ವಿಷಯಕ್ಕೆ ಹೋಗು

ಹದಿಬದೆಯ ಧರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂಚಿ ಹೊನ್ನಮ್ಮ :- ಹದಿಬದೆಯ ಧರ್ಮ ಕನ್ನಡ ಸಾಹಿತ್ಯದ ಒಂದು ಅನನ್ಯ ಪಾತಿವ್ರತ ಗ್ರಂಥ, ಸಾಂಗತ್ಯ ಕೃತಿ. ಈ ಕೃತಿಯಲ್ಲಿ 'ಸನಾತನ ಪದ್ಧತಿ' ಎದ್ದು ಕಾಣುತ್ತದೆ. ಆಕೆಯ ದೃಷ್ಟಿಯಲ್ಲಿ ಹೆಣ್ಣು ಗೃಹದೇವತೆ. ಹೊನ್ನಮ್ಮ ಹೆಣ್ಣಿನ ಸ್ವಭಾವ ವೈಶಿಷ್ಟತೆಯೊಂದಿಗೆ ಅವಳ ಪ್ರತಿ ವರ್ತನೆ ಯನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟು, ಹದಿಬದೆಯಧರ್ಮವನ್ನು ಸರಳವಾಗಿ, ಸುಂದರವಾಗಿ, ಮನೋಹರವಾಗಿ, ಗುಣಪೂರ್ಣವಾಗಿ ರಚಿಸಿದ್ದಾಳೆ. ಸಂಚಿಹೊನ್ನಮ್ಮ 'ಹದಿಬದೆಯ ಧರ್ಮ'ವನ್ನು ರಚಿಸಿದ್ದಾಳೆ. ಇದು ಅವಳ ಬೌದ್ದಿಕ ತಳಹದಿಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಹೆಣ್ಣಿನ ಬಗ್ಗೆ ಅಂದಿನ ಸಮಾಜ ತಳೆದಿದ್ದ ಮಲತಾಯಿ ಧೋರಣೆ, ಅಸಮಾನತೆಯನ್ನು ತೀಕ್ಷ್ಣವಾಗಿ ಖಂಡಿಸಿರುವಳು. ತನ್ನ ಕೃತಿಯ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾಳೆ.

ಪ್ರಸ್ತಾವನೆ

[ಬದಲಾಯಿಸಿ]

"ಹದಿಬದೆಯ ಧರ್ಮ" ಕನ್ನಡ ಸಾಹಿತ್ಯದ ಒಂದು ಅನನ್ಯ ಪಾತಿವ್ರತ ಗ್ರಂಥ, ಸಾಂಗತ್ಯ ಕೃತಿ. ಇದು ಬರೀ ಕಾವ್ಯವಲ್ಲ ಮಾನಿನಿಯ ಧರ್ಮಬೋದಿನಿ. ಇಲ್ಲಿ ಬರುವ ಹೆಣ್ಣು -ಯಜಮಾನಿಯಾಗಿ, ತಾಯಿಯಾಗಿ, ಗೃಹಿಣಿಯಾಗಿ, ಹೆಂಡತಿಯಾಗಿ, ಅಕ್ಕನಾಗಿ, ತಂಗಿಯಾಗಿ, ಅತ್ತೆಯಾಗಿ, ಅತ್ತಿಗೆಯಾಗಿ, ಓರೆಗಿತ್ತಿಯಾಗಿ, ನಾದಿನಿಯಾಗಿ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ಆಕೆ ಹೇಗೆಲ್ಲ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ. 'ಹೆಣ್ಣಿನಿಂದಲೇ ಇಹವು, ಹೆಣ್ಣಿನಿಂದಲೇ ಪರವು' ಎಂಬಸರ್ವಜ್ಞನ ವಾಣಿಯಂತೆ, ಸಂಸಾರಿಯಾದ ಹೆಣ್ಣಿನ ವಿವಿಧ ಮುಖಗಳ ಅನಾವರಣ, ಸುಖ ಸಂಸಾರವನ್ನು ಬಯಸುವ ಹೆಣ್ಣು-ಗಂಡುಗಳ ಮನ:ಸ್ಥಿತಿ ಹೇಗಿರಬೇಕೆಂಬುದನ್ನು ವಿವರಿಸಲಾಗಿದೆ. ಹದಿಬದೆಯ ಧರ್ಮದಲ್ಲಿ ಪ್ರಮುಖವಾಗಿ ಒಂಭತ್ತು ಸಂಧಿಗಳಿವೆ. ಮೊದಲ ಸಂಧಿ- ಪೀಠಿಕಾಭಾಗ ಇದರಲ್ಲಿ ಒಡೆಯರ ವಂಶಾವಳಿ, ಚಿಕದೇವರಾಜ ಒಡೆಯರ್ ಮತ್ತು ಅವರ ಪಟ್ಟಮಹಿಷಿ ದೇವರಾಜಮ್ಮಣ್ಣಿ ಅವರ ಕೊಂಡಾಟವಿದೆ, ಜೊತೆಗೆ ತಾನು ಈ ಕೃತಿಗೆ ಆರಿಸಿಕೊಂಡ ವಸ್ತುವಿಷಯ ಮತ್ತು ಅದರ ಮಹತ್ವವನ್ನು ವಿವರಿಸಿದ್ದಾಳೆ. ಎರಡನೆ ಸಂಧಿ -'ಸತೀಧರ್ಮ' ಕುರಿತದ್ದು, ಮೂರನೆ ಸಂಧಿ -ಪತಿಸೇವೆ/ಶುಶ್ರೂಷೆ ವಿಧಾನವನ್ನೂ, ನಾಲ್ಕನೆ ಸಂಧಿ -ಅತ್ತೆ-ಮಾವರ ಸೇವೆ ಮತ್ತು ಗಂಡನ ಆಂತರ್ಯವನ್ನು ಅರಿತು ನಡೆವ ಕ್ರಮವನ್ನೂ, ಐದನೆ ಸಂಧಿ -ಬಂಧು ಬಾಂಧವರಿಂದ ನಲ್ವೆಂಡಿರಿಗೆ ಉಪಚಾರ, ಆರನೆ ಸಂಧಿ -ಸಮಾಜದಲ್ಲಿರುವ ನಲ್ಲ-ನಲ್ಲೆಯರ ನಡವಳಿಕೆಗೆ ಸಂಬಂಧಿಸಿದ್ದು, ಏಳನೆ ಸಂಧಿ-ವಿರಹಿ ಹೆಣ್ಣಿನ ಸಾತ್ವಿಕ ಮನ:ಸ್ಥಿತಿಯನ್ನೂ, ಎಂಟನೆ ಸಂಧಿ-ಏಕಪತ್ನೀತ್ವದ ವಿಚಾರ ವಿಮರ್ಶೆಯನ್ನೂ, ಒಂಭತ್ತನೆ ಸಂಧಿ-ಪತಿಯೇ ಪರದೈವ ಎಂಬ ಬಗೆಯಲ್ಲಿದೆ. ಈ ಕೃತಿಯಲ್ಲಿ 'ಸನಾತನ ಪದ್ಧತಿ' ಎದ್ದು ಕಾಣುತ್ತದೆ. ಆಕೆಯ ದೃಷ್ಟಿಯಲ್ಲಿ ಹೆಣ್ಣು ಗೃಹದೇವತೆ. ಹೊನ್ನಮ್ಮ ಹೆಣ್ಣಿನ ಸ್ವಭಾವ ವೈಶಿಷ್ಟತೆಯೊಂದಿಗೆ ಅವಳ ಪ್ರತಿ ವರ್ತನೆಯನ್ನೂ ಎಳೆ ಎಳೆಯಾಗಿ ಬಿಡಿಸಿಟ್ಟು, ಹದಿಬದೆಯ ಧರ್ಮವನ್ನು ಸರಳವಾಗಿ, ಸುಂದರವಾಗಿ, ಮನೋಹರವಾಗಿ, ಗುಣಪೂರ್ಣವಾಗಿ ರಚಿಸಿದ್ದಾಳೆ.

ಕವಯತ್ರಿ ಪರಿಚಯ

[ಬದಲಾಯಿಸಿ]

ಸಂಚಿ ಹೊನ್ನಮ್ಮ ಸುಮಾರು ೩೦೦ ವರ್ಷಗಳ ಹಿಂದೆ ಅಂದರೆ ಪ್ರಾಯಶ: ೧೬ನೇ ಶತಮಾನದಲ್ಲಿ ಇದ್ದವಳು. ಸ್ಪಷ್ಟವಾಗಿ ಹೇಳುವುದಾದರೆ, ಈಕೆ ಕ್ರಿ.ಶ ೧೬೭೨ರಿಂದ ೧೭೦೪ರವರೆಗೆ ಮೈಸೂರಿನಲ್ಲಿ ಆಳ್ವಿಕೆ ನಡೆಸಿದ ಚಿಕದೇವರಾಜ ಒಡೆಯರ ಕಾಲದವಳು. ಇವಳ ಹುಟ್ಟೂರು 'ಎಳಂದೂರು'. ಚಿಕದೇವರಾಜ ಒಡೆಯರ ಪಟ್ಟದರಸಿ ದೇವರಾಜಮ್ಮಣ್ಣೀಯ ಆತ್ಮಸಖಿ, ಜೊತೆಗೆ ಊಳಿಗದ ಆಳು, ಅರಸರ 'ಸಂಚಿ'ಯ ಸೇವಕಿ. 'ಸಂಚಿ' ಎಂದರೆ ನಿಘಂಟುವಿನಲ್ಲಿ ಎಲೆ-ಅಡಿಕೆ ರಸವನ್ನು ಉಗುಳುವ 'ಪೀಕುದಾನಿ' ಎಂದಿದೆ. ಹೊನ್ನಮ್ಮನ ವಿದ್ಯಾಗುರು ಉಭಯ ವೇದಾಂತಚಾರ್ಯ 'ಅಳಸಿಂಗರಾರ್ಯ'. ಅಳಸಿಂಗರಾರ್ಯ ಚಿಕದೇವರಾಜ ಒಡೆಯರ ಮಂತ್ರಿ, ತಿರುಮಲಾರ್ಯನ ತಮ್ಮ, ಕನ್ನಡದ ಮೊಟ್ಟ ಮೊದಲ ನಾಟಕವಾದ "ಮಿತ್ರಾವಿಂದ ಗೋವಿಂದದ ಕರ್ತೃ. ಇವರಲ್ಲಿ ಹೊನ್ನಮ್ಮ ಕನ್ನಡ, ಸಂಸ್ಕೃತ ಭಾಷೆಯನ್ನು ಅಭ್ಯಾಸ ಮಾಡಿ, 'ಸರಸ ಸಾಹಿತ್ಯದ ಅಧಿದೇವತೆ' ಎಂದು ತನ್ನ ಗುರುವಿನಿಂದಲೇ ಹೊಗಳಿಸಿ ಕೊಂಡಿದ್ದಾಳೆ. ನಂತರ ಚಿಕದೇವರಾಜ ಒಡೆಯರ ಆಶಯದಂತೆ, ತನ್ನ ಒಡತಿಯ ಅಣತಿಗನುಸಾರವಾಗಿ ,ಗುರುವಿನ ಪ್ರೊತ್ಸಾಹದಿಂದ ಹೊನ್ನಮ್ಮ 'ಹದಿಬದೆಯ ಧರ್ಮ'ವನ್ನು ರಚಿಸಿದ್ದಾಳೆ. ಇದು ಅವಳ ಬೌದ್ದಿಕ ತಳಹದಿಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲದೆ ಹೆಣ್ಣಿನ ಬಗ್ಗೆ ಅಂದಿನ ಸಮಾಜ ತಳೆದಿದ್ದ ಮಲತಾಯಿ ಧೋರಣೆ, ಅಸಮಾನತೆಯನ್ನು ತೀಕ್ಷ್ಣವಾಗಿ ಖಂಡಿಸಿರುವಳು. ತನ್ನ ಕೃತಿಯ ಬಗ್ಗೆ ಆತ್ಮವಿಶ್ವಾಸದ ಮಾತುಗಳನ್ನು ಆಡಿದ್ದಾಳೆ.

ಒಂದನೇ ಸಂಧಿ

[ಬದಲಾಯಿಸಿ]

ಪಾತಿವ್ರತ ಧರ್ಮ

ಹದಿನೆಂಟು [ಬಣ್ಣನೆ]ಯೆಂದು ಬವಣೆಗೊಂಡು
ಪದಗೆಟ್ಟು ಬಯಲ ಬಣ್ಣಿಸದೆ
ಮುದದೊಡನಿಹಪರದೇಲ್ಗೆವಡೆಯೆ
ಹದಿಬದೆಯ ಧರ್ಮವ ಬಣ್ಣಿಪೆನು

ನಾನು ಕಾವ್ಯದಲ್ಲಿ ೧೮ ಬಗೆಯ ವರ್ಣನೆಗಳು ಇರಬೇಕೆಂಬ ದಾಕ್ಷೀಣ್ಯಕ್ಕೆ ಸಿಲುಕಿ, ಹಾದಿ ತಪ್ಪಿ ಕಂಗೆಟ್ಟ ಮಗುವಿನಂತೆ ,ಬಯಲಿನ ಹಾಗೆ ಬರಡಾಗಿರುವ ನಿರರ್ಥಕ ಸಾಹಿತ್ಯವನ್ನು ಬರೆಯಲಾರೆ. ಬದಲಿಗೆ ಭೂಲೋಕದಲ್ಲಿ, ಸ್ವರ್ಗಲೋಕದಲ್ಲಿ ಹೆಣ್ಣಿನ ಅಭಿವೃದ್ದಿಯ ದ್ಯೋತಕವಾಗಿರುವ, ಮುಕ್ತಿಯ ಮಾರ್ಗವನ್ನು ತೋರಿಸುವಂತಹ ಪತಿವ್ರತಾ ಧರ್ಮವನ್ನು ವರ್ಣಿಸುವೆ.

ಅರಸಿಯರನಿಬರುಮಾದರದಿಂದೆನ್ನ
ಸರಸಕಾವ್ಯವ ಸವಿವಂತೆ ಪರಮ
ಪತಿವ್ರತೆಯರ ನಡತೆಯನಿಲ್ಲಿ
ಪುರುಳುಗೊಳಿಸಿ ಪೊಗಳುವೆನು

ರಾಣಿಯರೆಲ್ಲಾ ಸಾಮಾನ್ಯ ಮಹಿಳೆಯರೆಲ್ಲಾ ಮುದನೀಡುವ ನನ್ನ ಕಾವ್ಯವನ್ನು ಆತ್ಮೀಯವಾಗಿ ಆಸ್ವಾದಿಸುವಂತೆ , ಶ್ರೇಷ್ಠ ಪತಿವ್ರತೆಯರಾದ ಮಾನಿನಿಯರ ಗುಣ-ಸ್ವಭಾವ, ನಡವಳಿಕೆಯನ್ನು ಮನಮುಟ್ಟುವ ತೆರದಿ ಹಾಡಿ ಹೊಗಳುವೆನು.

ಪತಿಭಕ್ತಿಯೊಂದು ಶ್ರೀಪತಿಭಕ್ತಿಯೊಂದಿದ
ರತಿಶಯಕೆಣೆಯಿಲ್ಲ ಮತ
ಭೇದವುಂಟು ಮಾಧವಭಕ್ತಿಗಿದಕಾ
ಮತಭೇಧವೂ ಮಗುಳಿ[ಮರುಳಿ]ಲ್ಲ

ಪತಿಭಕ್ತಿಗೆ ಮತ್ತು ಶ್ರೀಪತಿಭಕ್ತಿಗೆ ಸಮನಾದುದು, ಮಿಗಿಲಾದುದು ಈ ಜಗತ್ತಿನಲ್ಲಿ ಬೇರ್ಯಾವುದೂ ಇಲ್ಲ. ಲಕ್ಷ್ಮೀಪತಿ ಭಕ್ತಿಯ ಆಚರಣೆಯ ವಿಧಿ, ವಿಧಾನದಲ್ಲಿ ಮತ/ಅಭಿಪ್ರಾಯ ಭೇಧವಿರಬಹುದು. ಆದರೆ ಪತಿಭಕ್ತಿಯ ವಿಧದಲ್ಲಿ ಯಾವುದೇ ಭೇಧ ಇರಲು ಸಾಧ್ಯವಿಲ್ಲ. ಪತಿಯೇ ಪರದೈವ ಅನ್ನುವ ಭಕ್ತಿ ಅದ್ವೀತಿಯವಾದುದು.

ಎರಡನೇ ಸಂಧಿ

[ಬದಲಾಯಿಸಿ]

ಪತಿಸೇವೆ

ಪತಿಯ ಪಾದಾಬ್ಜ ಭಕ್ತಿಯೆ ತಮಗೆ
ಇಹಪರ ಗತಿಯೆಂದು ಕಡುವಿಡಿದಿರ್ಪ
ಸತಿಯರಿರ್ಪೆಡೆಯೊಳು ಕೃತಯುಗ
ವೊಂದಲ್ಲದಿತರಯುಗಕ್ಕಿಂಬಿಲ್ಲ

ಪತಿಯ ಪಾದವೆಂಬ ತಾವರೆಯಡಿಯಲಿ ಪವಿತ್ರ ಭಕ್ತಿಯಿಂದಿರುವುದೇ ಸತಿಯರಿಗೆ ಇರುವೆಡೆಯಲ್ಲಿ, ಹೋಗುವೆಡೆಯಲ್ಲಿ ಮುಕ್ತಿಯೆಂಬ ಸದ್ಗತಿ ದೊರೆವುದು. ಗಂಡನ ಬಗ್ಗೆ ಪ್ರೀತ್ಯಾದಾರವುಳ್ಳ ಸಾಧ್ವಿಯರು ಇರುವ ಕಾಲವನ್ನು ಕೃತಯುಗವೆಂದು ಕರೆಯುವರು. ಅಂತಹ ಕಡೆ ಬೇರೆ ಯುಗಧರ್ಮಗಳಿಗೆ ಜಾಗವೇ ಇರುವುದಿಲ್ಲ.

ಪರಮ ಪತಿವ್ರತೆಯಿದ್ದ ಬಳಿಯೊಳಾ
ಸಿರಿರಾಣಿ ಸೇರಿ ಬಂದಿಹಳು
ಸರಸತಿ ಸಾವಿತ್ರಿ ಗಾಯತ್ರಿಯರುಮಾ
ಪರಿಸರದೊಳು ಬಳಸಿಹರು

ಶ್ರೇಷ್ಠ ಹದಿಬದೆಯರಿರುವ ತಾಣಕ್ಕೆ ಸ್ವತ: ಲಕ್ಷ್ಮೀಯೇ ಹುಡುಕಿಕೊಂಡು ಬರುವಳಂತೆ. ಅವಳೊಂದಿಗೆ ದೇವಲೋಕದ ಪತಿವ್ರತಾ ನಾರಿಯರಾದ ಸರಸ್ವತಿ, ಸಾವಿತ್ರಿ, ಗಾಯತ್ರಿಯರು ಬಂದು, ಪತಿವ್ರತೆಯರು ವಾಸಿಸುವ ಸ್ಥಳದಲ್ಲಿ/ಪರಿಸರದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುವರಂತೆ.

ಪತಿಯೆ ಪರಮಗುರು ಪತಿಯೇ
ದೇವತೆ ಪತಿಯೇ ಸದ್ಗತಿಯೆಂದು
ಪತಿಯ ಪಾದಾಂಬುಜದೊಳು
ಭಕ್ತಿಗೈವುದು ಸತಿಯರ ಧರ್ಮದ ಸಾರ

ಗೃಹಿಣಿಯಾದವಳು ಕಾಯಾ, ವಾಚಾ ,ಮನಸಾ ಗಂಡನಿಗೆ ಮುಡಿಪಾಗಿರಬೇಕು. ಶ್ರೇಷ್ಠ ಗಂಡನಲ್ಲಿ ಅವಳು ತಂದೆ-ತಾಯಿ, ಗುರು, ದೇವರು, ಹಿತೈಷಿ, ಮುಕ್ತಿ, ಸದ್ಗತಿಯ ಮಾರ್ಗದ ರ್ಶಕನನ್ನು ಕಾಣಬೇಕು. ಮಡದಿ ಅಹೋರಾತ್ರಿ ಗಂಡನ ಬಗ್ಗೆ ಚಿಂತಿಸುವವಳಾಗಿರಬೇಕು. ಅವಳ ದೃಷ್ಠಿಯಲ್ಲಿ ಗಂಡನೇ ನಿತ್ಯ ಸತ್ಯ.

ಮೂರನೇ ಸಂಧಿ

[ಬದಲಾಯಿಸಿ]

ಅತ್ತೆ-ಮಾವಂದಿರ ಸೇವೆ

ಅತ್ತೆ ಮಾವಂದಿರೊಳಡಕಮೆನಿಸಿ
ಪತಿಚಿತ್ತದಿರವ ಸೆರೆಗೊಂಡು
ಪೆತ್ತ ತಾಯನು ಪೆಸರೆನಿಸುವುದಿಳೆಯೊಳ
ಗುತ್ತಮನಾರಿಯರೊಲಿದು

ಸೊಸೆಯಾದ ಹೆಣ್ಣು ಅತ್ತೆ ಮಾವಂದಿರಿಗೆ ವಿಧೇಯಳಾಗಿ, ತಗ್ಗಿ-ಬಗ್ಗಿ ನಡೆದು ಒಳ್ಳೆಯವಳೆನಿಸಿ ಕೊಂಡು, ಜೊತೆಗೆ ಗಂಡನ ಪ್ರೀತ್ಯಾದಾರ ಗಳಿಸಿ, ಅವನ ಮನಸ್ಸಿಗನುಗುಣವಾಗಿ, ಆಪ್ತ ವಾಗಿ ಅವನನ್ನು ಸೆರೆಹಿಡಿದು ಇಲ್ಲವೆ ಆಕರ್ಷಿಸುವಂತೆ ಅನುರೂಪಳಾಗಿ ನಡೆದು ಕೊಂಡರೆ, ಹೆತ್ತತಾಯಿಗೆ ಸಂತೋಷ, ಹುಟ್ಟಿದ ಮನೆಗೆ ಕೀರ್ತಿ ತಂದಂತಾಗುತ್ತದೆ.

ಅತ್ತಿತ್ತ ನೋಡದೆ ಅವಮತಿಯಾಗದೆ
ಮತ್ತೆಯಾಗದೆ ಮರೆತಿರದೆ
ಅತ್ತೆಮಾವಂದಿರಾಣತಿಯನಾಲಿಪುದೇಕ
ಚಿತ್ತದೊಳೇಕಪತ್ನಿಯರು

ಸದ್ಗುಹಿಣಿಯಾದ ಹೆಣ್ಣು ಅತ್ತಿತ್ತ ಗಮನ ಹರಿಸದೆ, ವಿಷಯಲಾಲಸೆಗೆ ಒಳಗಾಗದೆ, ಅನುಮಾನಾಸ್ಪದವಾಗಿ ನಡೆದುಕೊಳ್ಳದೆ, ಸೊಕ್ಕಿನಲ್ಲಿ ಮೈಮರೆಯದೆ, ಯಾವುದನ್ನು ಮನೆಯವರಿಂದ ಮುಚ್ಚಿಡದೆ, ಅತ್ತೆಮಾವಂದಿರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸ ಬೇಕು. ಹಿರಿಯರ ಮಾತನ್ನು ಸೊಸೆಯರು ಒಮ್ಮನಸ್ಸಿನಿಂದ ಕೇಳಬೇಕು.

ಕುತ್ತವೆಣಿಸಿ ಕೋಪಗೊಳ್ಳದೆ ಕೂರ್ತಿವರೆಮ್ಮ
ತೆತ್ತಿಗರೆಂದೆರ್ದೆಗೊಳಿಸಿ
ಅತ್ತಿಗೆ ನಾದಿನಿಯರೊಳಂತರಂಗವ
ಪತ್ತುಗೆಗೊಳಿಸಿ ಬಾಳುವುದು

ಸಾಧ್ವಿ ಗೃಹಿಣಿಯರು ಸುಮ್ಮ ಸುಮ್ಮನೆ ರೋಗರುಜಿನಾದಿಗಳ ನೆಪಹೇಳಿ ಕರ್ತವ್ಯ ವಿಮುಖರಾಗದೆ, ಕುಟುಂಬದವರೊಡನೆ ಯಾವ ಕಾರಣಕ್ಕೂ ಕೋಪಿಸಿಕೊಳ್ಳದೆ ಪ್ರೀತಿಯಿಂದ ಇಲ್ಲಿರುವವರೆಲ್ಲ ನಮ್ಮ ಬಂಧು-ಬಾಂಧವರೆಂದು ವಿಶ್ವಾಸದಿಂದ ನಡೆದುಕೊಂಡು ಅತ್ತೆ ನಾದಿನಿಯರ ಮನಸ್ಸನ್ನು ಅರಿತು ಬಾಳುವವಳು ಪತಿವ್ರತೆ ಎನಿಸಿಕೊಳ್ಳುತ್ತಾಳೆ.

ನಾಲ್ಕನೇ ಸಂಧಿ

[ಬದಲಾಯಿಸಿ]

ಬಂಧುಗಳ ಅತಿಥಿ ಸತ್ಕಾರ

ತಂದೆ ತಾಯಿಗಳೊಡವುಟ್ಟಿದರತ್ತೆ
ಮಾವಂದಿರು ಸಕಲ ಬಾಂಧವರು
ಕುಂದದೆ ನಲ್ವೆಂಡಿರ ಕೂರ್ತುಪಚರಿ
ಪಂದವನನುವದಿಸುವೆನು

ತಂದೆ ತಾಯಿಗಳನ್ನೂ, ಒಡಹುಟ್ಟಿದವರನ್ನೂ, ಅತ್ತೆಮಾವಂದಿರನ್ನೂ ಸಕಲ ಬಂಧು ಬಳಗದವರನ್ನೂ ಉಪಚಾರದಲ್ಲಿ ಲೋಪವಿಲ್ಲದಂತೆ ಪ್ರೀತಿಯಿಂದ ಉಪಚರಿಸುವಂತಹ ಗೃಹಿಣಿಯರ ಕ್ರಮವಾದ ನಡವಳಿಕೆಯನ್ನು ನಿಮಗೆ ತಿಳಿಸುತ್ತೇನೆ.

ತನ್ನ ಮನೆಯೊಳುಂಡು ತವರುಮನೆಯ
ಸಂಪನ್ನವೆಂಬ ಪೆಣ್ಗಳಿಗೆ
ಪೊನ್ನ ತೊಡಿಗೆ ಪೊಸದುಗುಲಂಗಳನಿತ್ತು
ಮನ್ನಿಸುವುದು ಮನವರಿತು

ತನ್ನ ಮನೆಯಲ್ಲಿ ಊಟ ಮಾಡಿ,ತವರುಮನೆಯ ಸಂಪತ್ತು ಆಭಿವೃದ್ಧಿಯಾಗಲಿ ಎಂದು ತೌರಿಗೆ ಶುಭ ಹಾರೈಸುವ ಸಾಧ್ವಿಯರಿಗೆ,ಚಿನ್ನದಂತಹ ಮಾತನಾಡಿದುದಕ್ಕೆ ಚಿನ್ನಾಭರಣಗಳನ್ನೂ, ಹೊಸಬಟ್ಟೆಗಳನ್ನು ಕೊಟ್ಟು ಪ್ರೀತ್ಯಾದಾರಗಳಿಂದ ಮನತುಂಬಿ ಹರಸಿ, ಗೌರವಿಸಬೇಕು.

ಬಸಿರಿಯ ಬಾಣಂತಿಯ ಬೇನೆವಡೆದರೆ
ಹಸುಮಕ್ಕಳ ಹಯನುಗಳು
ಬಸವಳಿಸದೆ ಬಳಲಿಸದೆ ಬಯ್ಯದೆ ಬಗೆ
ಯೊಸೆದುಚಿತದೊಳೋವುವುದು

ಸಮಾಜದಲ್ಲಿರುವ ಬಸುರಿ, ಬಾಣಂತಿ, ರೋಗಿ, ಎಳೆಯಮಕ್ಕಳು, ದನಕರುಗಳು ಮುಂತಾದವರನ್ನು ಯಾವ ಬಗೆಯಿಂದಲೂ ಶಕ್ತಿಗುಂದಿಸದೆ, ಹೆಚ್ಚು ಕೆಲಸ ಕೊಟ್ಟು ಆಯಾಸ ಗೊಳಿಸದೆ, ಅವರನ್ನು ನೋವಾಗುವ ರೀತಿ ನಿಂದಿಸದೆ, ಅವರೆಲ್ಲರ ಮನಸ್ಸನ್ನು ಅರಿತು ಯೋಗ್ಯರೀತಿಯಿಂದ ಕಾಪಾಡಿದರೆ ಅದೂ ಕೂಡ ಗೃಹಿಣಿಯ ಪರಮ ಕರ್ತವ್ಯವಾಗಿರುತ್ತದೆ.

ಐದನೇ ಸಂಧಿ

[ಬದಲಾಯಿಸಿ]

ಹೆಣ್ಣಿನ ಹಿರಿಮೆ

ಪೆಣ್ಣಿಂದ ಪೆರ್ಮೆಗೊಂಡನು ಹಿಮವಂತನು
ಪೆಣ್ಣಿಂದ ಭೃಗು ಪೆರ್ಚಿದನು
ಪೆಣ್ಣಿಂದ ಜನಕರಾಯನು ಜಸವಡೆದನು
ಪೆಣ್ಣ ನಿಂದಿಸಲೇಕೆ ಪೆರರು

ಹೆಣ್ಣಿನ ಬಗ್ಗೆ ಸಂಚಿಹೊನ್ನಮ್ಮನಿಗಿರುವ ಪ್ರೀತ್ಯಾದಾರ, ಆಪ್ತತೆ ಇಲ್ಲಿ ವ್ಯಕ್ತಗೊಂಡಿದೆ. ಹಿಮವಂತ ಹೆಣ್ಣಿನಿಂದ ಹೆಮ್ಮೆ ಪಡೆದನು. ಹೆಣ್ಣಿನಿಂದ ಭೃಗುಮಹರ್ಷಿ ಕೀರ್ತಿ ಹೊಂದಿದನು. ಸೀತೆಯಿಂದ ಜನಕರಾಯ ಖ್ಯಾತಿ ಪಡೆದಿದ್ದಾನೆ. ಹೀಗಿರುವಾಗ ಬೇರೆಯವರು ಹೆಣ್ಣನ್ನು ನಿಂದಿಸುವುದು ತರವಲ್ಲ.

ಪೆಣ್ಣಲ್ಲವೆ ನಮ್ಮನೆಲ್ಲ ಪಡೆದ ತಾಯಿ
ಪೆಣ್ಣಲ್ಲವೆ ನಮ್ಮನೆಲ್ಲ ಪೊರೆದವಳು
ಪೆಣ್ಣು ಪೆಣ್ಣೇಂದು ಬೀಳುಗಳೆವರೇಕೆ
ಕಣ್ಣು ಕಾಣದ ಗಾವಿಲರು

ಹೆಣ್ಣಿನ ಅನಿವಾರ್ಯತೆ, ಅವಶ್ಯಕತೆ ಬಗ್ಗೆ ಹೊನ್ನಮ್ಮ ವಿಶದಪಡಿಸಿದ್ದಾಳೆ. ನಮ್ಮೆಲ್ಲರ ಹುಟ್ಟಿಗೆ, ಪೋಷಣೆಗೆ, ಬೆಳವಣಿಗೆಗೆ ಕಾರಣೀಭೂತಳಾದವಳು ತಾಯಿಯಾದ ಒಂದು ಹೆಣ್ಣು. ಅವಳ ಹಡೆಯುವಿಕೆಯಿಂದಾಗಿ ನಾವೆಲ್ಲ ಜನಿಸಿದ್ದೇವೆ. ಹೆಣ್ಣು ಮಗುವೂಂದಕ್ಕೆ ಜನ್ಮ ನೀಡುವ ಪ್ರಕ್ರಿಯೆ ಸುಲಭವಾದುದಲ್ಲ. ಅದಕ್ಕಾಗಿ ಅವಳು ತನ್ನ ಜೀವವನ್ನೇ ಪಣವಾಗಿ ಇಡಬೇಕಾಗುತ್ತದೆ. ದಡ್ಡರಾದವರು ಮಾತ್ರ ಹೆಣ್ಣನ್ನು ಹೀಗಳೆಯುತ್ತಾರೆಂದು ನೊಂದು ಹೇಳಿದ್ದಾಳೆ.

ಕುವರನಾದೊಡೆ ಬಂದ ಗುಣವೇನದರಿಂದ
ಕುವರಿಯಾದೊಡೆ ಕುಂದೇನು
ಇವರಿರ್ವರೊಳೇಳ್ಗೆವಡೆದವರಿಂದ
ಸವನಿಪುದಿಹಪರಸೌಖ್ಯ

ಹೆಣ್ಣಿಗೆ ಮಕ್ಕಳಾಗುವುದು ಮುಖ್ಯವೇ ಹೊರತು ಅದು ಗಂಡು, ಇದು ಹೆಣ್ಣು ಎಂದು ವಿಂಗಡಿಸಬಾರದು. ಕುವರನಾದರೆ ಹೆಚ್ಚುಗಾರಿಕೆಯೇನಿಲ್ಲ. ಕುವರಿಯಾದೊಡೆ ಆತಂಕ ಪಡಬೇಕಾಗಿಲ್ಲ. ಗಂಡನ್ನು ಮುಖ್ಯವೆಂದು ಹೆಣ್ಣನ್ನು ಅಮುಖ್ಯವೆಂದು ಪರಿಭಾವಿಸುವುದು ತರವಲ್ಲ. ಇವರಿಬ್ಬರಲ್ಲಿ ಯಾರಿಂದ ಕುಟುಂಬ, ಸಮಾಜ ಅಭಿವೃದ್ದಿ ಹೊಂದುತ್ತದೋ, ಅಂತಹವರಿಂದ ಇಹಪರಗಳಲ್ಲಿ ಸುಖ ಲಭಿಸುತ್ತದೆ.

ಆರನೇ ಸಂಧಿ

[ಬದಲಾಯಿಸಿ]

ಪ್ರಾಯದ ದಂಪತಿಗಳ ಮನಃಸ್ಥಿತಿ

ಒಲುಮೆಯನೊಳಕೊಂಡು ನಾಣ್ಚಿಯೊಲಿದಂತೆ
ಚಲಪೋರುವೆಳ ಜವ್ವನದ
ಕುಲಸತಿಯೊಳು ಕೋಪಿಸದೆ ಕೋಟಲೆಗೊಳ
ದಲಸದೆಯನುಸರಿಸುವುದು

ಮನದ ತುಂಬ ಪ್ರೀತಿ ತುಂಬಿದ್ದರೂ, ನಾಚಿಕೆಯಿಂದ ಪ್ರೀತಿ ಇಲ್ಲದವಳಂತೆ ವರ್ತಿಸುವ ,ಪ್ರೀತಿಯನ್ನೇ ವ್ಯಕ್ತಪಡಿಸಲು ತಿಳಿಯದ ಪ್ರಾಯ ತುಂಬಿದ ಪತ್ನಿಯ ಮೇಲೆ ನಲ್ಲನಾದ ಗಂಡನು ಕೋಪಿಸಿ ಕೊಳ್ಳದೆ, ದಂಡಿಸದೆ, ಯಾವುದೇ ರೀತಿಯಲ್ಲೂ ಅವಳನ್ನು ಹಿಂಸಿಸದೆ, ಅಲಕ್ಷ್ಯ ತೋರದೆ ನಲುಮೆಯಿಂದ ನಲ್ಲೆಯನ್ನು ಒಲಿಸಿಕೊಂಡು ಮುನ್ನಡೆಯಬೇಕು.

ನಿಟ್ಟಿಸೆ ತಲೆವಾಗುವ ನೇಹದೊಳು
ಮನಮುಟ್ಟಿ ಮರಳಿ ನಿಟ್ಟಿಸುವ
ದಿಟ್ಟಿ ದಿಟ್ಟಿಗಳೊಡವೆರೆಯೆ ನಾಣ್ಚುವರೊಳ್
ಗುಟ್ಟರಿತುಪಚರಿಸುವುದು

ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಲಜ್ಜೆಯಿಂದ ತಲೆ ತಗ್ಗಿಸುವ, ತುಸು ದೂರ ಹೋದೊಡನೆ ಸ್ನೇಹ ತುಂಬಿದ ಪ್ರೀತಿಯಿಂದ ಹಿಂತಿರುಗಿ ನೋಡುವ, ಎರಡು ದೃಷ್ಠಿಗಳೂ ಸೇರಿದಾಗ ಮತ್ತೆ ನಾಚಿಕೊಳ್ಳುತ್ತಾ ನಡೆವ ಹೆಣ್ಣುಗಳ ಅಂತರಂಗವ ಅರಿತು ಅವಳನ್ನು ಉಪಚರಿಸಬೇಕು.

ಕೊಂಕುಗಲಿವ ನೋಟ ಕುಣಿಯಲೆಳಸುವ
ಪುರ್ಬಂಕೆಗೆ ನಿಲದಭಿಲಾಷೆ
ಬಿಂಕವಡೆವ ನಡೆವೆತ್ತಳೆವೆಂಡಿರ
ಸೋಂಕುವದವರೊಲವರಿತು

ವಯ್ಯಾರದ/ಕೊಂಕಿನ ನೋಟ, ಮುದಗೊಂಡ ಮನದಿಂದ ಕುಣಿಯಲಾಷಿಸುವ ಹುಬ್ಬುಗಳು, ಹತೋಟಿಗೆ ಸಿಲುಕದ ಮನಸ್ಸಿನ ಭಾಷೆ, ಅಭಿಲಾಷೆ, ಬಿಂಕದ ನಡಿಗೆಯಿಂದ ಬೀಗುವ ಎಳೆಯ ಯೌವನದ ಹೆಂಡತಿಯರನ್ನು, ಅವರ ಪ್ರೀತಿಯ ಸ್ವಭಾವವನ್ನು ಅರಿತು, ಅವರ ಪ್ರೇಮವನ್ನು ಪರಿಶೀಲಿಸಿ ಆ ನಂತರ ಮುಟ್ಟ ಬೇಕು. </poem>

ಏಳನೇ ಸಂಧಿ

[ಬದಲಾಯಿಸಿ]

ವಿರಹಿಣಿಯರ ಗುಣ-ಸ್ವಭಾವ

ದೇವರಿಲ್ಲದ ದೇಗುಲದ ಬಿತ್ತರದಂತೆ
ಭೂವರನಿಲ್ಲದೂರಂತೆ ಜೀವೀ
ತೇಶ್ವರನ ವಿರಹದೊಳು ಸೆಜ್ಜೆಯ
ಭಾವಿಸಿ ಬಣ್ಣಗುಂದುವಳು

ಪತಿಯಿಲ್ಲದ ವಿರಹ ಕಾಲದಲಿ, ಅವಳು ಮಲಗುವ ಶಯ್ಯೆ ದೇವರಿಲ್ಲದ ಗುಡಿಯಂತೆ ಭಾಸವಾಗುತ್ತದೆ. ರಾಜನಿಲ್ಲದ ಊರಿನಂತೆ ಮನೆಯಾಗಿದೆಯೆಂದು ಕಲ್ಪಿಸಿಕೊಂಡು ಕೊರಗುತ್ತ ಕಳೆಗುಂದುತ್ತಾಳೆ. ಗಂಡ ಸನಿಹ ಇಲ್ಲದ ಸಂದರ್ಭದಲ್ಲಿ ಅವಳು ಎಲ್ಲದರ ಮೇಲೂ ಆಸಕ್ತಿಯನ್ನು ಕಳೆದು ಕೊಂಡಂತಾಗಿ ಬಿಡುತ್ತಾಳೆ.

ಒಲಿದ ನಲ್ಲನ ವಿರಹದೊಳೊರಲುವ
ಕುಲ ಲಲನೆಯರ ವಿರಹವೇದನೆಗೆ
ಪಲಬಗೆಯುಗ್ರತಪಂಗಳೀಡಲ್ಲೇಂ
ದುಲಿವುವು ಮುನ್ನಿನೋದುಗಳು

ಮನಸಾರೆ ಪ್ರೀತಿಸಿದ ಪ್ರಿಯನ ಅಗಲಿಕೆಯಿಂದ ಸಂಕಟ ಪಡುವ ಮಾನಿನಿಯರ ವಿರಹ ವೇದನೆ ಅಪಾರವಾದುದು. ಆ ವೇದನೆಗೆ ಹಲವು ವಿಧದ ಕಠಿಣ ತಪಸ್ಸುಗಳು ಸಾಟಿಯಾಗಲಾರವು ಎಂದು ಪ್ರಾಚೀನ, ಆರ್ವಾಚೀನ ಶಾಸ್ತೃಗಳು ಹೇಳುತ್ತವೆ.

ಬೆಸಗೊಂಬಳಿನಿಯನಾವೆಡೆತೊಳಿರುವನಾ
ದೆಸೆಯಿಂದ ಬಂದ ಬಂದವರ
ಬೆಸಗೊಂಬಳು ಜೋಯಿಸರ ಜೋಗಿ
ಪುರುಷರ ಬೆಸೆಗೊಂಬಳು ಬಿಜಗಜ್ವೆವಳರ

ನಲ್ಲನಿರುವ ದಿಕ್ಕಿನಿಂದ ಯಾರೇ ಬಂದರೂ ಅವಳು ಕಕ್ಕುಲತೆಯಿಂದ ಕಾಳಜಿಯಿಂದ ಬಂದ ಬಂದವರನ್ನೇಲ್ಲ ಗಂಡನ ವಿಚಾರವನ್ನು ಕೇಳುತ್ತಾಳೆ. ಗಂಡನ ಬಗ್ಗೆ ಏನಾದರೂ ಕೇಳುವ ತುಡಿತ ಆಕೆಯದು. ಹಾಗಾಗಿ ಅವಳು ಜೋಯಿಸರನ್ನು, ಯೋಗಿಪುರುಷರನ್ನು, ವಿದ್ಯಾವಂತರನ್ನು 'ನನ್ನ ಗಂಡ ಯಾವಾಗ ಬರುತ್ತಾನೆ. ಏನಾದರೂ ಹೇಳಿ ಕಳಿಸಿರುವರಾ ?' ಎಂದು ಪ್ರಶ್ನಿಸುತ್ತಾ ತನ್ನ ವಿರಹವನ್ನು ವ್ಯಕ್ತಪಡಿಸುತ್ತಾಳೆ.

ಎಂಟನೇ ಸಂಧಿ

[ಬದಲಾಯಿಸಿ]

ಭಕ್ತಿ ಕರ್ಮದ ಆಚರಣೆ

ಇದನಾಚರಿಸುವುದಿದನುಳಿದಿರ್ಪುದೆಂ
ಬುದನಾರೈದು ಶಾಸ್ತೃದೊಳು
ಎದೆಗೊಳುವಂತೆ ಪೇಳುವ ಪಿರಿಯರ
ದಿವ್ಯ ಪಾದಸೇವೆಗೈದು ಬಾಳುವುದು

ಮನುಷ್ಯನ ಮನದ ಜಾಗೃತಿ ಮೂಡಿಸಲು ನೀನು ಈ ಕೆಲಸಗಳನ್ನು ಮಾಡಬೇಕು, ಈ ಕಾರ್ಯಗಳನ್ನು ಬಿಡಬೇಕು ಎಂಬುದನ್ನು ಶಾಸ್ತೃ ಸಹಾಯದಿಂದ, ವಿವೇಕ, ವಿವೇಚನೆಯಿಂದ ಅರಿತು ಹೇಳುವ ಹಿರಿಯರ ಪೂಜ್ಯ ಪಾದಗಳನ್ನು ಮತ್ತೆ ಮತ್ತೆ ಸ್ಮರಿಸುತ್ತಾ ಜೀವಿಸಬೇಕು.

ಶುಚಿಯಾಗಿರೆ ದೇವತೆಗಳು ಸಲಹುವರು
ಶುಚಿಯನು ಪಿತೃಗಳೋವುವರು
ಶುಚಿಗಂಜುವುವು ಪ್ರೇತ ಭೂತಗಳದರಿಂದ
ಶುಚಿಯಪ್ಪುದೆಲ್ಲ ವೇಳೆಯೊಳು

ಮನುಷ್ಯನ ಅಂತರಂಗ ಬಹಿರಂಗ ಯಾವಾಗಲೂ ಶುಚಿಯಾಗಿರಬೇಕು. ಶುದ್ಧ ನಡೆ-ನುಡಿ ಹೊಂದಿದವರನ್ನು ದೇವತೆಗಳು ಸದಾ ರಕ್ಷಿಸುತ್ತಾರೆ. ಮನುಷ್ಯನೊಳಗಿನ ಶುಚಿತ್ವವನ್ನು ಪಿತೃದೇವತೆಗಳು ಆದರಿಸಿ, ಪ್ರೀತಿಯಿಂದ ಗೌರವಿಸುವರು. ನಿರ್ಮಲ ಮನಸ್ಸಿಗೆ, ಶುದ್ಧ ಮನುಷ್ಯನಿಗೆ ಭೂತ, ಪ್ರೇತಗಳು ಅಂಜುತ್ತವೆ. ಆದ್ದರಿಂದ ಎಲ್ಲರೂ ಎಲ್ಲಾ ಕಾಲದಲ್ಲೂ ಶುಚಿಯಾಗಿರುವುದು ಬಹಳ ಮುಖ್ಯ.

ಪಂಚಸಂಸ್ಕಾರಗಳನು ಪಡೆದೊಡನರ್ಥ
ಪಂಚಕತತ್ವವನರಿತು
ಪಂಚಕಾಲೀಕ ಧರ್ಮವನ್ನೇಸಗುತ
ನಿಶ್ವಂಚಲ ಚಿತ್ತದೊಳಿಹುದು

ಮನುಷ್ಯ ಪಂಚಸಂಸ್ಕಾರಗಳಾದ-ತಪ, ಯಾಗ, ಮಂತ್ರ, ನಾಮ ಮತ್ತು ಪುಂಡ್ರಗಳನ್ನು ಪಡೆದ ನಂತರ, ಅರ್ಥಪಂಚಕಗಳಾದ-ಸ್ವಸ್ವರೂಪ. ಪರಸ್ವರೂಪ, ಪುರುಷಾರ್ಥ ಸ್ವರೂಪ, ಉಪಾಯ ಸ್ವರೂಪ ಮತ್ತು ವಿರೋಧಿ ಸ್ವರೂಪ ತತ್ವವನ್ನು ಅರಿತುಕೊಂಡು, ಪಂಚಕಾಲೀಕ ಧರ್ಮಗಳಾದ- ಅಭಿಗಮನ, ಉಪಾದಾನ, ಇಜ್ಯಾ, ಸ್ವಾಧ್ಯಾಯ ಮತ್ತು ಯೋಗಧರ್ಮಗಳನ್ನು ಆಚರಿಸುತ್ತಾ ನಿಶ್ಚಲ, ಪ್ರಫುಲ್ಲ ಮನಸ್ಸಿನಿಂದ ಕೂಡಿರಬೇಕು.

ಉಪಸಂಹಾರ

[ಬದಲಾಯಿಸಿ]

೧೬ನೇ ಶತಮಾನದ ಸಂಚಿಹೊನ್ನಮ್ಮನ ಹದಿಬದೆಯ ಧರ್ಮವು ಬಹಳ ಅಮೂಲ್ಯ ಗ್ರಂಥವಾದರೂ, ಇಂದಿನ ವೈಚಾರಿಕ ನಾರಿಯರಿಗೆ ಅದು ಗೊಡ್ಡು ಸಂಪ್ರದಾಯದಂತೆ ಭಾಸವಾಗಬಹುದು. ಅದರಲ್ಲೂ ಅತ್ತ-ಮಾವಂದಿರ ಸೇವೆ ಮಾಡುವ ಪ್ರಸಂಗ/ಅಧ್ಯಾಯ, ಗಂಡನ ಬಗ್ಗೆ ಇಟ್ಟುಕೊಳ್ಳ ಬೇಕಾದ ಆಪ್ತತೆ ಇಂದಿನ ಬಹುತೇಕ ಮಹಿಳೆಯರಿಗೆ ಪಥ್ಯವಾಗಲಾರದು. ಏಕೆಂದರೆ ಮನುಷ್ಯ ಇಂದು ಸ್ವಾರ್ಥಸಾಮ್ರಾಜ್ಯದ ಕೈಗೊಂಬೆಯಾಗಿ ತನ್ನ ಮೂಗಿನ ನೇರಕ್ಕೆ ಮಾತ್ರ ಬದುಕಲು ಇಷ್ಟಪಡುತ್ತಾನೆ. ತಾನು, ತನ್ನದು ಎಂಬ ಅತಿಯಾದ ವ್ಯಾಮೋಹಕ್ಕೆ ಬಲಿಯಾಗಿ ಬೇರೆಲ್ಲ ಸಂಬಂಧಗಳನ್ನು ನಿರಾಕರಿಸುತ್ತಿರುವುದು ಕಟುವಾಸ್ತವ ಸತ್ಯವಾಗಿದೆ.

ಗ್ರಂಥ ನೆರವು

[ಬದಲಾಯಿಸಿ]
  1. ಹದಿಬದೆಯ ಧರ್ಮ - ವಿದ್ವಾನ್ ಎನ್.ರಂಗನಾಥಶರ್ಮ
  2. ಕನ್ನಡ ವಿಷಯ ವಿಶ್ವಕೋಶ -ಮೈಸೂರು ಪ್ರಸಾರಾಂಗದ ಪ್ರಕಟಣೆ
  3. ಕನ್ನಡ ವಿಶ್ವಕೋಶ -ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮೈಸೂರಿನ ಪ್ರಕಟಣೆ

ಉಲ್ಲೇಖ

[ಬದಲಾಯಿಸಿ]

<Reference /> [] [] http://veda-balasubrahmanya.blogspot.in/2011/10/blog-post.html http://vbnewsonline.com/Benguluru/77870/ []

  1. "ಆರ್ಕೈವ್ ನಕಲು". Archived from the original on 2016-03-06. Retrieved 2015-05-28. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. http://mysore-koha.informindia.co.in/cgi-bin/koha/opac-detail.pl?biblionumber=154494
  3. http://kannadadeevige.blogspot.in/2013/11/blog-post_9997.html