ಅಲ್ಲಸಾನಿ ಪೆದ್ದನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲ್ಲಸಾನಿ ಪೆದ್ದನ ವಿಜಯನಗರ ಸಾಮ್ರಾಟ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ. 'ಸ್ವಾರೋಚಿಷಮನುಸಂಭವ' ಅಥವಾ 'ಮನುಚರಿತ್ರೆ' ಎಂಬ ತೆಲುಗು ಮಹಾಕಾವ್ಯವನ್ನು ಬರೆದಿದ್ದಾನೆ.

ಅಲ್ಲಸಾನಿ ಪೆದ್ದನನ ಒಂದು ಚಿತ್ರಪರಿಚಯ[ಬದಲಾಯಿಸಿ]

ವಂದರೀಕ ಬ್ರಾಹ್ಮಣ, ಚೊಕ್ಕ ವಾಮಾತ್ಯನ ಮಗ, ಶಠಕೋಪ ತಪಸ್ವಿಯ ಶಿಷ್ಯ. ಚತುರ್ವಿಧ ಕವಿತಾಪ್ರವೀಣ. ಸಾಹಿತೀ ಸಮರಾಂಗಣ ಸಾರ್ವಭೌಮ ಕೃಷ್ಣದೇವರಾಯನಿಂದ ಆಂಧ್ರಕವಿತಾಪಿತಾಮಹನೆಂಬ ಬಿರುದು ಪಡೆದು ಆಂಧ್ರ ಸಾಹಿತ್ಯದಲ್ಲಿ ಪ್ರಬಂಧ ಕವಿತ್ವಕ್ಕೆ ಮಾರ್ಗದರ್ಶಿಯಾದವ. ಅಂದಿನ ತೆಲುಗು ಸಾಹಿತ್ಯದ ಸ್ವರ್ಣಯುಗಕ್ಕೆ ಆತನ ಕಾಣಿಕೆ ಅಮೂಲ್ಯವಾದುದು.

ಸಾಹಿತ್ಯ ಕೃಷಿ[ಬದಲಾಯಿಸಿ]

ಸ್ವಾರೋಚಿಷಮನುಸಂಭವ ಆರು ಆಶ್ವಾಸಗಳುಳ್ಳ ಚಂಪುಗ್ರಂಥ. ಕಥೆಯ ಮೂಲ ಮಾರ್ಕಂಡೇಯ ಪುರಾಣಾಂತರ್ಗತ ಪ್ರವರ ವೃತ್ತಾಂತ. ಮೊದಲ ಮೂರು ಆಶ್ವಾಸಗಳಲ್ಲಿ ವರೂಥಿನೀಪ್ರವರ ವೃತ್ತಾಂತವಿದೆ. ಮುಂದಿನ ಎರಡು ಆಶ್ವಾಸಗಳಲ್ಲಿ ಸ್ವಾರೋಚಿ ವನದೇವತೆಯೊಬ್ಬಳನ್ನು ಮದುವೆ ಯಾಗಿ ಸ್ವಾರೋಚಿಷನೆಂಬ ಮಗನನ್ನು ಪಡೆಯುತ್ತಾನೆ. ಮಗ ಮನುವಾಗಿ ವಿಷ್ಣುಸ್ತುತಿ ಮಾಡುತ್ತಾನೆ. ಅಲ್ಲಿಗೆ ಗ್ರಂಥ ಸಮಾಪ್ತವಾಗುತ್ತದೆ. ಪೆದ್ದನನಿಗಿಂತ ಹಿಂದೆ ಅನೇಕ ಕವಿಗಳು ತೆಲುಗಿನಲ್ಲಿ ಪುರಾಣ ರಚನೆ ಮಾಡಿದ್ದರು.

  • ಆದರೆ ಪೆದ್ದನ ಅವರ ಮಾರ್ಗವನ್ನು ಅನುಸರಿಸದೆ ಪುರಾಣಪ್ರಸಿದ್ಧವಾದ ಒಂದು ಕಥೆಯನ್ನು ಆರಿಸಿಕೊಂಡು ಅದನ್ನು ಸುಂದರಕಾವ್ಯವಾಗಿ ಪರಿವರ್ತಿಸಿದ್ದಾನೆ. ಕಾವ್ಯದ ಉದ್ದಕ್ಕೂ ಪ್ರವರನ ಗಂಭೀರ ವ್ಯಕ್ತಿತ್ವ, ವರೂಥಿನಿಯ ರೂಪಗುಣವಿಲಾಸಗಳು ರಸವತ್ತಾಗಿ ವರ್ಣಿತವಾಗಿವೆ. ಶುಕಮಹರ್ಷಿಯಂತೆ ಪ್ರವರ ಸಂಯಮಗುಣಕ್ಕೆ ಮಾದರಿಯಾಗಿದ್ದಾನೆ.
  • ವರೂಥಿನಿ, ರಂಭೆ, ಊರ್ವಶಿಯರನ್ನು ಮೀರಿಸಿದ್ದಾಳೆ ತನ್ನ ವಿಲಾಸಾದಿಗುಣಗಳಲ್ಲಿ. ಹೀಗೆ ಜನಮನವನ್ನಾಕರ್ಷಿಸಿ ಹೃದಯವನ್ನು ಸೂರೆಗೊಳ್ಳಬಲ್ಲ ಪಾತ್ರಗಳನ್ನು ಸೃಷ್ಟಿಸುವುದರಲ್ಲಿ ತಿಕ್ಕನನ ಅನಂತರ ಬಂದ ಕವಿಗಳಲ್ಲಿ ಪೆದ್ದನನೇ ಬಹು ಪ್ರಮುಖನೆಂದು ತೋರುತ್ತದೆ. ಪೆದ್ದನನ ಶೈಲಿ ಬಹು ಬಿಗಿಯಾದುದು. ವರ್ಣನೆಗಳು ಸಹಜ ಸುಂದರ. ರಸಪೋಷಣೆಯ ದೃಷ್ಟಿಯಿಂದ ಮೊದಲ ಮೂರು ಆಶ್ವಾಸಗಳಲ್ಲಿ ಕಾಣುವ ಐಕ್ಯ ಮುಂದಿನ ಆಶ್ವಾಸಗಳಲ್ಲಿಲ್ಲ.

ಪ್ರತಿಭೆ[ಬದಲಾಯಿಸಿ]

  • ಒಮ್ಮೆ ಕೃಷ್ಣದೇವರಾಯ ಕವಿಸಭೆಯಲ್ಲಿ ಚಿನ್ನದ ಒಂದು ಕಾಲ್ಕಡಗವನ್ನು ಬಹುಮಾನವಾಗಿರಿಸಿ, ಸುಂದರವಾದ ಒಂದೇ ಒಂದು ಕವನವನ್ನು ಸಂಸ್ಕೃತಾಂಧ್ರ ಭಾಷೆಗಳೆರಡಕ್ಕೂ ಅನ್ವಯವಾಗುವಂತೆ ರಚಿಸುವ ಕವಿಗೆ ಅದನ್ನು ಕೊಡುವುದಾಗಿ ಹೇಳಿದನಂತೆ. ಆಗ ಎಲ್ಲರೂ ಬೆರಗಾಗಿ ಅವಾಕ್ಕಾಗಿ ಕುಳಿತಿರಲು ಪೆದ್ದನ ಪುತಮೆರುಂಗುಲನ್ ಎಂಬ ಉತ್ಪಲಮಾಲಾವೃತ್ತವನ್ನು ಸಮಯಸ್ಫೂರ್ತಿಯಿಂದ ರಚಿಸಿ ರಾಜನಿಂದ ಆ ಪಾರಿತೋಷಕವನ್ನು ಪಡೆದನಂತೆ.
  • ಇಷ್ಟೇ ಅಲ್ಲ, ಆನೆ ಸವಾರಿ ಮಾಡುತ್ತಿದ್ದ ಅರಸ ಕೃಷ್ಣದೇವರಾಯ ದಾರಿಯಲ್ಲಿ ಪೆದ್ದನನನ್ನು ಕಂಡು ಪ್ರೀತಿಯಿಂದ ಕವಿರಾಜ ಬಾ ಎಂದು ಕೈ ಹಿಡಿದೆತ್ತಿ ತನ್ನ ಪಕ್ಕದಲ್ಲಿ ಕೂಡಿಸಿಕೊಂಡನಂತೆ. ಮನುಚರಿತ್ರೆಯನ್ನು ಕವಿ ರಾಯನಿಗೆ ಸಮರ್ಪಣೆ ಮಾಡಿದಾಗ ವಿಶ್ವಾಸ ಉಕ್ಕೇರಿದ ಅರಸ ಪೆದ್ದನನ ಪಲ್ಲಕ್ಕಿಯನ್ನು ತನ್ನ ಹೆಗಲಲ್ಲಿ ಹೊತ್ತನಂತೆ.
  • ಕೃಷ್ಣದೇವರಾಯನ ಮರಣಾನಂತರ ತನಗಾದ ದುಃಖವನ್ನು ಪೆದ್ದನ ತನ್ನ ಅನೇಕ ಪದ್ಯಗಳಲ್ಲಿ ಹೃದಯ ಮಿಡಿಯುವಂತೆ ತೋಡಿಕೊಂಡಿದ್ದಾನೆ. ಪೆದ್ದನನ ವ್ಯಕ್ತಿತ್ವದಂತೆ ಅವನ ಕಾವ್ಯವೂ ಬಹಳ ದೊಡ್ಡದು. ತೆಲುಗು ಸಾಹಿತ್ಯದಲ್ಲಿ ಅದಕ್ಕೆ ಚಿರಸ್ಥಾಯಿಯಾದ ಗೌರವವಿದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: