ವಿಷಯಕ್ಕೆ ಹೋಗು

ಆಂದ್ರೆಯಾ ಬೊಚೆಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಂದ್ರೆಯಾ ಬೊಚೆಲಿ ಅವರು , ೨೨ನೇ ಸೆಪ್ಟೆಂಬರ್ ೧೯೫೮ರಲ್ಲಿ ಹುಟ್ಟಿದರು. ಇವರು ಒಬ್ಬ ಇಟಲಿ ದೇಶದ ಹಾಡುಗಾರರು. ಚಿಕ್ಕಂದಿನಿಂದ ಇವರಿಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ೧೨ ವರುಷಗಳ ವಯಸ್ಸು ಬಂದಾಗ, ಫುಟ್ ಬಾಲ್ ಆಡುತ್ತಾ ಹೊಡೆದ ಏಟಿನ ನಂತರ, ಇವರು ಪೂರ್ತಿಯಾಗಿ ಕುರುಡರಾದರು.

ಆಂದ್ರೆಯಾ ಬೊಚೆಲಿ

ಬೊಚೆಲಿ ಅವರು ೧೫ ಸ್ಟೂಡಿಯೊ ಆಲ್ಬಮ್ಗಳನ್ನು ಬಿಡುಗಡೆ ಮಾಡಿದ್ದಾರೆ. ಇವುಗಳಲ್ಲಿ ಪಾಪ್ ಸಂಗೀತ ಮತ್ತು ಪಶ್ಚಿಮಾತ್ಯ ಶಾಸ್ತ್ರೀಯ ಸಂಗೀತ ಎರಡೂ ಇವೆ. ಇವರು ೯ ಒಪೆರಾಗಳಲ್ಲಿ ಹಾಡಿದ್ದಾರೆ.[೧] ಬೊಚೆಲಿ ಅವರು ಕೇವಲ ಶಾಸ್ತ್ರೀಯ ಸಂಗೀತದಲ್ಲಿ ಮಾತ್ರ ಅಲ್ಲದೆ, "ಪಾಪ್" ಸಂಗೀತದಲ್ಲಿಯೂ ಕಲಾಕೃತಿಗಳನ್ನು ನೀಡಿದ ಕಾರಣದಿಂದ, ಇವರನ್ನು ಕ್ಲಾಸಿಕಲ್ ಕ್ರಾಸೋವರ್ ಟೆನರ್ ಎಂದು ಕರೆಯಲಾಗಿದೆ.

೧೯೯೮ರಲ್ಲಿ ಬೊಚೆಲಿ ಅವರು ಪೀಪಲ್ ಪತ್ರಿಕೆಯ ೫೦ ಅತ್ಯಂತ ಸುಂದರ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.[೨] ಗ್ರಾಮ್ಮಿ ಪ್ರಶಸ್ತಿ "ಬೆಸ್ಟ್ ನ್ಯೂ ಆರ್ಟಿಸ್ಟ್"ಗೆ ಅವರ ಹೆಸರು ಕೊಡಲಾಗಿತ್ತು. ಸೆಲೀನ್ ಡಿಯೋನ್ ಜೊತೆಯಲ್ಲಿ ಅವರು ಹಾಡಿದ ಹಾಡು, "ದಿ ಪ್ರೆಯರ್"ಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿತು.[೩] ಇವರ ಶಾಸ್ತ್ರೀಯ ಸಂಗೀತದ ಆಲ್ಬಮ್ ಸೇಕ್ರೆಡ್ ಆರಿಯಾಸ್ಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕದಲ್ಲಿ ಸ್ಥಳ ಸಿಕ್ಕಿತು. ಇದರದ್ದು ವಿಶ್ವವ್ಯಾಪಕವಾಗಿ ೫,೦೦೦,೦೦೦ ಆಲ್ಬಮ್ ಗಳ ವಿತರಣೆಯಾಯಿತು.[೪]

೨೦೦೬ರಲ್ಲಿ, ಬೊಚೆಲಿ ಅವರನ್ನು ಆರ್ಡರ್ ಆಫ್ ಮೆರಿಟ್ ಆಫ್ ದಿ ಇಟಾಲಿಯನ್ ರಿಪಬ್ಲಿಕ್‌ನ ಗ್ರ್ಯಾಂಡ್ ಆಫೀಸರ್ ಆಗಿ ನೇಮಿಸಲಾಗಿತು. ೨ನೇ ಮಾರ್ಚ್, ೨೦೧೦ರಂದು ಬೊಚೆಲಿಯವರಿಗೆ ಅವರು ಪಶ್ಚಿಮಾತ್ಯ ನಾಟಕಗಳಲ್ಲಿ ಮಾಡಿದ ಕೆಲಸಕ್ಕೋಸ್ಕರ, ಹಾಲಿವುಡ್ ವಾಕ್ ಆಫ್ ಫೇಮ್‌ನಲ್ಲಿ ಅವರ ಸ್ವಂತ ನಕ್ಷತ್ರವನ್ನು ಕೊಟ್ಟಿದ್ದರು.

ಆರಂಭಿಕ ಜೀವನ[ಬದಲಾಯಿಸಿ]

ಬೊಚೆಲಿ ಅವರು ತಂದೆ ಅಲೆಸಾಂದ್ರೊ ಬೊಚೆಲಿ ಮತ್ತು ತಾಯಿ ಎದಿ ಬೊಚೆಲಿ. ಅವರು ಹುಟ್ಟಿದಾಗ ಅವರ ಕಣ್ಣು ಸರಿಯಾಗಿ ಕಾಣಿಸುವುದಿಲ್ಲವೆಂದು ತಿಳಿಯಿತು. ವೈದ್ಯನ ಹತ್ತಿರ ಹೋದಾಗ, ಅವರ ರೋಗದ ಲಕ್ಷಣವು ಕೊನ್ಜೆನಿಟಲ್ ಗ್ಲೊಕೊಮ ಎಂದು ತಿಳಿದಿತು.

ಅವರ ತಂದೆ ತಾಯಿಯರು ಯಂತ್ರಗಳನ್ನು, ದ್ರಾಕ್ಷಾರಸವನ್ನು ವ್ಯಾಪಾರಮಾಡುತ್ತಾ ಇಟಲಿಯ ಲಜಾಟಿಕೊದಲ್ಲಿರುವ ಲಾ ಸ್ಟೆರ್ಜಾ ಎನ್ನುವ ಹಳ್ಳಿಯಲ್ಲಿ ಬದುಕುತ್ತಿದ್ದರು. ಬೊಚೆಲಿ ಅವರ ತಾಯಿ ಮತ್ತು ತಮ್ಮ ಅಲ್ಬೆರ್ಟೊ, ಇಂದಿಗೂ ಅಲ್ಲೆ ಇರುತ್ತಾರೆ. ಅವರ ತಂದೆ ೨೦೦೦ರಲ್ಲಿ ತೀರಿಹೋದರು.

ಚಿಕ್ಕಂದಿನಿಂದ, ಬೊಚೆಲಿ ಸಂಗೀತದಲ್ಲಿ ಬಹಳ ಕುತೂಹಲವನ್ನು ತೋರುತ್ತಿದ್ದರು. ಕುರುಡರಾದ ಬೊಚೆಲಿಯವರಿಗೆ, ಸಂಗೀತ ಬಹಳ ಮೆಚ್ಚಾದ ಕಾಲಕ್ಷೇಪವಾಯಿತು. ೬ ವರುಷಗಳ ವಯಸ್ಸಿಗೆ ಪಿಯಾನೊ ಕಲಿಯುವುದನ್ನು ಆರಂಭಿಸಿದ ಬೊಚೆಲಿ, ಮೆಲ್ಲಮೆಲ್ಲನೆ ಫ಼್ಲೂಟ್, ಸಾಕ್ಸೊಫೋನ್, ಟ್ರಂಪೆಟ್, ಟ್ರಾಮ್ಬೋನ್, ಗಿಟಾರ್ ಮತ್ತು ಡ್ರಮ್ಸ್ ಕೂಡ ಕಲಿಯತೊಡಗಿದರು. ೭ ವರುಷಗಳ ವಯಸ್ಸಿನಲ್ಲಿ, ಅವರನ್ನು ನೋಡಿಕೊಳ್ಳುತ್ತಿದ್ದ ಒರಿಯಾನ ಎನ್ನುವವಳು ಅವರಿಗ ಫ಼್ರಾಂಕೊ ಕೊರೆಲಿಯವರ ಸಂಗೀತವನ್ನು ಅವರಿಗೆ ಕೇಳಿಸಿದಳು. ಆ ಹೊತ್ತಿನಿಂದ ಬೊಚೆಲಿಯವರು ಹಾಡುಗಾರರಾಗುವ ಕಲೆಯನ್ನು ಹೊಂದಲು ಪ್ರಯತ್ನಮಾಡಲು ಆರಂಭಿಸಿದರು.

೧೨ ವರ್ಷಗಳ ವಯಸ್ಸಿನಲ್ಲಿ, ಫ಼ುಟ್ ಬಾಲ್ ಆಡುತ್ತಿರುವಾಗ, ಅವರ ಕಣ್ಣಿಗೆ ಏಟು ಹೊಡೆದು, ಅವರ ಕಣ್ಣು ಪೂರ್ತಿಯಾಗಿ ಹೋಯಿತು. ಅವರಿಗೆ ಸಹಾಯ ಮಾಡಲು ವೈದ್ಯರು ಎಷ್ಟು ಪ್ರಯತ್ನ ಪಟ್ಟರೂ, ಏನೂ ಕೆಲಸ ಮಾಡದೇ ಹೋಗಿ, ಅವರು ಶಾಶ್ವತವಾಗಿ ಕುರುಡರಾಗಿಬಿಟ್ಟರು.

೧೯೮೦ರಲ್ಲಿ ಪ್ರೌಢಾ ಶಾಲೆಯನ್ನು ಮುಗಿಸಿ, ನ್ಯಾಯ ಶಾಸನವನ್ನು ಓದಿದರು. ಆನಂತರ ವಕೀಲನಾಗಿ ೧ ವರುಷದ ಸಮಯ ಕೆಲಸ ಮಾಡಿದರು. ಅಲ್ಲೇ, ೧೯೮೭ರಲ್ಲಿ ಅವರ ಭವಿಷ್ಯದ ಹೆಂಡತಿ ಎನ್ರಿಕಳನ್ನು ಭೇಟಿಯಾದರು.

ಧ್ವನಿ[ಬದಲಾಯಿಸಿ]

ಫ಼್ರಾಂಕೊ ಕೊರೆಲಿ ಅವರು ಬೊಚೆಲಿ ಅವರ ಧ್ವನಿಯನ್ನು ಮೊದಲು ೧೯೮೬ರಲ್ಲಿ ಕೇಳಿದಾಗ, ಅದನ್ನು ತುಂಬಾ ಮೆಚ್ಚಿಕೊಂಡರು. ಇವರ ಧ್ವನಿಯನ್ನು ತುಂಬಾ ಮೆಚ್ಚುವವರಲ್ಲಿ ಅನ ಮರಿಯ ಮಾರ್ಟಿನೆಜ಼್, ಸೆಲೀನ್ ಡಿಯೊನ್, ಡೇವಿಡ್ ಫ಼ಾಸ್ಟರ್, ಅಲ್ ಜರೊ, ಒಪ್ರ ವಿಂಫ಼್ರಿ, ಎಲಿಜ಼ಬೆತ್ ಟೇಲರ್, ಮೊನಾಕೊ ದೇಶದ ರಾಜಕುಮಾರ ಆಲ್ಬರ್ಟ್, ಯಾರ್ಕಿನ ರಾಜಕುಮಾರಿ ಸೆರಾ ಮತ್ತು ಇಸಬೆಲ ರೊಸೆಲಿನಿ ಕೆಲವರು.

ಆತ್ಮೀಯ ಜೀವನ[ಬದಲಾಯಿಸಿ]

ಬೊಚೆಲಿ ಅವರು ಅವರ ಮೊದಲನೆಯ ಹೆಂಡತಿ, ಎನ್ರಿಕ ಚೆಂಜ಼ಟಿಳನ್ನು ಪಿಯಾನೊ ಬಾರಿಸುತ್ತಾ ದುಡ್ಡು ಸಂಪಾದಿಸಲು ಪ್ರಯತ್ನಿಸುತ್ತಿದ್ದಾಗ ಭೇಟಿಯಾದರು. ೨೭ನೇ ಜೂನ್, ೧೯೯೨ರಲ್ಲಿ ಅವರ ಮದುವೆಯಾಯಿತು. ಅವರ ಮೊದಲನೆಯ ಮಗ ಏಮೊಸ್ ೧೯೯೫ರಲ್ಲಿ ಹುಟ್ಟಿದನು. ಅವರ ಎರಡನೆಯ ಮಗ, ಮಟೆಯೊ ೧೯೯೭ ರಲ್ಲಿ ಹುಟ್ಟಿದನು. ೨೦೦೨ರಲ್ಲಿ ಅವರ ವಿವಾಹ ವಿಚ್ಛೇದವಾಯಿತು.

೨೦೦೨ರಲ್ಲಿ ಅವರ ಎರಡನೆಯ ಹೆಂಡತಿ ವೆರಾನಿಕ ಬೆರ್ಟಿ ಅವರ ಜೀವನದೊಳಗೆ ಬಂದಳು. ೨೦೧೨ರಲ್ಲಿ ಇವರಿಬ್ಬರ ಮಗಳು ವರ್ಜಿನಿಯ ಹುಟ್ಟಿದಳು. ೨೧ನೇ ಮಾರ್ಚ್, ೨೦೧೪ರಲ್ಲಿ ಇವರಿಬ್ಬರ ಮದುವೆಯಾಯಿತು. ಬಿಚೆಲಿ ಮತ್ತು ವೆರಾನಿಕ ಇಂದಿನವರೆಗೂ ಫೋರ್ಟೆ ಡೈ ಮರ್ಮಿಯಲ್ಲಿ ಒಂದು ದೊಡ್ಡ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. https://www.bbc.com/news/entertainment-arts-19508008
  2. https://people.com/archive/andrea-bocelli-singer-vol-49-no-18/
  3. https://web.archive.org/web/20110430171029/http://www.decca.com/artists/andrea-bocelli-192
  4. https://web.archive.org/web/20110430171029/http://www.decca.com/artists/andrea-bocelli-192