ಬಾಗಲಕೋಟ ಜಾನಪದ ಪರಂಪರೆ
ಬಾಗಲಕೋಟ ಜಿಲ್ಲೆಯ ಜಾನಪದ ಪರಂಪರೆ ಕನ್ನಡ ಜಾನಪದ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯು ಹಲವು ಪ್ರಥಮಗಳಿಗೆ ಕಾರಣವಾಗಿದೆ.ಕನ್ನಡ ಜಾನಪದದ ಮೊದಲ ನೇಗಿಲ ಪೂಜೆ ನೆರವೇರಿಸಿದವರು ಈ ಜಿಲ್ಲೆಯವರು ಎಂಬುದು ದಾಖಲಾರ್ಹವಾದುದು.ಕ್ರಿ.ಶ. 700 ರ ಬಾದಾಮಿಯ ಕಪ್ಪೆ ಅರಭಟ್ಟನ ಶಾಸನದಲ್ಲಿ ಸಿಕ್ಕುವ ತ್ರಿಪದಿ ಕನ್ನಡ ಜಾನಪದದ ತಾಯಿ ಬೇರಾದರೆ,ಇದೇ ಬಾದಾಮಿಯಿಂದಲೇ ಕ್ರಿ.ಶ. 1874 ರ ಸುಮಾರಿಗೆ ಕನ್ನಡದಲ್ಲಿ ಮೊದಲ ಜನಪದ ಸಾಹಿತ್ಯ ಸಂಗ್ರಹಣಾ ಕಾರ್ಯ ಆರಂಭವಾಯಿತು.ಜೊತೆಗೆ ಬಾದಾಮಿ ತಾಲೂಕಿನ ಕೆರೂರದ ಡಾ.ಬಿ.ಎಸ್.ಗದ್ದಗಿಮಠರು ಕನ್ನಡ ಜಾನಪದ ಕ್ಷೇತ್ರದಲ್ಲಿ ಮೊದಲ ಪಿಎಚ್.ಡಿ. ಸಂಪಾದಿಸಿದರು.ಹೀಗೆ ಜಾನಪದದ ರೂಪ,ಸಂಗ್ರಹ ,ಸಂಪಾದನೆ,ಸಂಶೋಧನೆ ಕಾರ್ಯಗಳೆಲ್ಲ ಬಾಗಲಕೋಟ ಜಿಲ್ಲೆಯಿಂದಲೇ ಮೊದಲಾದದ್ದು ಒಂದು ಐತಿಹಾಸಿಕ ಸತ್ಯವಾಗಿದೆ.
ಜಿ.ಬಿ.ಖಾಡೆ
[ಬದಲಾಯಿಸಿ]ಹಲಸಂಗಿ ಗೆಳೆಯರು ಮಾಡಿದ ಜನಪದ ಸಾಹಿತ್ಯ ಸಂಗ್ರಹ ಕಾರ್ಯಕ್ಕೆ ಪ್ರೇರಿತರಾಗಿ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ಗಣಪತಿ ಬಾಪು ಖಾಡೆಯವರು ಕ್ರಿ.ಶ. 1965 ರಲ್ಲಿ ಜಮಖಂಡಿ ಭಾಗದ ಹಳ್ಳಿಗಳಲ್ಲಿ ಹಾಡುವ ಬೀಸುಕಲ್ಲಿನ ಪದಗಳು, ಕೋಲಾಟದ ಪದಗಳು,ಡೊಳ್ಳಿನ ಹಾಗೂ ಹಂತಿ ಪದಗಳನ್ನು ಸಂಗ್ರಹಿಸಿದರು.ಹೀಗೆ ಸಂಗ್ರಹಿಸಿದ ಜಿ.ಬಿ.ಖಾಡೆಯವರ ಜನಪದ ಹಾಡುಗಳ ಸಂಕಲನ 'ಕಾಡು ಹೂಗಳು' ಹೆಸರಿನಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಪ್ರಸಾರಾಂಗದಿಂದ 1973 ರಲ್ಲಿ ಪ್ರಕಟವಾಯಿತು.ಈ ಕೃತಿಯಿಂದ ಜಮಖಂಡಿ ಭಾಗದ ಕೃಷ್ಣಾ ತೀರದ ಜನಪದ ಸಾಹಿತ್ಯ ಮೊದಲ ಬಾರಿಗೆ ಸಂಶೋಧಕರಿಗೆ ಲಭ್ಯವಾಗುವಂತಾಯಿತು. ಸಧ್ಯ ಮುಧೋಳದಲ್ಲಿ ನೆಲೆಸಿರುವ 72 ವಯಸ್ಸಿನ ಹಿರಿಯ ಜನಪದ ತಜ್ಞರಾದ ಜಿ.ಬಿ.ಖಾಡೆಯವರು ಸಂಪಾದಿಸಿರುವ 23 ಜನಪದ ಕಥೆಗಳ 'ಬೆಳವಲ ಬೆಳಕು 'ಕೃತಿ ಮತ್ತು ಅಪಾರ ಪ್ರಮಾಣದ ಕರಬಲಾ ಪದಗಳ'ಹಳ್ಳಿ ಹಬ್ಬಿಸಿದ ಹೂಬಳ್ಳಿ' ಕೃತಿಗಳನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು 1981 ರಲ್ಲಿ ಪ್ರಕಟಿಸಿದೆ.ಅಲ್ಲದೇ 'ಬದುಕೇ ಜಾನಪದ' ಹೆಸರಿನಲ್ಲಿ ಅವರ ಜನಪದ ಆತ್ಮ ಕಥನವು 2010 ರಲ್ಲಿ ಪ್ರಕಟವಾಗಿದೆ.ಜಮಖಂಡಿ ತಾಲೂಕು ತುಂಗಳದವರಾದ ಡಾ.ಸಂಗಮೇಶ ಬಿರಾದಾರ ಅವರು ಜನಪದ ಸಾಹಿತ್ಯ ಸಂಗ್ರಹದೊಂದಿಗೆ ಸಂಶೋಧನೆಗೆ ಒತ್ತು ಕೊಟ್ಟರು.ಚಾಪ ಹಾಕತೀವ ಡಪ್ಪಿನ ಮ್ಯಾಲ,ತೇರದಾಳದ ಲಾವಣಿಕಾರರು,ಪಾರಿಜಾತ ಪುಷ್ಪಗಳು,ಜಾನಪದ ಅಲೆಗಳು ಡಾ.ಬಿರಾದಾರ ಅವರ ಜನಪದ ಕೃತಿಗಳು.ಡಾ.ಶ್ರೀರಾಮ ಇಟ್ಟಣ್ಣವರ ಅವರು ಬಯಲಾಟಗಳ ರಾಜ ಎಂದೇ ಖ್ಯಾತಿ ಪಡೆದಿರುವ 'ಶ್ರೀ ಕೃಷ್ಣ ಪಾರಿಜಾತ' ಕುರಿತು ಪಿಎಚ್.ಡಿ. ಅಧ್ಯಯನ ಕೈಕೊಂಡು ಮೊದಲಬಾರಿಗೆ ಅದರ ಚರಿತ್ರೆ ಮತ್ತು ಇತಿಹಾಸದ ಮೇಲೆ ಬೆಳಕು ಚೆಲ್ಲಿದರು.ಲಾವಣಿ,ಕೌಜಲಗಿ ನಿಂಗಮ್ಮ ಇವರ ಇತರ ಜಾನಪದ ಕೃತಿಗಳು.ಜಿಲ್ಲೆಯ ಡಾ.ಪಿ.ಕೆ.ಖಂಡೋಬಾ ಅವರು ಲಂಬಾಣಿ ಜೀವನ ಸಂಸ್ಕೃತಿ ಕುರಿತು ಆಳವಾದ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ.ಡಾ.ಮೃತ್ಯುಂಜಯ ಹೊರಕೇರಿ ಅವರ'ಜನಪದ ಬೈಗುಳಗಳು' ಒಂದು ವಿಶಿಷ್ಟ ಜನಪದ ಕೃತಿ.ಎಸ್.ಜಿ.ಕೋಟಿಯವರ'ತೀರದ ದನಿ',ಡಾ.ಸರೋಜಿನಿ ಪಾವಟೆಯವರ 'ಚಲವಾದಿ ಗೌರಮ್ಮನ ಕಥೆಗಳು',ಶಿವಯೋಗಿ ಬಿದರಿಯವರ 'ಪಲ್ಲಕ್ಕಿ ಮ್ಯಾಲ ಮಗ ಬರಲಿ',ಜಿಲ್ಲೆಯ ಪ್ರಮುಖ ಜನಪದ ಕೃತಿಗಳು. ಹೊಸತೆಲೆಮಾರಿನ ಜನಪದ ವಿದ್ವಾಂಸರಲ್ಲಿ ಡಾ.ಪ್ರಕಾಶ ಖಾಡೆ,ಡಾ.ವಿರೇಶ ಬಡಿಗೇರ ಹಾಗೂ ಡಾ.ಅಶೋಕ ನರೋಡೆ ಮುಖ್ಯರು ಬಾಗಲಕೋಟೆಯಲ್ಲಿ ನೆಲೆಸಿರುವ ಡಾ.ಪ್ರಕಾಶ ಖಾಡೆಯವರು ತಂದೆಯ ಜಾನಪದ ಕಾಯಕವನ್ನು ಮುಂದುವರಿಸಿದ್ದಾರೆ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ 'ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ',ಕೃಷ್ಣಾತೀರದ ಜನಪದ ಒಗಟುಗಳು,ಜನಪದ ಕೋಗಿಲೆ ಗೌರಮ್ಮ ಚಲವಾದಿ, ನೆಲಮೂಲ ಸಂಸ್ಕøತಿ.ಜಾನಪದ ಹೆಬ್ಬಾಗಿಲು. ಬಾಗಲಕೋಟ ಜಿಲ್ಲೆಯ ಜನಪದ ಹಾಡುಗಳು,ಜಾನಪದ ಲೋಕ ಇವರ ಪ್ರಕಟಿತ ಜನಪದ ಕೃತಿಗಳು.ಹಂಪಿ ವಿ.ವಿ.ಪ್ರಾಧ್ಯಾಪಕರಾದ ಡಾ.ವಿರೇಶ ಬಡಿಗೇರ ಬಾಗಲಕೋಟ ತಾಲೂಕಿನ ಬೆಣ್ಣುರ ಗ್ರಾಮದವರು.ಉತ್ತರ ಕರ್ನಾಟಕದ ಜನಪದ ಗೀತ ಮೇಳಗಲು,ರಾಶಿ ಬುತ್ತಿ,ಅಡಿಗಲ್ಲು,ಹಳೆಲಾವಣಿಗಳು,ಗುಳ್ಳವ್ವ ಆಚರಣೆ,ಹಾಗೂ ಸಂಸ್ಕøತಿ ಸಂರಚನೆ ಇವರ ಜನಪದ ಕೃತಿಗಳು.ಡಾ.ಅಶೋಕ ನರೋಡೆಯವರ 'ಗೋಸಾಯಿಗಳು ಒಂದು ಜನಾಂಗೀಯ ಅಧ್ಯಯನ,ಉತ್ತರ ಕರ್ನಾಟಕದ ಗೀ ಗೀ ಮೇಳಗಳು.ಜಾನಪದ ಜಗತ್ತಿಗೆ ಅಗಸೀ ಬಾಗಿಲು,ಕೌಜಲಗಿ ನಿಂಗಮ್ಮ ಇವರ ಜನಪದ ಕೃತಿಗಳು,ಬೀರಪ್ಪ ಹಳಮನಿ ಅವರ ಡೊಳ್ಳನ ಪದಗಳು,ಡಾ.ಬಿ.ಆರ್ ಪೋಲಿಸ ಪಾಟೀಲ ಅವರ ಲಾವಣಿಗಳು,ಮೊದಲಾದವು ಬಾಗಲಕೋಟ ಜಿಲ್ಲೆಯ ಜನಪದ ಸಾಹಿತ್ಯದ ಕೃತಿ ರತ್ನಗಳಾಗಿವೆ.
ಕಲಾ ಶ್ರೀಮಂತಿಕೆ
[ಬದಲಾಯಿಸಿ]ಬಾಗಲಕೋಟ ಜಿಲ್ಲೆಯು ಜನಪದ ಕಲೆಗಳ ತವರುಮನೆ ಎನಿಸಿದೆ.ಇಲ್ಲಿ ಪ್ರತಿ ಊರಿಗೆ ಒಂದು ಭಜನಾ ಮೇಳ,ಡೊಳ್ಳಿನ ಮೇಳ,ಕರಡಿ ಮಜಲು ಕಾಣಸಿಗುತ್ತವೆ.ಸೋಬಾನೆ ಪದಗಳನ್ನು,ಬೀಸುವ ಪದಗಳನ್ನು ಹಾಡುವ ತಾಯಂದಿರು ಪ್ರತಿ ಹಳ್ಳಿಗಳಲ್ಲಿದ್ದಾರೆ.ಜಿಲ್ಲೆಯ ಶ್ರೀಮಂತ ಜನಪದ ಕಲೆ ಶ್ರೀ ಕೃಷ್ಣಪಾರಿಜಾತ.ಪಾರಿಜಾತದಲ್ಲಿ ಕೌಜಲಗಿ ನಿಂಗಮ್ಮ,ಕೃಷ್ಣಾಜಿ ದೇಶಪಾಂಡೆ,ಅಪ್ಪಾಲಾಲ ನಧಾಪ,ಬರಗಿ ರಾಚಯ್ಯ, ಟಕ್ಕಳಕಿ ವಿಠ್ಠಲರಾವ,ಸೂಳಿಕೇರಿ ಯಮೂನಾಬಾಯಿ,
ಪಾರಿಜಾತ ಕಲಾವಿದೆ ನಾಡೋಜ ಯಲ್ಲವ್ವ
[ಬದಲಾಯಿಸಿ]ಯಲ್ಲವ್ವ ರೊಡ್ಡಪ್ಪನವರ,ಕಾಶಿಬಾಯಿ ದಾದನಟ್ಟಿ,ಮೊದಲಾದವರು ಖ್ಯಾತನಾಮರು.ಗೊಂದಲಿಗರ ಕಲೆಯಲ್ಲಿ ಬಾಗಲಕೋಟೆಯ ಸುಗತೇಕರ ಕುಟುಂಬದವರು ಜನಪ್ರಿಯರು.ಹುನಗುಂದ ತಾಲೂಕಿನ ಕೋಡಿಹಾಳ, ಮುಧೋಳ ತಾಲೂಕಿನ ಲೋಕಾಪುರಗಳಲ್ಲಿ ಬುಡಬುಡಕಿ ಕಲೆಯ ಕಲೆಗಾರಿದ್ದಾರೆ.ಬಾದಾಮಿ ತಾಲೂಕಿನ ಕರಡಿಗುಡ್ಡದಲ್ಲಿ ಕಿಳ್ಳೆ ಕ್ಯಾತ ಕಲಾವಿದರು ಉಳಿದುಕೊಂಡಿದ್ದಾರೆ.ದುರಗ ಮುರಗಿ ಅಲೆಮಾರಿ ಜನಾಂಗದವರು ಜಿಲ್ಲೆಯಲ್ಲಿ ಕಾಣಸಿಗುತ್ತಾರೆ.ಬಾದಾಮಿ ತಾಲೂಕಿನ ಕುಟಕನಕೇರಿ,ಕೆಂದೂರಗಳಲ್ಲಿ ಮೋಡಿ ಆಟದ ಮನೆತನಗಳು ಮೋಡಿ ಆಟದ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ.ಪ್ರಸಿದ್ದ ಬಾಗಲಕೋಟೆಯ ಹೋಳಿ ಆಚರಣೆಯಲ್ಲಿ ಹಲಗೆ ನುಡಿಸುವ ತಂಡಗಳಿವೆ.ಮಹಾಲಿಂಗಪುರದ ಕರಡಿ ಮನೆತನ ಕರಡಿ ವಾದನಕ್ಕೆ ರಾಷ್ಟ ಖ್ಯಾತಿ ಪಡೆದಿದೆ.ಜಿಲ್ಲೆಯ ತುಂಬೆಲ್ಲ ಜನಪದ ಕಲೆಯ ಸೊಬಗು ಚೆಲ್ಲುವರಿದಿದೆ.ಆದರೆ ಆಧುನಿಕತೆಯ ಈ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಜನಪದ ಕಲೆಗಳು ಮರೆಯಾಗುತ್ತಿವೆ, ಕಲಾವಿದರು ಪ್ರೋತ್ಸಾಹವಿಲ್ಲದೆ ಸೊರಗುತ್ತಿದ್ದಾರೆ.