ಅಲ್ಬರ್ಟ್ಸ್ ಮ್ಯಾಗ್ನಸ್
ಅಲ್ಬರ್ಟ್ಸ್ ಮ್ಯಾಗ್ನಸ್(೧೨೦೬-೧೨೮೦)ಜರ್ಮನಿಯಲ್ಲಿ ಜನಿಸಿದ ಕ್ರೈಸ್ತ ಧರ್ಮಗುರು ಹಾಗೂ ವಿಜ್ಞಾನಿ.ಧರ್ಮ ಹಾಗೂ ವಿಜ್ಞಾನಗಳ ಪ್ರತ್ಯೇಕತೆಯನ್ನು ಅತ್ಯಂತ ಸಮರ್ಥವಾಗಿ ಆ ಕಾಲದಲ್ಲೇ ಅರ್ಥಮಾಡಿಕೊಂಡು ಅದರಂತೆ ಧರ್ಮ ಹಾಗೂ ವಿಜ್ಞಾನಗಳ ಶಾಂತವಾದ ಸಹ ಅಸ್ಥಿತ್ವಕ್ಕೆ ನಾಂದಿ ಹಾಡಿದವರು ಎಂದು ಹೇಳಬಹುದು. ಧರ್ಮಗುರುವಾಗಿದ್ದುಕೊಂಡು ಹಲವಾರು ವಿಜ್ಞಾನ ಪ್ರಯೋಗಗಳನ್ನು ಮಾಡಿ ಅಮೂಲ್ಯ ಕೊಡುಗೆಗಳನ್ನು ಕೊಟ್ಟವರು.ಗ್ರೀಸ್ ನ ಶ್ರೇಷ್ಠ ಚಿಂತಕ ಅರಿಸ್ಟಾಟಲ್ ನ ಚಿಂತನೆಗಳನ್ನು ಕ್ರೈಸ್ತ ಧರ್ಮಕ್ಕೆ ಪರಿಚಯಿಸಿದರು.
ಹುಟ್ಟಿದ್ದು ಲ್ಯಾನಿಂಜೆನ್ನಲ್ಲಿ: ಸತ್ತದ್ದು ಕೊಲೋನ್ನಲ್ಲಿ. ಶ್ರೀಮಂತ ಕುಲದಲ್ಲಿ ಜನ್ಮವೆತ್ತಿ ಇಟಲಿಯ ಪಡುವ ಮತ್ತು ಬೊಲೋನ, ಫ್ರಾನ್ಸಿನ ಪ್ಯಾರಿಸ್ ಮತ್ತು ಜರ್ಮನಿಯ ಕೊಲೋನ್ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸಮಾಡಿದ. ಪಡುವದಲ್ಲಿ ಸಂತ ಡಾಮಿನಿಕ್ನ ಪಂಥಕ್ಕೆ ಸೇರಿದ. ಅನಂತರ ಪ್ಯಾರಿಸ್ ನಗರದಲ್ಲಿ ಕೆಲಕಾಲ ಬೋಧಕನಾಗಿದ್ದ. ಅಲ್ಲಿ ಪ್ರಸಿದ್ಧ ತತ್ತ್ವ ಜಿಜ್ಞಾಸು ಥಾಮಸ್ ಅಕ್ವಿನಸ್ ಅವನ ಶಿಷ್ಯನಾದ. 1260-67ರವರೆಗೆ ರೊಸನ್ಬರ್ಗ್ ನಗರದಲ್ಲಿ ಬಿಷಪ್ ಆಗಿದ್ದ. ಕ್ರೈಸ್ತಧರ್ಮದ ಬೋಧನೆಗೆ ಗ್ರೀಕ್ ಮತ್ತು ಅರಬ್ಬೀ ತತ್ತ್ವಶಾಸ್ತ್ರಗಳ ಮತ್ತು ವಿಜ್ಞಾನದ ಉಪಯುಕ್ತತೆ ಎಷ್ಟೆಂಬುದನ್ನು ಕಂಡುಕೊಂಡವರಲ್ಲಿ ಈತ ಮೊದಲಿಗ. ಆದ್ದರಿಂದ ಅರಿಸ್ಪಾಟಲನ ಕೃತಿಗಳನ್ನು ಕುರಿತು ವಿಪುಲವಾಗಿ ಟೀಕೆ ಟಿಪ್ಪಣಿಗಳನ್ನು ರಚಿಸಿ ತನ್ನ ಸಮಕಾಲೀನರ ಜ್ಞಾನದಾಹವನ್ನು ನಿವಾರಿಸಲು ಕೈಲಾದಷ್ಟು ಪ್ರಯತ್ನಿಸಿದ. ತಮ್ಮದಲ್ಲದ ತಿಳಿವಿನ ಪ್ರಸರಣಕ್ಕಾಗಿ ಅವನಷ್ಟು ಶ್ರಮಿಸಿದರು ಜಗತ್ತಿನಲ್ಲಿ ಬಹುಮಂದಿ ಇರಲಾರರು. ಹದಿಮೂರನೆ ಶತಮಾನದಲ್ಲಿ ಪಶ್ಚಿಮ ಯೂರೋಪಿನ ಜನರಿಗೆ ಜ್ಞಾನಾರ್ಜನೆಯಲ್ಲಿದ್ದ ಅಪುರ್ವವಾದ ಆಸಕ್ತಿಯನ್ನು ತೃಪ್ತಿಪಡಿಸಲು ಶ್ರಮಿಸಿದವರಲ್ಲಿ ಈತನ ಹೆಸರು ಮಿಕ್ಕೆಲ್ಲರದಕ್ಕಿಂತಲೂ ಹೆಚ್ಚು ಗಣನೀಯವಾದುದು. ತತ್ತ್ವಜ್ಞಾನ ವಿಜ್ಞಾನ ಎರಡು ಕ್ಷೇತ್ರಗಳಲ್ಲೂ ಅರಿಸ್ಪಾಟಲನ ಆಲೋಚನೆಗಳು ಪಶ್ಚಿಮ ಯೂರೋಪಿನಲ್ಲಿ ಹಬ್ಬಲು ಕಾರಣರಾದವರಲ್ಲಿ ಈತ ಪ್ರಮುಖನೆನ್ನಿಸಿಕೊಂಡಿದ್ದಾನೆ. ಕ್ರೈಸ್ತಮತಕ್ಕೆ ಅರಿಸ್ಪಾಟಲನ ತತ್ತ್ವಗಳನ್ನು ಹೊಂದಿಸಿಕೊಂಡು ಸ್ಕೊಲ್ಯಾಸ್ಟಿಕ್ ಪಂಥವನ್ನು ಸ್ಥಾಪಿಸಿದವನು ಈತನೇ. ಆ ಕಾಲಕ್ಕೆ ತೀರಾ ಪ್ರಗತಿಪರವೆನ್ನಬಹುದಾದಷ್ಟು ಮಟ್ಟಿಗೆ ಈತ ಪ್ರಾಯೋಗಿಕ ವಿಜ್ಞಾನದಲ್ಲಿ ಪರಿಶ್ರಮ ಪಡೆದಿದ್ದ. ಮುಂದೆ ಬಂದ ವಿಚಾರಪರರ ಮೇಲೆ ಇವನ ಬರಹಗಳೂ ಬೋಧನೆಗಳೂ ಬಹಳ ಪ್ರಭಾವಕಾರಿಯಾದವು. 1937ರಲ್ಲಿ ಇವನಿಗೆ ಸಂತಪದವಿ ಲಭಿಸಿತು. ಈತನಿಗೆ ವಿಶ್ವವಿದ್ಯಾಪ್ರವೀಣ ಎಂಬ ಖ್ಯಾತಿ ಇತ್ತು. ಮತಶಾಸ್ತ್ರದ ವಿಶ್ವಕೋಶ ಮತ್ತು ಪೀಟರ್ ಲ್ಯಾಂಬಾರ್ಡ್ ನ ಬುಕ್ಸ್ ಆಫ್ ಸಂಟೆನ್ಸಸ್ ಎಂಬ ಗ್ರಂಥದ ಟೀಕೆ-ಈತನ ಮುಖ್ಯ ಗ್ರಂಥಗಳು.
ಬಾಹ್ಯಸಂಪರ್ಕ
[ಬದಲಾಯಿಸಿ]- Albertus Magnus on Astrology & Magic
- "Albertus Magnus & Prognostication by the Stars"
- Albertus Magnus: "Secrets of the Virtues of Herbs, Stones and Certain Beasts" Archived 2007-06-06 ವೇಬ್ಯಾಕ್ ಮೆಷಿನ್ ನಲ್ಲಿ. London, 1604, full online version.