ವಿಷಯಕ್ಕೆ ಹೋಗು

ಅಕಾಲಿ ಚಳವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿಕ್ಖರ ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಯಾದ ಶಿರೋಮಣಿ ಅಕಾಲಿ ದಳ ಸಿಕ್ಖರಿಗಾಗಿ ಪಂಜಾಬಿನಲ್ಲಿ ಪ್ರತ್ಯೇಕ ಸಿಕ್ಖ್ ರಾಜ್ಯಕ್ಕಾಗಿ ಹೋರಾಡಲು ಸ್ಥಾಪಿತವಾದ ಸಂಸ್ಥೆ. ಸಿಕ್ಖರ ಹಕ್ಕುಬಾಧ್ಯತೆಗಳನ್ನು ಕಾಪಾಡುವುದೇ ಇದರ ಮುಖ್ಯ ಧ್ಯೇಯ. ಈ ಸಂಸ್ಥೆ ಕಾಲಾನುಕ್ರಮದಲ್ಲಿ ಪಂಜಾಬಿ ಭಾಷೆಯ ಆಧಾರದ ಮೇಲೆ ಪ್ರತ್ಯೇಕ ರಾಜ್ಯಸ್ಥಾಪನೆಗೆ ಬೇಡಿಕೆಯನ್ನೊಡ್ಡಿತು. ಅಕಾಲಿದಳ ರಾಜಕೀಯ ಪಕ್ಷ ವ್ಯವಹಾರದಲ್ಲಿ ಇಂದಿಗೂ ಕಾರ್ಯಾಚರಣೆಯಲ್ಲಿದೆ. ಈ ಆಂದೋಲನ ಗುರುದ್ವಾರ ಸುಧಾರಣ ಚಳುವಳಿಯ ರೂಪದಲ್ಲಿ ಪ್ರಾರಂಭವಾಗಿ ಅದಕ್ಕೆ ಮುಂಚೆ ಇದ್ದ ರಾಜಕೀಯ ಸಿಂಗ್ ಸಭಾಪಕ್ಷವನ್ನು ಹಿಂದೂಡಿತು. ಸಿಕ್ಖ್ ಧರ್ಮದಲ್ಲಿ ಧಾರ್ಮಿಕ ಮತ್ತು ರಾಜಕೀಯ ತತ್ತ್ವಗಳು ಒಂದನ್ನೊಂದು ಅವಲಂಬಿಸಿರುವುದೆಂದೂ ಸಿಕ್ಖರು ಪ್ರತ್ಯೇಕವಾದ ಜನಾಂಗವೆಂದೂ ತೋರಿಸುವುದೇ ಇದರ ಮುಖ್ಯ ಉದ್ದೇಶ.ಈ ಚಳವಳಿಯ ಉಗಮ 1920ರ ಗುರುದ್ವಾರ ಸುಧಾರಣಾ ಚಳವಳಿಯ ಕಾಲಕ್ಕೆ ಹೋಗುತ್ತದೆ. ಪ್ರಾರಂಭದಲ್ಲಿ ಇದು ಭಾಗಶಃ ಒಂದು ಸೈನಿಕಸಂಸ್ಥೆಯಾಗಿದ್ದು ಅಕಾಲಿದಳ ಎಂಬ ಹೆಸರನ್ನು ಪಡೆಯಿತು. ಈ ಸಂಸ್ಥೆಯ ಇತಿಹಾಸ ಅದರ ಶ್ರೇಷ್ಠನಾಯಕನಾದ ಯಜಮಾನ ತಾರಾಸಿಂಗನ ರಾಜಕೀಯ ಜೀವನದೊಂದಿಗೆ ಬೆಸೆದಿತ್ತು.[]

ಅಕಾಲಿದಳ

[ಬದಲಾಯಿಸಿ]

ಅಮೃತಸರದಲ್ಲಿರುವ ಸುವರ್ಣದೇವಾಲಯ ಅಕಾಲಿದಳದ ಕಾರ್ಯಚಟುವಟಿಕೆಗಳ ಕೇಂದ್ರಸ್ಥಾನವಾಗಿದೆ. ಇದನ್ನು ಸಿಕ್ಖರ ಮೆಕ್ಕ ಎಂದು ಕರೆಯುತ್ತಾರೆ. ಅಕಾಲಿದಳದ ಸದಸ್ಯತ್ವ ಸಿಕ್ಖ ಜನಾಂಗಕ್ಕೆ ಮಾತ್ರ ಸೀಮಿತವಾಗಿದೆ. ದಳದ ಮೇಲ್ವಿಚಾರಣೆಗಾಗಿ ಒಬ್ಬ ಅಧ್ಯಕ್ಷನಿರುವನು. 1930ರಿಂದಲೂ ಯಜಮಾನ ತಾರಾಸಿಂಗನು ತಾನು 1988ರಲ್ಲಿ ಸಾಯುವತನಕ ಈ ದಳದ ಅಧ್ಯಕ್ಷನಾಗಿದ್ದ.ಅಕಾಲಿದಳ ಪಂಜಾಬಿ ಸುಭಾ ಸ್ಥಾಪನೆಯ ಹೋರಾಟಕಾಲದಲ್ಲಿ ಅನೇಕ ದೊಡ್ಡ ದೊಡ್ಡ ಹಣಕಾಸಿನ ಸಂಸ್ಥೆಗಳಿಂದ ಸಹಾಯವನ್ನು ಪಡೆಯುತ್ತಿತ್ತು. ರಾಜಕೀಯ ಹೋರಾಟ, ಕ್ರಮೇಣ ಆಕ್ರಮಣ ನೀತಿ ಮತ್ತು ಚಳವಳಿಗಳು ಇದರ ಗುರಿ ಸಾಧನೆಯ ಮಾರ್ಗಗಳಾದವು. ಇಂಥ ಚಳವಳಿಗಳಲ್ಲಿ ಪಂಜಾಬಿ ಸುಭಾ ಸ್ಥಾಪನೆಯಾಗಿ 1955 ಮತ್ತು 1960-61ರಲ್ಲಿ ಮಾಡಿದ ಘೋಷಣೆಗಳು ಬಹು ಮುಖ್ಯವಾದುವು. ಅಕಾಲಿದಳ ತನ್ನ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ಬಹಳ ಮಟ್ಟಿಗೆ ಯಶಸ್ಸು ಸಾಧಿಸಿತು. ಅಖಿಲ ಭಾರತ ಕಾಂಗ್ರೆಸ್ ಕಾರ್ಯಕಾರಿ ಸಮಿತಿ 1966ರಲ್ಲಿ ಅಕಾಲಿದಳದವರ ಪಂಜಾಬಿ ಸುಭಾ ಬೇಡಿಕೆಯ ಮೇರೆಗೆ, ಪಂಜಾಬಿ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಹೊಂದಿರುವ ಪ್ರತ್ಯೇಕ ಪಂಜಾಬು ರಾಜ್ಯಸ್ಥಾಪನೆಗೆ ಅನುಮೋದನೆ ನೀಡಿತು. ಅಂತೆಯೆ 1967ರಲ್ಲಿ ಪಂಜಾಬು ರಾಜ್ಯ ವಿಭಜಿಸಲ್ಪಟ್ಟು ಹರಿಯಾಣ ಮತ್ತು ಪಂಜಾಬುಗಳೆಂಬ ಎರಡು ಪ್ರತ್ಯೇಕ ರಾಜ್ಯಗಳು ಅಸ್ತಿತ್ವಕ್ಕೆ ಬಂದುವು.[]

ಉಲ್ಲೇಖಗಳು

[ಬದಲಾಯಿಸಿ]
  1. http://www.thesikhencyclopedia.com/sikh-reformist-movements/akali-movement
  2. "ಆರ್ಕೈವ್ ನಕಲು". Archived from the original on 2015-09-24. Retrieved 2015-11-11.