ಅಂಧಾಧುನ್ (ಚಲನಚಿತ್ರ)
ಅಂಧಾಧುನ್ | |
---|---|
Directed by | ಶ್ರೀರಾಮ್ ರಾಘವನ್ |
Written by | ಶ್ರೀರಾಮ್ ರಾಘವನ್ ಅರಿಜೀತ್ ಬಿಸ್ವಾಸ್ ಪೂಜಾ ಲಢಾ ಸುರ್ತಿ ಯೋಗೇಶ್ ಚಂದೇಕರ್ ಹೇಮಂತ್ ರಾವ್ |
Produced by | ಸುಧಾಂಷು ವತ್ಸ್ ಅಜೀತ್ ಅಂಧರೆ ಅಶೋಕ್ ವಸೋಡಿಯಾ ಕೇವಲ್ ಗರ್ಗ್ ಸಂಜಯ್ ರೌತ್ರೇ |
Starring | ತಬು ಆಯುಷ್ಮಾನ್ ಖುರಾನಾ ರಾಧಿಕಾ ಆಪ್ಟೆ ಅನಿಲ್ ಧವನ್ |
Cinematography | ಕೆ. ಯು. ಮೋಹನನ್ |
Edited by | ಪೂಜ ಲಢಾ ಸುರ್ತಿ |
Music by | ಹಾಡುಗಳು: ಅಮಿತ್ ತ್ರಿವೇದಿ ರಫ಼್ತಾರ್ ಗಿರೀಶ್ ನಾಕೋಡ್ ಹಿನ್ನೆಲೆ ಸಂಗೀತ: ಡ್ಯಾನಿಯಲ್ ಬಿ. ಜಾರ್ಜ್ |
Production companies | ವಾಯಕಾಮ್ ಏಟೀನ್ ಮೋಷನ್ ಪಿಕ್ಚರ್ಸ್ ಮ್ಯಾಚ್‍ಬಾಕ್ಸ್ ಪಿಕ್ಚರ್ಸ್ |
Distributed by | ವಾಯಕಾಮ್ ಏಟೀನ್ ಮೋಷನ್ ಪಿಕ್ಚರ್ಸ್ (ಭಾರತ) ಈರಾಸ್ ಇಂಟರ್‌ನ್ಯಾಷನಲ್ (ಅಂತರರಾಷ್ಟ್ರೀಯ) |
Release date | ೦೫-೧೦-೨೦೧೮ (ಭಾರತ) |
Running time | 138 ನಿಮಿಷಗಳು[೧] |
Country | ಭಾರತ |
Language | ಹಿಂದಿ |
Budget | ₹32 ಕೋಟಿ[೨] |
Box office | ₹456 ಕೋಟಿ[೩] |
ಅಂಧಾಧುನ್ (ಅನುವಾದ: ಕುರುಡು ಗೀತ) ೨೦೧೮ರ ಒಂದು ಭಾರತೀಯ ಕರಾಳ ವಿನೋದ ಅಪರಾಧ ವಸ್ತುವುಳ್ಳ ರೋಮಾಂಚಕಾರಿ ಚಲನಚಿತ್ರ. ಶ್ರೀರಾಮ್ ರಾಘವನ್ ಇದರ ಬರಹಗಾರರಲ್ಲಿ ಒಬ್ಬರು ಮತ್ತು ನಿರ್ದೇಶಕರೂ ಆಗಿದ್ದಾರೆ. ಮ್ಯಾಚ್‍ಬಾಕ್ಸ್ ಪಿಕ್ಚರ್ಸ್ ನಿರ್ಮಾಣ ಮಾಡಿದ ಈ ಚಿತ್ರದ ವಿತರಕರು ವಾಯಕಾಮ್ ಏಟೀನ್ ಮೋಷನ್ ಪಿಕ್ಚರ್ಸ್. ಚಲನಚಿತ್ರದ ಮುಖ್ಯ ಪಾತ್ರಗಳಲ್ಲಿ ತಬು, ಆಯುಷ್ಮಾನ್ ಖುರಾನಾ ಮತ್ತು ರಾಧಿಕಾ ಆಪ್ಟೆ ನಟಿಸಿದ್ದಾರೆ. ಈ ಚಿತ್ರವು ಒಬ್ಬ ಮಾಜಿ ಚಲನಚಿತ್ರ ನಟನ ಕೊಲೆಯಲ್ಲಿ ತಿಳಿಯದೆ ಸಿಕ್ಕಿಕೊಳ್ಳುವ ಒಬ್ಬ ದೃಷ್ಟಿಹೀನ ಪಿಯಾನೊ ವಾದಕನ ಕಥೆಯನ್ನು ಹೇಳುತ್ತದೆ.
ಅಂಧಾಧುನ್‍ನ ಕಥೆಯನ್ನು ರಾಘವನ್, ಅರಿಜೀತ್ ಬಿಸ್ವಾಸ್, ಪೂಜಾ ಲಢಾ ಸುರ್ತಿ, ಯೋಗೇಶ್ ಚಂದೇಕರ್ ಹಾಗೂ ಹೇಮಂತ್ ರಾವ್ ಬರೆದರು. ಚಿತ್ರದ ಸಂಕಲನವನ್ನು ಸುರ್ತಿ ಮಾಡಿದರೆ, ಕೆ. ಯು. ಮೋಹನನ್ ಚಿತ್ರದ ಛಾಯಾಗ್ರಹಣ ನಿರ್ದೇಶಕರಾಗಿದ್ದಾರೆ. ಚಿತ್ರದ ಹಾಡುಗಳನ್ನು ಅಮಿತ್ ತ್ರಿವೇದಿ ಸಂಯೋಜಿಸಿದ್ದಾರೆ ಮತ್ತು ಜೈದೀಪ್ ಸಾಹ್ನಿ ಗೀತಸಾಹಿತ್ಯವನ್ನು ಬರೆದಿದ್ದಾರೆ. ಅತಿಥಿ ಸಂಯೋಜಕರಾಗಿ ರಫ಼್ತಾರ್ ಮತ್ತು ಗಿರೀಶ್ ನಾಕೋಡ್ ಒಂದು ಹಾಡಿಗೆ ಸಹ ಬರಹಗಾರರಾಗಿದ್ದಾರೆ.
ಹೇಮಂತ್ ರಾವ್ ಸಲಹೆಯ ಮೇಲೆ ರಾಘವನ್ ಕುರುಡ ಪಿಯಾನೊ ವಾದಕನ ಬಗ್ಗೆ ಇರುವ ೨೦೧೦ರ ಫ಼್ರೆಂಚ್ ಕಿರುಚಿತ್ರ ಲೆಕಾರ್ಡರ್ (ಪಿಯಾನೊದ ಶ್ರುತಿಕಾರ) ನೋಡಿ ಇಷ್ಟಪಟ್ಟರು ಮತ್ತು ಅದನ್ನು ಆಧರಿಸಿ ಕಥೆ ಬರೆಯಲು ನಿರ್ಧರಿಸಿದರು. ಖುರಾನಾ ರಾಘವನ್‍ರನ್ನು ಸಂಪರ್ಕಿಸಿ ಅವರೊಡನೆ ಕೆಲಸಮಾಡಲು ಆಸಕ್ತಿ ವ್ಯಕ್ತಪಡಿಸಿದ ನಂತರ ಅವರನ್ನು ಮುಖ್ಯ ಪಾತ್ರಕ್ಕೆ ಗೊತ್ತುಪಡಿಸಲಾಯಿತು. ಚಲನಚಿತ್ರವನ್ನು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಹರಡಿರುವಂತೆ ೪೪ ದಿನಗಳಲ್ಲಿ ಪುಣೆಯಲ್ಲಿ ಚಿತ್ರೀಕರಿಸಲಾಯಿತು; ಪ್ರಧಾನ ಛಾಯಾಗ್ರಹಣ ಜೂನ್ ೨೦೧೭ರಲ್ಲಿ ಪ್ರಾರಂಭವಾಗಿ ೧೭ ಜುಲೈ ೨೦೧೮ರಲ್ಲಿ ಅಂತ್ಯವಾಯಿತು.
ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದ ಅಂಧಾಧುನ್‍ನ್ನು ಭಾರತದ ಚಿತ್ರಮಂದಿರಗಳಲ್ಲಿ ೫ ಅಕ್ಟೋಬರ್ ೨೦೧೮ರಲ್ಲಿ ಬಿಡುಗಡೆ ಮಾಡಲಾಯಿತು. ವಿಮರ್ಶಕರು ಚಿತ್ರದ ಬರವಣಿಗೆ, ಮತ್ತು ಖುರಾನಾ ಹಾಗೂ ತಬ್ಬುರ ಅಭಿನಯದತ್ತ ಗಮನ ಸೆಳೆದರು. ಸ್ಕ್ರೀನ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಅತ್ಯುತ್ತಮ ನಿರ್ದೇಶಕ ಸೇರಿದಂತೆ ನಾಲ್ಕು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಈ ಚಿತ್ರವು ವಿಮರ್ಶಕರ ಅತ್ಯುತ್ತಮ ಚಲನಚಿತ್ರ ಮತ್ತು ಖುರಾನಾರಿಗೆ ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ ಸೇರಿದಂತೆ ಐದು ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಇದು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನೂ ಗೆದ್ದುಕೊಂಡಿತು: ಅತ್ಯುತ್ತಮ ಹಿಂದಿ ಕಥಾಚಿತ್ರ, ಖುರಾನಾರಿಗೆ ಅತ್ಯುತ್ತಮ ನಟ, ಮತ್ತು ಅತ್ಯುತ್ತಮ ಚಿತ್ರಕಥೆ. ಚಿತ್ರವು ₹32 ಕೋಟಿ ಬಂಡವಾಳದಲ್ಲಿ ನಿರ್ಮಾಣಗೊಂಡು ವಿಶ್ವಾದ್ಯಂತ ಬಾಕ್ಸ್ ಆಫ಼ಿಸ್‍ನಲ್ಲಿ ₹456 ಕೋಟಿಗಿಂತ ಹೆಚ್ಚು ಹಣವನ್ನು ಗಳಿಸಿದೆ.
ಕಥಾವಸ್ತು
[ಬದಲಾಯಿಸಿ]ತೋರಿಕೆಯಲ್ಲಿ ಕುರುಡ ಪಿಯಾನೊ ವಾದಕನಾದ ಆಕಾಶ್ ಒಂದು ಸಂಗೀತ ಕೃತಿಯನ್ನು ಮುಗಿಸಲು ಪ್ರಯತ್ನಿಸುತ್ತಿರುತ್ತಾನೆ. ಅವನು ತನ್ನ ಬೆಕ್ಕಿನೊಂದಿಗೆ ವಾಸಿಸುತ್ತಿರುತ್ತಾನೆ ಮತ್ತು ಹಲವುವೇಳೆ ಅವನು ನಿಜವಾಗಿಯೂ ಕುರುಡನಿದ್ದಾನೆಯೇ ಎಂದು ಕಂಡುಹಿಡಿಯಲು ಪ್ರಯತ್ನಿಸುವ ಒಬ್ಬ ಹುಡುಗನನ್ನು ಭೇಟಿಯಾಗುತ್ತಿರುತ್ತಾನೆ. ರಸ್ತೆಯನ್ನು ದಾಟುವಾಗ ಸೋಫ಼ಿಯ ಗಾಡಿ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತಾನೆ. ಅವಳು ಇವನ ಪ್ರತಿಭೆಯಿಂದ ಪ್ರಭಾವಿತಳಾಗಿ ಅವನಿಗೆ ತನ್ನ ತಂದೆಯ ರೆಸ್ಟೊರೆಂಟ್‍ನಲ್ಲಿ ಕೆಲಸ ಕೊಡಿಸುತ್ತಾಳೆ. ಅಲ್ಲಿ ಮಾಜಿ ನಟನಾದ ಪ್ರಮೋದ್ ಸಿನ್ಹಾ ಇವನನ್ನು ಗಮನಿಸುತ್ತಾನೆ. ಪ್ರಮೋದ್ ಸಿಮಿಯನ್ನು ಮದುವೆಯಾಗಿರುತ್ತಾನೆ. ತಮ್ಮ ಮದುವೆ ವಾರ್ಷಿಕೋತ್ಸವದಲ್ಲಿ ಪ್ರದರ್ಶನ ನೀಡಲು ಅವನು ಆಕಾಶ್‍ನನ್ನು ಆಹ್ವಾನಿಸುತ್ತಾನೆ. ಸೋಫ಼ಿ ಮತ್ತು ಆಕಾಶ್‍ರ ಸಂಬಂಧ ನಿಕಟವಾಗಲು ಶುರುವಾಗುತ್ತದೆ. ಆಕಾಶ್ ಸಿನ್ಹಾನ ಫ಼್ಲ್ಯಾಟ್‍ಗೆ ಆಗಮಿಸುತ್ತಾನೆ, ಸಿಮಿ ಬಾಗಿಲು ತೆಗೆಯುತ್ತಾಳೆ. ಆಕಾಶ್ ಕುರುಡನಾಗಿದ್ದಾನೆಂದು ಮನವರಿಕೆಯಾಗಿ ಸಿಮಿಯು ಅವನಿಗೆ ಪಿಯಾನೊವನ್ನು ನುಡಿಸಲು ಬಿಡುತ್ತಾಳೆ. ಆಕಾಶ್ ಹತ್ತಿರದಲ್ಲಿ ಒಂದು ಶವವನ್ನು ನೋಡುತ್ತಾನೆ ಆದರೆ ಏನೂ ತಿಳಿಯದವನಂತೆ ನಟಿಸಿ ನುಡಿಸುವುದನ್ನು ಮುಂದುವರಿಸುತ್ತಾನೆ; ಅವನು ಬಚ್ಚಲಿನಲ್ಲಿ ಅಡಗಿಕೊಂಡಿರುವ, ಸಿಮಿಯ ಪ್ರಣಯ ಪ್ರಸಂಗದ ಪ್ರೇಮಿಯಾದ ಮನೋಹರ್‌ನನ್ನೂ ನೋಡುತ್ತಾನೆ. ತಾನು ಪಿಯಾನೊಗೆ ಮರಳಿದಾಗ, ಆಕಾಶ್ ಶವವನ್ನು ಸಿನ್ಹಾನದೆಂದು ಗುರುತಿಸುತ್ತಾನೆ. ಆಕಾಶ್ ನುಡಿಸುತ್ತಿರುವಾಗ ಸಿಮಿ ಮತ್ತು ಮನೋಹರ್ ಶವವನ್ನು ಸ್ವಚ್ಛಗೊಳಿಸಿ ಸೂಟ್‍ಕೇಸ್‍ನಲ್ಲಿ ಒತ್ತಿ ತುಂಬುತ್ತಾರೆ.
ಆಕಾಶ್ ಕೊಲೆಯ ವರದಿ ಒಪ್ಪಿಸಲು ಪ್ರಯತ್ನಿಸುತ್ತಾನೆ ಆದರೆ ಮನೋಹರ್ ಪೋಲಿಸ್ ಇನ್‍ಸ್ಪೆಕ್ಟರ್ ಎಂದು ಕಂಡುಕೊಳ್ಳುತ್ತಾನೆ. ಸಿಮಿ ಶ್ರೀಮತಿ ಡಿಸಾಳನ್ನು ಆಕಾಶ್‍ನ ಉಪಸ್ಥಿತಿಯಲ್ಲಿ ಸಾಯಿಸುತ್ತಾಳೆ. ಕೊಲೆಗಳ ಬಗ್ಗೆ ತಿಳಿಯದವನಂತೆ ನಟಿಸುವುದನ್ನು ಮುಂದುವರಿಸುವುದಕ್ಕೆ ಆಕಾಶ್ ಒತ್ತಾಯಕ್ಕೀಡಾಗುತ್ತಾನೆ. ಸಿಮಿ ಅವನ ಕಾಫ಼ಿಯಲ್ಲಿ ವಿಷ ಸುರಿದು ಪಿಸ್ತೂಲನ್ನು ಹೊರಗೆಳೆದಾಗ, ತನ್ನ ಪಿಯಾನೊ ವಾದನಕ್ಕೆ ನೆರವಾಗುವ ಪ್ರಯೋಗವಾಗಿ ತಾನು ಕುರುಡನೆಂದು ನಟಿಸುತ್ತಿರುವುದಾಗಿ ಅವನು ಒಪ್ಪಿಕೊಳ್ಳುತ್ತಾನೆ. ತಾನು ಲಂಡನ್‍ಗೆ ಹೊರಡುವೆನು ಮತ್ತು ಸಿಮಿಯ ರಹಸ್ಯವನ್ನು ಬಚ್ಚಿಡುವೆನು ಎಂದು ಅವನು ಹೇಳುತ್ತಾನೆ ಆದರೆ ಅವಳು ಅವನಿಗೆ ಮದ್ದಿಕ್ಕುತ್ತಾಳೆ. ಸೋಫ಼ಿ ನೆರೆಯ ಹುಡುಗನು ರೆಕಾರ್ಡ್ ಮಾಡಿದ, ಆಕಾಶ್ ಕಣ್ಣುಕಾಣಿಸುವ ವ್ಯಕ್ತಿಯಾಗಿ ನಟಿಸುತ್ತಿರುವ ವೀಡಿಯೊವನ್ನು ನೋಡುತ್ತಾಳೆ. ಅದನ್ನು ದೃಢಪಡಿಸಿಕೊಳ್ಳಲು ಹೋದಾಗ, ತಾನು ಮತ್ತು ಆಕಾಶ್ ಸಂಭೋಗಿಸುತ್ತಿದ್ದೇವೆ ಎಂದು ಕಾಣುವಂತೆ ವಸ್ತುಗಳನ್ನು ವ್ಯವಸ್ಥೆಮಾಡುತ್ತಾಳೆ. ಕೋಪಗೊಂಡು ಬಹಳ ಉದಾಸಳಾಗಿ, ಸೋಫ಼ಿ ಆಕಾಶ್‍ನನ್ನು ಬಿಟ್ಟುಬಿಡುತ್ತಾಳೆ. ಅವನು ಎಚ್ಚರವಾದಾಗ ಸಿಮಿ ಕೊಟ್ಟ ಮದ್ದಿನಿಂದ ಕುರುಡನಾಗಿರುತ್ತಾನೆ. ಆಕಾಶ್‍ನನ್ನು ಕುರುಡು ಮಾಡಿದ್ದು ಸಾಕಾಗುವುದಿಲ್ಲವೆಂದು ಮನೋಹರ್ ನಿರ್ಧರಿಸಿ ಅವನನ್ನು ಕೊಲ್ಲಲು ಅವನ ಮನೆಗೆ ಹಿಂದಿರುಗುತ್ತಾನೆ. ಆಕಾಶ್ ಪ್ರಯಾಸಪಟ್ಟು ರಸ್ತೆಗೆ ಬಂದು ಎಚ್ಚರ ತಪ್ಪುತ್ತಾನೆ. ಅವನನ್ನು ಒಂದು ಅಕ್ರಮ ಅಂಗ ಕೊಯ್ಲು ಕ್ಲಿನಿಕ್‍ಗೆ ಒಯ್ಯಲಾಗುತ್ತದೆ.
ಡಾ. ಸ್ವಾಮಿ ಮತ್ತು ಅವನ ಸಹಾಯಕರಾದ ಮುರ್ಲಿ ಹಾಗೂ ಸಖು ಆಕಾಶ್‍ನನ್ನು ಬಿಡಲು ನಿರ್ಧರಿಸಿ ಅವನ ಕುರುಡುತನವನ್ನು ಹೋಗಲಾಡಿಸಲು ಬೇಕಾದ ಹಣವನ್ನು ಗಳಿಸಲು ನೆರವಾಗುತ್ತಾರೆ. ಅವರು ಸಿಮಿಯನ್ನು ಅಪಹರಿಸಿ, ಒಂದು ಆತ್ಮಹತ್ಯಾ ದೃಶ್ಯವನ್ನು ನಟಿಸಿ ಮನೋಹರ್‌ಗೆ ಬೆದರಿಕೆ ಹಾಕುತ್ತಾರೆ; ಆದರೆ ಮುರ್ಲಿ ಮತ್ತು ಸಖು ಆಕಾಶ್‍ನನ್ನು ವಂಚಿಸಿ, ಅವನನ್ನು ಸಿಮಿಯೊಂದಿಗೆ ಕಟ್ಟಿಹಾಕಿ, ತಾವೇ ಹಣವನ್ನು ತೆಗೆದುಕೊಳ್ಳಲು ಯೋಜಿಸುತ್ತಾರೆ. ಮನೋಹರ್ ಮುರ್ಲಿಗೆ ಗುಂಡು ಹೊಡಿಯುತ್ತಾನೆ ಆದರೆ ಲಿಫ಼್ಟ್‌ನಲ್ಲಿ ಸಿಕ್ಕಿಕೊಂಡು ಆಕಸ್ಮಿಕವಾಗಿ ಗುಂಡು ಹಾರಿಸಿ ತನ್ನನ್ನು ಕೊಂದುಕೊಳ್ಳುತ್ತಾನೆ. ಹಣವು ಖೋಟಾ ಎಂದು ಬಹಿರಂಗವಾಗುತ್ತದೆ. ಆಕಾಶ್ ತನ್ನನ್ನು ಬಿಡಿಸಿಕೊಳ್ಳಲು ಸಿಮಿ ಸಹಾಯ ಮಾಡುತ್ತಾಳೆ ಮತ್ತು ಅವನು ಸಿಮಿಯ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ತೆಗೆಯುತ್ತಾನೆ. ಸಿಮಿ ಕಟ್ಟನ್ನು ಬಿಚ್ಚಿ ಅವನ ಮೇಲೆ ದಾಳಿ ಮಾಡಿದಾಗ ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಡಾ. ಸ್ವಾಮಿ ಬರುತ್ತಾನೆ; ಅವನು ಮತ್ತು ಆಕಾಶ್ ಸಿಮಿಯ ಎಚ್ಚರ ತಪ್ಪಿಸಿ, ಕಾರಿನ ಡಿಕ್ಕಿಯಲ್ಲಿ ಅವಳನ್ನು ಕಟ್ಟಿಹಾಕಿ ಹೊರಡುತ್ತಾರೆ. ಅಪರೂಪದ ರಕ್ತವಿಧವನ್ನು ಹೊಂದಿರುವ ಸಿಮಿಯ ಅಂಗಗಳನ್ನು ೧ ಮಿಲಿಯನ್ ಡಾಲರ್‌ಗೆ ಕೊಯ್ಲು ಮಾಡಿ ಆಕಾಶ್‍ನ ಕಾರ್ನಿಯ ಕಸಿಗೆ ಪಾವತಿಸುವ ತನ್ನ ಯೋಜನೆಯನ್ನು ಸ್ವಾಮಿ ಬಹಿರಂಗಪಡಿಸುತ್ತಾನೆ. ಅದನ್ನು ಆಕಾಶ್ ನಿರಾಕರಿಸುತ್ತಾನೆ.
ಎರಡು ವರ್ಷಗಳ ನಂತರ ಕ್ರ್ಯಾಕುಫ಼್, ಪೋಲಂಡ್‍ನಲ್ಲಿನ ಒಂದು ಗಿಗ್‍ನಲ್ಲಿ, ಆಗಲೂ ಕುರುಡನಾಗಿರುವಂತೆ ಕಾಣುವ ಆಕಾಶ್‍ನನ್ನು ಸೋಫ಼ಿ ಭೇಟಿಯಾಗುತ್ತಾಳೆ. ಸಿಮಿ ಕಾರ್‌ನ ಡಿಕ್ಕಿಯಲ್ಲಿ ಎಚ್ಚರಗೊಂಡು ಶಬ್ದ ಮಾಡಲು ಶುರುಮಾಡಿದಳು; ಸ್ವಾಮಿ ಕಾರ್ ನಿಲ್ಲಿಸಿದಾಗ, ಅವಳು ಅವನನ್ನು ಹೊಡೆದು ಕಾರನ್ನು ಚಾಲನೆಗೆ ವಶಪಡಿಸಿಕೊಂಡಳು ಎಂದು ಅವನು ಅವಳಿಗೆ ಹೇಳುತ್ತಾನೆ. ಸ್ವಾಮಿ ಆಗಲೂ ಕಾರು ನಡೆಸುತ್ತಿದ್ದಾನೆಂದು ಭಾವಿಸಿ ಆಕಾಶ್ ಸಿಮಿಯನ್ನು ಬಿಟ್ಟುಬಿಡುವಂತೆ ಮನವೊಲಿಸಲು ಪ್ರಯತ್ನಿಸುವುದನ್ನು ಮುಂದುವರಿಸುತ್ತಾನೆ. ಅವಳು ಆಕಾಶ್‍ನನ್ನು ಕೆಳಗಿಳಿಸಿ ಅವನ ಮೇಲೆ ಗಾಡಿ ಹಾಯಿಸಲು ಪ್ರಯತ್ನಿಸುತ್ತಿರುವಾಗ, ಒಂದು ಮೊಲವನ್ನು ಸಾಯಿಸಲು ಪ್ರಯತ್ನಿಸುತ್ತಿದ್ದ ರೈತನು ಗುರಿತಪ್ಪಿದ್ದರಿಂದ ಮೊಲವು ಜಿಗಿದು ಗಾಳಿಫಲಕಕ್ಕೆ ಬಡಿಯುತ್ತದೆ. ಸಿಮಿಯು ಕಾರಿನ ಹಿಡಿತ ಕಳೆದುಕೊಂಡು ಮೃತಪಡುತ್ತಾಳೆ. ಅವನು ಡಾಕ್ಟರ್‌ನ ಪ್ರಸ್ತಾಪವನ್ನು ಒಪ್ಪಿ ತನ್ನ ದೃಷ್ಟಿ ಮತ್ತೆ ಬರುವಂತೆ ಮಾಡಲು ಸಿಮಿಯ ಕಾರ್ನಿಯಗಳನ್ನು ಬಳಸಬೇಕಾಗಿತ್ತು ಎಂದು ಸೋಫ಼ಿ ಆಕಾಶ್‍ಗೆ ಹೇಳುತ್ತಾಳೆ. ನಿಶ್ಶಬ್ದವಾಗಿ, ಆಕಾಶ್ ಹೊರಟು ತನ್ನ ದಾರಿಯಲ್ಲಿದ್ದ ಒಂದು ಡಬ್ಬಿಯನ್ನು ತಳ್ಳಲು ತನ್ನ ಛಡಿಯನ್ನು ಬಳಸುತ್ತಾನೆ.
ಪಾತ್ರ ನಿರ್ಧಾರಣ ಮತ್ತು ಚಿತ್ರೀಕರಣ
[ಬದಲಾಯಿಸಿ]ಆಯುಷ್ಮಾನ್ ಖುರಾನಾ ಆಸಕ್ತಿ ವ್ಯಕ್ತಪಡಿಸಿದ ನಂತರ,[೪] ರಾಘವನ್ ನಾಯಕನು ಕುರುಡನಾಗಿ ಎದ್ದೇಳುವ ದೃಶ್ಯಗಳ ಅಭಿನಯ ಪರೀಕ್ಷೆಗಳನ್ನು ಮಾಡಿದರು: "ಎರಡು ತುಣುಕುಗಳಿದ್ದವು – ಕುರುಡನಂತೆ ನಟಿಸುವ ತುಣುಕು ಮತ್ತು ವಾಸ್ತವವಾಗಿ ಕುರುಡನಾಗಿರುವ ತುಣುಕು, ಎರಡನ್ನೂ ಪರೀಕ್ಷಿಸಲಾಯಿತು. ಅವರ ಶಾರೀರಿಕ ಹಾವಭಾವದಲ್ಲಿ ಏನು ವ್ಯತ್ಯಾಸವಿರುವುದು ಎಂದು ನೋಡುವುದೇ ಇದರ ಉದ್ದೇಶವಾಗಿತ್ತು." ಚಿತ್ರದಲ್ಲಿ ಪಿಯಾನೊವನ್ನು ನುಡಿಸಿದ ಖುರಾನಾ, ಹಲವಾರು ಕುರುಡ ವಿದ್ಯಾರ್ಥಿಗಳನ್ನು ಭೇಟಿಯಾಗಿ ಒಬ್ಬ ಕುರುಡ ಪಿಯಾನೊ ವಾದಕನು ಹೇಗೆ ನುಡಿಸುತ್ತಾನೆ, ವರ್ತಿಸುತ್ತಾನೆ ಮತ್ತು ತನ್ನ ಕೈಗಳನ್ನು ಚಲಿಸುತ್ತಾನೆ ಎಂದು ಗಮನಿಸಿದರು.[೫] ಖುರಾನಾ ಲಾಸ್ ಎಂಜಲೀಸ್ ಮೂಲದ ಪಿಯಾನೊ ವಾದಕ ಅಕ್ಷಯ ವರ್ಮಾರ ಕೆಳಗೆ ದಿನಕ್ಕೆ ನಾಲ್ಕು ಗಂಟೆ ಪಿಯಾನೊ ಅಭ್ಯಾಸ ಮಾಡಿದರು,[೬] ಮತ್ತು ಚಿತ್ರದಲ್ಲಿ ಬದಲಿ ನಟನನ್ನು ಬಳಸಲಿಲ್ಲ. ಅವರು ಇದನ್ನು ತಮ್ಮ ವೃತ್ತಿಜೀವನದ ಅತ್ಯಂತ ಸವಾಲಿನ ಪಾತ್ರವೆಂದು ಕರೆದರು.[೭]
ಕುರುಡ ನಾಯಕನಿರುವ ಚಿತ್ರಗಳನ್ನು ನೋಡಬಾರದೆಂದು ಖುರಾನಾರಿಗೆ ರಾಘವನ್ ಹೇಳಿದರು ಮತ್ತು ಅವರನ್ನು ಕುರುಡರ ರಾಷ್ಟ್ರೀಯ ಶಾಲೆಗೆ ಕರೆದೊಯ್ದರು.[೭] ಯಾವುದೇ ಇಬ್ಬರು ವ್ಯಕ್ತಿಗಳು ಸಮಾನವಾಗಿಲ್ಲದಿರುವುದರಿಂದ, ನಾನು ಸೂಕ್ಷ್ಮ ವ್ಯತ್ಯಾಸಗಳನ್ನು ಎತ್ತಿಕೊಂಡು ಕೋಲನ್ನು ಹಿಡಿಯುವುದು ಮತ್ತು ಮೆಟ್ಟಿಲುಗಳನ್ನು ಹತ್ತುವುದನ್ನು ಕಲಿತುಕೊಂಡೆ ಎಂದು ಅವರು ಹೇಳಿದರು. ಖುರಾನಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಆಮ್ಲೆಟ್‌ಗಳನ್ನು ಮಾಡಿದರು ಮತ್ತು ರಸ್ತೆಯ ಮೇಲೆ ನಡೆದರು.[೮] ದೃಷ್ಟಿಯನ್ನು ಸುಮಾರು ಶೇಕಡ ೮೦ರಷ್ಟು ದುರ್ಬಲಗೊಳಿಸುವ ವಿಶೇಷ ಮಸೂರಗಳ ಜೋಡಿಯನ್ನು ಅವರಿಗೆ ನೀಡಲಾಯಿತು. ಸರಿಯಾಗಿ ಕಾಣಿಸದಿದ್ದರಿಂದ ಅವರ ಶಾರೀರಿಕ ಹಾವಭಾವ ಬದಲಾಯಿತು.[೯] ಕಪ್ಪು ಕನ್ನಡಕವನ್ನು ಧರಿಸಿದ ನಂತರ, ಅವರ ದೃಷ್ಟಿಯು ೯೦ ಪ್ರತಿಶತ ಬಾಧಿತವಾಯಿತು ಮತ್ತು ಅವರು ಹಾಗೆಯೇ ಚಿತ್ರದುದ್ದಕ್ಕೂ ಹಾಗೇ ನಟಿಸಿದರು.[೧೦]
ಧ್ವನಿವಾಹಿನಿ
[ಬದಲಾಯಿಸಿ]ಅಂಧಾಧುನ್ ಧ್ವನಿವಾಹಿನಿಯ ಶೀರ್ಷಿಕೆ ಗೀತೆಯನ್ನು ರಫ಼್ತಾರ್ ಹಾಗೂ ಗಿರೀಶ್ ನಾಕೋಡ್ ಸಂಯೋಜಿಸಿದರೆ, ಉಳಿದ ಭಾಗವನ್ನು ಅಮಿತ್ ತ್ರಿವೇದಿ ಸಂಯೋಜಿಸಿದರು. ಧ್ವನಿಸುರುಳಿಯ ಗೀತಸಾಹಿತ್ಯವನ್ನು ಜೈದೀಪ್ ಸಾಹ್ನಿ, ರಫ಼್ತಾರ್ ಹಾಗೂ ನಾಕೋಡ್ ಬರೆದರು. ತ್ರಿವೇದಿ, ರಫ಼್ತಾರ್, ಆಯುಷ್ಮಾನ್ ಖುರಾನಾ, ಅರಿಜೀತ್ ಸಿಂಗ್, ಅಭಿಜೀತ್ ಶ್ರೀವಾಸ್ತವ, ಆಕಾಂಕ್ಷಾ ಶರ್ಮಾ, ಶಾದಬ್ ಫ಼ರೀದಿ ಮತ್ತು ಅಲ್ತಮಷ್ ಫ಼ರೀದಿ ಗೀತೆಗಳನ್ನು ಹಾಡಿದರು.[೧೧] ಹಿನ್ನೆಲೆ ಸಂಗೀತವನ್ನು ಡ್ಯಾನಿಯಲ್ ಬಿ. ಜಾರ್ಜ್ ಸಂಯೋಜಿಸಿದರು.[೧೨]
ಬಾಕ್ಸ್ ಆಫ಼ಿಸ್
[ಬದಲಾಯಿಸಿ]ಅಂಧಾಧುನ್‍ನ್ನು ೩೨ ಕೋಟಿ ರೂಪಾಯಿಯ ಬಂಡವಾಳದೊಂದಿಗೆ ನಿರ್ಮಿಸಲಾಯಿತು. ಡಿಜಿಟಲ್ ಹಕ್ಕುಗಳನ್ನು ನೆಟ್ಫ್ಲಿಕ್ಸ್‌ಗೆ ಮಾರಾಟ ಮಾಡಲಾಯಿತು. ಆರು ವಾರಗಳು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಮೇಲೆ ಈ ಚಿತ್ರವು ಬಾಕ್ಸ್ ಆಫ಼ಿಸ್‍ನಲ್ಲಿ ₹101 ಕೋಟಿ ಗಳಿಸಿತ್ತು.[೧೩]
ಚೀನಾದಲ್ಲಿ ಬಿಡುಗಡೆಯಾದ ಮೇಲೆ, ಈ ಚಿತ್ರವು ಆರು ದಿನಗಳೊಳಗೆ ಭಾರತೀಯ ಜೀವಮಾನ ಸಂಗ್ರಹವನ್ನು ಮೀರಿಸಿತು.[೧೪] ಅಂಧಾಧುನ್ ಚೈನಾದಲ್ಲಿ $48.01 ಮಿಲಿಯನ್ ಗಳಿಸಿತು,[೧೫] ಮತ್ತು ಒಟ್ಟಾರೆ ವಿಶ್ವಾದ್ಯಂತದ ಮೊತ್ತ ₹456 ಕೋಟಿ ಆಗಿದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Andhadhun". British Board of Film Classification. Archived from the original on 18 ನವೆಂಬರ್ 2018. Retrieved 4 October 2018.
- ↑ "Andhadhun". Box Office India. Archived from the original on 30 October 2018. Retrieved 30 October 2018.
- ↑ ೩.೦ ೩.೧ "Andhadhun Box Office Collection". Bollywood Hungama. Retrieved 4 May 2019.
- ↑ Kulkarni, Ronjita (1 November 2018). "Sriram Raghavan explains Andhadhun". Rediff.com. Archived from the original on 7 November 2018. Retrieved 7 November 2018.
- ↑ Radhakrishnan, Manjusha (3 October 2018). "Ayushmann Khurrana, Tabu poised to thrill in 'Andhadhun'". Gulf News. Archived from the original on 23 October 2018. Retrieved 7 November 2018.
- ↑ Avinash Lohana (29 August 2017). "Ayushmann Khurrana learns piano for Sriram Raghavan's thriller, Shoot the Piano Player". Mumbai Mirror. Archived from the original on 22 June 2018. Retrieved 15 July 2018.
- ↑ ೭.೦ ೭.೧ Dubey, Bharti (8 October 2018). "Ayushmann on his blind act in Andhadhun: Director didn't use body double for my fingers". National Herald. Archived from the original on 7 November 2018. Retrieved 7 November 2018.
- ↑ "Ayushmann Khurrana pushed the envelope for 'AndhaDhun'". The Times of India. 4 October 2018. Archived from the original on 7 November 2018. Retrieved 7 November 2018.
- ↑ "OMG, did you know? Ayushmann Khurrana used a special pair of lenses to turn blind for Andhadhun". Bollywood Hungama. 4 October 2018. Archived from the original on 7 November 2018. Retrieved 7 November 2018.
- ↑ Lulla, Sunil (4 October 2018). "Ayushmann Khurrana: Was Almost Blind When Shooting AndhaDhun". Mid Day. Archived from the original on 7 November 2018. Retrieved 7 November 2018.
- ↑ Chauhan, Gaurang (27 September 2018). "AndhaDhun Songs Music Review: Amit Trivedi's soundtrack is soothing and has the old-world charm to it". Times Now. Retrieved 10 November 2018.
- ↑ Vetticad, Anna MM (5 October 2018). "Andhadhun movie review: Tabu-Radhika-Ayushmann rock, and Sriram Raghavan is a superstar". Firstpost. Retrieved 17 November 2018.
- ↑ "Andhadhun Box office". Bollywood Hungama. Archived from the original on 23 October 2018. Retrieved 18 November 2018.
- ↑ "AndhaDhun China Box Office: Ayushmann Khurrana's Film 'Continues To Surprise'". NDTV.com. NDTV. 16 April 2019. Retrieved 17 April 2019.
- ↑ "China Box office: Andhadhun slows down considerably on Day 23 in China; total collections at Rs. 319.89 cr". 26 April 2019. Retrieved 26 April 2019.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Andhadhun on IMDb
- Andhadhun at Rotten Tomatoes
- ಬಾಕ್ಸ್ ಆಫ಼ೀಸ್ ಮೋಜೊದಲ್ಲಿ ಅಂಧಾಧುನ್ (ಚಲನಚಿತ್ರ)