ಅಪೋಸಲರ ಉಪದೇಶಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪೋಸಲರ ಉಪದೇಶಗಳು ಬೈಬಲ್ನ (ಸತ್ಯವೇದ) ಎರಡನೆಯ ಭಾಗವೆನಿಸಿರುವ ಹೊಸ ಒಡಂಬಡಿಕೆಯಲ್ಲಿನ ಐದನೆಯ ಮತ್ತು ಮಹತ್ತ್ವದ ಪುಸ್ತಕ.

ಹಿನ್ನೆಲೆ[ಬದಲಾಯಿಸಿ]

ಅನಾದಿಕಾಲದ ಕ್ರೈಸ್ತಸಭೆಯ ಚಾರಿತ್ರಿಕಾಂಶಗಳು ಇದರಿಂದ ತಿಳಿದು ಬರುವಷ್ಟು ಹೊಸ ಒಡಂಬಡಿಕೆಯ ಇನ್ನಾವ ಪುಸ್ತಕಗಳಿಂದಲೂ ತಿಳಿದುಬರುವುದಿಲ್ಲ. ಪೌಲನು ಬರೆದಿರುವ ಪತ್ರಿಕೆಗಳಲ್ಲಿ ಹಲಕೆಲವು ಸಂಗತಿಗಳು ತಿಳಿದು ಬರುತ್ತವಾದರೂ ಇಲ್ಲಿ ಕಾಣುವಷ್ಟು ಅಲ್ಲಿಲ್ಲ. ಇದೊಂದು ವೃತ್ತಾಂತಮಂಜರಿ. ಆ ಕಾಲದ ಮುಖ್ಯ ಘಟನೆಗಳನ್ನೂ ಕೆಲವು ಗಣನೀಯ ವ್ಯಕ್ತಿಗಳ, ಕೆಲವು ಅಪೋಸಲರ ಕಾರ್ಯಕರ್ಮಗಳನ್ನೂ ಇಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಎಲ್ಲೂ ಅಪೋಸಲರ ಸೇವಾಚರಿತ್ರೆ ಇರುವುದಿಲ್ಲ. ಇದು ಹೆಚ್ಚಾಗಿ ಪೌಲನ ಕಾರ್ಯಕಲಾಪಗಳಿಗೇ ಮೀಸಲಾದಂತಿದೆ. ಆದರೂ ಆರಂಭದಲ್ಲಿ ಯೋಹಾನನ ಸುದ್ದಿ ಕೊಂಚ ಇದೆ. ಪೇತ್ರನ ನಾಯಕತ್ವದ ಸಂಬಂಧದಲ್ಲಿ ಹಲಕೆಲವು ವಿಷಯಗಳನ್ನು ನಿವೇಧಿಸಲಾಗಿದೆ.

ಲ್ಯೂಕ್[ಬದಲಾಯಿಸಿ]

ಹೊಸ ಒಡಂಬಡಿಕೆಯ ಮೂರನೆಯ ಪುಸ್ತಕವಾಗಿರುವ ಲೂಕನು ಬರೆದ ಸುವಾರ್ತೆ ಮತ್ತು ಅಪೋಸಲರ ಉಪದೇಶಗಳು-ಈ ಎರಡು ಪುಸ್ತಕಗಳೂ ಒಬ್ಬನ ಕೈಯಿಂದಲೇ ಬರೆಯಲ್ಪಟ್ಟಿರಬೇಕೆಂಬ ವಿಷಯದಲ್ಲಿ ವಾದವಿಲ್ಲ. ವಸ್ತುವಿನ ಆಯ್ಕೆ ಶೈಲಿಗಳು ಇದನ್ನು ಸಮರ್ಥಿಸುತ್ತವೆ. ಆದರೆ ಇವುಗಳನ್ನು ಲೂಕನೇ ಬರೆದನೆಂಬುದಕ್ಕೆ ಮೊದಲನೆಯ ಶತಮಾನದ ಬರೆಹಗಳಿಂದ ಯಾವ ಸಬಲವಾದ ಆಧಾರವು ಈವರೆಗೆ ದೊರೆತಿಲ್ಲ. ಎರಡನೆಯ ಶತಮಾನದ ಬರೆಹಗಳಿಂದ ದೊರೆತ ಆಧಾರಗಳಿಂದ ಲೂಕನೇ ಅವುಗಳ ಕರ್ತನೆಂದು ಪಂಡಿತರ ಅಭಿಪ್ರಾಯ. ಇದಕ್ಕೆ ಕೆಲವು ಸಭಾಪಿತೃಗಳ ಆಧಾರವೂ ಇದೆ.

ಲೂಕನೆಂಬುವನು, ಆ ಹೆಸರುಳ್ಳ ಸುವಾರ್ತೆಯ ಮತ್ತು ಪ್ರಸ್ತುತ ಗ್ರಂಥದ ಒಕ್ಕಣಿಕೆಯಲ್ಲಿ ಥೆಯೊಫಿಲ ಎಂಬ ಹೆಸರನ್ನು ಎತ್ತಿಕೊಂಡು ಅವನನ್ನು ಸಂಬೋಧಿಸಿ, ಈ ಎರಡೂ ಗ್ರಂಥಗಳನ್ನು ರಚಿಸಿದಂತಿದೆ. ಆದರೆ ಥೆಯೊಫಿಲನೆಂಬ ಈ ಪುರುಷ ಯಾರಿರಬಹುದೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಒಟ್ಟಿನಲ್ಲಿ ವಿಪತ್ತಿಗೊಳಗಾದ ಕ್ರೈಸ್ತಧರ್ಮೀಯರಿಗೂ ಅಂದಿನ ಜನಸಾಮಾನ್ಯರಿಗೂ ಅಧಿಕಾರವರ್ಗದವರಿಗೂ ಉಪದೇಶರೂಪವಾಗಿ ಈ ಕೃತಿ ರಚಿತವಾಗಿರಬೇಕೆಂದು ತೋರುತ್ತದೆ.

ಆಧಾರ[ಬದಲಾಯಿಸಿ]

ಗ್ರಂಥಕರ್ತ ಪ್ರಾಮಾಣಿಕಚರಿತ್ರಕಾರ. ತನ್ನೀ ಗ್ರಂಥಗಳಲ್ಲಿ ಚಾರಿತ್ರಿಕಾಂಶಗಳನ್ನು ಬಹು ಜಾಗರೂಕತೆಯೀಂದಲೂ ಪ್ರಾಮಾಣಿಕತನದಿಂದಲೂ ಆತ ಮಂಡಿಸಿರುವನೆಂಬುದಕ್ಕೆ 19ನೆಯ ಶತಮಾನದಲ್ಲಿ ಶೋಧವಾದ ಕೆಲವು ಪುರಾತನ ಶಾಸನಗಳಿಂದ ಆಧಾರ ಸಿಕ್ಕಿದೆ. ಆತ ಒಳ್ಳೆಯ ರಚನಾಸಾಮಥ್ರ್ಯವುಳ್ಳವನಾಗಿದ್ದನೆಂಬ ಮಾತಿಗೆ ಕ್ರಮಬದ್ಧವಾದ ಅವನ ಗ್ರಂಥವೇ ಸಾಕ್ಷಿಯಾಗಿದೆ. ಆತ ತನ್ನೀ ಗ್ರಂಥಗಳನ್ನು ಅಂದಿನ ವ್ಯವಹಾರದಲ್ಲಿನ ಗ್ರೀಕ್ ಭಾಷೆಯಲ್ಲಿ ಸುಲಭ ಹಾಗೂ ಸರಳಶೈಲಿಯಲ್ಲಿ ಬರೆದಿದ್ದಾನೆ. ಕರ್ತೃ ಜಾತ್ಯತೀತದೃಷ್ಟಿಯುಳ್ಳವನೂ ವಿಶಾಲಭಾವನೆಯುಳ್ಳವನೂ ವಿಶಾಲಹೃದಯನೂ ಆಗಿರಬೇಕೆಂದು ಅವನ ಪುಸ್ತಕದಿಂದಲೇ ತಿಳಿಯುತ್ತದೆ. ಇತರರನ್ನು ಅರಿತುಕೊಳ್ಳುವ ಅವನ ಮನೋಧರ್ಮ ಎಷ್ಟು ಉದಾತ್ತವಾಗಿತ್ತೆಂಬುದು ಈ ಕೆಲವು ವಿಷಯಗಳಿಂದ ವ್ಯಕ್ತವಾಗುವುದು.[೧]

ಉದ್ದೇಶ[ಬದಲಾಯಿಸಿ]

ಆತ ಸ್ವತಃ ಯೆಹೂದ್ಯನಲ್ಲದಿದ್ದರೂ ಅವರ ವಿಷಯದಲ್ಲಿ ತುಂಬ ಅನುಕಂಪವುಳ್ಳವನಾಗಿದ್ದ. ಯೆಹೂದ್ಯರು ಕೀಳ್ಗಳೆಯುತ್ತಿದ್ದ ಸಾಮಾನ್ಯರ ವಿಷಯದಲ್ಲಿ ಯೇಸು ತೋರಿಸಿದ ಸ್ನೇಹಭಾವವನ್ನು ಈತ ಎತ್ತಿ ತೋರಿಸಲು ಎಷ್ಟೂ ಹಿಂಜರಿದಿಲ್ಲ. ಅನ್ಯಮತೀಯರಿಗೆ ಸುವಾರ್ತಾಪ್ರಸಾರಣೆಯಾಗುತ್ತಿದ್ದ ಸಂಗತಿಯನ್ನು ತಿಳಿಸುವಾಗೆಲ್ಲ ಒಳ್ಳೆಯ ಹುಮ್ಮಸ್ಸಿನಿಂದ ತಿಳಿಸಿದ್ದಾನೆ. ರಕ್ಷಣೆಯ ಶುಭವರ್ತಮಾನ ಪ್ಯಾಲೆಸ್ತೀನಿನಲ್ಲಿ ಹಬ್ಬಿದ ವಿಷಯವನ್ನು ತನ್ನ ಸುವಾರ್ತೆಯಲ್ಲಿ ತಿಳಿಸಿದ ಅನಂತರ ಅದು ಮಾನವಕೋಟಿಗೆ ಮುಟ್ಟಿದ ವಿಧಾನವನ್ನು, ಮಾನವಕುಲವನ್ನು ರಕ್ಷಿಸಲು ದೇವರು ಕೈಕೊಂಡ ಯೋಜನೆ ಹೇಗೆ ಕೈಗೂಡಿತೆಂಬುದನ್ನು ವಿಸ್ತಾರವಾಗಿ ಹೇಳಿದ್ದಾನೆ. ದೀನದರಿದ್ರರು, ಪತಿತರು, ಪಾಪಿಷ್ಠರು, ದಲಿತರು, ಹೀನಾಯಿಸಲ್ಪಟ್ಟವರು ಮುಂತಾದವರ ವಿಷಯದಲ್ಲಿ ಲೂಕನು ತುಂಬ ಸಹತಾಪವುಳ್ಳವನಾಗಿದ್ದ. ಕ್ರಿಸ್ತನ ದೀನಭಾವದ ಚಿತ್ರಕಾರನೆಂದು ದಾಂಟೆ ಇವನನ್ನು ಹೊಗಳಿದ್ದಾನೆ. ಲೂಕನು ಕೋಮಲ ಹೃದಯಿ. ಅವನ ಈ ಮೃದುಸ್ವಭಾವ ಆಗಿನ ಪ್ರಪಂಚದಲ್ಲಿ ಯಾವ ಸ್ಥಾನಮಾನವೂ ಇಲ್ಲದ ಸ್ತ್ರೀಯರ ಕಡೆಗೂ ಧಾರಾಳವಾಗಿ ಹರಿದುದು ಕಾಣುತ್ತದೆ. ಸ್ತ್ರೀಯರ ಸ್ಥಾನಮಾನದ ವಿಷಯದಲ್ಲಿ ಕ್ರಿಸ್ತನಲ್ಲಿ ಇದ್ದ ಉದಾತ್ತಭಾವನೆಯನ್ನೇ ಇವನೂ ಎತ್ತಿ ಹಿಡಿದಿದ್ದಾನೆಂಬುದು ಅವನ ಸುವಾರ್ತೆಯಲ್ಲಿ ಗೊತ್ತಾಗುತ್ತದೆ. ಇದೇ ಭಾವನೆ ಅಪೋಸಲರ ಉಪದೇಶಗಳಲ್ಲೂ ಒಡಮೂಡಿದೆ. ಈಗ ಇದರಲ್ಲಿ ಯಾವ ವಿಶೇಷತೆ ಕಾಣದಿದ್ದರೂ ಅಂದಿನ ಪ್ರಪಂಚದಲ್ಲಿ ಇದು ಒಂದು ವಿಶೇಷ ಸಂಗತಿಯೇ ಆಗಿತ್ತು. ಲೂಕನ ಹೃದಯ ಕೋಮಲವಿದ್ದಷ್ಟೂ ಕಠಿಣವಾಗಿತ್ತು. ಅದರಲ್ಲಿ ಖಂಡಿತತ್ವವೂ ಇತ್ತು. ಕ್ರಿಸ್ತನ ಅನುಯಾಯಿಗಳು ಕ್ರಿಸ್ತನ ಶಿಲುಬೆಯನ್ನು ಪ್ರತಿದಿನವೂ ಹೊರತರಬೇಕೆಂದು ಬೇರಾವ ಸೌವಾರ್ತಿಕನೂ ತಿಳಿಸಿಲ್ಲ. ಕ್ರಿಸ್ತನ ಶಿಷ್ಯರು ಅನುಸರಿಸಬೇಕಾದ ಮಾರ್ಗ ಬಹು ಕಷ್ಟಕರವಾದುದೆಂದೂ ಈತ ಬರೆದಿದ್ದಾನೆ. ಈ ಮಾತುಗಳನ್ನು ಕ್ರಿಸ್ತನ ಅಪೋಸಲರಾಗಿದ್ದ ಪೇತ್ರ, ಯೋಹಾನ, ಪೌಲ ಮೊದಲಾದವರು ಅಕ್ಷರಶಃ ಹೇಗೆ ಪಾಲಿಸಿದರೆಂಬ ವಿಷಯವನ್ನೂ ತಿಳಿಸಿದ್ದಾನೆ.[೨]

ಧ್ಯೇಯ[ಬದಲಾಯಿಸಿ]

ಅದರಂತೆ ಲೂಕನು ಒಂದು ಉನ್ನತ ಧ್ಯೇಯವನ್ನಿಟ್ಟುಕೊಂಡೇ ತನ್ನ ಕೃತಿಯನ್ನು ನಿರ್ಮಿಸಿದ್ದಾನೆ. ಕ್ರೈಸ್ತಧರ್ಮವನ್ನು ರೊಮನ್ ಸರಕಾರಕ್ಕೆ ಪರಿಚಯಮಾಡಿ ಕೊಡುವುದು ಒಂದು ಉದ್ದೇಶವಾಗಿತ್ತೆನ್ನಬಹುದು. ರೋಮನ್ ಅಧಿಕಾರಿಗಳನೇಕರು, ಕ್ರೈಸ್ತಧರ್ಮದ ವಿಷಯದಲ್ಲಿ ಸೈರಣೆಯುಳ್ಳವರೂ ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿಷ್ಪಕ್ಷಪಾತ ತೀರ್ಪು ಕೊಡುವವರೂ ಆಗಿದ್ದರೆಂದು ಗ್ರಂಥಕರ್ತ ತೋರಿಸಲು ಯತ್ನಮಾಡಿದ್ದಾನೆ. ಇತ್ತ ಕ್ರೈಸ್ತರು ಕೂಡ ಸರಕಾರದೊಂದಿಗೆ ಯಥಾರ್ಥಭಾವದಿಂದಲೂ ವಿಧೇಯತೆಯಿಂದಲೂ ನಡೆದುಕೊಳ್ಳುತ್ತಿದ್ದರೆಂಬುದನ್ನು ಸರಕಾರದ ಗಮನಕ್ಕೆ ತರುವುದೂ ಅವನ ಒಂದು ಉದ್ದೇಶ. ಕ್ರೈಸ್ತಧರ್ಮ ವಿಶ್ವಧರ್ಮವೆಂದು ತೊರಿಸಿಕೊಡುವುದು ಬರೆಹಗಾರನ ಇನ್ನೊಂದು ಉದ್ದೇಶವಾಗಿದ್ದಂತೆ ಕಾಣುತ್ತದೆ. ಕ್ರೈಸ್ತನಾಗಬಯಸುವವನಿಗೆ ಕುಲ, ಜಾತಿ, ಮತ, ಪಂಥ, ದೇಶ ಇವಾವುದರ ತೊಡಕಿಲ್ಲ. ಎಲ್ಲರೂ ಅದನ್ನು ಅಂಗೀಕರಿಸಬಹುದು ಎಂಬುದನ್ನು ಲೂಕ ತೋರಿಸಿದ್ದಾನೆ. ಏಕೆಂದರೆ ತಾವು ದೇವರೇ ಆಯ್ದುಕೊಂಡ ಜನಾಂಗ, ಆತನ ಸ್ವಕೀಯ ಪ್ರಜೆಗಳು, ಉಳಿದವರೆಲ್ಲರೂ ದೇವರಿಗೆ ಬೇಡಾದವರು ಎಂಬ ಭಾವನೆಯಿಂದ ಮಂಕುಗೊಂಡ ಯೆಹೂದಿಗಳಿಗೆ ಇದು ನೇರ ಉಪದೇಶವಾಗಿದೆ. ಇವು ಈ ಗ್ರಂಥರಚನೆಯ ಉದ್ದೇಶಗಳಾಗಿದ್ದರೂ ಮೂಲ ಉದ್ದೇಶ ಬೇರೆಯೇ ಇದ್ದಂತೆ ತೊರುತ್ತದೆ. ಅದು ಕ್ರಿಸ್ತನ ಅಪ್ಪಣೆಯ ಪರಿಪಾಲನೆ. ಯೇಸು ತನ್ನ ಶಿಷ್ಯರಿಗೆ-ನೀವು ಯೆರೂಸಲೇಮಿನಲ್ಲೂ ಎಲ್ಲ ಯೂದಾಯ ಸಮಾರ್ಯ ಸೀಮೆಗಳಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಎಂದು ಹೇಳಿದನು. ಈ ಅಪ್ಪಣೆಯನ್ನು ಆತನ ಅಪೋಸಲರು ತಪ್ಪದೆ ಪಾಲಿಸಿದರೆಂಬುದನ್ನು ಗ್ರಂಥಕರ್ತ ತೊರಿಸಲು ಹವಣಿಸಿದ್ದಾನೆ. ಕ್ರೈಸ್ತ ಧರ್ಮ ಪ್ಯಾಲೆಸ್ತೀನಿನಲ್ಲಿ ಹುಟ್ಟಿ ನಾನಾ ಕಡೆಗೆ ಕುಡಿ ಚಾಚಿ ಹಬ್ಬುತ್ತ ಕಡೆಗೆ ರೋಮ್ ಸಾಮ್ರಾಜ್ಯದ ಮುಖ್ಯಪಟ್ಟಣವಾಗಿದ್ದ ರೋಮ್ ನಗರವನ್ನೂ ಮುಟ್ಟಿದ ರೀತಿಯನ್ನು ತನ್ನ ಪುಸ್ತಕದಲ್ಲಿ ಬಣ್ಣಿಸಿದ್ದಾನೆ. ಕ್ರಿಸ್ತನ ಅಪ್ಪಣೆಯ ಮೇರೆಗೆ ಅಪೋಸಲರು ಕೈಗೊಂಡ ಸ್ವಾಮಿಸೇವೆಯಲ್ಲಿ ದೇವಾತ್ಮನ ಪ್ರೇರಣೆ ಮತ್ತು ಶಕ್ತಿಗಳಿಂದ ತುಂಬಿದವರಾಗಿ ತಮ್ಮ ಕಾರ್ಯವನ್ನು ಸಾಧಿಸಿದರು. ಈ ದೇವಾತ್ಮ ಜನಮನವನ್ನು ಆವರಿಸಿದಾಗಲೇ ಅವರ ಸೇವೆ ಸಿದ್ಧಿಗೊಳ್ಳುತ್ತ ಬಂತು ಎಂಬುದನ್ನು ತೋರಿಸುವುದೇ ಲೂಕನ ಮುಖ್ಯ ಗುರಿಯಾಗಿತ್ತು.[೩]

ಸಿ. ಎಚ್. ಟರ್ನರ್ ಎಂಬ ಪಂಡಿತ ಈ ಗ್ರಂಥವನ್ನು ವಿಷಯದೃಷ್ಟಿಯಿಂದ ಸೂಕ್ತರೀತಿಯಲ್ಲಿ ವಿಭಾಗಿಸಿದ್ದಾನೆ.

ವಿಮರ್ಶೆ[ಬದಲಾಯಿಸಿ]

ಯೆರೂಸಲೇಮಿನಲ್ಲಿ ಜನ್ಮವೆತ್ತಿದ ಈ ಧರ್ಮ ಕೊನೆಯಲ್ಲಿ ರೋಮ್ ಸಾಮ್ರಾಜ್ಯದ ಪ್ರಧಾನ ಪಟ್ಟಣವಾಗಿದ್ದ ರೋಮ್ ನಗರವನ್ನು ಮುಟ್ಟಿದ ಬಗೆಯನ್ನು ತೊರಿಸುವುದೇ ಗ್ರಂಥಕರ್ತನ ಹಿರಿಯಾಸೆಯಾಗಿದ್ದಿತಷ್ಟೆ. ಈ ವಿಷಯ ಗ್ರಂಥದ ಕೊನೆಗೆ ಬರುತ್ತದೆ. ಪೌಲನು ಸೆರೆಮನೆಯಲ್ಲಿದ್ದುಕೊಂಡು ಕೊನೆಯ ತೀರ್ಪಿಗಾಗಿ ಕಾದುಕೊಂಡಿದ್ದಾನೆಂಬಲ್ಲಿಗೆ ಕೃತಿ ಮುಗಿಯುತ್ತದೆ. ಆದರೆ ಓದುಗನಿಗೆ ಮುಂದೇನಾಯಿತು ಎಂಬುದನ್ನು ತಿಳಿಯುವ ಚಪಲ. ಅದಕ್ಕೆ ಪರಿಹಾರವಿಲ್ಲ. ಅದೊಂದು ರಹಸ್ಯ ವಿಷಯ. ಆದುದರಿಂದ ರಹಸ್ಯವಾಗಿಯೇ ಉಳಿದಿದೆ. ಈ ಗ್ರಂಥವನ್ನು ಆಳವಾಗಿ ಅಭ್ಯಸಿಸಿದ ಪಂಡಿತನೊಬ್ಬ ಈ ಗ್ರಂಥಕ್ಕೆ ಈಗಿನ ಹೆಸರಿಗಿಂತ ಯೆರೂಸಲೇಮಿನಿಂದ ರೋಮ್ ನಗರಕ್ಕೆ ಸುವಾರ್ತೆಯನ್ನು ಸಾಗಿಸಿದ ಕಥೆ ಎಂದಿದ್ದರೆ ಚೆನ್ನಾಗಿ ಒಪ್ಪುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾನೆ.[೪]

ಲೋಕರೂಢಿ[ಬದಲಾಯಿಸಿ]

ಲೂಕನು ತನ್ನೀ ಗ್ರಂಥಕ್ಕೆ ಬೇಕಾಗಿದ್ದ ಸಾಹಿತ್ಯವನ್ನು ಬೇರೆ ಬೇರೆ ಕಡೆಗಳಿಂದ ಸಂಗ್ರಹಿಸಿಕೊಂಡಂತಿದೆ. ಅದರ ಕೆಲಭಾಗ ಬಾಯಿಂದ ಬಾಯಿಗೆ ಬಂದ ಕಥೆಗಳಿಂದ. ಮುಖ್ಯವಾಗಿ ಯೆರೂಸಲೇಮ್, ಅದರ ಕೆಲಭಾಗ ಬಾಯಿಂದ ಬಾಯಿಗೆ ಬಂದ ಕಥೆಗಳಿಂದ, ಮುಖ್ಯವಾಗಿ ಯೆರೂಸಲೇಮ್, ಕೈಸೇರೈಯ ಮತ್ತು ಅಂತಿಯೋಕ್ ನಗರಗಳಲ್ಲಿದ್ದ ಕ್ರೈಸ್ತರಲ್ಲಿ ಪ್ರಚಲಿತವಾಗಿದ್ದ ಕಥೆಗಳಿಂದ ಆಯ್ದುಕೊಂಡದ್ದಾಗಿದೆ. ಇನ್ನು ಕೆಲವು ಭಾಗ ಅಪೋಸಲರ ವಿಷಯದಲ್ಲಿ ಬರೆದಿಟ್ಟ ಕೆಲವು ದಾಖಲೆಗಳಿಂದ ತೆಗೆದುಕೊಂಡುದಾಗಿದೆ, ಮತ್ತೆ ಕೆಲಭಾಗ ಸಭಾನಾಯಕರಿಂದ ಕೇಳಿ ತಿಳಿದುಕೊಂಡುದಾಗಿದೆ. ಇದರಲ್ಲಿಯ ಬಹುಭಾಗವನ್ನು ಆತ ತಾನು ಕಂಡು ಕೇಳಿದ ಸಂಗತಿಗಳಿಂದ ತುಂಬಿಸಿದ್ದಾನೆ. ಮುಖ್ಯವಾಗಿ ತಾನಿಟ್ಟುಕೊಂಡಿದ್ದ ದಿನಚರಿಯಿಂದ ಅನೇಕವನ್ನು ಆಯ್ದುಕೊಂಡಂತಿದೆ. ಕೆಲವೆಡೆ ಬರುವ ನಾವು ಎಂಬ ಪದ ಈ ಮಾತನ್ನು ಸ್ಪಷ್ಟಪಡಿಸುತ್ತದೆ. ಪೌಲನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಕಾಲದಲ್ಲಿ ತನ್ನ ಗ್ರಂಥಕ್ಕೆ ಬೇಕಾದ ಸಾಮಗ್ರಿಯನ್ನು ಸಂಗ್ರಹಿಸಲು ದೊರೆತ ಸದಾವಕಾಶವನ್ನು ಲೂಕನು ಪೂರ್ತಿ ಉಪಯೋಗ ಮಾಡಿಕೊಂಡಿರಬೇಕೆಂಬುದು ಈ ಗ್ರಂಥದಿಂದ ವ್ಯಕ್ತವಾಗುತ್ತದೆ.[೫]

ಈ ರೀತಿ ಸಂಗ್ರಹಿಸಿದ ಸಾವiಗ್ರಿಯನ್ನು ಒಟ್ಟುಗೂಡಿಸಿ ತನ್ನೀ ಗ್ರಂಥವನ್ನು ಕ್ರಿ.ಶ. 64ರ ಸುಮಾರಿಗೆ ಬರೆದು ಮುಗಿಸಿರಬೇಕೆಂದು ಪಂಡಿತರ ಸರ್ವಸಾಮಾನ್ಯ ಅಭಿಪ್ರಾಯ.

ಕ್ರೈಸ್ತಸಭೆ ಜನ್ಮತಾಳಿದ ತರುವಾಯ ಅದರ ಆರಂಭದ ಮೂವತ್ತೈದು ವರ್ಷದ ಬೆಳೆವಣಿಗೆಯ ಕಥೆಯನ್ನು ತಿಳಿದುಕೊಳ್ಳುವ ಕುತೂಹಲವುಳ್ಳವರಿಗೆ ಈ ಗ್ರಂಥವನ್ನು ಬಿಟ್ಟರೆ ಬೇರೆ ಗತಿಯಿಲ್ಲ. ಆದುದರಿಂದಲೇ ಇದೊಂದು ಅಮೂಲ್ಯ ಗ್ರಂಥವೆಂದು ಪರಿಗಣಿಸಲ್ಪಟ್ಟಿದೆ.

ಉಲ್ಲೇಖಗಳು[ಬದಲಾಯಿಸಿ]