ಅರ್ನೆಸ್ಟ್ ಹೆಮಿಂಗ್ವೇ
ಅರ್ನೆಸ್ಟ್ ಹೆಮಿಂಗ್ವೇ | |
---|---|
ಜನನ | Ernest Miller Hemingway ೨೧ ಜುಲೈ ೧೮೯೯ Oak Park, Illinois, United States |
ಮರಣ | July 2, 1961 Ketchum, Idaho, U.S. | (aged 61)
ಪ್ರಮುಖ ಪ್ರಶಸ್ತಿ(ಗಳು) | Pulitzer Prize for Fiction (1953) Nobel Prize in Literature (1954) |
ಬಾಳ ಸಂಗಾತಿ | Elizabeth Hadley Richardson (1921–1927) Pauline Pfeiffer (1927–1940) Martha Gellhorn (1940–1945) Mary Welsh Hemingway (1946–1961) |
ಮಕ್ಕಳು | Jack, Patrick, Gregory |
ಅರ್ನೆಸ್ಟ್ ಹೆಮಿಂಗ್ವೇ
[೧](ಜುಲೈ ೨೧, ೧೮೯೯ – ಜುಲೈ ೨, ೧೯೬೧) ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದ ಅಮೇರಿಕದ ಬರಹಗಾರ ಮತ್ತು ಪತ್ರಕರ್ತ.೨೦ನೆಯ ಶತಮಾನದ ಒಬ್ಬ ಪ್ರಭಾವೀ ಲೇಖಕ. ತನ್ನ ಹೊಸ ಮಾದರಿಯ ಬರವಣಿಗೆ ಹಾಗೂ ಬದುಕಿನ ಸಾಹಸಶೀಲತೆ ಮುಂದಿನ ತಲೆಮಾರಿನ ಸಾವಿರಾರು ಜನರ ಬರವಣಿಗೆ ಮತ್ತು ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿ.
೧೯೨೦ ರಿಂದ ೧೯೫೦ರ ನಡುವೆ ಬರವಣಿಗೆಯಲ್ಲಿ ಕ್ರಿಯಾಶೀಲರಾಗಿದ್ದ ಇವರಿಗೆ ೧೯೫೪ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿದೊರೆಯಿತು. ಇವರು ಏಳು ಕಾದಂಬರಿಗಳು,ಆರು ಸಣ್ಣಕಥಾ ಸಂಕಲನ ಮತ್ತು ಎರಡು ಇತರ ಸಂಕಲನಗಳನ್ನು ಹೊರತಂದಿದ್ದಾರೆ.ಇದರೊಂದಿಗೆ ಮರಣಾನಂತರ ಮೂರು ಕಾದಂಬರಿಗಳು,ನಾಲ್ಕು ಕಥಾಸಂಕಲನಗಳು,ಮೂರು ಇತರ ಕೃತಿಗಳನ್ನು ಪ್ರಕಟಿಸಲಾಗಿದೆ.ಇವರ ಹಲವಾರು ಕೃತಿಗಳು ಅಮೇರಿಕದ ಸಾಹಿತ್ಯದ ಶ್ರೇಷ್ಠ ಕೃತಿಗಳೆಂದು ಪರಿಗಣಿತವಾಗಿವೆ.
ಬದುಕು
[ಬದಲಾಯಿಸಿ]ಇಲಿನಾಯ್ಸ್‍ನ ಓಕ್ ಪಾರ್ಕ್ ಎಂಬಲ್ಲಿ ೧೮೯೯ ಜುಲೈ ೨೧ರಂದು ಜನಿಸಿದ. ಬೇಟೆಯ ಬಗ್ಗೆ ಇವನಿಗೆ ಅಪಾರ ಆಸಕ್ತಿ. ಆಫ್ರಿಕದಲ್ಲಿ ಅನೇಕ ದೊಡ್ಡ ಬೇಟೆಗಳಲ್ಲಿ ಭಾಗವಹಿಸಿ ಮರಣಾಂತಕ ಆಕಸ್ಮಿಕಗಳಿಂದ ಪಾರಗಿದ್ದ. ಒಂದನೆಯ ಮಹಾಯುದ್ಧದಲ್ಲಿ ಆ್ಯಂಬುಲೆನ್ಸ್ ದಳ ಸೇರಿ, ಯುದ್ಧ ವರದಿಗಾರನಾಗಿ ದುಡಿದ. ಪ್ಯಾರಿಸ್‍ನಲ್ಲಿ ದೇಶತ್ಯಾಗಿಗಳ ಸಂಪರ್ಕಹೊಂದಿ ಎಜ್ರಾಪೌಂಡ್ ಮತ್ತು ಗೆರ್ಟೂಡ್ ಸ್ಪೈನ್‍ರಿಂದ ಪ್ರಭಾವಿತನಾದ. ಬಾಲ್ಯದಲ್ಲಿ ತಂದೆಯೊಡನೆ ಬೇಟೆಗೆ ಹೋಗುತ್ತಿದ್ದಾಗ ಆದ ಸಾವಿನ ದರ್ಶನ ಮುಂದೆ ಇವನ ಬರೆವಣಿಗೆಯ ಮೇಲೆ ಪ್ರಭಾವಬೀರಿತು.
ಈತ ೧೯೬೧ ಜುಲೈ ೨ರಂದು ಆತ್ಮಹತ್ಯೆ ಮಾಡಿಕೊಂಡ.
ಕೃತಿಗಳು
[ಬದಲಾಯಿಸಿ]೧೯೨೩-೨೪ರ ಅವಧಿಯಲ್ಲಿ ಈತ ಬರೆದ ಸಣ್ಣಕಥೆಗಳು(ಇನ್ ಅವರ್ ಟೈಮ್ಸ್) ಯುದ್ಧದ ಫಲವಾಗಿ ಜೀವನಶ್ರದ್ಧೆ ನಶಿಸಿಹೋಗಿ ನರಳುತ್ತಿದ್ದ ಜನತೆಯ ಬದುಕನ್ನು ಯಶಸ್ವಿಯಾಗಿ ಚಿತ್ರಿಸಿವೆ. ಮೆನ್ ವಿದೌಟ್ ಉಮೆನ್ (೧೯೨೭), ವಿನ್ನರ್ ಟೇಕ್ ನಥಿಂಗ್(೧೯೩೩)-ಇವು ಇವನ ಇನ್ನೆರಡು ಸಣ್ಣಕಥಾ ಸಂಕಲನಗಳು. ದಿ ಸನ್ ಆಲ್ಸೊ ರೈಸಸ್ (೧೯೨೬), ಎ ಫೇರ್‍ವೆಲ್ ಟು ಆರ್ಮ್ಸ್(೧೯೨೯) ಎಂಬ ಕೃತಿಗಳಿಂದಾಗಿ ಈತ ಪ್ರಪಂಚದ ಕಾದಂಬರಿಲೋಕದಲ್ಲಿ ಹೆಸರು ಗಳಿಸಿದ. ಫೇರ್‍ವೆಲ್ ಟು ಆರ್ಮ್ಸ್ ಕಾದಂಬರಿ ಅಮೆರಿಕದ ಸೈನ್ಯಾಧಿಕಾರಿಯೊಬ್ಬ ಯುದ್ಧ ಹಾಗೂ ಪ್ರಣಯದಲ್ಲಿ ಅನುಭವಿಸಿದ ದುರಂತದ ಸೋಲನ್ನು ಚಿತ್ರಿಸುತ್ತದೆ. ದಿ ಸನ್ ಆಲ್ಸೊ ರೈಸಸ್ ಕಾದಂಬರಿ ಯುದ್ಧದಿಂದ ಹತಾಶರಾದ ದೇಶತ್ಯಾಗಿಗಳ ನೀತಿಪತನವನ್ನೂ ಫಾರ್ ಹೂಮ್ ದಿ ಬೆಲ್ ಟೋಲ್ಸ್ (೧೯೪೦) ಎಂಬ ಕಾದಂಬರಿ ವ್ಯಕ್ತಿಗೆ ಅವಲಂಬನೆ ಹೇಗೆ ಅನಿವಾರ್ಯ ಎಂಬುದನ್ನೂ ನಿರೂಪಿಸುತ್ತದೆ. ಡೆತ್ ಇನ್ ದಿ ಆಫ್ಟರ್‍ನೂನ್ (೧೯೩೨) ಗೂಳಿಕಾಳಗದ ಬಗ್ಗೆ ಬರೆದ ಸಾಹಿತ್ಯೇತರ ಕೃತಿ.
ಇವನ ಮಹತ್ತ್ವಾಕಾಂಕ್ಷೆಯ ಕೃತಿ ದಿ ಓಲ್ಡ್ ಮ್ಯಾನ್ ಅಂಡ್ ದಿ ಸೀ(೧೯೫೨). ಇದಕ್ಕೆ ೧೯೫೪ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು. ಕ್ಯೂಬದ ಸಾಂಟಿಯಾಗೊ ಎಂಬ ವೃದ್ಧಬೆಸ್ತ ಮರ್ಲಿನ್ ಎಂಬ ಮೀನು ಹಿಡಿಯಲು ಎಂಬತ್ತನಾಲ್ಕು ದಿನಗಳ ಕಾಲ ಸಮುದ್ರದ ಮೇಲೆ ತೋರಿದ ಸಾಹಸವೇ ಇಲ್ಲಿಯ ಕಥೆ. ಇದು ಮನುಷ್ಯ ಮತ್ತು ಪ್ರಕೃತಿಯ ನಡುವೆ ನಡೆಯುವ ಸತತ ಹೋರಾಟವನ್ನೂ ಅದರಲ್ಲಿ ಮಾನವ ತೋರುವ ಧೈರ್ಯ ಸಂಯಮಗಳನ್ನೂ ಅರ್ಥಗರ್ಭಿತವಾಗಿ ನಿರೂಪಿಸುತ್ತದೆ. ಮೊದಲು ಮಾನೋಲಿನ್ ಎಂಬ ಹುಡುಗನೊಡನೆ ಹಿಂದಿನ ಉತ್ತಮ ದಿನಗಳ ವಿಷಯವನ್ನೂ ಬೇಸ್‍ಬಾಲ್ ಆಟದ ಸೊಗಸನ್ನೂ ಹೇಳುತ್ತ ಸಾಗಿದ ಆ ಮುದುಕ ಬೆಸ್ತ ಕೊನೆಗೆ ಒಂಟಿಯಾಗಿ ಸಮುದ್ರದಲ್ಲಿ ಬಲುದೂರ ಸಾಗುತ್ತಾನೆ. ಭಾರಿ ಮೀನೊಂದನ್ನು ಗಾಳ ಹಾಕಿ ಹಿಡಿದರೂ ಅದು ಜಗ್ಗದೆ ಎರಡು ದಿಗಳ ಕಾಲ ಅವನೊಡನೆ ಹೋರಾಡುತ್ತದೆ. ಎರಡನೆಯ ರಾತ್ರಿ ಕಳೆದಮೇಲೆ ಮುದುಕನ ಕೈಯೇ ಮೇಲಾಗಿ ಮೀನು ಅವನ ಈಟಿಗೆ ಬಲಿಯಾಗುತ್ತದೆ. ಅದನ್ನು ತನ್ನ ದೋಣಿಗೆ ಕಟ್ಟಿಕೊಂಡು ದಂಡೆಯ ಕಡೆಗೆ ಸಾಗುತ್ತಾನೆ. ಮಧ್ಯೆ ಶಾರ್ಕ್‍ಗಳು ಅವನ ಬೇಟೆಯನ್ನು ತಿನ್ನಲು ಅಟ್ಟಿಕೊಂಡು ಬರುತ್ತವೆ. ತನ್ನ ಚುಕ್ಕಾಣಿಯಿಂದಲೇ ಮುದುಕ ಅವುಗಳೊಡನೆ ಕಾದುತ್ತಾನೆ. ದಡ ಸಮೀಪಿಸಿದಾಗ ಮೀನಿನ ಅಸ್ಥಿಪಂಜರ ಮಾತ್ರ ಉಳಿದಿರುತ್ತದೆ. ಆದರೂ ತನ್ನ ಬೇಟೆಯನ್ನು ಪಡೆದು ಬಂದನೆಂಬ ಹೆಮ್ಮೆಯಿಂದ ಸಾಂಟಿಯಾಗೊ ದೋಣಿಯ ಪಟ ಇಳಿಸುತ್ತಿರಲು ಮನೊಲಿನ್ ಮತ್ತು ಇತರ ಬೆಸ್ತರು ಬೆರಗಾಗಿ ನೋಡುತ್ತಾರೆ. ದಣಿದ ಮುದುಕ ಮಲಗಿ ಮತ್ತೆ ತನ್ನ ಗತ ಅನುಭವಗಳ ಕನಸು ಕಾಣತೊಡಗುತ್ತಾನೆ. ಈ ಕಾದಂಬರಿ ಸೋತುಗೆದ್ದವನು ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಎ ಮೂವಬಲ್ ಫೀಸ್ಟ್ ಎಂಬ ಇವನ ಆತ್ಮಕಥೆ ಇವನ ನಿಧನಾನಂತರ ಪ್ರಕಟವಾಯಿತು(1964). ಇದರಲ್ಲಿ ಈತ 1920ರ ದಶಕದಲ್ಲಿಯ ತನ್ನ ಪ್ಯಾರಿಸ್ ಅನುಭವಗಳನ್ನು ನಿರೂಪಿಸಿದ್ದಾನೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Hemingway Archives: John F. Kennedy Library
- Ernest Hemingway's Collection at The University of Texas at Austin
- Ernest Hemingway In His Time at the University of Delaware Library.
- The Hemingway Society
- Ernest Hemingway's journalism at The Archive of American Journalism
- "The Art of Fiction No. 21. The Paris Review. Spring 1958.
- FBI Records: The Vault, Subject: Ernest Hemingway
- Hemingway legal files collection, 1899–1971 Manuscripts and Archives, New York Public Library.