ಅಶ್ವಕುಟುಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಕ್ವಿಡೇ ಅಥವಾ ಅಶ್ವಕುಟುಂಬ ಪೆರಿಸೊಡ್ಯಾಕ್ಟಿಲ ವರ್ಗದ ಒಂದು ಕುಟುಂಬ; ಪರ್ಯಾಯನಾಮ ಅಶ್ವಕುಟುಂಬ. ಗೊರಸಿರುವ ಪ್ರಾಣಿಗಳಲ್ಲಿ ಇಂದಿನ ಮತ್ತು ಪಳೆಯುಳಿಕೆಗಳಾಗಿರುವ ಹಿಂದಿನ ಕುದುರೆಗಳು, ಕತ್ತೆಗಳು, ಜೀಬ್ರಗಳು, ಅನೆಗರ್‍ಗಳು (ಕಾಡುಕತ್ತೆ ಜಾತಿಯ ಪ್ರಾಣಿಗಳು) ಅಶ್ವಕುಂಟುಬದ ಸದಸ್ಯರು. ಈ ಕುಟುಂಬದ ಪ್ರಾಣಿಶಾಸ್ತ್ರೀಯ ಅಧ್ಯಯನದಿಂದ ಕುದುರೆ, ಕತ್ತೆ ಮುಂತಾದ ಸದಸ್ಯಪ್ರಾಣಿಗಳ ವಿಕಾಸದ ವಿವಿಧ ಸೋಪಾನಗಳನ್ನು ತಿಳಿಯಬಹುದು.[೧]

ಕುದುರೆಗಳ ಅತಿಸಮೀಪ ಪೂರ್ವಜರ ಹೆಸರು ಪೇಲಿಯೊಥೀರಸ್. ಇವು ಸುಮಾರು 35 ದಶಲಕ್ಷ ವರ್ಷ ಪ್ರಾಚೀನ ಕಾಲದಲ್ಲಿ ಗೌರವಂಶಿಗಳಾದುವು. ಟೆಟಾಸೋಥಿರಸ್ ಮತ್ತು ಚಾಲಿಕೊಥೀರಸ್ ಕುದುರೆಯ ಇನ್ನೆರಡು ಗತವಂಶೀ ಬಂಧುಗಳು. ಇನ್ನಾವ ಸ್ತನಿಗಳ ವಿಷಯದಲ್ಲೂ ದೊರೆತಿಲ್ಲದಷ್ಟು ಪಳೆಯುಳಿಕೆ ದಾಖಲೆಗಳು ಕುದುರೆಯನ್ನು ಕುರಿತು ಲಭಿಸಿವೆ. ಪರಿಣಾಮವಾಗಿ 50ದ. ಲ. ವರ್ಷ ಪ್ರಾಚೀನ ಕಾಲದಿಂದ ಇಂದಿನವರೆಗೆ ಕುದುರೆಯ ವಿಕಾಸರೇಖೆಯನ್ನು ಅವಿಚ್ಛಿನ್ನವಾಗಿ ಎಳೆಯಬಹುದು.

ಆಧುನಿಕ ಅಶ್ವಕುಟುಂಬದಲ್ಲಿ ಕನಿಷ್ಠಪಕ್ಷ ಆರು ಮುಖ್ಯ ಪ್ರಭೇದಗಳಿವೆ. ಇವುಗಳಲ್ಲಿ ಅಂತರತಳೀಕರಣ ಸಾಧ್ಯ. ಆದರೆ ನಿಸರ್ಗದಲ್ಲಿ ಇದು ನಡೆಯುವುದಿಲ್ಲ. ಕೃತಕ ತಳಿಸಂಕರದಿಂದ ಜನಿಸುವ ಮರಿಗಳು ಬಂಜೆಗಳಾಗುತ್ತವೆ. ಆದ್ದರಿಂದ ಒಂದೊಂದು ಪ್ರಭೇದದ ಲಕ್ಷಣವೂ ನಿರ್ದಿಷ್ಟವಾದುದು ಎಂಬುದು ಸ್ಪಷ್ಟ.

ಅಶ್ವ ವಿಕಾಸ[ಬದಲಾಯಿಸಿ]

ವೈಙ್ಞಾನಿಕವಾಗಿ ಅಶ್ವಗಳ ವಿಕಾಸದ ಇತಿಹಾಸವನ್ನು ಸಂಪೂರ್ಣವಾಗಿ ಅರಿಯಲಾಗಿದೆ. ವಂಶವೃಕ್ಷ ಕಾಂಡೈಲಾಥ್ರ್ರ ಎಂಬ ಒಂದು ಸ್ತನಿಗಳ ಗುಂಪಿನಿಂದ ಪ್ರಾರಂಭವಾಯಿತು. ಈ ಗುಂಪು ಇಂದಿರುವ ಎಲ್ಲ ಜಾತಿಯ ಗೊರಸು ಪ್ರಾಣಿಗಳ ಆದಿಜೀವಿ. ಸೀನೊಜೋಯಿಕ್ ಯುಗದ ಆದಿಭಾಗದಲ್ಲಿ ಅಂದರೆ ಸುಮಾರು 60-65 ದ. ಲ. ವರ್ಷ ಪ್ರಾಚೀನ ಕಾಲದಲ್ಲಿ ಹೈರಕೋಥಿರಿಯಂ ಎಂಬ ಪ್ರಾಣಿ ಜೀವಿಸಿತ್ತು. ಇಯೊಹಿಪಸ್ ಎಂದೂ ಇದಕ್ಕೆ ಹೆಸರಿದೆ. ಇದೇ ಆದಿಹಯ. ಇದರ ಮುಂದಿನ ಕಾಲುಗಳಲ್ಲಿ ನಾಲ್ಕು ಬೆರಳುಗಳೂ ಹಿಂದಿನ ಕಾಲುಗಳಲ್ಲಿ ಮೂರು ಬೆರಳುಗಳೂ ಇದ್ದುವು. ಆ ಕಾಲದಲ್ಲಿ ಇದರ ನಾನಾ ಪ್ರಭೇದಗಳು ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿದ್ದುವು. ಇದರ ಎತ್ತರ 2'. ಇದು ಇಂದಿನ ನಾಯಿಗಳನ್ನು ಹೋಲುತ್ತಿತ್ತು. ಮೂತಿ ಉದ್ದವಿರಲಿಲ್ಲ; ತಲೆಬುರುಡೆ ಕಾಂಡೈಲಾಥ್ರ್ರದ ತಲೆ ಬುರುಡೆಯನ್ನೇ ಹೋಲುತ್ತಿತ್ತು. ಕಣ್ಣಿನ ಗೂಡು ಸಂಪೂರ್ಣವಾಗಿ ಮೂಳೆಗಳಿಂದ ಆವೃತವಾಗಿತ್ತು. ಮುಚ್ಚಿಕೊಂಡಿರಲಿಲ್ಲ. ಕನಿಷ್ಠ ದರ್ಜೆಯ ಸ್ತನಿಗಳಲ್ಲಿರುವಂತೆ ಇದರಲ್ಲಿಯೂ 44 ಹಲ್ಲುಗಳಿದ್ದುವು (ಇಂದಿರುವ ಗಂಡು ಕುದುರೆಗಳಲ್ಲಿ 40 ಮತ್ತು ಹೆಣ್ಣುಗಳಲ್ಲಿ 36 ಹಲ್ಲುಗಳಿವೆ). ದವಡೆ ಹಲ್ಲುಗಳಲ್ಲಿದ್ದ ಶೃಂಗಗಳು ಬಹಳ ಕೆಳದರ್ಜೆಯಲ್ಲಿದ್ದುವು. ಇದರಿಂದಾಗಿ ಈ ಪ್ರಾಣಿ ಗಿಡಗಳ ಎಲೆಬಳ್ಳಿ ಇತ್ಯಾದಿಗಳನ್ನು ತಿನ್ನುತ್ತಿತ್ತು. ಆಧುನಿಕ ಅಶ್ವಗಳ ಮುಖ್ಯ ಆಹಾರ ಹುಲ್ಲು. ಆದರೆ ಹೈರಕೋಥೀರಿಯಮ್ಮಿಗೆ ಹುಲ್ಲನ್ನು ಅರೆಯಲು ಯುಕ್ತವಾದ ಹಲ್ಲುಗಳು ಇರಲಿಲ್ಲ. ಇದರ ಬೆನ್ನು ಆಧುನಿಕ ಅಶ್ವಗಳ ಬೆನ್ನಿನಂತೆ ನೆಟ್ಟಗಿರದೆ ಕಮಾನಿನಂತೆ ಬಾಗಿತ್ತು. ಕಾಲುಗಳು ಉದ್ದವಾಗುವ ಚಿಹ್ನೆಗಳು ಕಾಣುತ್ತಿದ್ದುವು. ಮಿದುಳು ಅತಿ ಚಿಕ್ಕದಾಗಿತ್ತು. ಇದೊಂದು ಕಾಡುಪ್ರಾಣಿ. ಸಾಮಾನ್ಯವಾಗಿ ಇಂದಿನ ಜಿಂಕೆಗಳಂತೆ ಕಾಡುಗಳಲ್ಲಿ ಗುಂಪುಗುಂಪಾಗಿ ವಾಸಿಸುತ್ತಿದ್ದಿರಬೇಕು.[೨]

ವಿಕಾಸ[ಬದಲಾಯಿಸಿ]

ಇಯೊಸೀನ್ ಕಾಲದ (40-60 ದ. ಲ. ವರ್ಷ ಪ್ರಾಚೀನ) ವಿಕಾಸಕ್ಕೆ ಬೇಕಾದ ಬೆಳೆವಣಿಗೆಗಳು ಹೈರಕೋಥೀರಿಯಂ ಜೀವಿಗಳಿಂದ ಹುಟ್ಟಿಬಂದ ಸಂತತಿಯಲ್ಲಿ ಕಂಡು ಬರಲಾರಂಭಿಸಿದುವು. ಇದಕ್ಕೆ ಬೇಕಾದ ಮುಖ್ಯ ಅಂಶಗಳೆಂದರೆ ಹಲ್ಲುಗಳ ಬೆಳವಣಿಗೆ ಮತ್ತು ಕಾಲುಗಳಲ್ಲಿದ್ದ ಬೆರಳುಗಳ ಕ್ಷೀಣತೆ (ನಡು ಬೆರಳನ್ನು ಬಿಟ್ಟು). ಕುದುರೆಯ ಹಲ್ಲುಗಳಲ್ಲಿ ಹುಲ್ಲನ್ನು ಅರೆಯಲು ಬೇಕಾಧ ಉತ್ಕøಷ್ಟ ಶೃಂಗಗಳಿವೆ. ಮುಂದವಡೆಯ ಹಲ್ಲುಗಳು ಹಿಂದವಡೆಯ ಹಲ್ಲುಗಳಂತೆಯೇ ಮಾರ್ಪಾಡುಗೊಂಡಿವೆ. ಆದ್ದರಿಂದ ಕುದುರೆಯ ವಿಕಾಸದಲ್ಲಿ ನಡೆದ ಅತಿ ಮುಖ್ಯ ಶಾರೀರಿಕ ಬದಲಾವಣೆಗಳು ಕೆಳಕಂಡಂತಿವೆ.

ಒಂದೇ ಬೆರಳು ಉಳಿದಿದೆ : ಇದು ನಡು ಎಂದರೆ ಮೂರನೆಯ ಬೆರಳು : ಉಳಿದ ಬೆರಳುಗಳು ನಶಿಸಿಹೋಗಿವೆ; ಸ್ಪ್ಲಿಂಕ್ಟ್ ಮೂಳೆಗಳೆಂದು ಹೆಸರಿರುವ ಎರಡನೆಯ ಮತ್ತು ನಾಲ್ಕನೆಯ ಬೆರಳುಗಳ ಹಸ್ತದ ಮೂಳೇಗಳು ಮಂಡಿಯ ತಳಭಾಗಕ್ಕೆ ಬಂದಿವೆ; ಇನ್ನುಳಿದ ಮಣಿಕಟ್ಟಿನ, ಹಿಮ್ಮಡಿಯ ಹಾಗೂ ಹಸ್ತದ ಮೂಳೆಗಳು ಮಂಡಿಯ ಭಾಗಕ್ಕೇ ಸೇರಿಕೊಂಡಿವೆ; ಮೂರನೆಯ ಬೆರಳಿನ ಹಸ್ತದ ಮೂಳೆ ಮಾತ್ರ ಎರಡು ಕಾಲುಗಳಲ್ಲೂ ಉದ್ದವಾಗಿ ಪ್ರಬುದ್ಧವಾಗಿ ಬೆಳೆದಿದೆ. ರೇಡಿಯಸ್ ಮತ್ತು ಅಲ್ನ ಮೂಳೆಗಳು ಒಂದರೊಡನೊಂದು ಸೇರಿಕೊಂಡುಬಿಟ್ಟಿವೆ; ಮೂರನೆಯ ಬೆರಳು ಅಗಲವಾಗಿದೆ; ಇದರ ಸುತ್ತಲೂ ಗೊರಸಿದೆ. ಈ ಬೆರಳಿನ ತುದಿ ನೆಲಕ್ಕೆ ಊರಿಕೊಳ್ಳುತ್ತದೆ; ತಲೆಯ ಬುರುಡೆಯಲ್ಲಿ ಕಣ್ಣಿನ ಗೂಡಿದೆ; ಕಣ್ಣಿನ ಗೂಡು ಮೂಳೆಗಳಿಂದ ಸುತ್ತುವರಿದಿದ್ದು ಪೂರ್ಣವಾಗಿದೆ; ಕಣ್ಣಿನ ಗೂಡಿನ ಮುಂಭಾಗ ಉದ್ದವಾಗಿ ಮೂತಿಯಾಗಿದೆ.

ಆಹಾರ[ಬದಲಾಯಿಸಿ]

ಕುದುರೆಯ ಆಹಾರ ಹುಲ್ಲು. ಇದನ್ನು ಮೇಯಲು ಅಗಿಯಲು ಮತ್ತು ಅರೆಯಲು ಅನುಕೂಲವಾಗುವಂತೆ ದವಡೆಯ ಹಲ್ಲುಗಳು ಅಗಲವಾಗಿ ಅವುಗಳ ಮೇಲೆ ಮೊನೆಯಾದ ಶೃಂಗಗಳಿವೆ. ಒಂದು ಶೃಂಗಕ್ಕೂ ಮತ್ತೊಂದು ಶೃಂಗಕ್ಕೂ ಮಧ್ಯೆ ಸಿಮೆಂಟಿನಂಥ ಗಟ್ಟಿಯಾದ ವಸ್ತುವಿದೆ. ಇದರ ಸಹಾಯದಿಂದ ಕುದುರೆ ಹುಲ್ಲನ್ನು ಚೆನ್ನಾಗಿ ಅಗಿಯಬಲ್ಲುದು. ಈ ಬದಲಾವಣೆಗಳ ನಾಂದಿ ಹೈರಕೋಥೀರಿಯಂ ಸಂತತಿಯಿಂದ ಹುಟ್ಟಿಬಂದ ಓರೊಹಿಪ್ಪಸ್ ಮತ್ತು ಎಪಿಹಿಪ್ಪಸ್ ಎಂಬ ಪ್ರಾಣಿಗಳಲ್ಲಿ ಪ್ರಾರಂಭವಾಗಿತ್ತು. ಇವು ಹೈರಕೋಥೀರಿಯಂ ಜೀವಿಯನ್ನೇ ಹೋಲುತ್ತಿದ್ದರೂ ಇವುಗಳಲ್ಲಿ ಹಲ್ಲುಗಳು ಸ್ವಲ್ಪ ಮಟ್ಟಿಗೆ ಮುಂದುವರಿದಿದ್ದುವು. ಇವುಗಳ ಗಾತ್ರ ದೊಡ್ಡದಾಗುತ್ತಿತ್ತು. ಬೆನ್ನಿನ ಬಾಗು ಕಡಿಮೆಯಾಗಿತ್ತು. ಈ ಜೀವಿಗಳಿಂದ ಬಂದ ಮುಂದಿನ ಸಂತತಿಯ ಹೆಸರು ಮೀಸೊಹಿಪ್ಪಸ್. ಇದರ ಮುಂಗಾಲಿನಲ್ಲಿ ಮೂರು ಬೆರಳುಗಳಿದ್ದುವು. ಅಂದರೆ ಒಂದು ಬೆರಳು ಸಂಪೂರ್ಣವಾಗಿ ನಶಿಸಿಹೋಗಿತ್ತು. ಇದರ ಮುಂದವಡೆಯ ಹಲ್ಲುಗಳು ದವಡೆಯ ಹಲ್ಲುಗಳಂತೆಯೇ ಆಗಿದ್ದುವು. ಬೆನ್ನು ನೆಟ್ಟಗಾಗಲಾರಂಭಿಸಿತ್ತು. ಇದರ ಪಳೆಯುಳಿಕೆಗಳು ದಕ್ಷಿಣ ಡಕೋಟ ಪ್ರದೇಶದಲ್ಲಿ ಸಾಕಷ್ಟು ಸಿಕ್ಕಿವೆ. ಹಲ್ಲಿನ ಶೃಂಗಗಳು ಇದರಲ್ಲಿ ಚೆನ್ನಾಗಿ ಬೆಳೆಯದಿದ್ದ ಕಾರಣ ಇದು ಕೂಡ ಎಲೆ, ಬಳ್ಳಿ ಇತ್ಯಾದಿ ಸಸ್ಯಗಳನ್ನೇ ತಿಂದು ಜೀವಿಸುತ್ತಿತ್ತು. ಮೀಸೊಹಿಪ್ಪಸ್ ಆಲಿಗೊಸೀನ್ ಕಾಲದ (25-40 ದ. ಲ. ವ. ಪ್ರಾಚೀನ) ಮಧ್ಯಭಾಗದಲ್ಲಿ ಜೀವಿಸಿತ್ತು.

ವಾಸಸ್ಥಾನ[ಬದಲಾಯಿಸಿ]

ಅಶ್ವವಿಕಾಸಕ್ಕೆ ತವರುಮನೆ ಉತ್ತರ ಅಮೆರಿಕ ಖಂಡ, ಸಾಮಾನ್ಯವಾಗಿ ಅಶ್ವ ವಿಕಾಸವನ್ನು ನೇರವಿಕಾಸ (ಅರ್ಥೋಜೆನೆಸಿಸ್) ಎಂದು ಕರೆಯುತ್ತಾರೆ. ಏಕೆಂದರೆ ಹೈರಕೋಥೀರಿಯಂ ಜೀವಿಯಿಂದಲೇ ಇಂದಿನ ಅಶ್ವಗಳು ಕಾಲಾನಂತರದಲ್ಲಿ ಹಂತ ಹಂತವಾಗಿ ವಿಕಾಸ ಕ್ರಿಯೆಗೊಳಪಟ್ಟು ಹುಟ್ಟಿಬಂದಿವೆ ಎಂದು ಹೇಳುವವರಿದ್ದಾರೆ. ಆದರೆ ಇದು ನಿಜವಲ್ಲ. ಉತ್ತರ ಅಮೆರಿಕ ದೇಶದಲ್ಲೇನೋ ಅಶ್ವಗಳ ಸಂತತಿಗೆ ಸೇರಿದ ಹೈರಕೋಥೀರಿಯಂ, ಓರೊಹಿಪ್ಪಸ್, ಎಪಿಹಿಪ್ಪಸ್ ಇಸೊಹಿಪ್ಪಸ್, ಮಯೊಹಿಪ್ಪಸ್ ಜೀವಿಗಳು ಒಂದಾದ ಮೇಲೊಂದರಂತೆ ಸಿಕ್ಕಿವೆ. ಈ ಜೀವಿಗಳು 25 ದ. ಲ. ವರ್ಷಗಳ ಅಶ್ವವಿಕಾಸವನ್ನು ನೇರವಾಗಿ ಹಂತ ಹಂತವಾಗಿ ತೋರಿಸುತ್ತದೆ. ಆದರೆ ಮಯೊಹಿಪ್ಪಸ್ ಜೀವಿಯಿಂದ ಮುಂದಕ್ಕೆ ಅಶ್ವವಿಕಾಸ ಚರಿತ್ರೆ ಕ್ಲಿಷ್ಟವಾಗಲಾರಂಭಿಸುತ್ತದೆ. ಮಯೊಹಿಪ್ಪಸ್ ಜೀವಿ ಆಲಿಗೋಸೀನ್ ಕಾಲದ ಮಧ್ಯ ಮತ್ತು ಅಂತ್ಯಭಾಗದಲ್ಲಿತ್ತು. ಇದರ ಕಾಲು, ಹಲ್ಲುಗಳು, ಶರೀರದ ಗಾತ್ರ ಎಲ್ಲವೂ ಕೂಡ ಮಿಸೊಹಿಪ್ಪಸ್ ಜೀವಿಗಿಂತ ಉತ್ತಮ ಸ್ಥಿತಿಯಲ್ಲಿದ್ದುವು. ಮಯೊಹಿಪ್ಪಸ್ ಜೀವಿಯಾದ ಮೇಲೆ ಬರುವ ಜೀವಿಗಳನ್ನು ಎರಡು ಉಪಕುಟುಂಬಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಉಪಕುಟುಂಬವನ್ನು ಆಂಕಿಥೀರಿನೆ ಮತ್ತು ಎರಡನೆಯ ಉಪಕುಟುಂಬವನ್ನು ಈಕ್ವಿನೆ ಎಂದು ಕರೆಯಲಾಗಿದೆ. ಈಕ್ವಿನೆಯಲ್ಲಿ ನಿಜಾಶ್ವಗಳಿವೆ. ಆಂಕಿಥೀರುಗಳು ಎಲೆಬಳ್ಳಿಗಳನ್ನು ಮೇಯುತ್ತ ಕಾಡುಗಳಲ್ಲಿ ವಾಸಿಸುತ್ತಿದ್ದುವು; ಇವುಗಳ ಹಲ್ಲುಗಳು ಮುಂದುವರಿಯಲಿಲ್ಲ. ಕಾಲುಗಳಲ್ಲಿದ್ದ ಮೂರು ಬೆರಳುಗಳು ನಶಿಸಲಿಲ್ಲ. ಇವು ಉತ್ತರ ಅಮೆರಿಕದ ಕಾಡುಗಳಲ್ಲಿ ವ್ಯಾಪಿಸಿದ್ದುವು. ಆಮೇಲೆ ಯೂರೋಪ್ ಖಂಡಕ್ಕೆ ವಲಸೆ ಹೋದುವು. ಆಂಕಿಥೀರಿಯಂ ಹೈಪೊಹಿಪ್ಪಸ್, ಮೆಗಾಹಿಪ್ಪಸ್ ಎಂಬ ಪ್ರಾಣಿಗಳು ಈ ಕುಟುಂಬದ ಅತ್ಯುತ್ತಮ ಉದಾಹರಣೆಗಳು. ಪ್ಲಿಯೊಸೀನ್ ಕಾಲದ (1-11 ದ. ಲ. ವ. ಪ್ರಾಚೀನ) ಆದಿಭಾಗದಲ್ಲಿ ಇವು ನಶಿಸಿಹೋದುವು.[೩]

ರೂಪಾಂತರ[ಬದಲಾಯಿಸಿ]

ಈಕ್ವಿನೆ ಉಪಕುಟುಂಬ ಆಂಕಿಥೀರುಗಳಿಗಿಂತ ವಿಭಿನ್ನವಾಗಿ ವಿಕಾಸ ಹೊಂದಲು ಉಪಕ್ರಮಿಸಿದುವು. ಮಯೊಸೀನ್ ಕಾಲದ (11-25 ದ. ಲ. ವ. ಪ್ರಾಚೀನ) ವೇಳೆಗೆ ಪರಿಸರದಲ್ಲಾದ ಉತ್ಕಟ ಬದಲಾವಣೆಗಳಿಂದಾಗಿ ಉತ್ತರ ಅಮೆರಿಕದ ಬಹುಭಾಗ ಮೈದಾನ ಪ್ರದೇಶವಾಗಿ ಹುಲ್ಲಿನಿಂದಾವೃತವಾಯಿತು. 30 ದ. ಲ. ವರ್ಷಗಳ ಹಿಂದೆ ಪ್ರಾರಂಭವಾದ ಈ ಹುಲ್ಲುಗಾವಲುಗಳಲ್ಲಿದ್ದ ಹುಲ್ಲನ್ನೇ ತಿಂದು ಬದುಕಬೇಕಾದ ಪರಿಸ್ಥಿತಿ ಈ ಎರಡು ಉಪಕುಟುಂಬಗಳಿಗೂ ಒದಗಿತು. ಈಕ್ವಿನೆ ಕುಟುಂಬದ ಜೀವಿಗಳಿಗೆ ಮಾತ್ರ ಇದು ಸಾಧ್ಯವಾಯಿತು. ಏಕೆಂದರೆ ಇವುಗಳ ಹಲ್ಲುಗಳಲ್ಲಿ ಉತ್ಕøಷ್ಟ ಶೃಂಗಗಳ ಬೆಳೆವಣಿಗೆ ಈಗಾಗಲೇ ಪ್ರಾರಂಭವಾಗಿತ್ತು. ಎಲೆ ಮತ್ತು ಕಾಂಡಗಳಿಗಿಂತ ಹುಲ್ಲು ಅತಿ ಗಟ್ಟಿಯಾದ ವಸ್ತು. ಜೊತೆಗೆ ಭೂ ಮಟ್ಟದಲ್ಲಿರುವ ಇದರ ಎಸಳುಗಳ ಮೇಲೆ ದೂಳು ಮತ್ತು ಮರಳಿನ ಕಣಗಳು ಅಂಟಿಕೊಳ್ಳಲು ಅವಕಾಶವಿದೆ. ಇಂಥ ವಸ್ತುವನ್ನು ತಿನ್ನಬೇಕಾದರೆ ಆ ಪ್ರಾಣಿಯ ಹಲ್ಲುಗಳೂ ಜೀರ್ಣಾಂಗಗಳೂ ವಿಶಿಷ್ಟ ರೀತಿಯಲ್ಲಿ ರಚನೆಗೊಂಡಿರಬೇಕು. ಇಂಥ ಕಠಿಣವಸ್ತುವನ್ನು ಅಗಿಯುವಾಗ ಉಂಟಾಗುವ ಹಲ್ಲುಗಳ ಸವೆತವನ್ನು ತಡೆಗಟ್ಟಲು ಯೋಗ್ಯರಕ್ಷಣೆ ಅಗತ್ಯ. ಇದರಿಂದಾದ ಹಲ್ಲುಗಳಲ್ಲಿ ಹರಿತವಾದ ಅಲಗುಗಳು, ಶೃಂಗಗಳು, ಇವುಗಳ ಮಧ್ಯೆ ಸಿಮೆಂಟಿನಂಥ ವಸ್ತುಗಳು ಅನಿವಾರ್ಯವೆನಿಸಿದುವು. ಈ ರೀತಿಯ ಹಲ್ಲುಗಳನ್ನು ಈಕ್ವಿನೆ ಕುಟುಂಬ ಬೆಳೆಸಿಕೊಳ್ಳಲಾರಂಭಿಸಿತು. ಮಯೊಸೀನ್ ಕಾಲದಲ್ಲಿ ಬದುಕಿದ್ದ ಈಕ್ವಿನೆ ಕುಟುಂಬ ಕ್ಯಾರಾಹಿಪ್ಪಸ್ ಎಂಬ ಪ್ರಾಣಿಯಲ್ಲಿ ಈ ಎಲ್ಲ ಗುಣಗಳೂ ಇದ್ದುವು. ಇದರಿಂದ ಹುಟ್ಟಿಬಂದ ಸಂತತಿ ಹುಲ್ಲನ್ನೇ ತಿಂದು ಬದುಕುಲಾರಂಭಿಸಿತು. ಇದೇ ಮೆರಿಚಿಪ್ಪಸ್, ಮೆರಿಸಿಪ್ಪಸ್ ಪ್ರಾಣಿಯಲ್ಲಿ ಹಲ್ಲುಗಳು ಆಧುನಿಕ ಅಶ್ವದ ಹಲ್ಲುಗಳಂತೆಯೇ ಇದ್ದುವು. ಇದರ ಮೂತಿ ಉದ್ದವಾಗಿತ್ತು. ಕಾಲುಗಳು ಉದ್ದವಾಗಿದ್ದುವು. ಆದರೂ ಇದರ ಕಾಲುಗಳಲ್ಲಿ ಮೂರು ಬೆರಳುಗಳಿದ್ದುವು. 15 ದ. ಲ. ವರ್ಷಗಳ ಹಿಂದೆ ಇದ್ದ ಈ ಪ್ರಾಣಿಗಳು ಹೆಚ್ಚು ಕಡಿಮೆ ಇಂದಿನ ಅಶ್ವಗಳನ್ನೇ ಹೋಲುತ್ತಿದ್ದುವು. ಮೆರಿಚಿಪ್ಪಸ್ ಜೀವಿಯ ನಡುಬೆರಳು ಮಾತ್ರ ನೆಲಕ್ಕೂರುತ್ತಿತ್ತು. ಮಿಕ್ಕವು ನೆಲ ಮುಟ್ಟುವಂತಿರಲಿಲ್ಲ. ಅಲ್ನಾ ಮತ್ತು ಫಿಬುಲಾ ಮೂಳೆಗಳು ರೇಡಿಯಸ್ ಮತ್ತು ಟಿಬಿಯದೊಡನೆ ಮಿಲನಗೊಳ್ಳುತ್ತಿದ್ದುವು. ಮೆರಿಚಿಪ್ಪಸ್ ಸಂತತಿ ಆರು ಗುಂಪುಗಳಾಗಿ ವಿಭಾಗಗೊಂಡಿತ್ತು. ಈ ಗುಂಪುಗಳಲ್ಲಿ ನಾಲ್ಕು ಗುಂಪು ಕೆಲವೇ ಸಂತತಿಗಳವರೆಗೆ ಮಾತ್ರ ಪ್ರಬುದ್ಧಮಾನಕ್ಕೆ ಬಂದುವು. ಉಳಿದೆರಡು ಗುಂಪುಗಳಲ್ಲಿ ಮೊದಲನೆಯ ಗುಂಪಿನ ಅಶ್ವಗಳನ್ನು ಹಿಪ್ಪೇರಿಯಾನ್ ಎನ್ನುತ್ತೇವೆ. ಇದಕ್ಕೆ ಮೂರು ಬೆರಳುಗಳಿದ್ದುವು. ಹಲ್ಲುಗಳಲ್ಲಿ ಎತ್ತರವಾದ ಶೃಂಗಗಳಿದ್ದುವು. ಆದರೆ ಈ ಹಿಪ್ಪೇರಿಯಾನ್ ಪ್ಲಿಯೊಸೀನ್ ಕಾಲದ ಅಂತ್ಯಭಾಗದಲ್ಲಿ ನಾಶವಾಯಿತು. ಹಿಪ್ಪೇರಿಯಾನ್ ಉತ್ತರ ಅಮೆರಿಕದಲ್ಲಿ ಹುಟ್ಟಿ ಏಷ್ಯ ಅಲಾಸ್ಕ ಯೂರೋಪ್ ಮತ್ತು ಆಫ್ರಿಕ ಖಂಡದವರೆಗೂ ವಲಸೆ ಹೋಯಿತು. ಮೆರಿಚಿಪ್ಪಸ್ ಸಂತತಿಯಲ್ಲಿ ಪ್ರಬುದ್ಧಮಾನಕ್ಕೆ ಬಂದ ಮತ್ತೊಂದು ಗುಂಪೆಂದರೆ ಪ್ಲಿಯೊಹಿಪ್ಪಸ್. ಇದು 5-10 ದ. ಲ. ವರ್ಷಗಳವರೆಗೂ ಇತ್ತು. ಈ ಪ್ರಾಣಿಗಳ ಒಂದೊಂದು ಕಾಲಿನಲ್ಲೂ ಒಂದೊಂದು ಬೆರಳು ಇತ್ತು. ಪ್ಲಿಯೊಸೀನ್ ಕಾಲದಲ್ಲಿ ಇವು ಉತ್ತರ ಅಮೆರಿಕ ಖಂಡದ ಬಹು ಭಾಗಗಳಲ್ಲಿದ್ದುವು. ಮಧ್ಯದ ಒಂದೇ ಬೆರಳು ಕಾಲಿನಲ್ಲಿ ಇದ್ದರೂ ಮಿಕ್ಕೆರಡು ಬೆರಳುಗಳು ಸಂಪೂರ್ಣವಾಗಿ ಮಾಯವಾಗಿರದೆ ಕಾಲಿನೊಳಕ್ಕೆ ಸೆಳೆದುಕೊಂಡಂತೆ ಮೇಲುಭಾಗದಲ್ಲಿ ಉಳಿದಿದ್ದುವು. ಈ ಜೀವಿಯಿಂದ ಆಧುನಿಕ ಅಶ್ವಕುಂಟುಂಬ ಹುಟ್ಟಿಬಂತು. ಪ್ಲಿಯೊಹಿಪ್ಪಸ್ ಪ್ಲಿಯೊಸೀನ್ ಕಾಲದ ಕೊನೆಯ ಭಾಗದಲ್ಲಿ, ಅಂದರೆ 1 ದ. ಲ. ವರ್ಷಗಳ ಹಿಂದೆ ನಾಶವಾಯಿತು. ಇದರಿಂದ ಹುಟ್ಟಿಬಂದ ಅಶ್ವಸಂತತಿ ಪ್ರಪಂಚದ ಎಲ್ಲ ಭಾಗಗಳಿಗೂ ವಲಸೆ ಹೋಯಿತು. ಇದರಲ್ಲಿ ಮಧ್ಯದ ಒಂದೇ ಬೆರಳು ಉಳಿದು ಮಿಕ್ಕೆರಡು ಬೆರಳುಗಳು ಪೂರ್ಣವಾಗಿ ಮಾಯವಾದುವು. ಅಶ್ವದ ವಲಸೆ ಆಸ್ಟ್ರೇಲಿಯ ಖಂಡ ಪ್ರಪಂಚದ ಯಾವ ಭೂ ಭಾಗಕ್ಕೂ ಸಂಪರ್ಕ ಹೊಂದಿಲ್ಲ. ಉತ್ತರ ಅಮೆರಿಕ ಖಂಡದಲ್ಲಿ ಹುಟ್ಟಿದ ಅಶ್ವಸಂತತಿ ದಕ್ಷಿಣ ಅಮೆರಿಕ ಖಂಡಕ್ಕೆ ಪನಾಮ ಬಳಿಯ ಈಸ್ಥಮನ್ ಮೂಲಕ ವಲಸೆ ಹೋಯಿತು. ದಕ್ಷಿಣ ಅಮೆರಿಕಕ್ಕೆ ಹೋದ ಅಶ್ವಗಳು ಹಿಪ್ಪೀಡಿಯಾನ್ ಎಂಬ ಒಂದು ವಿಚಿತ್ರ ರೀತಿಯ ಅಶ್ವಗಳನ್ನು ಕೊಟ್ಟುವು. ಹಿಪ್ಪೀಡಿಯಾನುಗಳಿಗೂ ಆಧುನಿಕ ಈಕ್ವಸುಗಳಿಗೂ ಹತ್ತಿರದ ಸಂಬಂಧವೇನೂ ಇಲ್ಲ. ಆಧುನಿಕ ಅಶ್ವಗಳ ಪ್ರಸರಣವಾದ ಮೇಲೆ ಈ ಹಿಪ್ಪಡಿಯಾನ್ ನಾಶವಾಯಿತು. ಉತ್ತರ ಅಮೆರಿಕ ಖಂಡದಲ್ಲಿ ಅಶ್ವ ಕುಟುಂಬದ ಭವ್ಯ ಇತಿಹಾಸ 50 ದ. ಲ. ವರ್ಷಗಳಿಂದಲು ಇದೆ. ಆದರೆ 10,000 ವರ್ಷಗಳ ಹಿಂದೆ ಇದ್ದಿಕ್ಕಿದ್ದಂತೆ ಈ ಹೊಸ ಪ್ರಪಂಚದಲ್ಲಿ ಇವುಗಳ ಸರ್ವನಾಶಕ್ಕೆ ಕಾರಣವಾದ ಕ್ರಿಯೆ ಯವುದು? ಇದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಇದುವರೆಗೂ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳಲ್ಲಿ ಇವುಗಳ ನಾಶದ ಬಗ್ಗೆ ಕಾರಣಗಳನ್ನು ತಿಳಿಯಲಾಗಿಲ್ಲ. ಮುಂದೆ ಅಶ್ವಗಳನ್ನು ಹೊಸತಾಗಿ ಇಲ್ಲಿಗೆ ಆಮದು ಮಾಡಿಕೊಳ್ಳಲಾಯಿತು.[೪]

ಸಾಕು ಕುದುರೆ ಮತ್ತು ಅದರ ವಿವಿಧ ಬುಡಕಟ್ಟುಗಳನ್ನು ಒಂದೇ ಪ್ರಭೇದಕ್ಕೆ ಸೇರಿಸಿ ಈಕ್ವಸ್ ಕಬಾಲಸ್ ಎಂದು ಕರೆಯುತ್ತಾರೆ. ಇಂದು ಇದು ಕಾಡುಪ್ರಾಣಿಯಾಗಿ ಪ್ರಪಂಚದದಲ್ಲಿ ಎಲ್ಲೂ ಇಲ್ಲ. ಹಾಗೆ ಇಂದು ಉಳಿದಿರುವ ಪ್ರಭೇದವೆಂದರೆ ಪ್ರಜೆವಾಕ್ಸಿಕ್. ಇದು ಚಿಕ್ಕ ಕುದುರೆ. ಇದರ ಕುತ್ತಿಗೆಯ ಮೇಲೆ ಉದ್ದಕ್ಕೂ ನೆಟ್ಟಗಿರುವ ರೋಮಗಳಿವೆ. ಒಂದು ಕಾಲದಲ್ಲಿ ಈ ಕುದುರೆಗಳು ಮಧ್ಯ ಏಷ್ಯ ಖಂಡದಲ್ಲಿ ಕಂಡುಬರುತ್ತಿದ್ದುವು. ಇದರ ತಳಿ ಹೊರ ಪ್ರಪಂಚದಿಂದ ನಶಿಸಿಹೋಗಿ ಮೃಗಾಲಯಗಳಲ್ಲಿ ಮಾತ್ರ ಉಳಿದಿದೆ. ಮಧ್ಯ ಯೂರೋಪ್ ಖಂಡದಲ್ಲಿ ಇದ್ದ ಟಾರ್ಪಾನ್ ಎಂಬ ಕಾಡುಕುದುರೆಯೂ ಇಂದು ಕಾಣಬರುತ್ತಿಲ್ಲ. ಈ ರೀತಿಯ ಕಾಡು ಕುದುರೆಗಳ ತಳಿ ಮಿಶ್ರಣಕ್ರಿಯೆಯಿಂದಾಗಿ ಇಂದಿರುವ ಎಲ್ಲ ಆಧುನಿಕ ಕುದುರೆಗಳೂ ಹುಟ್ಟಿಬಂದಿವೆ.

ಅನೆಗರ್ : ಇದಕ್ಕೆ ಈಕ್ವಸ್ ಹೆಮಿಯೋನಸ್ ಎಂದೂ ಹೆಸರಿದ. ದೊಡ್ಡ ಕಿವಿಗಳುಳ್ಳ ಸುಮಾರಿಗೆ ಬೆಳೆದಿರುವ ಕತ್ತೆಯನ್ನೇ ಹೋಲುವ ಈ ಪ್ರಾಣಿಯ ಕುತ್ತಿಗೆಯ ಮೇಲೆ ನೆಟ್ಟಗೆ ನಿಂತಿರುವ ರೋಮಗಳ ಸಾಲನ್ನು ಕಾಣಬಹುದು. ಚೀನ, ಏಷ್ಯ, ಪ್ಯಾಲಿಸ್ಟ್ಯನ್ ಪ್ರದೇಶಗಳ ಕಾಡುಗಳಲ್ಲಿ ಇದು ಹಿಂದೆ ಹೆಚ್ಚಾಗಿ ಕಾಣಬರುತ್ತಿತ್ತು. ಈಗ ಈ ಪ್ರಭೇದ ಅವಸಾನ ಸ್ಥಿತಿಯಲ್ಲಿದೆ.

ಕತ್ತೆ : ಆಧುನಿಕ ಕತ್ತೆಗಳ ಪೂರ್ವಜರ ಹೆಸರು ಕಾಡುಕತ್ತೆಗಳು. ಈಕ್ವಸ್ ಅಸಿನಸ್ ಎಂದು ಇದರ ವೈe್ಞÁನಿಕ ನಾಮ. ಚಿಕ್ಕ ಶರೀರ, ದೊಡ್ಡ ಕಿವಿಗಳು, ಮತ್ತು ಕುತ್ತಿಗೆಯ ಮೇಲೆ ನೆಟ್ಟಗೆ ನಿಂತಿರುವ ರೋಮಗಳ ಸಾಲು ಇದರ ಮುಖ್ಯ ಲಕ್ಷಣಗಳು. ಒಂದು ಕಾಲದಲ್ಲಿ ಇದು ಉತ್ತರ ಆಫ್ರಿಕಖಂಡದಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. ಈಗ ಅಲ್ಲಿ ಸಂಪೂರ್ಣವಾಗಿ ನಾಶವಾಗಿದೆ. (ನೋಡಿ- ಕತ್ತೆ)

ಜೀಬ್ರಾಗಳು : ಮೇಲೆ ಹೇಳಿದವನ್ನು ಬಿಟ್ಟರೆ ಇನ್ನುಳಿದಿರುವ ಅಶ್ವಜಾತಿಯ ಪ್ರಾಣಿಗಳಲ್ಲಿ ಇಂದು ಬದುಕಿ ಉಳಿದಿರುವವು ಜೀಬ್ರಾಗಳು ಮಾತ್ರ. ಇವುಗಳ ಶರೀರದ ಮೇಲೆ ಎದ್ದುಕಾಣುವ ಪಟ್ಟೆಗಳಿವೆ. ಬೂದು ಬಣ್ಣದ ಒಡಲಮೇಲೆ ಕರಿಯ ಪಟ್ಟೆಗಳಿವೆ ಅಥವಾ ಕರಿಯೊಡಲ ಮೇಲೆ ಬಿಳಿಯ ಪಟ್ಟೆಗಳಿವೆ; ಜೀಬ್ರಾಗಳಲ್ಲಿರುವ ಪ್ರಭೇದಗಳು ಹಲವಾರು. ಬಹುಪಾಲು ಆಫ್ರಿಕದಲ್ಲಿವೆ. ಮನುಷ್ಯನ ಹಾವಳಿಯಿಂದಾಗಿ ಇತ್ತೀಚೆಗೆ ಇವೂ ನಶಿಸಿಹೋಗುತ್ತಿವೆ. (ನೋಡಿ- ಕುದುರೆ)


ಉಲ್ಲೇಖಗಳು[ಬದಲಾಯಿಸಿ]

  1. http://www.ultimateungulate.com/Perissodactyla/Equidae.html
  2. https://animaldiversity.org/accounts/Equidae/
  3. https://www.sciencedirect.com/topics/agricultural-and-biological-sciences/equidae
  4. https://research.amnh.org/paleontology/perissodactyl/evolution/groups/equidae