ವಿಷಯಕ್ಕೆ ಹೋಗು

ಅಲಾಉದ್ದೀನ್ I

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಹಮನೀ ರಾಜ್ಯದ ಸ್ಥಾಪಕ (1347-58).


ಮೊದಲ ಹೆಸರು ಜಾಫರ್ಖಾನ್ ಅಥವಾ ಹಸನ್. ಇವನು ಆಘ್ಫ್‌ನ್‌ ಅಥವಾ ತುರ್ಕಿ ಮೂಲದವನಾಗಿದ್ದು ದೆಹಲಿಯ ಸುಲ್ತಾನ ಮಹಮ್ಮದ್ ಬಿನ್ ತುಗಲಕನ ಸೇವೆಯಲ್ಲಿ ದಖನ್ನಿನಲ್ಲಿ ಅಧಿಕಾರಿಯಾಗಿದ್ದ. ಇವನು ಗಂಗು ಎಂಬ ಬ್ರಾಹ್ಮಣ ಜ್ಯೋತಿಷಿಯ ಆಶ್ರಯದಲ್ಲಿದ್ದು ರಾಜನಾದ ಮೇಲೆ ಅವನ ಗೌರವದ ಮೇಲೆ ತನ್ನ ಹೆಸರನ್ನು ಹಸನ್ಗಂಗು ಎಂದೂ ವಂಶವನ್ನು ಬಹಮನೀ ಎಂದೂ ಕರೆದುಕೊಂಡನೆಂಬ ಒಂದು ಕಥೆ ಇದೆ. ಇದಕ್ಕೆ ಆಧಾರವಿಲ್ಲ.

ಇವನು ಇರಾನಿನ ಬಹಮನ್ ಷಾನ ವಂಶಸ್ಥನಿರಬೇಕು ಎಂದು ಚರಿತ್ರಕಾರರ ಅಭಿಪ್ರಾಯ. ಮಹಮದ್ ಬಿನ್ ತುಗಲಕನ ದುರಾಡಳಿತವನ್ನು ಸಹಿಸದ ದಖನ್ನಿನ ಅಮೀರರು ದಂಗೆ ಎದ್ದು ದೌಲತಾಬಾದನ್ನು ತಮ್ಮ ಕೇಂದ್ರ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು ಇಸ್ಮಾಯಿಲ್ ಮಖ್‌ನನ್ನು ತಮ್ಮ ಸುಲ್ತಾನನೆಂದು ಘೋಷಿಸಿದರು. ಆದರೆ ಇಸ್ಮಾಯಿಲ್ ಅನೇಕ ಕಾರಣಗಳಿಂದಾಗಿ ಒಂದು ವರ್ಷದೊಳಗೆ ರಾಜೀನಾಮೆ ನೀಡಿದ. ಅನಂತರ ಅಮೀರರು ಹಸನನನ್ನು (ಜಾಫರ್ ಖಾನ್) 1347ರಲ್ಲಿ ಸುಲ್ತಾನನೆಂದು ಘೋಷಿಸಿದರು.

ಹಸನ್ ರಾಜನಾದ ಮೇಲೆ ಅಲಾಉದ್ದೀನ್ ಹಸನ್ ಷಾ ಅಲ್ವಲಿ ಅಲ್ ಬಹಮನೀ ಎಂಬ ಬಿರುದು ಸಹಿತವಾದ ಹೆಸರನ್ನು ಧರಿಸಿ ಗುಲ್ಬರ್ಗಾದಲ್ಲಿ ತನ್ನ ವಂಶದ ಆಳ್ವಿಕೆಯನ್ನು ಪ್ರಾಂರಭಿಸಿದ. ಅನಂತರ ಸುಭದ್ರ ಸರ್ಕಾರವನ್ನು ರಚಿಸುವುದರ ಕಡೆ ಗಮನ ಹರಿಸಿ ರಾಜ್ಯವನ್ನು ಗುಲ್ಬರ್ಗಾ, ದೌಲತಾಬಾದ್, ಬೆರಾರ್, ಬಿದರೆ ವಿಭಾಗಗಳನ್ನಾಗಿ ವಿಂಗಡಿಸಿ ಅವುಗಳ ಆಡಳಿತವನ್ನು ಆಶ್ರಿತ ಅಮೀರರಿಗೆ ವಹಿಸಿದ. ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿದಮೇಲೆ ಸುತ್ತಲ ಪ್ರದೇಶಗಳ ಮೇಲೆ ದಾಳಿ ಮಾಡಿ ಅವನ್ನು ಗೆದ್ದುಕೊಂಡ. ಖಂದಹಾರ್ ಕೋಟೆಯಿಂದ ಮಹಮ್ಮದ್ ಬಿನ್ ತುಗಲಕನ ಸೈನ್ಯವನ್ನು ಹೊಡೆದೋಡಿಸಿ ಅದನ್ನು ಗೆದ್ದುಕೊಂಡ. ಇವನ ದಂಡನಾಯಕ ಸಿಕಂದರ್ ಖಾನ್ ತೆಲಂಗಾಣದ ಮೇಲೆ ದಂಡೆತ್ತಿಹೋಗಿ ಅದರ ರಾಜನಾದ. ಕಾಪಯ ನಾಯಕನನ್ನು ಸೋಲಿಸಿ ಕಪ್ಪಕಾಣಿಕೆಗಳನ್ನು ವಸೂಲು ಮಾಡಿದ. ಮಳಖೇಡ ಮತ್ತು ಅದರ ಸುತ್ತಮುತ್ತಣ ಪ್ರದೇಶಗಳ ಮೇಲೆ ದಾಳಿಮಾಡಿ ಅವು ಮಹಮ್ಮದೀಯರ ಅಧಿಕಾರವನ್ನು ಒಪ್ಪಿಕೊಳ್ಳುವಂತೆ ಮಾಡಿದ. ಬುರ್ಹಾನ್ -ಇ-ಮಾಸಿರ್ ಎಂಬ ಚಾರಿತ್ರಿಕ ಗ್ರಂಥ ಈತ ನ್ಯಾಯನಿಷವಿ ದೊರೆಯೆಂದೂ ಇಸ್ಲಾಮ್ ಧರ್ಮಪ್ರಸಾರಕ್ಕೆ ಶ್ರಮಿಸಿದನೆಂದೂ ತಿಳಿಸುತ್ತದೆ. ಗೋವ, ದಾಬೋಲ್, ಕೊಲ್ಲಾಪುರ ಮುಂತಾದ ಪ್ರದೇಶಗಳನ್ನೂ ಗೆದ್ದುಕೊಂಡ. 1358ರಲ್ಲಿ ಮೃತನಾದ. ಸಾಯುವ ವೇಳೆಗೆ ಬಹಮನೀ ರಾಜ್ಯ ಉತ್ತರದಲ್ಲಿ ವೈನಗಂಗಾದಿಂದ ದಕ್ಷಿಣದಲ್ಲಿ ಕೃಷ್ಣಾನದಿಯವರೆಗೆ ವಿಸ್ತರಿಸಿತ್ತು. ಇವನ ಹಿರಿಯ ಮಗ 1ನೆಯ ಮಹಮ್ಮದ್ ರಾಜ್ಯದ ಉತ್ತರಾಧಿಕಾರಿಯಾದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: