ವಿಷಯಕ್ಕೆ ಹೋಗು

ಅನ್ಯೋಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರ್ಲ್ ಕವಿ

.

ವಾಚ್ಯಾರ್ಥವನ್ನೂ ಅದರಿಂದ ಭಿನ್ನವಾದ ಸೂಚ್ಯಾರ್ಥವನ್ನೂ ಪ್ರತಿಪಾದಿಸುವ ಒಂದು ವಿಧಾನ (ಅಲಿಗರಿ).[] ವಾಚ್ಯಾರ್ಥವನ್ನೂ ಅದರಿಂದ ಭಿನ್ನವಾದ ಸೂಚ್ಯಾರ್ಥವನ್ನೂ ಪ್ರತಿಪಾದಿಸುವ ಒಂದು ವಿಧಾನ (ಅಲಿಗರಿ). ಅನ್ಯೋಕ್ತಿ ಕೃತಿಯಲ್ಲಿ ಒಂದು ಘಟನೆ, ಪ್ರಸಂಗ ಅಥವಾ ಕಥೆಯ ವರ್ಣನೆ ಪ್ರತಿಪಾದಿತವಾಗಿರುತ್ತದೆ. ಇದರ ಹಿಂದಿರುವ ಅಭಿಪ್ರಾಯಸರಣಿ ಅನ್ಯೋಕ್ತಿಯ ಇತರ ಹೆಸರುಗಳಾದ ಅನ್ಯಾರ್ಥ, ವ್ಯಾಜೋಕ್ತಿ, ಅರ್ಥಾಂತರೋಕ್ತಿ, ರೂಪಕಕಥೆ, ರಹಸ್ಯಾರ್ಥ, ಗೂಢಾರ್ಥದ್ಯೋತಕ ಎಂಬ ಮಾತುಗಳಿಂದಲೂ ಸ್ಪಷ್ಟವಾಗುತ್ತದೆ. ಪಾಶ್ಚಾತ್ಯಸಾಹಿತ್ಯದಲ್ಲಿ ಸಾಮಾನ್ಯವಾಗಿ ಅನ್ಯೋಕ್ತಿ ಒಂದು ಅಲಂಕಾರಪ್ರಭೇದವೆಂದು ಪರಿಗಣಿಸಲ್ಪಟ್ಟಿದೆ. ಅನ್ಯೋಕ್ತಿ ರಚನೆ ಬರೀ ಸಾಹಿತ್ಯದಲ್ಲೇ ಇರಬೇಕಾದುದಿಲ್ಲ.[] ಶಿಲ್ಪ, ಚಿತ್ರ ಮೊದಲಾದ ಅನುಕರಣಕಲೆಗಳಲ್ಲಿಯೂ ಇರಬಹುದು. ಅನ್ಯೋಕ್ತಿಗೂ ರೂಪಕಕ್ಕೂ ಕೆಲವು ವ್ಯತ್ಯಾಸಗಳಿವೆ. ಅನ್ಯೋಕ್ತಿಯಲ್ಲಿ ರೂಪಕಕ್ಕಿಂತ ಹೆಚ್ಚಿನ ವ್ಯಾಪಕತೆ ಇರುತ್ತದೆ. ಅಲ್ಲದೆ ಅದರಲ್ಲಿ ರೂಪಕದ ಎಲ್ಲ ಅಂಶಗಳನ್ನೂ ವಿವರವಾಗಿ ಪ್ರತಿಪಾದಿಸಲಾಗಿರುತ್ತದೆ. ಅನ್ಯೋಕ್ತಿಯಲ್ಲಿನ ಸಾದೃಶ್ಯ ನಮ್ಮ ಕಲ್ಪನಾಶಕ್ತಿಗೆ ಕೆಲಸ ಕೊಡುತ್ತದೆ. ರೂಪಕವಾದರೋ ನಮ್ಮ ವಿಚಾರಶಕ್ತಿಗೆ ಹೆಚ್ಚು ಅಪ್ಯಾಯಮಾನ. ನೀತಿಕಥೆ, ದೃಷ್ಟಾಂತಕಥೆಗಳು (ಸಾಮತಿ) ನಿರ್ದಿಷ್ಟವಾದ ನೀತಿಗಳನ್ನೊಳಗೊಂಡ ಚಿಕ್ಕ ಚಿಕ್ಕ ಅನ್ಯೋಕ್ತಿಗಳೇ ಆಗಿವೆ. ಈಸೋಪನ ನೀತಿಕಥೆಗಳು ಶ್ರೀರಾಮಕೃಷ್ಣಪರಮಹಂಸರ ಸಾಮತಿಗಳು ಈ ಗುಂಪಿಗೆ ಸೇರುತ್ತವೆ.

ಅನ್ಯೋಕ್ತಿ ಹೆಚ್ಚು ಕಡಿಮೆ ಎಲ್ಲ ದೇಶಗಳ ಎಲ್ಲಕಾಲದ ಜನಪ್ರಿಯ ಸಾಹಿತ್ಯ ಪ್ರಕಾರ. ಹಳೆಯ ಕಾಲದ ಹೀಬ್ರೂ ಗ್ರಂಥಗಳಲ್ಲಿ ನಮಗೆ ಇದರ ಉದಾಹರಣೆಗಳು ಧಾರಾಳವಾಗಿ ಸಿಕ್ಕುತ್ತವೆ. ಉದಾಹರಣೆಗಾಗಿ, ಹಳೆಯ ಒಡಂಬಡಿಕೆಯ (ಓಲ್ಡ್‍ಟೆಸ್ಟಮೆಂಟ್) ಎಂಬತ್ತನೆಯ ಸ್ತೋತ್ರದಲ್ಲಿ (ಸಾಮ್) ಇಸ್ರೇಲಿನ ಚರಿತ್ರೆಯನ್ನು ದ್ರಾಕ್ಷಿಬಳ್ಳಿಯ ಬೆಳೆವಣಿಗೆಯೊಡನೆ ಹಾಸುಹೊಕ್ಕಾಗಿ ಹೋಲಿಸುವ ಒಂದು ಸನ್ನಿವೇಶವಿದೆ. ಪಾಶ್ಚಾತ್ಯಪ್ರಾಚೀನ ಸಂಪ್ರದಾಯಿಕ ಸಾಹಿತ್ಯದಲ್ಲಿ (ಕ್ಲಾಸಿಕಲ್ ಲಿಟರೇಚರ್) ಕೂಡ ಉತ್ತಮ ಅನ್ಯೋಕ್ತಿ ನಿದರ್ಶನಗಳು ದೊರೆಯುತ್ತವೆ. ಪ್ಲ್ಯೂಟಾರ್ಕನ ಲೈಫ್ ಆಫ್ ಕೊರಿಯೊಲೀನಸ್‍ದಲ್ಲಿನ ಮೆನಿನಿಯಸ್ ಅಗ್ರಿಪ ತನ್ನ ಭಾಷಣದಲ್ಲಿ ಉದಾಹರಿಸುವ ಉದರ ಮತ್ತು ಅವಯವಗಳ ಕಥೆ ತುಂಬ ಪ್ರಸಿದ್ಧವಾದ ಅನ್ಯೋಕ್ತಿ. ಇದೇ ಕಥೆ ಷೇಕ್ಸ್‍ಪಿಯರ್ ನಾಟಕ ಕೊರಿಯೊಲೇನಸ್‍ದಲ್ಲೂ ಬರುತ್ತದೆ. ಇಂಗ್ಲಿಷ್‍ ಸಾಹಿತ್ಯದಲ್ಲಿ ಅನ್ಯೋಕ್ತಿ ಹೇರಳವಾಗಿ ಕಂಡುಬರುತ್ತದೆ. ಮಧ್ಯಯುಗದ ಯೂರೋಪಿನ ಸಾಹಿತಿಗಳು ಸ್ತ್ರೀಪುರುಷ ಪ್ರೇಮಕ್ಕೆ ಸಂಬಂಧಪಟ್ಟಂತೆ ಒಂದು ಅನ್ಯೋಕ್ತಿಪದ್ಧತಿಯನ್ನೇ ಬೆಳೆಸಿದ್ದಾರೆ. ಉದಾಹರಣೆ, ಪ್ರೆಂಚ್ ಭಾಷೆಯಿಂದ ಬಂದ ರೊಮನ್ಸ್ ಆಫ್ ದಿ ರೋಸ್, 16ನೆಯ ಶತಮಾನದ ಎಡ್‍ಮಂಡ್ ಸ್ಪೆನ್ಸರ್ ಕವಿಯ ಕ್ವೀನ್, 18ನೆಯ ಶತಮಾನದ ಜೊನಾಥನ್ ಸ್ಟಿಫ್ಟ್‍ನ ಟೇಲ್ ಆಫ್ ಎ ಟಬ್, ಜೋಸೆಫ್ ಅಡಿಸನ್ನನ ವಿಷನ್ ಆಫ್ ಮಿರ್ಜಾ ಎಂಬ ಪ್ರಬಂಧ - ಇವೆಲ್ಲ ಉತ್ತಮ ನಿದರ್ಶನಗಳು. ಇವೆಲ್ಲಕ್ಕಿಂತಲೂ ಅತ್ಯುತ್ತಮವಾದುದು 17ನೆಯ ಶತಮಾನಕ್ಕೆ ಸೇರಿದ ಜಾನ್ ಬನಿಯನ್ನನ ಪಿಲ್‍ಗ್ರಿಮ್ಸ್ ಪ್ರೋಗ್ರೆಸ್. ಈ ಗ್ರಂಥದಲ್ಲಿ ಹೆಚ್ಚುಕಡಿಮೆ ಸದ್ಗುಣ ದುರ್ಗುಣಗಳಿಗೆ ಮನುಷ್ಯತ್ವವನ್ನು ಆರೋಪಿಸಿ ಕಥೆಯನ್ನು ಹೆಣೆಯಲಾಗಿದೆ. ಇವುಗಳೊಂದಿಗೆ ಸ್ವಿಫ್ಟ್‍ನ ಗಲಿವರನ ಪ್ರವಾಸಗಳು, ಸ್ಯಾಮುಯಲ್ ಬಟ್ಲರನ ಎರಿನನ್ ಎಂಬ ಕಥೆಗಳನ್ನು ಅವುಗಳ ವಿಡಂಬನೆಗಾಗಿ ಪರಿಶೀಲಿಸಬಹುದು.

ರವೀಂದ್ರನಾಥ ಠಾಕೂರರ ಒಂದು ಕಥೆ ಹೀಗಿದೆ. ಒಂದು ಮರಕುಟಿಗನ ಹಕ್ಕಿ ಮತ್ತು ಒಂದು ಬಾತುಕೋಳಿ ಪ್ರಪಂಚವೀಕ್ಷಣಕ್ಕಾಗಿ ಹೊರಟವಂತೆ. ಕೆಲಕಾಲಾನಂತರ ಅವು ಪರಸ್ಪರ ಭೇಟಿಯಾಗಿ ಅಭಿಪ್ರಾಯ ವಿನಿಮಯಮಾಡಿಕೊಳ್ಳುವಾಗ ಮರಕುಟಿಗ, "ಪ್ರಪಂಚವೆಲ್ಲ ಕೀಟಮಯ, ರಂಧ್ರಮಯ" ಎಂದಿತಂತೆ. ಬಾತು, "ಪ್ರಪಂಚದಲ್ಲಿ ಎಲ್ಲಿ ನೋಡಿದರೂ ಚರಂಡಿ, ಕೊಳಚೆ, ಹುಳು, ಇಷ್ಟೆ" ಎಂದಿತಂತೆ. ದೃಷ್ಟಿಯ ದೋಷವನ್ನು ಈ ಕಥೆ ಚೆನ್ನಾಗಿ ವಿಡಂಬಿಸಿದೆ. ಠಾಕೂರರ ಸ್ಟ್ರೇ ಬರ್ಡ್ಸ್ ಎಂಬ ಕವನ ಸಂಕಲನದಲ್ಲಿ ಅನ್ಯೋಕ್ತಿಗೆ ವಿಪುಲ ಉದಾಹರಣೆಗಳಿವೆ.

ಆಧುನಿಕ ಯುಗದಲ್ಲಿ ಕೆಲವು ಅನ್ಯೋಕ್ತಿಕಾದಂಬರಿಗಳು ನಿರ್ಮಾಣಗೊಂಡಿವೆ. ಉದಾಹರಣೆಗೆ, ಜಾರ್ಜ್ ಅರ್‍ವೆಲ್ಲರ ಅನಿಮಲ್ ಫಾರಂ, ಅಲ್ಡಸ್ ಹಕ್ಸ್‍ಲಿಯ ಬ್ರೇವ್ ನ್ಯೂ ವಲ್ರ್ಡ್.

ಹಲವು ಸುಭಾಷಿತಗಳಲ್ಲಿ ಅನ್ಯೋಕ್ತಿ ಇದೆ. ಒಂದು ಸುಭಾಷಿತ ಹೀಗಿದೆ. “ರಾತ್ರಿ ಕಳೆಯುವುದು, ಸುಪ್ರಭಾತವಾಗುವುದು, ಸೂರ್ಯನು ಹುಟ್ಟುವನು, ತಾವರೆ ಅರಳುವುದು, ಎಂದು ತಾವರೆಯ ಮೊಗ್ಗಿನಲ್ಲಿ ಸಿಕ್ಕಿಕೊಂಡಿದ್ದ ದುಂಬಿ ಆಲೋಚಿಸುತ್ತಿರಲು, ಆನೆ ಬಂದು ತಾವರೆ ಗಿಡವನ್ನು ಕಿತ್ತೆಸೆಯಿತು. ಇಲ್ಲಿ ಕಷ್ಟದಲ್ಲಿ ಸಿಲುಕಿ ಒಳ್ಳೆಯ ಕಾಲದ ಆಸೆಯಿಂದ ಬದುಕುವವನಿಗೆ ವಿಧಿಯಿಂದ ಆಗುವ ಅಪಘಾತದ ಚಿತ್ರವಿದೆ. ಕನ್ನಡ ಕಾವ್ಯದಲ್ಲಿ ಒಂದು ಸೊಗಸಾದ ಅನ್ಯೋಕ್ತಿ ಕನಕದಾಸರ ರಾಮಧಾನ್ಯ ಚರಿತ್ರೆ ಕುಲಕುಲಕುಲ ಎನ್ನುತಿಹರು ಎಂಬ ಕೃತಿಯನ್ನು ರಚಿಸಿದ ಚಿಂತಿನಾರೀತಿಯೇ ಈ ಅನ್ಯೋಕ್ತಿಯನ್ನೂ ರೂಪಿಸಿದೆ. ಇದು ತನ್ನ ಹುಟ್ಟಿನ ಬಗ್ಗೆ ಹೆಮ್ಮೆ ಪಡುವ ಅಕ್ಕಿ ತನ್ನ ಸತ್ವದಿಂದ ಶೋಭಿಸುವ ರಾಗಿ ಇವುಗಳ ಕಥೆ. ಅಕ್ಕಿಗೆ ಸೋಲಾಗುತ್ತದೆ, ಕಥೆಯ ಆಶಯ ಸ್ಪಷ್ಟವಾಗಿದೆ. ಆಧುನಿಕ ಕಾಲದಲ್ಲಿ ಜಾರ್ಜ್ ಆರ್ವೆಲ್ ಬರೆದ “ಅನಿಮಲ್ ಫಾರಂ” ಪ್ರಸಿದ್ಧ ಅನ್ಯೋಕ್ತಿ ಇದರಲ್ಲಿ ರಾಜಕೀಯ ಆಶಯವಿದೆ. ಇದು ಸರ್ವಾಧಿಕಾರವನ್ನು ವಿಡಂಬನೆ ಮಾಡುವ ಕೃತಿ. ಎಲ್ಲರೂ ಸಮಾನರು. ಆದರೆ ಕೆಲವರು ಹೆಚ್ಚು ಸಮಾನರು. ಎನ್ನುವ ಪ್ರಸಿದ್ಧ ವಿಡಂಬನಾ ವಾದವನ್ನು ಈ ಕೃತಿಯಲ್ಲಿ ಅವನು ಟಂಕಿಸಿದ.

ಉಲ್ಲೇಖ

[ಬದಲಾಯಿಸಿ]
  1. Stephen A. Barney (1989). "Allegory". Dictionary of the Middle Ages. vol. 1. ISBN 0-684-16760-3
  2. "allegory | Etymology of allegory by etymonline". www.etymonline.com (in ಇಂಗ್ಲಿಷ್).
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: