ವಿಷಯಕ್ಕೆ ಹೋಗು

ಎಚ್ಚಮನಾಯಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಚ್ಚಮನಾಯಕ- ವಿಜಯನಗರ ಸಾಮ್ರಾಜ್ಯದ ಅನಂತರ ಚಂದ್ರಗಿರಿಯಲ್ಲಿ ಆಳುತ್ತಿದ್ದ ಅರವೀಡು ವಂಶದ ಅರಸರಲೊಬ್ಬನಾದ ವೆಂಕಟರಾಯನ ಪ್ರೀತಿಯ ಸರದಾರ, ಸ್ವಾಮಿನಿಷ್ಠೆ, ದೇಶಾಭಿಮಾನಿ. ವೆಂಕಟರಾಯನ ಮರಣಾನಂತರ (1614) ಅವನ ಅಣ್ಣನ ಮಗ ರಂಗರಾಯ ಸಿಂಹಾಸನವನ್ನೇರಿದ. ಈತನೇ ರಾಜ್ಯಕ್ಕೆ ನಿಜವಾದ ಹಕ್ಕುದಾರ. ಈತನಿಗೆ ಎಚ್ಚಮನಾಯಕನ ಬೆಂಬಲವಿತ್ತು. ವೆಂಕಟರಾಯ ಬದುಕಿದ್ದಾಗ ಅವನಿಗೂ ಇದೇ ಅಭೀಷ್ಠವಿತ್ತು. ಆದರೆ ರಂಗರಾಯ ರಾಜನಾದದ್ದು ಜಗರಾಯನೆಂಬ ಸಾಮಂತರಾಜನಿಗೆ ಹಿಡಿಸಲಿಲ್ಲ. ಎಚ್ಚಮನಾಯಕನ ಗೈರುಹಾಜರಿಯಲ್ಲಿ ಜಗರಾಯ ಸೈನ್ಯ ಸಮೇತ ಅರಮನೆಗೆ ನುಗ್ಗಿದ. ರಂಗರಾಯನೂ ಅವನ ಪರಿವಾರದವರೂ ಬಂಧನಕ್ಕೊಳಗಾದರು. ಈ ವಿಷಯ ತಿಳಿದ ಎಚ್ಚಮನಾಯಕ ಎದೆಗುಂದದೆ ಬಲವಾದ ಸೈನ್ಯ ಕಟ್ಟಿ, ಜನರ ಬೆಂಬಲ ಪಡೆದು ಕಾರಾಗೃಹದಿಂದ ರಂಗರಾಯನ ಮಗ ಚಿನ್ನ ವೆಂಕಟರಾಯನನ್ನು ಕರೆತಂದು ಅವನನ್ನು ಜೋಪಾನವಾಗಿ ರಕ್ಷಿಸಿದ. ರಂಗರಾಯನನ್ನೂ ಅವನ ಪರಿವಾರದವರನ್ನೂ ಜಗರಾಯ ಕೊನೆಗೊಳಿಸಿದ ಸುದ್ದಿಯನ್ನು ಕೇಳಿ ಖತಿಗೊಂಡ ಎಚ್ಚಮನಾಯಕ ಶತ್ರುನೆಲೆಗೆ ಸೈನ್ಯ ಸಮೇತ ನುಗ್ಗಿ ಶೌರ್ಯದಿಂದ ಕಾದಾಡಿ ಎಲ್ಲರನ್ನೂ ಸದೆಬಡಿದ. ಅಳಿದುಳಿದ ಶತ್ರುಗಳು ಶರಣಾಗತರಾದರು. ಎಚ್ಚಮನಾಯಕ ಅನ್ಯಾಕ್ರಾಂತವಾಗಿದ್ದ ಸಿಂಹಾಸನವನ್ನು ರಾಜವಂಶಕ್ಕೆ ಗಳಿಸಿಕೊಟ್ಟು ಕೀರ್ತಿ ಪಡೆದುದಲ್ಲದೆ ಕನ್ನಡಿಗರ ಸ್ವಾಮಿನಿಷ್ಠೆ, ಸಾಹಸಪರತೆ, ಧೈರ್ಯ, ಸ್ಥೈರ್ಯಗಳನ್ನು ಲೋಕಕ್ಕೆ ಮೆರೆದ. ಸ್ವಾಮಿಪುತ್ರನಾದ ಚಿನ್ನ ವೆಂಕಟರಾಯನಿಗೆ ವೈಭವದಿಂದ ಪಟ್ಟಾಭಿಷೇಕ ನೆರವೇರಿಸಿ ರಾಜ್ಯದಲ್ಲಿ ಶಾಂತಿಸ್ಥಾಪನೆ ಮಾಡಿದ. ಚಂದ್ರಗಿರಿಯ ರಾಜ್ಯ ಮತ್ತೆ ವೈಭವದಿಂದ ತಲೆಯೆತ್ತುವಂತಾಯಿತು. ಕನ್ನಡನಾಡಿನ ಇತಿಹಾಸದಲ್ಲಿ ಎಚ್ಚಮನಾಯಕನೊಬ್ಬ ಆದರ್ಶ ಪುರುಷ. ಈತನ ಬಗ್ಗೆ ರಚಿತವಾದ ನಾಟಕವೊಂದು ಕನ್ನಡ ವೃತ್ತಿರಂಗಭೂಮಿಯ ಮೇಲೆ ಕೀರ್ತಿ ಗಳಿಸಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: