ಅಂತಃಶುದ್ಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತಃಶುದ್ಧಿ[ಬದಲಾಯಿಸಿ]

ಮಾನವನ ನೈತಿಕ ಜೀವನದಲ್ಲಿ ಅಂತಃಶುದ್ಧಿಯ ಮಹತ್ವ ಅತಿ ಹೆಚ್ಚಿನದು. ಅಂತಃಶುದ್ಧಿ ಇಲ್ಲದೆ ಯಾವ ಧಾರ್ಮಿಕ ಕಾರ್ಯಗಳನ್ನು ಮಾಡಿದರೂ ಅವುಗಳಿಗೆ ನೈತಿಕದೃಷ್ಟಿಯಲ್ಲಿ ಬೆಲೆಯಿಲ್ಲ. ಆಡಂಬರಕ್ಕೆ ಮಾಡಿದಂತೆ ಆಗುತ್ತದೆ. ತಾನು ಮಾಡಿದ ಕಾರ್ಯ ಸಾರ್ಥಕವಾಯಿತು ಎಂಬ ತೃಪ್ತಿ ಬರಬೇಕಾದರೆ ಈ ಕಾರ್ಯವನ್ನು ಅಂತಃಶುದ್ಧಿಯಿಂದ ಮಾಡಿರಬೇಕು.

ಕಳಬೇಡ, ಕೊಲಬೇಡ,
ಹುಸಿಯ ನುಡಿಯಲುಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲ ಸಂಗಮದೇವರನೊಲಿಸುವ ಪರ.

ಎಂಬ ಬಸವಣ್ಣನವರ ವಚನ ಸದಾಚಾರವೇ ಅಂತಃಶುದ್ಧಿಯ ಅಡಿಗಲ್ಲೆಂಬ ವಿಷಯವನ್ನು ಸ್ಪಷ್ಟಪಡಿಸುತ್ತದೆ.

  • ಬಾಹ್ಯ ಶುದ್ಧಿಗಿಂತಲೂ ಅಂತಃಶುದ್ಧಿಯೇ ಮುಖ್ಯವೆಂದು ಎಲ್ಲ ಶಾಸ್ತ್ರಗಳೂ ಹೇಳಿವೆ. ತನುವನ್ನು ತೊಳೆಯುವುದಕ್ಕಿಂತ ಮನವನ್ನು ತೊಳೆಯುವುದು ಮುಖ್ಯವಾದುದು. ಕಾಮ ಕ್ರೋಧಾದಿಗಳನ್ನು ಒಳಗೆ ಸೇರಿಸಿಕೊಂಡಿರುವವರು ಹೊಲೆಯರೆಂದು ಹಿಂದೂ ಶಾಸ್ತ್ರಗಳು ಹೇಳುತ್ತವೆ. ತ್ರಿಕರಣಶುದ್ಧಿಯಿಂದ ಅಂದರೆ ದೇಹ ಮಾತು ಮನಸ್ಸು ಇವುಗಳ ನೈರ್ಮಲ್ಯದಿಂದ ಮಾಡಿದ ಪುಜೆಗೆ, ಧರ್ಮಕಾರ್ಯಕ್ಕೆ, ಭಗವಂತ ಒಲಿಯುತ್ತಾನೆಂದು ಹೇಳುತ್ತವೆ.
  • ಯೋಗಶಾಸ್ತ್ರದಲ್ಲಿ ಹೇಳಿರುವಂತೆ ಅಷ್ಟಾಂಗಯೋಗವನ್ನು ಅಭ್ಯಾಸ ಮಾಡಿದರೆ ಮನಸ್ಸು ಶುಚಿಯಾಗಿ ಜೀವಾತ್ಮ ಪರಮಾತ್ಮ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ. ಮನಸ್ಸಿನ ನಿರ್ಲಿಪ್ತತೆಯನ್ನು ಹೊಂದಲು ಅನುಸರಿಸಬೇಕಾದ ತತ್ತ್ವವನ್ನು ದೃಢವಾಗಿ ನಂಬಿ ಅನುಸರಿಸುವುದೆ ಮನಃಶುದ್ಧಿಯಲ್ಲಿನ ಒಂದು ಕ್ರಮವೆಂದು ಸಹಸ್ರಗೀತಾ ವ್ಯಾಖ್ಯಾನ ಹೇಳುತ್ತದೆ.
  • ಅಕಾರ್ಯ ಮಾಡಿದವರನ್ನು ಶಿಕ್ಷಿಸುವಾಗಲೂ ಅವರ ಮನಸ್ಸಿನ ಸ್ಥಿತಿಯನ್ನು ವಿಮರ್ಶಿಸಿ ನೋಡಬೇಕೆಂದು ನ್ಯಾಯಶಾಸ್ತ್ರವೂ ನೀತಿಶಾಸ್ತ್ರವೂ ಒಪ್ಪಿಕೊಂಡಿವೆ. ಸದುದ್ದೇಶದಿಂದ ಮಾಡಿದ ಕಾರ್ಯ ಕ್ರೂರವಾಗಿ ಕಂಡರೂ ಅದಕ್ಕಾಗಿ ಕಠಿಣವಾಗಿ ಶಿಕ್ಷಿಸಲಾಗದು. ದುಷ್ಟಭಾವನೆಗಳನ್ನು ಇಟ್ಟುಕೊಂಡು ಮಾಡಿದ ಕಾರ್ಯಕ್ಕೆ ಕಠಿಣ ಶಿಕ್ಷೆಯನ್ನೇ ವಿಧಿಸಲಾಗುತ್ತದೆ.
  • ಪಶ್ಚಾತ್ತಾಪದಿಂದ ಅಂತಃಶುದ್ಧಿಯನ್ನು ಪಡೆಯಬಹುದೆಂದು ನೀತಿಶಾಸ್ತ್ರಜ್ಞರು ಹೇಳುತ್ತಾರೆ. ಅಗ್ನಿಯಲ್ಲಿ ಕಬ್ಬಿಣವನ್ನು ಹದ ಮಾಡಿದಂತೆ ಪಶ್ಚಾತ್ತಾಪದ ಬೇಗೆಯಲ್ಲಿ ಮನಸ್ಸು ಶುದ್ಧವಾಗುತ್ತದೆ, ಪರಿಸ್ಪುಟಗೊಳ್ಳುತ್ತದೆ. ಅಂಥ ಮನಸ್ಸಿನಲ್ಲಿ ಪುನಃ ಪಾಪ ಪ್ರವೇಶಿಸಲಾರದು. ಕ್ರಿಸ್ತನು ಪಶ್ಚಾತ್ತಾಪಕ್ಕೆ ಹೆಚ್ಚು ಮಹತ್ವವನ್ನು ಕೊಟ್ಟು ಪಾಪಕ್ಕೆ ಕ್ಷಮೆಯುಂಟೆಂದು ಬೋಧಿಸಿದ.
Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: