ಅನೇಕದೇವತಾವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನೇಕದೇವತಾವಾದ ಎಂದರೆ ಬಹಳ ಮಂದಿ ದೇವರುಗಳನ್ನು ನಂಬುವ ವಾದ.

ಹಿನ್ನೆಲೆ[ಬದಲಾಯಿಸಿ]

ಮಾನವ ಮೊಟ್ಟಮೊದಲು ಯಾವುದೋ ಒಂದು ಅವ್ಯಕ್ತವಾದ ಶಕ್ತಿಯ ಪ್ರಭಾವ ತನ್ನ ಮೇಲಿರುವುದನ್ನು ಗುರುತಿಸಿ ಆ ಶಕ್ತಿ ತನ್ನನ್ನು ಮೀರಿದುದೆಂದೂ ಅದು ಪ್ರಕೃತಿಯ ಅದ್ಭುತಶಕ್ತಿಗಳ ರೂಪಗಳನ್ನು ತಾಳಿರುವುದೆಂದೂ ಭಾವಿಸಿರಬೇಕೆಂದು ಮತಧರ್ಮಗಳ ವಿಕಾಸವನ್ನು ಅಧ್ಯಯನ ಮಾಡಿದ ಮಾನವ ಶಾಸ್ತ್ರಜ್ಞರು ನಿರೂಪಿಸುತ್ತಾರೆ. ಈ ರೀತಿಯ ಪ್ರಕೃತಿಪೂಜೆಯೇ ಅನೇಕದೇವತಾವಾದಕ್ಕೆ ಕಾರಣವಾಯಿತೆಂದು ಹೇಳಬಹುದು. ಒಂದೊಂದು ದೇವತೆಯೂ ಒಂದೊಂದು ಶಕ್ತಿಯ ಆದಿದೇವತೆಯ ಭಾವನೆಯಿಂದ ಉದಯವಾಯಿತು. ಹೀಗೆ ಸೂರ್ಯ, ಅಗ್ನಿ, ವರುಣ, ವಾಯು, ಈ ದೇವತೆಗಳನ್ನು ಪ್ರಾಚೀನ ಮಾನವ ಆರಾಧಿಸತೊಡಗಿದ. ದೇವತೆಗಳು ಆಯಾ ಜೀವನಮಟ್ಟದ ಅವಶ್ಯಕತೆಗಳಿಗನುಸಾರವಾಗಿ ಪ್ರಾಧಾನ್ಯವನ್ನು ಪಡೆದರು. ಆರ್ಯರ ಕೃಷಿಕ ಸಮಾಜದಲ್ಲಿ ಮಳೆಬೆಳೆಗಳಿಗೆ ಕಾರಣನಾದ ಇಂದ್ರನಿಗೂ, ಪರ್ಜನ್ಯದೇವತೆಯಾದ ವರುಣನಿಗೂ ಪ್ರಾಶಸ್ತ್ಯವಿತ್ತು. ಹೀಗೆಯೆ ಪ್ರಾಚೀನ ಗ್ರೀಸ್ ದೇಶದಲ್ಲೂ ರೋಮಿನಲ್ಲೂ ಇಂಥ ಅನೇಕ ದೇವತೆಗಳ ಆರಾಧನೆ ಇತ್ತು. ಹೋಮರ್ ತನ್ನ ಮಹಾಕಾವ್ಯದಲ್ಲಿ ಅನೇಕ ದೇವತೆಗಳನ್ನು ಹೆಸರಿಸಿದ್ದಾನಲ್ಲದೆ ಅವರ ಅಭ್ಯಾಸಗಳನ್ನು ಚಿತ್ರಿಸಿದ್ದಾನೆ.[೧]

ನಂಬಿಕೆ ಮತ್ತು ಅನೇಕದೇವತಾವಾದ[ಬದಲಾಯಿಸಿ]

ಪ್ರಾಚೀನ ಮಾನವ ಗುಂಪುಗಳನ್ನು ಕಟ್ಟಿಕೊಂಡು ಕಾಡುಮೇಡುಗಳಲ್ಲಿ ವಾಸಿಸುತ್ತಿದ್ದುದರಿಂದ ಪ್ರಕೃತಿಯ ಕೈಗೊಂಬೆಯಾಗಿದ್ದ. ಆಹಾರವನ್ನೊದಗಿಸಿಕೊಳ್ಳವುದೇ ದುಸ್ತರವಾಗಿದ್ದುದರಿಂದ ಆಹಾರವನ್ನು ನೀಡುವ ಪ್ರಕೃತಿಯನ್ನು ಬಗೆಬಗೆಯಾಗಿ ಆರಾಧಿಸುತ್ತಿದ್ದ. ಮಂತ್ರತಂತ್ರಗಳಿಂದ ಪ್ರಕೃತಿಯನ್ನು ಒಲಿಸಿಕೊಳ್ಳಬಹುದೆಂದು ತಿಳಿದಿದ್ದ. ಅವನ ಮತಧರ್ಮಕ್ಕೂ ಮಾಟಮಂತ್ರಗಳಿಗೂ ಹೆಚ್ಚು ವ್ಯತ್ಯಾಸವಿರಲಿಲ್ಲ. ಅವನ ಸುತ್ತಮುತ್ತ ಅಪಾಯಕರವಾದ ದುಷ್ಟಶಕ್ತಿಗಳು (ಭೂತ ಪ್ರೇತಗಳು) ಇರಬಹುದೆಂಬ ಭಯದಲ್ಲಿ ಸಿಲುಕಿ, ರೋಗರುಜಿನಗಳು ಅವುಗಳಿಂದಲೇ ಸಂಭವಿಸುವುದೆಂದು ನಂಬಿದ್ದ. ಈ ನಂಬಿಕೆಯಿಂದಾಗಿ ಆ ದೇವತೆಗಳನ್ನು ವಿಧವಿಧವಾಗಿ ಆರಾಧಿಸುತ್ತಿದ್ದ. ಆದರೆ ಪ್ರಕೃತಿಯ ಶಕ್ತಿಗಳಿಗೆ ನಿರ್ದಿಷ್ಟವಾದ ನಾಮರೂಪಗಳನ್ನು ಕೊಟ್ಟು ಅರಿತುಕೊಳ್ಳುವಷ್ಟು ಬುದ್ಧಿಶಕ್ತಿ ಅವನಲ್ಲಿ ಬೆಳೆದಿರಲಿಲ್ಲ. ಪ್ರಾಣಿ-ಪಶು, ಜಡ, ಚೇತನ, ಜೀವಂತ ನಿರ್ಜೀವ ಇವುಗಳಿಗೆ ವ್ಯತ್ಯಾಸವನ್ನು ಅರಿಯದೆ ವಿಚಿತ್ರ ಭಾವನೆಗಳಿಂದ ವಿಚಿತ್ರದೇವತೆಗಳನ್ನು ಪಶು, ಪ್ರಾಣಿ, ವೃಕ್ಷ ಮುಂತಾದ ರೂಪಗಳಲ್ಲಿ ಕಂಡು ಆರಾಧಿಸುತ್ತಿದ್ದ. ತಮ್ಮ ಗುಂಪಿನವರು ಬದುಕಿದರೆ ಸಾಕು ಎಂಬ ಒಂದು ವಿಧವಾದ ಸ್ವಾರ್ಥ ಅನಾಗರಿಕ ಜನರಲ್ಲಿ ಎದ್ದು ತೋರುತ್ತಿತ್ತು. ಇತರ ಗುಂಪಿನವರನ್ನೂ ಅವರ ಆರಾಧ್ಯದೇವತೆಗಳನ್ನೂ ತಮ್ಮ ಶತ್ರುಗಳೆಂದು ತಿಳಿದಿದ್ದರು. ಪ್ರತಿ ಗುಂಪಿಗೂ ಅವರದೇ ಆದ ಸ್ಥಳೀಯದೇವತೆಗಳಿದ್ದುವು. ಸಮಾನ ದೇವತೆಗಳನ್ನು ಆರಾಧಿಸುವವರು ಸ್ನೇಹಭಾವದಿಂದ ಒಗ್ಗಟ್ಟಾಗಿರುತ್ತಿದ್ದರು. ದೇವತೆಗಳು ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಡುವರೆಂಬ ನಂಬಿಕೆ ಇತ್ತು. ಸಂಕಷ್ಟಗಳಿಗೆ ಸಿಕ್ಕಿದಾಗ ದೇವತೆಗಳನ್ನು ವಿಶೇಷರೀತಿಯಲ್ಲಿ ಆರಾಧಿಸುತ್ತಿದ್ದರು. ಪ್ರಾಚೀನ ಅನಾಗರಿಕರಲ್ಲಿ ನರಬಲಿ, ಪಶುಬಲಿಗಳು ದೇವತಾರಾಧನೆಯ ಅಂಗವಾಗಿದ್ದುವು. ಮಾನವನ ಪಶುತ್ವ ಕಡಿಮೆಯಾದಂತೆಲ್ಲ ನರಬಲಿ ನಿಂತು, ಪಶುಬಲಿ ಮಾತ್ರ ರೂಢಿಯಲ್ಲಿತ್ತು. ಇದನ್ನು ವೇದಗಳಕಾಲದಲ್ಲಿಯೂ ಕಾಣುತ್ತೇವೆ. ಬುದ್ಧ ವೈದಿಕಮತವನ್ನು ಕಟುವಾಗಿ ಖಂಡಿಸಿದ್ದು ವೇದಕಾಲದ ಆರ್ಯರು ಯಜ್ಞಯಾಗಾದಿಗಳಲ್ಲಿ ನಡೆಸುತ್ತಿದ್ದ ಪ್ರಾಣಿಹಿಂಸೆಯನ್ನು ಕಂಡೇ.[೨]

ಆಡಳಿತ ಮತ್ತು ಅನೇಕದೇವತಾವಾದ[ಬದಲಾಯಿಸಿ]

ರಾಜ್ಯಗಳನ್ನು ಕಟ್ಟಿದ ಮೇಲೆ ಪ್ರಾಚೀನಮಾನವನ ಅನೇಕದೇವತಾವಾದ ಒಂದು ನಿರ್ದಿಷ್ಟರೂಪವನ್ನು ತಾಳಿತು. ಅವನ ಧಾರ್ಮಿಕ ಪ್ರವೃತ್ತಿ ಬೆಳೆಯುತ್ತ ಹೋದಂತೆ ದೇವತೆಗಳಲ್ಲಿ ಧಾರ್ಮಿಕ ಮತ್ತು ನೈತಿಕ ಗುಣಗಳನ್ನು ಕಂಡುಕೊಂಡು ಅವರಿಗೆ ಒಂದು ಗೌರವ ಸ್ಥಾನವನ್ನು ಕಲ್ಪಿಸಿದ. ರಾಜನಿಗಿರುವಂತೆ ದೇವತೆಗಳಿಗೂ ಸಾಮಾನ್ಯರಿಗಿಂತ ಮಿಗಿಲಾದ ಸ್ಥಾನಮಾನಗಳುಂಟೆಂದೂ ಅವರಲೋಕ ಭೂಲೋಕಕ್ಕಿಂತ ಉನ್ನತಸ್ಥಾನದಲ್ಲಿದೆಯೆಂದೂ ಭಾವಿಸಿದ. ರಾಜ್ಯಾಡಳಿತದಲ್ಲಿ ಅಧಿಕಾರದರ್ಜೆಯ ವಿಭಾಗಗಳಿರುವಂತೆ ದೇವತೆಗಳಲ್ಲೂ ಉಂಟೆಂಬ ಭಾವನೆ ಬೆಳೆಯಿತು. ಅವರಿಗೆ ನ್ಯಾಯಾಧೀಶರ ಸ್ಥಾನವನ್ನು ಕೊಡಲಾಯಿತು. ಜೀವನ ವಿಸ್ತರಿಸಿದಂತೆ ದೇವತೆಗಳ ಕಾರ್ಯವ್ಯಾಪ್ತಿಯೂ ವಿಸ್ತರಿಸಿತು. ಮಾನವನ ವ್ಯಕ್ತಿತ್ವವೂ ನಿರ್ದಿಷ್ಟವಾಯಿತು. ತನಗೂ ದೇವತೆಗಳಿಗೂ ನಿಕಟವಾದ ವೈಯಕ್ತಿಕ ಸಂಬಂಧವನ್ನು ನಾಗರಿಕಮಾನವ ಕಲ್ಪಿಸಿಕೊಂಡ. ದೇವತೆಗಳ ಬಗ್ಗೆ ಅವನಲ್ಲಿದ್ದ ಅಶ್ಲೀಲಭಾವನೆಗಳು ಹೋಗಿ ಸದ್ಭಾವನೆ ಬೆಳೆಯಿತು. ದೇವತೆಗಳು ಗುಪ್ತಸ್ಥಾನದಲ್ಲಿ ಅಡಗಿಕೊಂಡಿರುವರೆಂಬ ಅಭಿಪ್ರಾಯ ಹೋಗಿ ಅವರು ಮಾನವನ ಧಾರ್ಮಿಕಕಾರ್ಯಗಳನ್ನು ಪ್ರಚೋದಿಸುವ ಶಕ್ತಿಗಳೆಂಬ ಭಾವನೆ ಬೆಳೆಯಿತು. ದೇವತೆಗಳನ್ನು ಪ್ರಕೃತಿ ಸಂಬಂಧದಿಂದ ಬಿಡುಗಡೆ ಮಾಡಿ ಅವರಿಗೆ ಪ್ರತ್ಯೇಕವಾದ ವ್ಯಕ್ತಿತ್ವವನ್ನು ಕಲ್ಪಿಸಲಾಯಿತು. ಆರ್ಯರು ಇಂದ್ರನೂ ಪ್ರಥ್ವಿಯೂ ಗ್ರೀಕರ ಔರೇನಾಸ್, ಗಾಇಯಾ ಎಂಬ ದೇವತೆಗಳೂ, ಈಜಿಪ್ಟಿಯನ್ನರ ಕೆಬ್ ಮತ್ತು ನಟ್ ಎಂಬ ದೇವತೆಗಳೂ (ಪ್ರಕೃತಿಯ ಪ್ರತಿನಿಧಿಗಳಾಗಿದ್ದವರು) ಮರೆಯಾದರು. ಪರ್ಜನ್ಯದೇವತೆಯಾದ ವರುಣನಿಗೆ ಕ್ರಮೇಣ ನೈತಿಕಗುಣಗಳನ್ನು ಆರೋಪಿಸಿ ಧರ್ಮದೇವತೆಯೆಂದು ಪ್ರಾರ್ಥಿಸತೊಡಗಿದರು. ಗ್ರೀಕರ ಅಪೋಲೋ ದೇವತೆಯನ್ನು ಹೀಗೆ ವಿವಿಧ ರೀತಿಯಲ್ಲಿ ಜೀವನದ ಮೇಲೆ ಪ್ರಭಾವವನ್ನು ಬೀರುವ ಮುಖ್ಯದೇವತೆಯೆಂದು ಪರಿಗಣಿಸಲಾಯಿತು. ಈಜಿಪ್ಟಿಯನ್ನರೂ, ಪ್ರಾಚೀನರೂ ರೋಮನರೂ ತಮ್ಮ ಪ್ರಕೃತಿದೇವತೆಗಳನ್ನು ಉಚ್ಛಸ್ಥಾನಕ್ಕೇರಿಸಿದರು.[೩]

ತತ್ತ್ವಪ್ರತಿಪಾದನೆ[ಬದಲಾಯಿಸಿ]

ಪ್ರಾಚೀನಮಾನವ ದೇವತೆಗಳನ್ನು ಆರೋಗ್ಯ, ಆಹಾರ ಇಂಥ ಅಲ್ಪ ಲಾಭಗಳಿಗಾಗಿಯೇ ಪ್ರಾರ್ಥಿಸುತ್ತಿದ್ದ. ಅವನ ಮನದಲ್ಲಿ ಉಚ್ಛಭಾವನೆಗಳು ಮೂಡುವುದಕ್ಕೆ ಅವಕಾಶವಿರಲಿಲ್ಲ. ಶತ್ರುನಾಶಕ್ಕಾಗಿ ಮತ್ತು ತನ್ನ ದೈನಂದಿನ ಅವಶ್ಯಕತೆಗಳ ಪೂರೈಕೆಗಾಗಿ ಅವನು ಪ್ರಾರ್ಥಿಸುತ್ತಿದ್ದ. ಆದರೆ ಅನೇಕದೇವತಾವಾದ ಹೆಚ್ಚು ನಿರ್ದಿಷ್ಟವಾಗಿ ಧಾರ್ಮಿಕ ವ್ಯಕ್ತಿತ್ವವನ್ನು ಕಲ್ಪಸಿದ ಮೇಲೆ ಪ್ರಾರ್ಥನಾರೀತಿಯಲ್ಲೂ ಬದಲಾವಣೆಯಾಯಿತು. ಸುಸಂಸ್ಕøತ ಮಾನವ ಪ್ರಾರ್ಥನೆಯಲ್ಲಿ ತನ್ನ ಧಾರ್ಮಿಕ ಪ್ರವೃತ್ತಿ ಬೆಳೆಯಲೆಂದು ದೇವರನ್ನು ಕೇಳಿಕೊಳ್ಳುತ್ತಾನೆ. ಜ್ಞಾನವನ್ನೂ ಮಾಯೆಯಿಂದ ಬಿಡುಗಡೆಯನ್ನೂ ಬೇಡುತ್ತಾನೆ. ವೇದಗಳ ಕಾಲದ ಐಹಿಕ ಸುಖದ ಪ್ರಾಧಾನ್ಯ ಉಪನಿಷತ್ತುಗಳ ಕಾಲಕ್ಕೆ ಕಡಿಮೆಯಾಗಿ ಜ್ಞಾನ ವೈರಾಗ್ಯ ಮುಕ್ತಿಗಳ ಭಾವನೆ ಬೆಳೆದಿರುವುದನ್ನು ಉಪನಿಷತ್ತುಗಳಲ್ಲಿ ಬರುವ ಪ್ರಾರ್ಥನೆಗಳಲ್ಲಿ ಕಾಣಬಹುದು:

ಅಸತೋ ಮಾ ಸದ್ಗಮಯ ತಮಸೋ ಮಾ ಜೋತಿರ್ಗಮಯ ಮೃತ್ಯೋರ್ಮಾ ಅಮೃತಂ ಗಮಯ ಓಂ ಶಾಂತಿಃ ಶಾಂತಿಃ ಶಾಂತಿಃ

ಮಾನವ ತನ್ನ ಆತ್ಮೋದ್ಧಾರವನ್ನು ಮಾತ್ರವಲ್ಲದೆ ಇಡೀ ಮಾನವಕುಲಕ್ಕೆ ಶಾಂತಿಯನ್ನೂ ಬೇಡುತ್ತಾನೆ. ಅನೇಕದೇವಾಲಯದಲ್ಲಿ ದೇವಾಲಯಗಳಿಗೂ ಮೂರ್ತಿಪೂಜೆಯೂ ಪರೋಹಿತವರ್ಗಕ್ಕೂ ಧ್ಯಾನಕ್ಕಿಂತ ಹೆಚ್ಚು ಪ್ರಾಶಸ್ತ್ಯವನ್ನು ಕೊಡಲಾಗಿದೆ.

ಅನೇಕದೇವತಾವಾದ ಕ್ರಮೇಣ ಏಕದೇವತಾವಾದದ ಕಡೆಗೆ ಮಾನವನನ್ನು ಕೊಂಡೊಯ್ದಿತು. ಗುಂಪುಗಳು ಒಟ್ಟುಗೂಡಿಕೊಂಡು ರಾಜ್ಯಗಳು ಉದಯಿಸಿದುವು. ಆಗ ಅನೇಕ ದೇವತೆಗಳನ್ನು ತಾರತಮ್ಯ ಭಾವನೆಯಿಂದ ವಿಂಗಡಿಸಲಾಯಿತು. ಪ್ರಬಲವಾದ ಗುಂಪುಗಳ ದೇವತೆಗಳು ಪ್ರಾಧಾನ್ಯ ಪಡೆದು ಪರಾಜಿತರಾದವರ ದೇವತೆಗಳು ಅಧೀನ ಸ್ಥಾನಗಳಲ್ಲಿಡಲ್ಪಟ್ಟರು.

ದೇವತೆಗಳಲ್ಲಿ ಶ್ರೇಣಿಗಳು[ಬದಲಾಯಿಸಿ]

ಮಾನವರಲ್ಲಿ ಅಂತಸ್ತುಗಳಾದಂತೆ ದೇವತೆಗಳನ್ನು ಒಂದು ತಾರತಮ್ಯಕ್ರಮದಲ್ಲಿ ಇರಿಸಿದರು. ಕುಟುಂಬದಲ್ಲಿ ತಂದೆಗೂ ರಾಜ್ಯದಲ್ಲಿ ಪ್ರಭುವಿಗೂ ಇರುವ ಸ್ಥಾನವನ್ನೇ ದೇವತೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ದೇವತೆಗೆ ಕೊಡಲಾಯಿತು. ರೋಮನ್ನರು ಜೋಪಿಟರ್ ಎಂಬ ದೇವತೆಗೆ ರಾಜ್ಯರಕ್ಷಣೆಯ ಭಾರವನ್ನು ವಹಿಸಿದರು. ಆರ್ಯರು ಇಂದ್ರನನ್ನು ಯಜ್ಞಯಾಗಾದಿಗಳ ಅದಿದೇವತೆಯನ್ನಾಗಿ ಮಾಡಿದ್ದರು. (ಆದರೆ ಉಪನಿಷತ್ತುಗಳು ಪರಬ್ರಹ್ಮನ ಸ್ವರೂಪವನ್ನು ಕುರಿತು ತತ್ತ್ವಪ್ರತಿಪಾದನೆ ಮಾಡಿದುವು). ಚಿಕ್ಕಪುಟ್ಟ ದೇವತೆಗಳನ್ನು ಕೈಬಿಡಲಾಯಿತು. ಈಜಿಪ್ಟಿನವರು ಅಮನ್‍ರಾ ಎಂಬ ದೇವತೆಯನ್ನು ದೇವತೆಗಳ ಒಡೆಯನೆಂದು ಭಾವಿಸಿದರು. ಹೀಗೆಯೇ ಹೀಬ್ರಗಳಲ್ಲಿ ಜಹೋವನಿಗೆ, ಚೀನದಲ್ಲಿ ಟೇಯೋಗೆ ಅತ್ಯುನ್ನತವಾದ ಪದವಿಯನ್ನು ಕೊಡಲಾಯಿತು. ಇವರನ್ನು ಸರ್ವೇಶ್ವರನೆಂದು ಭಾವಿಸಿದರು. ಉಳಿದ ದೇವತೆಗಳನ್ನು ಅವರ ಸೇವಕರೆಂದು ತಿಳಿಸಿದರು. ಗ್ರೀಸಿನಲ್ಲಿ ಜûೂಸ್ ಎಂಬ ದೇವತೆಯೆ ದೇವತೆಗಳಿಗೆ ಪ್ರಭುವಾದ. ಮಾನವನ ಆಧ್ಯಾತ್ಮಿಕ ನೈತಿಕ ಸಾಧನೆ ಮುಂದುವರಿದಂತೆ, ಮಾನವಕುಲಕ್ಕೆಲ್ಲ ಒಬ್ಬನೇ ತಂದೆ ಮತ್ತು ವಿಶ್ವಕ್ಕೆಲ್ಲ ಒಬ್ಬನೇ ಕರ್ತೃ ಮತ್ತು ಪಾಲಕ ಎಂಬ ಭಾವನೆ ಬೆಳೆಯಿತು.[೪]

ಹೀಗೆ ಅನೇಕದೇವತಾವಾದ ಮಾನವನ ಆಧ್ಯಾತ್ಮಿಕ ಬೆಳೆವಣಿಗೆಗೆ ಹೊಂದದೆ ಏಕದೇವತಾವಾದ ಎಲ್ಲ ಮುಖ್ಯವಾದ ಮತಧರ್ಮಗಳಲ್ಲೂ ಸ್ಪಷ್ಟವಾದ ರೂಪತಾಳಿತು. ಅನೇಕದೇವತಾವಾದ ಆಚರಣೆಯಲ್ಲಿದ್ದರೂ ಮಾನವ ಕ್ರಮೇಣ ವಿಶ್ವದ ಏಕತ್ವವನ್ನು ಅರಿಯುತ್ತ ಬಂದ. ಎಲ್ಲರಿಗೂ ಬೆಳಕನ್ನು ನೀಡುವವನು ಒಬ್ಬನೇ ಸೂರ್ಯ, ಪ್ರಕೃತಿಯಲ್ಲಿ ಒಂದೇ ಸ್ವಭಾವವಿದೆ. ಎಲ್ಲ ವಿವಿಧಶಕ್ತಿಗಳೂ ಅದರ ವಿವಿಧ ಅಂಗಗಳು ಎಂಬ ಅರಿವು ಉಂಟಾದುದೂ ಏಕದೇವತಾವಾದ ಅಂದರೆ ವಿಶ್ವಕ್ಕೆಲ್ಲಾ ಒಬ್ಬನೇ ಒಡೆಯ ಎಂಬ ತತ್ತ್ವದ ಪ್ರತಿಪಾದನೆಗೆ ಮುಖ್ಯ ಕಾರಣವಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. http://www.lightplanet.com/response/answers/gods.htm
  2. https://writingexplained.org/more-than-or-more-then-difference
  3. https://www.perseus.tufts.edu/hopper/text?doc=Paus.+2.31.2&fromdoc=Perseus%3Atext%3A1999.01.0160
  4. "ಆರ್ಕೈವ್ ನಕಲು". Archived from the original on 2016-03-03. Retrieved 2020-01-11.