ಲಾಲ್ಗುಡಿ ಜಯರಾಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಾಲ್ಗುಡಿ ಜಯರಾಮನ್
ಜನನಸೆಪ್ಟೆಂಬರ್ ೧೭, ೧೯೩೦
ಚೆನ್ನೈ
ಮರಣಏಪ್ರಿಲ್ ೨೨, ೨೦೧೩
ಉದ್ಯೋಗಪಿಟೀಲು ವಾದಕರು, ಗಾಯಕರು ಮತ್ತು ಸಂಗೀತ ಸಂಯೋಜಕರು
ಸಕ್ರಿಯ ವರ್ಷಗಳು1942-2013

ಕರ್ನಾಟಕಿ ಸಂಗೀತದ ಆಗ್ರೇಸರರಲ್ಲಿ ಲಾಲ್ಗುಡಿ ಜಯರಾಮನ್ (ಸೆಪ್ಟೆಂಬರ್ ೧೭, ೧೯೩೦ - ಏಪ್ರಿಲ್ ೨೨, ೨೦೧೩) ಒಬ್ಬರು. ಪಿಟೀಲು ಎಂದಕೂಡಲೇ ಚೌಡಯ್ಯನವರ ಹೆಸರು ನೆನಪಿಗೆ ಬರುವಂತೆ, ವೀಣೆಯೊಂದಿಗೆ ಶೇಷಣ್ಣನವರು ನೆನಪಾಗುವಂತೆ, ಕೊಳಲಿನೊಂದಿಗೆ ಚೌರಾಸಿಯಾ ಚಿತ್ರ ಕಣ್ಣಮುಂದೆ ಬರುವಂತೆ ಪಿಟೀಲಿನ ಜೊತೆಯಲ್ಲಿ ಲಾಲ್ಗುಡಿ ಜಯರಾಮನ್ ಅವರ ಹೆಸರು ನೆನಪಾಗುತ್ತದೆ.

ಲಾಲ್ಗುಡಿ ಎಂಬ ಶ್ರೇಷ್ಠತೆ[ಬದಲಾಯಿಸಿ]

ಲಾಲ್ಗುಡಿ ಎನ್ನುವುದೇನು ಬರಿಯ ಹೆಸರಾ? ಅಲ್ಲ. ಅದೊಂದು ಸಂಗೀತದ ಗುಡಿ ಸಂಗೀತ ಸಂಸ್ಕೃತಿಯ ಪ್ರತೀಕ. ಜಯರಾಮನ್ನರ ತಂದೆ ಲಾಲ್ಗುಡಿ ಗೋಪಾಲ ಅಯ್ಯರ್ ಕೂಡ ಸಂಗೀತ ಸರಸ್ವತಿಯಲ್ಲಿ ಹೂ ಬೇಡಿ ಬಂದವರೇ. ಅವರು ಜಯರಾಮನ್ ಅವರಿಗೆ ಗುರುವೂ ಹೌದು. ತ್ಯಾಗರಾಜರ ನೇರ ಶಿಷ್ಯರಾದ ಲಾಲ್ಗುಡಿ ಶ್ರೀರಾಮ ಅಯ್ಯರ್ ಕೂಡ ಅಪ್ರತಿಮ ಸಂಗೀತ ವಿದ್ವಾಂಸರು. ಹೀಗಾಗಿ, ‘ಲಾಲ್ಗುಡಿ’ ಎನ್ನುವುದು ಸಂಗೀತ ಸಂಸ್ಕೃತಿಯಾಗಿ ಬೆಳೆದುಬಂದಿದೆ. ಈ ಪರಂಪರೆಯ ನಾಲ್ಕನೇ ತಲೆಮಾರಿನ ಕುಡಿ ಲಾಲ್ಗುಡಿ ಜಯರಾಮನ್. ದಕ್ಷಿಣ ಭಾರತದ ಅನೇಕ ಸಣ್ಣ ಊರುಗಳು ಆಯಾ ಊರಿನ ಮಹಾನ್ ಕಲಾವಿದರಿಂದ ಪ್ರಸಿದ್ಧಿ ಪಡೆದಿವೆ. ಅರಿಯಾಕುಡಿ, ಮಹಾರಾಜಪುರಂ. ಹಾನಗಲ್, ಚೆಂಬೈ, ಶೆಮ್ಮಂಗುಡಿ, ಮುಸುರಿ ಮುಂತಾದ ಊರುಗಳಂತೆ ಲಾಲ್ಗುಡಿ ಕೂಡ ಜಯರಾಮನ್ ಅವರಿಂದ ಲೋಕಖ್ಯಾತಿ ಗಳಿಸಿದೆ. ಲಾಲ್ಗುಡಿ ಜಯರಾಮನ್ ಅವರು ಸೆಪ್ಟೆಂಬರ್ ೧೭, ೧೯೩೦ರಂದು ಜನಿಸಿದರು.

ಸಂಗೀತಕ್ಕೆ ಮಹಾನ್ ಕೊಡುಗೆ[ಬದಲಾಯಿಸಿ]

ಕರ್ನಾಟಕಿ ಸಂಗೀತದಲ್ಲಿ ಜಯರಾಮನ್ ಮೂಂಚೂಣಿಯಲ್ಲಿ ನಿಲ್ಲುವ ವಿದ್ವಾಂಸರು. ಅವರನ್ನು ‘ಕರ್ನಾಟಕಿ ಸಂಗೀತದ ಸಾಗರ’ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುವುದಿದೆ. ಹೌದು ಒಂದು ರೀತಿಯಲ್ಲಿ ಅವರದು ಸಾಗರ ಸಾಧನೆಯೇ. ಕರ್ನಾಟಕಿ ಸಂಗೀತದ ಜನಪ್ರಿಯತೆ ಇಳಿಮುಖವಾಗುತ್ತಿದೆ ಎನ್ನುವ ಆತಂಕದ ಕಾಲದಲ್ಲಿ ವಿವಿಧ ಪ್ರಯೋಗಗಳ ಮೂಲಕ ಕರ್ನಾಟಕಿ ಸಂಗೀತವನ್ನು ಸಮೃದ್ಧಿಗೊಳಿಸಿದ ಸಾಧನೆ- ಅಗ್ಗಳಿಕೆ ಅವರದು. ಸಂಗೀತ ಸಿದ್ಧಿಯ ಪ್ರದರ್ಶನ ಮಾತ್ರವಲ್ಲ- ಸ್ವರ ಸಂಯೋಜನೆ, ಭೋಧನೆ. ಸಂಘಟನೆಗಳಲ್ಲೂ ಅವರದು ಮಹತ್ವದ ಸಾಧನೆ. ನೃತ್ಯ ಪ್ರಕಾರಕ್ಕೂ ಅವರ ಕೊಡುಗೆ ಸಂದಿದೆ. ಲಾಲ್ಗುಡಿಯವರ ಸಂಗೀತವನ್ನು ‘ನಾದದ ನೃತ್ಯ’ ಎಂದು ಸಹೃದಯರು ಬಣ್ಣಿಸುವುದಿದೆ. ಅಪೂರ್ವ ತೀಲ್ಲಾನಗಳು ಹಾಗೂ ವರ್ಣಗಳು ಕರ್ನಾಟಕಿ ಸಂಗೀತಕ್ಕೆ ಲಾಲ್ಗುಡಿ ಅವರು ನೀಡಿದ ಬಹುದೊಡ್ಡ ಕೊಡುಗೆ.

ಲಾಲ್ಗುಡಿ ಬಾನಿ[ಬದಲಾಯಿಸಿ]

ಜಯರಾಮನ್ನರ ವಯಲಿನ್ ವಾದನವೆಂದರೆ ಮಾಧುರ್ಯ, ಲಯ ಹಾಗೂ ತಂತ್ರಗಾರಿಕೆ ಬೆರೆತ ಗಂಧರ್ವಲೋಕದ ಅನಾವರಣ ಎಂದೇ ಅರ್ಥ. ವಾದ್ಯವೊಂದರ ಸಾಧ್ಯತೆಗಳೆನ್ನು ಪ್ರಯೋಗಕ್ಕೊಡ್ಡುವಂತೆ ಅವರು ವಯಲಿನ್ ನುಡಿಸುತ್ತಿದ್ದವರು. ಸೃಜನಶೀಲತೆಯ ಹಾದಿಯಲ್ಲಿ ಬದಲಾವಣೆ ಅನಿವಾರ್ಯ, ಅಗತ್ಯ ಎಂದು ನಂಬಿದ್ದ ಜಯರಾಮನ್ನರ ಸಂಗೀತದಲ್ಲಿ ಅಡಿಗೆರೆ ಎಳೆದಂತೆ ಕಾಣುವುದು ಮಾಧುರ್ಯ. ಜಯರಾಮನ್ನರ ಈ ಶೈಲಿ ‘ಲಾಲ್ಗುಡಿ ಬಾನಿ’ಯೆಂದೇ ಜನಪ್ರಿಯ. ಸಾಹಿತ್ಯದಲ್ಲಿನ ಭಾವುಕತೆ-ಮಾದಕತೆಯನ್ನು ಸಂಗೀತದಲ್ಲಿ ಸ್ಪಷ್ಟವಾಗಿ ಮೂಡಿಸುವಲ್ಲಿ ಹಾಗೂ ಪದಗಳ ಒಳಸೂಕ್ಷ್ಮಗಳು-ಒತ್ತುಗಳನ್ನು ಸಂಗೀತದಲ್ಲಿ ಅಭಿವ್ಯಕ್ತಗೊಳಿಸುವಲ್ಲಿ ಜಯರಾಮನ್ನರದು ವಿಶೇಷ ಪರಿಣತಿ.

ಸ್ವರಸೋಪಾನದ ಹಾದಿ[ಬದಲಾಯಿಸಿ]

ಪಕ್ಕವಾದ್ಯದಲ್ಲಿ ವಯಲಿನ್ ವಾದಕರಾಗಿ ವೃತ್ತಿಪರ ಸಂಗೀತದ ವೇದಿಕೆ ಹತ್ತಿದಾಗ ಅವರಿಗೆ ಇನ್ನೂ ಹನ್ನೆರಡು ವರ್ಷ. ಅನಂತರದ್ದು ಸ್ವರ ಸೋಪಾನದ ಹಾದಿ. ಅಕ್ಷಯಪಾತ್ರೆಯಂಥ ಕಲ್ಪನಾ ಪ್ರತಿಭೆ, ಆಯಸ್ಕಾಂತದಂಥ ಅದ್ಭುತ ಗ್ರಹಣ ಸಾಮರ್ಥ್ಯಗಳ ಜಯರಾಮನ್ ಬಹುಬೇಗನೆ ಕರ್ನಾಟಕಿ ಸಂಗೀತದ ಪ್ರಮುಖ ವಿದ್ವಾಂಸರ ಸಾಲಿಗೆ ಸೇರಿದರು. ಹಿರಿಯ ಸಂಗೀತ ವಿದ್ವಾಂಸರನ್ನು ಗಮನಿಸಿ, ಅವರಲ್ಲಿನ ಒಳ್ಳೆಯ ಅಂಶಗಳನ್ನು ಗ್ರಹಿಸುವ ವಿನಯವಂತಿಕೆ ಅವರದು (ಈ ಪಾಠ ಅಪ್ಪನಿಂದ ಕಲಿತದ್ದು). ಆದರೆ ಅವರದು ಅಂಧಾನುಕರಣೆಯಲ್ಲ. ಪ್ರತಿಯೊಂದರ ಮೇಲೂ ಛಾಪು ಮೂಡಿಸುವ ಪ್ರತಿಭಾವಂತರಾದ ಜಯರಾಮನ್ ನಿತ್ಯ ಪ್ರಯೋಗಶೀಲರು. ಅವರ ಪ್ರಯೋಗಳನ್ನು ಸಿದ್ಧಿಯನ್ನು ಸಂಗೀತ ಕ್ಷೇತ್ರದ ಹಿರಿಯರಾದ ಪಿಟೀಲು ಚೌಡಯ್ಯ, ದ್ವಾರಂ ವೆಂಕಟಸ್ವಾಮಿ ನಾಯ್ಡು, ಗೋವಿಂದರಾಜ ಪಿಳ್ಳೈ, ಸುಂದರೇಶ ಆಯ್ಯರ್ ಮುಂತಾರವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಯಲಿನ್ ವಾದನದಲ್ಲಂತೂ ಜಯರಾಮನ್ ಅವರದು ಸವ್ಯಸಾಚಿ ಸಾಧನೆ. ಕೊಳಲು ಹಾಗೂ ವೀಣೆಗಳೊಂದಿಗೆ ಕೂಡ ಅವರಿಗೆ ಸ್ನೇಹವಿದೆ.

ವಿಶ್ವದೆಲ್ಲೆಡೆ ಜನಪ್ರಿಯತೆ[ಬದಲಾಯಿಸಿ]

ದೇಶದ ಉದ್ದಗಲ ಮಾತ್ರವಲ್ಲ ವಿದೇಶಗಳಲ್ಲೂ ಲಾಲ್ಗುಡಿ ಜನಪ್ರಿಯರು. 1965ರಲ್ಲಿ ಎಡಿನ್ಬರ್ಗ್ ಸಂಗೀತ ಹಬ್ಬದಲ್ಲಿ ಅವರ ವಯಲಿನ್ ವಾದನ ಕೇಳುಗರ ಮನಸೂರೆಗೊಂಡಿತ್ತು. ಈ ನಾದ ಮಾಧುರ್ಯಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ವಯಲಿನ್ ವಾದಕ ಯೆಹೂದಿ ಮೆನುಹಿನ್ ಮನಸೋತಿದ್ದರು. ಈ ಗುಂಗಿನಲ್ಲೇ ಅವರು, ಲಾಲ್ಗುಡಿ ಅವರಿಗೆ ವಯಲಿನ್ ಒಂದನ್ನು ಕೊಡುಗೆಯಾಗಿ ಕಳುಹಿಸಿದ್ದರು. 1971ರಲ್ಲಿ ಲಾಲ್ಗುಡಿ ಅಮೇರಿಕಾ, ಕೆನಡಾ ಪ್ರವಾಸ ಕೈಗೊಂಡಿದ್ದರು. ಪೂರ್ವ ಪಶ್ಚಿಮ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಡಿ ಅವರು 24 ಕಛೇರಿಗಳು ಹಾಗೂ ಉಪನ್ಯಾಸಗಳನ್ನು ನೀಡಿದರು. ಭಾರತೀಯ ಸಾಂಸ್ಕೃತಿಕ ನಿಯೋಗದ ಸದಸ್ಯರಾಗಿ ರಷ್ಯಕ್ಕೆ ಭೇಟಿ ನೀಡಿದ್ದರು. ಒಮಾನ್, ಕತಾರ್, ಬಹರೈನ್, ಸಿಂಗಪುರ, ಮಲೇಷಿಯ, ಬ್ರಿಟನ್, ಬೆಲ್ಗಿಯಂ, ಫ್ರಾನ್ಸ್ ಸೇರಿದಂತೆ ಭೂಗೋಳವನ್ನು ಸಂಗೀತದ ಮೂಲಕ ಪ್ರದಕ್ಷಿಣೆ ಹಾಕಿದ್ದಾರೆ.

ಶಿಸ್ತಿಗೆ ಹೆಸರು[ಬದಲಾಯಿಸಿ]

ಸಣ್ಣಪುಟ್ಟ ವಿವರಗಳಿಗೂ ಅತೀವ ಗಮನ ನೀಡುವ ಲಾಲ್ಗುಡಿ ಅವರ ಕಛೇರಿಗಳು ಶಿಸ್ತಿಗೆ ಹೆಸರಾದವು. ಈ ಶಿಸ್ತು ಸಂಗೀತಕ್ಕೆ ಭಾರ ಎನ್ನುವ ಮಾತುಗಳೂ ಇವೆ. ಸಹೃದಯನಿಗೆ ರಸಭಂಗವಿಲ್ಲದ, ಪರಿಪೂರ್ಣ ನಾದಸುಧೆ ಉಣಿಸಬಯಸುವ ಉದ್ದೇಶದ ಲಾಲ್ಗುಡಿ ಈ ಅಡ್ಡಮಾತುಗಳಿಗೆ ಕಿವಿಕೊಟ್ಟವರಲ್ಲ. ಒಮ್ಮೆ ಅವರೇ ಹೇಳಿಕೊಂಡಂತೆ ಸಣ್ಣಪುಟ್ಟ ತಪ್ಪುಗಳೂ ಅವರನ್ನು ಘಾಸಿಗೊಳಿಸುತ್ತವೆ. ಈ ಬದ್ಧತೆಯಿಂದಾಗಿಯೇ ಅವರು ಕಛೇರಿಗಳಿಗೆ ವಿಪರೀತ ಸಿದ್ಧತೆ ನಡೆಸುತ್ತಾರೆ.

ಒಳ್ಳೆಯ ಗುರು[ಬದಲಾಯಿಸಿ]

ಜಯರಾಮನ್ ಒಳ್ಳೆಯ ಗುರುಗಳೂ ಹೌದು. ಅವರ ಗರಡಿಯಲ್ಲಿ ಅನೇಕ ಸಂಗೀತಗಾರರು ಪಳಗಿದ್ದಾರೆ; ‘ಲಾಲ್ಗುಡಿ ಬನಿ’ ಚೌಕಟ್ಟುಗಳನ್ನು ಮೀರುತ್ತ ಬೆಳೆಯುತ್ತಿದೆ. ಸಾಮಾಜಿಕೆ ಚಟುವಟಿಕೆಗಳಲ್ಲೂ ಲಾಲ್ಗುಡಿ ಅವರಿಗೆ ಆಸಕ್ತಿಯಿದೆ. ಹುಟ್ಟೂರು ಲಾಲ್ಗುಡಿಯ ಸರ್ಕಾರಿ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ಸಂಗ್ರಹಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲ ಅವರ ಹೆಸರಿನ ‘ಲಾಲ್ಗುಡಿ ಟ್ರಸ್ಟ್’ ಸಂಗೀತಾಸಕ್ತರ ಪ್ರತಿಭೆಯನ್ನು ಹದಗೊಳಿಸುವ ಪ್ರಯತ್ನಗಳಲ್ಲಿ ತೊಡಗಿದೆ. ವಿವಿಧ ಸಭಾಗಳಲ್ಲಿ ದತ್ತಿ ಸ್ಥಾಪಿಸುವ ಮೂಲಕ ಯುವ ಸಂಗೀತಗಾರರನ್ನು ಉತ್ತೇಜಿಸುತ್ತಿದೆ.

ಸಂಗೀತವೆಂಬ ಆಧ್ಯಾತ್ಮದ ಪಯಣ[ಬದಲಾಯಿಸಿ]

ಎಂಭತ್ತೆರಡರ ಹೊಸ್ತಿಲಲ್ಲಿ ನಿಂತಿರುವಾಗಲೂ ಜಯರಾಮನ್ ಅವರು ಈಗಲೂ ಪ್ರಯೋಗಗಳಿಂದ ವಿಮುಖರಾಗಿರ’ಲಿಲ್ಲ. ‘ಸಂಗೀತ ಬಿಟ್ಟರೆ ನನ್ನ ಬದುಕಿನಲ್ಲಿ ಇನ್ನೇನಿದೆ. ಮುಂದೆ ಎಷ್ಟು ಬಾರಿ ಹುಟ್ಟಿದರೂ ಸಂಗೀತಗಾರನಾಗಿಯೇ ಹುಟ್ಟಬಯಸುವೆ. ಸಂಗೀತ ನನ್ನಬದುಕಷ್ಟೇ ಅಲ್ಲ, ಅದು ಆಧ್ಯಾತ್ಮದತ್ತ ನನ್ನ ಪಯಣದ ದಾರಿಯೂ ಹೌದು’ ಎಂದು ಸಂದರ್ಶನವೊಂದರಲ್ಲಿ ಲಾಲ್ಗುಡಿ ತಮ್ಮ ಸಂಗೀತ ಪ್ರೀತಿಯನ್ನು ತೋಡಿಕೊಂಡಿದ್ದರು. ಸಂಗೀತ ಸಾಧನೆಯೇನೋ ಅವರದೇ ಇರಬಹುದು; ಸಂಗೀತದ ಫಲ ಉಣ್ಣುವ ಸೌಭಾಗ್ಯ ಅವರ ಅಭಿಮಾನಿಗಳದಾಗಿತ್ತು. ಇನ್ನು ಮುಂದೆ ಈ ಸೌಭಾಗ್ಯ ನೇರವಾಗಿ ದೊರಕುವಂತದ್ದಲ್ಲ. ಧ್ವನಿಸುರಳಿಗಳಲ್ಲಿ ಮಾತ್ರ ಅದು ಲಭ್ಯ.. ಜಯರಾಮನ್ ರವರು, ಏಪ್ರಿಲ್ ೨೨, ೨೦೧೩ ರಂದು ಈ ಲೋಕವನ್ನಗಲಿದರು.

ಮಾಹಿತಿ ಕೃಪೆ[ಬದಲಾಯಿಸಿ]

ಚಿಲುಮೆ.ಕಾಂ