ವಿಷಯಕ್ಕೆ ಹೋಗು

ಅಂತರಜಾಲ ವಹಿವಾಟು ವ್ಯವಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಗದುರಹಿತ ಆರ್ಥಿಕ ವ್ಯವಸ್ಥೆ

[ಬದಲಾಯಿಸಿ]
  • ನಗದುರಹಿತ ಆರ್ಥಿಕ ವ್ಯವಸ್ಥೆಯತ್ತ ಭಾರತ ಸಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಬಯಕೆ. ಇತ್ತೀಚಿನ ‘ಮನದ ಮಾತು’ ಬಾನುಲಿ ಕಾರ್ಯಕ್ರಮದಲ್ಲಿ ಅವರು ಅದನ್ನೇ ಪ್ರತಿಪಾದಿಸಿದ್ದಾರೆ.
  • ‘ಡಿಜಿಟಲ್‌ ಅರ್ಥ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕಲಿತುಕೊಳ್ಳಿ. ಬ್ಯಾಂಕ್‌ ಖಾತೆ ಮತ್ತು ಇಂಟರ್‌ನೆಟ್‌ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಯಾವೆಲ್ಲ ರೀತಿಯಲ್ಲಿ ಬಳಸಬಹುದು ಎಂಬುದನ್ನು ಅರಿತುಕೊಳ್ಳಿ. ವಿವಿಧ ಬ್ಯಾಂಕ್‌ಗಳ ಆ್ಯಪ್‌ಗಳನ್ನು ಬಳಸುವುದನ್ನು ಕಲಿಯಿರಿ. ನಗದು ಇಲ್ಲದೆಯೇ ವ್ಯಾಪಾರ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ’ ಎಂದು ಪ್ರಧಾನಿ ಯವರು ಹೇಳಿದ್ದಾರೆ.

ನಗದುರಹಿತ ವಹಿವಾಟು ಸಮಸ್ಯೆ

[ಬದಲಾಯಿಸಿ]
  • ನಗದುರಹಿತ ವಹಿವಾಟು ವ್ಯವಸ್ಥೆ ಜಾರಿಗೆ ತರುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದನ್ನು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್‌ ಬಳಕೆ ಪ್ರಮಾಣದಲ್ಲಿ ಇತ್ತೀಚೆಗೆ ಅಮೆರಿಕವನ್ನು ಹಿಂದಿಕ್ಕಿ ಭಾರತ ಎರಡನೇ ಸ್ಥಾನಕ್ಕೆ ಏರಿದೆ. ಹಾಗಿದ್ದರೂ ‘ಬ್ಯುಸಿನೆಸ್‌ ಸ್ಟಾಂಡರ್ಡ್‌’ ಸಮೀಕ್ಷೆ ಪ್ರಕಾರ ದೇಶದ ಶೇ 68ರಷ್ಟು ವಹಿವಾಟು ನಗದು ಮೂಲಕವೇ ನಡೆಯುತ್ತಿದೆ. ಬೇರೆ ಕೆಲವು ಸಮೀಕ್ಷೆಗಳು ಶೇ 90ರಷ್ಟು ವ್ಯಾಪಾರ ನಗದಿನಲ್ಲಿಯೇ ನಡೆಯುತ್ತದೆ ಎನ್ನುತ್ತಿವೆ.
  • ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ನೀಡಿದ ಮಾಹಿತಿ ಪ್ರಕಾರ, ದೇಶದಲ್ಲಿ 34 ಕೋಟಿ ಜನರು ಇಂಟರ್ನೆಟ್‌ ಬಳಕೆದಾರರು. ಇದು ಒಟ್ಟು ಜನಸಂಖ್ಯೆಯ ಶೇ 27ರಷ್ಟಾಗುತ್ತದೆ. ಇಂಡಿಯಾ ಸ್ಪೆಂಡ್‌ ಸಂಸ್ಥೆಯ ಸಮೀಕ್ಷೆ ಪ್ರಕಾರ ಇಂಟರ್ನೆಟ್‌ ಬಳಕೆಯ ಜಾಗತಿಕ ಸರಾಸರಿ ಶೇ 67. ನೈಜೀರಿಯಾ, ಕೀನ್ಯಾ, ಘಾನಾ, ಇಂಡೋನೇಷ್ಯಾಗಳಿಗಿಂತಲೂ ಭಾರತ ಬಹಳ ಕೆಳಗಿದೆ. ಅಂದರೆ ಭಾರತದ ಶೇ 73ರಷ್ಟು ಜನರು ಅಥವಾ 91 ಕೋಟಿ ಜನರಿಗೆ ಅಂತರಜಾಲ ಸೌಲಭ್ಯ ಲಭ್ಯ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಅಂತರಜಾಲ ಸೌಲಭ್ಯ ಹೊಂದಿರುವವರ ಪ್ರಮಾಣ ಶೇ 13ಕ್ಕೂ ಕಡಿಮೆ. ನಗರ ಪ್ರದೇಶದಲ್ಲಿ ಶೇ 58ರಷ್ಟು ಜನರಿಗೆ ಅಂತರಜಾಲ ಸೌಲಭ್ಯ ಲಭ್ಯ ಇದೆ[][]

ಸ್ಮಾರ್ಟ್‌ ಫೋನ್‌ ಇರುವವರು ಶೇ 17ರಷ್ಟು ಜನರು ಮಾತ್ರ

[ಬದಲಾಯಿಸಿ]
  • ಬ್ಯಾಂಕಿಂಗ್‌ ಆ್ಯಪ್‌ಗಳನ್ನು ಬಳಸಲು ಸ್ಮಾರ್ಟ್‌ಫೋನ್‌ ಅತ್ಯಗತ್ಯ. ಭಾರತದಲ್ಲಿ ಸ್ಮಾರ್ಟ್‌ ಫೋನ್‌ ಹೊಂದಿರುವ ವಯಸ್ಕರ ಪ್ರಮಾಣ ಶೇ 17 ಮಾತ್ರ. ಪ್ಯೂ ಸಮೀಕ್ಷೆ ಪ್ರಕಾರ, ಏಷ್ಯಾ ಪೆಸಿಫಿಕ್‌ ಪ್ರದೇಶದಲ್ಲಿ ಸ್ಮಾರ್ಟ್‌ ಫೋನ್‌ ಬಳಕೆ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ದೇಶ ಭಾರತ. ಹಾಗಿದ್ದರೂ ಕಡಿಮೆ ಆದಾಯ ವರ್ಗದ ಶೇ 7ರಷ್ಟು ಜನರಲ್ಲಿ ಮಾತ್ರ ಸ್ಮಾರ್ಟ್‌ ಫೋನ್‌ ಇದೆ. ಶ್ರೀಮಂತ ವರ್ಗದಲ್ಲಿ ಕೂಡ ಸ್ಮಾರ್ಟ್‌ ಫೋನ್‌ ಬಳಕೆ ಪ್ರಮಾಣ ಶೇ 22 ಮಾತ್ರ.[][]

ಮೊಬೈಲ್ ಇದೆ, ನೆಟ್‌ ಇಲ್ಲ

[ಬದಲಾಯಿಸಿ]

ಭಾರತದಲ್ಲಿರುವ ಮೊಬೈಲ್‌ ಸಂಪರ್ಕಗಳ ಸಂಖ್ಯೆ ನೂರು ಕೋಟಿಗೂ ಹೆಚ್ಚು. ಆದರೆ ಇದರಲ್ಲಿ ಬ್ರಾಡ್‌ಬ್ಯಾಂಡ್‌ ಅಂತರಜಾಲ ಸಂಪರ್ಕ ಹೊಂದಿರುವವರು ಶೇ 15 ಮಾತ್ರ (3ಜಿ ಮತ್ತು 4ಜಿ)

ಇಂಟರ್‌ನೆಟ್‌ಗ ವೇಗ ಕಡಿಮೆ

[ಬದಲಾಯಿಸಿ]

ಮೊಬೈಲ್‌ ಇಂಟರ್ನೆಟ್‌ನ ವೇಗವೂ ಜನರು ಬ್ಯಾಂಕಿಂಗ್‌ ವ್ಯವಹಾರಕ್ಕೆ ಫೋನ್‌ ಬಳಸುವ ಪ್ರಮಾಣವನ್ನು ನಿರ್ಧರಿಸುತ್ತದೆ ಎಂದು ಅಮೆರಿಕದ ಒರಾಕಲ್‌ ಮ್ಯಾಕ್ಸಿಮೈಸರ್ ಸಂಸ್ಥೆ ಹೇಳಿದೆ. ಸಂಸ್ಥೆಯ ಸಮೀಕ್ಷೆ ಪ್ರಕಾರ ಎರಡು ಸೆಕೆಂಡ್‌ಗಳಲ್ಲಿ ಅಂತರಜಾಲ ಪುಟ ತೆರೆದುಕೊಳ್ಳದಿದ್ದರೆ ಜನರು ಅದನ್ನು ಕೈಬಿಡುತ್ತಾರೆ. ಇನ್ನೊಂದು ಸಮೀಕ್ಷೆ ಪ್ರಕಾರ, ಶೇ 68ರಷ್ಟು ಜನರು ಆರು ಸೆಕೆಂಡ್‌ ಕಾಯುತ್ತಾರೆ.[]

  • ಭಾರತದಲ್ಲಿ ಮೊಬೈಲ್‌ನಲ್ಲಿ ಒಂದು ಪುಟ ತೆರೆದುಕೊಳ್ಳಲು ಬೇಕಾದ ಸರಾಸರಿ ಅವಧಿ 5.5 ಸೆಕೆಂಡ್‌. ಚೀನಾದಲ್ಲಿ ಇದು 2.2 ಸೆಕೆಂಡ್‌, ಶ್ರೀಲಂಕಾದಲ್ಲಿ 4.5 ಸೆಕೆಂಡ್‌, ಬಾಂಗ್ಲಾದೇಶದಲ್ಲಿ 4.9 ಸೆಕೆಂಡ್‌. ಇಸ್ರೇಲ್‌ ಅತ್ಯಂತ ವೇಗದ ಅಂತರಜಾಲ ವ್ಯವಸ್ಥೆ ಹೊಂದಿದೆ. ಇಲ್ಲಿ ಪುಟ ತೆರೆದುಕೊಳ್ಳಲು ಬೇಕಿರುವುದು 1.3 ಸೆಕೆಂಡ್‌ ಮಾತ್ರ.

ಪಿಒಎಸ್‌ ಯಂತ್ರಗಳ ಕೊರತೆ

[ಬದಲಾಯಿಸಿ]
  • (point-of-sale terminal -POS terminal)
ಡಿಜಿಟಲ್‌ ಅರ್ಥವ್ಯವಸ್ಥೆಗೆ ಸಮಿತಿ
  • ದೇಶವನ್ನು ಡಿಜಿಟಲ್‌ ಅರ್ಥವ್ಯವಸ್ಥೆಯಾಗಿ ರೂಪಿಸುವ ನೀಲ ನಕ್ಷೆ ರೂಪಿಸಲು ಆರು ಮುಖ್ಯಮಂತ್ರಿಗಳಿರುವ ಸಮಿತಿಯೊಂದನ್ನು ಕೇಂದ್ರ ಸರ್ಕಾರ ಬುಧವಾರ ರಚಿಸಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮಿತಿಯ ಮುಖ್ಯಸ್ಥರಾಗಿರುತ್ತಾರೆ. ನೀತಿ ಆಯೋಗದ ಉಪಾಧ್ಯಕ್ಷ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮಿತಿಯಲ್ಲಿ ಇರುತ್ತಾರೆ. ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನೂ ಸಮಿತಿಗೆ ಸೇರಿಸಿಕೊಳ್ಳಲಾಗಿದೆ.
  • ಭಾರತವನ್ನು ನಗದುರಹಿತ ಅರ್ಥ ವ್ಯವಸ್ಥೆಯಾಗಿಸುವುದಕ್ಕೆ ಜಾಗತಿಕ ಮಟ್ಟದ ಅತ್ಯುತ್ತಮ ಪದ್ಧತಿಗಳನ್ನು ಗುರುತಿಸಿ ಅದನ್ನು ಇಲ್ಲಿ ಜಾರಿಗೆ ತರುವುದು ಈ ಸಮಿತಿಯ ಉದ್ದೇಶವಾಗಿದೆ.
  • ಸಮಿತಿಯಲ್ಲಿರುವ ಇತರ ಮುಖ್ಯಮಂತ್ರಿಗಳೆಂದರೆ ಒಡಿಶಾದ ನವೀನ್‌ ಪಟ್ನಾಯಕ್‌, ಸಿಕ್ಕಿಂನ ಪವನ್‌ ಕುಮಾರ್‌ ಚಾಮ್ಲಿಂಗ್‌, ಪುದುಚೇರಿಯ ವಿ. ನಾರಾಯಣ ಸ್ವಾಮಿ, ಮಧ್ಯಪ್ರದೇಶದ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್‌. ಬಾಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ನ ಅಧ್ಯಕ್ಷ ಜನಮೇಜಯ ಸಿನ್ಹಾ, ನೆಟ್‌ಕೋರ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ ಜೈನ್‌, ಐಸ್ಪಿರಿಟ್‌ ಸಂಸ್ಥೆಯ ಸಹ ಸಂಸ್ಥಾಪಕ ಶರದ್‌ ಶರ್ಮಾ ಮತ್ತು ಅಹಮದಾಬಾದ್‌ ಐಐಎಂನ ಪ್ರಾಧ್ಯಾಪಕ ಜಯಂತ್‌ ವರ್ಮಾ ವಿಶೇಷ ಆಹ್ವಾನಿತರು. ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಅಭಿಯಾನ ನಡೆಸುವ ಹೊಣೆಯನ್ನು ನೀತಿ ಆಯೋಗಕ್ಕೆ ವಹಿಸಲಾಗಿದೆ.[]
  • ಭಾರತದಲ್ಲಿ ಪ್ರತಿ ಹತ್ತು ಲಕ್ಷ ಜನರಿಗೆ ಇರುವುದು 858 ಪಿಒಎಸ್‌ ಯಂತ್ರಗಳು (ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿ ವ್ಯವಸ್ಥೆ ಮತ್ತು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್ ನಗದು ರಿಜಿಸ್ಟರ್ ಒಂದು ಗಣಕೀಕೃತ ಬದಲಾವಣೆ ಆಗಿದೆ.). ದೇಶದಲ್ಲಿ ಇರುವ ಒಟ್ಟು ಯಂತ್ರಗಳ ಸಂಖ್ಯೆ 14.6 ಲಕ್ಷ. ಬ್ರೆಜಿಲ್‌ನಲ್ಲಿ ಪ್ರತಿ 10 ಲಕ್ಷ ಜನರಿಗೆ 32,995 ಯಂತ್ರಗಳಿವೆ. ಚೀನಾ ಮತ್ತು ರಷ್ಯಾದಲ್ಲಿನ ಪ್ರಮಾಣ 4,000.[]
  • ಶೇ 70ಕ್ಕಿಂತ ಹೆಚ್ಚು ಪಿಒಎಸ್‌ ಯಂತ್ರಗಳು ಭಾರತದ 15 ದೊಡ್ಡ ನಗರಗಳಲ್ಲಿವೆ. ನೋಟು ರದ್ದತಿ ನಂತರವೂ ಈ ಪರಿಸ್ಥಿತಿ ಬದಲಾಗಿಲ್ಲ. ಅಷ್ಟೇ ಅಲ್ಲ, ಹೊಸದಾಗಿ ಪಿಒಎಸ್‌ ಯಂತ್ರಗಳಿಗೆ ಬಂದಿರುವ ಬೇಡಿಕೆ ಕೂಡ ಮೊದಲ ಸ್ತರದ ನಗರಗಳಿಂದ. ಎರಡನೇ ಸ್ತರದ ನಗರಗಳಲ್ಲಿ ನಗದು ಪಡೆಯಲು ಪಿಒಎಸ್‌ ಯಂತ್ರಗಳು ಬಳಕೆಯಾಗುತ್ತಿವೆ.[]

ಹ್ಯಾಕರ್‌ಗಳಿಂದ ಬ್ಯಾಂಕ್ ಖಾತೆಗೆ ಕನ್ನ ಸಾಧ್ಯತೆ

[ಬದಲಾಯಿಸಿ]
  • ವೀಸಾ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮಾಹಿತಿ ಕನ್ನಕ್ಕೆ ಆರೇ ಸೆಕೆಂಡ್‌ ಸಾಕು;
  • ಕಾರ್ಡ್‌ ಇಲ್ಲದೆಯೇ ಹ್ಯಾಕರ್‌ಗಳು ವೀಸಾ ಡೆಬಿಟ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳ ಎಲ್ಲಾ ಗೋಪ್ಯ ವಿವರಗಳನ್ನು ಕಲೆ ಹಾಕಬಹುದು. ಒಮ್ಮೆ ಆ ಮಾಹಿತಿ ಕಲೆ ಹಾಕಿದ ನಂತರ ಕೇವಲ 6 ಸೆಕೆಂಡ್‌ಗಳಲ್ಲಿ ಈ ಕಾರ್ಡ್‌ನ ಮಾಹಿತಿ ಬಳಸಿ ಆನ್‌ಲೈನ್‌ ಖರೀದಿ ಮಾಡಬಹುದು ಎಂದು ಬ್ರಿಟನ್‌ನ ಸಂಶೋಧಕರ ತಂಡವೊಂದು ಪ್ರತಿಪಾದಿಸಿದೆ.
  • ಇಲ್ಲಿನ ನ್ಯೂಕ್ಯಾಸಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ. ಈಗಿನ ‘ಇ–ಪೇಮೆಂಟ್‌’ ವ್ಯವಸ್ಥೆಯಲ್ಲಿರುವ ಕೆಲವು ನ್ಯೂನತೆಗಳನ್ನು ಈ ತಂಡ ಪತ್ತೆ ಮಾಡಿದೆ. ಸಂಶೋಧನೆಯ ವಿವರ ಇಂತಿದೆ. ಕಾರ್ಡ್‌ಗಳ ಮೊದಲ ಆರು ಸಂಖ್ಯೆಗಳು ಅದು ಡೆಬಿಟ್‌ ಕಾರ್ಡೇ ಅಥವಾ ಕ್ರೆಡಿಟ್‌ ಕಾರ್ಡೇ ಎಂಬುದನ್ನು ಗುರುತಿಸಲು ನೆರವಾಗುತ್ತದೆ. ಇವೇ ಸಂಖ್ಯೆಗಳು ಅದು ಯಾವ ಬ್ಯಾಂಕ್‌ನದ್ದು ಎಂಬುದನ್ನು ಸೂಚಿಸುತ್ತದೆ. ಒಂದು ಕಾರ್ಡ್‌ನ ಈ ವಿವರ ದೊರೆತರೆ ಅದೇ ಬ್ಯಾಂಕ್‌ನ ಇತರ ಕಾರ್ಡ್‌ಗಳ ಸಂಖ್ಯೆಗಳು ಹ್ಯಾಕರ್‌ಗಳಿಗೆ ಸುಲಭವಾಗಿ ದೊರೆಯುತ್ತವೆ.
  • ಈ ಆರು ಸಂಖ್ಯೆಗಳು ದೊರೆತರೆ ಮುಂದಿನ 10 ಸಂಖ್ಯೆಗಳನ್ನು ಊಹೆಯ ಮೇಲೆ ನಮೂದಿಸಲಾಗುತ್ತದೆ. ಕಾರ್ಡ್‌ನ ಸಿವಿವಿ ಸಂಖ್ಯೆ ಮತ್ತು ಮುಕ್ತಾಯದ ಅವಧಿಯನ್ನು ಊಹೆಯ ಮೇಲೆ ನಮೂದಿಸಬಹುದು. ಹಲವು ವೆಬ್‌ಸೈಟ್‌ಗಳಲ್ಲಿ ಏಕಕಾಲಕ್ಕೆ ಪ್ರಯತ್ನಿಸಿ ಗೋಪ್ಯ ಸಂಖ್ಯೆಗಳನ್ನು ಪಡೆಯಲಾಗುತ್ತದೆ. ವಿವಿಧ ಸಂಯೋಜನೆಗಳಲ್ಲಿ ಸಂಖ್ಯೆಗಳನ್ನು ದಾಖಲಿಸುತ್ತಾ ಹೋದರೆ ಒಮ್ಮೆ ಸರಿಯಾದ ಸಿವಿವಿ ಸಂಖ್ಯೆ ಸಿಗುತ್ತದೆ. ಇದೇ ತಂತ್ರವನ್ನು ಮುಕ್ತಾಯದ ಅವಧಿಯನ್ನು ಪತ್ತೆ ಮಾಡಲೂ ಬಳಸಲಾಗುತ್ತದೆ.
  • ಒಂದೇ ಜಾಲತಾಣದಲ್ಲಿ ಹಲವು ಬಾರಿ ತಪ್ಪು ಸಂಖ್ಯೆ ನಮೂದಿಸಿದರೂ, ಜಾಲತಾಣಕ್ಕಾಗಲೀ ಬ್ಯಾಂಕ್‌ಗಾಗಲಿ ಇದು ತಿಳಿಯುವುದಿಲ್ಲ. ಇದು ಈಗಿನ ವೀಸಾ ಕಾರ್ಡ್‌ಗಳ ಇ–ಪೇಮೆಂಟ್‌ ವ್ಯವಸ್ಥೆಯಲ್ಲಿನ ಭದ್ರತೆಯ ದೊಡ್ಡ ಲೋಪ. ಹೀಗೆ ಕಲೆಹಾಕಿದ ವಿವರಗಳನ್ನು ಬಳಸಿಕೊಂಡು ಹಲವು ಬಾರಿ ಪ್ರಯತ್ನಿಸಿದ ನಂತರ ಕಾರ್ಡ್‌ನ ಪಾಸ್‌ವರ್ಡ್‌ ಪತ್ತೆಯಾಗುತ್ತದೆ. ನಂತರ ಕೇವಲ ಆರು ಸೆಕೆಂಡ್‌ಗಳಲ್ಲಿ ಆ ಕಾರ್ಡ್‌ನಿಂದ ಇ–ಪಾವತಿ ಮಾಡಬಹುದು.

ಭಾರತದ ಕಾರ್ಡ್‌ಗಳಿಗೂ ಅಪಾಯ

[ಬದಲಾಯಿಸಿ]
  • ವಿದೇಶಿ ವೀಸಾ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೇಲೆ ಈ ಸಂಶೋಧನೆ ನಡೆಸಲಾಗಿದೆ. ವಿದೇಶಗಳಲ್ಲಿ ಇ– ಪೇಮೆಂಟ್‌ ವೇಳೆ ಒಂದು ಬಾರಿಯ ರಹಸ್ಯಸಂಖ್ಯೆ (ಒನ್‌ ಟೈಂ ಪಾಸ್‌ವರ್ಡ್ –ಒಟಿಪಿ) ಕೇಳುವ ವ್ಯವಸ್ಥೆ ಇಲ್ಲ. ಭಾರತದಲ್ಲಿ ಈ ವ್ಯವಸ್ಥೆ ಇದೆ.
  • ಭಾರತದ ಯಾವುದೇ ಇ–ಮಾರುಕಟ್ಟೆಗಳಲ್ಲಿನ ಖರೀದಿಗೆ ಇ–ಪಾವತಿ ಮಾಡಬೇಕೆಂದರೆ ಒಟಿಪಿ ನಮೂದಿಸುವುದು ಕಡ್ಡಾಯ. ಆದರೆ ಭಾರತೀಯರ ಕಾರ್ಡ್‌ ವಿವರ ಬಳಸಿಕೊಂಡು ವಿದೇಶಿ ಇ–ಮಾರುಕಟ್ಟೆಗಳಲ್ಲಿನ ಖರೀದಿಗೆ ಇ–ಪಾವತಿ ಮಾಡುವಾಗ ಒಟಿಪಿ ನಮೂದಿಸುವ ಅಗತ್ಯವಿಲ್ಲ. ಹೀಗಾಗಿ ಭಾರತೀಯರ ವೀಸಾ ಕಾರ್ಡ್‌ಗಳಿಗೂ ಈ ಸ್ವರೂಪದ ಹ್ಯಾಕಿಂಗ್‌ನ ಅಪಾಯವಿದೆ.[]

ಯಾಂತ್ರಿಕ ವ್ಯವಸ್ಥೆ ವಿವರ

[ಬದಲಾಯಿಸಿ]
  • ಅಂತರಜಾಲ ಪ್ರಮಾಣ :[೮]
ವಿಷಯ ವಿವರ ಸಂಖ್ಯೆ/ಪ್ರಮಾಣ
ದೇಶದಲ್ಲಿ ಅಂತರಜಾಲ ಹೊಂದಿರುವವರ ಪ್ರಮಾಣ 27%
ನಗರದಲ್ಲಿ ಅಂತರಜಾಲ ಹೊಂದಿರುವವರ ಪ್ರಮಾಣ 58%
ಗ್ರಾಮೀಣ ಪ್ರದೇಶದಲ್ಲಿ ಅತರಜಾಲ ಹೊಂದಿರುವವರ ಪ್ರಮಾಣ 13%
ದೇಶದಲ್ಲಿ ಸ್ಮಾರ್ಟ್ ಫೋನ್ ಹೋದಿರುವ ವಯಸ್ಕರ ಪ್ರಮಾಣ 17%
ಕಡಿಮೆ ಆದಾಯದ ವರ್ಗದಲ್ಲಿ ಸ್ಮಾರ್ಟ್ ಫೋನ್ ಹೋದಿರುವ ವಯಸ್ಕರ ಪ್ರಮಾಣ 7%
ಶ್ರೀಮಂತ ವರ್ಗದಲ್ಲಿ ಸ್ಮಾರ್ಟ್ ಫೋನ್ ಹೋದಿರುವ ವಯಸ್ಕರ ಪ್ರಮಾಣ 22%
ದೇಶದಲ್ಲಿ ಪಿಒಎಸ್ ಯಂತ್ರಗಳ ಸಂಖ್ಯೆ 14.6 ಲಕ್ಷ

ವೈಯುಕ್ತಿಕ ವ್ವಹಾರದ ರಹಸ್ಯ ಉಳಿಯುವುದಿಲ್ಲ

[ಬದಲಾಯಿಸಿ]
  • ಇನ್ನು ಹತ್ತು ದಿನಗಳಲ್ಲಿ ಹಳೆಯ ನೋಟುಗಳನ್ನು ಬದಲಾಯಿಸುವುದಕ್ಕೆ ಸರ್ಕಾರ ನೀಡಿದ ಗಡುವು ಮುಗಿಯುತ್ತದೆ. ಕಪ್ಪು ಹಣವನ್ನು ಇಲ್ಲವಾಗಿಸುವ ಘೋಷಣೆ ಸ್ವತಃ ಪ್ರಧಾನ ಮಂತ್ರಿಯವರಿಗೇ ಮರೆತು ಹೋಗಿದೆ. ಸದ್ಯದ ಘೋಷಣೆ ‘ನಗದು ರಹಿತ ಆರ್ಥಿಕತೆ’.
  • ನೋಟು ಅಥವಾ ನಾಣ್ಯ ಯಾರ ಕೈಯಲ್ಲಿದೆಯೋ ಅದು ಅವರ ಸ್ವತ್ತಾಗಿರುತ್ತದೆ. ಆತ ಅಥವಾ ಆಕೆ ಅದನ್ನು ಯಾರಿಗೆ ಬೇಕಾದರೂ ಈ ಸ್ವತ್ತನ್ನು ಹಸ್ತಾಂತರಿಸಬಹುದು. ಇದಕ್ಕೆ ಯಾವ ಮಧ್ಯವರ್ತಿಯೂ ಬೇಕಾ­ಗುವುದಿಲ್ಲ. ಆದರೆ ಬ್ಯಾಂಕಿನ ಖಾತೆ­ಯಲ್ಲಿರುವ ಹಣವನ್ನು ಹೀಗೆ ಹಸ್ತಾಂತ­ರಿಸುವು­ದಕ್ಕೆ ಮಧ್ಯವರ್ತಿ ಬೇಕಾಗುತ್ತದೆ. ಈ ಕೆಲಸ ಮಾಡುವುದು ಹಣಕಾಸು ತಂತ್ರಜ್ಞಾನ ಎಂದು ಕರೆಯಲಾಗುವ ಆಧುನಿಕ ವ್ಯವಸ್ಥೆ. ಈ ತಂತ್ರಜ್ಞಾನವನ್ನು ನಿರ್ವಹಿಸುವ ಸಂಸ್ಥೆಗಳೆಲ್ಲವೂ ಹಣ ವಿನಿಮಯದ ಮಧ್ಯವರ್ತಿಗಳಾಗಿರುತ್ತವೆ.
  • ಈ ಮಧ್ಯವರ್ತಿಗಳ ಮೂಲಕ ವ್ಯವಹರಿಸುವುದರಿಂದ ದಾಖಲೆಗಳು ಸೃಷ್ಟಿಯಾಗುತ್ತವೆ. ಅದರಿಂದಾಗಿ ಯಾರೂ ತೆರಿಗೆಯನ್ನು ವಂಚಿಸಲು ಸಾಧ್ಯವಿಲ್ಲ. ಆದ್ದರಿಂದ ಆಡಳಿತಕ್ಕೆ ಅನುಕೂಲ­ವಾಗುತ್ತದೆ. ಕಪ್ಪು ಹಣದ ಸೃಷ್ಟಿ­ಯಾಗುವುದಿಲ್ಲ ಎಂಬುದು ನಗದು ರಹಿತ ವ್ಯವಹಾರದ ಪ್ರತಿಪಾದಕರ ವಾದ. ಇದು ಬಹುತೇಕ ನಿಜವೂ ಹೌದು. ವಿನಿ­ಮಯವನ್ನು ಸಾಧ್ಯ ಮಾಡುವ ಮಧ್ಯ­ವರ್ತಿ ಸಂಸ್ಥೆ ತನ್ನ ಸೇವೆಗಾಗಿ ಒಂದು ನಿರ್ದಿಷ್ಟ ಶುಲ್ಕವನ್ನು ಪಡೆಯುತ್ತದೆ.
  • ಈ ಹೊರೆಯನ್ನು ಮಾರಾಟಗಾರ ಸಹಜ­ವಾಗಿಯೇ ತನ್ನ ಗ್ರಾಹಕನಿಗೆ ವರ್ಗಾ­ಯಿಸು­ತ್ತಾನೆ. ಅಂದರೆ ಕರೆನ್ಸಿ ನೋಟು­ಗಳನ್ನು ನಿರ್ವಹಿಸುವುದಕ್ಕೆ ಸರ್ಕಾರಕ್ಕೆ ಆಗುತ್ತಿದ್ದ ವೆಚ್ಚವನ್ನು ಜನರು ನೇರವಾಗಿ ಭರಿಸುತ್ತಾರೆ. ಆದರೆ ಇದರ ಲಾಭವನ್ನು ಜನರು ಪಡೆಯುತ್ತಾರೆಯೇ? ನಗದು ರಹಿತ ವಹಿವಾಟಿಗೆ ಈ ತನಕ ಭಾರತ ಸರ್ಕಾರ ಘೋಷಿಸದಿರುವ ತೆರಿಗೆ ವಿನಾ­ಯಿತಿಗಳಂತೂ ಗ್ರಾಹಕರಿಗೆ ಆಗುವ ನಷ್ಟವನ್ನು ತುಂಬಿಸಿಕೊಡುವ ಪ್ರಮಾಣ­ದಲ್ಲಿ ಇಲ್ಲ.
  • ಇನ್ನು ಮಧ್ಯವರ್ತಿಗಳು ಸಂಗ್ರಹಿಸುವ ವೈಯಕ್ತಿಕ ಮಾಹಿತಿಯ ವಿಚಾರ ಬೇರೆಯೇ ಇದೆ. ಆನ್ ಲೈನ್ ಮಾರು­ಕಟ್ಟೆಗಳಿಂದ ಒಂದು ಉತ್ಪನ್ನ ಖರೀದಿಸಿ­ದರೆ ಅದಕ್ಕೆ ಸಂಬಂಧಿಸಿದ ನೂರೆಂಟು ಜಾಹೀರಾತುಗಳು ನಾವು ಸಂದರ್ಶಿಸುವ ಎಲ್ಲಾ ವೆಬ್‌ಸೈಟುಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ನಮ್ಮ ಬ್ಯಾಂಕ್‌ಗಳು ಮತ್ತು ಮೊಬೈಲ್ ವ್ಯಾಲೆಟ್‌ಗಳನ್ನು ನಿರ್ವಹಿಸುವ ಸಂಸ್ಥೆಗಳು ಹೀಗೆಯೇ ನಮ್ಮನ್ನು ಹಿಂಬಾಲಿಸುವುದಿಲ್ಲ ಎಂದು ನಂಬುವುದಕ್ಕೆ ಯಾವ ಕಾರಣವೂ ಇಲ್ಲ. ಏಕೆಂದರೆ ಇದನ್ನು ನಿರ್ಬಂಧಿಸುವ ಯಾವ ಕಾನೂನೂ ಸದ್ಯ ನಮ್ಮಲ್ಲಿ ಇಲ್ಲ.
  • ನೋಟು ಮತ್ತು ನಾಣ್ಯದ ರೂಪದಲ್ಲಿ ಹಣವಿದ್ದಾಗ ಅದರ ನಿರ್ವಹಣೆಗೊಂದು ವಿಕೇಂದ್ರೀಕೃತ ಸ್ವರೂಪವಿರುತ್ತದೆ. ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹತೆಯ ಕುರಿತ ಸಂಶಯ ಬಂದಾಕ್ಷಣ ಗ್ರಾಹಕರು ಏಕಾಏಕಿ ತಮ್ಮ ಹಣವನ್ನು ಹಿಂತೆಗೆ­ಯುತ್ತಾರೆ. ರನ್ ಆನ್ ಬ್ಯಾಂಕ್ ಎಂದು ಕರೆಯುವ ಈ ಪ್ರಕ್ರಿಯೆ ಬ್ಯಾಂಕುಗಳ ಉತ್ತರದಾಯಿತ್ವವನ್ನು ಖಾತರಿ ಪಡಿಸುತ್ತವೆ. ಒಂದು ವೇಳೆ ನಗದನ್ನು ಬಳ­ಸುವುದಕ್ಕೆ ಮಿತಿಯೊಂದನ್ನು ಹೇರಿ­ದರೆ ಈ ಸಾಧ್ಯತೆಯೇ ಇಲ್ಲವಾಗುತ್ತದೆ. ಅಷ್ಟೇ ಅಲ್ಲ ಬ್ಯಾಂಕುಗಳು ತಮ್ಮ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಜೂಜಿನಂಥ ವ್ಯವಹಾರಗಳಿಗೆ ಇಳಿದುಬಿಡುತ್ತವೆ. ಅಮೆರಿಕದ ಗೃಹಸಾಲದ ಸಮಸ್ಯೆ ಸೃಷ್ಟಿಯಾದದ್ದೇ ಹೀಗೆ.
  • ಇನ್ನು ಋಣಾತ್ಮಕ ಬಡ್ಡಿಯ (ತಮ್ಮ ಡಿಪಾಜೆಟ್ ಮೇಲೆ ಗ್ರಾಹಕರೇ ಕೊಡುವ ಬಡ್ಡಿ) ಸಾಧ್ಯತೆ ಮತ್ತೊಂದು. ಯೂರೋಪಿನ ಕೆಲ ದೇಶ­ಗಳು ಈ ಸಮಸ್ಯೆಯನ್ನು ಅನು­ಭವಿಸಿಬಿಟ್ಟಿವೆ. ಸ್ವಿಟ್ಜರ್ಲೆಂಡ್‌ನ ಪೌರರು ನಗದು ಆರ್ಥಿಕತೆಯನ್ನು ಬೆಂಬಲಿ­ಸುವುದರ ಹಿಂದೆ ಇದೊಂದು ಕಾರಣವೂ ಇತ್ತು. ದುಡಿಮೆಯ ಹಣವನ್ನು ಬ್ಯಾಂಕ್‌ನ ಹೊರತಾದ ಬೇರೆಲ್ಲೂ ಇಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಋಣಾತ್ಮಕ ಬಡ್ಡಿಯ ವ್ಯವಸ್ಥೆ ಬಂದರೆ ಜನರೇನು ಮಾಡಬೇಕು?
  • ಈ ಎಲ್ಲಾ ಸಂದರ್ಭಗಳಲ್ಲಿ ತೊಂದರೆ­ಯಾಗುವುದು ಕಾನೂನು ಬದ್ಧವಾಗಿ ಸಂಪಾದಿಸಿರುವವರಿಗೇ ಹೊರತು ಕಪ್ಪು ಹಣದ ಅಥವಾ ಅಕ್ರಮ ಸಂಪಾದನೆಯ ಮಾರ್ಗಗಳನ್ನು ಅವಲಂಬಿಸಿರು­ವವರಿಗಲ್ಲ. ಕಳೆದ ನಲವತ್ತು ದಿನಗಳಲ್ಲಿ ನಡೆದ ಬೆಳವಣಿಗೆಗಳೇ ಇದನ್ನು ಸಾಬೀತು ಮಾಡುತ್ತಿವೆ. ನ್ಯಾಯಬದ್ಧ ದುಡಿಮೆಯ ಹಣವನ್ನು ಜನರು ಪಡಿತರ ಸ್ವರೂಪದಲ್ಲಿ ಪಡೆಯುತ್ತಿದ್ದಾಗ ಕಪ್ಪು ಕುಳಗಳು ಕೋಟಿಗಳನ್ನು ಪರಿವರ್ತಿಸಿಕೊಂಡರು.[೧೦]

ನಗದುರಹಿತ ವಹಿವಾಟಿಗೆ ಧಾವಂತ ಏಕೆ?

[ಬದಲಾಯಿಸಿ]
  • 23 Dec, 2016;ಪ್ರಕಾಶ ನಡಹಳ್ಳಿ;
  • ಅವಶ್ಯ ಮೂಲ ಸೌಕರ್ಯಗಳನ್ನು ಒದಗಿಸದೆ ನಗದುರಹಿತ ವಹಿವಾಟಿಗೆ ಹೊರಳಿಕೊಳ್ಳಿ ಎಂದು ಒತ್ತಡ ಹೇರುವುದು ಸರಿಯಲ್ಲ.ನೋಟು ರದ್ದತಿಯ ತನ್ನ ದುಡುಕು ನಿರ್ಧಾರದಿಂದ ಆಗಿರುವ ಅವಾಂತರದಿಂದ ಪಾರಾಗಲು, ಜನರನ್ನು ಬಲವಂತದಿಂದ ಇನ್ನೊಂದು ಅಪಾಯಕ್ಕೆ ದೂಡಿದಂತೆ ಅನ್ನಿಸುತ್ತಿಲ್ಲವೇ?ಆದ್ದರಿಂದ ನಗದುರಹಿತ ಎನ್ನುವುದರ ಬದಲು, ಕಡಿಮೆ ನಗದು ವ್ಯವಸ್ಥೆ ಎನ್ನಬಹುದು. ನಗದುರಹಿತ ವಹಿವಾಟಿಗೆ ಉತ್ತೇ ಜನ, ಕಪ್ಪು ಹಣ ಹಾಗೂ ನಕಲಿ ನೋಟುಗಳ ವಿರುದ್ಧದ ಸಮರದ ಬಗ್ಗೆ ತಕರಾರು ಇಲ್ಲ. ಆದರೆ ಸರ್ಕಾರದ ಧಾವಂತ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಈ ಅವಸರದ ತೀರ್ಮಾನಕ್ಕೆ ಆರ್ಥಿಕ ಅಗತ್ಯತೆಯೇ ಏಕೈಕ ಕಾರಣ ಆಗಿತ್ತೆಂದು ನಂಬುವುದು ಕಷ್ಟ.[೧೧]

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. Indian Telecom Services Performance Indicator Report for the Quarter ending June, 2016
  2. E commerce
  3. TN plans to develop mobile gateway for Govt payments
  4. What Is E-Commerce? - Business News Daily
  5. OctaShop e-Retail Services
  6. ನಗದುರಹಿತ ವ್ಯವಸ್ಥೆ:
  7. terminal (POS terminal)
  8. ನಗದುರಹಿತ ವಹಿವಾಟು ಜಾರಿಗೆ ದೇಶದ ಮುಂದೆ 5 ಸವಾಲು;ಪ್ರಜಾವಾಣಿ;4 Dec, 2016
  9. "ವೀಸಾ ಡೆಬಿಟ್‌/ಕ್ರೆಡಿಟ್‌ ಕಾರ್ಡ್‌ ಮಾಹಿತಿ ಕನ್ನಕ್ಕೆ ಆರೇ ಸೆಕೆಂಡ್‌ ಸಾಕು; ಪಿಟಿಐ;3 Dec, 2016". Archived from the original on 2016-12-03. Retrieved 2016-12-04.
  10. "ಎನ್.ಎ.ಎಂ. ಇಸ್ಮಾಯಿಲ್:ಪ್ರಜೆಗಳನ್ನು ಬೆತ್ತಲಾಗಿಸುವ ಅಪಾರದರ್ಶಕ ಪ್ರಭುತ್ವ:21 Dec, 2016". Archived from the original on 2016-12-21. Retrieved 2016-12-21.
  11. "ನಗದುರಹಿತ ವಹಿವಾಟಿಗೆ ಧಾವಂತ ಏಕೆ?;ಪ್ರಕಾಶ ನಡಹಳ್ಳಿ". Archived from the original on 2016-12-23. Retrieved 2016-12-23.