ವಿಷಯಕ್ಕೆ ಹೋಗು

ನಿಯತಕಾಲಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಯತಕಾಲಿಕಗಳು ಕಾಗದದ ಮೇಲೆ ಶಾಯಿಯಿಂದ ಮುದ್ರಿಸಲ್ಪಡುವ, ಮತ್ತು ಸಾಮಾನ್ಯವಾಗಿ ನಿಯಮಿತ ವೇಳಾಪಟ್ಟಿಯಲ್ಲಿ ಪ್ರಕಟಿಸಲ್ಪಡುವ ಮತ್ತು ವಿವಿಧ ವಿಷಯಗಳನ್ನು ಹೊಂದಿರುವ ಪ್ರಕಟಣೆಗಳು. ಅವು ಸಾಮಾನ್ಯವಾಗಿ ಜಾಹೀರಾತು, ಖರೀದಿ ದರ, ಪೂರ್ವ ಪಾವತಿ ನಿಯತಕಾಲಿಕ ಚಂದಾಗಳ ಮೂಲಕ, ಅಥವಾ ಇವೆಲ್ಲವುಗಳಿಂದ ಹಣ ಹೊಂದಿಸುತ್ತವೆ. ನಿಯತಕಾಲಿಕಗಳು ಲಿಖಿತ ಲೇಖನಗಳ ಸಂಗ್ರಹ.

ಇತಿಹಾಸ

[ಬದಲಾಯಿಸಿ]
La Gazette, 26 December 1786

ನಿಯತಕಾಲಿಕ ಪ್ರಕಟನೆಯನ್ನು ಡೇನಿಯಲ್ ಡೀಫೊ ಪ್ರಾರಂಭ ಮಾಡಿದ (1704). ಅಷ್ಟೇ ಅವನಿಗೆ ಸಲ್ಲತಕ್ಕ ಗೌರವ. ಉದ್ಯಮವನ್ನು ಮುಂದುವರಿಸಿ ಗಣನೀಯನಾಗಿಸಿದಾತ ರಿಚರ್ಡ್ ಸ್ಟೀಲ್. ಆತ 1709ರಿಂದ 1711ರ ವರೆಗೆ ಟ್ಯಾಟ್ಲರ್ ಎಂಬುದನ್ನೂ ಅನಂತರ ಜೋಸೆಫ್ ಅಡಿಸನ್ನನೊಂದಿಗೆ ಸ್ಟೆಕ್ಟೇಟರ್ ಎಂಬುದನ್ನೂ ನಡೆಸಿದ. ಎರಡನೆಯದು ಪ್ರತಿನಿತ್ಯವೂ ಹೊರಬರುತ್ತಿದ್ದ ಪತ್ರಿಕೆ; ಅಡಿಸನ್ನನ ಕೈವಾಡ ಅದರಲ್ಲಿ ಅಧಿಕ. ಗಂಭೀರ ವಿಷಯಗಳನ್ನು ಕುರಿತ ಬಿಗಿ ಪ್ರಬಂಧಗಳ ಜೊತೆಗೆ ಲಲಿತ ವಿಡಂಬನ ಪರಿಹಾಸ ವಿಚಿತ್ರಕಲ್ಪನೆ ಊಹಾಪೋಹ ಮೊದಲಾದ ಹಗುರವೂ ಸಾಮಯಿಕವೂ ಆದ ಲೇಖನಗಳಿಂದ ಪತ್ರಿಕೆ ಬಹುವಾಗಿ ಜನಪ್ರಿಯವಾಯಿತು. ಬೆಳಗಿನ ಊಟ ಸಿದ್ಧವಾಯಿತೆ ಎಂದು ಕೇಳುವ ಬದಲು ಯಜಮಾನ ಸ್ಟೆಕ್ಟೇಟರ್ ಬಂತೆ ಎಂದು ಕೇಳುತ್ತಿದ್ದನಂತೆ. ಇಂಗ್ಲೆಂಡಿನಲ್ಲೇ ಅಲ್ಲದೆ ಯೂರೋಪಿನ ದೇಶದೇಶಗಳಲ್ಲೂ ಅದರ ಪ್ರಭಾವ ವಿಸ್ತರಿಸಿತು.

೧೯ನೆಯ ಶತಮಾನ

[ಬದಲಾಯಿಸಿ]

19ನೆಯ ಶತಮಾನದಲ್ಲಿ ನಿಯತಕಾಲಿಕ ತಿಂಗಳುತಿಂಗಳಿಗೂ ಮೂರುನಾಲ್ಕು ತಿಂಗಳಿಗೆ ಒಮ್ಮೆಯೊ ವರ್ಷಕ್ಕೆರಡು ಬಾರಿಯೋ ಪ್ರಕಟವಾಗುತ್ತ ವಾರ್ತಾ ಪ್ರಪಂಚದ ಮುಖಾಂಗವಾಯಿತು. ಸಾಹಿತ್ಯಕ್ಕೆ ಸಂಬಂಧಪಟ್ಟದ್ದನ್ನು ಮಾತ್ರ ನಾವು ಇಲ್ಲಿ ಗಮನಿಸಬೇಕು. ಸ್ಥೂಲವಾಗಿ ಹೇಳಬಹುದಾದರೆ, ಗಂಭೀರ ಪ್ರಬಂಧ, ಹಗುರ ಲೇಖ ಎಂಬ ಎರಡು ಬಗೆಯ ಬರೆವಣಿಗೆ ನಿಯತಕಾಲಿಕ ಪ್ರೇರಕವಾಯಿತು. ಆಶ್ರಯ ಕೊಟ್ಟಿತು. ಪ್ರಗತಿಕಾರಕವೂ ಆಯಿತು. ಮೊದಲನೆಯದು ವಿಷಯ ನಿಷ್ಠ, ಎರಡನೆಯದು ವ್ಯಕ್ತಿನಿಷ್ಠ. ಜರ್ಮನಿ, ಫ್ರಾನ್ಸ್, ಇಂಗ್ಲೆಂಡುಗಳಲ್ಲಿ 19ನೆಯ ಶತಮಾನದ ಗಂಭೀರ ಪ್ರಬಂಧ ಉಚ್ಚಮಟ್ಟಕ್ಕೇರಿ ವಿದ್ವತ್ತುಪೌಡಿಮೆಗಳ ಕುರುಹಾಯಿತು. ಹಾಗೆಯೇ ವ್ಯಕ್ತಿನಿಷ್ಠವಾದ ಲೇಖನ ಸಾಹಿತಿಗಳು ಅತ್ಯಾದರದಿಂದ ಕೈಹಿಡಿಯುತ್ತಿದ್ದ ಪ್ರಕಾರವಾಗಿ, ಆಹ್ಲಾದ ತಂದುಕೊಟ್ಟಿತು. 20ನೆಯ ಶತಮಾನದಲ್ಲೂ ಅದರ ವ್ಯಾಪ್ತಿ ಕುಗ್ಗಿಲ್ಲ.

ಗಂಭೀರ ಪ್ರಬಂಧದಲ್ಲಿ ಸಾಹಿತ್ಯ ವಿಮರ್ಶೆಗೆ ಸಂಬಂಧಿಸಿದ ಒಂದು ವೃತ್ತಾಂತವನ್ನು ನಿರೂಪಿಸುವುದು ಆವಶ್ಯಕ. 19ನೆಯ ಶತಮಾನದ ಆದಿಭಾಗದಲ್ಲಿ ನಿಯತಕಾಲಿಕ ರಾಜಕೀಯ ಪಕ್ಷಗಳ ನಾಲಗೆಯಾಗಿ ಮತ್ಸರ ಪಕ್ಷಪಾತಗಳ ಹೇಳಿಕೆಯಿಂದ ತುಂಬಿಕೊಂಡು ಕಲುಷಿತಗೊಂಡಿತು. ಕಾವ್ಯದ ಗುಣದೋಷಗಳನ್ನು ನ್ಯಾಯವಾಗಿ ಪರಿಶೀಲಿಸುವ ಕ್ರಮವನ್ನು ಬಿಟ್ಟುಕೊಟ್ಟು, ಕವಿ ಸ್ವಪಕ್ಷದವನೆ ಎದುರು ಪಕ್ಷದವನೆ ಎಂಬ ಪ್ರಶ್ನೆಗೆ ಪ್ರಾಧಾನ್ಯ ಬಂತು. ಕೀಟ್ಸ್, ವರ್ಡ್ಸ್‍ವರ್ತ್, ಟೆನಿಸನ್ ಮುಂತಾದ ನೈಜಕವಿಗಳು ನಿಯತಕಲಿಕದ ಬುದ್ಧಿಮಂಕರ ಕ್ರೂರ ಅವಲೋಕನಗಳಿಂದ ವಿಪರೀತ ಯಾತನೆಪಟ್ಟರು. ರಿವ್ಯೂ ಎಂಬುದು ಹೆಚ್ಚುಕಡಿಮೆ ಉಪ್ಪುನೀರು, ಕ್ಷಿಪ್ರವಾಗಿ ತಯಾರಾದದ್ದು ಅತ್ಯಲ್ಪಕಾಲದ ಅದರ ಬಾಳು. ವಿಮರ್ಶೆ ಹಾಲು, ಉತ್ತಮ ಪಾನೀಯ. ವರ್ತಮಾನ ಪತ್ರಿಕೆಗಳು ಸಾಹಿತ್ಯ ಪುರವಣಿಯನ್ನು ಜಂಭದಿಂದ ಹೊರತರುತ್ತವೆ. ಸಾಹಿತ್ಯ ವಿಮರ್ಶೆಗೆ ಅವುಗಳಿಂದ ಸ್ವಲ್ಪಮಟ್ಟಿನ ಪ್ರಯೋಜನವಿದೆ. ಸಾಹಿತ್ಯಕ್ಕೇ ಮೀಸಲೆಂದು ಹೇಳಿಕೊಳ್ಳುವ ನಿಯತಕಾಲಿಕೆ ನಿರ್ಮತ್ಸರತೆ ಸತ್ಯ ಪ್ರೇಮ ಸಹೃದಯತೆ ಸೌಹಾರ್ದ ಪಾಂಡಿತ್ಯಗಳಿಂದ ಬಲಗೊಂಡಲ್ಲಿ ಅವುಗಳಿಂದ ಹೆಚ್ಚಿನ ಉಪಯೋಗವಿದೆ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: