ಲೇಷಿಸುವ, ಸಂಯೋಜಿಸುವ, ಗ್ರಹಿಸುವ ಆತ್ಮಶೋಧನೆ ಮಾಡಿಕೊಳ್ಳುವ ಶಕ್ತಿ ಇರಬೇಕು. ನಿಷ್ಪಕ್ಷಪಾತ, ವಾಸ್ತವಿಕತಾಪ್ರವೃತ್ತಿ, ಅಲಿಪ್ತತೆ ಕುತೂಹಲ-ಈ ಗುಣಗಳನ್ನು ಅವನು ಹೊಂದಿರಬೇಕು. ಜೀವನದ ಸಾವಿರಾರು ವಿವರಗಳಲ್ಲಿ ಮುಖ್ಯವಾದುವುಗಳನ್ನು ಆರಿಸಿಕೊಳ್ಳುವ, ಅವುಗಳಿಗೆ ಸೂಕ್ತ ಪ್ರಾಧಾನ್ಯವನ್ನು ಕೊಡುವ ಶಕ್ತಿಯುಳ್ಳವನೂ ಮತ್ತು ಇಡೀ ಜೀವನವನ್ನು ನೋಡಲು ಯೋಗ್ಯವಾದ ಅರ್ಥವತ್ತಾದ ಒಂದು ದೃಷ್ಟಿಕೋನವನ್ನು ಉಳ್ಳವನೂ ಆಗಿರಬೇಕು.[೯] ಆತ್ಮ ಕಥನ ಬರೆಯುವಾಗ ಸತ್ಯ ಮುಚ್ಚಿಡದೆ. ತನ್ನ ಅಂತರಂಗ ಹಾಗೂ ಬಾಹ್ಯ ನಡವಳಿಗಳನ್ನು ತೆರೆದಿಟ್ಟು ಅಕ್ಷರ ರೂಪ ನೀಡಿ ಒಂದು ಬದುಕಿನ ಸಮಗ್ರ ವಿವರಗಳನ್ನು ಮನಗಣಿಸಿ, ಬರೆದವರ ವ್ಯಕ್ತಿತ್ವ ರೂಪುಗೊಳ್ಳುವಾಗ ತಾಕಿದ ಚಾಣಗಳ ಹೊಡೆತ, ಮತ್ತೊಬ್ಬರ ಬದುಕಿಗೆ ಒಂದು ಮಾರ್ಗದರ್ಶಕ ರೂಪವಾಗಬಹುದು. ನನ್ನ ಕಥೆ ನನ್ನ ಸ್ತುತಿಯಾಗದೆ ನನ್ನ ವ್ಯಕ್ತಿತ್ವದ ದೌರ್ಬಲ್ಯ, ದೋಷ, ಎಡವಿಬಿದ್ದ ಸಂದರ್ಭಗಳನ್ನು ಕಟ್ಟಿ ಕೊಡುವಲ್ಲಿ ಅದರಲ್ಲಿನ ಸತ್ಯ, ನಿಷ್ಠೂರತೆಯಿಂದ ಗಮನ ಸೆಳೆಯುತ್ತದೆ. ಆತ್ಮ ಕಥೆಯ ಬರವಣಿಗೆಯೆಂದರೆ ಅದೊಂದು ಸತ್ಯಶೋಧನೆಯ ಹಾದಿ. ಅನುಭವ, ನೋವು ಆನಂದ ತಂದ ಘಟನೆ, ಸಂದರ್ಭ ಈ ರೀತಿ ತಾನು ನಡೆದ ಹಾದಿಯಲ್ಲಿ ಕಂಡದ್ದನ್ನು ಕಂಡ ಹಾಗೆ ದಾಖಲಿಸುತ್ತಾ ಸಾಗಬೇಕಾಗುತ್ತದೆ. ಆ ರೀತಿ ತನ್ನ ಬದುಕಿನಲ್ಲಿ ತಾನೆಸಗಿದ ತಪ್ಪುಗಳನ್ನು ಮನಸ್ಸಿನಲ್ಲಿ ಬಂದು ಹುದುಗಿದ ಕೆಲವು ಬೇಡದ ಆಲೋಚನೆಗಳನ್ನು ಪಾಪ ನಿವೇದನೆಯಂತೆ ಜನ ಏನೆಂದುಕೊಂಡರೂ ಚಿಂತೆಯಿಲ್ಲ. ಹೇಳಲು ಸಂಕೋಚಪಡುವುದಿಲ್ಲ.

ಆತ್ಮ ಕಥೆಯ ಜನಪ್ರಿಯತೆಗೆ ಕಾರಣ[ಬದಲಾಯಿಸಿ]

ಆತ್ಮಕಥೆ ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗಿದೆ ಮತ್ತು ಹೇರಳವಾಗಿ ಅಂಥ ಪುಸ್ತಕಗಳು ಅಚ್ಚಾಗಿ ಹೊರಬರುತ್ತಿವೆ. ಇದಕ್ಕೆ ಅನೇಕ ಕಾರಣಗಳಿವೆ. ಆತ್ಮಕಥೆಯನ್ನು ಓದುವುದರಿಂದ ಸ್ವಾರಸ್ಯವಾದ ಒಬ್ಬ ವ್ಯಕ್ತಿಯ ಸಂಗ ಸಿಕ್ಕಿದಂತಾಗುತ್ತದೆ. ಅವನು ದೊಡ್ಡ ವ್ಯಕ್ತಿಯಾಗಿದ್ದರೆ ಒಂದು ದೇಶದ ಅಥವಾ ಒಂದು ಕಾಲದ ಚರಿತ್ರೆ ರೂಪಿತವಾಗಲು ಅವನ ಪಾತ್ರವೇನು ಎಂಬುದರ ಅರಿವಾಗುತ್ತದೆ. ದೊಡ್ಡ ದೊಡ್ಡ ವ್ಯಕ್ತಿಗಳ ಮತ್ತು ಘಟನೆಗಳ ಮೇಲೆ ಅವನು ಮಾಡಿರುವ ಟೀಕೆಗಳು ಉಪಯುಕ್ತವಾಗಿರುತ್ತವೆ. ಅವನ ಮನೋವೃತ್ತಿ ಒಂದು ದೇಶದ ಮತ್ತು ಒಂದು ಕಾಲದ ಮನೋವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಆತ್ಮಕಥೆಗಾರ ನಿಜವಾದದ್ದನ್ನೇ ಬರೆದಿದ್ದರೆ ಅವನ ಕೃತಿ ಚರಿತ್ರೆಯನ್ನು ಬರೆಯುವವರಿಗೆ ಒಂದು ಆಧಾರಗ್ರಂಥವಾಗುತ್ತದೆ. ಮೇಲಾಗಿ ಆತ್ಮಕಥೆ ಮನುಷ್ಯಸ್ವಭಾವವನ್ನು ಉದಾಹರಿಸುವ ಒಂದು ದಾಖಲೆ. ಆದ್ದರಿಂದಲೇ ಚರಿತ್ರೆಯನ್ನು ಮಹಾಪುರುಷರ ಜೀವನ ಪರಂಪರೆ ಎಂದು ಕರೆದಿದ್ದಾರೆ. ಅದರಂತೆ ಆತ್ಮಕಥೆಗಳು ಅಂದಿನ ಸಾಮಾಜಿಕ ಹಾಗೂ ಸಾಮೂಹಿಕ ರಾಜಕೀಯ ಜೀವನದ ಇತಿಹಾಸವಾಗುತ್ತವೆ.ಉಲ್ಲೇಖ ದೋಷ: Closing </ref> missing for <ref> tag</ref>

ಆತ್ಮಕಥೆಯ ದೋಷ[ಬದಲಾಯಿಸಿ]

ಆತ್ಮಕಥೆಗಳಲ್ಲಿ ಅನೇಕ ದೋಷಗಳಿರಬಹುದು. ಸತ್ಯಸಂಧನಲ್ಲದ ಆತ್ಮಕಥೆಗಾರ ವಿಷಯವನ್ನು ಮರೆಮಾಚಬಹುದು. ಇಲ್ಲದ್ದನ್ನು ಸೇರಿಸಬಹುದು. ಇದ್ದದ್ದನ್ನು ವಿರೂಪಮಾಡಬಹುದು ಅಥವಾ ಅತಿಮಾಡಬಹುದು. ಎಲ್ಲ ಆತ್ಮಕಥೆಗಾರರೂ ತಮ್ಮ ವಿಚಾರದಲ್ಲಿ ನಿಷ್ಪಕ್ಷಪಾತಿಗಳಾಗಿರುವುದಿಲ್ಲ, ತಮ್ಮನ್ನು ತಾವೇ ದಂಡಿಸಿಕೊಳ್ಳುವ ಮನೋಭಾವದವರಿರುತ್ತಾರೆ, ಸ್ವಪ್ರತಿಷ್ಠೆಯವರಿರುತ್ತಾರೆ. ವಿಷಯಲೋಲುಪರಿರುತ್ತಾರೆ. ಅನೇಕ ಸಂದರ್ಭಗಳಲ್ಲಿ ಆತ್ಮಕಥೆಯನ್ನು ಬರೆಯುವವನ ಭಾವೋದ್ರೇಕದಿಂದ ಅವನ ಕೃತಿ ದೋಷಯುತವಾಗುತ್ತದೆ. ಅವನ ಜೀವನದ ನೈಜಚಿತ್ರ ಸಿಗದೆ ತನ್ನದು ಹೇಗಿರಬೇಕಿತ್ತು ಎಂದು ಅವನು ಆಶಿಸಿದ್ದನೋ ಅಂಥ ಜೀವನ ಚಿತ್ರಿತವಾಗಿರುತ್ತದೆ. ಈ ಸಾಹಿತ್ಯಪ್ರಕಾರದ ಮತ್ತೊಂದು ಅಂತರ್ಗತದೋಷವೆಂದರೆ ಅದರ ಅಪರಿಪೂರ್ಣತೆ. ಇದು ಎಲ್ಲ ಆತ್ಮಕಥೆಗಳಿಗೂ ಅನ್ವಯವಾಗತಕ್ಕ ಮಾತು.

ಉತ್ತಮ ಆತ್ಮಕಥೆಯ ಲಕ್ಷಣ[ಬದಲಾಯಿಸಿ]

ಆತ್ಮಕಥೆ ಮತ್ತು ಚರಿತ್ರೆಯಲ್ಲಿ ಬಳಸುವ ವಿಧಾನ ಒಂದೇ. ಆತ್ಮಕಥೆಯಲ್ಲಿ ಅದರ ನಾಯಕ ಪ್ರಮುಖನಾಗಿ ಚಿತ್ರಿತನಾಗಿರುತ್ತಾನೆ. ಇತರರು ಮತ್ತು ಇತರ ವಿಷಯಗಳು ಅವನ ವ್ಯಕ್ತಿಚಿತ್ರಣಕ್ಕೆ ಪೋಷಕವಾಗಿ ಬರುತ್ತವೆ. ಈ ದೃಷ್ಟಿಯಿಂದ ನೋಡಿದರೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬರೆದ ತಮ್ಮ ಜೀವನಚಿತ್ರಗಳು ಬಹುಮಟ್ಟಿಗೂ ಬಖೈರುಗಳಾಗಿರುತ್ತವೆ. ಘಟನೆಗಳನ್ನು ರೂಪಿಸುವ ಶಕ್ತಿಸಾಮಥ್ರ್ಯವಿಲ್ಲದವರ ಜೀವನಚಿತ್ರಗಳಲ್ಲಿ ಬಹುಮಟ್ಟಿಗೂ ಇತರ ವ್ಯಕ್ತಿಗಳ ಮತ್ತು ಘಟನೆಗಳ ವರ್ಣನೆಗಳಿರುತ್ತವೆ. ಆತ್ಮಕಥೆಯಲ್ಲಿ ನಾವು ನಿರೀಕ್ಷಿಸುವುದು ವ್ಯಕ್ತಿಯ ಜೀವನದ ವಿವರಗಳನ್ನೇ ಅಲ್ಲದೆ ಕಲಾತ್ಮಕವಾಗಿ ಮತ್ತು ನೈಜವಾಗಿ ರಚಿಸಿದ ಒಬ್ಬ ವ್ಯಕ್ತಿಯ ಜೀವನಚಿತ್ರವನ್ನು. ಆ ಕೃತಿಯನ್ನು ಓದುವಾಗ, ಆ ವ್ಯಕ್ತಿಯ ಸಂಗಡ ಇದ್ದೇವೆ, ಅವನೊಡನೆ ಸಂಭಾಷಣೆ ಮಾಡುತ್ತಿದ್ದೇವೆ, ಅವನು ನಮ್ಮನ್ನು ನಂಬಿ ನಮ್ಮ ಮುಂದೆ ಅವನ ಕಷ್ಟಸುಖಗಳನ್ನು ಆಸೆ ಆಕಾಂಕ್ಷೆಗಳನ್ನು ಸೋಲುಗೆಲುವುಗಳನ್ನು ಮಾನಾಪಮಾನಗಳನ್ನು ತೋಡಿಕೊಳ್ಳುತ್ತಿದ್ದಾನೆ ಎಂಬ ಭಾವನೆ ನಮಗೆ ಬಂದರೆ ಅದು ಉತ್ತಮ ಆತ್ಮಕಥೆಯೆಂದು ಹೇಳಬಹುದು. ಪೂರ್ಣ ಪ್ರಾಮಾಣಿಕತೆ ಆತ್ಮಕಥೆಯ ಸತ್ವ ಸ್ವಾರಸ್ಯ. (ಎಸ್.ಎನ್.ಎಸ್.)

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Oxford_English_Dictionary
  2. Barbour, Philip L. (1964). The Three Worlds of Captain John Smith, Houghton Mifflin Co., Boston.
  3. https://vijaykarnataka.com/topics/%E0%B2%86%E0%B2%A4%E0%B3%8D%E0%B2%AE-%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86
  4. https://en.wikipedia.org/wiki/Cambridge,_Massachusetts
  5. https://www.gandhiheritageportal.org/ghp_booksection_detail/Ny0xMDgtMg==#page/1/mode/2up[ಶಾಶ್ವತವಾಗಿ ಮಡಿದ ಕೊಂಡಿ]
  6. Steve Mason, Flavius Josephus: Translation and Commentary. Life of Josephus : translation and commentary, Volume 9
  7. Kempe, Margery, approximately 1373- (1985). The book of Margery Kempe. Harmondsworth, Middlesex, England: Penguin. ISBN 0140432515. OCLC 13462336.
  8. Peterson, Carla L. (1998). Doers of the Word: African-American Women Speakers and Writers in the North (1830-1880). Rutgers University Press. ISBN 9780813525143.
  9. Kempe, Margery, approximately 1373- (1985). The book of Margery Kempe. Harmondsworth, Middlesex, England: Penguin. ISBN 0140432515. OCLC 13462336.