ವಿಷಯಕ್ಕೆ ಹೋಗು

ಹರೀಶ್ ಹಂದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಲ್ಕೋ

1995ರಲ್ಲಿ ಜಗತ್ತಿನ ಸೌರಶಕ್ತಿಯ ಹರಿಕಾರನೆಂದೇ ಖ್ಯಾತರಾದ ನೆವಿಲ್ಲೆ ವಿಲಿಯಮ್ಸ್ ನೆರವಿನಿಂದ ಹುಟ್ಟು ಹಾಕಿದ ಸೋಲಾರ್ ಇಲೆಕ್ಟ್ರಿಕ್ ಲೈಟಿಂಗ್ ಕಂಪೆನಿ (ಸೆಲ್ಕೋ ಇಂಡಿಯಾ)ಯ ಮೂಲಕ ಕೇವಲ ಒಂದೂವರೆ ದಶಕದ ಕಾಲಾವಧಿಯಲ್ಲಿ ಕರ್ನಾಟಕದ 1.2ಲಕ್ಷ ಬಡವರ ಗುಡಿಸಲುಗಳನ್ನು ಸೂರ್ಯನ ಶಕ್ತಿಯ ಮೂಲಕ ಬೆಳಗಿದ ಡಾ.ಹರೀಶ್ ಹಂದೆಯವರ ಅವಿರತ ಪ್ರಯತ್ನವೇ ಇಂದು ಅವರನ್ನು ಇಡೀ ವಿಶ್ವವೇ ಗುರುತಿಸಿ, ಗೌರವಿಸುವಂತೆ ಮಾಡಿದೆ. ಭಾರತೀಯ ಉಪಖಂಡದಲ್ಲಿ ಧಾರಾಳವಾಗಿ ದೊರೆಯುವ ಸೂರ್ಯನ ಬೆಳಕನ್ನು ಬಳಸಿಕೊಂಡು, ಅದರ ಮೂಲಕ ಅತ್ಯಂತ ಕಡಿಮೆ ಖರ್ಚಿನಲ್ಲಿ ಗ್ರಾಮೀಣ ಪ್ರದೇಶದ ಬಡವರ ಗುಡಿಸಲನ್ನು ಬೆಳಗಿಸಲು ನಡೆಸಿದ ಹಂದೆಯವರ ಪ್ರಯೋಗವೇ ಇಂದು ಅವರನ್ನು ೨೦೧೧ರ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಚಿನ್ನದ ಪದಕಕ್ಕೆ ಕೊರಳೊಡ್ಡುವಂತೆ ಮಾಡಿದೆ.

ಡಾ.ಹರೀಶ್ ಹಂದೆ ಮೂಲತ: ಉಡುಪಿ ಜಿಲ್ಲೆಯ ಕೋಟ ಸಮೀಪದ ಹಂದಟ್ಟಿನ ಹಂದೆ ಕುಟುಂಬದ ಕುಡಿ. ಇವರ ತಂದೆ ಸುಬ್ರಹ್ಮಣ್ಯ ಹಂದೆ ತಾಯಿ ಸುಶೀಲಾ ಹಂದೆ. ಇಬ್ಬರೂ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಸುಬ್ರಹ್ಮಣ್ಯ ಹಂದೆ ಒಡಿಸ್ಸಾದ ರೂರ್ಕೆಲಾದ ಉಕ್ಕಿನ ಕಾರ್ಖಾನೆಯಲ್ಲಿ ನೌಕರಿಯಲಿದ್ದರು. 1967ರ ಮಾ.1ರಂದು ಬೆಂಗಳೂರಿನಲ್ಲಿ ಜನಿಸಿದ ಹರೀಶ್ ಹಂದೆ, ರೂರ್ಕೆಲಾದಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಪ್ರತಿಷ್ಠಿತ ಐಐಟಿ ಖರಗಪುರದಲ್ಲಿ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಅವರು ಮುಂದಿನ ವಿದ್ಯಾಭ್ಯಾಸಕ್ಕೆ ತೆರಳಿದ್ದು ಅಮೆರಿಕದ ಬೋಸ್ಟನ್‌ನ ಎಂಐಟಿಗೆ,ಎಂಐಟಿಯಲ್ಲಿ ಎಂ.ಎಸ್. ಪದವಿ ಮುಗಿಸಿ ನವೀಕರಿಸಬಹುದಾದ ಇಂಧನದ ಕುರಿತಂತೆ ಪಿಎಚ್‌ಡಿಗೆ ಮುಂದಾದ ಹಂದೆ, ಅಲ್ಲಿ ಸೌರ ವಿದ್ಯುತ್‌ನತ್ತ ಆಕರ್ಷಿತರಾದರು. ಆಗ ಅವರ ಸಂಪರ್ಕಕ್ಕೆ ಬಂದವರು ಸೌರವಿದ್ಯುತ್‌ನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಲು ಪ್ರಯತ್ನಿಸುತಿದ್ದ ಸೆಲ್ಫ್ ಎಂಬ ಸೌರಶಕ್ತಿ ಬಳಕೆಯ ಪ್ರತಿಪಾದಕ ನೆವಿಲ್ಲೆ ವಿಲಿಯಮ್ಸ್. ಅವರ ಸೂಚನೆಯಂತೆ ಸೌರವಿದ್ಯುತ್‌ನ್ನು ಪ್ರಾಜೆಕ್ಟ್ ಆಗಿ ತೆಗೆದುಕೊಂಡ ಹಂದೆ, ಅದೇ ಉದ್ದೇಶಕ್ಕಾಗಿ ಭಾರತಕ್ಕೆ ಬಂದರು.

ಯಾವುದೇ ಒಂದು ದೇಶದ ನೂರು ಮನೆಗಳಿಗೆ ಸೌರಶಕ್ತಿಯ ಬೆಳಕು ಒದಗಿಸುವ ಕುರಿತಂತೆ ನೀಡಲಾದ ಅಸೈನ್‌ಮೆಂಟ್‌ಗೆ ಅವರು ಆಯ್ಕೆ ಮಾಡಿಕೊಂಡಿದ್ದು ತಮ್ಮ ಭಾರತವನ್ನೇ. ಆದರೆ ಇಲ್ಲಿ ಬಂದು ಈ ಬಗ್ಗೆ ಪ್ರಯತ್ನ ನಡೆಸಿದ ಅವರಿಗೆ ನಿರಾಶೆಯೇ ಕಾದಿತ್ತು. ಸೌರಶಕ್ತಿಯ ಬಗ್ಗೆ 90ರ ದಶಕದಲ್ಲಿ ಯಾರಿಗೂ ಯಾವುದೇ ತಿಳಿವಳಿಕೆಇರಲಿಲ್ಲ. ಹತಾಶೆಯಿಂದ ಅಮೆರಿಕಕ್ಕೆ ಮರಳಲು ಸಿದ್ಧರಾಗಿದ್ದ ಹಂದೆಯವರನ್ನು ಗುಜರಾತ್‌ನ ಸೂರತ್‌ನಲ್ಲಿ ಅಕಸ್ಮಿಕವಾಗಿ ಭೇಟಿಯಾದವರು ಹಿರಿಯ ಬ್ಯಾಂಕರ್ ಕೆ.ಎಂ.ಉಡುಪರು.

ಸಿಂಡಿಕೇಟ್ ಬ್ಯಾಂಕಿನಲ್ಲಿ ಹಿರಿಯ ಕೃಷಿ ಅಭಿವೃದ್ಧಿ ಅಧಿಕಾರಿಯಾಗಿ ಬಳಿಕ ಧಾರವಾಡದ ಮಲ ಪ್ರಭಾ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರಾಗಿದ್ದ ಕೆ.ಎಂ. ಉಡುಪ ಅವರು, ತನ್ನ ಸ್ನೇಹಿತನ ಮಗನ ನಿರಾಶೆಗೆ ಕಾರಣವನ್ನು ಕೇಳಿ ಅದಕ್ಕೆ ತಾನು ಬೇಕಿದ್ದರೆ ಸಹಾಯ ಮಾಡಬಲ್ಲೆ ಎಂಬ ಭರವಸೆ ನೀಡಿದರು. ‘ಧಾರವಾಡಕ್ಕೆ ಬಂದರೆ ನಾನೇನಾದರೂ ಮಾಡಬಲ್ಲೆ. ಸೋಲಾರ್ ಲೈಟ್ಸ್ ಕೊಳ್ಳುವವರಿಗೆ ಬ್ಯಾಂಕ್ ಸಾಲ ಕೊಡಿಸುತ್ತೇನೆ. ಆದರೆ ಲೈಟ್ ಮಾರುವುದು ಮಾತ್ರ ನಿನ್ನ ಕೆಲಸ.’ ಎಂದು ಉಡುಪರು ಹಂದೆಗೆ ಭರವಸೆ ನೀಡಿದರು.

ಹತಾಶೆ, ನಿರಾಶೆಯ ನಡುವೆ ಕಾಣಿಸಿದ ಬೆಳ್ಳಿಯ ಕಿರಣದಿಂದ ಉತ್ತೇಜಿತರಾದ ಹಂದೆ, 1994ರ ಮಧ್ಯಭಾಗದಲ್ಲಿ ಧಾರವಾಡಕ್ಕೆ ಬಂದೇ ಬಿಟ್ಟರು. ಅಲ್ಲಿ ಸೌರವಿದ್ಯುತ್ ಅಳವಡಿಕೆಗೆ ಮೊತ್ತ ಮೊದಲ ಬಾರಿ ಬ್ಯಾಂಕ್ ಸಾಲವನ್ನು ನೀಡಿದ ಕೀರ್ತಿ ಮಲಪ್ರಭಾ ಗ್ರಾಮೀಣ ಬ್ಯಾಂಕಿಗೆ ಸಂದಿತ್ತು. ಹಂದೆ ತನ್ನ ಪ್ರಾಜೆಕ್ಟ್‌ನ್ನು ಯಶಸ್ವಿಯಾಗಿ ಮುಗಿಸಿದರು. ಅದು ಅವರ ಮುಂದಿನ ಯಶೋಗಾಥೆಗೆ ನಾಂದಿ ಹಾಕಿತ್ತು. ಸೌರಶಕ್ತಿಯಿಂದ ಹಳ್ಳಿಗಳ ಗುಡಿಸಲುಗಳನ್ನು ಬೆಳಗಿಸುವ ಕನಸನ್ನು ಅವರು ಮೊದಲ ಬಾರಿ ಅಲ್ಲಿ ಕಂಡರು. 1995ರಲ್ಲಿ ಪಿಎಚ್‌ಡಿ ಮುಗಿಸಿದ ಡಾ.ಹಂದೆ, ನವೆಲ್ಲೆ ವಿಲಿಯಮ್ಸ್‌ರ ಸಹಕಾರದಿಂದ ಸೆಲ್ಕೋ ಇಂಡಿಯಾ ಕಂಪೆನಿಯನ್ನು ಸ್ಥಾಪಿಸಿ ಅದರ ಆಡಳಿತ ನಿರ್ದೇಶಕರಾದರು. ಸೌರಶಕ್ತಿ ಚಾಲಿತ ವಿದ್ಯುತ್ ದೀಪಗಳ ಕುರಿತು ಹಳ್ಳಿ ಹಳ್ಳಿಗಳಿಗೆ ತೆರಳಿ ಜನರಿಗೆ ಅರಿವು ಮೂಡಿಸತೊಡಗಿದರು.ಸೌರಶಕ್ತಿಯ ಸಾಧ್ಯತೆ ಹಾಗೂ ಅದರಿಂದ ಆಗುವ ಅನುಕೂಲತೆಗಳ ಕುರಿತು ಅವರು ಹಳ್ಳಿಗರಿಗೆ ಮನನ ಮಾಡಿಸಿದರು. ಸೌರ ಶಕ್ತಿಯ ಅಗಾಧ ಸಾಧ್ಯತೆಗಳನ್ನು ಅರಿತ ಬ್ಯಾಂಕುಗಳು ಹಾಗೂ ಸರಕಾರ ಸಬ್ಸಿಡಿಯೊಂದಿಗೆ ಉತ್ತೇಜನ ನೀಡಲು ಮುಂದಾಗಿದ್ದು, ಅವರ ಪ್ರಯತ್ನಗಳಿಗೆ ಆನೆ ಬಲವನ್ನು ತಂದು ಕೊಟ್ಟಿತ್ತು.

ಆರಂಭದಲ್ಲಿ ಸೈಕಲ್ ಹಾಗೂ ಮೋಟಾರು ಸೈಕಲ್‌ಗಳಲ್ಲಿ ಹಳ್ಳಿ ಹಳ್ಳಿಗಳಿಗೆ ತೆರಳಿ, ಸೌರ ವಿದ್ಯುತ್‌ನ್ನು ಅಳವಡಿಸುತ್ತಿದ್ದ ಡಾ.ಹಂದೆಗೆ ಮುಂದೆ ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ಹೆಚ್ಚಿನ ಬ್ಯಾಂಕುಗಳಿಂದಲೂ ಸಹಾಯಹಸ್ತ ದೊರಕಿತು. ಉಡುಪಿ, ದ.ಕ., ಉ.ಕ., ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ಅವರು ಸೌರಶಕ್ತಿಯ ಜನಪ್ರಿಯತೆಗೆ ಸಾಕಷ್ಟು ಬೆವರು ಹರಿಸಿದರು. ಸೌರವಿದ್ಯುತ್ ದೀಪಗಳಿಗೆ ಆಗಿದ್ದ ದುಬಾರಿ ಬೆಲೆ ಅವರ ಪ್ರಯತ್ನಕ್ಕೆ ತಡೆಯಾಗಿ ಪರಿಣಮಿಸಿತ್ತು. ಆದರೆ ಬ್ಯಾಂಕುಗಳು ಸೌರವಿದ್ಯುತ್ ಅಳವಡಿಕೆಗೆ ಸಾಲ ನೀಡಲು ತೊಡಗಿದ ಬಳಿಕ ಹಾಗೂ ಸರಕಾರವೂ ಇದಕ್ಕೆ ಸಹಾಯಧನದ ವ್ಯವಸ್ಥೆ ಕಲ್ಪಿಸಿದ ಬಳಿಕ ಪರಿಸ್ಥಿತಿ ಸುಧಾರಿಸಿತ್ತು. ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಲ್ಕೋ ಇಂಡಿಯಾ, ಕರ್ನಾಟಕ ಮತ್ತು ಗುಜರಾತ್‌ಗಳಲ್ಲಿ 25 ಶಾಖೆಗಳನ್ನು ಹೊಂದಿದೆ.

ಇಂದು ಕರ್ನಾಟಕದ ಹಲವು ಹಳ್ಳಿಗಳು ಕೇವಲ ಸೌರ ವಿದ್ಯುತ್‌ನಿಂದಲೇ ರಾತ್ರಿಯಿಡೀ ಪ್ರಕಾಶಮಾನದಿಂದ ಬೆಳಗುತ್ತಿದ್ದರೆ, ಅದಕ್ಕೆ ಹರೀಶ್ ಹಂದೆ ಅಳವಡಿಸಿದ ಸೌರವಿದ್ಯುತ್ ದೀಪವೇ ಕಾರಣವಾಗಿದೆ.ಆರಂಭದಲ್ಲಿ ಕೇ ವಲ ಒಂದು ಸಾವಿರ ಮನೆಯನ್ನು ಸೌರ ವಿದ್ಯುತ್ ದೀಪದಿಂದ ಬೆಳ ಗುವ ಗುರಿಯನ್ನು ಹಾಕಿಕೊಂಡಿದ್ದ ಸೆಲ್ಕೋ, ಇಂದು ಕರ್ನಾಟಕ, ಗುಜ ರಾತ್ ಹಾಗೂ ಕೇರಳ ರಾಜ್ಯಗಳ 1.25 ಲಕ್ಷಕ್ಕೂ ಅಧಿಕ ಮನೆಗಳನ್ನು ಪ್ರಕಾಶಮಯಗೊಳಿಸಿದೆ. ಇನ್ನು ಒಂದೆರಡು ವರ್ಷಗಳಲ್ಲಿ ಎರಡು ಲಕ್ಷ ಮನೆಗಳಿಗೆ ಸೌರ ದೀಪ ಗಳನ್ನು ಅಳವಡಿಸುವ ಗುರಿಯನ್ನು ಸೆಲ್ಕೋ ಹಾಕಿಕೊಂಡಿದ.