ಅಡುಗೆ ಬಡ್ತಿಯರು
ಅಡುಗೆ ಮಾಡುವುದೂ ಒಂದು ಕಲೆ.ಇದಕ್ಕೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಇದೆ. ಹಿಂದಿನ ಕಾಲದಲ್ಲಿ ಪುರುಷರು ಮಾತ್ರ ಸಂಪಾದನೆ ಅಥವಾ ಸೇವಾಮನೋಭಾವದಿಂದ ಬೇರೆಯವರ ಮನೆ ಅಥವಾ ಸಭೆ ಸಮಾರಂಭಗಳಲ್ಲಿ ಅಡುಗೆ ಮಾಡುತ್ತಿದ್ದರು. ಇಂಥವರನ್ನು ಅಡುಗೆ ಬಟ್ಟರೆಂದು ಕರೆಯುತ್ತಿದ್ದರು. ಈಗ ಬದಲಾದ ಕಾಲಘಟ್ಟದಲ್ಲಿ ಪುರುಷಂತೆ ಮಹಿಳೆಯರೂ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದಾರೆ, ಅಡುಗೆಯನ್ನೂ ಮಾಡುತ್ತಿದ್ದಾರೆ. ಇಂಥವರನ್ನು ಅಡುಗೆ ಬಡ್ತಿಯರು ಎಂದೇ ಕರೆಯುತ್ತಾರೆ. ಅಡುಗೆ ಮಾಡುವುದು ಈಗ ಸ್ವಲ್ಪ ಸಂಕೀರ್ಣವಾಗುತ್ತಿದೆ. ಹಿಂದಿನಂತೆ ಸರಳವೂ ಅಲ್ಲ, ಸುಲಭವೂ ಅಲ್ಲ. ಹಾಗಾಗಿ ಪ್ರತಿ ಮನೆಯ ಮತ್ತು ಸಂದರ್ಭದ ಅಭಿರುಚಿ ಮತ್ತು ಔಚಿತ್ಯವನ್ನು ಅರಿತೇ ಅಡುಗೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಯಶಸ್ವಿಯಾದವರು ಇಂದಿನ ಪೈಪೋಟಿ ಯುಗದಲ್ಲಿ ತೇರ್ಗಡೆಯಾಗುತ್ತಾರೆ. ಕನ್ನಡದ ಸುಪ್ರಸಿದ್ಧ ಕವಿ ಅಡಿಗರು ಹೇಳಿರುವಂತೆ " ಜಾತಕರ್ಮದಿಂದ ಅಪರಕರ್ಮದ" ತನಕ ಈ ಅಡುಗೆ ಬಡ್ತಿಯರ ಆವಶ್ಯಕತೆ ಇದ್ದೇ ಇದೆ. ಸಮಾರಂಭದ ಗಾತ್ರ, ಸಮಯ ಮತ್ತು ಔಚಿತ್ಯವರಿತು ಕೆಲಸ ಮಾಡಬೇಕಾಗುತ್ತದೆ.ತುಂಬ ದುಬಾರಿ ಕಾಲವಾಗಿರುವದರಿಂದ ಮಿತವ್ಯಯದ ಮೇಲೂ ಗಮನ ಕೊಡಬೇಕಾಗುತ್ತದೆ.