ಅರವೀಡು ಮನೆತನ
'ಅರವೀಡು ಮನೆತನವು ವಿಜಯನಗರ ಸಂಸ್ಥಾನವನ್ನು ಆಳಿದ ಒಂದು ರಾಜವಂಶ. ವಿಜಯನಗರದ ಪತನಾನಂತರ ಹಿಂದೂಧರ್ಮ, ಸಾಹಿತ್ಯ, ಸಂಸ್ಕøತಿಗಳ ಬಗ್ಗೆ ಹೆಚ್ಚು ಕಳಕಳಿಯಿಂದ ಕೆಲಸಮಾಡಿದ ರಾಜವಂಶ.
ತಿರುಮಲ ರಾಯ
[ಬದಲಾಯಿಸಿ]ವಿಜಯನಗರದ ರಾಜ್ಯ 1565ರಲ್ಲಿ ತಾಳಿಕೋಟೆ ಯುದ್ಧದಲ್ಲಿ ದೊಡ್ಡ ಅನಾಹುತಕ್ಕೆ ಈಡಾದರೂ ಅರವೀಡು ಮನೆತನದ ಅರಸರು ರಾಜ್ಯವನ್ನು ಮತ್ತೊಮ್ಮೆ ಚೇತರಿಸಿಕೊಳ್ಳುವ ಹಾಗೆ ಮಾಡಿದರು. ರಾಮರಾಯನ ತಮ್ಮನಾದ ತಿರುಮಲ, ರಾಜಧಾನಿಯನ್ನು ಪೆನುಕೊಂಡೆಗೆ ವರ್ಗಾಯಿಸಿ (1570) ಹೆಸರಿಗೆ ಮಾತ್ರ ರಾಜನಾದ ಸದಾಶಿವನನ್ನು ಪದಚ್ಯುತನಾಗಿ ಮಾಡಿ ತಾನೇ ರಾಜನಾದ. ಮುಸಲ್ಮಾನರಲ್ಲಿ ಪರಸ್ಪರ ಅಸೂಯೆ, ವಿಚ್ಛೇದ ಉಂಟಾಗಿದ್ದರಿಂದ ತಿರುಮಲ ತನ್ನ ರಾಜ್ಯದ ಕೀರ್ತಿಯನ್ನು ಮತ್ತೊಮ್ಮೆ ಸ್ಥಾಪಿಸಲು ಸಾಧ್ಯವಾಯಿತು. ಉತ್ತರದ ಕೆಲವು ಪ್ರದೇಶಗಳು ಮುಸಲ್ಮಾನರ ವಶವಾದರೂ, ದಕ್ಷಿಣದ ಎಲ್ಲ ಪ್ರದೇಶಗಳನ್ನೂ ತಿರುಮಲ ತನ್ನ ಹತೋಟಿಯಲ್ಲಿಟ್ಟುಕೊಂಡು ಆಡಳಿತವನ್ನು ವ್ಯವಸ್ಥೆಗೊಳಿಸಿದ. ದಕ್ಷಿಣದ ಪ್ರದೇಶವನ್ನೆಲ್ಲ ಹೆಚ್ಚು ಕಡಿಮೆ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿ ತನ್ನ ಮೂವರು ಮಕ್ಕಳನ್ನೇ ಮಾಂಡಲೀಕರನ್ನಾಗಿ ನಿಯಮಿಸಿದ. ಕನ್ನಡ ಪ್ರಾಂತ್ಯಕ್ಕೆ ಅವನ ಎರಡನೆಯ ಮಗನಾದ ರಾಮರಾಯ ಮಾಂಡಲೀಕನಾಗಿ ನಿಯಮಿತನಾದ. ಶ್ರೀರಂಗಪಟ್ಟಣ ಅವನ ರಾಜಧಾನಿ. ತಿರುಮಲನ ಪ್ರಯತ್ನದ ಫಲವಾಗಿ ವಿಜಯನಗರ ಸಾಮ್ರಾಜ್ಯ ಇನ್ನೂ ಒಂದು ಶತಮಾನ ಕಾಲ ನಿಲ್ಲುವಂತಾಯಿತು. [೧]
ಎರಡನೆಯ ಶ್ರೀರಂಗರಾಯ
[ಬದಲಾಯಿಸಿ]ಆತನ ಮಗನಾದ ಎರಡನೆಯ ಶ್ರೀರಂಗ ತಂದೆಯ ಕಾಲದಲ್ಲಿ ಮಾಂಡಲೀಕನಾಗಿ ಆಡಳಿತದಲ್ಲಿ ಶಿಕ್ಷಣ ಪಡೆದಿದ್ದ. ಬಿಜಾಪುರ, ಗೋಲ್ಕೊಂಡಗಳ ಸುಲ್ತಾನರಿಂದ ಇವನ ಆಳ್ವಿಕೆಯಲ್ಲಿ ತುಂಬ ತೊಂದರೆಯುಂಟಾಯಿತು. ತಮ್ಮಂದಿರು ಮಾಂಡಲೀಕರಾಗಿ ಸ್ವತಂತ್ರರಾಗಿ ವರ್ತಿಸಿ ಇವನಿಗೆ ಸಹಾಯ ಮಾಡಲಿಲ್ಲ. ಆದವಾನಿ ಮುಂತಾದ ಕೆಲವು ಉತ್ತರ ಪ್ರದೇಶಗಳು ಕೈಬಿಟ್ಟುಹೋದುವು. ರಾಜ್ಯದಲ್ಲೇ ಸಾಮಂತರು, ಪಾಳೆಯಗಾರರು ಪರಸ್ಪರ ಕಲಹಗಳಲ್ಲಿ ತೊಡಗಿದ್ದರು. ಶ್ರೀರಂಗ ಅನೇಕ ದೇವಸ್ಥಾನಗಳಿಗೆ, ವಿದ್ಯಾವಂತರಿಗೆ ಪ್ರೋತ್ಸಾಹ ಕೊಟ್ಟ. ಮೇಲುಕೋಟೆ, ಶ್ರೀಪೆರಂಬೂದೂರು, ಅಹೋಬಲ, ಶ್ರೀರಂಗ, ತಿರುಪತಿಗಳ ದೇವಸ್ಥಾನಗಳಿಗೆ ದತ್ತಿಗಳನ್ನು ಕೊಟ್ಟ. ತೆಲುಗಿನಲ್ಲಿ ಲಕ್ಷ್ಮೀವಿಲಾಸಮು ಎಂಬ ಕವಿತೆಯನ್ನು ರಚಿಸಿದ ರಾಯಸಂ ವೆಂಕಟಪತಿ ಇವನ ಆಸ್ಥಾನಕವಿಯಾಗಿದ್ದ. [೨]
ವೆಂಕಟಪತಿರಾಯ
[ಬದಲಾಯಿಸಿ]ಎರಡನೆಯ ಶ್ರೀರಂಗನ ತಮ್ಮ ವೆಂಕಟ 1586ರಲ್ಲಿ ಸಿಂಹಾಸನಕ್ಕೆ ಬಂದ. ಅರವೀಡು ಸಂತತಿಯ ರಾಜರಲ್ಲಿ ಇವನೊಬ್ಬನೇ ಶ್ರೇಷ್ಠನಾದವ. ಹೆಚ್ಚಾಗಿ ಚಂದ್ರಗಿರಿಯಲ್ಲಿ ವಾಸಿಸುತ್ತಿದ್ದರೂ ಪೆನುಕೊಂಡ ರಾಜಧಾನಿಯಾಗಿತ್ತು. ಉತ್ತರದಲ್ಲಿ ಬಿಜಾಪುರ, ಗೋಲ್ಕೊಂಡಗಳ ಸುಲ್ತಾನರನ್ನು ಸೋಲಿಸಿ ಉದಯಗಿರಿಯನ್ನು ಸ್ವಾಧೀನಪಡಿಸಿಕೊಂಡ. ರಾಜ್ಯದ ಎಲ್ಲೆ ಕೃಷ್ಣಾನದಿಯವರೆಗೂ ಹರಡಿತ್ತು. ವೆಲ್ಲೂರು, ರಾಯಲಸೀಮೆ, ಕೋಲಾರ ಮುಂತಾದ ಕೆಲವು ಸ್ಥಳಗಳಲ್ಲಿ ಸಾಮಂತರು ಸ್ವತಂತ್ರರಾಗಲೆತ್ನಿಸಿದರು. ಅವರನ್ನೆಲ್ಲ ಅಡಗಿಸಿ ರಾಜ್ಯವನ್ನು ಹತೋಟಿಗೆ ತಂದ. ಈ ಕೆಲಸದಲ್ಲಿ ಎಚ್ಚಮನಾಯಕನೆಂಬ (ನೋಡಿ- ಎಚ್ಚಮನಾಯಕ) ಸಮರ್ಥ ಸಾಮಂತನ ನೆರವು ದೊರಕಿತು. ಶ್ರೀರಂಗಪಟ್ಟಣದಲ್ಲಿ ಮಾಂಡಲೀಕನಾಗಿ ಆಳುತ್ತಿದ್ದ ಅವನ ಸೋದರಳಿಯನಾದ ತಿರುಮಲರಾಯ ಚಿಕ್ಕಪ್ಪನಿಗೆ ವಿರೋಧಿಯಾದ. ಮೈಸೂರಿನಲ್ಲಿ ಅವನ ಸಾಮಂತನಾಗಿ ಆಳುತ್ತಿದ್ದ ರಾಜಒಡೆಯ ಸಮರ್ಥ, ಧೈರ್ಯಶಾಲಿ. ಕೊಂಚಕೊಂಚವಾಗಿ ತನ್ನ ರಾಜ್ಯವನ್ನು ವಿಸ್ತರಿಸುತ್ತಿದ್ದನಲ್ಲದೆ ವೆಂಕಟಪತಿರಾಯನಿಗೂ, ತಿರುಮಲರಾಯನಿಗೂ ಇದ್ದ ವೈಮನಸ್ಸನ್ನೂ ಅರಿತಿದ್ದ. 1610ರಲ್ಲಿ ತಿರುಮಲರಾಯನನ್ನು ಸೋಲಿಸಿ ಶ್ರೀರಂಗಪಟ್ಟಣವನ್ನೇ ಸ್ವಾಧೀನಪಡಿಸಿಕೊಂಡ. ಆದರೂ ವಿಜಯನಗರದ ಅರಸರಿಗೆ ಸಾಮಂತನೆಂದೇ ಹೇಳಿಕೊಂಡು ಆಳುತ್ತಿದ್ದ. ವೆಂಕಟಪತಿರಾಯ ಬೇರೆ ಕಡೆ ಗಮನಕೊಡಬೇಕಾಗಿದ್ದುದರಿಂದಲೂ, ತಿರುಮಲರಾಯನ ಮೇಲಿನ ದ್ವೇಷದಿಂದಲೂ ರಾಜ ಒಡೆಯನ ಆಕ್ರಮಣಕ್ಕೆ ಒಪ್ಪಿಗೆ ಕೊಡಬೇಕಾಯಿತು. ತಿರುಮಲರಾಯ ತಲಕಾಡಿಗೆ ಹೋಗಿ ಕೆಲವು ವರ್ಷಗಳ ಅನಂತರ ಅಲ್ಲೇ ಕಾಲವಾದ. ತಾತಾಚಾರ್ಯನೆಂಬ ಪ್ರಸಿದ್ಧ ವಿದ್ವಾಂಸ ಇವನ ಆಸ್ಥಾನದಲ್ಲಿ ಉನ್ನತ ಸ್ಥಾನವನ್ನು ಹೊಂದಿದ್ದ. ಕಂಚಿ, ತಿರುಪತಿ ದೇವಸ್ಥಾನಗಳಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿತು. ಈತ ಕಾಲವಾದ ಮೇಲೆ (1614) ಅರವೀಡು ಮನೆತನದಲ್ಲಿ ಒಡಕು ಉಂಟಾಗಿ ಸಿಂಹಾಸನದ ಉತ್ತರಾಧಿಕಾರಕ್ಕಾಗಿ ಅಂತರ್ಯುದ್ಧ ಉಂಟಾಯಿತು. ಬಿಜಾಪುರ, ಗೋಲ್ಕೊಂಡಗಳ ಸುಲ್ತಾನರು ಉತ್ತರ ಪ್ರದೇಶಗಳನ್ನು ಒಂದೊಂದಾಗಿ ಗೆದ್ದುಕೊಂಡರು. ಅವರ ರಾಜ್ಯಗಳ ಮೇಲಾಗಲೇ ದೆಹಲಿಯ ಮೊಗಲ ಸಾಮ್ರಾಟರ ಕಣ್ಣೂ ಬಿದ್ದಿತ್ತು. ಕೊನೆಗೆ 1646ರಲ್ಲಿ ಬಿಜಾಪುರದ ಸುಲ್ತಾನನಿಂದ ಸೋಲಿಸಲ್ಪಟ್ಟು ಕೊನೆಯ ಅರಸನಾದ ಶ್ರೀರಂಗರಾಯ ಮೈಸೂರಿನಲ್ಲಿ ಆಶ್ರಯ ಪಡೆಯಬೇಕಾಯಿತು. ಕಳೆದುಕೊಂಡ ಸಾಮ್ರಾಜ್ಯವನ್ನು ಪುನಃ ಗೆದ್ದುಕೊಂಡೆನೆಂಬ ಆಸೆಯಿಂದ 1675ರವರೆಗೂ ಆತ ಬದುಕಿದ್ದ. ಆದರೆ ಸಾಮ್ರಾಜ್ಯದ ಬಹು ಭಾಗವೆಲ್ಲ ಬಿಜಾಪುರ ಗೋಲ್ಕೊಂಡಗಳ ಸುಲ್ತಾನರ ವಶವಾಯಿತು. ಉಳಿದ ಕಡೆಗಳಲ್ಲಿ ಮಾಂಡಲೀಕರಾಗಿದ್ದವರು ಸಣ್ಣ ಸಣ್ಣ ಸ್ವತಂತ್ರ ರಾಜ್ಯಗಳನ್ನು ಕಟ್ಟಿಕೊಂಡರು. ದಕ್ಷಿಣದಲ್ಲಿ ಮಧುರೆ, ತಂಜಾವೂರು, ಜಿಂಜಿ ಮುಂತಾದ ಕೆಲವು ಸ್ವತಂತ್ರ ರಾಜ್ಯಗಳಾದುವು. ಪಶ್ಚಿಮಕ್ಕೆ ಮೈಸೂರು ರಾಜ್ಯ ಕೊಂಚ ಕೊಂಚವಾಗಿ ಬೆಳೆಯುತ್ತಿತ್ತು. ಅದರ ಉತ್ತರಕ್ಕೆ ಈಗಿನ ಶಿವಮೊಗ್ಗ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡ ಇಕ್ಕೇರಿ ರಾಜ್ಯವಿತ್ತು. ಪಶ್ಚಿಮಕ್ಕೆ ನಾಲ್ಕೈದು ಸಣ್ಣ ರಾಜ್ಯಗಳಿದ್ದುವು.[೩]
ಅರವೀಡು ಮನೆತನದ ರಾಜರುಗಳ ರಾಜ್ಯಭಾರ
[ಬದಲಾಯಿಸಿ]ಅರವೀಡು ಮನೆತನದ ರಾಜರು ಹಿಂದಿನ ಸಂಪ್ರದಾಯದಂತೆ ಹಿಂದೂ ಸಂಸ್ಕøತಿಗೆ ಬಹುಮಟ್ಟಿಗೆ ಪ್ರೋತ್ಸಾಹ ಕೊಟ್ಟರು. ಇವರ ಕಾಲದಲ್ಲಿ ತೆಲುಗು ಸಾಹಿತ್ಯ ಅಭಿವೃದ್ಧಿ ಹೊಂದಿ, ಸಂಗೀತ, ನಾಟಕ, ನೃತ್ಯಕಲೆಗಳಲ್ಲಿ ಉತ್ಕøಷ್ಟ ಗ್ರಂಥಗಳು ರಚಿಸಲ್ಪಟ್ಟುವು. ಇವರು ರಾಜ್ಯದಲ್ಲಿ ಮತಸಹಿಷ್ಣುತೆಯನ್ನು ಕಾಪಾಡಿ ಧರ್ಮದಿಂದ ರಾಜ್ಯವಾಳಿದರು. ಈ ಸಂತತಿಯ ಎಲ್ಲ ರಾಜರೂ ದೇವಸ್ಥಾನಗಳಿಗೆ ಮತ್ತು ವಿದ್ವಾಂಸರಿಗೆ ಹೆಚ್ಚಾಗಿ ದಾನಧರ್ಮಗಳನ್ನು ಮಾಡಿದರು. ಅವರ ದೈವಭಕ್ತಿ, ಅದರಲ್ಲೂ ಅವರು ಶ್ರೀವೈಷ್ಣವ ಮತಕ್ಕೆ ಕೊಟ್ಟ ರಾಜಾಶ್ರಯ ಹೆಮ್ಮೆ ಪಡಬೇಕಾದದ್ದು. ತಿರುಪತಿಯ ಬೆಟ್ಟದ ಮೇಲೆ ಮೊದಲನೆಯ ಗೋಪುರದ ಹತ್ತಿರ ಕಲ್ಲಿನಲ್ಲಿ ಮಾಡಿದ ತಿರುಮಲನ ಮತ್ತು ಅವನ ಹೆಂಡತಿಯಾದ ವೇಂಗಲಾಂಬಳ ಪ್ರತಿಮೆ ಇದೆ. ಕಂಚಿ, ಶ್ರೀರಂಗ, ಶೇಷಾಚಲ (ತಿರುಪತಿ), ಕನಕಸಭ (ಚಿದಂಬರಂ) ದೇವಸ್ಥಾನಗಳಿಗೆ ತಿರುಮಲ ನಾನಾ ವಿಧವಾಗಿ ಪ್ರೋತ್ಸಾಹವಿತ್ತಿದ್ದಾನೆ.[೪]
ಸಾಹಿತ್ಯ ಪೋಷಣೆ
[ಬದಲಾಯಿಸಿ]ಭತ್ತುಮೂರ್ತಿ ಇವರ ಆಸ್ಥಾನದ ಸುಪ್ರಸಿದ್ಧ ವಿದ್ವಾಂಸ. ತಿರುಮಲ ಅವನಿಗೆ ರಾಮರಾಜ ಭೂಷಣ ಎಂಬ ಬಿರುದನ್ನು ಕೊಟ್ಟು ಗೌರವಿಸಿದ. ಈ ಕವಿ ವಸ್ತುಚರಿತ್ರಮು, ಹರಿಶ್ಚಂದ್ರ ನಳೋಪಾಖ್ಯಾನಮು ಮತ್ತು ನರಭೂಪಾಲೀಯಮು ಎಂಬ ಉತ್ಕøಷ್ಟ ಗ್ರಂಥಗಳ ಕರ್ತೃ. ಇವು ತೆಲುಗು ಸಾಹಿತ್ಯದಲ್ಲಿ ಉನ್ನತಸ್ಥಾನ ಪಡೆದಿವೆ. ಎರಡನೆಯ ಶ್ರೀರಂಗ ಎಂದು ಪ್ರಸಿದ್ಧವಾದ ಮೇಲುಕೋಟೆ, ಶ್ರೀಮುಷ್ಣಂ, ಅಹೋಬಲ, ತಿರುಪತಿ, ಮತ್ತು ಇತರ ದೇವಸ್ಥಾನಗಳಿಗೆ ತನ್ನ ಭಕ್ತಿಯನ್ನು ತೋರಿಸಿ ಹೆಚ್ಚು ಹೆಚ್ಚಾಗಿ ಕೊಡುಗೆಗಳನ್ನಿತ್ತ. ಮುಖ್ಯವಾಗಿ ಮುಸಲ್ಮಾನರಿಂದ ಅಹೋಬಲ ಮಠವನ್ನು ರಕ್ಷಿಸಿದ್ದು ಅವನ ಕೀರ್ತಿಯನ್ನು ಎಲ್ಲೆಲ್ಲೂ ಹರಡಿಸಿತು. ಮೇಲುಕೋಟೆಯ ದೇವಸ್ಥಾನದಲ್ಲಿ ತನ್ನ ಸಮ್ಮುಖದಲ್ಲಿ ವೇದಾಂತದೇಶಿಕರ ಯತಿರಾಜಸಪ್ತತಿಯನ್ನು ಪಠನ ಮಾಡಿಸಿದ. ಸುಪ್ರಸಿದ್ಧ ತಾತಾಚಾರ್ಯ ಇವನ ಗುರು. ಇಬ್ರಾಹಿಂ ಕುತ್ಬ್ ಷಾರಂಥ ಮುಸ್ಲಿಮರು ತೆಲುಗು ಸಾಹಿತ್ಯಕ್ಕೆ ಹೆಚ್ಚು ಪ್ರೋತ್ಸಾಹ ಕೊಟ್ಟಿದ್ದು ಅಂದಿನ ವಾತಾವರಣ ಸೂಚಕವಾಗಿದೆ. ಈ ಮನೆತನದಲ್ಲಿ ಬಹುಪ್ರಸಿದ್ಧನಾದ ಮೊದಲನೆಯ ವೆಂಕಟಪ್ರಸಿದ್ಧ ಶೈವ ತತ್ತ್ವಜ್ಞಾನಿಯಾದ ಅಪ್ಪಯ್ಯದೀಕ್ಷಿತನನ್ನು ತನ್ನ ಆಸ್ಥಾನದಲ್ಲಿ ಗೌರವಿಸಿದ. ರಾಜನ ಪ್ರಾರ್ಥನೆಯಂತೆ ಅಪ್ಪಯ್ಯದೀಕ್ಷಿತ ಕುವಲಯಾನಂದ ಎಂಬ ಅಲಂಕಾರಶಾಸ್ತ್ರ ಬರೆದ. ರಾಜ ಕುಂಭಕೋಣದಲ್ಲಿದ್ದ ಸುಧೀಂದ್ರತೀರ್ಥರನ್ನೂ ವಿಶೇಷವಾಗಿ ಗೌರವಿಸುತ್ತಿದ್ದ. ರಾಜಕೀಯದಲ್ಲಿ ಅರವೀಡು ಸಂತತಿಯ ಚರಿತ್ರೆ ವಿಷಾದಕರವಾದರೂ ಈ ಸಂತತಿಯವರು ಹಿಂದೂ ಧರ್ಮರಕ್ಷಣೆ ಮತ್ತು ಹಿಂದೂ ಸಂಸ್ಕøತಿಯ ಬೆಳೆವಣಿಗೆಗೆ ಸಲ್ಲಿಸಿದ ಉತ್ಕøಷ್ಟವಾದ ಸೇವೆಯನ್ನು ಯಾರೂ ಮರೆಯುವ ಹಾಗಿಲ್ಲ. [೫]
ಉಲ್ಲೇಖಗಳು
[ಬದಲಾಯಿಸಿ]